ಬಹಳ ಹಿಂದೆ, ನಾನು ಶಿವಮೊಗ್ಗೆಯಲ್ಲಿದ್ದ ಸಮಯ, ಮಾಸ್ಟರ್ ಹಿರಣ್ಣಯ್ಯ ಅವರ ಲಂಚಾವತಾರ ಮತ್ತು ಭ್ರಷ್ಟಾಚಾರ ನಾಟಕಗಳು ಬಂದಿದ್ದುವು. ಜಾತ್ರೆಯಂತೆ ಜನ ನೋಡಲು ಹೋಗುತ್ತಿದ್ದರು. ಕರ್ನಾಟಕ ತುಂಬ ಜಯಭೇರಿ ಹೊಡೆದ ನಾಟಕಗಳು ಅವು.

ಮಾತಿನ ಚೂರಿಯನ್ನು ಛಕಛಕನೆ ಝಳಪಿಸುತ್ತ ಲಂಚಾವತಾರಿಗಳನ್ನು ಇರಿಯುತ್ತ, ವ್ಯಂಗ್ಯ ಗಹಗಹಗಹಿಸುತ್ತ, ಮಾತು ಮುಗಿಸಿದ್ದೇ, ಹೇಗೆ, ನಾನು ಹೇಳಿದ್ದು, ನಿಮ್ಮ ಮಾತೇ ತಾನೆಎಂದು ಪ್ರೇಕ್ಷಕರನ್ನು ಕೇಳುವಂತೆ ತನ್ನದೇ ವಿಶಿಷ್ಟ ವಾರೆಭಂಗಿಯಲ್ಲಿ ತುಯ್ಯುತ್ತ ನಿಲ್ಲುತ್ತಿದ್ದ ಚಾರಿತ್ರಿಕ ಮಹತ್ವದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ. ತಾನು ಒಂಚೂರೂ ನಗದೆ ಪ್ರೇಕ್ಷಕರನ್ನು ಹೊಟ್ಟೆತುಂಬ ನಗಿಸಿ ಕಣ್ಣಲ್ಲಿ ನೀರು ಉಕ್ಕಿಸುತಿದ್ದುದು ಈಗ ಕಂಡಂತಿದೆ.

ಆಗ ಯಾರು ಸಿಕ್ಕಿದರೂ ಆ ನಾಟಕಗಳದೇ ಸಮಾಚಾರ. `ಡಿ. ಸಿ. ಬಂದಿದ್ದರು, ಎದೂರು ಸುಮ್ಮನೆ ಗಪ್ಚಿಪ್ ಕುಳಿತಿದ್ದರು, ತಾಶೀಲ್ದಾರರು ಬಂದಿದ್ದರು, ತುಟಿಪಿಟಕ್ಕೆನ್ನದೆ ಕುಳಿತಿದ್ದರು, ಆರ್. ಟಿ. ವೊ. ಅಂತೂ ಬಿದ್ದೂ ಬಿದ್ದೂ ನಗುತಿದ್ದರೂ ಅಷ್ಟಿಷ್ಟಲ್ಲ, ಮತ್ತೆ ಎಸ್ಐ, ಎಸ್ ಪಿ. . .ಅಯ್ಯ್!~ ಅಂತೆಲ್ಲ ವಿವರಿಸುವುದು, ನೆನೆನೆನೆದು ನಗುವುದು, ನೆನೆನೆನೆದು ನಗುವುದು.

ನಾಟಕ ನೋಡಲು ಬಂದ ಸರಕಾರೀ ಹಿರಿಯ ನೌಕರರನ್ನೂ ನಾಟಕ ನೋಡುವಷ್ಟೇ ಖುಶಿಯಲ್ಲಿ ಗಮನಿಸುತ್ತ ಅವರ ಪ್ರತಿಕ್ರಿಯೆಯನ್ನು ಪಕ್ಕದವರಿಗೂ ತೋರಿಸಿ ತಮ್ಮಳಗೆ ಮಾತಾಡಿಕೊಳ್ಳುತ್ತ ನಗುತ್ತ, ಎಡೆಯಲ್ಲಿ ತಾವೂ ನಾಟಕ ನೋಡುತ್ತಿದ್ದ ನಗುತ್ತಿದ್ದ ಪ್ರೇಕ್ಷಕರು. ನಮಗೆಲ್ಲ ನಾಟಕ ನೋಡುವುದೇ ಒಂದು ಮಜವಾಗಿ ಬಿಟ್ಟಿತು ಹೊರತು, ಲಂಚಾವತಾರ ನಿಂತಿತೆ?

ಒಬ್ಬೊಬ್ಬೊಬ್ಬರು ಎರಡೆರಡು ಮೂರುಮೂರು ಬಾರಿ ನೋಡಿದೆವು, ಹದಿನಾರು ಬಾರಿ ನೋಡಿದೆ ಎಂದು ದಾಖಲೆ ನಿರ್ಮಿಸಿದೆವು, ಸಮಯ ಸಂದರ್ಭದಲ್ಲಿ ಅದರ ಡಯಲಾಗು ಹೊಡೆದೆವು, ನಕ್ಕೆವು, ನಗಿಸಿದೆವು, ಹೊರತು ನಗೆಯ ಉರಿಯಲ್ಲೇ ನಾಟಕ ಎಚ್ಚರಿಸಿದರೂ ನಾವು ಎದ್ದೆವೆ? ಕೇವಲ ಮನರಂಜನೆಗಾಗಿಯೇ ಹಿರಣ್ಣಯ್ಯ ಅಷ್ಟೆಲ್ಲ ಶ್ರಮ ಪಟ್ಟರೇನು, ಅಲ್ಲವಲ್ಲ.

