ಕೆಲವು ತಿಂಗಳ ಹಿಂದೆ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸಂಚಾರ ಮಾಡಿದೆ. ಆ ಸಂದರ್ಭದಲ್ಲಿ ಬಗೆ ಬಗೆಯ ಜನರೊಂದಿಗೆ ಆಪ್ತವಾಗಿ ಒಡನಾಡಿದೆ. ಆಗ ಅವರು ‘ಹೈದರಾಬಾದ್ ಕರ್ನಾಟಕ ಎಂದರೆ ಕೇವಲ ಕಲಬುರ್ಗಿ ಅಷ್ಟೆನಾ?’ ಎಂದು ಕೇಳಿದರು. ನಾನು ‘ಇಲ್ಲ’ ಎಂದೆ. ‘ಹಾಗಿದ್ದರೆ ಮಾಧ್ಯಮವೂ ಸೇರಿದಂತೆ ಎಲ್ಲವೂ ಕಲಬುರ್ಗಿ ಕೇಂದ್ರಿತವೇ ಆಗಿವೆಯಲ್ಲ’ ಎಂದು ಸಾತ್ವಿಕ ಸಿಟ್ಟು ಪ್ರದರ್ಶಿಸಿದರು.

ಅವರ ಮನದ ಇಂಗಿತವನ್ನು ಅರಿಯುವ ಸಲುವಾಗಿಯೇ ಇನ್ನಷ್ಟು ಮಾತನಾಡುವ ಉತ್ಸಾಹ ತೋರಿಸಿದೆ. ಕಲಬುರ್ಗಿಗೆ ಸಿಗುತ್ತಿರುವ ಪ್ರಾಮುಖ್ಯತೆಯಿಂದಾಗಿ ಅವರ ಮನಸ್ಸಿನಲ್ಲಿ ಅತೃಪ್ತ ಭಾವನೆ ಇರುವುದು ತಿಳಿಯಿತು.

ರಾಯಚೂರಿನಲ್ಲಿ ಸಾಹಿತಿಯೊಬ್ಬರ ಜೊತೆಗಿನ ಮಾತುಕತೆ ಗಂಭೀರ ಚರ್ಚೆಯಾಗಿ ಮಾರ್ಪಟ್ಟಿತು.

‘ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಶಂಕರಗೌಡ ಬೆಟ್ಟದೂರು ಅವರು ಚಿತ್ರಕಲೆಯಲ್ಲಿ ಬಹುದೊಡ್ಡ ಹೆಸರು. ಅವರು ರವೀಂದ್ರನಾಥ ಟ್ಯಾಗೋರರ ಶಾಂತಿನಿಕೇತನದಲ್ಲಿ ಕಲಾ ಪದವಿ ಪಡೆದ ಮೊದಲ ಕನ್ನಡಿಗ. ಬಹುಮುಖ ಪ್ರತಿಭೆ. ಆದರೂ ಅವರ ಹೆಸರನ್ನು ಹೇಳಲು ಹಿಂದುಮುಂದು ನೋಡಲಾಗುತ್ತದೆ. ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ರಾಯಚೂರು ಜಿಲ್ಲೆಯ ಪಂಡಿತ ತಾರಾನಾಥ್, ಪುಂಡಲೀಕಪ್ಪ ಜ್ಞಾನಮೋಠೆ, ಮರಡಿ ಭೀಮಜ್ಜ ಪ್ರಮುಖರಾಗಿದ್ದರು. ಆದರೆ ಇತಿಹಾಸದಲ್ಲಿ ಅವರ ಹೆಸರು ಪ್ರಧಾನವಾಗಿ ದಾಖಲಾಗುವುದೇ ಇಲ್ಲ ಏಕೆ’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು. ಚರ್ಚೆ ಮತ್ತಷ್ಟು ಗಂಭೀರತೆ ಪಡೆದುಕೊಂಡಿತು.

2014 ನೇ ಸಾಲಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾದ 16 ವಿವಿಧ ಪ್ರಶಸ್ತಿಗಳಿಗೆ ಗಣ್ಯರನ್ನು ಆಯ್ಕೆ ಮಾಡಲು ರಚಿಸಿದ ಸಮಿತಿಗಳಲ್ಲಿ ಕಲಬುರ್ಗಿಯವರು ಹೆಚ್ಚಾಗಿದ್ದರು.

