ಕಳೆದ ವಾರ ಬಿಡುಗಡೆಯಾದ ಆ್ಯಪಲ್ನ ‘10 ಎಸ್’ ಸರಣಿ ಐಫೋನ್ಗಳ ಸ್ಕ್ರೀನ್ ಗಾತ್ರ 5.8 ಇಂಚುಗಳಿಂದ 6.5 ಇಂಚುಗಳವರೆಗೆ ಇದೆ. ಇದು ಈವರೆಗೆ ಈ ಕಂಪನಿ ಬಿಡುಗಡೆ ಮಾಡಿರುವ ಅತಿ ದೊಡ್ಡ ಗಾತ್ರದ ಫೋನ್ಗಳು. ಅಕ್ಟೋಬರ್ 26ರಿಂದ ಭಾರತವನ್ನೂ ಒಳಗೊಂಡು 50 ದೇಶಗಳಲ್ಲಿ ಈ ಫೋನ್ಗಳು ಖರೀದಿಗೆ ಲಭ್ಯವಾಗಲಿವೆ.

ಆದರೆ ಈ ದೊಡ್ಡ ಸ್ಕ್ರೀನ್ಗಳು ಸರಾಸರಿ ಮಹಿಳೆಯ ಹಸ್ತಕ್ಕೆ ತೀರಾ ದೊಡ್ಡವು ಎಂಬಂಥ ಆಕ್ಷೇಪಗಳು ವ್ಯಕ್ತವಾಗಿವೆ. ಅದೂ ಅಲ್ಲದೆ ಐಫೋನ್ಗಳ ಪೈಕಿ ಸ್ವಲ್ಪ ಕಡಿಮೆ ಎನ್ನಬಹುದಾದ ಬೆಲೆಯ 4 ಇಂಚಿನ ಐಫೋನ್ ಎಸ್ಇ ಇನ್ನು ಮುಂದೆ ಖರೀದಿಗೆ ಲಭ್ಯವಿರುವುದಿಲ್ಲ ಎಂಬಂಥ ಪ್ರಕಟಣೆ ಮಹಿಳಾ ಗ್ರಾಹಕರ ಆಕ್ರೋಶವನ್ನು ಇನ್ನಷ್ಟು ಹೆಚ್ಚಿಸಿದೆ. ವಿನ್ಯಾಸ ಹಾಗೂ ತಂತ್ರಜ್ಞಾನಗಳಲ್ಲಿ ಎಷ್ಟೆಲ್ಲಾ ದೊಡ್ಡ ಮಟ್ಟದ ಕ್ರಾಂತಿಯನ್ನು ಕಾಣುತ್ತಿದ್ದೇವೆ. ಆದರೂ ಈ ವಿನ್ಯಾಸಗಳನ್ನು ಸೃಷ್ಟಿಸುವಾಗ ಪುರುಷ ಬಳಕೆದಾರನ ಅಗತ್ಯಗಳನ್ನೇ ಹೆಚ್ಚಿನ ಸಂದರ್ಭಗಳಲ್ಲಿ ಮಾನದಂಡವನ್ನಾಗಿರಿಸಿಕೊಳ್ಳಲಾಗುತ್ತದೆ. ಇದು, ಸಾರ್ವಜನಿಕ ಬದುಕಿನಲ್ಲಿ ಮಹಿಳೆಯ ಅಗತ್ಯಗಳನ್ನು ಕಡೆಗಣಿಸುವ ಪ್ರವೃತ್ತಿಯ ಮುಂದುವರಿದ ಭಾಗ ಅಷ್ಟೇ.

