ಆ ರಾತ್ರಿಯ ಕತ್ತಲು ಎಂದಿಗಿಂತಲೂ ಗಾಢವಾಗಿತ್ತು. ಕಾಡಿನ ಕತ್ತಲೆ ಮತ್ತು ಏಕಾಂತದ ಬಗ್ಗೆ ಚಿಕ್ಕವನಾಗಿದ್ದಾಗಿಂದಲೂ ನನಗೆ ವಿಚಿತ್ರ ವ್ಯಾಮೋಹ. ಇದಕ್ಕೆ ಕಾರಣವೇನಿರಬಹುದೆಂದು ನನಗಿನ್ನೂ ತಿಳಿದಿಲ್ಲ. ನಮ್ಮ ಬಂಡೀಪುರದ ಮನೆಯಲ್ಲಿದ್ದ ಸೋಲಾರ್ ಲಾಟೀನು ಮತ್ತು ಟಾರ್ಚ್‌ಗಳು ವಾರ ಪೂರ್ತಿ ಕವಿದಿದ್ದ ಮೋಡದಿಂದಾಗಿ ಚಾರ್ಜ್ ಆಗಿರಲಿಲ್ಲ.

ಆಗ ರಾತ್ರಿ ಒಂಬತ್ತು. ದೂರದ ಜೇನು ಕುರುಬರ ಹಾಡಿಯಿಂದ ತಮಟೆಯ ಸದ್ದು ಮೆಲ್ಲನೆ ತೇಲಿಬರುತ್ತಿತ್ತು. ಎಲೆಗಳ ಮೇಲೆ ಬಿದ್ದು ಜಾರುತ್ತಿದ್ದ ಮಳೆ ಹನಿಗಳೊಂದಿಗೆ, ಅದು ಯುಗಳ ಹಾಡಿತ್ತು. ನಾನು ಆಗಷ್ಟೆ ಮಲಗಿದ್ದೆ, ಸೋನೆಯ ಜೋಗುಳಕ್ಕೆ ಜೊಂಪು ಹತ್ತಿತ್ತು. ಒಮ್ಮೆಲೆ, ಹುಲಿ ಕೂಗಿದ ಸದ್ದು. ನಾನು ಹಾಸಿಗೆಯಲ್ಲೇ ಧಿಗ್ಗನೆ ಎದ್ದು ಕುಳಿತೆ.

ಹುಲಿ ತೀರ ಹತ್ತಿರದಲ್ಲಿರಲಿಲ್ಲ, ನಿಜ. ಆದರೂ, ಭೂಮಿ ಕಂಪಿಸುವ ಹುಲಿಯ ಗರ್ಜನೆಗೆ ಮಾಂತ್ರಿಕ ಶಕ್ತಿಯಿದೆ. ಅದರಲ್ಲೂ ಕಗ್ಗತ್ತಲ ರಾತ್ರಿಯಲ್ಲಿ ಒಬ್ಬಂಟಿಯಾಗಿದ್ದಾಗ ಅದೊಂದು ಅನಿರ್ವಚನೀಯ ಅನುಭವ. ಆದರೆ, ನಾಲ್ಕು ಗೋಡೆಗಳ ಒಳಗಿದ್ದಾಗ ಸದ್ದು ಬಂದ ದಿಕ್ಕನ್ನು ಖಚಿತವಾಗಿ ಊಹಿಸುವುದು ಕಷ್ಟ. ತೆರೆದ ಕಿಟಕಿ ಬಾಗಿಲುಗಳಿಂದ ಬರುವ ಶಬ್ದ ತರಂಗಗಳು ಪ್ರತಿಫಲಿಸಿ ದಿಕ್ಕು ತಪ್ಪಿಸುತ್ತವೆ. ಹಾಗಾಗಿ ಹುಲಿಯ ಕೂಗು ಬಂದ ದಿಕ್ಕನ್ನು ನಿಖರವಾಗಿ ಅಂದಾಜಿಸಲಾಗಿರಲಿಲ್ಲ.

ಜಿನುಗುತ್ತಿದ್ದ ಮಳೆಯ ಹನಿಗಳ ಸದ್ದಿನ ನಡುವೆ, ನಾನು ಹುಲಿಯ ಸುಳಿವಿಗಾಗಿ ಕಾತರಿಸುತ್ತಿದ್ದೆ. ಬಹಳ ಸಮಯವೇ ಕಳೆಯಿತು. ಹುಲಿ ಮತ್ತೆ ಗರ್ಜಿಸಬಹುದೆಂದು ಎದುರು ನೋಡುತ್ತಿದ್ದಾಗ, ಭೀಕರ ಆಸ್ಫೋಟದಂತಹ ಶಬ್ದವೊಂದು, ಇದ್ದಕ್ಕಿದ್ದಂತೆ ನನ್ನ ಹಿಂದಿನಿಂದ ತೂರಿಬಂದು ಕಿವಿಗಳಿಗೆ ಅಪ್ಪಳಿಸಿತು.

ಅದು ಬೆದರಿದ ಕಡವೆಯೊಂದರ ಎಚ್ಚರಿಕೆಯ ಕರೆ, ಅಷ್ಟೆ. ಆದರೂ ಆ ಕ್ಷಣ ರಕ್ತಸಂಚಾರವೇ ನಿಂತಂತಾಯಿತು. ಕಡವೆಯ ಆ ಧ್ವನಿಯಲ್ಲಿ ಆತಂಕವಿತ್ತು. ಬೇಟೆಗಾರನನ್ನು ಗಮನಿಸಿದ ಸೂಚನೆಯಿತ್ತು. ಆದರೆ, ಕತ್ತಲಲ್ಲಿ ಕಡವೆಗೆ ಬೇಟೆಗಾರ ಕಂಡಿರಬೇಕೆಂದೇನೂ ಇಲ್ಲ. ಕಾಡುಪ್ರಾಣಿಗಳ ಶಕ್ತಿ ಅಡಗಿರುವುದೇ ಅಲ್ಲಿ. ಅವುಗಳ ಕಿವಿ ಮೂಗುಗಳು ಗ್ರಹಿಸುವ ಸುದ್ದಿ ಎಂದಿಗೂ ವಿಶ್ವಾಸಾರ್ಹ.

ಕತ್ತಲಲ್ಲೂ ಸನ್ನಿವೇಶಗಳನ್ನು ಖಚಿತವಾಗಿ ಅರಿಯಬಲ್ಲವು. ಹಾಗಾಗಿ ನನಗೇನೂ ಕಾಣದಿದ್ದರು ನನಗೂ ಹುಲಿ ಕಂಡಂತೆಯೆ. ಕಡವೆ ಕೂಗಿದ ದಿಕ್ಕನ್ನು ಆಧರಿಸಿ ಲೆಕ್ಕಾಚಾರ ಮಾಡಿದರೆ, ಹುಲಿ ನನ್ನಿಂದ ಕೇವಲ 30 ಮೀಟರ್ ದೂರದಲ್ಲಿರಬಹುದು. ಹೀಗೆ ನನ್ನ ಆಲೋಚನೆಗಳು ಸಾಗಿದ್ದಾಗ, ನಾನು ನಿರೀಕ್ಷಿಸದೆ ಇದ್ದ ವಿಚಿತ್ರವಾದ ಶಬ್ದವೊಂದು ನನ್ನ ಮುಂದಿನಿಂದ ತೂರಿಬಂತು.

ಕರ್ಕಶವಾಗಿ ಕಿರುಚಿದಂತಿದ್ದ ಆ ಕೂಗು ಆನೆಯದಿರಬಹುದೆಂದು ಊಹಿಸುವಷ್ಟರಲ್ಲಿ ಅದರ ಬೆನ್ನಿಗೆ ಹುಲಿ ಅಸಹನೆಯಿಂದ ಗುರುಗುಟ್ಟಿದ ಸದ್ದು. ಹಲವು ಕ್ಷಣಗಳಲ್ಲಿ ಹತ್ತಾರು ಆನೆಗಳ ಚಿತ್ರ ವಿಚಿತ್ರ ಕರೆಗಳು ಎಲ್ಲ ದಿಕ್ಕಿನಿಂದ ಮಾರ್ದನಿಸತೊಡಗಿವು. ಗುಡುಗಿನಂತಹ ಕೆಳಸ್ಥರದ ಶಬ್ದಗಳಿಂದ, ಒಡೆದ ಓಲಗದ ಶಬ್ದಗಳವರೆಗೆ, ಒಂದು ಹಿಂದಿನಿಂದ ಕೇಳಿಬಂದರೆ ಇನ್ನೊಂದು ಪಕ್ಕದಿಂದ. ಅವು ಘೀಳಿಡುತ್ತಾ ಓಡಿಬಂದಾಗ ನನ್ನ ಒಂದು ಕಿವಿಯಿಂದ ಇನ್ನೊಂದು ಕಿವಿಗೆ ಸದ್ದು ಹರಿದಾಡುತ್ತಾ ಸರ್ರೌಂಡ್ ಪ್ಯಾನ್‌ನಂತೆ ಕೇಳುತ್ತಿತ್ತು. ಅಲ್ಲಿ ಶಬ್ದತರಂಗಗಳು ಒಂದು ರಂಗಮಂದಿರವನ್ನೇ ಸೃಷ್ಟಿಸಿದ್ದವು! ಆ ರಾತ್ರಿಯ ಸದ್ದುಗಳಿಗೆ ಹಲವಾರು ಆಯಾಮಗಳಿದ್ದವು, ಅದು ದೃಶ್ಯಗಳನ್ನು ನೋಡುವುದಕ್ಕಿಂತ ವಿಶೇಷವಾದ ಅನುಭವಾಗಿತ್ತು.