ಹಾಗಾದರೆ ನಮ್ಮ ಎಚ್ಚರವೇಕೆ ಮೆಚ್ಚುವಲ್ಲಿಗೇ ಮುಗಿಯಿತು? ಲಂಚಾವತಾರ ಭ್ರಷ್ಟಾಚಾರ ಏಕೆ ಮುಂದರಿಯಿತು? ಅದು ನಡೆದು ಎಷ್ಟೋ ವರ್ಷಗಳೇ ಸಂದರೂ ಅದನ್ನು ನೋಡಿದ ನೆನಪು ಮಾಸದಾದರೂ ಅಂದಿನ ಆ ಅನುಭವ ಕ್ರಿಯಾಶೀಲವಾಗದೆ ಹೋಯಿತು ಏಕೆ?

ಲಂಚ ತಿನ್ನುವುದಿಲ್ಲವೆಂದರೆ ಅವ ಪ್ರಾಣಿಯಿರಬೇಕು. ಸಣ್ಣಮಕ್ಕಳಿಗೂ ಲಂಚ ಕೊಡದೆ ಒಮ್ಮಮ್ಮೆ ಕೆಲಸ ಆಗದು ಗೊತ್ತೆ? ಅಂತೆಲ್ಲ ಹೇಳುತ್ತೇವೆ. ಲಂಚ ತಿನ್ನುವುದಿಲ್ಲವೆನ್ನಬಹುದು. ಹಾಗೆಯೇ ನಡೆಯಬಹುದು ಕೂಡ.

ಆದರೆ ಲಂಚ ಕೊಡುವುದಿಲ್ಲವೆನ್ನಲು ಆಗದೇ ಆಗದು. ಕೊಡುವುದಿಲ್ಲ ಎಂದರೆ ನಾವು ಇದ್ದಲ್ಲಿಯೇ ಇರಬೇಕು ಅಂತಲೂ ಹೇಳುತ್ತೇವೆ. (ನಾವು ವಾಹನವನ್ನು ಸರಿಯಾಗಿಯೇ ನಡೆಸಬಹುದು, ಎದುರಿದ್ದವರು ಹಾಗೆ ನಡೆಸುವರೆಂದು ಏನು ಗ್ಯಾರಂಟಿ?

ಎಂದರು ಒಬ್ಬರು ಈ ಮಾತಿಗೆ ಊತಕೊಡುತ್ತ. ಅದಕಿದಕ್ಕೆ ಏನು ಸಂಬಂಧ, ಯೋಚಿಸುತ್ತಿರುವೆ). ಲಂಚವೆಂಬುದು ಪಂಚತಂತ್ರದಲ್ಲಿಯೂ ಇದೆ, ಇತಿಹಾಸದಲ್ಲಿಯೇ ಇದೆ, ತೆನಾಲಿ ರಾಮ ಮತ್ತು ಕಾವಲುಗಾರರು ಕತೆ? ಮನುಷ್ಯ ಮತ್ತು ಆಮಿಷ ಒಂದು ಜೋಡುಶಬ್ದ. . .ಇತ್ಯಾದಿ ಮಾತಾಡಿಕೊಳ್ಳುತ್ತೇವೆ.

ಎಂದರೆ ನಾವದನ್ನು ಈಗಾಗಲೇ ಒಂದು ಮಟ್ಟದವರೆಗೆ ಒಪ್ಪಿಕೊಂಡವರು, ಅದನ್ನು ಇಲ್ಲಿವರೆಗೆ ನಡೆಯುವಂತೆ ನೋಡಿಕೊಂಡವರು ಕೂಡ. ಬೆಳೆಸುತ್ತಿರುವುದು ರಕ್ಕಸನನ್ನು ಎಂದು ತಿಳಿದೂ, ತಿಳಿಯದವರಂತೆ, ನಾಳಿನ ಯೋಚನೆ ಇಲ್ಲದೆ, ಈ ಕ್ಷಣವೊಂದು ದಾಟಿದರೆ ಸಾಕೆಂದು ನಮ್ಮ ಕಾರ್ಯ ಸಾಧಿಸಿಕೊಂಡವರು. ಈಗ ಹೈರಾನಾದರೆ?

ಮೂರ್ಖರಿಗೆ, ದಡ್ಡರಿಗೆ ಗದರುವ ಒಂದು ವಾಕ್ಯವಿತ್ತು `ನೀನು ಅನ್ನ ತಿನ್ನುವುದಿಲ್ಲನ?~ ಅಂತ. ಅದು ಆಗಿನ ಮಾತಾಯಿತು. ಈಗ ಅನ್ನ ತಿನ್ನುವುದೇ ಹಳೆಯ ಫ್ಯಾಷನ್ಗೆ ಸೇರಿಹೋಗಿದೆ. ಈಗೆಲ್ಲ ದುಡ್ಡು ತಿಂದು ಬೆಳೆವ ಕಾಲ.

ಭೂಸ್ವಾಧೀನ ಪ್ರಕ್ರಿಯೆ ಇಷ್ಟು ಸಾಮಾನ್ಯವಾಗಿರುವ ಕಾರಣವೂ ಇದುವೇ. ಅನ್ನದ ಹಂಗೇ ಇಲ್ಲದ, ದುಡ್ಡನ್ನೇ ತಿನ್ನುವ ಇವತ್ತಿನ ಮಟ್ಟಿಗೆ ಅದು ಸರಿ ಕೂಡ ಎಂದು ನಮ್ಮಲ್ಲಿನ ಒಬ್ಬ ಸಂಶೋಧಕರ ಅಂಬೋಣ.