ಐಫೋನ್ ಇಷ್ಟಪಡುವ ಮಹಿಳೆಯರಿಗೆ ಇನ್ನೊಂದು ತಾಪತ್ರಯ ಎಂದರೆ ಅದು ಅವರ ಉಡುಪಿನ ಜೇಬುಗಳಲ್ಲಿ ಹಿಡಿಸದು. ಐಫೋನ್ ಇರಲಿ, ಸ್ಮಾರ್ಟ್ ಫೋನ್ಗಳಲ್ಲಿ ಈಗ ಬಳಕೆಯಲ್ಲಿರುವ ಯಾವುದೇ ಬ್ರಾಂಡ್ಗಳ ಫೋನುಗಳೂ ಈ ಜೇಬುಗಳೊಳಗೆ ಹೋಗುವುದಿಲ್ಲ. ವಿನ್ಯಾಸಕಾರರಾದ ಜ್ಯಾನ್ ದೀಹ್ಮ್ ಹಾಗೂ ಪತ್ರಕರ್ತೆ– ಎಂಜಿನಿಯರ್, ಆ್ಯಂಬರ್ ಥಾಮಸ್ ಅವರು ಇತ್ತೀಚೆಗೆ ಅಧ್ಯಯನ ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಈ ಅಧ್ಯಯನದಲ್ಲಿ ಅವರು 80 ಜೊತೆ ಜೀನ್ಸ್ ಪ್ಯಾಂಟ್ಗಳಲ್ಲಿರುವ (40 ಪುರುಷರು ಹಾಗೂ 40 ಮಹಿಳೆಯರು) ಜೇಬುಗಳ ಅಳತೆ ವಿಶ್ಲೇಷಿಸಿದ್ದಾರೆ. ಪುರುಷರ ಎಲ್ಲಾ ಜೀನ್ಸ್ ಜೇಬುಗಳಿಗೆ ಐಫೋನ್ ಹೋಗುತ್ತದೆ. ಮಹಿಳೆಯರದಲ್ಲಿ ಕೇವಲ ಶೇ 40ರಷ್ಟು ಜೇಬುಗಳಲ್ಲಿ ಐಫೋನ್ ಇರಿಸಿಕೊಳ್ಳಲು ಸಾಧ್ಯ. ಮಹಿಳೆ ಉಡುಪುಗಳಲ್ಲಿರುವ ಜೇಬುಗಳಲ್ಲಿ ಶೇ 10ರಷ್ಟು ಜೇಬುಗಳಲ್ಲಿ ಮಾತ್ರ ಮಹಿಳೆಯ ಸರಾಸರಿ ಗಾತ್ರದ ಕೈಗಳನ್ನು ಒಳಹಾಕಲು ಸಾಧ್ಯ. ಆದರೆ ಪುರುಷರ ಉಡುಪುಗಳಲ್ಲಿ ಶೇ 100ರಷ್ಟು ಜೇಬುಗಳಲ್ಲೂ ಪುರುಷರ ಕೈ ಸರಾಗವಾಗಿ ಹೋಗುತ್ತದೆ. ಎಂದರೆ, ಈ ಸಂಗತಿಯೇನೂ ಹೊಸದಲ್ಲ, ಅಚ್ಚರಿಯದೂ ಅಲ್ಲ. ಏಕೆಂದರೆ, ದಿನನಿತ್ಯದ ಅಗತ್ಯ ವಸ್ತುಗಳನ್ನು ಜೊತೆಗೇ ಒಯ್ಯಲು ಸಹಕಾರಿಯಾಗಿಲ್ಲದ ಉಡುಗೆ ತೊಡುಗೆಗಳಲ್ಲೇ ಬೆಳೆದವರಲ್ಲವೇ ಹೆಣ್ಣು ಮಕ್ಕಳು! ಆದರೆ, ಈಗ ಈ ಅಧ್ಯಯನ ಮುಖ್ಯವಾಗುತ್ತದೆ ಏಕೆಂದರೆ ಉಡುಗೆತೊಡುಗೆ, ಪೋಷಾಕುಗಳ ವಿನ್ಯಾಸಗಳಲ್ಲೂ ಎದ್ದು ಕಾಣಿಸುವ ಲಿಂಗತಾರತಮ್ಯವನ್ನು ಇದು ಎತ್ತಿ ತೋರಿದೆ. ಇದೊಂದು ಗಮನಿಸಲೇಬೇಕಾದ ವಿಚಾರ ಎಂದು ಈ ಅಧ್ಯಯನ ಮತ್ತೊಮ್ಮೆ ಕೂಗಿ ಹೇಳಿದೆ.