ಆದರೆ, ನಕ್ಷತ್ರದ ಬೆಳಕೂ ಇಲ್ಲದ ಆ ರಾತ್ರಿಯಲ್ಲಿ ನನಗೇನೂ ಕಾಣಿಸುತ್ತಿರಲಿಲ್ಲ. ಆಕಾಶದಲ್ಲಿ ಒಂದು ಮಿಂಚಾದರೂ ಹರಿದಿದ್ದರೆ ಏನಾದರೂ ಕಾಣಸಿಗುತ್ತಿತ್ತೇನೊ ಎಂದು ತಹತಹಿಸುತ್ತಿದ್ದೆ. ಹತ್ತಿರದಲ್ಲೇ ಜರುಗುತ್ತಿದ್ದ ಆ ಅದ್ಭುತ ನಾಟಕವನ್ನು ನೋಡಲಾಗದಿದ್ದಕ್ಕೆ ಸಂಕಟವಾಗುತ್ತಿತ್ತು. ಆದರೆ ಕುತೂಹಲಕ್ಕಾಗಿ ಹೊರಗೆ ಹೋಗಿ ಸಾಯುವುದಕ್ಕಿಂತ ಆ ರಾತ್ರಿಯಲ್ಲಿ ಕಂಡ ಕತೆಯನ್ನು ಹೇಳಲು ಬದುಕುಳಿಯುವುದು ಒಳಿತೆಂದು ನನ್ನ ಪ್ರಜ್ಞೆ ಎಚ್ಚರಿಸುತ್ತಿತ್ತು. ಕಾಡಿನ ನಮ್ಮ ಅನುಭವಗಳಿಂದಾಗಿ, ನಾನು ನನ್ನ ಭೀತಿಯನ್ನು ಗೌರವಿಸಲು ಬಹಳ ಹಿಂದೆಯೆ ಕಲಿತಿದ್ದೆ!

ನಾನು ನಿದ್ರೆಗೆ ಜಾರಿದಾಗಲೂ, ಎಲ್ಲೋ ಒಂದೊಂದು ಆನೆಗಳ ಕೂಗು ಕೇಳಿಬರುತ್ತಲೇ ಇತ್ತು. ಜಿಂಕೆಗಳ ಕರೆಗೆ ನಾನು ಎಚ್ಚರಗೊಂಡಾಗ ಬೆಳಗಾಗುತ್ತಿತ್ತು. ರಾತ್ರಿಯ ನಾಟಕದ ಸ್ಥಳಪರೀಕ್ಷೆ ನಡೆಸುವ ಕುತೂಹಲದಲ್ಲಿ ಹೊರನಡೆದೆ. ನಾನು ಮಲಗಿದ ನಂತರ ಹೆಚ್ಚು ಮಳೆ ಬಂದಿರಲಿಲ್ಲ. ಹಾಗಾಗಿ ಹಿಂದಿನ ರಾತ್ರಿ ನಡೆದ ಘಟನೆಯ ಎಲ್ಲಾ ಪುರಾವೆಗಳು ಸ್ಪಷ್ಟವಾಗಿದ್ದವು.

ಕಾಡಿನ ಅಂಚಿನಲ್ಲೇ ನಡೆದು ಬಂದ ಹುಲಿ, ಆಚೆಯ ಬದಿಯಲ್ಲಿದ್ದ ಕುರುಚಲು ಕಾಡಿಗೆ ಹೋಗುವ ಉದ್ದೇಶದಿಂದಲೋ ಏನೋ ನಮ್ಮ ಮನೆಯ ಹಾದಿ ಹಿಡಿದಿದೆ. ಮನೆಯಿಂದ ಕೇವಲ ಮೂವತ್ತು ಮೀಟರ್ ದೂರದಲ್ಲಿದ್ದ ಆ ಕಾಲುದಾರಿಯನ್ನು ಕಾಡುಪ್ರಾಣಿಗಳು ಬಳಸುತ್ತಿದ್ದವು. ಆ ದಾರಿಯಲ್ಲಿ ನಾವು ಎಲ್ಲಾ ಪ್ರಾಣಿಗಳ ಹೆಜ್ಜೆಗಳನ್ನೂ ನೋಡಿದ್ದೆವು, ಹುಲಿಯ ಹೆಜ್ಜೆಯೊಂದನ್ನು ಬಿಟ್ಟು. ಮನೆಗೆ ಬಹಳ ಹತ್ತಿರವಿರುವುದರಿಂದ ಹುಲಿ ಆ ದಾರಿಯನ್ನು ಉಪಯೋಗಿಸುತ್ತಿಲ್ಲ ಎಂದು ನಾವು ತಿಳಿದಿದ್ದೆವು. ಆದರೆ ಈ ಹುಲಿ ‘ಆ ಗೆರೆ’ಯನ್ನು ದಾಟಿತ್ತು.

ಹಾಗಾದರೆ ನಮ್ಮ ಮನೆ ಕೂಡ ಆ ಹುಲಿಯ ಸಾಮ್ರಾಜ್ಯದ ಒಂದು ಭಾಗವಾಗಿರುವುದರಲ್ಲಿ ಯಾವ ಸಂಶಯವೂ ಇರಲಿಲ್ಲ! ಆ ಕ್ಷಣದಲ್ಲೆ ಆ ಹುಲಿ ‘ನಮ್ಮ ಹುಲಿ’ಯಾಗಿತ್ತು, ಹಾಗೂ ಅದನ್ನು ಒಮ್ಮೆ ನೋಡಲೇಬೇಕೆಂಬ ತೀವ್ರ ತುಡಿತ ಹುಚ್ಚು ಸಾಹಸಕ್ಕೆ ಪ್ರೇರೇಪಿಸಿತ್ತು. ಆಗಿನ್ನೂ ನಾನು ಚಿಕ್ಕವನು...

ಜಿಂಕೆ, ಕಡವೆಗಳು ಮನೆಯ ಸುತ್ತಲಿನ ಜಾಗವನ್ನು ಸುರಕ್ಷಿತ ಪ್ರದೇಶವೆಂದು ತಿಳಿದಿದ್ದವು. ಅಥವಾ ನಾವು ಹಾಗೆಂದುಕೊಂಡಿದ್ದೆವು. ಅಪಾಯ ಎದುರಾದಾಗ ಮನೆಯ ಬಳಿ ನೆರೆಯುತ್ತಿದ್ದ ಜಿಂಕೆಗಳು ನಮಗೆ ಆ ಭಾವನೆಯನ್ನುಂಟು ಮಾಡಿದ್ದವು. ಸಂಜೆಯ ನಂತರ ಕಡವೆಗಳು ಮನೆಯ ಬಳಿ ಮೇಯಲು ಬರುತ್ತಿದ್ದುದು ಸಾಮಾನ್ಯವಾಗಿತ್ತು.

ಮನುಷ್ಯನ ವಾಸಸ್ಥಾನಕ್ಕೆ ತೀರ ಹತ್ತಿರವಿದ್ದ ಆ ದಾರಿಯನ್ನು ಹುಲಿ ಬಳಸುವುದಿಲ್ಲ ಎಂದು ಕಡವೆಗಳೂ ನಂಬಿದ್ದವೇನೋ, ಹಾಗಾಗಿ ಹುಲಿಯ ಅನಿರೀಕ್ಷಿತ ಆಗಮನದಿಂದ ದಿಗ್ಭ್ರಮೆಗೊಂಡ ಕಡವೆ ಅಷ್ಟು ಗಟ್ಟಿಯಾಗಿ ಅರಚಿದೆ. ಅದೇ ಸಮಯಕ್ಕೆ ಸರಿಯಾಗಿ, ಅಡ್ಡಾಡುತ್ತಾ ಗುಂಪಿನಿಂದ ದೂರ ಸರಿದಿದ್ದ, ಹದಿಹರೆಯದ ಆನೆಯೊಂದು ನಡೆದುಬಂದಿದೆ. ಪ್ರಾಯಶಃ ಆನೆಗೆ ಹುಲಿಯವಾಸನೆ ಸಿಕ್ಕಿಲ್ಲ.

ತೀರ ಸನಿಹದಲ್ಲಿ ಹುಲಿಯನ್ನು ಕಂಡ ಆನೆ ಭಯದಿಂದ ತತ್ತರಿಸಿ ತಾನು ಸತ್ತೇ ಹೋಗುತ್ತಿರುವೆನೆಂದು ಕೂಗಿದೆ. ಕುಟುಂಬದ ಸದಸ್ಯನೊಬ್ಬ ಆಪತ್ತಿನಲ್ಲಿ ಸಿಕ್ಕಿರುವ ಸುದ್ದಿಯನ್ನು ಅರಿತ ಗುಂಪು ಅದರ ರಕ್ಷಣೆಗಾಗಿ ಎಲ್ಲೆಡೆಯಿಂದ ಕಿರಿಚಾಡುತ್ತಾ ಓಡಿಬಂದಿದೆ. ನೆಲಕಚ್ಚಿದ್ದ ಗಿಡ, ಕೊಂಬೆಗಳು, ಆನೆಗಳ ಆವೇಶವನ್ನು ಸಾರಿ ಹೇಳುತ್ತಿದ್ದವು. ಆರ್ಭಟಿಸುತ್ತಾ ದಿಕ್ಕಾಪಾಲು ಓಡಾಡುತ್ತಿದ್ದ ಆನೆಗಳ ಗುಂಪಿನಿಂದ ದೂರ ಸರಿಯಲು ಹುಲಿ ಬೇರೆದಾರಿ ಹಿಡಿದು ಸಾಗಿತ್ತು.

