ಆಹ್ಲಾದ ಉಲ್ಲಾಸ ಹದವಾದ ಎತ್ತರ ತುಂಟತನ ಕುಶಾಲು ಎಲ್ಲವೂ ಸಮ್ಮಿಳಿತಗೊಂಡ ಮುಖಭಾವ. ಹೊಳಮಿಂಚುಗಣ್ಣಿನ ಆಕೆಯದು ಗತ್ತಲ್ಲ, ಗೈರತ್ತಲ್ಲ, ಬಿಗುಮಾನವೂ ಅಲ್ಲದ, ಮಂದಹಾಸ ಕಳೆಯದೇ ತೋರುವ ಗಾಂಭೀರ್ಯ, ಘನಸ್ಥಿಕೆಯ ನಡವಳಿಕೆ.

ವಿಶಾಲ ಅವರು ವೈಶಾಲಿ. ಹುಟ್ಟಿದ್ದು 1952ರ ಏಪ್ರಿಲ್ ಹನ್ನೆರಡರಂದು, ಗುಲ್ಬರ್ಗದಲ್ಲಿ. ಮಹಾರಾಷ್ಟ್ರ ಮೂಲದ ತಂದೆ ಡಾ. ಚಿಟಗೋಪಿ, ಕುಂದಾಪುರ ಮೂಲದ ತಾಯಿ (ನನಗೆ ತಿಳಿದಂತೆ) ಶ್ರೀಮತಿ ನಿರ್ಮಲ.

ಡಾ. ಚಿಟಗೋಪಿಯವರ ಮಗಳೇ ವಿಶಾಲಾ, ನಮ್ಮ ಕನ್ನಡ ನಟಿ ವೈಶಾಲಿ ಕಾಸರವಳ್ಳಿ. ಬಳ್ಳಾರಿ ಕ್ಯಾಂಪಿಗೆ ಬಂದವ ವಿಶಾಲಾಳನ್ನು ಎತ್ತಿಕೊಂಡಾಗ ಅವಳು ನನ್ನ ಗಡ್ಡದಿಂದ ಜಡೆಮಾಡಿ `ನೀವೀಗ ಹೆಂಗಸರ ಹಾಗೆ ಕಾಣುತ್ತೀರ. ಆದರೆ ಪೂರಾ ಹೆಂಗಸಲ್ಲ~ ಅಂದಿದ್ದು ನೆನಪಾಗುತ್ತಿದೆ. ಅವಳನ್ನು ಎತ್ತಿಕೊಂಡು ನಾನು ಬಳ್ಳಾರಿ ಕೋಟೆಯನ್ನೆಲ್ಲಾ ಸುತ್ತಿಕೊಂಡು ಬಂದಿದ್ದೆ. ಆರೇಳು ವರ್ಷದ ಹುಡುಗಿ ಅವಳಾಗ.

`ಗುರುಜೀ, ನೀವು ಆಕಡೆ ಹೋಗಿ, ಆಕಡೆ ತಿರುಗಿಕೊಳ್ಳಿ~ ಎನ್ನುತ್ತಿದ್ದಳು. ಒಂದ ಮಾಡಲಿಕ್ಕೆ. ಅಷ್ಟು ಪುಟ್ಟ ಹುಡುಗಿ. ಮೊದಲಿಂದಲೂ ಗಾಂಭೀರ್ಯ. ತಂದೆಯ ಮಹಾರಾಷ್ಟ್ರೀಯ ಒಳ್ಳೆಯ ಗುಣಗಳೂ ತಾಯಿಯ ಶಾಂತ ಸ್ವಭಾವವೂ ಮೇಳೈಸಿಕೊಂಡಿದ್ದವು ಅವಳಲ್ಲಿ.

ತಾಯಿಯ ತಂಗಿ ಶಾರದಾ ಕೂಡ ಕಂಪೆನಿಯಲ್ಲಿ ಒಳ್ಳೆಯ ಪಾತ್ರ ಮಾಡುತ್ತಿದ್ದರು ಎಂದು ತಮ್ಮ ಆತ್ಮಕತೆ `ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ~ಯಲ್ಲಿ ಬಿ.ವಿ. ಕಾರಂತರು ಈ ಆಪ್ತ ಶಿಷ್ಯೆಯನ್ನು ನೆನೆದಿದ್ದಾರೆ. ಅವರ ಪ್ರತಿಭೆಯನ್ನು ಅರಿತವರಾಗಿದ್ದರಲ್ಲವೆ ಅವರು? ಪ್ರಾಯಶಃ ಅದರ ಗರಿಷ್ಠತೆಯನ್ನು ಅರಿತವರೂ ಕಾರಂತರೊಬ್ಬರೇ.