ಈ ದೇಶ ತುಂಬ ಊರು ತುಂಬ ಅವೇ ಅವೇ ದೊಡ್ಡ ದೊಡ್ಡ ಭ್ರಷ್ಟ ಕತೆಗಳು. ಮೊನ್ನೆಮೊನ್ನೆಯವರೆಗೂ -ಬಹುತೇಕ -ಇಲ್ಲೇ ಟ್ಯಾಕ್ಸ್ ಆಫೀಸಿನಲ್ಲೋ ಆರ್. ಟಿ. ಓ., ತಾಲೂಕು ಆಫೀಸುಗಳಲ್ಲೋ ಸ್ಥಳ ರಿಜಿಸ್ಟ್ರೇಶನ್ಗಳಲ್ಲೋ ಒಟ್ಟು ಸರಕಾರಿ ಕಛೇರಿಗಳಲ್ಲಿ `ಕಂಬಕಂಬಕ್ಕೆ~, `ಮೇಜುಮೇಜಿಗೆ~ ದುಡ್ಡು `ತಿನ್ನಿಸುವ~ ಸಂಗತಿಗಳೇ, ಇವತ್ತಿನ ಲೆಕ್ಕದಲ್ಲಿ `ಕಾಸು ಕೊಸರು~ ಪ್ರಸಂಗಗಳೇ ಇದ್ದುವು.

ಎಷ್ಟೆಂದರೆ ಅವು ವಾಸ್ತವತೆಯನ್ನು ಕಳಚಿ ಕತೆಗಳಂತೆ, ದಂತಕತೆಗಳಂತೆಯೂ, ಮನೆಮನೆಗಳ ಕತೆಗಳಾಗಿಯೂ ಬಾಳಿಕೊಂಡು, ಜನರ ತಿಳುವಳಿಕೆಗೆ ನಿಲುಕುವಂತಹವಾಗಿದ್ದುವು.

ಪಾಪದವು, ನಾಟಕಗಳಲ್ಲಿಯೂ ಕಥಾಸಾಹಿತ್ಯದಲ್ಲಿಯೂ ಕಾಣಿಸಿಕೊಂಡು, ಮತ್ತೆ ವಾಸ್ತವದ ಪಾತಳಿಗೆ ಇಳಿದು ಅವವೇ ಕತೆಗಳಾಗಿ ಪುಟಗಳಿಗೆ ರಂಗಸ್ಥಳಕ್ಕೆ ಮರಳುತಿದ್ದವು.

ಈಗಾದರೋ ನಮ್ಮ ರಾಜಾ ರಾಣಿ ಗುಲಾಮ ಎಲ್ಲರೂ ದುಡ್ಡು ತಿನ್ನುವ ಎಷ್ಟು ಕೇಳಿದರೂ ಮುಗಿಯದ ಬರೆದಷ್ಟೂ ಮಿಗುತ್ತ ಗಲಿಬಿಲಿಯಾಗುವ, ಎಷ್ಟು ಓದಿದರೂ ತಿಳಿಯದ, ಕದಡಿ ಕುಡಿಸಿದರೂ ನಂಬಲಿಕ್ಕಾಗದ, ಧಾರಾವಾಹಿ ರೂಪದಲ್ಲಿ ಹರಿಯುತ್ತಲೇ ಇರುವ, ಬೃಹತ್ ಕಥಾಕೋಶಗಳೇ ಸೃಷ್ಟಿಯಾಗಿವೆ. ಗುಣವೇ ಆಗದ ಅಂಟುರೋಗವಾಗಿ ಮಾರ್ಪಟ್ಟಿವೆ.

ಸುದ್ದಿಯಾಗಿ ಪತ್ರಿಕೆಗಳ ಮುಂಪುಟದಲ್ಲೇ ಪ್ರಕಟವಾಗುತ್ತವೆ, ಪುಸ್ತಕಗಳಾಗಿ ಮಾರುಕಟ್ಟೆಗೆ ಬಂದಿವೆ, ಧೈರ್ಯವಾಗಿ ಬಿಕರಿಯಾಗುತ್ತಿವೆ, ನಗೆ ನಾಚಿಕೆ ಲಜ್ಜೆಯೆಲ್ಲವೂ ಆಗಲೇ ಮಾರಿಹೋಗಿವೆ.

ಬಟ್ಟೆ ಪಾತ್ರೆ ಕದ್ದ ಸಣ್ಣ ಅಪರಾಧಿಗೆ ಬೇರೆಯೇ ಜಾಗ, ಬೇರೆಯೇ `ಟ್ರೀಟ್ಮೆಂಟ್~ ಛಡಿಯೇಟು. ಲಾಕಪ್ ಡೆತ್, ಇತ್ಯಾದಿ.

`ವಿಶೇಷ~ ಅಪರಾಧಿಗಳಿಗೆ ವಿಶೇಷ ಜೈಲು. ಟಿವಿಗೀವಿ ಏಸಿಗೀಸಿ. ಅಂದರೆ ಎಲ್ಲ ಕಡೆ ಇರುವಂತೆ ಕಳ್ಳತನದಲ್ಲಿಯೂ ತರತಮಗಳಿವೆ. ಅಸಮಾನತೆ ಇದೆ. ಈ ತರತಮಗಳ ಅನುಪಾತ ಬೇರೆಬೇರೆ.

