ಬೋರ್‌ವೆಲ್‌ಗಳಿಗೆ ಅಳವಡಿಸಿರುವ ಹ್ಯಾಂಡ್‌ಪಂಪ್‌ಗಳನ್ನು ನೀವು ಗಮನಿಸಿರಬಹುದು. ಈ ಪಂಪ್‌ಗಳಿಗೆ ಮಾರುದ್ದದ ಕಬ್ಬಿಣದ ಹಿಡಿಗಳಿರುತ್ತವೆ. ಈ ದೃಢವಾದ ಹಿಡಿಗಳನ್ನು ಬಗ್ಗಿಸಲು ಭೂಮಿಯ ಮೇಲಿರುವ ಯಾವ ಜೀವಿಗಳಿಗೂ ಅಸಾಧ್ಯವೆಂದೆನಿಸುತ್ತದೆ.

ಆದರೆ, ಆನೆಗಳಿರುವ ಕಾಡಂಚಿನ ಪ್ರದೇಶಗಳಲ್ಲಿ ಈ ಬೋರ್‌ವೆಲ್‌ಪಂಪ್‌ಗಳ ಹಿಡಿಗಳು ತಮ್ಮ ಮೂಲ ಆಕಾರವನ್ನೆಲ್ಲ ಕಳೆದುಕೊಂಡಿರುತ್ತವೆ. ಇದು ನೀರಿನ ವಾಸನೆ ಹಿಡಿದು ಪಂಪ್‌ಬಳಿ ಬರುವ ಆನೆಗಳ ಕೃತ್ಯವೆಂದು ತೀರ್ಮಾನಿಸಲು ಯಾವ ತಕರಾರೂ ಇಲ್ಲ.

ಆದರೂ ದಂಡದಂತೆ ಬಲವಾದ ಈ ಕಬ್ಬಿಣದ ಹಿಡಿಗಳನ್ನು ಒದ್ದೆ ಟವೆಲ್ ಹಿಂಡಿದಂತೆ ತಿರುಚಲು ಸಾಧ್ಯವಾದರೂ ಹೇಗೆಂಬುದು ಒಗಟಾಗಿ ಕಾಡುತ್ತದೆ. ನಾವು ಇಷ್ಟೂ ವರ್ಷ ಕಾಡಿನಲ್ಲಿದ್ದರೂ ಆನೆಗಳು ಇಂಥ ಕೆಲಸಗಳಲ್ಲಿ ತೊಡಗಿರುವುದನ್ನು ಕಣ್ಣಾರೆ ಕಂಡಿಲ್ಲ.

ಕಾಡುನಾಯಿಗಳ ಸಂಶೋಧನೆಗೆಂದು ಬಂಡೀಪುರದಲ್ಲಿ ನೆಲೆಸಲು ಮನೆ ಕಟ್ಟಿದಾಗ ಕುಡಿಯುವ ನೀರಿಗಾಗಿ ಬೋರ್‌ವೆಲ್ ಕೊರೆಸಬೇಕಾಯಿತು. ಅಲ್ಲಿ ವಿದ್ಯುತ್ ಸೌಕರ್ಯ ಇಲ್ಲದ್ದಿದ್ದರಿಂದ, ಹ್ಯಾಂಡ್‌ಪಂಪ್ ಅಳವಡಿಸುವುದು ಅನಿವಾರ್ಯವಾಯಿತು. ಆಗ ನಾವು ಮಾಡಿದ ಮೊದಲ ಕೆಲಸವೆಂದರೆ, ಹ್ಯಾಂಡ್‌ಪಂಪ್ ಸುತ್ತಲೂ ವೃತ್ತಾಕಾರದಲ್ಲಿ ಆನೆಗಳು ದಾಟಲಾಗದಂತೆ ದೊಡ್ಡ ಕಂದಕಗಳನ್ನು ನಿರ್ಮಿಸಿದ್ದು.

ಮನೆಯಿಂದ ಹೊರಗೆ ಏನನ್ನೇ ಸುರಕ್ಷಿತವಾಗಿ ಇಡಬೇಕೆಂದರೆ ಅದು ಕಂದಕದ ಒಳಗೆ ಮಾತ್ರ ಎಂದು ಕೆಲವೇ ದಿನಗಳಲ್ಲಿ ನಮ್ಮ ಅರಿವಿಗೆ ಬಂತು. ಹಾಗಾಗಿ ನಮ್ಮ ಹ್ಯಾಂಡ್ ಪಂಪ್ ಸುತ್ತಲಿನ ಜಾಗಕ್ಕೆ ಬೇಡಿಕೆ ಜಾಸ್ತಿಯಾಗಿ – ಬಕೆಟ್, ಗುದ್ದಲಿ, ಸಸಿಗಳು ಅಲ್ಲಿ ತುಂಬಿಕೊಂಡವು.

ಒಂದು ರಾತ್ರಿ, ಮನೆಯ ಮಗ್ಗುಲಲ್ಲೇ ಆನೆಯೊಂದು ಮೇಯುತ್ತಿರುವುದು ಅರಿವಿಗೆ ಬಂತು. ಆದರೆ ಸಾಮಾನ್ಯವಾಗಿ ಆನೆ ಇದ್ದಾಗ ಕೇಳಿಬರುವ ಯಾವ ಸದ್ದುಗಳೂ ಕೇಳಲಿಲ್ಲ. ಸಂಜೆಯ ಕತ್ತಲು ಕವಿದ ನಂತರ ಆನೆಗಳು ಅಲ್ಲಿಗೆ ಬರುವುದು ವಾಡಿಕೆಯಾಗಿದ್ದರಿಂದ ಮುಂಜಾನೆಯ ವೇಳೆಗೆ ಅವುಗಳ ನೆನಪು ಸಹ ನಮಗೆ ಇರುತ್ತಿರಲಿಲ್ಲ. ಆದರೆ ಮರುದಿನ ಪಂಪ್‌ಬಳಿ ಹೋದಾಗ ಅಚ್ಚರಿ ಕಾದಿತ್ತು. ಪಂಪ್‌ನ ಸುತ್ತಲೂ ಅನೆಯ ಹೆಜ್ಜೆಗಳು ಮೂಡಿದ್ದವು. ಆದರೆ ಪಂಪ್‌ಗೆ ಯಾವ ಹಾನಿಯೂ ಆಗಿರಲಿಲ್ಲ.

ಕಂದಕವೂ ಸಹ ಸುಸ್ಥಿತಿಯಲ್ಲಿತ್ತು. ಕಂದಕದ ಒಳಭಾಗದಲ್ಲಿ ಆನೆಯ ಹೆಜ್ಜೆಗಳು ಇರಲಿಲ್ಲ. ಆದರೆ, ಆ ಆನೆ ಕಂದಕವನ್ನು ಸರಾಗವಾಗಿ ದಾಟಿತ್ತು. ಮನೆ ಕಟ್ಟಿದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಆನೆಯೊಂದು ಈ ವಿಚಿತ್ರ ಸಾಹಸವನ್ನು ಮಾಡಿತ್ತು. ಅದು ಪಂಪ್ ಅನ್ನು ಮುರಿದು ಹಾಳುಗೆಡವಿಲ್ಲವೆಂಬ ಸಮಾಧಾನಕ್ಕಿಂತ, ಅದರ ವಿಚಿತ್ರ ನಡವಳಿಕೆ ನಮ್ಮ ಕುತೂಹಲಕ್ಕೆ ಕಾರಣವಾಗಿತು.

