‘ಗೇಮು, ನಾನು ತುಂಬಾ ದಿನಗಳಿಂದ ನೋಡುತ್ತಿದ್ದೇನೆ. ನಿನ್ನ ಮಗ ವಿಜಯಕುಮಾರ ಹಾಳೆ ಮೇಲೆ ಏನನ್ನೋ ಬರೆಯುತ್ತಾನೆ. ಅದನ್ನು ಜೇಬಿನಲ್ಲಿ ಇಟ್ಟುಕೊಂಡು ಆಗಾಗ ತೆಗೆದು ನೋಡುತ್ತಿರುತ್ತಾನೆ. ಅದು ಏನು?!’–ಆಳವಾದ ಕಲ್ಲುಗಣಿಯಲ್ಲಿ ಕೆಲಸ ಮಾಡುತ್ತಿದ್ದವರೊಬ್ಬರು ಕೇಳಿದರು.

‘ಅದಕ್ಕೆ ಓದುವ ಹುಚ್ಚು. ನಮ್ಮೊಂದಿಗೆ ಗಣಿಯಲ್ಲಿ ಕೆಲಸ ಮಾಡುವಾಗಲೂ ಹಾಳೆ ತೆಗೆದು ಓದುತ್ತಿರುತ್ತದೆ’ ಎಂದು ಆ ಬಾಲಕನ ತಂದೆ ತಾತ್ಸಾರದಿಂದಲೇ ಹೇಳಿದರು.

ಆಮೇಲೆ ಏನೋ ನೆನಪಾದವರಂತೆ–‘ಒಮ್ಮೆ ನಾನು, ನನ್ನ ಹೆಂಡತಿ ಇವನನ್ನು ಜೋಪಡಿಯಲ್ಲೇ ಬಿಟ್ಟು ಮಗುವನ್ನು ನೋಡಿಕೊಳ್ಳುವಂತೆ ಹೇಳಿ ಕೆಲಸಕ್ಕೆ ಬಂದಿದ್ದೆವು. ಸ್ವಲ್ಪ ಹೊತ್ತಿಗೆ ನನಗೆ ಸುಸ್ತಾಗತೊಡಗಿತು. ಕೆಲಸ ಬಿಟ್ಟು ಜೋಪಡಿಗೆ ಹೋದರೆ ಅಲ್ಲಿ ಮಗು ಮಲಗಿತ್ತು. ಆದರೆ ಇವನು ನಾಪತ್ತೆ! ನನಗೆ ಸಿಟ್ಟು ನೆತ್ತಿಗೇರಿತು. ಇವನನ್ನು ಹುಡುಕುತ್ತಾ ಹೋದರೆ ಶಾಲೆಯಲ್ಲಿ ಕುಳಿತಿದ್ದ!
ನಾಲ್ಕು ಬಿಗಿದು ಕರೆದುಕೊಂಡು ಬಂದೆ’ ಎಂದು ಹಳೆಯ ಘಟನೆಯನ್ನು ನೆನಪಿಸಿಕೊಂಡರು.

ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಗೇಮುವಿನ ಹೆಂಡತಿ, ‘ಅದು ಶಾಲೆಗೆ ಹೋದರೆ ಹೊಟ್ಟೆ ತುಂಬುವುದಾದರೂ ಹೇಗೆ? ಅದಕ್ಕೆ ಎಷ್ಟು ಹೇಳಿದರೂ ಅಷ್ಟೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಿಷ್ಟು ನಡೆದಿದ್ದು ಆಂಧ್ರಪ್ರದೇಶದ ತಾಂಡೂರಿನ ಕಲ್ಲುಗಣಿಯಲ್ಲಿ. ಗೇಮು ರಾಠೋಡ ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕು ಏವೂರು ತಾಂಡಾದವರು. ಇವರು ಕೂಲಿ ಅರಸಿ ಕುಟುಂಬ ಸಮೇತ ಅಲ್ಲಿಗೆ ವಲಸೆ ಹೋಗಿದ್ದರು.

ವಿಜಯಕುಮಾರ ಸಹ ಆಗಾಗ ಗಣಿಯಲ್ಲಿ ಕೆಲಸ ಮಾಡುತ್ತಿದ್ದನು. ಈತನಿಗೆ ಅಕ್ಷರದ ಮೇಲೆ ಇರುವ ಪ್ರೀತಿಯನ್ನು ಗುರುತಿಸಿದ ಸೋಮು ರಾಠೋಡ ಎನ್ನುವವರು ಕಲಬುರ್ಗಿಯ ದೇವಾಜಿ ನಾಯಕ ಶಿಕ್ಷಣ ಸಂಸ್ಥೆಯ ಬಾಲ ಕಾರ್ಮಿಕ ಹಗಲು ಶಾಲೆಗೆ ಐದನೇ ತರಗತಿಗೆ ದಾಖಲು ಮಾಡಿಸಿದರು. ಅಲ್ಲಿ ಆರು ತಿಂಗಳು ಅಭ್ಯಾಸ ಮಾಡಿದನು. ಓದಿನಲ್ಲಿ ಚುರುಕಾಗಿದ್ದ ಈತನನ್ನು ವಯಸ್ಸಿನ ಆಧಾರದ ಮೇಲೆ ನಂತರದಲ್ಲಿ ಆರನೇ ತರಗತಿಗೆ ಕಳುಹಿಸಲಾಯಿತು.