ನಮಗೆ ಶಾಲೆಯಲ್ಲಿ ಕಲಿಸಿದ ವಿಲೋಮ ಅನುಲೋಮ ಅನುಪಾತದ ಲೆಕ್ಕಕ್ಕೂ ಇದಕ್ಕೂ ಅರ್ಥಾರ್ಥ ಹೊಂದಿಕೆಯಿಲ್ಲ. ಲೆಕ್ಕ ತಲೆಕೆಳಗಾಯಿತೆಂದರೆ ಕಾಲವೇ ತಲೆಕೆಳಗಾದ ಹಾಗೆ.

ಎಂದಾಗ ಗ್ಲಾನಿಗೆ ತಕ್ಕಂತೆ `ಅಣ್ಣಾನಂತಹ ಶ್ರೀಸಾಮಾನ್ಯ ರೂಪಿ~ ಅವತರಿಸುವುದು ಸಹಜವೇ ತಾನೆ?

ಅಣ್ಣಾ ಭಾವಚಿತ್ರ ಮಾಧ್ಯಮಗಳಲ್ಲಿ ಬರಲು ತೊಡಗಿದ ಲಾಗಾಯ್ತಿನಿಂದಲೂ ನನಗೆ ಈ ಮನುಷ್ಯನನ್ನು ಎಲ್ಲೋ ನೋಡಿರುವೆನಲ್ಲ ಅಂತಲೇ. ಎಲ್ಲಿ ಅಂದರೆ ಹೊಳೆಯುತ್ತಿಲ್ಲ. ಅತ್ತ ಗಾಂಧಿಯವರನೂ ಇತ್ತ ಲಾಲಬಹದ್ದೂರ್ ಶಾಸ್ತ್ರಿಯವರನ್ನೂ ಹೋಲುವ, ಹೋಲಿಕೆ ಇದ್ದೂ ಹಾಗಲ್ಲದ ಆತನ ಬೊಚ್ಚುಬಾಯಿ, ಮುಗ್ಧವೆನಿಸುವ ಚರ್ಯೆ, ಹೊಡೆದೆದ್ದು ಹೂಂಕರಿಸದ, ಮೃದುವಾಗಿ ಇದ್ದೂ ಸಣ್ಣಗೆ ಇದ್ದೂ ಅತ್ತಿತ್ತ ಕದಲದ ದೃಢ ಧ್ವನಿ, `ಅಜ್ಜಯ್ಯ~ನಂತಹ ಕಣ್ನಗೆ, ಈಗಷ್ಟೇ ಗದ್ದೆಕೆಲಸದಿಂದ ಹಿಂದಿರುಗಿ ಕೈಕಾಲು ತೊಳೆದು ಮನೆಮಂದಿಯೆದುರು ಬಂದು ಕುಳಿತಂತಹ ಭಂಗಿ.

ನಮ್ಮಳಗೊಬ್ಬನಾಗಿ ಕಾಣುವ ಜೊತೆಗೇ ನಾವು ಬಯಸುವ ಒಬ್ಬ ಸರಳ ನೇರ ಜಿಗುಟು ಸಾಚಾ ಬೋಳೇ ಮನುಷ್ಯನಾಗಿ ಕಾಣುವ ಅಣ್ಣಾ. ಜನ ಒಮ್ಮೆಗೇ ಕಿಂದರಿ ಜೋಗಿಯ ಹಿಂದೆ ಹೊರಟಂತೆ ಹೊರಡಲು ಇದೂ ಒಂದು ಕಾರಣವೇನೊ.

ನಮಗೆ ಹೆದರಿಸುವವರು ಬೇಡ, ನಮ್ಮನ್ನು ಮೀರಿ ಹೋಗುವ ಜಬರ್ದಸ್ತಿನವರು ಬೇಡ, ನಮ್ಮನ್ನು ಒಳಗೊಂಡೇ ನಮ್ಮಂತೆ ಇದ್ದೂ, ಪ್ರೀತಿ ಕಳೆಯದೆ ಸಮಸ್ಯೆಗಳಿಗೆ ಬಾಯಿಯಾಗಿ ಮಾತಾಡಬಲ್ಲ ವ್ಯಕ್ತಿತ್ವವನ್ನು ಅರಸುತಿದ್ದೆವೆ ನಾವು? ಅಣ್ಣಾ ಹಾಗಿದ್ದಾರೆ.
ಅವರು ಜನತೆಯನ್ನು ವಿಚಾರ ಬಲದಿಂದಲ್ಲದೆ ಬೇರಾವ ಬಗೆಯಿಂದಲೂ ಬೆಚ್ಚಿ ಬೀಳಿಸುವುದಿಲ್ಲ. ನೇತಾರಿಕೆಯ ಯಾವ ಹುಸಿಗತ್ತೂ ಇಲ್ಲದ ಯಾರೂ ಸನಿಹ ಸುಳಿಯಲು ಸಾಧ್ಯವೆನಿಸುವಂತಹ ಅವರ ಗಾತ್ರ, ವಿಚಾರ, ಭಾವದಿಂದಾಗಿಯೂ ಕೂಡ ಅವರನ್ನು ನವನೇತಾರನನ್ನಾಗಿ ಜನ ಆಯ್ದುಕೊಂಡಿದೆ.

ಮಾಧ್ಯಮಗಳ ಪಾಲು ಬಹಳವಿರಬಹುದು, ನಿಜವೇ. ಆದರೆ ಅದು ಎಷ್ಟೇ ಇರಲಿ. ಕೊನೆಗೂ ಯಾವುದೇ ವ್ಯಕ್ತಿ ನೇತಾರನಾಗಿ ಹೊಮ್ಮುವುದು ಅಷ್ಟು ಮಾತ್ರದಿಂದಲೇ ಅಲ್ಲ ಎಂಬುದು ಇತಿಹಾಸ ಸಾಬೀತು ಮಾಡಿದ ಸತ್ಯವಷ್ಟೆ?