ಐಫೋನ್ ಸ್ಕ್ರೀನ್ ಸೈಜ್ ದೊಡ್ಡದಾದಾಗಲೇ ಉಡುಪುಗಳ ಫ್ಯಾಷನ್ ವಿನ್ಯಾಸದಲ್ಲಿ ಬದಲಾವಣೆ ಆಗಬಹುದೆಂಬ ವಿಶ್ವಾಸವನ್ನು ಅನೇಕ ಮಹಿಳೆಯರು ಬರಹಗಳಲ್ಲಿ ವ್ಯಕ್ತಪಡಿಸಿದ್ದರು. ಆದರೆ, ಈ ವಿಚಾರದ ಬಗ್ಗೆ ಜೀನ್ಸ್ ತಯಾರಕರು ಹಾಗೂ ವಿನ್ಯಾಸಕಾರರು ಹೆಚ್ಚೇನೂ ಗಮನ ಕೊಟ್ಟಂತೆ ಕಾಣಿಸುತ್ತಿಲ್ಲ. ಜೇಬುಗಳ ಹಿಂದಿರುವ ಲಿಂಗತಾರತಮ್ಯ (ಸೆಕ್ಸಿಸಂ) ದೃಷ್ಟಿಕೋನ ಹಾಗೂ ರಾಜಕಾರಣದ ಬಗ್ಗೆ ಸಾಕಷ್ಟು ಬರೆಯುತ್ತಲೇ ಬರಲಾಗಿದೆ. ಇದಕ್ಕೊಂದು ಇತಿಹಾಸವೇ ಇದೆ.

19ನೇ ಶತಮಾನಕ್ಕಿಂತ ಮುಂಚಿನ ಯುಗದಲ್ಲಿ ಮಹಿಳೆಯರ ಉಡುಪುಗಳಲ್ಲಿ ಜೇಬುಗಳಿದ್ದವು. ಆದರೆ ಅವು ಆಧುನಿಕ ಜೇಬುಗಳಲ್ಲ. ಮೈಮೇಲೆ ಧರಿಸಬಹುದಾದ ಆದರೆ ಉಡುಪಿನಿಂದ ಬೇರ್ಪಡಿಸಬಹುದಾದ ಚೀಲ ಅಥವಾ ಸಂಚಿ (ಪೌಚ್). ವಸ್ತುಗಳನ್ನು ಒಯ್ಯಲು ಮಹಿಳೆಯರು ಬಳಸಹುದಾದಂತಹವಾಗಿದ್ದವು. ನಮ್ಮ ಸಂಚಿ ಹೊನ್ನಮ್ಮ ಹೆಸರಲ್ಲೂ ಮಹಿಳೆ ಒಯ್ಯುವ ಸಂಚಿ ಬೆಸೆದುಕೊಂಡಿದೆ. 19ನೇ ಶತಮಾನದಲ್ಲಿ ಮಹಿಳೆಯರ ಉಡುಪು ಹೆಚ್ಚು ನಯನಾಜೂಕಿನದಾಯಿತು. ತೆಳ್ಳಗೆ ಕಾಣಿಸಬೇಕೆಂಬ ಹಪಾಹಪಿ ಆರಂಭವಾಯಿತು. ಆಗ ಜೇಬುಗಳಿಗೆ ಜಾಗ ಇರುವುದು ಸಾಧ್ಯವೇ ಇರಲಿಲ್ಲ. ಆದರೆ ಇದು ಬರೀ ಅಂದ ಚೆಂದದ ವಿಚಾರವಷ್ಟೇ ಅಲ್ಲ. ಅದರ ಹಿಂದಿನ ಸಾಮಾಜಿಕ ಹಾಗೂ ರಾಜಕೀಯ ಮೌಲ್ಯಗಳನ್ನು ಅರ್ಥೈಸಿಕೊಳ್ಳುವುದು ಮುಖ್ಯ.