ಇದು ತುಂಬಾ ಹಿಂದಿನ ಮಾತು. ವಿಜಯಕುಮಾರನ ರೀತಿಯೇ ತಾಂಡಾವೊಂದರ ಹುಡುಗ ಓದುವ ಆಸೆಯಿಂದ ಪಟ್ಟಣಕ್ಕೆ ಬಂದನು. ಈತನ ಮನೆಯ ಮೂಲೆ ಮೂಲೆಯಲ್ಲಿಯೂ ಬಡತನ ಕಾಲು ಚಾಚಿ ಮಲಗಿತ್ತು. ಈ ಹುಡುಗನ ತಾಂಡಾದಿಂದ ಪಟ್ಟಣಕ್ಕೆ ಒಂದೇ ಬಸ್ಸು ಬಂದು ಹೋಗುತ್ತಿತ್ತು. ಹುಡುಗನ ಮನೆಯವರು ಮೂರು ದಿನಗಳಿಗೊಮ್ಮೆ ರೊಟ್ಟಿಬುತ್ತಿ ಕಳುಹಿಸಿಕೊಡುತ್ತಿದ್ದರು. ಹುಡುಗ ಬಸ್ಸು ಬರುವುದನ್ನೇ ಕಾಯುತ್ತಾ ನಿಲ್ಲುತ್ತಿದ್ದನು.

ಒಮ್ಮೊಮ್ಮೆ ಬಸ್ಸು ನಾಲ್ಕೈದು ದಿನ ಕೈಕೊಟ್ಟು ಬಿಡುತ್ತಿತ್ತು. ಆಗ ಹುಡುಗನ ಹಸಿವು ಮುಖದ ಮೇಲೆ ನಿರಾಶೆಯಾಗಿ ಮೂಡುತ್ತಿತ್ತು. ಮುಂದಿನ ಅಷ್ಟೂ ದಿನಗಳು ಅಕ್ಷರಶಃ ಉಪವಾಸ. ವಿಷಯ ಸ್ನೇಹಿತರಿಗೆ ಗೊತ್ತಾಗಿ ಅವರು ಒಂದು ಹೊತ್ತಿಗೆ ರೊಟ್ಟಿ ಕೊಡುತ್ತಿದ್ದರು. ಅಷ್ಟನ್ನೇ ಉಂಡು ನೀರು ಕುಡಿದು ಮಲಗುತ್ತಿದ್ದನು. ಮತ್ತೆ ಬುತ್ತಿಬಸ್ಸಿಗಾಗಿ ನಿಲ್ದಾಣದಲ್ಲಿ ಕಾಯುತ್ತಾ ನಿಲ್ಲುತ್ತಿದ್ದನು. ಆದರೆ, ಈ ಹುಡುಗನ ಅಕ್ಷರ ಹಸಿವು ಹೊಟ್ಟೆ ಹಸಿವನ್ನು ಮೆಟ್ಟಿನಿಂತಿತು. ಮುಂದೆ ಇದೇ ಹುಡುಗ ಕೆಎಎಸ್ ಅಧಿಕಾರಿಯಾದನು!

ಶಿಕ್ಷಣ ಎನ್ನುವುದು ಅರಿವಿನ ಜೊತೆಗೆ ವಿವೇಕವನ್ನು ತಂದುಕೊಡುತ್ತದೆ. ವಿನಯವನ್ನು ಕಲಿಸುತ್ತದೆ. ಸವಾಲುಗಳನ್ನು ಎದುರಿಸುವ ಸ್ಥೈರ್ಯವನ್ನು ನೀಡುತ್ತದೆ. ನಡವಳಿಕೆಯನ್ನು ಮೃದುವಾಗಿಸುತ್ತದೆ. ಸಮಾಜದಲ್ಲಿ ಹೇಗೆ ವ್ಯವಹರಿಸಬೇಕು ಎನ್ನುವುದನ್ನು ತಿಳಿಸಿ ಕೊಡುತ್ತದೆ. ಬದುಕನ್ನು ಕೊಟ್ಟಿಕೊಳ್ಳುವ ಉದ್ಯೋಗ ದೊರಕುವಂತೆ ಮಾಡುತ್ತದೆ. ಉದ್ಯೋಗದಿಂದ ಆರ್ಥಿಕ ಬಲ ಬರುತ್ತದೆ. ಇದರಿಂದ ಸಮಾಜದಲ್ಲಿ ಸ್ಥಾನಮಾನ ಲಭ್ಯವಾಗುತ್ತದೆ.

