`ಶ್ರುತಿ' ಸಿನಿಮಾಗೆ ಮುಂಚೆ ಎರಡು ಚಿತ್ರಗಳನ್ನು ಮಾಡಲು ಹೊರಟಿದ್ದೆ. ಒಂದು- ಹಿಂದಿಯಲ್ಲಿ `ಘಬರಾಹಟ್' ಎಂದು. ಇನ್ನೊಂದು- ತಮಿಳಿನಲ್ಲಿ `ಇಳಂ ತೆಂಡ್ರಲ್'. ಹಿಂದಿ ಸಿನಿಮಾ ಮಾಡಲು ಮುಂಬೈಗೆ ಹೋಗಿ, ಸ್ಮಿತಾ ಪಾಟೀಲ್, ಶಫಿ ಇನಾಂದಾರ್, ರಾಕೇಶ್ ಬೇಡಿ, ಬಪ್ಪಿ ಲಹರಿ ಮೊದಲಾದವರಿಗೆ ಮುಂಗಡಹಣ ಕೊಟ್ಟು, ಬುಕ್ ಮಾಡಿದ್ದೆ. ಹೀರೋ ಯಾರೆಂಬುದನ್ನು ನಿರ್ಧರಿಸಬೇಕಿತ್ತು. ತಮಿಳಿನಲ್ಲಿ ಕ್ರೇಜಿ ಮೋಹನ್ ಮಾಡಿದ್ದ ಚಿತ್ರಕತೆ ನೆಚ್ಚಿಕೊಂಡು ಸಿನಿಮಾ ಮಾಡುವ ನಿರ್ಧಾರ ಮಾಡಿದ್ದು. ಆ ಚಿತ್ರಕ್ಕೆ ಪ್ರಶಾಂತ್ ಹೀರೊ ಆಗಿ ಗೊತ್ತಾಗಿದ್ದರು. ಹಾಡುಗಳನ್ನು ರೆಕಾರ್ಡ್ ಮಾಡುವ ಪ್ರಕ್ರಿಯೆಯೂ ಶುರುವಾಗಿತ್ತು. ಆದರೆ ಎರಡೂ ಸಿನಿಮಾಗಳನ್ನು ಮುಂದುವರಿಸಲು ಆಗಲಿಲ್ಲ. ಅವುಗಳ ಯೋಚನೆ ಮರೆತು, `ಶ್ರುತಿ' ಚಿತ್ರ ಮಾಡಲು ಮುಂದಾದೆ.