ಅಪ್ಪಟ ನಟನಾ ಪ್ರತಿಭೆ ಅವರದು. ಯಾವ ಪಾತ್ರವನ್ನೇ ಧರಿಸಲಿ ಅದನ್ನು ಸಂಪೂರ್ಣ ಸರ್ವಾಂಗ ಜೀವಂತಗೊಳಿಸುವುದರಲ್ಲಿ ಅಗ್ರಗಣ್ಯೆ ಆಕೆ. ಪಡ್ಡೆ ಹುಡುಗಿಯೇ (`ಕಿಟ್ಟುಪುಟ್ಟು~ನಲ್ಲಿ ದ್ವಾರಕೀಶ್ ಜೊತೆಗೆ ಹಾಡಿ ಕುಣಿದಿರುವುದನ್ನು ನೆನೆದುಕೊಳ್ಳಿ), ಕ್ರಿಕೆಟ್ಪ್ರಿಯ ಮಧ್ಯಮ ವಯದ ಮಹಿಳೆಯೆ (ಗಣೇಶನ ಮದುವೆ), ನಾಯಕನನ್ನು ಪ್ರೇಮಿಸುವ ಉಪನಾಯಕಿಯೇ (ಹೊಂಬಿಸಿಲು), ಸ್ವಾಮಿಯ ತಾಯಿಯಾಗಿ ಚಿಕ್ಕ ಪಾತ್ರವೇ (ಮಾಲ್ಗುಡಿ ಡೇಸ್), ಮಂತ್ರಿಯ ಮಡದಿಯ ಭರಮ್ಮಿನ ಪಾತ್ರವೇ, (ಮಾಯಾಮೃಗ), ಕಾಲುವಾತದ ಹಿರಿಸೊಸೆಯೆ? ಬಜಾರಿಯೆ, ಗಜಾಲಿಯೆ, ಹಾಸ್ಯಪಾತ್ರವೆ? ವಠಾರದಲ್ಲಿನ ಒಟ್ಟು ಬದುಕಿನ ಮಹಿಳೆಯೆ, ಎಲ್ಲಿಯೂ ವೈಶಾಲಿಯ ನಟನೆ ಆ ಪಾತ್ರ ಸಂವಿಧಾನ ಬಿಟ್ಟು ಅತ್ತಿತ್ತ ಕದಲದು.

ಅದರಲ್ಲಿ ಕರಗಿ ಕಾಣೆಯಾಗದೆಯೂ ತನ್ನ ಪರಕಾಯ ಪ್ರವೇಶದ ಅಪೂರ್ವ ಕೌಶಲದಲ್ಲಿ ಪಾತ್ರದ ವೇಷಭೂಷಣ ಭಾವ-ಹಾವ, ನಡಿಗೆ ಮಾತಿನ ಅಂಕುಡೊಂಕು ಇತ್ಯಾದಿ ಸಮಗ್ರ ಸೂಕ್ಷ್ಮತೆಯಲ್ಲಿ ಪಾತ್ರವನ್ನು ಪ್ರೇಕ್ಷಕರೆದುರು ಕಡೆದು ನಿಲ್ಲಿಸುವರು ಅವರು.

ಯಾವ ನಾಟಕ, ಸಿನಿಮಾ ಅಥವಾ ಯಾವ ಧಾರಾವಾಹಿ ಎಂಬುದು ಮರೆಯಾದೀತು. ಆದರೆ ಅದರಲ್ಲಿನ ಅವರ ಪಾತ್ರ ಮನಸಿಂದ ಮರೆಯಾಗದು. ಆ ಓಝಸ್ಸಿನವರು. ಅದರ ಒಂದೇ ಒಂದು ಉಜ್ವಲ ಉದಾಹರಣೆ ಹೇಳಬೇಕೆಂದರೆ `ಹಯವದನ~ದಲ್ಲಿನ ಅವರ ಪದ್ಮಿನಿ ಪಾತ್ರ.

ನಮ್ಮಲ್ಲಿ ವ್ಯಕ್ತಿಯನ್ನು ವರ್ಣಿಸುತ್ತ `ಮುಖದಲ್ಲಿ ಒಳ್ಳೆ ನಾಣ್ಯವಿದೆ~ ಎನ್ನುವುದಿದೆ. ನಾಣ್ಯವೆಂದರೆ ಸುಂದರಕ್ಕಿಂತ ಒಂದು ಬಗೆಯ ವಿಶೇಷ ಕಳೆ ಅಂತರ್ಥ. ವೈಶಾಲಿ ಹಾಗಿದ್ದರು. ಆಕೆಯನ್ನು ಕೇವಲ ನಟಿ ಎಂದರೆ ಸಮಾಧಾನವಾಗದು. ನಿಜವಾಗಿಯೂ ಕನ್ನಡ ಚಿತ್ರರಂಗ ಕಂಡ ಒಬ್ಬ ಅಪೂರ್ವ ಅಭಿನೇತ್ರಿ ಆಕೆ.

ವಸ್ತ್ರವಿನ್ಯಾಸಕಿಯಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ. ನಿರ್ದೇಶಕಿ, ಪತಿಯ ಚಿತ್ರಕಾರ್ಯದಲ್ಲಿ ಸಲಹೆಗಾತಿ, ಸಮಾಲೋಚಕಿ. ಓದು ಮತ್ತು ಚಿಂತನೆ ಇರುವ ವ್ಯಕ್ತಿಗಳು ನಮ್ಮ ಚಿತ್ರರಂಗದಲ್ಲಿ ಅತಿವಿರಳರಷ್ಟೆ. ಆ ವಿರಳರಲಿ ಒಬ್ಬಾಕೆ. ಕಾವ್ಯ ಅವರ ಅತ್ಯಂತ ಪ್ರೀತಿಯ ಪ್ರಕಾರವಾಗಿತ್ತು. ಕಥೆ ಕಾದಂಬರಿ ಓದುವಾಗ ತನ್ನ ಓದು ಕೃತಿಯ ಪಾತ್ರಗ್ರಹಿಕೆಯೊಂದಿಗೇನೇ ಸಾಗುತ್ತ ಹೋಗುತ್ತದೆ.