‘ಗುಲಬರ್ಗಾ ವಿಶ್ವವಿದ್ಯಾಲಯ ವ್ಯಾಪ್ತಿಗೆ ಬೀದರ್, ಯಾದಗಿರಿ, ರಾಯಚೂರು ಸೇರಿದ್ದರೂ ಅಕಾಡೆಮಿಕ್ ಕೌನ್ಸಿಲ್ ಮತ್ತು ಸಿಂಡಿ
ಕೇಟ್ ಸದಸ್ಯರ ನೇಮಕಾತಿಯಲ್ಲಿ ಸಿಂಹಪಾಲು ಕಲಬುರ್ಗಿಗೆ ಸಿಕ್ಕಿದೆ. ಸರ್ಕಾರದ ವಿವಿಧ ಅಕಾಡೆಮಿಗಳ, ಪ್ರಾಧಿಕಾರಗಳ ಅಧ್ಯಕ್ಷರ ಮತ್ತು ಸದಸ್ಯರ ನೇಮಕದಲ್ಲೂ ಕಲಬುರ್ಗಿ ಹೆಚ್ಚು ಪಾಲು ಪಡೆಯುತ್ತದೆ. ಪ್ರಶಸ್ತಿಗಳಲ್ಲೂ ಈ ಮಾತು ದಿಟ. ಉಳಿದ ಜಿಲ್ಲೆಗಳಲ್ಲಿ ಪ್ರತಿಭಾವಂತರು, ಅರ್ಹರು ಯಾರೂ ಇಲ್ಲವೆ’ ಎನ್ನುವ ಸಂಗತಿಗಳು ಚರ್ಚೆ ಸಂದರ್ಭದಲ್ಲಿ ಪ್ರಸ್ತಾಪವಾದವು.

ಕೊಪ್ಪಳದ ಚಿಂತಕರೊಬ್ಬರು ನನಗೆ ಹೀಗೊಂದು ಸಲಹೆ ಮಾಡಿದರು: ‘ನೀವು ಕಲಬುರ್ಗಿಗೆ ಹೋಗಿ ಹೈದರಾಬಾದ್ ಕರ್ನಾಟಕದಲ್ಲಿ ಒಳ್ಳೆಯ ನಾಟಕಕಾರ ಯಾರು? ಉತ್ತಮ ಚಿತ್ರ ಕಲಾವಿದ ಯಾರು? ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದ ಪ್ರಮುಖರು ಯಾರು? ಎಂದು ಕೇಳಿ. ಅವರು ಹೇಳುವ ಹೆಸರುಗಳು ಕಲಬುರ್ಗಿಯವರದೇ ಆಗಿರುತ್ತವೆ’ ಎಂದು ಖಚಿತ ಧ್ವನಿಯಲ್ಲಿ ಹೇಳಿದರು.

ಬೀದರ್‌ನ ಹಿರಿಯರೊಬ್ಬರ ತಕರಾರು ಹೀಗಿತ್ತು: ‘ಹೈದರಾಬಾದ್ ಕರ್ನಾಟಕ ಎಂದರೆ ಕಲಬುರ್ಗಿಯೇ ಎನ್ನುವ ಮನಸ್ಥಿತಿಯನ್ನು ನಿರ್ಮಾಣ ಮಾಡಲಾಗಿದೆ. ಎಲ್ಲವೂ ತಮಗೇ ಬೇಕು ಎನ್ನುವ ಭಾವನೆ ಅವರಲ್ಲಿ ಬೇರೂರಿದೆ. ಈ ಭಾಗದ ಆಡಳಿತ ಸಂಪೂರ್ಣ ಕಲಬುರ್ಗಿ ಕೇಂದ್ರಿತವಾಗಿದೆ. ದೊಡ್ಡ ದೊಡ್ಡ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ವಿಭಾಗೀಯ ಕಚೇರಿಗಳು ಅಲ್ಲಿಯೇ ಇವೆ. ಬೀದರ್ ಜಿಲ್ಲೆಯಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ ಮಾಡಲಾಗುತ್ತದೆ. ಆದರೆ ಡೇರಿ ಇರುವುದು ಕಲಬುರ್ಗಿಯಲ್ಲಿ! ಕಲಬುರ್ಗಿಗೆ ಹೈಕೋರ್ಟ್ ಸಂಚಾರಿ ಪೀಠ ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ನೀಡುವ ಹೋರಾಟಕ್ಕೆ ನಾವೆಲ್ಲ ಒತ್ತಾಸೆಯಾಗಿ ನಿಂತೆವು. ಆದರೆ, ಕಲಬುರ್ಗಿಯವರು ಯಾವುದಾದರೂ ಸವಲತ್ತು ಬಂದರೆ ನಮ್ಮತ್ತ ನೋಡುವುದೇ ಇಲ್ಲ’ ಎಂದು ಬೇಸರಿಸಿದರು.