ಮುಂದಿನ ದಿನಗಳಲ್ಲಿ ಕಂದಕವನ್ನು ಹಾರುವ ಆನೆಯ ಈ ನಡವಳಿಕೆ ಮತ್ತೆ ಮತ್ತೆ ಪುನಾರವರ್ತನೆ ಗೊಂಡಿತು. ಆದರೆ ಒಳಭಾಗದಲ್ಲಿ ಹುಲುಸಾಗಿ ಬೆಳೆದಿದ್ದ ಹುಲ್ಲನ್ನಷ್ಟೆ ತಿಂದಿದ್ದ ಆ ಆನೆ, ಪಂಪ್‌ಗಾಗಲೀ ಅದರೊಳಗಿದ್ದ ಮರಗಿಡಗಳಿಗಾಗಲೀ ಯಾವ ಹಾನಿಯನ್ನೂ ಮಾಡಿರಲಿಲ್ಲ. ಆನೆಯ ಈ ಸ್ವಭಾವ ನಮ್ಮಲ್ಲಿ ಇನ್ನಷ್ಟು ಕುತೂಹಲ ಮೂಡಿಸಿತು.

ಈ ಆನೆ ಯಾವುದಿರಬಹುದೆಂದು ತಿಳಿಯಲು ಹಲವಾರು ದಿನಗಳ ಕಾಲ ರಾತ್ರಿಯ ವೇಳೆಯಲ್ಲಿ ಎಚ್ಚರಿಕೆಯಿಂದ ಕಾವಲಿದ್ದು ಪತ್ತೇದಾರಿ ಕೆಲಸದಲ್ಲಿ ತೊಡಗಿದೆವು. ಬಳಿಕ ಅದೊಂದು ಹದಿನೆಂಟು–ಹತ್ತೊಂಬತ್ತು ವರ್ಷದ ಗಂಡಾನೆಯೆಂದು ಸ್ಪಷ್ಟವಾಯಿತು. ತೆಳ್ಳಗಿದ್ದ ಅದರ ಎರಡೂ ದಂತಗಳು ಅಷ್ಟೇನು ಉದ್ದವಾಗಿರಲಿಲ್ಲ. ಆ ಆನೆ ಕತ್ತಲಲ್ಲಷ್ಟೇ ನಮ್ಮಲ್ಲಿಗೆ ಬಂದು ಮುಂಜಾನೆಗೆ ಮುನ್ನ ಅದೃಶ್ಯವಾಗುತ್ತಿತ್ತು.

ದಿನಗಳು ಕಳೆದಂತೆ, ಈ ಕಾಡಾನೆಯ ವ್ಯಕ್ತಿತ್ವ, ಸ್ವಭಾವಗಳೆಲ್ಲ ನಮ್ಮ ಮನಸ್ಸಿನಲ್ಲಿ ವಿಕಸಿಸಿ, ವಿಸ್ತಾರವಾಗಿ ಬೆಳೆದು, ನಮ್ಮನ್ನು ಆವರಿಸಿಕೊಂಡಿತ್ತು. ಅಲ್ಲದೆ ಅದರೊಂದಿಗೆ ಗೆಳೆತನವನ್ನು ಕೂಡ ನಾವೇ ಆರೋಪಿಸಿಕೊಂಡಿದ್ದೆವು. ಇದು ತಮಾಷೆಯಾಗಿ ಕಾಣಬಹುದು. ಆದರೆ ಜನಸಂಪರ್ಕದಿಂದ ದೂರವಾಗಿ, ವಿದ್ಯುತ್ ಇಲ್ಲದ ಕಾಡಿನ ಮನೆಯಲ್ಲಿ ದೀರ್ಘ ಕಾಲ ನೆಲೆಸಿದ್ದಾಗ ಹೀಗಾಗುವುದು ಸಹಜವೇನೊ?

ಆಗೊಮ್ಮೆ ಈಗೊಮ್ಮೆ ಬರುತ್ತಿದ್ದ ಈ ಆನೆ ನಂತರದ ದಿನಗಳಲ್ಲಿ ಮೇಲಿಂದ ಮೇಲೆ ಮನೆಗೆ ಬರಲಾರಂಭಿಸಿತು. ಮುಂಗಾರು ಸಮಯದಲ್ಲಿ ಅವತರಿಸುವ ಆನೆಸೊಳ್ಳೆಗಳು ಕಚ್ಚಿ ನವೆಯಾದಾಗ ತನ್ನ ಬೆನ್ನು, ಹೊಟ್ಟೆ, ಕಾಲುಗಳನ್ನು ಮನೆಯ ಗೋಡೆಗೆ ಉಜ್ಜಿಕೊಳ್ಳುವುದು ಸಾಮಾನ್ಯವಾಯಿತು. ಇದರಿಂದಾಗಿ ಗೋಡೆಯ ಕೆಲವು ನಿರ್ದಿಷ್ಟಭಾಗಗಳಲ್ಲಿ ಒದ್ದೆ ಮಣ್ಣಿನಿಂದಾದ ಕಲೆಗಳು ಶಾಶ್ವತವಾಗಿ ಉಳಿದವು.

ಕೆಲವೊಮ್ಮೆ ಕುತೂಹಲ ಮಿತಿಮೀರಿದಾಗ ಕಿಟಕಿಯ ಗಾಜಿನ ಮೇಲೆಲ್ಲಾ ಸೊಂಡಿಲ್ಲನ್ನಾಡಿಸಿ ರುಜು ಮಾಡಿದಂತೆ ತನ್ನ ಗುರುತನ್ನು ಅಲ್ಲಲ್ಲಿ ನಮೂದಿಸಿರುತ್ತಿತ್ತು. ಆನೆ ಬರೆದ ಚಿತ್ರಕಲೆಗಳನ್ನು ಕಂಡು ಪುಳಕಿತರಾಗುತ್ತಿದ್ದ ನಾವು, ಮಣ್ಣಿನ ಆ ಕೃತಿಗಳನ್ನು ಹಾಗೇ ಉಳಿಸಿಕೊಳ್ಳುತ್ತಿದ್ದೆವು. ಆ ಆನೆ ಇಷ್ಟೆಲ್ಲಾ ತುಂಟಾಟವನ್ನು ಪ್ರದರ್ಶಿಸುತ್ತಿದ್ದರೂ, ಮನೆಯ ಸುರಕ್ಷತೆಗೆ ಮಾತ್ರ ಯಾವ ಹಾನಿಯನ್ನೂ ಮಾಡಿರಲಿಲ್ಲ.