ನನ್ನ ಜೊತೆ ಆಗ ಯಾರೂ ನಾಯಕರು ಇರಲಿಲ್ಲ. ಹಾಗಾಗಿ ಹೊಸಬರನ್ನು ಹಾಕಿಕೊಂಡೇ ಮಾಡುವ ಅನಿವಾರ್ಯವಿತ್ತು. ಚಿತ್ರದಲ್ಲಿ ಹಲವು ಪಾತ್ರಗಳಿದ್ದವು. ಕೇಂದ್ರ ಪಾತ್ರ ಹುಡುಗಿಯದ್ದು. ಅದಕ್ಕಾಗಿ ಹೊಸ ಮುಖಕ್ಕೆ ಹುಡುಕಾಡಿದೆ. ಮದ್ರಾಸ್ನಲ್ಲಿ ಹಲವರಿಗೆ ಮೇಕಪ್ ಟೆಸ್ಟ್ ಮಾಡಿಸಿದೆ. ಒಂದು ಹುಡುಗಿಯ ಮುಖ ಪಾತ್ರಕ್ಕೆ ಸೂಕ್ತ ಎನ್ನಿಸಿತು. ಒಂದು ಹಲ್ಲನ್ನು ಸರಿಪಡಿಸಿಕೊಳ್ಳಬೇಕು ಎಂದು ಅವಳಿಗೆ ಸೂಚಿಸಿ, ಬೆಂಗಳೂರಿಗೆ ಬಂದೆ. ನಾನು ಶಂಕರ್ನಾಗ್ನ ಸಂಕೇತ್ ಸ್ಟುಡಿಯೊದಲ್ಲಿ ಆಗ ರೆಕಾರ್ಡಿಂಗ್ ಮಾಡಿಸುತ್ತಿದ್ದದ್ದು. ಮಹಡಿಯ ಮೇಲಿದ್ದ ಸ್ಟುಡಿಯೊಗೆ ಹೋದಾಗ ಅಲ್ಲಿ ಥಟ್ಟನೆ ಒಂದು ಮುಖ ಕಂಡಿತು. ನನ್ನನ್ನು ನೋಡಿದ್ದೇ ಆ ಹುಡುಗಿ ಎದ್ದುನಿಂತಳು. ಮೊದಲ ನೋಟದಲ್ಲೇ ನನ್ನ ಚಿತ್ರಕ್ಕೆ ಆ ಮುಖ ಹೊಂದುತ್ತದೆ ಎನ್ನಿಸಿತು. ಪ್ರಿಯದರ್ಶಿನಿ ಎಂದು ಹುಡುಗಿಯ ಹೆಸರು. ಮುಂಚೆ ಎಂದೂ ಕ್ಯಾಮೆರಾ ಎದುರಿಸದ ಹುಡುಗಿಯನ್ನೇ ಆಯ್ಕೆ ಮಾಡಬೇಕು ಎಂದು ನಾನು ಅಂದುಕೊಂಡಿದ್ದೆ. ಆ ಹುಡುಗಿ ಯಾವುದೇ ಚಿತ್ರದಲ್ಲಿ ಅಭಿನಯಿಸಿಲ್ಲ ಎಂದಳು. ಹಾಗಾಗಿ `ಶ್ರುತಿ' ಚಿತ್ರಕ್ಕೆ ಅವಳನ್ನೇ ನಾಯಕಿಯಾಗಿ ಆರಿಸಿದೆ. ಪ್ರಿಯದರ್ಶಿನಿ ಎಂಬ ಅವಳ ಹೆಸರನ್ನು ಶ್ರುತಿ ಎಂದು ಬದಲಿಸಿದೆ. ಆಮೇಲೆ ಗೊತ್ತಾಯಿತು, ಅವಳು `ಆಸೆಗೊಬ್ಬ ಮೀಸೆಗೊಬ್ಬ' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಮೊದಲೇ ನಟಿಸಿದ್ದಳು ಎಂದು.

ಕಾರಿನಲ್ಲಿ ಸಾಗುವಾಗ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮುದ್ದುಮುಖದ ಯುವಕ ಕಂಡ. ಹಾರ್ನ್ ಮಾಡಿ, ಅವನನ್ನು ಕರೆದೆ. ಅವನೇ ಸುನಿಲ್. `ಶ್ರುತಿ' ಚಿತ್ರಕ್ಕೆ ಅವನು ಪ್ರಮುಖ ಪಾತ್ರಧಾರಿ. ಪ್ರಭುದೇವ ಕೂಡ ಚಿತ್ರದ ಪಾತ್ರಕ್ಕೆ ಮೇಕಪ್ ಟೆಸ್ಟ್ ಮಾಡಿಸಿಕೊಂಡಿದ್ದ. ಆದರೆ ಚಿರಂಜೀವಿ ಅಭಿನಯದ ಚಿತ್ರಕ್ಕೆ ನೃತ್ಯ ನಿರ್ದೇಶನ ಮಾಡುವ ಅವಕಾಶ ಬಂದಿದ್ದರಿಂದ ಈ ಚಿತ್ರದಲ್ಲಿ ನಟಿಸಲು ಆಗಲಿಲ್ಲ. ಒಂದು ವೇಳೆ ಆಗ ಅವನು ಬಿಡುವಾಗಿದ್ದಿದ್ದರೆ `ಶ್ರುತಿ' ಅವನ ಅಭಿನಯದ ಮೊದಲ ಚಿತ್ರವಾಗುತ್ತಿತ್ತು.