ಅಣ್ಣಾ ಗುಂಪಿನಲ್ಲಿ ಆಸ್ತಿ ಪಾಸ್ತಿ ಮಾಡಿದವರು, ಭ್ರಷ್ಟರು ಸುಳ್ಳರು, ಬಂಡವಾಳ ಶಾಹಿಗಳು ಎಲ್ಲ ಸೇರಿ ಮೈಕು ಎತ್ತಿಕೊಂಡಿದ್ದಾರೆ ಅಂತಂದಾಗ ಆಘಾತವಾಗುವುದು ಸಹಜ. ಮುಂದಿಟ್ಟ ಹೆಜ್ಜೆ ತೊಡರಿ ಮೆಲ್ಲ ಹಿಂದೆ ಸರಿಯುವುದೂ ಸಹಜ.

ಆದರೆ, ಜನರ ನೆರೆ ಎಂಬುದೆ ಹಾಗಲ್ಲವೆ, ಅಲ್ಲಿ ಠಕ್ಕರು ಸುಳ್ಳರು ಉಂಡಾಡಿ ಗುಂಡಾಡಿಗಳು ಎಲ್ಲರೂ ಇದ್ದೇ ಇರುತ್ತಾರೆ. ಅವರು ಬೇಡ, ಇವರು ಬೇಡ ಎನ್ನುವುದರೊಳಗೆ ಪ್ರತ್ಯೇಕಿಸದ ರೀತಿಯಲ್ಲಿ ಅವರೆಲ್ಲ ಸೇರಿಕೊಂಡಾಗಿರುತ್ತದೆ.

ಆದರೆ ಅಲ್ಲಿ ಮೇಧಾ ಇದ್ದಾರೆ, ಕರ್ನಾಟಕ ಕಂಡ ಅತ್ಯಪರೂಪ ವ್ಯಕ್ತಿತ್ವದ ನಮ್ಮ ಸಂತೋಷ ಹೆಗ್ಡೆ ಇದ್ದಾರೆ, ಮತ್ತು `ಈ ದೇಶದ ಜನರು~ ಎಂದಾಗ `ಭಾರತೀಯ ಪ್ರಜೆಗಳು~ ಎಂದಾಗ ಯಾರು ಕಣ್ಮುಂದೆ ಬರುತ್ತಾರೋ ಅವರು ಸಹಸ್ರಸಹಸ್ರ ಸಂಖ್ಯೆಯಲ್ಲಿದ್ದಾರೆ.

ಆದ್ದರಿಂದ ದೋಷಗಳನ್ನು ದೋಷಿಗಳನ್ನು ಗಮನಿಸಿಯೂ, ನಾವೀಗ ಹೊರಟ ಗುರಿಯೇನು ಎಂಬಲ್ಲಿ ಮನಸನ್ನು ಸುಮ್ಮನೆ ಕೇಂದ್ರೀಕರಿಸಬೇಕಾಗಿದೆ.

ಭಾರೀ ದೊಡ್ಡ ಅಪರಾಧಿ ಯಾರು, ಎಲ್ಲಿನವರು, ಏನೆಲ್ಲ ಮಾಡಿದರು ಕೇಳುತ್ತ ಹೋದಂತೆ ಅವು ತಲೆಮೇಲಿಂದ ಹಾರಿ ಹೋಗುತ್ತವೆ. ಆ ಕ್ಷೇತ್ರಗಳು ಅವುಗಳ ಒಳಸುಳಿಗಳು ತಿಳುವಳಿಕೆಯೊಳಗೇ ಇಳಿಯುವುದಿಲ್ಲ.

ಉದಾಃ ಶೇರುಮಾರ್ಕೆಟಿನ ವ್ಯವಹಾರ ಎಲ್ಲರಿಗೂ ತಿಳಿಯುತ್ತದೆಯೇ? ಹಾಗೆ ತಿಳಿಯದ ಕ್ಷೇತ್ರಗಳು ಎಷ್ಟಿವೆ! ನಿತ್ಯ ಬದುಕನ್ನು ನಮ್ಮನಮ್ಮ ಕಷ್ಟಸುಖಗಳೊಂದಿಗೆ ಸಾಗಿಸಿಕೊಂಡು ಬರುವ ನಮಗೆ ತಿಳಿಯುವುದು ಒಂದೇ.

ನಾವು ನಾಗರಿಕ ಕೆಲಸಗಳಿಗಾಗಿ ವಿವಿಧ ವ್ಯವಹಾರಗಳಿಗೆ, ಆಫೀಸುಗಳಿಗೆ ಹೋದಾಗ ಅಲ್ಲಿ ಸಲೀಸಾಗಿ ಯಾವ ಅಡ್ಡ ತೊಂದರೆಗಳಿಲ್ಲದೆ ಕೆಲಸಗಳು ಆಗಬೇಕು. ನಮಗೆ ಅರ್ಥವಾಗದ ಸಬೂಬುಗಳನ್ನು ಹೇಳುತ್ತ ಲಂಚವೆಂದೇ ತಿಳಿಯದ ರೂಪದಲ್ಲಿ ವಸೂಲಿ ಮಾಡುತ್ತ ಕೆಲಸ ಮಾಡಿಕೊಡುವ ಕೊಡದಿರುವ ಸಂಗತಿಗಳಿಗೆ ಇನ್ನು ಪೂರ್ಣವಿರಾಮ ಬೀಳಬೇಕು.