ಬೆಳಿಗ್ಗೆ ನಾನೆದ್ದಾಗ ಕೇಳಿಬಂದ ಜಿಂಕೆಗಳ ಅಪಾಯದ ಕರೆಗಳು ಏಕಿರಬಹುದೆಂದು ಪರೀಕ್ಷಿಸಲು ನಾನು ಪಕ್ಕದ ಕಾಡಿನತ್ತ ನಡೆದೆ. ನನ್ನ ಕಾಡಿನ ದಿನಚರಿಯಲ್ಲಿ ಆ ದಿನ ಒಂದು ರೋಮಾಂಚನಕಾರಿ ನೆನಪಾಗಿ ಉಳಿಯಬಹುದೆಂದು ಆಗ ನಾನು ಊಹಿಸಿರಲಿಲ್ಲ.

ಕಾಡಿನ ಅಂಚಿನ ಹಾದಿಯಲ್ಲಿ ಕೇವಲ ಒಂದು ಫರ್ಲಾಂಗ್ ನಡೆದಿದ್ದೆ, ಹೊಸದಾಗಿ ಮೂಡಿದ್ದ ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದವು. ಬಹುಶಃ ಹುಲಿ ಅಲ್ಲಿಂದ ಹೋಗಿ ಅರ್ಧಗಂಟೆ ಕೂಡ ಆಗಿರಲಿಲ್ಲ. ನನ್ನ ವಿರುದ್ಧ ದಿಕ್ಕಿನಿಂದ ಬಂದಿದ್ದ ಹುಲಿ ಪೊದೆಯೊಂದರೊಳಗೆ ನುಸುಳಿ, ಕಾಡಿನೊಳಗೆ ಹೋಗಿತ್ತು. ಪ್ರಾಯಶಃ ನಾನು ಬೆಳಿಗ್ಗೆ ಮನೆಯ ಬಾಗಿಲು ತೆರೆದ ಸದ್ದಿಗೆ ಅದು ಅಡ್ಡದಾರಿ ಹಿಡಿದು ಕಾಡಿನ ಹಾದಿಯನ್ನು ಸೇರಿರಬಹುದು. ಹೆಜ್ಜೆಯ ಹಿಂದೆ ನಡೆದ ನಾನು ಸ್ವಲ್ಪದೂರದಲ್ಲೆ ಪ್ರಾಣಿಗಳ ಕಾಲುದಾರಿಯನ್ನು ಸೇರಿಕೊಂಡೆ. ತೇವವಿದ್ದ ಮಣ್ಣಿನಲ್ಲಿ ಹುಲಿಯ ಜಾಡು ಹಿಡಿಯುವುದು ಕಷ್ಟವಾಗಲಿಲ್ಲ.

ಸ್ವಲ್ಪದೂರ ಸಾಗಿದ್ದಾಗ ಅಂಗಾತ ಬಿದ್ದಿದ್ದ ದೊಡ್ಡ ಕಪ್ಪೆಯೊಂದು ಕಂಡಿತು. ಅದು ಸುಮೋ ಕುಸ್ತಿಪಟುವೊಬ್ಬ ಹೊಟ್ಟೆಮೇಲಾಗಿ ಮಲಗಿದಂತೆ ಕಾಣುತ್ತಿತ್ತು. ಆ ಕಪ್ಪೆ ಏಕೆ ಸತ್ತಿರಬಹುದೆಂದು ಪರೀಕ್ಷಿಸಲು ಕುಕ್ಕರಗಾಲಿನಲ್ಲಿ ಕುಳಿತು ಹತ್ತಿರದಿಂದ ನೋಡಿದೆ. ಅದರ ಬಿಳಿಯ ಹೊಟ್ಟೆಯ ಮೇಲೆ ಮರಳ ಕಣಗಳಿದ್ದವು. ಆಶ್ಚರ್ಯವಾಯಿತು. ಆಗ ಇದ್ದಕ್ಕಿದ್ದಂತೆ ಅದರ ಹೊಟ್ಟೆಯ ಮೇಲಿದ್ದ ಮರಳ ಕಣಗಳು ಅದುರಿದವು.

ನಂತರದ ಕೆಲವೇ ಸೆಕೆಂಡ್‌ಗಳಲ್ಲಿ ಆ ಕಪ್ಪೆ ಬದುಕಿರುವುದು ಖಚಿತವಾಯಿತು. ಆದರೆ ಇದೇಕೆ ಹೀಗೆ ಹೊಟ್ಟೆ ಮೇಲಾಗಿ ಅಲ್ಲಾಡದೆ ಮಲಗಿದೆ? ಈ ಸೋಜಿಗದ ದೊಡ್ಡ ಚಿತ್ರಣ ಸಿಗಬಹುದೆಂದು ಸ್ವಲ್ಪ ಹಿಂದೆ ಸರಿದು, ಮತ್ತೊಮ್ಮೆ ಹೆಜ್ಜೆಗಳನ್ನು ಗಮನಿಸಿದೆ. ಹುಲಿಯ ಒಂದು ಹೆಜ್ಜೆಯ ಗುರುತು ಮಾತ್ರ ಅದಿರಬೇಕಾದ ಸ್ಥಳದಿಂದ ಕಾಣೆಯಾಗಿತ್ತು. ಸರಿಯಾಗಿ ಅದೇ ಜಾಗದಲ್ಲಿ ಈ ಕಪ್ಪೆ ಹೊಟ್ಟೆ ಮೇಲಾಗಿ ಬಿದ್ದಿತ್ತು!

ತನ್ನ ದಾರಿಯಲ್ಲಿ ಬರುತ್ತಿದ್ದ ಕಪ್ಪೆಯನ್ನು ಹುಲಿ ಗಮನಿಸಿಲ್ಲ. ತನ್ನ ಎಡ ಮುಂಗಾಲಿಗೆ ತಗುಲಿ, ಪಲ್ಟಿಹೊಡೆದು ಬೀಳುತ್ತಿದ್ದ ಕಪ್ಪೆಯನ್ನು ಕಡೇ ಕ್ಷಣದಲ್ಲಿ ಕಂಡ ಹುಲಿ ಹೌಹಾರಿರಬಹುದು! ತನ್ನ ಕಾಲಡಿಗೆ ಸಿಕ್ಕು ಕಪ್ಪೆ ಸಾಯುವುದನ್ನು ತಪ್ಪಿಸಲು ಮುಂಗಾಲ ಮೇಲೆ ಭಾರ ಕೊಡದಂತೆ ಕಪ್ಪೆಯ ಮೇಲಿನಿಂದ ನೆಗೆದು ಹುಲಿ ಮುಂದೆ ಸಾಗಿತ್ತು.

ಕಪ್ಪೆ ಅನುಭವಿಸಿದ ಯಾತನೆ ಏನೇ ಇರಬಹುದು, ಈ ಘಟನೆಯನ್ನು ಒಡೆದು ಕಟ್ಟಿದ ಪ್ರಕ್ರಿಯೆ ನನಗಂತೂ ಬಹಳ ವಿನೋದಕರವಾಗಿತ್ತು. ಹೇಗೆ ಅದರ ಪ್ರಪಂಚ ಉಲ್ಟಾಪಲ್ಟಾ ಆಗಿರಬಹುದೆಂದು ಕಲ್ಪಿಸಿಕೊಳ್ಳುತ್ತಾ ಅದನ್ನು ಮತ್ತೆ ತಿರುಗಿಸಿ ಹೊಟ್ಟೆ, ಕಾಲುಗಳ ಮೇಲೆ ಕೂರಿಸಿ ನಾನು ಹುಲಿಯ ಜಾಡಿನಲ್ಲಿ ಮುಂದುವರೆದೆ. ಕೆಲವು ಹೆಜ್ಜೆಗಳ ನಂತರ ಹಿಂದಿರುಗಿ ನೋಡಿದೆ, ಕಪ್ಪೆ ದಿಙ್ಮೂಡನಾಗಿ ನಾನು ಕೂರಿಸಿದ ಹಾಗೆ ಕುಳಿತಿತ್ತು.