ಪ್ರಾಯಶಃ ರಂಗಭೂಮಿ, ನಟನೆ ಈ ಎಲ್ಲದರ ಹಿನ್ನೆಲೆಯಲ್ಲಿ ಮತ್ತು ತನ್ನ ಮನಸ್ಸು ನಟನೆ ಮತ್ತು ನಿರ್ದೇಶನದಲ್ಲಿ ನೆಲೆಸಿರುವುದೂ ಇದಕ್ಕೆ ಕಾರಣವಿರಬಹುದು ಎನ್ನುತ್ತಿದ್ದರು. ತನ್ನೊಳಗೊಬ್ಬಳು ನಿರ್ದೇಶಕಿ ಇರುವಳೆಂದು ತಿಳಿಯಲು ಅವರಿಗೆ ಬಹಳ ವರ್ಷಗಳೇ ಬೇಕಾದುವಂತೆ. ಅವರ `ಗೂಡಿನಿಂದ ಗಗನಕ್ಕೆ~ ಧಾರಾವಾಹಿಯ ಕುರಿತು ನನಗೆ ಕಂಡ ಅದರ ವಿಶೇಷ ಗುಣಗಳನ್ನು ಅವರಿಗೆ ತಿಳಿಸಿದಾಗ `ನನ್ನಲ್ಲಿ ನಿರ್ದೇಶಕಿ ಇದ್ದಾಳೆಂದು ನನಗೆ ತಿಳಿಯುವುದೇ ಎಷ್ಟು ತಡವಾಯಿತು ನೋಡಿ~ ಎಂದಿದ್ದರು.

ತಾನೊಬ್ಬ ಅಭಿನೇತ್ರಿ ಮಾತ್ರವೆಂದೇ ಅವರು ಭಾವಿಸಿದ್ದರಂತೆ. ಆದ್ದರಿಂದ ನಿರ್ದೇಶನದ ಕಡೆ ತಲೆಯೇ ಹಾಕಲಿಲ್ಲ. ಇತರರ ನಿರ್ದೇಶನದಲ್ಲಿ ನಟಿಸುತ್ತ ನಟಿಸುತ್ತ ಅಯ್ಯ, ತಾನೇಕೆ ಇದನ್ನು ಮಾಡಲಾರೆ ಅಂತನಿಸಿ ಮೆಲ್ಲ ಧಾರಾವಾಹಿ ನಿರ್ದೇಶನಕ್ಕಿಳಿದೆ ಎಂದಿದ್ದರು. `ಮೂಡಲಮನೆ~ ಅವರ ನಿರ್ದೇಶನ ಸಾಮರ್ಥ್ಯಕ್ಕೆ ಒಂದು ಪ್ರಮಾಣದಂತಿತ್ತು.

ಅವತ್ತು ಫೋನು ಕಿಣಿಗುಟ್ಟಿತು. ಎತ್ತಿದರೆ `ಯಾರು?... ಇವರಾ?~
ಹೌದೆಂದೆ. ಎದುರು ದನಿ `ನಾನು ವೈಶಾಲಿ, ವೈಶಾಲಿ ಕಾಸರವಳ್ಳಿ...~. ತಾನು ಚಿತ್ರಿಸಬೇಕೆಂದುಕೊಂಡ ಧಾರಾವಾಹಿಗೆ ಒಂದು ಶೀರ್ಷಿಕೆ ಪದ್ಯ ಬರೆದು ಕೊಡಲು ಸಾಧ್ಯವೆ, ಕೇಳಿದರು.

ಅದಕ್ಕಾಗಿ ಬರೆದ ಪದ್ಯ `ಬೆಳಗ ಬಾಗಿಲ ತೆರೆದೂ ಜಗದ ಅಂಗಳ ತೊಳೆದೂ...~. ಆದರೆ ಅವರು ಅಂದುಕೊಂಡ ಆ ನಿರ್ದಿಷ್ಟ ಧಾರಾವಾಹಿಯನ್ನು ಕಾರಣಾಂತರದಿಂದ ಕೈಗೆತ್ತಿಕೊಳ್ಳಲಾರದೆ ಮುಂದೆ ಅದನ್ನು `ಮುತ್ತಿನ ತೋರಣ~ಕ್ಕೆ ಬಳಸಿಕೊಂಡರು.

ಹೇಮಂತ್ಕುಮಾರ್ ಸಂಯೋಜಿಸಿದ ರಾಗದಲ್ಲಿ ತನಗಿಷ್ಟವಾದ್ದನ್ನು ಆರಿಸಿ, ನನಗೆ ಫೋನಿನಲ್ಲೇ `ನೋಡಿ, ಹೀಗಿದೆ~ ಎಂದು ಮೆಲುದನಿಯಲ್ಲಿ ಹಾಡಿ ತೋರಿದ್ದರು. ಪದ್ಯ ಬರೆದು ಕೊಟ್ಟ ಮೇಲೆ ಮುಗಿಯಿತು ಎಂದು ವ್ಯವಹಾರದಂತೆ ವರ್ತಿಸದ, ಸುಸಂಸ್ಕೃತ ಮನದ ವೈಶಾಲಿ. ಅದುವರೆಗೆ ನಟಿ ಮತ್ತು ಆ ನಟನೆಯನ್ನು ಇಷ್ಟಪಟ್ಟು ನೋಡುವ ಪ್ರೇಕ್ಷಕಿ ಮಾತ್ರವಷ್ಟೇ ಇದ್ದ ನಮ್ಮ ಸಂಬಂಧ ಕಡೆಯ ನಾಲ್ಕು ವರ್ಷಗಳ ಕಾಲ ವೈಯಕ್ತಿಕವಾಗಿ ಗಾಢವಾಗುತ್ತ ಹೋಯ್ತು...