ಮಹಿಳೆಯ ಜೇಬಿಗೆ ಕತ್ತರಿ ಎಂದರೆ ಆಕೆಯದೇ ಒಂದು ಖಾಸಗಿ ನೆಲೆಯನ್ನು ಕಿತ್ತುಹಾಕಿದಂತೆ. ತನಗೆ ಬೇಕಾದ್ದನ್ನು ತನ್ನೊಳಗೇ ಇಟ್ಟುಕೊಂಡು ಎಲ್ಲಿಗೆ ಬೇಕಾದರೂ ಹೋಗುವ ಸ್ವಾತಂತ್ರ್ಯಕ್ಕೆ ತಡೆ ಹಾಕುವಂತಹದ್ದು ಇದು. ಜೊತೆಗೊಂದು ಬ್ಯಾಗ್ ಅಥವಾ ಚೀಲದ ಭಾರವನ್ನು ಹೊರಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸುವಂತಹದ್ದು. ಏಕಾಂಗಿಯಾಗಿ ಅಡ್ಡಾಡುವಾಗ, ಸಾರ್ವಜನಿಕ ಸ್ಥಳಗಳಲ್ಲಿ ಶೌಚಾಲಯಗಳಿಗೆ ಹೋಗಬೇಕಾದಾಗ ಜೊತೆಗಿದ್ದ ಬ್ಯಾಗ್ ಎಲ್ಲಿಡುವುದು ಎಂಬ ಸಮಸ್ಯೆ ಅನೇಕ ಬಾರಿ ಮಹಿಳೆಯರು ಅನುಭವಿಸಿರುವಂತಹದ್ದೇ. ಆದರೆ ಅನೇಕ ಸಾರ್ವಜನಿಕ ಸ್ಥಳಗಳ ಮಹಿಳೆಯರ ಶೌಚಾಲಯಗಳ ಒಳಗೆ ಬ್ಯಾಗ್ ನೇತುಹಾಕಲು ಹುಕ್ಗಳ ಸೌಲಭ್ಯವನ್ನು ಈಚಿನ ವರ್ಷಗಳಲ್ಲಷ್ಟೇ ನೋಡುತ್ತಿದ್ದೇವೆ. ಹೊರಪ್ರಪಂಚದಲ್ಲಿ ಮಹಿಳೆಯ ಚಲನಶೀಲತೆ ಹಾಗೂ ಆಕೆಯ ಅಗತ್ಯಗಳ ವಿಚಾರಗಳು– ಗಮನಿಸಬೇಕಾದ ಸಂಗತಿಯೇ ಆಗಿರದ ಅಸೂಕ್ಷ್ಮ ಸಾಮಾಜಿಕ ವಾತಾವರಣದ ಪ್ರತಿಫಲನ ಇದು.

ಮಹಿಳೆಯರ ಉಡುಪುಗಳಲ್ಲಿ ಉಪಯುಕ್ತವಾದ ಜೇಬುಗಳಿಗಾಗಿ ಅನೂಚಾನವಾಗಿ ಮಹಿಳೆಯರು ಬೇಡಿಕೆಗಳನ್ನು ಮಂಡಿಸುತ್ತಲೇ ಇದ್ದಾರೆ ಎಂದರೆ ಆಶ್ಚರ್ಯವಾಗಬಹುದು. 1905ರಲ್ಲಿ ‘ದಿ ನ್ಯೂಯಾರ್ಕ್ ಟೈಮ್ಸ್’ನಲ್ಲಿ ಷಾರ್ಲಟೆ ಪಿ ಗಿಲ್ಮನ್ ಅವರು ಬರೆದಿರುವ ಮಾತುಗಳಿವು: ‘ಪುರುಷರ ಉಡುಪಿನಲ್ಲಿ ಒಂದು ಹಿರಿಮೆಯಿದೆ… ಜೇಬುಗಳಿಗೆ ಅದು ಅಂಟಿಕೊಂಡಿದೆ’...