ಆ ಕಪ್ಪೆ ಅಕ್ಷರಶಃ ಹುಲಿಯ ಪಂಜದಡಿಗೆ ಸಿಲುಕಿ ಕತೆ ಹೇಳಲು ಇನ್ನೂ ಬದುಕುಳಿದಿತ್ತು. ಇದೊಂದು ಅಸಾಮಾನ್ಯ ಅನುಭವವೇ ಸರಿ. ಆ ಕಪ್ಪೆಗೇನಾದರೂ ಬರೆಯುವ ಅಭ್ಯಾಸವಿದ್ದಿದ್ದರೆ – ತಾನು ಎದುರಾದ ಹುಲಿಯ ವಿರುದ್ಧ ಸೆಣೆಸಿದ್ದು, ಸೋಲೊಪ್ಪಿದ ಹುಲಿ ಬಾಲ ಮುದುರಿಕೊಂಡು ಓಡಿಹೋಗಿದ್ದು, ದಾರಿಯಲ್ಲಿ ಬಂದ ಹುಲುಮಾನವನೊಬ್ಬ ತನ್ನ ಧೈರ್ಯವನ್ನು ಮೆಚ್ಚಿ ತಲೆಕೆಳಕಾಗಿದ್ದ ಭೂಮಿಯನ್ನು ಸರಿಪಡಿಸಿದ್ದನ್ನೆಲ್ಲ ಬರೆದು, ಟೈಗರ್ ಕಪ್ಪೆಯಾಗಿ ಅದೆಷ್ಟೋ ತಲೆಮಾರುಗಳಲ್ಲಿ ಅಜಾರಾಮರವಾಗಿ ಉಳಿಯುತ್ತಿತ್ತೇನೊ.

ಸುಮಾರು ನೂರುಮೀಟರ್ ಹೋಗುವಷ್ಟರಲ್ಲಿ ಆ ದಾರಿ ಮತ್ತೊಂದು ಕಾಲುದಾರಿಯನ್ನು ಸೇರಿಕೊಂಡಿತು. ಆ ದಾರಿಯಲ್ಲಿ ಮುಂದುವರೆದರೆ ಕಾಡಿನ ಕೆರೆಯೊಂದನ್ನು, ವಿರುದ್ಧ ದಿಕ್ಕಿನಲ್ಲಿ ಎರಡು ಕಿಲೋಮೀಟರ್ ಸಾಗಿದರೆ ಜೇನುಕುರುಬರ ಹಾಡಿಯನ್ನು ತಲುಪಬಹುದಿತ್ತು.

ಜೇನುಕುರುಬರು ಬಳಸುವ ದಾರಿಯಾದ್ದರಿಂದ ಅದು ಇಕ್ಕಟ್ಟಾಗಿರಲಿಲ್ಲ. ಆದರೆ ಆ ದಾರಿಯಲ್ಲಿ ಹುಲಿಯ ಹೆಜ್ಜೆಗಳು ಮಾಯವಾಗಿದ್ದವು. ಸ್ವಲ್ಪ ಹಿಂದೆ ಸರಿದು ಒಂದೊಂದೆ ಹೆಜ್ಜೆಗಳನ್ನು ಪರೀಕ್ಷಿಸುತ್ತಾ ಬಂದೆ. ಒಂದೆಡೆ ಹುಲಿ ಹಠಾತ್ ನಿಂತು, ಹಿಂದಿರುಗಿ, ಕಾಲುದಾರಿಯಿಂದ ಸರಿದು ಬಲಭಾಗದ ಪೊದೆಯೊಳಗಡೆ ನುಸುಳಿ ಸಾಗಿತ್ತು. ತೆವಳುತ್ತಾ ಅದರ ಹಿಂದೆ ಹೋಗಲು ಯತ್ನಿಸಿದೆ. ಆದರೆ, ಮುಳ್ಳುಪೊದೆಗಳು ದಟ್ಟವಾಗುತ್ತಾ ಸಾಗಿದ್ದರಿಂದ ಹಿಂದಿರುಗಿ ಕಾಲುದಾರಿಯನ್ನು ಸೇರಿಕೊಂಡೆ. ಸ್ವಲ್ಪದೂರ ಹೋಗುವಷ್ಟರಲ್ಲಿ ಮತ್ತೊಂದು ಕಾಲುದಾರಿ ನಾನು ಹೋಗುತ್ತಿದ್ದ ದಾರಿಗೆ ಸೇರಿತ್ತು. ಅಲ್ಲಿ, ಹೊಸದಾಗಿ ಮೂಡಿದ್ದ ಮನುಷ್ಯನ ಹೆಜ್ಜೆಗಳಿದ್ದವು.

ಅಲ್ಲಿಂದ ಸ್ವಲ್ಪ ಮುಂದೆ ನನ್ನ ಬಲಭಾಗಕ್ಕೆ ಪೊದೆ ದಟ್ಟವಾಗಿರಲಿಲ್ಲ. ತಪ್ಪಿಹೋಗಿದ್ದ ಹುಲಿಯ ಜಾಡನ್ನು ಮತ್ತೆ ಹಿಂಬಾಲಿಸುವ ಉದ್ದೇಶದಿಂದ ಬಲಕ್ಕೆ ತಿರುಗಿದೆ. ಸುಮಾರು ಮೂವತ್ತು ಮೀಟರ್ ಹೋಗುವಷ್ಟರಲ್ಲಿ ಹುಲಿಯ ಹೆಜ್ಜೆಗಳು ಕಂಡುಬಂದವು. ಕಾಲುದಾರಿಯನ್ನು ಬಿಟ್ಟು ಅದೇಕೆ ಪೊದೆಗೆ ನುಗ್ಗಿ ದಾರಿ ಬದಲಿಸಿರಬಹುದೆಂಬ ಕುತೂಹಲದಿಂದ ಆ ಹೆಜ್ಜೆಗಳು ಬಂದ ದಾರಿಯಲ್ಲಿ ನಡೆದೆ.

ಅಲ್ಲೊಂದು ಕಡೆ ಕಾಡು ತೆರವುಗೊಂಡು ಸ್ವಲ್ಪ ವಿರಳವಾಗಿತ್ತು. ಅಲ್ಲಿ ಹುಲಿ ಸ್ವಲ್ಪಕಾಲ ಕುಳಿತು ನಂತರ ಹೊರಟಂತಿತ್ತು. ಇಡೀ ಸನ್ನಿವೇಶವನ್ನು ಪುನರ್‌ಕಲ್ಪಿಸಿಕೊಳ್ಳುತ್ತಾ ಹುಲಿ ಕುಳಿತ ಭಂಗಿಯಲ್ಲೇ ಕುಳಿತು ತಲೆ ಎತ್ತಿ ನೋಡಿದೆ. ಅಲ್ಲಿಂದ ಜೇನುಕುರುಬರ ಹುಡುಗ ನಡೆದುಹೋದ ಹಾದಿ ಸ್ಪಷ್ಟವಾಗಿ ಕಾಣುತ್ತಿತ್ತು.

ಅಲ್ಲಿ ಏನು ನಡೆದಿರಬಹುದೆಂದು ಮರಳಿ ಕಟ್ಟಲು ಯತ್ನಿಸಿದೆ. ರೋಮಾಂಚನವಾಯಿತು... ಆತ ನಡೆದು ಬರುತ್ತಿದ್ದುದನ್ನು ಮೊದಲೇ ಗ್ರಹಿಸಿದ ಹುಲಿ, ಅನವಶ್ಯಕ ಸಂಪರ್ಕವನ್ನು ತಪ್ಪಿಸಲು ತನ್ನ ದಾರಿಯನ್ನು ಬಿಟ್ಟು ಪಕ್ಕಕ್ಕೆ ಸರಿದಿದೆ. ಜೇನುಕುರುಬರಿಗೆ ಮೈಯೆಲ್ಲಾ ಕಣ್ಣು, ಆದರೆ ಆತನಿಗೆ ಹುಲಿಯ ಸೂಚನೆಕೂಡ ಸಿಕ್ಕಿಲ್ಲ. ಪೊದೆಯೊಂದರ ಹಿಂದೆ ಕುಳಿತು ಆತ ಕಣ್ಮರೆಯಾಗುವವರೆಗೆ ಕಾದ ಹುಲಿ ಮುಂದುವರೆದು ಅದೇ ಕಾಲ್ದಾರಿಯನ್ನು ಸೇರಿಕೊಂಡಿತ್ತು.

ಅಲ್ಲಿಂದ ಮುಂದೆ ಹುಲಿಯ ಹೆಜ್ಜೆಯ ಗುರುತು ಕೆಲವೊಮ್ಮೆ ಮನುಷ್ಯನ ಹೆಜ್ಜೆಯ ಪಕ್ಕದಲ್ಲೂ, ಕೆಲವೊಮ್ಮೆ ಆ ಹೆಜ್ಜೆಗಳ ಮೇಲೂ ಮೂಡಿದ್ದವು. ನಂತರ ಕಾಡು ಹೆಚ್ಚು ದಟ್ಟವಾಗುತ್ತಾ ಕಾಲುದಾರಿ ಕಿರಿದಾಗುತ್ತಾ ಸಾಗಿತ್ತು.