ಅವರ ಸಂಬಂಧಿಯೊಬ್ಬರು ಮತ್ತು `ರವಿಮಾವ~ ನನ್ನ ಒಬ್ಬ ಅಕ್ಕನ ಕುಟುಂಬಕ್ಕೆ ಬಹಳ ಪರಿಚಿತರಿದ್ದರು. ವೈಶಾಲಿಯ ನೆನಪೆಂದರೆ ನನ್ನ ಅಕ್ಕನಿಗೆ ಅವರೆಲ್ಲರ ನೆನಪೂ. ಹಾಗೆ ನೆನಪಾದಷ್ಟು ಸಲವೂ ಅವಳು ಅವರೆಲ್ಲ ಬಹಳ ಸಾತ್ವಿಕರು, ಸಾಭ್ಯಸ್ತರು ಎನ್ನದೆ ಇರಳು. ಅವರ `ರವಿಮಾವ~ ಮತ್ತು `ಶೇಷಗಿರಿಮಾವ~ನನ್ನು ಬಲ್ಲವರು ಈಗಲೂ ನಮ್ಮೂರಲ್ಲಿದ್ದಾರೆ. ಅಂತೆ, ವೈಶಾಲಿ ನಮ್ಮೂರಿನವಳೇ ಅಲ್ಲವೆ ಎಂದು ನಾವು ಅವರಿಗೇ ತಿಳಿಯದಂತೆ ಅವರನ್ನು ನಮ್ಮೂರಿನವರಾಗಿ ಮಾಡಿಕೊಂಡಿದ್ದೇವೆ.

ನನಗೆ ಕಂಡಂತೆ ಕನ್ನಡ ಚಿತ್ರರಂಗದಲ್ಲಿ ಕುಂದಕನ್ನಡವನ್ನು ಯಥಾವತ್ ಮಾತಾಡುವವರು ಇಬ್ಬರೆ. ವೈಶಾಲಿ ಮತ್ತು ರಮೇಶ್ ಭಟ್. ಇಬ್ಬರೂ ಬೈಂದೂರು ಕಡೆಯವರು. ಹೆಚ್ಚಾಗಿ ಅವಿಭಜಿತ ದ.ಕ.ದ ಕನ್ನಡದ ಹೆಸರಿನಲ್ಲಿ ಇಲ್ಲಿನ ವಿವಿಧ ಕನ್ನಡಗಳು ಅಪಉಚ್ಚಾರದಲ್ಲಿಯೇ ಕಾಣಿಸಿಕೊಳ್ಳುವವಲ್ಲವೆ?

ಹಾಗೆ ನೋಡಿದರೆ ಸಿನೆಮಾರಂಗದಲ್ಲಿ ಎಂದಿನಿಂದಲೂ ಇರುವ ಕನ್ನಡ ಭಾಷೆ ಬಿಟ್ಟರೆ ಉಳಿದೆಲ್ಲ ಕನ್ನಡಗಳೂ ಯಾಯಾವ `ಅ-ಭಂಗಿ~ ಪಡೆಯುತ್ತವೆಯೋ. ನಮ್ಮ ಕನ್ನಡ ಹಾಳಾದಾಗ ಮಾತ್ರ ನಮಗೆ ತಿಳಿಯುತ್ತದೆ, ತಪ್ಪು ತಿದ್ದಲಾಗದೆ `ಆಯ್~ ಎಂದು ಉರಿ ಸಹಿಸುವಂತಾಗುತ್ತದೆ. ಚಿತ್ರ ಒಂದರಲ್ಲಿ (ಹೆಸರು ನೆನಪಾಗುತ್ತಿಲ್ಲ) `ಒಂಚೂರ್ ಕಷಾಯ ಕುಡ್ಕಂಡ್ ಹೋಯ್ನಿ~ ಎಂಬ ಒಂದೇ ಒಂದು ಸಾಲನ್ನಾದರೂ ವೈಶಾಲಿ ಆಡಿದ ಬಗೆ ನೋಡಬೇಕು. ಇಲ್ಲಿಯೇ ಹುಟ್ಟಿ ಬೆಳೆದು ಬಂದವರ ಹಾಗೆ, ಅಷ್ಟು ಕರಾರುವಾಕ್.

ಶಾರದಾ ಎಂಬ ಅವರ ಚಿಕ್ಕಮ್ಮ, ಒಮ್ಮೆ, ಬಹಳ ಹಿಂದೆ, ಕುಂದಾಪುರದ ರಸ್ತೆಯಲ್ಲಿ ನಡೆದು ಹೋಗುತಿದ್ದರು. `ಹೋ, ಶಾರದಾ ಬಂದಿದ್ದಾಳೆ, ಅಗ, ಅವಳೇ ಅಲ್ಲವೆ, ಅಲ್ಲಿ ಹೋಗುತ್ತಿರುವುದು~ ಅಂತ ಹತ್ತಿರದಲ್ಲೇ ಯಾರೋ ಅಂದದ್ದು, ಅವರು ನಾಟಕದಲ್ಲಿ ಆ್ಯಕ್ಟ್ ಮಾಡುತ್ತಾರೆ, ನಮ್ಮ ಇಂಥವರ ಸಂಬಂಧಿಕರು, ಅಂತೆಲ್ಲ ಮಾತಾಡಿಕೊಂಡದ್ದು ನೆನಪಿದೆ.