‘ಮಹಿಳೆಯರುಮೊದಲಿನಿಂದಲೂ ಚೀಲಗಳನ್ನು ಹೊರುತ್ತಿದ್ದಾರೆ, ಕೆಲವೊಮ್ಮೆ ಅವು ಹೊಲಿದಿದ್ದು, ಕೆಲವೊಮ್ಮೆ ಅವು ದೇಹಕ್ಕೆ ಕಟ್ಟಿ ಹಾಕಿದ್ದು... ಇನ್ನೂ ಕೆಲವೊಮ್ಮೆ ಕೈಯಲ್ಲಿ ನೇತಾಡಿಸುತ್ತಾ ಓಡಾಡಿದ್ದಾರೆ… ಆದರೆ ಚೀಲ, ಜೇಬು ಆಗುವುದು ಎಂದಿಗೂ ಸಾಧ್ಯವಿಲ್ಲ. ನಿಜ, ಚೀಲ ಅಥವಾ ಬ್ಯಾಗ್ ಎಂದಿಗೂ ಜೇಬು ಅಥವಾ ಪಾಕೆಟ್ ಅಲ್ಲ. ‘ಬ್ಯಾಗ್’ ಹೊರಗೆ ಪ್ರದರ್ಶನಕ್ಕಿರುತ್ತದೆ. ಆದರೆ ‘ಪಾಕೆಟ್’ ಖಾಸಗಿಯಾದುದು. ಸ್ವಾವಲಂಬನೆಯ ಹೆಗ್ಗುರುತು ಜೇಬು. ಮಹಿಳೆಯರು ಸದಾ ಚೀಲವನ್ನು ಜೊತೆಗೇ ಒಯ್ಯಬೇಕು. ಚೀಲದ ಗಾತ್ರ ಸಂದರ್ಭಾನುಸಾರ ಬದಲಾಗುತ್ತಿರುತ್ತದೆ. ಇವೆಲ್ಲಾ ಪರಿಪೂರ್ಣ ಎಂಬಂತೆ ಮೇಲ್ನೋಟಕ್ಕೆ ಗೋಚರಿಸುತ್ತದೆ. ಸಮರ್ಥನೀಯ ಎಂದೂ ಕೆಲವರಿಗೆ ಅನಿಸಬಹುದು. ಆದರೆ, ಇದು ಕಣ್ಣಿಗೆ ಕಾಣುವಷ್ಟು ರೀತಿಯಲ್ಲಿ ಸರಳವಲ್ಲ ಎಂಬುದನ್ನು ಇತಿಹಾಸ ಹೇಳುತ್ತದೆ. 1954ರಲ್ಲಿ ಕ್ರಿಶ್ಚಿಯನ್ ಡಯರ್ ವಿವರಿಸಿದ್ದು ಹೀಗೆ: ‘ವಸ್ತುಗಳನ್ನು ಇಡಲು ಪುರುಷರಿಗೆ ಜೇಬುಗಳಿವೆ, ಮಹಿಳೆಯರಿಗೆ ಅಲಂಕಾರಪ್ರಾಯವಾಗಿ ಜೇಬುಗಳಿವೆ’.

ಮಹಿಳೆಗೆ ಅನುಕೂಲಕರ ದಿರಿಸಿನ ವಿಚಾರ ಮುಂಚೂಣಿಗೆ ಬಂದಿದ್ದು ಮಹಾಯುದ್ಧಗಳ ನಂತರ ಎಂಬುದು ವಿಪರ್ಯಾಸದ ಸಂಗತಿ. ಯುದ್ಧದಲ್ಲಿ ಪುರುಷರು ಸಾಯುತ್ತಿದ್ದಂತೆಯೇ, ಪುರುಷರು ಹೊಂದಿದ್ದ ಎಲ್ಲಾ ಉದ್ಯೋಗಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಅನಿವಾರ್ಯವಾಯಿತು. ಆಗ ಟ್ರೌಷರ್ಗಳು ಮತ್ತು ಇತರ ಎಲ್ಲಾ ಬಗೆಯ ಅನುಕೂಲಕರ ಉಡುಪುಗಳನ್ನು ಧರಿಸಲು ಮಹಿಳೆಯರು ಆರಂಭಿಸಿದರು… ಜೇಬುಗಳೂ ಆಗ ಬಂದವು. ಆದರೆ ಕಾಲಕ್ರಮೇಣ, ತೆಳ್ಳಗೆ ಬಳುಕಬೇಕೆಂಬ ಸಿದ್ಧಾಂತಕ್ಕೆ ಮಹತ್ವ ನೀಡಿದ ಫ್ಯಾಷನ್ ಉದ್ಯಮ, ಮಹಿಳೆಯ ಉಡುಪಿನಿಂದ ಜೇಬುಗಳನ್ನು ತೆಗೆದುಹಾಕಲು ಆರಂಭಿಸಿತು. ಟ್ರೌಷರ್ ಧರಿಸುವುದನ್ನು ಮಹಿಳೆ ಮುಂದುವರಿಸಿದಳು. ಆದರೆ ಜೇಬುಗಳು ಮಾಯವಾಗತೊಡಗಿದವು. ಜೇಬುಗಳಿದ್ದರೂ ಅವು ಅನುಪಯುಕ್ತವಾದ ಅಲಂಕಾರಿಕ ಸಾಧನಗಳಾಗಿ ಮಾತ್ರ ಉಳಿದುಕೊಂಡವು. ಕಳೆದ ಶತಮಾನದ 90ರ ದಶಕದಲ್ಲಂತೂ ಲೋ ವೇಸ್ಟ್ ಜೀನ್ಸ್ ಪ್ಯಾಂಟ್ಗಳೂ ಚಾಲ್ತಿಗೆ ಬಂದವು. ಆದರೆ ಆ ಪ್ಯಾಂಟ್ಗಳ ಪಾಕೆಟ್ಗಳಲ್ಲಿ ಏನನ್ನೂ ಇಡಲಾಗದ ಸ್ಥಿತಿ. ಆದರೆ, ಪುರುಷರ ಉಡುಗೆಗಳಲ್ಲಿ ಎಷ್ಟೊಂದು ಜೇಬುಗಳು... ಜಾಕೆಟ್, ಷರ್ಟ್, ಟ್ರೌಷರ್ ಎಲ್ಲಾ ವಿಧದ ಉಡುಗೆಗಳಲ್ಲೂ ಜೇಬುಗಳು. ಜೇಬು ಅಥವಾ ಪಾಕೆಟ್ ಎಂಬುದು ಪುರುಷ ಜಗತ್ತಿನದು ಎಂಬಂತಾಗಿ ಹೋಗಿದೆ. ಹೆಣ್ಣುಮಕ್ಕಳೂ ದುಡಿಯುವ ರಂಗದಲ್ಲಿದ್ದು ಹಣ ಸಂಪಾದನೆ ಮಾಡುತ್ತಾ ಕುಟುಂಬ ಸಲಹುತ್ತಿದ್ದರೂ ಹೆಚ್ಚಿನ ಬೆಲೆಗಳನ್ನು ಗ್ರಾಹಕರು ತೆರಬೇಕಾದಾಗ ಮನೆಯೊಡೆಯನ ಜೇಬಿಗೆ ಕತ್ತರಿ ಎಂಬಂತಹ ಭಾಷಾಪ್ರಯೋಗಗಳ ಕ್ಲೀಷೆಗಳನ್ನೂ ಎದುರುಗೊಳ್ಳುತ್ತಿರುತ್ತಲೇ ಇರುತ್ತೇವೆ.

ಹಿಲರಿ ಕ್ಲಿಂಟನ್ ಆವರನ್ನು ‘ಪವರ್ ಡ್ರೆಸರ್’ ಎಂದು ವರ್ಣಿಸಲಾಗುತ್ತದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದವರು ಅವರು. ‘ಪವರ್ ಡ್ರೆಸ್ಸಿಂಗ್’ ಎನ್ನುವ ಪರಿಕಲ್ಪನೆ 1970ರ ದಶಕದ ಉತ್ತರಾರ್ಧದಲ್ಲಿ
ಹುಟ್ಟುಪಡೆದು 1980ರ ದಶಕದಲ್ಲಿ ಹೆಚ್ಚು ಚಾಲ್ತಿಗೆ ಬಂತು. ಪುರುಷರ ಭದ್ರಕೋಟೆಗಳಾಗಿದ್ದ ರಾಜಕೀಯ ಹಾಗೂ ವೃತ್ತಿಪರ ವಲಯಗಳಲ್ಲಿ ಮಹಿಳೆ ತನ್ನ ಅಧಿಕಾರವನ್ನು ಪ್ರತಿಪಾದಿಸಿಕೊಳ್ಳಲು ರೂಪಿಸಿಕೊಂಡ ಫ್ಯಾಷನ್
ಶೈಲಿ ಇದು. ಆದರೆ, ಹಿಲರಿ ಉಡುಪುಗಳಲ್ಲೂ ಜೇಬುಗಳಿಲ್ಲ ಎಂಬುದನ್ನು ಎತ್ತಿ ಹೇಳಲಾಗಿದೆ. ಆದರೆ, ನಮ್ಮ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಅವರು ರೂಢಿಸಿಕೊಂಡಿರುವ ಉಡುಪಿನ ಶೈಲಿ ವಿಶಿಷ್ಟವಾದದ್ದು. ತಾವು ಉಡುವ ಸೀರೆಯ ಬಣ್ಣಕ್ಕೆ ಹೊಂದುವ ಕೈಮಗ್ಗದ ವಸ್ತ್ರದ ಬಣ್ಣಬಣ್ಣದ ಜಾಕೆಟ್ ಧರಿಸುವಂತಹ ಶೈಲಿ ಅದು. ಆ ಜಾಕೆಟ್ನಲ್ಲಿ ದೊಡ್ಡ ಜೇಬುಗಳಿರುವುದೂ ಎದ್ದು ಕಾಣಿಸುವಂತಹದ್ದು. ಸಚಿವೆ ಈ ಜಾಕೆಟ್ ಧರಿಸಲು ಕಾರಣಗಳೇನಿರಬಹುದು ಎಂಬುದು ಅಂತರ್ಜಾಲದಲ್ಲಿ ಚರ್ಚೆಯಾಗಿದೆ. ‘ಒಂದು ಬಗೆಯ ಸುರಕ್ಷತಾ ಜಾಕೆಟ್ ಇದು. ಪದೇಪದೇ ಸೆರಗು ಸರಿ ಮಾಡಿಕೊಳ್ಳುವ ಸಮಸ್ಯೆ ತಪ್ಪುತ್ತದೆ. ಆರಾಮದಾಯಕ. ಆತ್ಮವಿಶ್ವಾಸ ತುಂಬುವಂತಹದ್ದು. ಜೊತೆಗೆ, ಒಂದು ಬಗೆಯ ಔಪಚಾರಿಕತೆಯ ಘನತೆ ನೀಡುತ್ತದೆ’ ಎಂಬೆಲ್ಲಾ ಮಾತುಗಳು ಈ ಚರ್ಚೆಯಲ್ಲಿ ಹೊರಹೊಮ್ಮಿವೆ.

ಪುರುಷ ರಾಜಕಾರಣಿಗಳು ಜಾಕೆಟ್ಗಳನ್ನು ಧರಿಸುವುದು ಮಾಮೂಲು. ನೆಹರೂ ಜಾಕೆಟ್ಗಳು, ರಾಜಕಾರಣಿಗಳ ಮಧ್ಯೆ ಹಿಂದಿನಿಂದಲೂ ಜನಪ್ರಿಯ. ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಸಹ ನೆಹರೂ ಜಾಕೆಟ್ ಧರಿಸುವವರೇ. ರಾಷ್ಟ್ರವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ಜವಾಹರಲಾಲ್ ನೆಹರೂ ನೀತಿಗಳು ಕಾರಣವೆಂದು ಅವಕಾಶ ಸಿಕ್ಕಾಗಲೆಲ್ಲಾ ಟೀಕಿಸುತ್ತಲೇ ಬಂದಿರುವ ಪ್ರಧಾನಿ ನರೇಂದ್ರ ಮೋದಿ ಅವರೂ ನೆಹರೂ ಜಾಕೆಟ್ಗಳಿಗೆ ಮತ್ತಷ್ಟು ರಂಗು ತುಂಬಿ ರೂಪಾಂತರಗೊಳಿಸಿದರು ಎನ್ನಬಹುದು. ಮೋದಿಯವರು ಧರಿಸುವ ಕಿತ್ತಲೆ, ನಸುಗೆಂಪು, ಹಳದಿ, ನೀಲಿ ಹೀಗೆ ಗಾಢವರ್ಣಗಳ ಜಾಕೆಟ್ಗಳು ಈಗ ಜನಪ್ರಿಯವೂ ಆಗಿವೆ. ಅವು, ‘ಮೋದಿ ಜಾಕೆಟ್’ ಎಂಬ ಹೆಸರೂ ಪಡೆದುಕೊಂಡಿವೆ. ಮಧ್ಯಪ್ರದೇಶ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅರ್ಚನಾ ಚಿಟ್ನಿಸ್, ತಾವು ಧರಿಸುವ ಜಾಕೆಟ್ ಅನ್ನು ಮೋದಿ ಜಾಕೆಟ್ ಎಂದು ಹೇಳಿಕೊಳ್ಳುತ್ತಾರೆ.