ಹುಲಿ ಅಲ್ಲಲ್ಲಿ ತನ್ನ ಗಡಿಯನ್ನು ಗುರುತುಮಾಡಿತ್ತು. ಹಾಗಾಗಿ ಅದರ ‘ಸೆಂಟ್’ ವಾಸನೆ ಗಾಢವಾಗುತ್ತಾ ಸಾಗಿತ್ತು. ಕಿರಿದಾಗಿದ್ದ ದಾರಿ ಮತ್ತು ‘ಫೆರಮೋನ್ನ’ ವಾಸನೆ ಎರಡೂ ಕೂಡಿ ಕೆಲವೆಡೆ ನನ್ನನ್ನು ದೈಹಿಕವಾಗಿ ಹಿಡಿದುನಿಲ್ಲಿಸುತ್ತಿದ್ದವು. ನನ್ನ ಅರಿವಿಗೆ ಬಾರದೆ ಹುಲಿ ನನ್ನ ಮನಸ್ಸನ್ನಾವರಿಸಿತ್ತು. ಎಳೆ ಬಿಸಿಲು ಮೂಡಿಸುತ್ತಿದ್ದ ನೆಳಲು ಬೆಳಕಿನಾಟಗಳೆಲ್ಲ ಹುಲಿಯ ಪಟ್ಟೆಗಳಂತೆ ಕಂಡು, ಹುಲಿ ನನ್ನನ್ನು ಗಮನಿಸುತ್ತಿರುವ ಅನುಭವವಾಗತೊಡಗಿತು.

ಬೆಚ್ಚಿದ್ದ ನನ್ನ ಸುಪ್ತಪ್ರಜ್ಞೆಗೆ ಎಲ್ಲೆಂದರಲ್ಲಿ ಹುಲಿ ಕಾಣತೊಡಗಿತು. ಆದರೆ ನನ್ನ ಕುತೂಹಲ ಮತ್ತು ವಯಸ್ಸು ಒಳಸಂಚು ಹೂಡಿ ನನ್ನ ಭೀತಿಯ ಮೇಲೆ ಸವಾರಿ ಮಾಡಲು ಪ್ರೇರೇಪಿಸುತಿದ್ದವು. ಹಾಗಾಗಿ ನನ್ನ ಒಳದನಿಯನ್ನು ತಿರಸ್ಕರಿಸಿ ಮುಂದಿನ ಹೆಜ್ಜೆ ಇಟ್ಟೆ... ಆಗ, ನನ್ನ ಸನಿಹದಲ್ಲೆ ದೊಡ್ಡ ಕೊಂಬೆಯೊಂದು ಮುರಿದು ಬಿದ್ದ ಸದ್ದಾಯಿತು...

ಸೌದೆಗೆ ಬಂದ ಜೇನು ಕುರುಬರಿರಬಹುದು. ಖಚಿತಪಡಿಸಿಕೊಳ್ಳಲು ಕದಲದೆ ಎರಡು ನಿಮಿಷ ನಿಂತೆ. ಇನ್ನೇನು ಮುಂದೆ ಹೊರಡಬೇಕು ಎನ್ನುವಾಗ ‘ಪುಸ್ಸ್...’ ಎಂದು, ದೊಡ್ಡ ಬಳಕುವ ಪೈಪ್‌ನಿಂದ ಜೋರಾಗಿ ಗಾಳಿ ಹೊರಬಂದಂತಹ, ಶಬ್ದ. ಅದು ಆನೆಯೊಂದರ ಸೊಂಡಲಿನಿಂದ ಬಂದ ಶಬ್ದ, ಸಂಶಯವೇ ಇರಲಿಲ್ಲ.

ನಾವು ಕಾಡುಕುರುಬರೊಂದಿಗೆ ಕಾಡುಮೇಡು ಅಲೆದುಕೊಂಡು ಆಗಲೇ ಆರೇಳು ವರ್ಷ ಕಳೆದಿದ್ದೆವು. ಹಾಗಾಗಿ ಕಾಲ್ನಡಿಗೆಯಲ್ಲಿರುವಾಗ, ಮನಸ್ಸಿನ ಸ್ಥಿಮಿತ ಕಾಯ್ದುಕೊಂಡು, ಕಾಡಾನೆಗಳನ್ನು ಕೆರಳಿಸದಂತೆ ದಾಟಿಕೊಳ್ಳುವ ಕಲೆ ಕರಗತವಾಗಿತ್ತು.

ಆನೆಗಳು ಚದುರಿದಂತೆ ಮೇಯುತ್ತಿದ್ದರೆ ಅವುಗಳ ಮಧ್ಯದಿಂದ ದಾಟಬೇಕಾಗುತ್ತದೆ. ಅದು ಅಪಾಯಕಾರಿ ಸಹ. ಆದರೆ ನನಗೆ ಅನ್ಯಮಾರ್ಗವಿರಲಿಲ್ಲ. ಮೊದಲಿಗೆ ಆನೆಗಳು ಎಲ್ಲೆಲ್ಲಿರಬಹುದೆಂದು ತಿಳಿಯಲು ಸ್ವಲ್ಪ ಮುಂದಡಿ ಇಟ್ಟೆ. ಅಲ್ಲಿ ಇನ್ನೊಂದು ಕಾಲುದಾರಿ ಬಲಭಾಗದಿಂದ ಬಂದು ಸೇರಿತ್ತು. ಹುಲಿ ಕೂಡ ಅದೇ ದಾರಿಯಲ್ಲಿ ಸಾಗಿತ್ತು. ಬಹುಶಃ ಆನೆಗಳನ್ನು ಅನವಶ್ಯಕವಾಗಿ ಗಾಬರಿಗೊಳಿಸುವುದನ್ನು ತಪ್ಪಿಸಲು, ತನ್ನ ವಾಸನೆ ಸಿಗದಂತೆ ಸಾಗಿರಬಹುದು. ನನಗಿದು ಒಳ್ಳೆಯದೇ ಆಯಿತು.

ಈ ಕಾಲುದಾರಿ ಹೆಚ್ಚು ಸವೆದಿರಲಿಲ್ಲ ಹಾಗೂ ಬಹಳ ಕಿರಿದಾಗಿತ್ತು. ಸಮಾಧಾನಕರ ಸಂಗತಿ ಎಂದರೆ ನಾನು ಆನೆ ಗುಂಪಿಗೆ ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿದ್ದೆ. ಗಾಳಿ ಕೂಡ ನನಗೆ ಅನುಕೂಲಕರವಾಗಿತ್ತು. ನನ್ನ ವಾಸನೆ ಅವುಗಳಿಗೆ ಸಿಗುತ್ತಿರಲಿಲ್ಲ.

ಸುತ್ತಲೂ ಕಣ್ಣಾಡಿಸುತ್ತಾ ಪ್ರತಿ ಹೆಜ್ಜೆಯನ್ನು ಅಳೆದು, ತೂಕಮಾಡಿ, ಯೋಚಿಸಿ, ಎಚ್ಚರಿಕೆಯಿಂದ ಇಡಲಾರಂಭಿಸಿದೆ. ನೆಲದಲ್ಲಿ ಬಿದ್ದಿದ್ದ ಒಣ ಕಡ್ಡಿಗಳನ್ನು ಅಪ್ಪಿತಪ್ಪಿಯೂ ತುಳಿಯುವಂತಿರಲಿಲ್ಲ. ಆನೆಗಳು ಏನಾದರೂ ಸದ್ದು ಮಾಡಿದಾಗ ಆ ಸದ್ದಿನೊಂದಿಗೆ ಮೂರ್ನಾಲ್ಕು ಹೆಜ್ಜೆಗಳನ್ನಿರಿಸಿ ಮುಂದೆ ಸಾಗಿದೆ. ಕಾಲುದಾರಿಗೆ ಅಡ್ಡವಿದ್ದ ಮುಳ್ಳುಬಳ್ಳಿಗಳಿಂದ ತಪ್ಪಿಸಿಕೊಳ್ಳಲು ನೆಲಕ್ಕೆ ಕೈಯೂರಿ, ಕೆಲವೊಮ್ಮೆ ಮಂಡಿಯೂರಿ ಸಾಗುತ್ತಾ ಮುಂದಿನ ನೂರು ಮೀಟರ್ ಕ್ರಮಿಸಲು ಹದಿನೈದು ನಿಮಿಷಗಳೇ ಬೇಕಾಯಿತು. ಆಗ ಸಮಯ ವಿಪರೀತವಾಗಿ ಹಿಗ್ಗಿ, ಯುಗಗಳೇ ಕಳೆದಂತಹ ಅನುಭವವಾಯಿತು.

ನಿಧಾನವಾಗಿ ಆನೆಗಳ ಗುಂಪಿನಿಂದ ದೂರ ಸರಿದಂತೆ ಮತ್ತೆ ಹುಲಿಯ ಹೆಜ್ಜೆಗಳ ಮೇಲೆ ನನ್ನ ಗಮನ ಕೇಂದ್ರೀಕರಿಸಿದೆ. ಈಗ ದಾರಿ ಸ್ವಲ್ಪ ಅಗಲವಾಗಿ ಒಂದು ದೊಡ್ಡ ಹುಣಸೆಮರವನ್ನು ಬಳಸಿ ಸಾಗಿತ್ತು. ನಮ್ಮ ಕಾಡುಗಳಲ್ಲಿ ನೈಸರ್ಗಿಕವಾಗಿ ಹುಣಸೆಮರಗಳು ಬೆಳೆಯುವುದಿಲ್ಲ, ಯಾವುದೋ ಕಾಲದಲ್ಲಿ ಇಲ್ಲೊಂದು ಹಳ್ಳಿ ಇದ್ದಿರಬಹುದು.