ಕಂಪೆನಿ, ನಟನೆ ಅಂತೆಲ್ಲ ಕೇಳಿದ್ದಕ್ಕೋ ಏನೊ, ಅವರು ರಸ್ತೆಯ ಆತುದಿಯಿಂದ ಈತುದಿಗೆ ಹಾದು ಮರೆಯಾಗುವರೆಗೂ ನಾವು ನೋಡಿದ್ದೇ ನೋಡಿದ್ದು.

ವೈಶಾಲಿಯವರಿಗೊಮ್ಮೆ ಇದನ್ನೆಲ್ಲ ಹೇಳಿದ್ದೆ. ಅವರೂ ತಮ್ಮ ಕುಂದಾಪುರದ ಸಣ್ಣ ನೆನಪುಗಳನ್ನು ಹೇಳಿಕೊಂಡರು. ಮಾತಾಡುತ್ತಿದ್ದಂತೆ ನಾವು ನಮಗೇ ಅರಿವಿಲ್ಲದಂತೆ ಆ ಕನ್ನಡಕ್ಕೆ ಹಾರಿಕೊಂಡಿದ್ದೆವು. `ಅಲ್ಲಿ ಇದ್ದವರೇ ಅಲ್ಲ ನೀವು, ಅಂಥಲ್ಲಿ ಇಷ್ಟು ಚೆನ್ನಾಗಿ ನಮ್ಮ ಕನ್ನಡ ಮಾತಾಡುತ್ತೀರಿ~?

`ಅಮ್ಮ, ಚಿಕ್ಕಮ್ಮ ಎಲ್ಲ ಮಾತಾಡುವಾಗ ಬಂದು ಬಿಟ್ಟಿತು ಹೇಗೋ. ಹೊಟ್ಟೆ ತುಂಬ ಅಮ್ಮನ ಕಡೆ ಮಾತು ಆಡಿದ ಸಮಾಧಾನ ಆಯ್ತು ಕಾಣಿ~. ಆ ಮೇಲಿಂದ ನಾವು ನಮ್ಮಳಗೆ ಸ್ಪಷ್ಟ ಕನ್ನಡ ಮಾತಾಡಿದ್ದೇ ಕಡಿಮೆ. ಸುರುವಾಗುವುದು ಸ್ಪಷ್ಟ ಕನ್ನಡದಲ್ಲಾದರೂ ಮುಂದರಿದ ಹಾಗೆ ನಮಗೇ ತಿಳಿಯದಂತೆ ಅದು ಮೆಲ್ಲ ಕುಂದಗನ್ನಡಕ್ಕೆ ದಾಟಿಕೊಳ್ಳುತ್ತಿತ್ತು.

ಕುಚ್ಚಿಗೆಅಕ್ಕಿ ಗಂಜಿಯುಣ್ಣುವ ಜಿಲ್ಲೆಯಿದು. ಮುಂಚೆಲ್ಲ ಬೆಳಗ್ಗೆ ಇಲ್ಲಿ ಎಲ್ಲರ ಮನೆಯಲ್ಲಿಯೂ ಗಂಜಿಯೂಟ. ಬಲ್ಲವರೇ ಬಲ್ಲ ಅದರ ರುಚಿಯನ್ನು ಬಣ್ಣಿಸುವುದೆಂತು? ಬದಲಾವಣೆಯ ಯುಗ ಬಂದು, ಈಗ ಈ ಹವೆಗೆ ಒಗ್ಗುವ ಅಂಥಾ ಆರೋಗ್ಯಕರ ಬೆಳಗಿನ ಆಹಾರ ಮರೆಯಾಗುತ್ತ ಅದರ ಜಾಗಕ್ಕೆ ವಿವಿಧ ತಿಂಡಿಗಳು ಬಂದಿವೆಯೆನ್ನಿ.

ಪ್ರಾಯಶಃ ತನ್ನ ಬಾಲ್ಯದಲ್ಲಿ ವೈಶಾಲಿ ಈ ಕಡೆ ಬಂದಾಗ ಗಂಜಿಯೂಟದ ರುಚಿ ಕಂಡಿದ್ದರು. ಎಂತಲೇ ಪ್ರತೀಸಲವೂ ಮಾತು ಮುಗಿಸುವ ಮುನ್ನ `ಬರುತ್ತೇನೆ. ಒಮ್ಮೆ ಆ ಕಡೆಗೆಲ್ಲ, ಬರಬೇಕು, ಅಲ್ಲೆಲ್ಲ ತಿರುಗಾಡಬೇಕು, ಅಲ್ಲಿನ ಗಂಜಿಊಟ ಮಾಡಬೇಕು ಅಂತ ಬಹಳ ಆಸೆಯಾಗುತ್ತಿದೆ. ಆಗ ನಿಮ್ಮನೆಗೂ ಬರುತ್ತೇನೆ.

ಒಳ್ಳೆ, ಕುಚ್ಚಿಗೆಅಕ್ಕಿ ಗಂಜಿ, ತುಪ್ಪ, ಮಿಡಿಉಪ್ಪಿನಕಾಯಿ ಬಡಿಸಿ ಸಾಕು~ ಎನ್ನುತ್ತಿದ್ದರು. ಅವರ ಕುಂದಗನ್ನಡ ಪ್ರೀತಿಯನ್ನು ಬಲ್ಲವರಾಗಿದ್ದರು ಗಿರೀಶ ಕಾಸರವಳ್ಳಿ. `ಗುಲಾಬಿ ಟಾಕೀಸು~ ಸಿನೆಮಾದಲ್ಲಿ ಆ ಕನ್ನಡವನ್ನು ಬಳಸಿದ್ದು ವೈಶಾಲಿಗಾಗಿಯೇ ಅಂತ ಅವರು ಹೇಳಿದ್ದರು.