ಇವುಗಳಷ್ಟೇ ಮುಖ್ಯವಾಗಿ ಶಿಕ್ಷಣವು ವರ್ಣಾಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ಕೀಳುಜಾತಿ ಎಂದು ಕೀಳರಿಮೆಯಿಂದ ಮುದುಡಿಹೋಗಿರುವ ಸಮುದಾಯಗಳಲ್ಲಿ ಆತ್ಮವಿಶ್ವಾಸವನ್ನು ತುಂಬಿಕೊಡುತ್ತದೆ. ಇದಕ್ಕೊಂದು ನಿದರ್ಶನ ಇಲ್ಲಿದೆ: ಆ ಊರಿನಲ್ಲಿ ತುಳಿತಕ್ಕೆ ಒಳಗಾದ ಸಮುದಾಯದ ವಿದ್ಯಾವಂತ ಮತ್ತು ಅವಿದ್ಯಾವಂತನ ದೇಹ ಭಾಷೆ ಹಾಗೂ ಮಾತು ಬೇರೆ ಬೇರೆಯೇ ಆಗಿತ್ತು. ಈ ಇಬ್ಬರನ್ನೂ ಆ ಊರಿನ ಮೇಲ್ಜಾತಿಯವರು ನೋಡುವ ನೋಟವೂ, ಮಾತನಾಡಿಸುವ ರೀತಿಯೂ ಭಿನ್ನವಾಗಿತ್ತು. ಇದು ಬಂದದು ಶಿಕ್ಷಣದಿಂದ.

ಆದ್ದರಿಂದಲೇ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು: ‘ಶಿಕ್ಷಣದಿಂದ ತುಳಿತಕ್ಕೊಳಗಾದ ಜನರಲ್ಲಿ ಜಾಗೃತಿ ಉಂಟಾಗುತ್ತದೆ. ಇದರಿಂದ ಸಂಘಟನೆ ಸಾಧ್ಯವಾಗುತ್ತದೆ. ಸಂಘಟನೆ ಅನ್ಯಾಯದ ವಿರುದ್ಧ ಹೋರಾಟಕ್ಕೆ ಶಕ್ತಿಯನ್ನು ಕೊಡುತ್ತದೆ’.

ಈಗಲೂ ಬಹುತೇಕ ಶೋಷಿತ ಸಮುದಾಯಗಳ ಕೈಯಲ್ಲಿ ಆಸ್ತಿಯೂ ಇಲ್ಲ, ಸ್ವಂತ ನೆಲೆಯೂ ಇಲ್ಲ. ಇವುಗಳನ್ನು ಸುಲಭವಾಗಿ ಸಂಪಾದಿಸಲೂ ಆಗುವುದಿಲ್ಲ. ಆದರೆ, ಮುತುವರ್ಜಿ ವಹಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಿದರೆ ಸಾಕು; ಅವರು ವಿದ್ಯಾವಂತರಾಗಿ ಉದ್ಯೋಗ ಹಿಡಿದು ಮುಂದೆ ಆಸ್ತಿಯನ್ನು ಗಳಿಸಬಹುದು, ಸ್ವಂತ ನೆಲೆಯನ್ನೂ ಕಂಡುಕೊಳ್ಳಬಹುದು. ಒಂದು ವೇಳೆ ಇವುಗಳು ಸಿಗದೇ ಹೋದರೂ ಚಿಂತೆ ಇಲ್ಲ. ಏಕೆಂದರೆ ಸಮಾಜಕ್ಕೆ ಒಬ್ಬ ಉತ್ತಮ ವ್ಯಕ್ತಿ ಸಿಕ್ಕಂತಾಗುತ್ತದೆ.

ಈ ಮಾತನ್ನು ನಾನು ಎಲ್ಲಿಯೋ ಓದಿದ ನೆನಪು: ‘ಕೊಂಕಣಿಗಳು ತಮ್ಮ ಹೊಟ್ಟೆಬಟ್ಟೆಯನ್ನು ಕಟ್ಟಿಯಾದರೂ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಾರೆ’ ಎಂದು. ಇದೇ ಮಾತನ್ನು ತುಳಿತಕ್ಕೆ ಒಳಗಾದವರಿಗೆ ಅನ್ವಯಿಸಲು ಈಗಲೂ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ನನಗೆ ಬೇಸರವಿದೆ.