ಎಲ್ಲೆಡೆ ಹುಲಿಗಳನ್ನು ಒಕ್ಕಲೆಬ್ಬಿಸಿ ಮನುಷ್ಯ ತನ್ನ ನಿಯಂತ್ರಣ ಸಾಧಿಸುತ್ತಿರುವಾಗ ಇಲ್ಲಿ ಮನುಷ್ಯನನ್ನು ಓಡಿಸಿ ಹುಲಿ ತನ್ನ ಸಾಮ್ರಾಜ್ಯವನ್ನು ಮರುಸ್ಥಾಪಿಸಿರಬಹುದೆಂಬ ಆಲೋಚನೆ ನನಗೆ ಕೆಟ್ಟ ಖುಷಿ ಕೊಟ್ಟಿತ್ತು.

ಇಲ್ಲಿ ಹುಲಿಯ ಕಡುವಾಸನೆ ದಟ್ಟವಾಗಿತ್ತು, ಮಳೆಯಲ್ಲಿ ತೊಯ್ದು ಬಂದ ಬೀದಿನಾಯಿಯ ವಾಸನೆಯಂತೆ. ನನ್ನ ಕಾಲುಗಳು ಏಕೋ ಮುಂದಿನ ಹೆಜ್ಜೆ ಇಡಲು ನಿರಾಕರಿಸಿದವು.

ಹಾಗೆ ನಿಂತಲ್ಲಿಂದಲೇ ದೃಷ್ಟಿ ಹಾಯಿಸಿದೆ. ಹುಲಿಯ ಹೆಜ್ಜೆಗಳು ಕಾಲುದಾರಿಯಿಂದ ಒಮ್ಮೆಲೆ ಕಾಣೆಯಾಗಿದ್ದವು! ಮೆಲ್ಲನೆ ಕತ್ತು ತಿರುಗಿಸಿ, ಹುಣಸೆ ಮರದ ಸುತ್ತಲ ಹುಲ್ಲಿನತ್ತ ದೃಷ್ಟಿಸಿದೆ. ಹುಲಿ ಹುಲ್ಲಿನ ಮೇಲೆ ನಡೆದು ಹೋಗಿರಬಹುದು. ಬಹುಶಃ ಆ ಹುಲ್ಲುಗಳು ಏನಾದರೂ ಗುಟ್ಟು ಬಿಟ್ಟು ಕೊಡಬಹುದೇನೋ ಎಂದು ದಿಟ್ಟಿಸುತ್ತಾ ನಿಂತೆ.

ಎಷ್ಟೋ ಸಮಯ ಕಳೆಯಿತು... ಅಂದರೆ ಐದಾರು ಸೆಕೆಂಡ್‌ಗಳಾಗಿರಬಹುದು... ಒಂದು ಹುಲ್ಲಿನ ಗರಿ ಮೆಲ್ಲನೆ ಎದ್ದು ನಿಂತಿತು. ನನ್ನ ಕೂದಲುಗಳೂ ಎದ್ದು ನಿಂತವು. ಆಗ ಅಲ್ಲಿ ಗಾಳಿ ಬೀಸುತ್ತಿರಲಿಲ್ಲ. ಆದರೆ, ನೋಡುತ್ತಿರುವುದನ್ನು ಅರ್ಥಮಾಡಿಕೊಳ್ಳಲು ನನಗೆ ಬಹಳ ಸಮಯ ಹಿಡಿಯಿತು.

ತುಳಿತಕ್ಕೆ ಸಿಕ್ಕು ಮುದುಡಿದ್ದ ಆ ಹುಲ್ಲಿನ ಎಸಳುಗಳು ಎದ್ದು ನಿಲ್ಲಲು ಹರಸಾಹಸ ಪಡುತ್ತಿದ್ದವು. ಆ ಋತುವಿನಲ್ಲಿ, ಆ ಜಾಗದಲ್ಲಿ ತುಳಿತಕ್ಕೆ ಸಿಕ್ಕ ಆ ಜಾತಿಯ ಹುಲ್ಲು ಮತ್ತೆ ನಿಲ್ಲಲು ಎಷ್ಟು ಸಮಯ ಬೇಕು ಎಂದು ನನಗಂತೂ ಅರಿವಿರಲಿಲ್ಲ. ಆದರೆ ಕೆಲವೇ ನಿಮಿಷಗಳ ಹಿಂದೆ ಹುಲಿ ಅಲ್ಲಿಂದ ನಿರ್ಗಮಿಸಿರುವುದರಲ್ಲಿ ಯಾವ ಸಂದೇಹವೂ ಇರಲಿಲ್ಲ.

ಬಗ್ಗಿ, ಹತ್ತಿರದಿಂದ ಆ ಜಾಗವನ್ನು ನೋಡಿದೆ. ಅಲ್ಲೊಂದು ಇಲ್ಲೊಂದು ಹುಲಿಯ ಕೂದಲುಗಳು ಹುಲ್ಲಿಗೆ ಅಂಟಿದ್ದು ಕಾಣಿಸಿತು. ಸ್ವಲ್ಪ ಸ್ವಲ್ಪವಾಗಿ ಅಲ್ಲಿನ ಚಿತ್ರಣ ನನ್ನ ಕಣ್ಣಮುಂದೆ ಮೂಡತೊಡಗಿತು.

ಹುಲಿ ಹುಲ್ಲಿನ ಮೇಲೆ ಹಲವಾರುಬಾರಿ ಉರುಳಾಡಿದೆ. ನಂತರ ಬಾಲವನ್ನು ಹಲವು ಬಾರಿ ಆಡಿಸಿ ಒಮ್ಮೆ ಜೋರಾಗಿ ನೆಲಕ್ಕೆ ಬಡಿದಿದೆ. ಮುದುಡಿದ್ದ ಒದ್ದೆ ಹುಲ್ಲಿನಲ್ಲಿ ಬೀಸಿದ ಬಾಲದ ಗುರುತು ಸ್ಪಷ್ಟವಾಗಿ ದಾಖಲಾಗಿತ್ತು. ಆ ಹುಲಿ ಪ್ರಾಯಶಃ ಯಾರ ಮೇಲೋ ತನ್ನ ಅಸಹನೆ, ಸಿಟ್ಟು ವ್ಯಕ್ತಪಡಿಸಿದಂತೆ ಕಂಡಿತು. ಆದರೆ, ಆಗ ಅಲ್ಲಿ ಬೇರೆ ಯಾರೂ ಬಂದಿರಲು ಸಾಧ್ಯವಿರಲಿಲ್ಲ, ನನ್ನ ಹೊರತಾಗಿ!

ಹಾಗೇ ನೋಡುತ್ತಿದ್ದಾಗ ಹುಲ್ಲಿನ ಎಸಳೊಂದು ನನ್ನ ಗಮನ ಸೆಳೆಯಿತು. ಒಂದು ಕೆಂಪನೆಯ ಕಲೆ ಅದರ ಮೇಲೆ ಮೂಡಿತ್ತು. ಮುಟ್ಟಿ ನೋಡಿದೆ. ರಕ್ತ... ಇನ್ನು ಹಸಿಯಾಗಿದ್ದ ರಕ್ತ... ನನ್ನ ಹೃದಯ ಬಡಿತ ಸ್ಥಿಮಿತಕ್ಕೆ ಬಂದು ಮುಂದಿನ ಚಿತ್ರಣ ಸ್ಪಷ್ಟಗೊಳ್ಳುವ ವೇಳೆಗೆ ಎಷ್ಟೋ ನಿಮಿಷಗಳು ಕಳೆದಿದ್ದವು.

ಹಲವೆಡೆ ಹುಲಿ ತನ್ನ ಮೂತಿಯನ್ನು ಉಜ್ಜಿದೆ. ಬಹುಶಃ ಅದರ ಬಾಯಲ್ಲಿದ್ದ ರಕ್ತದ ಕಣಗಳು ಹುಲ್ಲಿಗೆ ಅಂಟಿಕೊಂಡಿವೆ. ಅದು, ಹುಲಿ ಆ ರಾತ್ರಿ ಬೇಟೆಯಾಡಿದ್ದ ಪ್ರಾಣಿಯ ರಕ್ತವಿರಬಹುದು. ಅಂದರೆ ಅದು ಚೆನ್ನಾಗಿ ತಿಂದು ಬಂದಿದೆ, ನನ್ನ ಲೆಕ್ಕಾಚಾರವೆಲ್ಲ ಸರಿಯಾಗಿದ್ದರೆ ಅದು ನೇರವಾಗಿ ಕೆರೆಯ ನೀರಿಗೆ ಹೋಗಿರುವ ಸಾಧ್ಯತೆಗಳು ಹೆಚ್ಚು.

ಇಷ್ಟೆಲ್ಲಾ ಆಗುವ ಹೊತ್ತಿಗೆ ನನ್ನ ಆರಂಭದ ಸಂಭ್ರಮ, ಉತ್ಸಾಹಗಳೆಲ್ಲಾ ಉಡುಗಿಹೋಗಿದ್ದವು. ನನ್ನ ಮನಸ್ಸು ದೇಹಗಳೆರಡೂ ಹಿಂದಿರುಗಲು ಕಾರಣ ಹುಡುಕುತ್ತಿದ್ದವು.ನಾನಿದ್ದಲ್ಲಿಂದ ಕೆರೆ ಅರ್ಧ ಕಿಲೋಮೀಟರ್ ಕೂಡ ಇರಲಿಲ್ಲ. ಅಲ್ಲಿ ಸ್ವಲ್ಪ ಬಯಲಿದೆ. ಬಹುಶಃ ಕೆರೆಯ ನೀರಿನಲ್ಲೋ ಆಥವಾ ಅದರ ಪಕ್ಕದಲ್ಲಿರುವ ಬಸರಿಗಿಡದ ಬುಡದಲ್ಲೋ ಹುಲಿ ಮಲಗಿರುತ್ತದೆ.

