ಶಾಲೆಯ ಹೆಡ್‌ಮಾಸ್ತರ್‌ಗೆ ಆತಂಕ. ನಿಮಿಷವೂ ವ್ಯರ್ಥ ಮಾಡದೇ ಊರಿನ ಕತ್ತೆಗಳ ಮಾಲೀಕ ಭಜಂತ್ರಿ ಮನೆಯತ್ತ ಲಘುಬಗೆಯಲ್ಲಿ ಹೆಜ್ಜೆ ಹಾಕಿದರು. ಅವರೊಂದಿಗೆ ಚೌಕಾಶಿ ಮಾಡಿ ನಾಲ್ಕು ಕತ್ತೆಗಳನ್ನು, ಅದರ ಜೊತೆಗೆ ಭಜಂತ್ರಿಯನ್ನು ಕರೆದುಕೊಂಡು ಅವುಗಳ ಹಿಂದೆ ಕೋಡ್ಲಿ ಗ್ರಾಮಕ್ಕೆ ಹೊರಟರು!

ಹೆಡ್‌ಮಾಸ್ತರ್ ಕತ್ತೆಗಳ ಹಿಂದೆ ಹೊರಟಿದ್ದನ್ನು ಕಂಡ ಕೆಲವರು ಮುಸಿಮುಸಿ ನಕ್ಕರು. ಆದರೆ, ಮಾಸ್ತರ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ‘ಮಳೆ ಬಂದರೆ ತುಂಬಾ ತಾಪತ್ರಯ’ ಎನ್ನುತ್ತಾ ಕತ್ತೆಗಳನ್ನು ಚುರುಕುಗೊಳಿಸಲು ಭಜಂತ್ರಿಗೆ ಸೂಚಿಸಿದರು. ಆರು ಕಿಲೋಮೀಟರ್ ಕ್ರಮಿಸಿದ ಮೇಲೆ ಕೋಡ್ಲಿ ಗ್ರಾಮದ ಶಾಲೆ ಸಿಕ್ಕಿತು. ಅಲ್ಲಿ ಇಳಿಸಿದ್ದ ಮಧ್ಯಾಹ್ನದ ಬಿಸಿಯೂಟದ ರೇಷನ್, ಗ್ಯಾಸ್ ಸಿಲಿಂಡರ್‌ಗಳನ್ನು ಕತ್ತೆಗಳ ಮೇಲೆ ಹೇರಿಕೊಂಡು ಮತ್ತೆ ಶಾಲೆ ತಲುಪುವಷ್ಟರಲ್ಲಿ ಸಂಜೆಯಾಗಿತ್ತು.

ನಾಗರಾಳ ಗ್ರಾಮದ ಪ್ರಹ್ಲಾದ ಬಯಲಾಟದ ಮಾಸ್ತರ್. ಕೆಲವು ದಿನಗಳಿಂದ ಇವರ ಮನೆಯಲ್ಲಿ ಗೊಂದಲ. ಮಗಳು ರುಕ್ಮಣಿ ಎಸ್‌ಎಸ್‌ಎಲ್‌ಸಿ ಪಾಸು ಮಾಡಿದ್ದು, ಕಾಲೇಜಿನ ಕನವರಿಕೆಯಲ್ಲಿದ್ದಾಳೆ. ಮನೆಯವರಿಗೂ ಓದಿಸುವ ಆಸೆ. ಆದರೂ ರುಕ್ಮಣಿಯನ್ನು ಮುಂದೆ ಓದಿಸಬೇಕಾ? ಬೇಡವಾ? ಎನ್ನುವ ಚರ್ಚೆ ನಿತ್ಯ ರಾತ್ರಿ ಮನೆಯಲ್ಲಿ ಜಾರಿಯಲ್ಲಿದೆ.

ತಾಂಡಾವೊಂದರ ಮೀರಾಬಾಯಿ ಲಾಲು ನಾಯಕ್‌ಗೆ ಚೊಚ್ಚಲ ಹೆರಿಗೆ ನೋವು ಕಾಣಿಸಿಕೊಂಡಿತು. ಆಂಬುಲೆನ್ಸ್‌ಗೆ ಕರೆ ಮಾಡಿದರು. ಅವರು ನಿಮ್ಮೂರಿಗೆ ಬರುವುದಿಲ್ಲ ಎಂದು ನಿರಾಕರಿಸಿದರು. ಗರ್ಭಿಣಿಯನ್ನು ಜೀಪ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೊರಟರು. ದಾರಿ ಮಧ್ಯೆ ಜೀಪ್ ಕೆಟ್ಟು ನಿಂತಿತು. ಆ ಮಹಿಳೆ ನಡುರಸ್ತೆಯಲ್ಲಿ ಗಂಡು ಮಗುವಿಗೆ ತಾಯಿಯಾದರು.

ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಅಲ್ಲಾಪುರ ಶಾಲೆಯ ಬಿಸಿಯೂಟದ ಪಡಿತರವನ್ನು ಕತ್ತೆ ಮೇಲೆ ಸಾಗಿಸಲು, ಇದೇ ಜಿಲ್ಲೆ ಭೈರಂಪಳ್ಳಿ ತಾಂಡಾ ಮಹಿಳೆ ನಡುರಸ್ತೆಯಲ್ಲಿ ಕೂಸನ್ನು ಹಡೆಯಲು ಕೆಟ್ಟ ರಸ್ತೆಗಳು ಕಾರಣ. ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ನಾಗರಾಳದ ರುಕ್ಮಣಿ ಕಾಲೇಜು ಪ್ರವೇಶ ಪಡೆಯುವ ಚರ್ಚೆಯನ್ನು ಹುಟ್ಟುಹಾಕಿದ್ದು ಆ ಊರಿನ ಹಳ್ಳ.

ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿನ ಕೆಟ್ಟ ಸಂಪರ್ಕ ರಸ್ತೆಗಳು ಬಹುತೇಕ ಕಡೆ ಹೆಣ್ಣು ಮಕ್ಕಳ ಶಿಕ್ಷಣವನ್ನು, ರೋಗಿಗಳ ಜೀವವನ್ನು, ರೈತರ ಭವಿಷ್ಯವನ್ನು ಮಂಕು ಮಾಡಿವೆ.

ಹಳ್ಳಿಗಳ ಸಂಪರ್ಕ ರಸ್ತೆಗಳ ಇಂಥ ಸ್ಥಿತಿಗೆ ಯಾರು ಕಾರಣ? ಸತತವಾಗಿ ಆಯ್ಕೆಯಾದರೂ ರಸ್ತೆಗಳನ್ನು ಸುಧಾರಿಸದೇ ಇರುವ ಜನಪ್ರತಿನಿಧಿಗಳಾ? ಇಪ್ಪತ್ತು, ಮೂವತ್ತು ವರ್ಷ ಒಬ್ಬರಿಗೇ ವೋಟು ಹಾಕಿ ಗೆಲ್ಲಿಸುತ್ತಲೇ ಬರುತ್ತಿರುವ ಜನರ ಮುಗ್ಧತೆಯೋ, ದಡ್ಡತನವೋ? ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಡುವಿನ ಪ್ರೀತಿ ಬಾಂಧ್ಯವದ ಫಲವೋ?

‘ನಮ್ಮೂರು ರಸ್ತೆ ನಾನು ಚಿಕ್ಕವಳಾಗಿದ್ದಾಗಿನಿಂದಲ್ಲೂ ಇದೇ ಸ್ಥಿತಿಯಲ್ಲಿದೆ. ಇಲ್ಲಿಯ ಜನ ಇನ್ನೂ ಸರ್ಕಾರಿ ಬಸ್ಸಿನ ಮುಖವನ್ನೇ ನೋಡಿಲ್ಲ’ ಎನ್ನುತ್ತಾರೆ ದೇವದುರ್ಗ ತಾಲ್ಲೂಕಿನ ಗೋಗೇರದೊಡ್ಡಿಯ ವೃದ್ಧೆ ಮಾನಶಮ್ಮ ಸಾಬಯ್ಯ.

ಗೋಗೇರದೊಡ್ಡಿಯಂತೆ ಇಂದಿಗೂ ಎಷ್ಟೋ ಹಳ್ಳಿಗಳ ಜನರು ಸರ್ಕಾರಿ ಬಸ್, ಆಂಬುಲೆನ್ಸ್‌ಗಳ ಮುಖವನ್ನೇ ನೋಡಿಲ್ಲ. ಇನ್ನು ಹಲವು ಹಳ್ಳಿಗಳಿಗೆ ಊರು ನೆಂಟರಂತೆ ಬಂದು ಹೋಗುತ್ತಿದ್ದ ಬಸ್ಸುಗಳೂ ಕೂಡ ತಗ್ಗು ದಿಣ್ಣೆಯಂಥ ರಸ್ತೆಗಳ ಕಾರಣದಿಂದಲೇ ಸ್ಥಗಿತಗೊಂಡ ನಿದರ್ಶನಗಳಿಗೆ ಕೊರತೆ ಇಲ್ಲ. ಗಂಡು ಮಕ್ಕಳು ಜೀಪ್, ಟ್ರ್ಯಾಕ್ಟರ್, ಲಾರಿ, ಟಂ ಟಂಗಳನ್ನು ಹಿಡಿದು ಶಾಲೆ, ಕಾಲೇಜಿಗೆ ಹೋಗುತ್ತಾರೆ.

‘ಒಂದು ದಿನವೂ ದ್ವಿಚಕ್ರವಾಹನ ಸವಾರರು ಸುರಕ್ಷಿತವಾಗಿ ಊರು ಸೇರಿಲ್ಲ. ಎತ್ತಿನಬಂಡಿಗಳು ಹೋದರೆ ಎತ್ತುಗಳ ಕಾಲಲ್ಲಿ ರಕ್ತ ತೊಟ್ಟಿಕ್ಕುತ್ತದೆ. ಚಕ್ಕಡಿ ಗಾಲಿಗಳು ಬಾಳಿಕೆ ಬರುವುದಿಲ್ಲ. ಇನ್ನು ರಂಟೆ, ಕುಂಟೆಗಳನ್ನು ಹಾಕಿಕೊಂಡು ಹೊಲಕ್ಕೆ ಹೋಗುವಾಗ ನಾವು ಅನುಭವಿಸುವ ಹಿಂಸೆಯನ್ನು ಕೇಳುವವರು ಯಾರು’ ಎಂದು ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕು ಯಲಬುರ್ತಿ ರೈತ ಭೀಮನಗೌಡ ಪಾಟೀಲ ಅವಲತ್ತುಕೊಳ್ಳುತ್ತಾರೆ.

ದೇವದುರ್ಗ ತಾಲ್ಲೂಕು ಚಿಂತಲಕುಂಟಿ ಗ್ರಾಮದ 4 ಕಿಲೋಮೀಟರ್ ರಸ್ತೆಯ ಅಭಿವೃದ್ಧಿಗಾಗಿ 4 ವರ್ಷಗಳ ಹಿಂದೆ ಸುಮಾರು 2 ಕೋಟಿ ರೂಪಾಯಿಗಳ ಕೆಲಸ ಆರಂಭವಾಯಿತು. ಕಾಮಗಾರಿ ಪೂರ್ಣಗೊಂಡಿಲ್ಲ. ಹಣ ಮಾತ್ರ ಖರ್ಚಾಗಿದೆ!

ಗ್ರಾಮಗಳ ಸಂಪರ್ಕ ರಸ್ತೆಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ಗ್ರಾಮ ಸಡಕ್’ ಯೋಜನೆಯನ್ನು, ರಾಜ್ಯ ಸರ್ಕಾರ ‘ನಮ್ಮ ಗ್ರಾಮ, ನಮ್ಮ ರಸ್ತೆ’ ಯೋಜನೆಯನ್ನು ರೂಪಿಸಿವೆ. ಇವೆಲ್ಲವೂ ಒಳ್ಳೆಯ ಯೋಜನೆಗಳೇನೋ ಸರಿ. ಈ ಯೋಜನೆಗಳು ‘ಪ್ರಗತಿ ಪರಿಶೀಲನಾ ಸಭೆ’ಗಳಲ್ಲಿ ಅಧಿಕಾರಿಗಳು ಮಂಡಿಸುವ ವರದಿಗಳಲ್ಲಿ ಉಸಿರಾಡುತ್ತವೆ. ಜನರು ಮಾತ್ರ ಅದೇ ಕೆಟ್ಟ ರಸ್ತೆಯಲ್ಲಿ ಬದುಕು ಸವೆಸುತ್ತಿರುತ್ತಾರೆ.

ರುಕ್ಮಣಿಯ ಕಾಲೇಜು ಶಿಕ್ಷಣಕ್ಕೆ ಮನೆಯವರು ಹಿಂದೇಟು ಹಾಕುತ್ತಿರುವುದಕ್ಕೂ, ಮಳೆಗಾಲಕ್ಕೂ ನಂಟಿದೆ. ಆ ಊರಲ್ಲಿ ಹಳ್ಳವಿದೆ. ಅದು ಮಳೆಗಾಲದಲ್ಲಿ ಸದಾ ತುಂಬಿ ಹರಿಯುತ್ತದೆ. ಅದನ್ನು ದಾಟಿಕೊಂಡು ರುಕ್ಮಣಿ ಕಾಲೇಜಿಗೆ ಹೋಗಬೇಕು. ಇದೇ ಕಾರಣಕ್ಕಾಗಿ ಆಕೆಯ ಕಾಲೇಜು ಭವಿಷ್ಯ ಅತಂತ್ರವಾಗಿದೆ.
ವಿಜಾಪುರದಲ್ಲಿ ಕೆಲಸ ಮಾಡುತ್ತಿದ್ದಾಗ ಸಚಿವರೊಬ್ಬರು ಈ ಪ್ರಸಂಗವನ್ನು ನನಗೆ ಹೇಳಿದರು. ಆಗ ಇವರು ಯುವ ರಾಜಕಾರಣಿ. ಕ್ಷೇತ್ರವೊಂದರ ಶಾಸಕರ ಜತೆ ಒಡನಾಟವಿತ್ತು. ಅವರೊಂದಿಗೆ ಹಳ್ಳಿಯೊಂದರ ಸಮಾರಂಭದಲ್ಲಿ ಭಾಗವಹಿಸಿದರು. ಜನರು ಶಾಸಕರ ಕೊರಳು ತುಂಬ ಹೂ ಮಾಲೆ ಹಾಕಿ, ಹೆಗಲು ತುಂಬ ಶಾಲು ಹೊದಿಸಿ ಸತ್ಕರಿಸಿದವರು, ತಮ್ಮೂರಿಗೆ ಒಳ್ಳೆಯ ರಸ್ತೆ ಮಾಡಿಸಿಕೊಡುವಂತೆ ಮನವಿ ಪತ್ರವನ್ನೂ ಕೊಟ್ಟರು.

ಕಾರಿನಲ್ಲಿ ಹಿಂದಿರುಗುವಾಗ ಯುವ ರಾಜಕಾರಣಿ ‘ಸಾಹೇಬ್ರ, ಜನ ತುಂಬಾ ಪ್ರೀತಿ, ಗೌರವ ತೋರಿಸಿದ್ದಾರೆ. ಅವರ ಋಣ ತೀರಿಸಿ’ ಎಂದು ಹೇಳಿದರು. ಶಾಸಕ ಅಸಹನೆಯಿಂದ ‘ಈಗ ರಸ್ತೆ ಕೇಳುತ್ತಾರೆ. ಮುಂದೆ ಬಸ್ಸು ಬೇಡುತ್ತಾರೆ. ಅಲ್ಲಿಗೆ ಬಸ್ಸು ಹೋಯಿತು ಎಂದರೆ ಪೇಟೆಗೆ ಬರುತ್ತಾರೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುತ್ತಾರೆ. ಜನರು ಶಾಣ್ಯಾರಾಗುತ್ತಾರೆ. ಆಮೇಲೆ ನಮ್ಮ ಮಾತನ್ನು ಯಾರು ಕೇಳುತ್ತಾರೆ ಮಂಗ್ಯಾ’ ಎಂದರಂತೆ.

ಇದನ್ನು ಹೇಳಿದ ರಾಜಕಾರಣಿ ಈಗ ಬದುಕಿಲ್ಲ. ಆದರೆ, ಮೂವತ್ತು ವರ್ಷಗಳ ಹಿಂದೆ ಶಾಸಕರೊಬ್ಬರು ಹೇಳಿದ ಮಾತು ಈಗಲೂ ಜನಪ್ರತಿನಿಧಿಗಳ ಸುಪ್ತ ಮನಸ್ಸಿನಲ್ಲಿ ಹಾಗೇ ಅಡಗಿ ಕುಳಿತಿರಬಹುದೇನೋ ಎನ್ನುವ ಅನುಮಾನ ಕಾಡುತ್ತಿದೆ.