ಒಮ್ಮೆ ಮಾತ್ರ ಮಳೆ ನೀರನ್ನು ಸಂಗ್ರಹಿಸಲು ಸಜ್ಜದ ಕೆಳಗೆ ಇರಿಸಿದ್ದ ಪ್ಲಾಸ್ಟಿಕ್ ಬಕೆಟ್ ಅನ್ನು ತಟ್ಟಿ ನೋಡಿದ್ದರಿಂದ, ಅದು ತನ್ನ ಆಕಾರವನ್ನು ಕಳೆದುಕೊಂಡು ಚಪ್ಪಟ್ಟೆಯಾಗಿತ್ತು. ಮತ್ತೊಮ್ಮೆ ನಮ್ಮ ಜೀಪ್ ಶೆಡ್‌ನ ಇಟ್ಟಿಗೆ ಕಂಬದ ಒರಟು ಮೂಲೆಗೆ ತನ್ನ ಹಿಂಭಾಗವನ್ನು ಉಜ್ಜುತ್ತಿದ್ದಾಗ ಉಕ್ಕಿ ಹರಿದ ಅಪರಿಮಿತ ಸುಖವನ್ನು ತಡೆಯಲಾರದೆ ಅದರ ಮೇಲೆ ಇನ್ನಷ್ಟು ತೂಕ ಹಾಕಿತ್ತು.

ಆಗ ಕಂಬ ಕುಸಿದು ಛಾವಣಿ ನೆಲಕ್ಕುರಳಿ ಬಿದ್ದಿತ್ತು. ಕೆಲವು ಬಾರಿ ಅದು, ತನ್ನ ಸ್ನೇಹಿತರನ್ನು ಜೊತೆಯಲ್ಲಿ ಕರೆದುಕೊಂಡು ಬರುವ ಪರಿಪಾಠವಿದ್ದುದರಿಂದ ಜೀಪ್ ಶೆಡ್ ಕೆಡವಿದ ಕುಚೇಷ್ಟೆ ಬೇರಾವುದೋ ಆನೆಯ ಕೆಲಸವೆಂದು ನಾವು ತಿಳಿಯುತ್ತಿದ್ದೆವು. ವಾಸ್ತವವಾಗಿ ಅದರೊಂದಿಗೆ ಬರುತ್ತಿದ್ದ ಆನೆಗಳು ನಮ್ಮ ವಾಸನೆಗೆ ಬೆದರಿ ಮನೆಯ ಸಮೀಪಕ್ಕೆ ಬರಲು ಹಿಂಜರಿಯುತ್ತಿದ್ದವು.

ಕೆಲವೊಮ್ಮೆ ಅದರ ಇರುವನ್ನು ಗಮನಿಸದೆ ಕತ್ತಲೆಯಲ್ಲಿ ನಾವು ಮನೆಯಿಂದ ಹೊರಬಂದರೆ, ಆದು ಸದ್ದು ಮಾಡದೆ ಓಡಿ ಹೋಗುತ್ತಿತ್ತು. ಪ್ರತಿಬಾರಿಯೂ ಸಹ. ಈ ಪರಿಪಾಠ ಒಮ್ಮೆ ತಪ್ಪಿದ್ದರೂ ಬಹುಶಃ, ನಾವು ಈ ಕತೆ ಹೇಳಲು ಉಳಿದಿರುತ್ತಿರಲಿಲ್ಲವೇನೊ. ಆದರೆ ಅದು ಗಾಬರಿಗೊಂಡಂತೆ ಕಾಣುತ್ತಿರಲಿಲ್ಲ. ಅದು ಓಡುವಾಗ ಪಾದಗಳೂರುವ ಮೃದು ಸದ್ದಷ್ಟೇ ನಮಗೆ ಕೇಳಿಸುತ್ತಿತ್ತು.

ಕಾಲಿಗೆ ಸಿಕ್ಕಿ ಮುರಿದ ಕಡ್ಡಿಯ ಸದ್ದಾಗಲಿ, ಅಥವ ಬೆದರಿ ಕೂಗಿದ್ದನ್ನಾಗಲೀ ನಾವು ಕೇಳಿರಲಿಲ್ಲ. ನಾವು ಮನೆಯೊಳಗೆ ವಾಪಸಾದ ಮರುಕ್ಷಣದಲ್ಲಿ ಮತ್ತೆ ಅದು ಹಿಂದಿರುಗಿ ಬಂದು ಮೊದಲಿದ್ದ ಸ್ಥಳದಲ್ಲಿ ನಿಂತಿರುತ್ತಿತ್ತು.

ಆನೆಯ ಈ ಚಟುವಟಿಕೆಯಿಂದಾಗಿ ಮನೆಗೆ ಬರುತ್ತಿದ್ದ ಅನೇಕ ಮಿತ್ರರಿಗೆ ನೆಮ್ಮದಿಯಿಂದ ನಿದ್ರಿಸಲು ಸಾಧ್ಯವಾಗುತ್ತಿರಲಿಲ್ಲ. ಕಾಡಿನಲ್ಲಿ ರಾತ್ರಿಗಳು ಬಹಳ ದೀರ್ಘವಾಗಿರುತ್ತವೆಯೇ? ಎಂದು ಬಂದವರು ಕೆಲವೊಮ್ಮೆ ಕೇಳುತ್ತಿದ್ದರು. ಈ ಪ್ರಶ್ನೆ ಎದುರಾದಾಗ, ನಮ್ಮ ಆನೆ ರಾತ್ರಿ ಬಂದು ಹೋಗಿದೆ ಎಂದು ನಮಗೆ ಅರ್ಥವಾಗುತ್ತಿತ್ತು. ಆಗ ಎಲ್ಲಾದರೂ ಗೋಡೆಗೆ ಮೈ ಉಜ್ಜಿಕೊಂಡಿದೆಯೇ ಎಂದು ಹುಡುಕಿ ನೋಡುತ್ತಿದ್ದೆವು.

ಕೆಲವೊಮ್ಮೆ ಕಿಟಕಿಯ ಸರಳುಗಳ ಮೇಲೆ ಅದರ ಸೊಂಡಿಲಿನಿಂದುರಿದ ಮಣ್ಣಿನ ಕಣಗಳು ಅಂಟಿರುತ್ತಿದ್ದವು. ಕೆಲವೊಮ್ಮೆ ಅವರು ಮಲಗಿದ್ದ ಮಂಚದ ಪಕ್ಕದ ಗೋಡೆಗೆ ಆನೆ ಮೈ ಉಜ್ಜಿಕೊಂಡಿರುತ್ತಿತ್ತು. ಕೇವಲ ಒಂಬತ್ತು ಅಂಗುಲದ ಗೋಡೆಯನ್ನು ನಂಬಿಕೊಂಡು ಆನೆಯ ಇರುವನ್ನು ನಿರ್ಲಕ್ಷಿಸಿ ನಿದ್ರಿಸುವುದು ಅಷ್ಟೇನೂ ಸುಲಭವಿರಲಿಲ್ಲ. ಹಾಗಾಗಿ, ಕೆಲವರಿಗೆ ಮಾತ್ರ ಕಾಡಿನ ರಾತ್ರಿಗಳು ದೀರ್ಘವೆಂಬಂತೆ ಭಾಸವಾಗುತ್ತಿತ್ತು.