ಈಗ ನಾನು ಹಿಂದೆ ಸರಿದರೆ ಜೀವಮಾನವಿಡೀ ಪಶ್ಚಾತ್ತಾಪ ಪಡುವುದಂತೂ ಗ್ಯಾರೆಂಟಿ. ಈ ಹುಲಿ ಮುಂದಿನ ಹಲವಾರು ವರ್ಷಗಳು ಇಲ್ಲಿ ಅಧಿಪತ್ಯ ನಡೆಸಬಹುದು; ನಮ್ಮ ಮನೆ ಸಹ ಅದರ ರಾಜ್ಯಕ್ಕೆ ಸೇರುತ್ತದೆ. ನಮ್ಮನ್ನು ಆಳುವ ಹುಲಿಯನ್ನೇ ನೋಡಿಲ್ಲವೆಂದರೆ ಎಂತಹ ಅವಮಾನ... ಇಷ್ಟು ಒಳ್ಳೆಯ ಅವಕಾಶ ಮತ್ತೆ ಸಿಗುವುದೋ ಇಲವೋ ಎಂದು ಯೋಚಿಸಿದೆ.

ಮತ್ತೆ ಗೊಂದಲ ಮೂಡಿತು. ಮನಸ್ಸು ಒಡೆದು ಎರಡಾಯಿತು. ವಾದ ಮರುವಾದಗಳು ನಡೆದು ಅಂತಿಮವಾಗಿ ಹುಲಿಯ ಜಾಡಿನಲ್ಲಿ ಮುಂದುವರಿಯಲು ನಿರ್ಣಯಿಸಿದೆ.
ಕೆರೆ ತಲುಪಲು ಕೇವಲ ನೂರು ಮೀಟರ್‌ಗಳಿದ್ದಾಗ ಜಾಡಿನ ಎರಡು ಬದಿಯಲ್ಲಿ ಪೊದೆಗಳು ದಟ್ಟವಾಗಿ ಬೆಳೆದು ಸುರಂಗ ಮಾರ್ಗದಂತಾಗಿತ್ತು. ಹುಲಿಯ ಇರುವಿಕೆಯನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಈ ಹಾದಿಯನ್ನು ದಾಟುವಾಗ ಮೈಯೆಲ್ಲಾ ಕಿವಿಯಾಗಿಸಿಕೊಂಡು ಎಚ್ಚರಿಕೆಯಿಂದ ನಡೆಯಬೇಕಿತ್ತು.

ಆ ದಾರಿಯಲ್ಲಿ ಎಲೆಗಳು ಬಿದ್ದು ಕೊಳೆತಿದ್ದರಿಂದ ಹೆಜ್ಜೆಗುರುತುಗಳು ಸ್ಪಷ್ಟವಾಗಿರಲಿಲ್ಲ. ಹಿಂದಿನ ಹೆಜ್ಜೆಯ ಆಧಾರದ ಮೇಲೆ ಮುಂದಿನ ಹೆಜ್ಜೆಯ ಗುರುತನ್ನು ಊಹಿಸಿ ಹಿಂಬಾಲಿಸಬೇಕಿತ್ತು. ಒಂದು ಹೆಜ್ಜೆಯನ್ನು ತಪ್ಪಾಗಿ ಅರ್ಥೈಸಿದರೆ ಲೆಕ್ಕಾಚಾರಗಳೆಲ್ಲ ತಪ್ಪಾಗುವ ಸಾಧ್ಯತೆಗಳಿತ್ತು. ನೆಲದಲ್ಲಿ ಬಿದ್ದಿದ್ದ ಎಲೆಗಳ ಮೇಲೆ ಹುಲಿಯ ಪಾದದಿಂದ ಜಾರಿದ್ದ ಮಣ್ಣಿನ ಕಣಗಳಿದ್ದವು. ಗಾಳಿಯಲ್ಲಿ ಹುಲಿಯ ವಾಸನೆ ಇನ್ನೂ ಸುಳಿದಾಡುತ್ತಿತ್ತು. ಹುಲಿ ನನಗಿಂತ ಮುಂದೆ ಸಾಗಿರುವ ಸುಳಿವನ್ನು ಅದು ನೀಡುತ್ತಿತ್ತು. ಆದರೂ ಪ್ರತಿ ಹೆಜ್ಜೆಯ ಗುರುತುಗಳನ್ನು ಮತ್ತೆ ಮತ್ತೆ ಖಚಿತ ಪಡಿಸಿಕೊಳ್ಳುತ್ತ ನಾನು ಮುನ್ನಡೆದೆ. ಏಕೆಂದರೆ, ಹುಲಿ ನನ್ನನ್ನು ಮುಂದೆ ಬಿಟ್ಟು ಹಿಂದಿನಿಂದ ಬರುತ್ತಿದೆ ಎಂದು ನನ್ನ ಸುಪ್ತಪ್ರಜ್ಞೆ ಖಚಿತವಾಗಿ ನಂಬಿತ್ತು.

ನಾನು ಬಹಳ ನಿಧಾನವಾಗಿ ಮುಂದುವರೆದೆ. ದಾರಿಯ ಬದಿಯ ತಡಸಲು ಮರಕ್ಕೆ ಹುಲಿ ತನ್ನ ‘ಸೆಂಟ್’ ಸಿಂಪಡಿಸಿಹೋಗಿತ್ತು. ಅದು ಬಿರ್ಯಾನಿಗೆ ಬಳಸುವ ಅಕ್ಕಿಯ ವಾಸನೆಯಂತಿತ್ತು. ಅದೆಷ್ಟು ತೀವ್ರವಾಗಿತ್ತೆಂದರೆ ನನ್ನೆಲ್ಲಾ ಇಂದ್ರಿಯಗಳು ಹುಲಿಯ ಇರುವಿಕೆಯನ್ನು ಸಾರಿ ಸಾರಿ ಹೇಳಿ ಮುಂದಡಿಯಿಡದಂತೆ ತಡೆಯುತ್ತಿದ್ದವು. ಆ ವಾಸನೆಯ ಗೋಡೆ ಮತ್ತೆ ನನ್ನನ್ನು ತಡೆದು ನಿಲ್ಲಿಸಲು ಯಶಸ್ವಿಯಾಗಿತ್ತು.

ಹೆಚ್ಚೂಕಡಿಮೆ ಒಂದು ನಿಮಿಷದಲ್ಲಿ ನನ್ನ ಹೃದಯ, ಆಲೋಚನೆಗಳು ತಹಬದಿಗೆ ಬಂದವು. ಬಹುಶಃ ನಾನು ಒಂದು ಹೆಜ್ಜೆ ಮುಂದಿಟ್ಟಿರಬಹುದು, ನನ್ನ ಹಿಂದೆ ಕಡ್ಡಿಯೊಂದು ಮುರಿದ ಸದ್ದಾಯಿತು. ಇದ್ದ ಭಂಗಿಯಲ್ಲೇ ಮರಗಟ್ಟಿ ಹೋದೆ.

ಯಾವುದೋ ಭಾರೀ ಪ್ರಾಣಿ ಒಣಗಿದ ಕಡ್ಡಿಯ ಮೇಲೆ ಕಾಲಿಟ್ಟಿರಬಹುದು. ಅದು ನನ್ನಿಂದ ಹಿಂದೆ ಸುಮಾರು ಐವತ್ತು ಮೀಟರ್ ದೂರದಲ್ಲಿದ್ದಿರಬಹುದು. ಕಾಡಿನ ಆ ಕಾಲುದಾರಿಯಲ್ಲಿ ನನ್ನ ಹಿಂದೆ ಆನೆ, ಮುಂದೆ ಹುಲಿ. ನಾನು ಶೀಘ್ರದಲ್ಲಿ, ಹೊಟ್ಟೆ ಮೇಲಾಗಿ ಬಿದ್ದಿದ್ದ ಆ ಕಪ್ಪೆಯ ಸ್ಥಿತಿ ತಲುಪುವ ಎಲ್ಲಾ ಸಾಧ್ಯತೆಗಳಿದ್ದವು.