ನಮ್ಮ ನೌಕರರಾದ ಅವರು ನಮ್ಮನ್ನು ಆಳುವವರಂತೆ ಅಥವಾ ಸರಕಾರ ನೇಮಿಸಿದ ಸುಲಿಗೆಗಾರರಂತೆ ವರ್ತಿಸದೆ ಸಾಭೀತಿಯಿಂದ, ಪ್ರಾಮಾಣಿಕವಾಗಿ, ಅವರವರ ಕೆಲಸ ಮಾಡಿಕೊಂಡು ಹೋಗಬೇಕು. ಸಂಚುವಂಚನೆಗೆ ಒಳಗಾಗುವ, ಟೊಪ್ಪಿ ಹಾಕಿಸಿಕೊಳ್ಳುವ ನಿರಂತರ ಭಯದಿಂದ ಆತಂಕದಿಂದ ಮುಕ್ತಿ ಸಿಗಬೇಕು.

ಗಂಡಸರೂ, ಮಾತ್ರವಲ್ಲ ಹೆಂಗಸರೂ, ವ್ಯವಹಾರ ಗೊತ್ತಿಲ್ಲದವರೂ ಯಾವ ಸರಕಾರೀ ಅಥವಾ ಖಾಸಗೀ ಆಫೀಸಿಗೆ ಹೋದರೂ ಹೆಡ್ಡುಬೀಳದೆ ಅವರ ಕೆಲಸ ಕಾರ್ಯ ಆಗುವಂತೆ ಅಲ್ಲಿರುವ `ನಮ್ಮ ಆಳುಮಕ್ಕಳು~ ನೋಡಿಕೋಬೇಕು.

ಗೋಪುರ ಕೆಡಹುವುದು, ಮೂರ್ತಿ ಒಡೆಯುವುದು, ಮಸೀದಿ ಚರ್ಚು ದೇವಾಲಯ ಕಟ್ಟುವುದು ಅಂತೆಲ್ಲ ಎಷ್ಟು ಕನಸುಗಳಿವೆ ನಮಗೆ.

ಆದರೆ `ರಾಮರಾಜ್ಯ~ವೆಂಬ -ಎಂದರೆ, ಶುದ್ಧಾಂಗ ಸ್ವಚ್ಛ ಆಡಳಿತದ ಸಚ್ಚಾರಿತ್ರ್ಯದ ರಾಜ್ಯವೆಂಬ ಅರ್ಥಮಾತ್ರದ- ಕನಸು? ಅದೇ ಇಲ್ಲದೆ ಹೋಯಿತೆ? ರಾಮರಾಜ್ಯ ನಿರ್ಮಾಣವಾದದ್ದೇ ಹೌದಾದರೆ ಯಾವ ಧರ್ಮದ ಯಾರ ದೇವರೂ ಮಂದಿರವೆಂದು ತನಗಾಗಿ ಕಟ್ಟುವ ಎಂತಹ ಸುಂದರ ಬಂದೀಖಾನೆಯಲ್ಲಿಯೂ ನೆಲೆಸಲಾರರು (ಆಗ ಅಷ್ಟು ಕೋಟಿ ಖರ್ಚೇ ಉಳಿದು ಹೋಯಿತು.)

ಅಣ್ಣಾ ಕಾಣುತ್ತಿರುವುದು ಭ್ರಷ್ಟಲೋಕದಲ್ಲಿನ ಕಕ್ಕಾಬಿಕ್ಕಿಯಲ್ಲಿ ನಮ್ಮಳಗಿದ್ದೂ ನಮಗೆ ಕಾಣದೆ ಹೋಗುತ್ತಿರುವ ಅಥವಾ ನಾವು ದೂರ ತಳ್ಳಿಕೊಂಡ, ಆ ಕನಸನ್ನು. ಅಂತಹ ಒಂದು ಕಲ್ಪನೆ ಇಳೆಗಿಳಿಯುವುದು ಸುಲಭವಲ್ಲ ಸರಿ, ಅದು ಸಾಧ್ಯವೂ ಇಲ್ಲವೇನೋ. ಆದರೆ ಕನಸು ಕಾಣುವುದನ್ನಂತೂ ಯಾರೂ ತಡೆಯಲಾರರಷ್ಟೆ?

ಕೊನೇಪಕ್ಷ ಆ ಕನಸನ್ನು ಜೀವಂತವಾಗಿ ಇಟ್ಟಲ್ಲಿ ಒಳ್ಳೆಯ, ಸ್ವಲ್ಪ ಲಜ್ಜೆಗಿಜ್ಜೆ ಇರುವ ಕಳ್ಳರನ್ನಾದರೂ ಕಳ್ಳತನಕ್ಕೆ ಮುಂಚೆ ತುಸು ಹೆದರಿಸೀತು. ದೇಶವಾಸಿಗಳು ಅನಾಥರಲ್ಲ, ಇಲ್ಲಿ ಹೇಳಕೇಳುವ ಒಂದು ಶಾಸನ ಇದೆ ಎಂದು ನೆನಪು ಮಾಡೀತು. ಹೆಣ್ಣು ಭ್ರೂಣಹತ್ಯೆ ತಪ್ಪು, ಕಾನೂನು ವಿರುದ್ಧ, ಅದು ಆಗುತ್ತಿಲ್ಲವೆ?