ಆರೋಗ್ಯ ಚೆನ್ನಾಗಿದ್ದಿದ್ದರೆ ಆ ಚಿತ್ರದ ಶೂಟಿಂಗ್ ಸಮಯದಲ್ಲಾದರೂ ಇಲ್ಲೆಲ್ಲ ಬಂದು ಮನಃಪೂರ್ತಿ ತಿರುಗಾಡಿ ಹೋಗುತ್ತಿದ್ದರೇನೊ. ಬರುವ ಆಸೆ ಎಷ್ಟಿತ್ತು ಅವರಿಗೆ. ನೆನೆದರೆ, ವೈಶಾಲಿ `ಕನ್ನಡ ಜಿಲ್ಲೆ~ಗೆ, ಮಲೆನಾಡಿಗೆ, ಉತ್ತರ ಕರ್ನಾಟಕಕ್ಕೆ, ಒಟ್ಟಿನಲ್ಲಿ ಇಡೀ ಕರ್ನಾಟಕಕ್ಕೇ ಭೌಗೋಲಿಕವಾಗಿಯೂ ಸಂದವರು, ಅಲ್ಲವೆ!

`ಮೂಡಲಮನೆ~ಗಾಗಿ ಸತತ ಓಡಾಟ, ಉತ್ತರ ಕರ್ನಾಟಕದ ರಸ್ತೆಗಳ ಅವಸ್ಥೆ, ಧಾರಾವಾಹಿ ಕುರಿತಾಗಿ ಅವರ ನಿರಂತರ ನಿಮಗ್ನತೆ, ಮನಸ್ಸಿನ ಅಸಾಧಾರಣ ಹುರುಪು ಎಲ್ಲವನ್ನೂ ತಾಳಿಕೊಳ್ಳಲು ದೇಹ ನಿರಾಕರಿಸಿತೆ? ಅಷ್ಟೊತ್ತಿಗಾಗಲೇ ವಿಧಿ ಅವರನ್ನು ಚಾಳಿಸತೊಡಗಿತ್ತು.

ಎರಡು ಹೆಜ್ಜೆ ಮುಂದೆ ಹೋದರೆ ನಾಲ್ಕು ಹೆಜ್ಜೆ ಹಿಂದೆಳೆಯುತ್ತಿತ್ತು. ಅಸ್ವಾಸ್ಥ್ಯ ಅವರನ್ನು ಮೆತ್ತಗಾಗಿಸಿತು. ಅಲ್ಲಿಂದ ಮುಂದೆ ಆಕೆ ದೈಹಿಕವಾಗಿ ಮುಂಚಿನ ವೈಶಾಲಿಯಾಗಲೇ ಇಲ್ಲ. ಆದರೂ ಅಲ್ಲಲ್ಲಿ ಕೊಂಚ ಚೇತರಿಸಿಕೊಂಡರೂ ಸಾಕು, ಕನಸು ಕಾಣುವರು, `ಮುತ್ತಿನ ತೋರಣ~ ಮಾಡಿದರು, ಅದರ ಶೂಟಿಂಗಿಗೆ ಸ್ವತಃ ಹೋಗುವರು, ದಣಿಯುವರು, ಮನೆಯಲ್ಲುಳಿದು ಅದರ ಇತರ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವರು, ಮತ್ತೆ ದಣಿಯುವರು.

`ಆಯಾಸವಾದರೂ ಶೂಟಿಂಗಿಗೆ ಹೋಗಿದ್ದಾಳೆ. ಮನೆಯಲ್ಲಿರು, ವಿಶ್ರಾಂತಿ ತಕೋ ಎಂದರೆ ಅರ್ಥವಾಗುತ್ತಿಲ್ಲ~ ಪತಿ ಕಾಸರವಳ್ಳಿ ತಳಮಳಗೊಳ್ಳುತಿದ್ದರು. ಏನೋ, ಏನಾಗುತ್ತದೋ, ಅವಳ ಛಲವೇ ಅವಳನ್ನು ಇದುವರೆಗೆ ಇಷ್ಟರ ಮಟ್ಟಿಗಾದರೂ ಉಳಿಸಿದೆ ನಿಜ, ಆದರೆ... ಆತಂಕ ಅವರ ಮುಖದ ಮೇಲೆಯೇ ಮನೆಮಾಡಿತ್ತು.