ಅರವತ್ತು ದಿನಗಳಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿ `ಶ್ರುತಿ' ಚಿತ್ರವನ್ನು ತೆರೆಗೆ ತಂದೆ. ಆ ಚಿತ್ರದಲ್ಲಿ ನಟಿಸಿದ್ದ ಅಷ್ಟೂ ಜನರಿಗೆ ಕೊಟ್ಟಿದ್ದ ಒಟ್ಟು ಸಂಭಾವನೆ ಕೇವಲ ಐದು ಸಾವಿರ ರೂಪಾಯಿ. ಎಲ್ಲಾ ಹೊಸಬರೇ ಇದ್ದ ಚಿತ್ರದಲ್ಲಿ ಹೊನ್ನವಳ್ಳಿ ಕೃಷ್ಣನಿಗೂ ಪ್ರಮುಖ ಪಾತ್ರ ಕೊಟ್ಟಿದ್ದೆ. `ಶ್ರುತಿ' ಚಿತ್ರ ಹಿಟ್ ಎನಿಸಿಕೊಂಡರೂ ನಾನು ಹೆಚ್ಚು ಹಣವನ್ನು ಕಾಣಲಿಲ್ಲ. ಆ ಚಿತ್ರವನ್ನು ಮಾರಿಬಿಟ್ಟಿದ್ದೆ. ಚಿತ್ರರಂಗಕ್ಕೆ ಶ್ರುತಿ, ಸುನಿಲ್ ಇಬ್ಬರೂ ಕೊಡುಗೆಗಳಾಗಿ ಆ ಚಿತ್ರದ ಮೂಲಕ ಸಿಕ್ಕರೆಂಬುದು ಹೆಮ್ಮೆಯ ವಿಷಯ.

ಸಿನಿಮಾ ಮಾಡುವುದು ಒಂದು ರೀತಿಯಲ್ಲಿ ನನ್ನ ಬಯಕೆಯಾಗಿತ್ತು. ಎಂಥ ಕಷ್ಟದಲ್ಲೂ ಚಿತ್ರ ನಿರ್ಮಾಣದ ಯೋಚನೆ ಮೂಡಲು ಅದೇ ಕಾರಣ. ಹಿಂದೆ ಒಮ್ಮೆ ನಟ ದೊಡ್ಡಣ್ಣ ಹೇಳಿದ ಮಾತು ನೆನಪಾಗುತ್ತಿದೆ: `ಆಸೆ ಇರಬೇಕು ಬಡ್ಡೆತ್ತದೇ... ಆಸೆ ಇಲ್ಲದವನು ಮನುಷ್ಯನೇ ಅಲ್ಲ'.

`ಶ್ರುತಿ' ಸಿನಿಮಾ ಮಾಡಿದ ಸಂದರ್ಭದಲ್ಲೇ ಮದ್ರಾಸ್ ಮನೆಗೆ ಶಟಲ್ಕಾಕ್ ಚಾಂಪಿಯನ್ ಒಬ್ಬ ಬರುತ್ತಿದ್ದ. ನನ್ನ ಮಕ್ಕಳಿಗೆಲ್ಲಾ ಆಪ್ತನಾಗಿದ್ದ ಅವನ ಹೆಸರು ವಿಶ್ವಾಸ್. ಅವನು ಬರುತ್ತಿದ್ದದ್ದು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಲು ಎಂದು ನನಗೆ ಆಮೇಲೆ ಗೊತ್ತಾಯಿತು. ಮಕ್ಕಳು ಅವನ ಹೆಸರನ್ನು ಶಿಫಾರಸು ಮಾಡಿ, ಪಾತ್ರ ಕೊಡುವಂತೆ ಕೇಳಿಕೊಂಡರು. ಹರ್ಷವರ್ಧನ ಎಂದು ಅವನ ಹೆಸರನ್ನು ಬದಲಿಸಿ, ನಿತ್ಯಾ ಎಂಬ ಇನ್ನೊಬ್ಬ ಹೊಸ ಹುಡುಗಿಯನ್ನು ಆಯ್ಕೆ ಮಾಡಿ, ಇಬ್ಬರ ಜೋಡಿಯ `ಗೌರಿ ಕಲ್ಯಾಣ' ಚಿತ್ರವನ್ನು ತೆಗೆದೆ. ಎಂ.ಪಿ. ಶಂಕರ್, ವಜ್ರಮುನಿ ಇಬ್ಬರಿಗೂ ಅದರಲ್ಲಿ ಸೊಗಸಾದ ಪಾತ್ರಗಳಿದ್ದವು.