ಬೀದರ್‌ನಲ್ಲಿ 600 ವರ್ಷಗಳ ಹಿಂದೆಯೇ ಮಹಮ್ಮದ್ ಗವಾನ್ ವಿಶ್ವವಿದ್ಯಾಲಯ ಇತ್ತು. ದೇಶ, ವಿದೇಶಗಳ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಬರುತ್ತಿದ್ದರು. ಇಲ್ಲಿನ ಹವಾಗುಣವೂ ಚೆನ್ನಾಗಿದೆ. ಹೀಗಾಗಿ ಬೀದರ್ ಅನ್ನು ಈ ಭಾಗದ ಶೈಕ್ಷಣಿಕ ಕೇಂದ್ರವನ್ನಾಗಿ ಏಕೆ ರೂಪಿಸಬಾರದು ಎನ್ನುವ ಪ್ರಶ್ನೆಯನ್ನೂ ಮುಂದಿಟ್ಟರು.

ಕೊಪ್ಪಳ ಜಿಲ್ಲಾ ಕೇಂದ್ರವಾಗಿ 18 ವರ್ಷಗಳು ಕಳೆದು ಹೋಗಿವೆ. ಆದರೆ, ಅದು ಇನ್ನೂ ತಾಲ್ಲೂಕು ಕೇಂದ್ರಕ್ಕಿಂತ ಹೆಚ್ಚೇನೂ ಅಭಿವೃದ್ಧಿ ಹೊಂದಿಲ್ಲ. ಹೊಸ ಯೋಜನೆಗಳು ಅಲ್ಲಿಗೆ ತಲುಪಿಲ್ಲ.

ಆರು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆ ರಚನೆ ಆಯಿತು. ಆದರೂ ಅಲ್ಲಿಯ ಜನರು ಮಾನಸಿಕವಾಗಿ ಕಲಬುರ್ಗಿಯೊಂದಿಗೇ ಇದ್ದಾರೆ. ರಾಜಕೀಯ ಕಾರಣಕ್ಕಾಗಿ ಈ ಜಿಲ್ಲೆಗೆ ಫಿಯಟ್ ರೈಲ್ವೆ ಬೋಗಿ ತಯಾರಿಕಾ ಘಟಕ ಮತ್ತು ಜವಳಿ ಪಾರ್ಕ್ ದೊರೆತಿವೆ. ಆದರೆ ಅಭಿವೃದ್ಧಿ ದೃಷ್ಟಿಯಿಂದ ಈ ಜಿಲ್ಲೆಯೂ ಹಿಂದುಳಿದಿದೆ.

ಬಳ್ಳಾರಿ ಜಿಲ್ಲೆ ತಾಂತ್ರಿಕವಾಗಿ ಹೈದರಾಬಾದ್ ಕರ್ನಾಟಕದಲ್ಲಿದೆ. ಮಾನಸಿಕವಾಗಿ ದೂರವೇ ಉಳಿದಿದೆ. ಈ ಕುರಿತು ಬಳ್ಳಾರಿಯ ಸ್ನೇಹಿತರೊಬ್ಬರನ್ನು ಮಾತನಾಡಿಸಿದಾಗ, ‘ಬಳ್ಳಾರಿ ಜಿಲ್ಲೆ ಚಾರಿತ್ರಿಕವಾಗಿ ಎಂದಿಗೂ ಹೈದರಾಬಾದ್ ಕರ್ನಾಟಕಕ್ಕೆ ಸೇರಿರಲಿಲ್ಲ. ಇದು ಮದ್ರಾಸ್ ಪ್ರಾಂತ್ಯದಲ್ಲಿತ್ತು. ಆದರೆ, ರಾಜಕೀಯ ಮತ್ತು ಆಡಳಿತಾತ್ಮಕ ಕಾರಣಕ್ಕಾಗಿ ಹೈದರಾಬಾದ್ ಕರ್ನಾಟಕಕ್ಕೆ ಸೇರ್ಪಡೆ ಆಯಿತು. ಇದರಿಂದ ಈ ಭಾಗದ ಜನರಿಗೆ ಅನ್ಯಾಯ ಮಾಡಿದಂತಾಗಿದೆ’ ಎಂದು ಪ್ರಾಮಾಣಿಕವಾಗಿಯೇ ಹೇಳಿದರು.

ಕಲಬುರ್ಗಿಯಲ್ಲಿ ರಾಜಕೀಯವಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಭಾವ ಬೀರುವ ರಾಜಕೀಯ ನಾಯಕರು ಇದ್ದಾರೆ. ಅವರು ಉಳಿದ ಜಿಲ್ಲೆಗಳ ರಾಜಕೀಯ ಅಧಿಕಾರ, ಇತ್ಯಾದಿಗಳನ್ನು ನಿರ್ಧರಿಸುತ್ತಾರೆ. ಆದರೆ, ಉಳಿದ ಜಿಲ್ಲೆಗಳ ರಾಜಕಾರಣಿಗಳು ಇವರಂತೆ ಮುಂದಾಳಾಗುವ ಬದಲು ಅವರ ಹಿಂಬಾಲಕರಾಗಿದ್ದಾರೆ. ಇದೇ ಸಮಸ್ಯೆ.