ಇದೇ ಅವಧಿಯಲ್ಲಿ ನಮ್ಮ ಮನೆಯಿಂದ ಕೆಲವೇ ಕಿಲೋಮೀಟರ್ ದೂರವಿದ್ದ ಅರಣ್ಯ ಇಲಾಖೆಯ ವಸತಿ ಪ್ರದೇಶದಲ್ಲಿ ಕಾಡಾನೆಯೊಂದು ಎಲ್ಲರಿಗೂ ದಿಗಿಲು ಹುಟ್ಟಿಸಿತ್ತು. ರಾತ್ರಿ ವೇಳೆಯಲ್ಲಷ್ಟೇ ಆಗಮಿಸುತ್ತಿದ್ದ ಅದು, ಒಮ್ಮೆ ವಿಶ್ರಾಂತಿ ಗೃಹದ ಬಳಿ ನಿಲ್ಲಿಸಿದ್ದ ಇಲಾಖೆಯ ಜೀಪನ್ನು ಜಖಂಗೊಳಿಸಿದರೆ, ಮತ್ತೊಂದು ರಾತ್ರಿ ಅಲ್ಲಿಗೆ ಆಗಮಿಸಿದ್ದ ಗಣ್ಯವ್ಯಕ್ತಿಗಳಿಗೆ ಊಟ ನೀಡಲು ಇಲಾಖೆಯ ನೌಕರನೊಬ್ಬನು ತೆರಳುತ್ತಿದ್ದಾಗ ಆತನನ್ನು ಬೆನ್ನಟ್ಟಿ, ಸಿದ್ಧಪಡಿಸಿದ್ದ ಮೃಷ್ಟಾನ್ನ ಭೋಜನವೆಲ್ಲ ನೆಲಕ್ಕೆ ಬಿದ್ದು, ಹಂದಿಗಳ ಪಾಲಾಗುತ್ತಿತ್ತು.

ಇನ್ನೊಮ್ಮೆ ಮನೆಯ ಬಳಿ ವಾಯುವಿಹಾರ ನಡೆಸುತ್ತಿದ್ದ ವಲಯ ಅರಣ್ಯಾಧಿಕಾರಿಯ ಮೇಲೆರಗಿ ಅವರು ಕೂದಲೆಳೆಯಲ್ಲಿ ಪಾರಾಗಿದ್ದರು. ಮುಂದೊಂದು ದಿನ ತನ್ನ ಸಹಸಿಬ್ಬಂದಿಯ ಮೇಲೆ ಕತ್ತಲಲ್ಲಿ ನುಗ್ಗಿಬಂದಿದ್ದ ಆನೆಯನ್ನು ಓಡಿಸಲು ಗಾರ್ಡ್ ಒಬ್ಬರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.

ಆದರೆ ಈ ಎಲ್ಲಾ ಗಾಳಿ ವರ್ತಮಾನಗಳ ವಾಸ್ತವಾಂಶಗಳನ್ನು ಭೇದಿಸಿ, ವಿಷಯಗಳನ್ನು ವಿಶ್ಲೇಷಿಸಿ ನೋಡಲು ನಮಗಂತೂ ಸಾಧ್ಯವಾಗಲಿಲ್ಲ. ಬಹುಶಃ ಬೇರೆ ಬೇರೆ ಆನೆಗಳಿಂದಾದ ಎಲ್ಲಾ ಘಟನೆಗಳನ್ನು ಈ ಗಂಡಾನೆಯ ಮೇಲೆ ಆರೋಪಿಸುತ್ತಿರಬಹುದೆಂಬುದು ನಮ್ಮ ಸಂದೇಹವಾಗಿತ್ತು.
ಒಟ್ಟಿನಲ್ಲಿ ಆ ಒಂಟಿ ಸಲಗದ ಬಗ್ಗೆ ಅಲ್ಲಿಯವರಿಗೆಲ್ಲ ಭಯ, ಆತಂಕ, ಸಿಟ್ಟು ಶುರುವಾಗಿತ್ತು.

ಈ ಹಿನ್ನೆಲೆಯಲ್ಲಿ ಆ ಪುಂಡಾನೆಯನ್ನು ಹಿಡಿದು ಪಳಗಿಸಿ ಮೃಗಾಲಯಕ್ಕೆ ಕಳುಹಿಸಿಬಿಡಬೇಕೆಂಬ ಸಲಹೆಗಳು ಅಲ್ಲಲ್ಲಿ ವ್ಯಕ್ತಗೊಳ್ಳುತ್ತಿದ್ದವು. ಇದಾದ ಕೆಲ ಸಮಯದಲ್ಲಿ ಯಾರೋ ಪ್ರವಾಸಿಗರು ಫ್ಲಾಶ್ ಬಳಸಿ ಆ ಆನೆಯ ಚಿತ್ರವನ್ನು ಸೆರೆಹಿಡಿಯಲು ಯಶಸ್ವಿಯಾಗಿದ್ದರು. ಅಸ್ಪಷ್ಟವಾಗಿದ್ದ ಆ ಚಿತ್ರವನ್ನು ನಾವು ನೋಡಿದಾಗ ದಿಗಿಲಾಯಿತು. ಆ ‘ರೌಡಿ’ ಆನೆ ನಮ್ಮ ಮನೆಗೆ ಭೇಟಿನೀಡುತ್ತಿದ್ದ ನಮ್ಮ ‘ಸ್ನೇಹಿತ’ ಆನೆಯನ್ನೇ ಹೋಲುತ್ತಿತ್ತು.

ಆನೆಗಳು, ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿ ವರ್ತಿಸುತ್ತವೆಂಬುದು ನಮಗೆ ತಿಳಿದಿದ್ದ ವಿಷಯ. ಆದರೆ, ಈ ಮಟ್ಟಿನ ವಿರೋದಾಭಾಸದ ನಡವಳಿಕೆ ನಮಗೆ ನಂಬಲು ಕಷ್ಟವಾಗುತ್ತಿತ್ತು. ಬಹುಶಃ ಅದು ಬೆದೆಗೆ ಬಂದಿರಬಹುದು ಎಂದು ನಾವು ಯೋಚಿಸಿದೆವು. ಬಳಿಕ ಇದು ಯಾವುದೋ ನಿರ್ದಿಷ್ಟ ಅವಧಿಯಲ್ಲಷ್ಟೇ ತೋರುವ ನಡವಳಿಕೆ.

ಸ್ವಲ್ಪ ಸಮಯದ ನಂತರ ಅದರ ಸ್ವಭಾವವೇ ಬದಲಾಗುತ್ತದೆ, ಹಾಗಾಗಿ ಒಂದೆರಡು ತಿಂಗಳು ಕಾಲ ಎಚ್ಚರಿಕೆಯಿಂದಿರಬೇಕೆಂದು ಎಲ್ಲರಿಗೂ ತಿಳಿಸಿ ಹೇಳುವ ಪ್ರಯತ್ನ ಮಾಡಿದೆವು. ಆದರೆ, ನಮಗೇ ನಮ್ಮ ಮಾತಿನಲ್ಲಿ ಸಂಪೂರ್ಣ ನಂಬಿಕೆ ಇರಲಿಲ್ಲ.