ಹಣದ ಒತ್ತಡ ಹೆಚ್ಚಾಗಿತ್ತು. `ಗೌರಿ ಕಲ್ಯಾಣ' ಚಿತ್ರದ ಮೊದಲ ಪ್ರತಿ ಬಂದಮೇಲೆ ಒಂದು ಪ್ರೊಜೆಕ್ಷನ್ ಹಾಕಿಸಿದೆವು. ಆ ಚಿತ್ರ ನೋಡಿದ ಎಲ್ಲರೂ ಸಿನಿಮಾ ಸೂಪರ್ಹಿಟ್ ಆಗುತ್ತದೆ ಎಂದರು. ಸಿದ್ದಲಿಂಗಯ್ಯ, ಚಂದೂಲಾಲ್ ಜೈನ್, ಬಿ.ಎಂ. ವೆಂಕಟೇಶ್ ತರಹದ ಘಟಾನುಘಟಿಗಳು ಕೂಡ ಚಿತ್ರ ಗೆದ್ದೇ ಗೆಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು. ಚಿತ್ರಕ್ಕೆ ಫೈನಾನ್ಸ್ ಮಾಡಿದ್ದವರು ಕೂಡ ಮಾರಬೇಡ ಎಂದು ಸಲಹೆ ಕೊಟ್ಟರು. ಹಾಗಾಗಿ ನಾನು ಮಾರಲಿಲ್ಲ. ಬಿಡುಗಡೆಯಾದ ಮೇಲೆ ನಿರೀಕ್ಷಿಸಿದಂತೆ ಆಗಲಿಲ್ಲ. ಸಿನಿಮಾ ಸೋತಿತು. ಒಂದು ವೇಳೆ ಶ್ರುತಿ-ಸುನಿಲ್ ಜೋಡಿ ಇದ್ದಿದ್ದರೆ ಅದು ಗೆಲ್ಲುತ್ತಿತ್ತೋ ಏನೋ? ಹೊಸಬರನ್ನು ಹಾಕಿಕೊಂಡು ತಾಲೀಮು ಮಾಡುವುದು ನನ್ನ ಚಾಳಿಯಾಗಿತ್ತು.

ಇನ್ನೊಂದು ವಿಷಯವನ್ನು ಬರೆಯಬೇಕೋ ಬೇಡವೋ ಗೊತ್ತಾಗುತ್ತಿಲ್ಲ. ಆದರೂ ಅದನ್ನು ಹೇಳಲೇಬೇಕು. ನನಗೆ ಮತ್ತೊಂದು ಕಲ್ಯಾಣವಾಗುವ ಸಂದರ್ಭ ಒದಗಿಬಂತು.