ಭಾರತೀಯ ಉಡುಪಾದ ಪುರುಷರ ಪೈಜಾಮ ಕುರ್ತಾಗಳಲ್ಲೂ ಜೇಬುಗಳಿವೆ. ಆದರೆ, ಮಹಿಳೆಯರ ಎಲ್ಲಾ ಪೈಜಾಮ, ಕುರ್ತಾಗಳಲ್ಲಿ ಜೇಬುಗಳಿರುವುದಿಲ್ಲ. ಕೆಲವೊಂದು ಪ್ರತಿಷ್ಠಿತ ಸಂಸ್ಥೆಗಳು ಮಾರಾಟ ಮಾಡುವ ಕುರ್ತಿ, ಸೆಲ್ವಾರ್ಗಳಲ್ಲಷ್ಟೇ ಜೇಬುಗಳಿರುತ್ತವೆ.ಮಹಿಳೆಗೆ ಜೇಬುಗಳ ಅನುಕೂಲತೆ ನಿರಾಕರಣೆಯಲ್ಲಿ ವಿಕ್ಟೋರಿಯನ್ ಕಾಲದ ಪಿತೃಪ್ರಧಾನ ಮೌಲ್ಯಗಳ ಜಾಣ್ಮೆಯನ್ನು ಅನೇಕ ಅಧ್ಯಯನಕಾರರು ವಿಶ್ಲೇಷಿಸಿದ್ದಾರೆ. ಪುರುಷರು ತಮ್ಮ ಹಿರಿಮೆಯನ್ನು ಪರಿಣಾಮಕಾರಯಾಗಿ ಕಾಪಾಡಿಕೊಳ್ಳಲು ಮಹಿಳೆ ಉಡುಪುಗಳಲ್ಲಿ ಜೇಬುಗಳಿಲ್ಲದಿರುವುದೂ ಒಂದು ಪ್ರಮುಖ ಕಾರಣ ಎಂಬಂಥ ವಾದಗಳನ್ನೂ ಮಂಡಿಸಲಾಗಿದೆ. ಆದರೆ ಈ ಎಲ್ಲಾ ವಾದವಿವಾದಗಳು ಫ್ಯಾಷನ್ ಉದ್ಯಮವನ್ನು ಮಾತ್ರ ತಟ್ಟಿಲ್ಲ. ತನ್ನ ವಾಹನದ ಬೀಗದ ಕೈ, ಫೋನ್, ಪೆನ್ ಹಾಗೂ ಹಣವನ್ನು ಸದಾ ತನ್ನ ಜೊತೆಗೇ ಇಟ್ಟುಕೊಳ್ಳುವ ರೀತಿಯಲ್ಲಿ ಆಧುನಿಕ ಮಹಿಳೆಯ ಉಡುಪುಗಳಿರಲಿ ಎಂಬಂಥ ಅನೇಕ ಮಹಿಳೆಯರ ಆಶಯ ಪಲಿಸುವುದೇ? 1899ರ ‘ ದಿ ನ್ಯೂಯಾರ್ಕ್ ಟೈಮ್ಸ್’ ಬರಹದಲ್ಲಿರುವ ಈ ಮಾತುಗಳು ನಮಗೆ ಎಚ್ಚರಿಕೆಯ ಒಳದನಿಯಾಗಬೇಕು: ‘ನಾವು ಹೆಚ್ಚು ನಾಗರಿಕರಾಗತೊಡಗಿದಂತೆ ನಮಗೆ ಹೆಚ್ಚು ಜೇಬುಗಳು ಬೇಕಾಗುತ್ತವೆ. ಜೇಬುಗಳನ್ನು ಕಂಡು ಹಿಡಿದ ನಂತರ ಜೇಬುಗಳಿಲ್ಲದ ಯಾವ ವ್ಯಕ್ತಿಯೂ ದೊಡ್ಡವರಾಗಿಲ್ಲ. ಜೇಬುರಹಿತವಾಗಿರುವ ಹೆಣ್ಣು ಜೀವ ನಮಗೆ ಸ್ಪರ್ಧೆ ಒಡ್ಡಲಾಗದು’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.