ಅತೀವ ದಣಿವಿಂದ ಕುಸಿದು ಮನೆಯಲ್ಲುಳಿಯುವುದು, ಎಲ್ಲರೂ ಅವರವರ ಕೆಲಸಕ್ಕೆ ಅನಿವಾರ್ಯವಾಗಿ ಹೊರಗೆ ಹೋಗಲೇ ಬೇಕಾದಾಗ ಕನಸುಗಳನ್ನು ಹೆಣೆಯುತ್ತ ಮಲಗುವುದು... ಮನಸಿನಲಿ ಜೀವತಳೆವ ನೂರಾರು ಕಲ್ಪನೆಗಳ ಜೊತೆ ಮೂಕವಾಗಿರುವುದು, ಏಕಾಂತದಲ್ಲಿ ವೈಶಾಲಿಯಂತಹ ನಿಗಿನಿಗಿ ಉತ್ಸಾಹದ ಜೀವ ಹೇಗೆ ಹೊತ್ತು ಕಳೆದಿರಬಹುದು, ಈ ಮಧ್ಯೆ, ಆಸ್ಪತ್ರೆ-ಮನೆ ಓಡಾಟ, ಆಸ್ಪತ್ರೆ ವಾಸ, ಹುಶಾರಾಗಿ ಮರಳಿ ಇನ್ನು ತನ್ನ ಆರೋಗ್ಯ ಹೀಗೆಯೇ ಭದ್ರ ಎಂದು ನಂಬಿದಂತೆ ಮುಂಚಿನಂತೆಯೇ ಛಕಛಕನೆ ಕಾರ್ಯರಂಗಕ್ಕೆ ಹಾಜರಾಗುವುದು...

ಅವರ ಆರೋಗ್ಯ ತೀರಾ ಹದಗೆಟ್ಟ ಸ್ಥಿತಿಯಲ್ಲೂ ಆ `ನಾಣ್ಯಪ್ರಭೆ~ಯ ಛಾಯೆ ಕುಂದಿರಲಿಲ್ಲ. ಬೆಂಗಳೂರಿಗೆ ಬಂದಾಗ ಮನೆಗೆ ಬನ್ನಿ ಅಂತ ಎಷ್ಟು ಸಲ ಹೇಳಿದ್ದರೋ. ಹೋದರೆ ಅವರ ಅಸ್ವಸ್ಥ ಸ್ಥಿತಿಯಲ್ಲಿ ತೊಂದರೆಯಾದೀತು ಎಂಬ ಅಳುಕಿನಿಂದಾಗಿ ಹಾಗೆಯೇ ಮರಳುತ್ತಿದ್ದೆ. ಅಂತೂ ಒಮ್ಮೆ ಕೆಲಸ್ನೇಹಿತೆಯರೂ ಮಗಳೂ ಮತ್ತು ನಾನು ಅವರ ಮನೆಗೆ ಹೋಗಿದ್ದೆವು.

ಶಿಥಿಲವಾಗಿದ್ದರು ನಿಜ, ಆದರೆ ಬನ್ನಿ ಬನ್ನಿ ಎನ್ನುವ ದನಿಯ ಬನಿ ಮಾಸಿರಲಿಲ್ಲ. ಗೆಲುವು ಮಾಸಿರಲಿಲ್ಲ. ಪುಟ್ಟಪುಟ್ಟ ಮತಾಪಿನಂತಹ ಕುಶಾಲು ಹಾಗೆಯೇ ಇತ್ತು.

ಗಟ್ಟಿತನ ಮಾತಲ್ಲಿ ಎದ್ದು ಕಾಣುತ್ತಿತ್ತು. ಅಂಥಾ ಅನಾರೋಗ್ಯದಿಂದ ಬಳಲಿದರೂ, ಕಣ್ಣು ಬಾಡಿದ್ದರೂ ದೃಷ್ಟಿಯ ಮೊನಚು ಕುಂದಿರಲಿಲ್ಲ. ಅಂದು ಅವರ ದನಿ ಕೇಳಿದವರು ಇನ್ನೊಂದು ಲೋಕ ಅವರಿಗೆ ಇಷ್ಟು ಹತ್ತಿರ ಇದೆಯೆಂದು ಅಂದುಕೊಳ್ಳುವ ಹಾಗೆಯೇ ಇರಲಿಲ್ಲ. ಅಂದಿನ ಅವರ ಲವಲವಿಕೆ, ಸ್ನೇಹಸ್ನಿಗ್ಧತೆ ಮತ್ತೆಮತ್ತೆ ನೆನಪಾಗುತ್ತಿವೆ.

ಉಲ್ಲಾಸದಿಂದ ಮಾತುಕತೆಯಾಡುತ್ತ ಕುಳಿತ ಅವರ ಚಿತ್ರ ಈಗ ಕಂಡೆ ಎಂಬಂತಿದೆ. ಹೊರಟಾಗ ಹೊರಗಿನವರೆಗೂ ಬಂದು ಕಳಿಸಿಕೊಟ್ಟರು. ಮರೆಯಾಗುವ ಮುನ್ನ ತಡೆಯದೆ ಒಮ್ಮೆ ಹಿಂದಿರುಗಿ ನೋಡಿದೆ, ಸಹಾಯಕಿಯ ಜೊತೆ ನಿಧಾನವಾಗಿ ಅವರು ಒಳಹೋಗುತ್ತಿದ್ದುದು ಕಾಣುತ್ತಿದ್ದಂತೆ ಮನಸ್ಸಿನಲ್ಲಿ ಹೇಳಲರಿಯದ ಕಲಮಲ ಕಳಕಿತು.

ಅವತ್ತು, 2010, ಫೆಬ್ರುವರಿ ಹದಿನಾಲ್ಕರ ಸಂಜೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನುಡಿ ಪ್ರಕಾಶನದ ಮೂಲಕ ಪ್ರಕಟಿತ ನನ್ನ ಸಾಹಿತ್ಯ ವಾಚಿಕೆಯ ಬಿಡುಗಡೆ.