ಓಹ್! ಮರೆತಿದ್ದೆ. ವಿಜಯಕುಮಾರ ಆರನೇ ತರಗತಿಯಲ್ಲಿ ಮೊದಲಿಗನಾಗಿ ಪಾಸಾದನು. ಹೈಸ್ಕೂಲಿಗೆ ಬರುವ ಹೊತ್ತಿಗೆ ಇಂಗ್ಲಿಷ್ ಕಲಿಯುವ ಮೋಹ ಹೆಚ್ಚಾಯಿತು. ಕೈಯಲ್ಲಿ ಕಾಸು ಇರಲಿಲ್ಲ. ಮುಂಜಾನೆ ಮನೆ ಮನೆಗಳಿಗೆ ಪೇಪರ್ ಹಾಕಿ ಒಂದಿಷ್ಟು ಹಣ ಗಳಿಸಿದನು. ಅದೇ ಹಣದಿಂದ ಸ್ಪೋಕನ್ ಇಂಗ್ಲಿಷ್ ಕ್ಲಾಸಿಗೆ ಸೇರಿಕೊಂಡನು. ಸ್ಪೋಕನ್ ಇಂಗ್ಲಿಷ್ ಕ್ಲಾಸ್ ನಡೆಸುತ್ತಿದ್ದ ಶಿಕ್ಷಕ ಸಿದ್ದಪ್ಪ ಭಗವತಿ ಅವರು ವಿಜಯಕುಮಾರನ ಓದಿನ ಹಂಬಲವನ್ನು ಅರಿತುಗೊಂಡರು. ತಮ್ಮ ಬಳಿಯೇ ಇಟ್ಟುಕೊಂಡು ಪೊರೆಯತೊಡಗಿದರು. ಗೇಮು ರಾಠೋಡ ಹೇಳುತ್ತಿದ್ದಂತೆಯೇ ಈತ ಓದಿನಲ್ಲಿ ಹುಚ್ಚನಾದ. ವರ್ಷಗಳು ಕಳೆದು ಹೋದವು. ಈಗ ವಿಜಯಕುಮಾರ ಎಂಜಿನಿಯರ್ ಪದವೀಧರ!

‘ನನ್ನ ಅಪ್ಪ, ಅವ್ವನಿಗೆ ಈಗಲೂ ನಾನು ಏನು ಓದಿದ್ದೇನೆ ಎನ್ನುವುದು ಸರಿಯಾಗಿ ಗೊತ್ತಿಲ್ಲ. ಆದರೂ ನನ್ನ ಗುರಿಯಲ್ಲಿ ಮುಕ್ಕಾಲು ಹಾದಿಯನ್ನು ಕ್ರಮಿಸಿದ್ದೇನೆ. ಮುಂದೆ ಕೆಎಎಸ್ ಅಧಿಕಾರಿಯಾಗುವ ಗುರಿಯನ್ನು ಹೊಂದಿದ್ದೇನೆ. ಏಕೆಂದರೆ ನನ್ನಂತೆಯೇ ತುಳಿತಕ್ಕೆ ಒಳಗಾಗಿರುವ ಜನರ ಕಣ್ಣೀರು ಒರೆಸಬೇಕು ಎನ್ನುವ ಆಸೆ ಇದೆ’ ಎಂದು ವಿಜಯಕುಮಾರ ಹೇಳುತ್ತಾರೆ.

ಇಷ್ಟೊಂದು ದೊಡ್ಡ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯಗಳ ಮಕ್ಕಳು ಇನ್ನೂ ಶಿಕ್ಷಣದಿಂದ ವಂಚಿತರಾಗಿರುವುದು ಸುಳ್ಳಲ್ಲ. ಇಂಥ ಸಂದರ್ಭದಲ್ಲಿ ನನಗೆ ವಿಜಯಕುಮಾರ ರಾಠೋಡ ಹಾಗೂ ಕೆಎಎಸ್ ಅಧಿಕಾರಿಯಾಗಿರುವ ಆ ವ್ಯಕ್ತಿ ದಟ್ಟ ಕಾಡಿನಲ್ಲಿ ಮಿಂಚು ಹುಳುವಿನಂತೆ ಕಾಣಿಸುತ್ತಾರೆ. ಇವರನ್ನು ನೋಡಿದಾಗ ನಾನು ಬಹಳವಾಗಿ ಇಷ್ಟಪಡುವ ಸಾಹಿತಿ ದೇವನೂರ ಮಹಾದೇವ ಅವರು ಹೇಳಿದ ಈ ಮಾತು ನೆನಪಾಗುತ್ತದೆ: ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ ಇಂದಲ್ಲ ನಾಳೆ ಫಲ ಕೊಡುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.