ಅಷ್ಟರಲ್ಲಿ, ಆ ಆನೆಯ ಅದೃಷ್ಟವೆಂಬಂತೆ ಕಾಡುಗಳ್ಳ ವೀರಪ್ಪನ್ ನಮ್ಮನ್ನು ಅಪಹರಿಸಿದ. ಹಾಗಾಗಿ ಇಡೀ ಬಂಡೀಪುರವನ್ನು ಕಾಡುತ್ತಿದ್ದ ಒಂಟಿಸಲಗದ ಸಮಸ್ಯೆಗಿಂತ ಗಂಭೀರ ಸಮಸ್ಯೆಯೊಂದು ಆವರಿಸಿತು. ಅಲ್ಲಿಗೆ ಆ ಕಾಡಾನೆಯನ್ನು ಹಿಡಿದು ಪಳಗಿಸುವ ವಿಚಾರವಿರಲಿ, ಆ ಅಧ್ಯಾಯವನ್ನೇ ಎಲ್ಲರೂ ಮರೆತುಹೋದರು.

ಹಲವು ತಿಂಗಳ ಬಳಿಕ ನಾವು ಕಾಡುನಾಯಿಗಳ ಕೆಲಸವನ್ನು ಮತ್ತೆ ಪ್ರಾರಂಭಿಸಿದಾಗ ಮನೆಯ ಬಳಿ ನಮ್ಮ ‘ಸ್ನೇಹಿತ’ ಆನೆಯ ಸುಳಿವೇ ಇರಲಿಲ್ಲ. ಅದು ಅಲೆದಾಡಿದ್ದ ಕುರುಹುಗಳು ಕೂಡ ಅಲ್ಲಿರಲಿಲ್ಲ. ಜೊತೆಗೆ ವೀರಪನ್ ನಮ್ಮ ಮನೆಯ ಬಳಿಯೇ ಯಾವುದೋ ಸಲಗವನ್ನು ಹತ್ಯೆಮಾಡಿದ್ದನೆಂದು ಗಾಳಿಸುದ್ದಿ ಹರಡಿತ್ತು. ಒಟ್ಟಿನಲ್ಲಿ ಹೊಸ ಸಮಸ್ಯೆಯಿಂದಾಗಿ ರೌಡಿ ಆನೆಯ ರಾದ್ಧಾಂತಕ್ಕೆ ಪ್ರಾಮುಖ್ಯತೆ ಇಲ್ಲವಾಯಿತು.

ಕೆಲವು ವರ್ಷಗಳ ಬಳಿಕ, ಒಂದೇ ಒಂದು ಕೊಂಬಿದ್ದ ಸಲಗವೊಂದು ಒಮ್ಮೆಲೆ ಎಲ್ಲರಿಗೂ ಕಾಣಿಸತೊಡಗಿತು. ಈ ಅಪರಿಚಿತ ಆನೆ ಹೆಚ್ಚಿನ ಸಮಯ ಹೆದ್ದಾರಿಯ ಇಕ್ಕೆಲಗಳಲ್ಲೇ ಕಾಣಿಸಿಕೊಳ್ಳುತ್ತಿತ್ತು. ರಸ್ತೆಯಲ್ಲಿ ಓಡಾಡುವ ವಾಹನಗಳ ಬಗ್ಗೆ ಅದು ಕಿಂಚಿತ್ತೂ ತಲೆ ಕೆಡಿಸಿಕೊಳ್ಳದೆ ಹುಲ್ಲು ಮೇಯುತ್ತಾ ನಿಂತಿರುತ್ತಿತ್ತು. ಕೆಲವೊಮ್ಮೆ ಅದರ ದೇಹದ ಬಹು ಭಾಗ ರಸ್ತೆಯ ಮೇಲಿರುತ್ತಿತ್ತು.

ಅಂತಹ ಸಮಯದಲ್ಲಿ ಹೆದರಿದ ಚಾಲಕರು ವಾಹನಗಳನ್ನು ದೂರದಲ್ಲೇ ನಿಲ್ಲಿಸಿ ಕಾದು ನಿಲ್ಲುತ್ತಿದ್ದರು. ಇದರಿಂದ ಮೈಸೂರು–ಊಟಿ ರಸ್ತೆಯಲ್ಲಿ ಲೆಕ್ಕವಿಲ್ಲದಷ್ಟು ವಾಹನಗಳು ಸಾಲು ಸಾಲಾಗಿ ಕಾದು ನಿಲ್ಲುವ ದೃಶ್ಯ ಸಾಮಾನ್ಯವಾಗಿತ್ತು. ಆ ಆನೆಗೆ ಒಂದೇ ದಂತವಿದ್ದುದರಿಂದ ಎಲ್ಲರೂ ಅದನ್ನು ‘ಒಂಟಿಕೊಂಬ’ ಎಂದು ಕರೆಯಲಾರಂಭಿಸಿದರು.

ಕಾಡು ಕುರುಬರಿಗೆ ರಾತ್ರಿ ಮನೆಯಿಂದ ಹೊರಗೆ ಮಲಗುವ ಅಭ್ಯಾಸ. ಅಂದು ಹುಣ್ಣಿಮೆ. ಇದ್ದಕ್ಕಿದ್ದಂತೆ ಹಾಡಿಯಲ್ಲಿ ಒಂದು ಬೃಹದಾಕಾರದ ನೆರಳು ಚಲಿಸಿದಂತಾಗಿದೆ. ಎಚ್ಚರಗೊಂಡವರು ದಿಕ್ಕಾಪಾಲು ಓಡಿದ್ದಾರೆ. ಓಡಲಾಗದ ಕೆಲವರು ಅದು ಕಾಡಾನೆ ಎಂದು, ಅದಕ್ಕೆ ಒಂದೇ ಒಂದು ಕೊಂಬಿತ್ತು ಎಂದು ಹೇಳಿದರೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

ಒಟ್ಟಿನಲ್ಲಿ ಅಂದು ‘ಒಂಟಿಕೊಂಬ’ ನೇರವಾಗಿ ಹಾಡಿಯ ಮಧ್ಯಭಾಗದಲ್ಲೇ ನಡೆದುಹೋಗಿತ್ತು ಎಂದು ಊಹಿಸುವುದಕ್ಕೆ ಸಾಕಷ್ಟು ಪುರಾವೆಗಳಿದ್ದವು. ಆ ಆನೆಗೆ ತಲೆಕೆಟ್ಟಿದೆ ಎಂದು ನಿರ್ಧಾರವಾಯಿತು. ಹಾಗಾಗಿ ಹಾಡಿಗಳಲ್ಲಿ ರಾತ್ರಿಹೊತ್ತು ಮನೆಯಿಂದ ಆಚೆ ಮಲಗುವ ಪದ್ಧತಿಗೆ ತಾತ್ಕಾಲಿಕ ತೆರೆಬಿದ್ದಿತ್ತು.