ಮೈಸೂರಿನಲ್ಲಿ `ಗೌರಿ ಕಲ್ಯಾಣ' ಚಿತ್ರೀಕರಣ ನಡೆಸಿದ್ದು. ಎರಡು ದಿನ ಶೂಟಿಂಗ್ ಬಾಕಿ ಇರುವಾಗ ಮದ್ರಾಸ್ಗೆ ಹೊರಡಬೇಕಾಯಿತು. ಆಗ ಸ್ನೇಹಿತರೊಬ್ಬರು ತಮ್ಮ ಪರಿಚಿತರ ಮನೆಯ ಹುಡುಗಿಯೊಬ್ಬಳಿಗೆ ಸಿನಿಮಾದಲ್ಲಿ ಅವಕಾಶ ಬೇಕಿದೆ ಎಂದು ಕೇಳಿಕೊಂಡರು. ಒಮ್ಮೆ ಆ ಹುಡುಗಿಯನ್ನು ನೋಡಿಬಿಡಿ ಎಂದರು. ಒಪ್ಪದೇ ನನಗೆ ಬೇರೆ ದಾರಿ ಇರಲಿಲ್ಲ. ಒಬ್ಬರು ತಮ್ಮ ಅಕ್ಕನ ಮಗಳು ಎಂದು ಹುಡುಗಿಯನ್ನು ಕರೆತಂದು ಪರಿಚಯಿಸಿದರು. ಆ ಹುಡುಗಿಯನ್ನು ಕರೆತಂದ ಅವರೇ ಶೈಲಜಾ. ನನ್ನ ಜೀವನದಲ್ಲಿ ಅವರು ಗೆಳತಿಯಾದರು. ಆ ಅವರೇ ಆಮೇಲೆ ನನ್ನ ಶೈಲಜಾ ಆದಳು.

ನನಗೆ ಆಗ 50 ವರ್ಷ. ಐದು ಮಕ್ಕಳ ತಂದೆ. ಅಚ್ಚರಿಯಾಗುತ್ತದೆ. ಒಂದು ಹೆಣ್ಣು ಹಣವನ್ನೋ ರೂಪವನ್ನೋ ಇಷ್ಟಪಡುವುದು ಸಹಜ. ಶೈಲಜಾ ನನ್ನನ್ನು ಇಷ್ಟಪಟ್ಟಾಗ ನನ್ನಲ್ಲಿ ಹಣವೂ ಇರಲಿಲ್ಲ, ರೂಪವೂ ಇರಲಿಲ್ಲ. ಎಲ್ಲವನ್ನೂ ಮರೆತು ಅವಳು ನನಗೆ ಹತ್ತಿರವಾದಳು. ಅವಳು ನನಗೆ ಬೇಕೇಬೇಕು ಎನ್ನಿಸಿತು. ಸಂಗಾತಿಯಾದಳು.

ಅಂಬುಜಾ ಕೂಡ ನಾನು ಇಷ್ಟಪಟ್ಟು ಮದುವೆಯಾಗಿದ್ದವಳು. ಒಂದು ದಿನ ಮನಸ್ಸನ್ನು ಗಟ್ಟಿ ಮಾಡಿಕೊಂಡು ಅವಳಿಗೆ ಶೈಲಜಾ ವಿಷಯವನ್ನು ಹೇಳಿಬಿಟ್ಟೆ. `ನನ್ನ ಜೀವನದ ಕಾದಂಬರಿ ನಿನ್ನ ಕೈಲಿದೆ. ಕಾಮಿಡಿಯೋ ಟ್ರ್ಯಾಜಿಡಿಯೋ, ಕ್ಲೈಮ್ಯಾಕ್ಸನ್ನು ನೀನೇ ಹೇಳಬೇಕು' ಎಂದೆ. ಅದಕ್ಕೆ ಅವಳು ಕೊಟ್ಟ ಪ್ರತಿಕ್ರಿಯೆ ನೆನೆಸಿಕೊಂಡರೆ ಈಗಲೂ ನನಗೆ ಕಣ್ಣಲ್ಲಿ ನೀರು ಬರುತ್ತದೆ. ಅವಳು ಹೇಳಿದ್ದು ಒಂದೇ ಮಾತು: `ದ್ವಾರ್ಕಿ ನಿನ್ನ ಇಷ್ಟವೇ ನನ್ನ ಇಷ್ಟ'. ಮಕ್ಕಳೆಲ್ಲರೂ ಅವಳನ್ನು ಒಪ್ಪಿದರು. ಶೈಲಜಾ ನಮ್ಮ ಸಂಸಾರದ ಭಾಗವಾದಳು.

ಮುಂದಿನ ವಾರ: ಹೊಸ ಕಳ್ಳ, ಹಳೇ ಕುಳ್ಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.