ಭ್ರೂಣದ ಲಿಂಗಪತ್ತೆ ಕಾನೂನು ವಿರುದ್ಧ, ಅದೂ ನಡೆಯುತ್ತಿಲ್ಲವೆ? ವರದಕ್ಷಿಣೆ ಸಾವುಗಳೇನು ನಿಂತಿವೆಯೆ? ಆದರೆ ಶಾಸನ ಅಥವಾ ಕಾನೂನೇ ಇಲ್ಲವಾದರೆ ಯಾರಿಗೂ ಯಾರ ಮೇಲೆಯೂ ನಿಯಂತ್ರಣವಿಲ್ಲದ, ಏನು ಮಾಡಿದರೂ ಯಾವ ಧಕ್ಕೆಯೂ ಆಗದ ಕರಾಳಸ್ಥಿತಿಯಷ್ಟೆ?

ಇವತ್ತಿನ ಅನೇಕ ಮಾರಕ ಅಪಾಯಗಳಲ್ಲಿ ಇದೂ ಒಂದು. ಏನೇ ದುಂಡಾವರ್ತಿಗೂ ತಮಗೆ ಏನೂ ಆಗದು ಎಂಬ ಧೈರ್ಯ. ತಾವು ತಪ್ಪಿಸಿಕೊಳ್ಳಬಹುದೆಂಬ ಭಂಡತನ.
ಅಣ್ಣಾ ಅಜೆಂಡಾದಲ್ಲಿ ಇನ್ನೂ ಅನೇಕವು ಸೇರಿಯೇ ಇಲ್ಲ.

ಕೃಷಿಭೂಮಿ, ಕಾಡು, ಆದಿವಾಸಿಗಳ ಬುಡಕಟ್ಟು ಸಮುದಾಯಗಳ ಬಿಕ್ಕಟ್ಟುಗಳು, ಹೆಣ್ಣುಮಕ್ಕಳ ದುರಂತಗಳು... ಹೇಳಹೋದರೆ ಅದೊಂದು ದೀರ್ಘಪಟ್ಟಿ. ನಮ್ಮ ಇರೋಮ್ ಶರ್ಮಿಳಾ ಉಪವಾಸದ ಕುರಿತು ಮಾಧ್ಯಮಗಳು, ಅಣ್ಣಾ ಕೂಡ, ಯಾಕೆ ಒತ್ತು ಕೊಡುತ್ತಿಲ್ಲ? ಭ್ರಷ್ಟಾಚಾರದಷ್ಟು ವ್ಯಾಪಕತೆ ದೌರ್ಜನ್ಯಕ್ಕೆ, ಅದರಲ್ಲಿಯೂ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಕ್ಕೆ, ಇಲ್ಲವೆಂದೆ?

ಸಮಾಜ ಯಾವುದಕ್ಕೆ ಸಾರಾಸಗಟಾಗಿ ಎದ್ದು ನಿಲ್ಲುತ್ತದೆ, ಯಾವುದನ್ನು ಸುಮ್ಮನೆ ಕೈಕಟ್ಟಿ ನಿಂತು ನೋಡುತ್ತಿರುತ್ತದೆ? ಅಂದಾಜು ಹೇಗೆ? ನಮ್ಮ ಧೀಮಂತ ನಾಯಕಿ ಮೇಧಾ ಪಾಟ್ಕರ್ ಅವರ ಆಂದೋಲನಕ್ಕೆ ಯಾಕೆ ಈ ಮಾದರಿ ಪ್ರತಿಕ್ರಿಯೆ ಸಿಕ್ಕಿಲ್ಲ?

ಸರಿಯೆ. ಆದರೆ - ಸದ್ಯ ಜನಲೋಕಪಾಲ ಮಸೂದೆ ಸಂಸತ್ತಿನಲ್ಲಿ ಮಂಡನೆಗೆ ಬರಲಿ... ಅಷ್ಟಾದರೂ ಆಗಲಿ. ವ್ಯವಸ್ಥೆಗೆ ಗುಟುಕುಜೀವ ಬರಲಿಕ್ಕಾದರೂ. ನಮ್ಮ ಭ್ರಮೆ ಹರಿಯಲಿಕ್ಕಾದರೂ.

ಸುಳ್ಳಲ್ಲ, ನಿಜವಾಗಿಯೂ ನಡೆದ ಕತೆ ಇದು, ಹೇಳುವೆ.

ನಿನ್ನೆ ರಾತ್ರಿ ಸುಮಾರು ಗಂಟೆ ಮೂರಿರಬಹುದು. ಅಡುಗೆಮನೆಯಲ್ಲಿಟ್ಟ ಬೋನೊಳಗೆ ಒಂದು ಇಲಿ ಬಿತ್ತು. ಇತ್ತೀಚೆಗಷ್ಟೇ ಬೋನನ್ನು ರಾತ್ರಿ ಎಷ್ಟೊತ್ತಿಗೆಂದರೆ ಅಷ್ಟೊತ್ತಿಗೆ ಅಡುಗೆಮನೆಯ ಮಾರ್ಗವಾಗಿ ಉಗ್ರಾಣಕೋಣೆಗೆ ದಾಳಿಯಿಟ್ಟು ದಾಂಧಲೆ ಎಬ್ಬಿಸುವ ಇಲಿಯ ಉಪದ್ರ ನಿವಾರಣೆಗಾಗಿಯೆ ತಂದಿದ್ದೆವು.

ಈವರೆಗೂ ಇಲಿಗಿಷ್ಟವೆಂದುಕೊಂಡು ಏನೇನಿಟ್ಟರೂ ಒಂದೇ ಒಂದು ಇಲಿ ಬಿದ್ದಿರಲಿಲ್ಲ. ನಿನ್ನೆ ಬಿತ್ತು. ಬಿದ್ದೊಡನೆ ಠಪ್ಪಂತ ಸದ್ದಾಗುವುದೆ ಆಯಿತೆ? ಅಲ್ಲದೆ ಇಲಿ ಗೊತ್ತಲ್ಲ, ಸ್ವಲ್ಪ ಹೊತ್ತು ಕಮ್ಮನೆ ಕುಳಿತು ಆಮೇಲೆ ಒಂದೇ ಸವನೆ ಚೀಂವ್ಚೀಂವ್ ಎಂದು ಆರ್ತನಾದ ಮಾಡುವುದು.