ಇದಾಗಿ ಹಲವು ತಿಂಗಳು ಕಳೆದಿತ್ತು. ಮೋಟಾರ್ ಸೈಕಲ್‌ನಲ್ಲಿ ಹೋಗುತ್ತಿದ್ದವನೊಬ್ಬ ತನ್ನ ಮುಂದೆ ಒಂದು ಆನೆ ದಾಟಿತೆಂದು, ಅದು ಹೆಂಗಸೊಬ್ಬಳನ್ನು ಕೊಂಬಿನ ಮೇಲೆ ಕೂರಿಸಿಕೊಂಡು, ಸೊಂಡಿಲಿನಲ್ಲಿ ಹಿಡಿದುಕೊಂಡು ಹೊತ್ತೊಯ್ಯುತ್ತಿತ್ತೆಂದು, ಹಾಗೂ ಆ ಆನೆಗೆ ಒಂದೇ ಒಂದು ದಂತವಿತ್ತೆಂದು ಇಲಾಖೆಯವರಿಗೆ ಸುದ್ದಿ ಮುಟ್ಟಿಸಿದ. ಗಾಬರಿಯಲ್ಲಿ ಅವನು ಇಷ್ಟೆಲ್ಲಾ ವಿವರಗಳನ್ನು ಗ್ರಹಿಸಿದ್ದು ಹೇಗೆಂದು ಕೇಳುವ ವ್ಯವಧಾನ ಯಾರಿಗೂ ಇರಲಿಲ್ಲ.

ಅರಣ್ಯ ಇಲಾಖೆಯವರು, ಕಾಡು ಕುರುಬರು ಎಲ್ಲರೂ ಸೇರಿ ಮೋಟಾರ್ ಸೈಕಲ್‌ನವನು ತೋರಿಸಿದ ಕಾಡಿನ ಪ್ರದೇಶವನ್ನು ಸಂಪೂರ್ಣವಾಗಿ ಶೋಧಿಸಲಾರಂಭಿಸಿದರು. ಮೊದಲಿಗೆ ಎಡಗಾಲಿನ ಒಂದು ರಬ್ಬರ್ ಚಪ್ಪಲಿ ಸಿಕ್ಕಿತು, ನಂತರ ಒಂದು ಕುಪ್ಪಸ. ಇನ್ನೂ ಸ್ವಲ್ಪ ದೂರದಲ್ಲಿ ಒಂದು ಹರಿದ ಪ್ಯಾಂಟ್, ಒಂದು ಒಳಚಡ್ಡಿ ಬಿದ್ದಿತ್ತು. ಆದರೆ ಶವ ಮಾತ್ರ ಸಿಗಲಿಲ್ಲ.

‘ಈ ಆನೆ ಹೆಣ ತಿನ್‌ತದೇನ್...’ ಒಬ್ಬ ಹೇಳಿದ. ‘ಹಂಗೆ ಕಾಣ್ತದೆ...’ ಅಂದ ಮತ್ತೊಬ್ಬ. ಅಲ್ಲಿಗೆ ಶೋಧನಾಕಾರ್ಯ ಮುಗಿದಿತ್ತು. ಇದಾದ ಕೆಲವು ದಿನಗಳಲ್ಲಿ ಕಾಡಿನಂಚಿನಲ್ಲಿದ್ದ ಹಳೆಯ ಮನೆಯನ್ನು ಆನೆಯೊಂದು ಕೆಡವಿತ್ತು. ‘ಒಂಟಿಕೊಂಬ ನರಭಕ್ಷಕನಾಗಿದೆ, ಮನೆಗಳನ್ನು ಬೀಳಿಸುತ್ತಾ ತಿನ್ನಲು ಮನುಷ್ಯರನ್ನು ಹುಡುಕುತ್ತಿದೆಯಂತೆ’ ಎಂದು ಎಲ್ಲೆಡೆ ಗುಲ್ಲೆದ್ದಿತ್ತು.

ಆ ಮನೆ ನೋಡಿ ಬರೋಣವೆಂದು ಹೋಗಿದ್ದೆವು. ಗಾರ್ಡಾಗಿ ನಿವೃತ್ತರಾಗಿದ್ದ ಕಾಡುಕುರುಬರೊಬ್ಬರು ಅಲ್ಲಿದ್ದರು. ಆತ ನಮಗೆ ಹಳೆಯ ಪರಿಚಯ. ಆತನಾಗಲೇ ಎಲ್ಲಾ ವಿವರಗಳನ್ನು ಹೆಕ್ಕಿ ವಿಶ್ಲೇಷಿಸಿದ್ದರು. ಆ ಮನೆಯಲ್ಲಿ ಎಲೆಕ್ಟ್ರಿಕ್ ಕಂಟ್ರಾಕ್ಟರ್‌ರೊಬ್ಬ ಎರಡು ಮೂಟೆ ಉಪ್ಪು ಶೇಖರಿಸಿಟ್ಟಿದ್ದ. ಉಪ್ಪಿನ ವಾಸನೆಗೆ ಕಿಟಕಿಯಲ್ಲಿ ಸೊಂಡಿಲನ್ನು ತೂರಿಸಲು ಯತ್ನಿಸಿದ ಆನೆ ಸ್ವಲ್ಪ ಬಲಪ್ರಯೋಗ ಮಾಡಿತ್ತು.

ಹಳೆ ಮನೆಯ ಗೋಡೆ ಉರುಳಿಬಿದ್ದಿತ್ತು. ಆತನ ತಿಳಿವಳಿಕೆ ನಮಗಿಷ್ಟವಾಗಿ, ರಸ್ತೆಯಲ್ಲಿ ಹೆಂಗಸಿನ ಹೆಣ ಹುಡುಕಲು ಹೋದಾಗ ಸಿಕ್ಕ ಬಟ್ಟೆಗಳ ಬಗೆಗೆ ಕೇಳಿದೆವು. ‘ನಮ್ಮ ಕಾಡಿನ ನಡುವೆ ಹಾದುಹೋಗುವ ಮುಖ್ಯರಸ್ತೆಯ ಪಕ್ಕದಲ್ಲಿ ಎಲ್ಲೇ ಹುಡುಕಿದರೂ ನಿಮಗೆ ಚಪ್ಪಲಿ ಮತ್ತು ಬಟ್ಟೆಗಳು ಸಿಕ್ಕುವುದು ಸಾಮಾನ್ಯ.