ಅನಿರೀಕ್ಷಿತವಾಗಿ ಆ ಸಭೆಗೆ ವೈಶಾಲಿ, ಪತಿ, ಮಗಳು, ಅತ್ತೆಯ ಜೊತೆ ಬಂದೇ ಬಿಟ್ಟಿದ್ದರು. ಕಾರ್ಯಕ್ರಮ ಮುಗಿಯುತ್ತಲೂ ಭೇಟಿಯ ಸಂಭ್ರಮ, ನಗೆ, ತಬ್ಬಿಕೊಂಡ ಕ್ಷಣ, ಅಲ್ಲಿಯೇ ನಮ್ಮ ಕೆ.ಎಸ್.ಪೂರ್ಣಿಮಾ, `ಒಂದು ಫೋಟೋ ಇರಲಿ~. ಕ್ಲಿಕ್!
ನಗುವೂ ಕಂಬನಿಯೂ ಒಟ್ಟೊಟ್ಟಿಗೇ ಚಿಮ್ಮಿದ ಹೊತ್ತದು...

ನಿಧನರಾಗುವ ಕೆಲದಿನಗಳ ಹಿಂದೆ ತನಗೆ ಹೊಳೆದ ಕತೆಯೊಂದನ್ನು ಹೇಳಿದ್ದರು. ಅದರ ಸಾರವನ್ನು ಒಂದೇ ಸಾಲಲ್ಲಿ ಅವರ ಮಾತಲ್ಲೇ ಹೇಳಬೇಕೆಂದರೆ `ಒಂದನ್ನು ಕಳೆಯದೆ ಒಂದು ಸಿಗದು~. ಕತೆಯಲ್ಲಿ ಮಹಿಳೆಯೊಬ್ಬಳು, ಒಂಟಿಯಾಗಬೇಕಾಗಿ ಬಂದು, ಅದನ್ನು ಮೀರಿಕೊಳ್ಳಲು ಮುಂದೆ ಓದಿ ವೈದ್ಯೆಯಾಗಿ ತನ್ನ ಸುತ್ತಣವನ್ನು ಸಂಭಾಳಿಸುತ್ತಲೇ ತನ್ನತನವನ್ನೂ ರಕ್ಷಿಸಿಕೊಳ್ಳಲು ಹೋರಾಡುತ್ತಾಳೆ. ಕತೆ ಹೇಳುತ್ತಿದ್ದಂತೆ ಅವರ ದನಿ ಎಂದಿನಂತಿರಲಿಲ್ಲ. ಉಸಿರು ಸಶಬ್ದ ಮೇಲೆ ಮೇಲೆ ಬರುತ್ತಿತ್ತು. ನಡು ನಡುವೆ ತಡವರಿಸುತ್ತಿತ್ತು. ನಡುಗುತ್ತಿತ್ತು.

`...ಹುಶಾರಿಲ್ಲವೆ?~
`ಹೂಂ. ಸ್ವಲ್ಪ. ಸರಿಯಾಗುತ್ತದೆ. ಇದೆಲ್ಲ ನಂಗೀಗ ಕಾಮನ್ ಆಗಿ ಬಿಟ್ಟಿದೆ. ಆದರೆ ಇದನ್ನು ಹೇಳಿ ಬಿಡುತ್ತೇನೆ. ನೀವು ಯೋಚಿಸಿ~ ಎನ್ನುತ್ತ ಕತೆ ಮುಂದರಿಸಿ, ಬಿಡದೆ ಪೂರ್ತಿ ಹೇಳಿದರು. `ಹೇಗಿದೆ~ ಎಂದರು. ನಾನು ನನಗನಿಸಿದ್ದನ್ನು ಹೇಳುತ್ತಲೂ ಈ ಬಗ್ಗೆ ಇನ್ನೊಮ್ಮೆ ಮಾತಾಡೋಣ ಎಂದರು. ನಾನೂ ಕತೆಯನ್ನು ಯೋಚಿಸಿ ತಿಳಿಸುವೆ ಎಂದೆ. ಅದೇ ಕೊನೆ. ಮತ್ತೆ `ನಾನು ವೈಶಾಲಿ, ವೈಶಾಲಿ ಕಾಸರವಳ್ಳಿ~ ಎಂಬ ಆ ಮಧುರಕಂಪಿತ ಧ್ವನಿ ರಿಂಗಣಿಸಲೇ ಇಲ್ಲ.. .

ಕೊನೆಗೂ ವಿಧಿ ಅವರನ್ನು ಮಣಿಸಿಯೇ ಬಿಟ್ಟಿತು. 2010 ಸೆಪ್ಟೆಂಬರ್ ಇಪ್ಪತ್ತೇಳರ ಸೋಮವಾರ ಸಂಜೆ ಸಾಕಿನ್ನು ಬಾ ಎನುತ ಅವರನ್ನು ಒಳಕರೆದೊಯ್ದು ಬಾಗಿಲು ಮುಚ್ಚಿತು. ಅಪರೂಪದ ಅಭಿನೇತ್ರಿ ಕನಸುಗಾತಿ, ರಂಗಭೂಮಿಯ ಅವಿಸ್ಮರಣೀಯ ಪದ್ಮಿನಿ, ಕನ್ನಡದ ಅಪರಂಜಿ ಪ್ರತಿಭೆ ಇಷ್ಟು ಶಿಥಿಲಗೊಂಡ ದೇಹಗೇಹದಲಿ ಹೇಗಿರಲಿ ಎಂದಂತೆ ಹೊರಟುಹೋದಳು... ಎಲ್ಲಿಗೆ?
...ಹೋದವರೆಲ್ಲ, ಹೋಗುವರಾದರೂ ಎಲ್ಲಿಗೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.