ಆನೆ ಹಿಂದಿನಿಂದ ಬಂದರೆ ಏನು ಮಾಡುವುದು? ಪಕ್ಕದ ಪೊದರುಗಳಲ್ಲಿ ಓಡುವುದಿರಲಿ, ನನಗೆ ನುಸುಳಲೂ ಸಾಧ್ಯವಿರಲಿಲ್ಲ. ಹುಲಿಯ ಕಡೆಗೆ ಓಡುವುದೊಂದೇ ಉಳಿದ ದಾರಿ. ಆದರೂ ಯಾವುದಾದರೂ ಸದ್ದು, ಏನಾದರೂ ಸುಳಿವು ನೀಡಬಹುದೆಂದು ಸ್ವಲ್ಪ ಕಾಲ ಕಾಯ್ದೆ. ಸ್ಕಿಮಿಟರ್ ಬಾಬ್ಲರ್ ಹಕ್ಕಿಯ ಹಾಡು ಕೆರೆಯ ದಿಕ್ಕಿನಿಂದ ಕೇಳಿಬರುತ್ತಿತ್ತು. ಅದನ್ನು ಬಿಟ್ಟು ಬೇರೇನೂ ಕೇಳಲಿಲ್ಲ. ಅಸಹನೀಯವಾದ ನಿಶ್ಯಬ್ದ. ನನ್ನ ಉಸಿರಾಟದ ಸದ್ದೇ ನನ್ನ ಕಿವಿಗಳಿಗೆ ಅಡಚಣೆ ಉಂಟು ಮಾಡುತ್ತಿದೆ ಎಂಬ ಭಾವನೆ... ಯಾವುದೋ ಕ್ಷಣದಲ್ಲಿ ನನ್ನ ಮನಸ್ಸು ಮತ್ತೆ ಸ್ಥಿಮಿತಕ್ಕೆ ಬಂದು ಸ್ಪಷ್ಟವಾಗಿ ಯೋಚಿಸಲಾರಂಭಿಸಿತ್ತು.

ಹುಲಿಯ ಘಾಟು ತೀವ್ರವಾಗಿದೆ, ಹಾಗಾಗಿ ನನ್ನ ಮುಂದಿನಿಂದ ಯಾವುದೇ ಪ್ರಾಣಿ ಬರುವ ಸಂಭವವಿಲ್ಲ. ಹುಲಿಯಂತೂ ಚೆನ್ನಾಗಿ ತಿಂದಿದೆ ಹಾಗಾಗಿ ಅದೂ ಕೂಡ ಇನ್ನೊಂದು ಊಟದ ಬಗೆಗೆ ತಲೆ ಕೆಡಿಸಿಕೊಳ್ಳುವುದಿಲ್ಲ... ಹಿಂದಿನಿಂದ ಆನೆಯೇ ಬರುತ್ತಿದ್ದರೆ ಶೀಘ್ರವಾಗಿ ಮುಂದೆ ಹೋಗುವುದೇ ಕ್ಷೇಮ ಎಂಬ ತೀರ್ಮಾನಕ್ಕೆ ಬಂದೆ. ಆಗಾಗ್ಗೆ ಹಿಂದೆ ತಿರುಗಿ ನೋಡುತ್ತಾ ಹೆಜ್ಜೆ ಇಟ್ಟೆ. ಸದ್ದಿಲ್ಲದೆ, ನಿಧಾನವಾಗಿ ಆದರೆ ಚುರುಕಾಗಿ ನಡೆದು, ಕೆರೆಯ ಬಳಿ ಕಾಡು ತೆರೆದುಕೊಳ್ಳುವ ಮುನ್ನ ಸ್ವಲ್ಪ ನಿಂತು, ಗಿಡದ ಮರೆಯಿಂದ ಸೂಕ್ಷ್ಮವಾಗಿ ಪರಿಶೀಲಿಸಿದೆ.

ಕೆರೆಯ ಆಚೆ ಬದಿಯಿಂದ ಹಾರಿಹೋದ ‘ಟ್ರೀ ಪೈ’ ಹಕ್ಕಿಯೊಂದನ್ನು ಬಿಟ್ಟು ಬೇರೇನೂ ಕಾಣಲಿಲ್ಲ. ಆದರೆ ಈ ‘ಟ್ರೀ ಪೈ’ ಹಕ್ಕಿಗಳು ಕೆಲವೊಮ್ಮೆ ಮಾಂಸಾಹಾರಿ ಪ್ರಾಣಿಗಳನ್ನು ಹಿಂಬಾಲಿಸುತ್ತವೆ... ಮತ್ತೊಮ್ಮೆ ದೃಷ್ಟಿ ಕೀಲಿಸಿ ಎಲ್ಲೆಡೆ ನೋಡಿ ನಿಧಾನವಾಗಿ ಕೆರೆಯ ಅಂಗಳಕ್ಕೆ ಬಂದೆ. ನೀರಬದಿಯ ಕೆಸರಿನಲ್ಲಿ ಹುಲಿ ಬಂದಿದ್ದ ಸೂಚನೆಗಳೇನೂ ಸಿಗಲಿಲ್ಲ. ಕೆರೆಯನ್ನು ಒಂದು ಸುತ್ತು ಹೊಡೆದು ಇನ್ನೊಂದು ಭಾಗಕ್ಕೆ ಬಂದೆ. ಅಲ್ಲಿ ಕೆಸರಿನಲ್ಲಿ ಹುಲಿಯ ಒಂದು ಹೆಜ್ಜೆ ಮೂಡಿತ್ತು.

ಹೊಸದಾಗಿ ಮೂಡಿದ್ದ ಆ ಹೆಜ್ಜೆಯ ಗುರುತಿನಲ್ಲಿ ಆಗಷ್ಟೇ ನೀರು ತುಂಬಿಕೊಳ್ಳುತ್ತಿತ್ತು! ಹುಲಿಯ ಹಿಂದೆ ಬಿದ್ದು ಆಗಲೇ ಒಂದೂವರೆ ಗಂಟೆಯಾಗಿತ್ತು. ಸತತ ಒತ್ತಡ ಮತ್ತು ಉದ್ವೇಗದ ಸನ್ನಿವೇಶಗಳು ನನ್ನ ಮನಸ್ಸಿನ ಮೇಲೆ ಸಾಕಷ್ಟು ಪರಿಣಾಮ ಬೀರಿ ಅಜಾಗರೂಕತೆಗೆ ಅವಕಾಶ ಕಲ್ಪಿಸಿದ್ದವು. ಕೆಸರಿನಲ್ಲಿ ಸಿಕ್ಕಿಕೊಂಡ ನನ್ನ ಚಪ್ಪಲಿಯನ್ನೂ ಬಿಡಿಸಿಕೊಳ್ಳಲು ಹಠಾತ್ ಚಲಿಸಿದೆ.

ಸರಿಯಾಗಿ ಅದೇ ಕ್ಷಣದಲ್ಲಿ ಪಕ್ಕದ ಕಾಡಿನ ಒಳದಾರಿಯಲ್ಲಿ ಏನೋ ಸರಿದ್ದಿದ್ದನ್ನು ನನ್ನ ಎಡಗಣ್ಣಿನ ಅಂಚು ನೋಡಿತು. ತಕ್ಷಣ ಆ ಹಾದಿಯ ಕಡೆಗೆ ಓಡಿದೆ. ಆ ಕಾಲುದಾರಿಯಲ್ಲಿದ್ದ ಒಂದು ಸಣ್ಣ ತಗ್ಗಿನಲ್ಲಿ ನೀರು ನಿಂತಿತ್ತು. ಆ ನೀರು ಕದಡಿ ಕೆಂಪಾಗಿತ್ತು.

ಹುಲಿ ಆಗತಾನೆ ಅಲ್ಲಿಂದ ಎದ್ದು ಹೋಗಿತ್ತು. ಕದಡಿದ್ದ ಆ ನೀರಿನಲ್ಲಿ ತೆಳ್ಳನೆಯ ತರಂಗಗಳು ಚಲಿಸುತ್ತಿದ್ದವು. ಹೊಂಡದಿಂದ ಮುಂದುವರೆದಿದ್ದ ಕಾಲುದಾರಿಯಲ್ಲಿ ಹುಲಿಯ ರೋಮಗಳಿಂದ ಜಾರಿ ಬಿದ್ದ ಹನಿಗಳಿನ್ನೂ ಒಣಗಿರಲಿಲ್ಲ. ಇಡೀ ಸನ್ನಿವೇಶದ ಚಿತ್ರಣವನ್ನು ದಕ್ಕಿಸಿಕೊಂಡ ಆ ಗಳಿಗೆಯಲ್ಲಿ ಆ ಹುಲಿಯನ್ನು ನೋಡಲೇ ಬೇಕೆಂದಿರಲಿಲ್ಲ.

‘ನಮ್ಮ ಹುಲಿ’ಯನ್ನು ನೋಡಲೇಬೇಕೆಂದು ಹುಚ್ಚು ಹಂಬಲದಿಂದ ಪ್ರಯತ್ನಿಸಿದ್ದೆ, ನಿಜ. ಆದರೆ ಅಂತಿಮವಾಗಿ ಆ ಹುಲಿಯನ್ನು ನೋಡಿದೆನೋ ಇಲ್ಲವೋ ನನಗೆ ತಿಳಿಯಲಿಲ್ಲ.ಆದರೆ ಈಗ ನನ್ನ ಮನಸ್ಸು ಸಹಜ ಸ್ಥಿತಿಗೆ ಮರಳಿತ್ತು. ಮತ್ತೊಮ್ಮೆ ನನ್ನೊಳಗಿನ ಭೀತಿಯ ಬಗ್ಗೆ ಗೌರವ ಮೂಡಿತ್ತು! ಹಿಂದಿರುಗಲು ನಿರ್ಧರಿಸಿ ಆನೆಗಳನ್ನು ತಪ್ಪಿಸಲು ಬೇರೆ ಕಾಲುದಾರಿ ಹಿಡಿದು ಸಾಗಿದೆ. ದೂರದಲ್ಲಿ ಜಿಂಕೆಗಳ ಎಚ್ಚರಿಕೆಯ ಕೂಗು ಕೇಳಿಬರುತ್ತಿತ್ತು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.