ಬಹುಶಃ ಆ ಒಂಟಿಕೊಂಬನ ದಂತಕ್ಕೆ ಅಂದು ಒಂದು ಕುಪ್ಪಸ ಸಿಕ್ಕಿಹಾಕಿಕೊಂಡಿತ್ತೇನೋ ಅಥವ ಗಾಬರಿಯಲ್ಲಿ ಮೋಟಾರ್ ಸೈಕಲ್ ಸವಾರ ಏನು ಕಲ್ಪಿಸಿಕೊಂಡನೋ ಏನೋ’ ಎಂದು ನಗುತ್ತಾ ತಿಳಿಸಿದರು. ಆತ ಹೇಳುತ್ತಿದುದ್ದರಲ್ಲಿ ತರ್ಕ ಮತ್ತು ವಿವೇಕಗಳಿದ್ದವು. ಆದರೆ ಆ ವೇಳೆಗಾಗಲೇ ಒಂಟಿಕೊಂಬಕ್ಕೆ ‘ನರಭಕ್ಷಕ’ ಪಟ್ಟ ಬಂದು ತಿಂಗಳುಗಳೇ ಕಳೆದಿತ್ತು.

ನಾವು ಕಾಡುನಾಯಿಗಳನ್ನು ಹಿಂಬಾಲಿಸುತ್ತಿದ್ದಾಗ ಆ ವಲಯದಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಗಂಡಾನೆಗಳ ವಿವರವಾದ ದಾಖಲೆ ಇಟ್ಟುಕೊಳ್ಳುವುದನ್ನು ರೂಢಿಮಾಡಿಕೊಂಡಿದ್ದೆವು. ಆ ಸಮಯದಲ್ಲಿ ದಂತಕ್ಕಾಗಿ ಗಂಡಾನೆಗಳ ಹತ್ಯೆ ಮಿತಿಮೀರಿ, ವಯಸ್ಸಿಗೆ ಬಂದ ಸಲಗಗಳ ಸಂಖ್ಯೆ ತೀವ್ರವಾಗಿ ಇಳಿಮುಖಗೊಂಡಿತ್ತು. ಹಾಗಾಗಿ ಹೊಸದಾಗಿ ಆಗಮಿಸಿದ್ದ, ಅಥವ ಕಣ್ಮರೆಯಾದ ಆನೆಗಳ ಬಗ್ಗೆ ನಾವು ಆಸಕ್ತಿ ಹೊಂದಿದ್ದೆವು.

ಇದರಿಂದಾಗಿ ಆ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗಂಡಾನೆಗಳ ವಿವರಗಳೆಲ್ಲವೂ ನಮ್ಮ ಬಳಿ ಇದ್ದವು. ಆದರೆ ನಮಗೆ ಈ ಒಂಟಿಕೊಂಬ ಆನೆಯ ಹಿಂದೆಮುಂದೆ ಏನೆಂದು ತಿಳಿಯಲಾಗಿರಲಿಲ್ಲ. ಇದ್ದಕಿದ್ದಂತೆ, ಎಲ್ಲಿಂದಲೋ ಬಂದು ಹೀಗೆ ಇಲ್ಲೇ ಬೆಳೆದಂತೆ ವರ್ತಿಸುತ್ತಿರುವುದು ನಮಗೆ ಆಶ್ಚರ್ಯ ತಂದಿತ್ತು.

ಈ ವಿಷಯವನ್ನು ಆನೆ ವಿಜ್ಞಾನಿ ಅಜಯ್‌ರೊಡನೆ ಒಮ್ಮೆ ಪ್ರಸ್ತಾಪಿಸಿದೆವು. ಅವರು, ‘ಕಾಡಾನೆಗಳ ಬಗೆಗಿನ ನಿಮ್ಮ ಹಳೆಯ ಟಿಪ್ಪಣಿಗಳನ್ನು ತಿರುವಿ ಹಾಕಿ, ಇದೇ ವಲಯದಲ್ಲಿ ಬೆಳೆದ, ಹೆಚ್ಚೂಕಡಿಮೆ ಇದೇ ಸ್ವಭಾವ ಹೊಂದಿದ ಯಾವುದಾದರೂ ಆನೆಯಿದೆಯೋ ಹುಡುಕಿನೋಡಿ, ಅದಕ್ಕೆ ಎರಡು ಕೊಂಬಿದ್ದರೂ ಚಿಂತಿಸಬೇಡಿ, ಅದರ ಫೋಟೊ ಸಿಕ್ಕಬಹುದೇ ನೋಡಿ, ನಂತರ ಚರ್ಚಿಸೋಣ’ ಎಂದರು. ಅದಾದ ಕೆಲವು ದಿನಗಳ ಬಳಿಕ, ಒಂದು ಬೆಳದಿಂಗಳ ರಾತ್ರಿ ನಮ್ಮ ಹ್ಯಾಂಡ್‌ಪಂಪ್ ಪಕ್ಕದಲ್ಲಿ ಒಂದು ಆನೆ ನಿಂತಿದ್ದಂತೆ ಕಂಡಿತು.

ಕುತೂಹಲದಿಂದ ಹತ್ತಿರ ಹೋಗಲು ಯತ್ನಿಸಿದಾಗ ನೆರಳೊಂದು ಸರಿದು ಟ್ರೆಂಚ್ ನೆಗೆದು ಕಣ್ಮರೆಯಾಯಿತು. ಬೆಳದಿಂಗಳಲ್ಲಿ ಅದರ ಎಡಬದಿಯ ಒಂದು ಕೊಂಬು ಮಾತ್ರ ಕಂಡಿತ್ತು. ಅಂದೇ ರಾತ್ರಿ ನಮ್ಮ ಹಿಂದಿನ ಆನೆಗಳ ಚಿತ್ರಗಳನ್ನೆಲ್ಲಾ ಹುಡುಕಿದೆವು. ಯಾವ ಆನೆಯ ಚಿತ್ರ ಹುಡುಕಬೇಕೆಂದು ನಮಗೀಗಾಗಲೇ ತಿಳಿದಿತ್ತು.

ನಮ್ಮ ಹಳೆಯ ಸ್ನೇಹಿತ, ‘ರೌಡಿ’ ಆನೆಯ ಎಡಕೊಂಬು, ‘ಒಂಟಿಕೊಂಬ’ನ ದಂತದ ಆಕಾರಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿತ್ತು. ಬಹುಶಃ ನಮ್ಮ ಮಿತ್ರ ತನ್ನ ಮೊದಲ ‘ಮಸ್ತ್’ ಸಮಯದಲ್ಲಿ ಶರೀರದಲ್ಲಾಗುವ ತೀವ್ರ ಬದಲಾವಣೆಗಳ ಕಿರಿಕಿರಿಯಲ್ಲಿ ಮಣ್ಣಿಗೆ ಗುದ್ದುವಾಗ ಒಂದು ಕೊಂಬನ್ನು ಕಳೆದುಕೊಂಡಿರಬಹುದು.

ನಮ್ಮ ದೇಶದ ಚಲನಚಿತ್ರಗಳಲ್ಲಾಗುವಂತೆ ಅದು ಒಂದು ಚಿಕ್ಕ ಬದಲಾವಣೆ ಮಾಡಿಕೊಂಡು, ರೌಡಿ ಶೀಟ್‌ನಿಂದ ಹೊರಗೆ ಬಂದು ಯಾರಿಗೂ ಗುರುತು ಸಿಗದಂತೆ ಅದೇ ಪ್ರದೇಶಗಳಲ್ಲಿ ತಿರುಗಾಡಿಕೊಂಡಿತ್ತು. ರೌಡಿ ಆನೆಯನ್ನು ವೀರಪನ್ ಹತ್ಯೆ ಮಾಡಿರಬಹುದೆಂದು ತಿಳಿದ ಜನ ಅದನ್ನು ಮರೆತೇಬಿಟ್ಟಿದ್ದರು.