ಪಾಪ ಕಂಡು ಬೋನಿನ ಬಾಗಿಲು ತೆರೆದು ಬಿಡುವಾ ಅನಿಸದೆ ಇದ್ದರೆ ನೀವು ಮನುಷ್ಯರೇ ಅಲ್ಲ. ಹಾಗೆ. ಇವರು ಹೋಗಿ ನೋಡಿದರು. `ಬಡ್ಡಿಮಗನೆ, ಅಂತೂ ಸಿಕ್ಕಿದೆಯ. ಬೆಳಗಾಗಲಿ, ನಿನ್ನ ಕತೆ ನೋಡಿಕೊಳ್ಳುವೆ~ ಎಂದು ಬಂದು ಮಲಗಿದರು.

ಬೆಳಗೆದ್ದು ನೋಡಿದರೆ ಎಲ್ಲಿದೆ ಇಲಿ? ಮಾಯ! ಬೋನು ಖಾಲಿ ಕುಳಿತು ಕಕಮಿಕಿ ನೋಡುತಿತ್ತು, ಪಾಪ. ಹೀಗೆಹೀಗಾಯಿತು ಎನ್ನಲೂ ಬಾರದ್ದು. ನೋಡಿ ಆದ ಶಾಕ್ ಎಂತು ವರ್ಣಿಸಲಿ? ಪುಟ್ಟ ಇಲಿಯೇ ಇರಬಹುದು, ಆದರೆ ನಾವು ಸುಖಾಸುಮ್ಮನೆ ಹೆಡ್ಡು ಬೀಳುವುದೆಂದರೆ ಸಣ್ಣಪೆಟ್ಟೆ?

(ನನ್ನ ಮೇಲೆಯೇ ಸಂಶಯ ಬಂದು ಕಡೆಗಣ್ಣಲ್ಲೊಮ್ಮೆ ಇವರು ನೋಡಿದಂತಾಯಿತು) ಯೋಚಿಸುತಿದ್ದಂತೆ ನಮಗೆ ಬೋನಿನ ಮೇಲೆಯೇ ಸಂದೇಹ ಬಂತು. ಅದನ್ನು ಅಡಿಮೇಲು ಮಾಡಿದೆವು ಅಲುಗಾಡಿಸಿದೆವು. ಊಹೂಂ ಲಾಗ ಹೊಡೆದರೂ ತಪ್ಪಿಸಿ ಹೊರಗೆ ಹೋಗುವ ಯಾವ ಛಾನ್ಸೂ ಇಲ್ಲ. ಇಷ್ಟಕ್ಕೂ ಅದರ ಒಂದು ಕಡ್ಡಿಯೂ ಶಿಥಿಲವಾಗಿರಲಿಲ್ಲ.

ಹೊಸಾಹೊಸ ಬೋನು ಬೇರೆ. ಹಾಗಾದರೆ ಇಲಿ ಹೇಗೆ ಹೊರಗೆ ಹೋಯಿತು? ಅದಕ್ಕೇನು ಮನುಷ್ಯರಂತೆ ಕೈ ಇದೆಯೇ ಚಿಲಕ ತೆರೆದು ಹೊರಗೆ ಹೋಗಲು?
`ಆದರೆ ಇಲಿಮಿದುಳೂ ಮನುಷ್ಯಮಿದುಳೂ...~

`ಮೋಸವಾಯಿತಲ್ಲ. ಆ ಇಲಿ ಇನ್ನು ಬೋನಿನ ಖೇರು ಬೇಡ ಅಂತ ಎಲ್ಲ ಇಲಿಗಳಿಗೂ ತಿಳಿಸುತ್ತದೆ, ಆಮೇಲೆ ಎಲ್ಲವೂ ಲಗ್ಗೆ ಇಟ್ಟರೆ ಗತಿಯೇನು~ (ತಮಾಷೆಗೆ ಹೇಳಿದ್ದೆಂದು ಕಂಡರೂ ನಗುವಂತಿಲ್ಲ, ಸಿಟ್ಟು ಬಂದು ಬಿಡುತ್ತದೆ, ಸಂದರ್ಭ ಹಾಗಿದೆ. ಗೊತ್ತೆ?)

`ಹೌದು ಹೌದೆ.~
`ಆದರೂ ಬೋನು ಅಂತ ಒಂದು ಇರಲಿ. ಇದಲ್ಲದಿದ್ದರೆ ಇನ್ನೊಂದು ಇಲಿಯಾದರೂ ಬಿದ್ದೀತು. ಆಗ ಕ್ವಿಕ್ ಆ್ಯಕ್ಶನ್ ತಗೋಬೇಕು ನೆನಪಿರಲಿ.~

`ಸರಿಯೇ ಸರಿ.~
`...ಬೋನು ಇದ್ದೂ ಇಲಿ ಬಿದ್ದೂ ಖಾಲಿ ಬಿದ್ದ ಬೋನು.~
ಕಣ್ಣೆದುರು
ಉದ್ಗರಿಸುತ್ತ ಪೆಚ್ಚು ನಿಂತ ಇವರ ದಿಗ್ಭ್ರಮೆಯ ಮುಖ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.