ಇಲ್ಲಿ ನೆನಪಾಗುವುದು ರಾಜಸ್ತಾನದ ಹಳ್ಳಿಯೊಂದರ ಕಥೆ. ಅಲ್ಲಿಗೆ ಸರಿಯಾದ ರಸ್ತೆಯೇ ಇರಲಿಲ್ಲ. ಶಿಕ್ಷಕಿ ವಾರದಲ್ಲಿ ಎರಡು, ಮೂರು ದಿನ ಬರುತ್ತಿದ್ದರು. ಮಕ್ಕಳು ಶಾಲೆಯಿಂದ ಹೊರಗೆ ಉಳಿಯುವುದು ಹೆಚ್ಚಾಯಿತು. ರೈತರು ಬೆಳೆದ ತರಕಾರಿಗಳನ್ನು ಪೇಟೆಗೆ ತೆಗೆದುಕೊಂಡು ಹೋಗುವುದು ಕಷ್ಟವಾಯಿತು. ಇಡೀ ಹಳ್ಳಿ ಕೆಟ್ಟ ರಸ್ತೆಯ ದೆಸೆಯಿಂದಾಗಿ ಹಿಂದುಳಿಯಿತು. ಆಕ್ರೋಶಗೊಂಡ ಯುವ ಸಮೂಹ ಎದ್ದು ನಿಂತಿತು. ಜನಪ್ರತಿನಿಧಿಗಳು, ಅಧಿಕಾರಿಗಳು ಮಣಿದರು. ಆ ಊರಿನ ರಸ್ತೆ ಸುಧಾರಿಸಿತು. ಶಿಕ್ಷಕಿ ಸಮಯಕ್ಕೆ ಸರಿಯಾಗಿ ಶಾಲೆಗೆ ಬರತೊಡಗಿದರು. ಶಾಲೆಯ ಕೊಠಡಿಗಳು ತುಂಬಿಕೊಂಡವು. ರೈತರ ಮೊಗದಲ್ಲಿ ನಗು ಕಾಣಿಸಿಕೊಂಡಿತು. ಕರೆ ಮಾಡಿದರೆ ಸಾಕು, ಹತ್ತು ನಿಮಿಷದಲ್ಲಿ ಆಂಬುಲೆನ್ಸ್ ಸೈರನ್ ಊರಲ್ಲಿ ಮೊಳಗುತ್ತಿತ್ತು.

ಹೈದಬಾರಾದ್ ಕರ್ನಾಟಕದ ನೂರಾರು ಹಳ್ಳಿಗಳ ಜನರು ಮನಸ್ಸು ಇಂಥ ಬದಲಾವಣೆಗಾಗಿಯೇ ಹಂಬಲಿಸುತ್ತಿದೆ.
ಮಾನ್ವಿ ತಾಲ್ಲೂಕಿನ ನೀರಮಾನ್ವಿ–ಸಿರಿವಾರ ನಡುವಿನ 20 ಕಿಲೋಮೀಟರ್ ರಸ್ತೆಯನ್ನು ಕ್ರಮಿಸಲು ಒಂದು ಗಂಟೆ ಹಿಡಿಯಿತು! ರಸ್ತೆ ಪಕ್ಕದಲ್ಲಿ ಸಿಕ್ಕ ಕುರಿಗಾಹಿ ಅಮರೇಶನಿಗೆ ‘ಏನಪ್ಪಾ, ನಿಮ್ಮೂರಿನ ರಸ್ತೆ ಹೀಗಿದೆ? ಎಂದು ಕೇಳಿದೆ. ಆತ ‘ಎಲ್ಲ ನಮ್ಮ ಹಂಪಯ್ಯ ಸಾಹುಕಾರರ ದಯೆ’ ಎಂದ! (ಹಂಪಯ್ಯ ನಾಯಕ್ ಮಾನ್ವಿ ಕ್ಷೇತ್ರದ ಶಾಸಕರು). ಆತ ಮಾತು ಮುಂದುವರೆಸಿ–‘ನಾನು ವೋಟು ಹಾಕಿ ನನ್ನ ಧರ್ಮದ ಕೆಲಸ ಮಾಡಿದ್ದೇನೆ. ಮುಂದಿನದು ಗೆದ್ದಿರುವವರ ಧರ್ಮ’ ಎಂದು ಹೇಳಿ ಕುರಿ ಮಂದೆಯಲ್ಲಿ ಮರೆಯಾದ.

ಮತದಾರರು ನಿಮಗೆ ಮತ ಹಾಕಿ ತಮ್ಮ ಧರ್ಮವನ್ನು ಪಾಲಿಸಿದ್ದಾರೆ. ಇನ್ನು ನೀವು ನಿಮ್ಮ ಧರ್ಮವನ್ನು ಪಾಲಿಸಬೇಕು ಅಲ್ಲವೇ ಜನಪ್ರತಿನಿಧಿಗಳೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.