ಮುಂದಿನ ವರ್ಷಗಳಲ್ಲಿ ಈ ಕಾಡಾನೆ ‘ಒಂಟಿಕೊಂಬ’ ಎಲ್ಲರಿಗೂ ಚಿರಪರಿಚಿತವಾಯಿತು. ಒಮ್ಮೊಮ್ಮೆ ಯಾರಿಗೂ ತೊಂದರೆ ಕೊಡದೆ ರಸ್ತೆ ಪಕ್ಕದಲ್ಲಿ ನಿಂತಿರುತ್ತಿತ್ತು. ಪ್ರವಾಸಿಗರಲ್ಲಿ ಕೆಲವರು ಅದು ‘ಸಾಕಾನೆ’ ಎಂದು ತಿಳಿದು ಅದರ ಮುಂದೆ ನಿಂತು ಫೋಟೊ ತೆಗೆಸಿಕೊಳ್ಳುತ್ತಿದ್ದುದುಂಟು, ಇನ್ನು ಹಲವರು ಸಾಕ್ಷಾತ್ ಗಣೇಶನೇ ಎದುರಿಗಿದ್ದಾನೆಂದು ವಾಹನದಿಂದ ಇಳಿದು ಚಪ್ಪಲಿ ಬಿಟ್ಟು ಕೈ ಮುಗಿದು ಹೋಗುತ್ತಿದ್ದರು.

ಒಂಟಿಕೊಂಬ ಮಾತ್ರ ನಿರ್ಲಿಪ್ತನಾಗಿರುತ್ತಿತ್ತು. ಆದರೆ ಕೆಲವೊಮ್ಮೆ ಇದ್ದಕಿದ್ದಂತೆ ಇಡೀ ಹೆದ್ದಾರಿಯನ್ನು ಅಡ್ಡಗಟ್ಟಿ ಪ್ರಯಾಣಿಕರಲ್ಲಿ ಭೀತಿ ಹುಟ್ಟಿಸುತ್ತಿತ್ತು. ಒಮ್ಮೆ ಕ್ಯಾಂಪ್ ಆನೆ ಜಯಪ್ರಕಾಶನನ್ನು ಕಂಡು ಓಡಿದರೆ, ಇನ್ನೊಮ್ಮೆ ಅದನ್ನು ಅಟ್ಟಾಡಿಸಿಕೊಂಡು ಹೊಡೆಯುತ್ತಿತ್ತು.

ಒಬ್ಬರು ಅದನ್ನು ನರಭಕ್ಷಕನೆಂದರೆ, ಮತ್ತೊಬ್ಬರು ಮಿತ್ರನೆನ್ನುತ್ತಿದ್ದರು. ಆದರೆ ಒಂಟಿಕೊಂಬ ಮಾತ್ರ ತನಗೆ ಸಿಗುತ್ತಿದ್ದ ಗುಣವಾಚಕಗಳನ್ನೆಲ್ಲ ಉಪೇಕ್ಷಿಸಿ ಒಂದು ಕಾಡಾನೆ ಹೇಗಿರಬೇಕೋ ಹಾಗಿತ್ತು.

ಹುಟ್ಟಿದಾಗ ಎರಡು ಕೊಂಬಿದ್ದರೂ ನಂತರ ಒಂಟಿಕೊಂಬನಾಗಿ, ಬಂಡೀಪುರ – ಮುದುಮಲೈ ಕಾಡುಗಳಲ್ಲಿ ಎಲ್ಲರಿಗೂ ಚಿರಪರಿಚಿತನಾಗಿತ್ತು. ನಾನಾ ಬಗೆಯ ವದಂತಿಗಳಿಗೆ, ಊಹಾಪೋಹಗಳಿಗೆ ಕಾರಣನಾಗಿ, ಕೆಲ ಜನರಿಗೆ ದಿಗಿಲು ಉಂಟುಮಾಡಿ ಕೆಲವರಿಗೆ ಮನರಂಜನೆ ನೀಡಿ, ಛಾಯಾಗ್ರಾಹಕರಿಗೆ ಫೋಸ್ ಕೊಡುತ್ತಾ, ಕಾಡಿಗೆ ಮೆರುಗನ್ನು ತಂದಿದ್ದ ಆ ಸಲಗದ ಬದುಕು ದುರಂತದಲ್ಲಿ ಕೊನೆಯಾಗಿತ್ತು. ಆ ಕಾಡಾನೆಗೆ ಸುಮಾರು ಮೂವತ್ತು ವರ್ಷಗಳಿದ್ದಾಗ ಕಳ್ಳಬೇಟೆಯವರ ಗುಂಡಿಗೆ ಬಲಿಯಾಯಿತು.

ಈಗ ಸಂಶೋಧನೆಗೆ ಬಂದಿರುವ ಯುವ ವಿದ್ಯಾರ್ಥಿ ಜೋಸೆಫ್ ರಾಜ ನಮ್ಮ ಬಂಡೀಪುರದ ಮನೆಯಲ್ಲಿ ಒಬ್ಬನೇ ಇರುತ್ತಾನೆ. ಆತನಿಗೆ ತನ್ನ ಬಟ್ಟೆಗಳನ್ನು ಒಗೆದು ಒಣಗಲು ಕಿಟಕಿಯ ಸರಳುಗಳ ಮೇಲೆ ಹರಡುವ ಅಭ್ಯಾಸ.

‘ಈಚೆಗೆ ಹದಿವಯಸ್ಸಿನ ಸಲಗವೊಂದು ರಾತ್ರಿ ಹೊತ್ತಿನಲ್ಲಿ ಮನೆಯ ಬಳಿ ಬಂದು ಹೋಗಲಾರಂಭಿಸಿದೆ. ಆ ಕಾಡಾನೆ ಬಂದಾಗ ನನ್ನ ಬಟ್ಟೆಗಳನ್ನೆಲ್ಲ ಸೊಂಡಿಲಿನಲ್ಲಿ ಮುಟ್ಟಿನೋಡಿ ಹೋಗುತ್ತದೆ. ಕೆಲವೊಮ್ಮೆ ಸ್ವಲ್ಪ ಮಣ್ಣಾಗಿರುತ್ತದೆ ಅಷ್ಟೆ, ಖಂಡಿತವಾಗಿ ಅದು ನನ್ನ ವಾಸನೆಯ ಗುರುತುಹಿಡಿಯಲಾರಂಭಿಸಿದೆ, ಅದು ನನಗೆ ಸ್ನೇಹಿತನಂತಾಗಿದೆ’ ಎಂದು ಇತ್ತೀಚೆಗೆ ಸಿಕ್ಕಿದಾಗ ಉತ್ಸಾಹದಿಂದ ಹೇಳುತ್ತಿದ್ದ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.