ಎಲ್ಲ ಸವಲತ್ತು, ಸೌಲಭ್ಯಗಳನ್ನು ಬಲಾಢ್ಯರು, ಪ್ರಭಾವಿಗಳು, ಲಾಬಿ ಮಾಡುವವರು ಪಡೆದುಕೊಂಡರೆ ಉಳಿದವರ ಪಾಡೇನು? ಇವರಿಗೆ ಜೋರು ಧ್ವನಿಯಲ್ಲಿ ಕೇಳುವ ಶಕ್ತಿ ಇಲ್ಲ. ಅದನ್ನು ದುರುಪಯೋಗ ಪಡಿಸಿಕೊಳ್ಳುವುದು ಎಷ್ಟು ಸರಿ? ಎಲ್ಲಿ ತಾರತಮ್ಯ, ಅಸಮಾತನೆ, ಮಲತಾಯಿ ಧೋರಣೆ ಇರುತ್ತದೆಯೋ ಅಲ್ಲಿ ಅತೃಪ್ತಿ, ಅಸಮಾಧಾನ, ಪ್ರತ್ಯೇಕತೆಯ ಭಾವನೆ ಬಲವಾಗುತ್ತದೆ.

ಮನೆ ಯಜಮಾನ ತನ್ನೆಲ್ಲ ಸಂಪತ್ತನ್ನು ಎಲ್ಲ ಮಕ್ಕಳಿಗೂ ಸಮಾನವಾಗಿ ಹಂಚುತ್ತಾನೆ. ಅವರಲ್ಲಿ ಯಾರಾದರೂ ದುರ್ಬಲರು ಇದ್ದರೆ ಅವರ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾನೆ. ಅದೇ ರೀತಿ ಹೊಸ ಜಿಲ್ಲೆಗಳಾದ ಯಾದಗಿರಿ, ಕೊಪ್ಪಳಕ್ಕೆ ಕೊಂಚ ಹೆಚ್ಚು ಪಾಲು ಕೊಡುವುದು ತಪ್ಪಲ್ಲ.

ಈ ಭಾಗಕ್ಕೆ ಬರುವ ಬೃಹತ್ ಯೋಜನೆಗಳನ್ನು ಇತರೆ ಜಿಲ್ಲೆಗಳಿಗೆ ಆದ್ಯತೆ ಮೇಲೆ ನೀಡಬೇಕು. ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ಅನುದಾನವನ್ನು ಹೀಗೆಯೇ ಹಂಚಬೇಕು.

ನಿರ್ಣಾಯಕ ಜಾಗದಲ್ಲಿರುವ ರಾಜಕಾರಣಿಗಳು ತಾವೇ ಮೊದಲಿಗರಾಗಿ, ಇತರರಿಗೂ ಕೊಡುವ ಗುಣವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ತಾವು ಕೇವಲ ರಾಜಕಾರಣಿಗಳಲ್ಲ, ಮುತ್ಸದ್ದಿಗಳು ಎನ್ನುವುದನ್ನು ನಿರೂಪಿಸಬೇಕು. ಕಲಬುರ್ಗಿಯ ‘ಪ್ರಭಾವಿ ನಾಯಕರು’ ಮನೆ ಯಜಮಾನರಂತೆ, ದೊಡ್ಡಣ್ಣರಂತೆ ನಡೆದುಕೊಳ್ಳಬೇಕು.

ಮೊನ್ನೆ ಪಾಟೀಲ ಪುಟ್ಟಪ್ಪನವರು ಕಲಬುರ್ಗಿಗೆ ಬಂದಿದ್ದರು. ಅವರು ಎಂದಿನಂತೆ ‘ಹೈದರಾಬಾದ್ ಕರ್ನಾಟಕ ಹಿಂದುಳಿಯಲು ಬೆಂಗಳೂರು, ಮೈಸೂರು ಕೇಂದ್ರೀಕೃತ ಮಲತಾಯಿ ಧೋರಣೆಯ ರಾಜಕೀಯವೇ ಕಾರಣ’ ಎಂದು ಹೇಳಿದರು. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ದಶಕಗಳ ನಂತರ ‘ಕಲಬುರ್ಗಿ ಕೇಂದ್ರಿತ ಮಲತಾಯಿ ಧೋರಣೆಯ ರಾಜಕಾರಣದಿಂದಾಗಿಯೇ ಹೈದರಾಬಾದ್ ಕರ್ನಾಟಕದ ಉಳಿದ ಜಿಲ್ಲೆಗಳು ಅಭಿವೃದ್ಧಿ ಹೊಂದಲಿಲ್ಲ’ ಎಂದು ಯಾರಾದರೂ ಹಿರಿಯರು ಕಿರಿಯರಿಗೆ ಹೇಳಿದರೆ ಆಶ್ಚರ್ಯಪಡಬೇಕಾಗಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.