ಜಾರ್ಜ್ ಆರ್ವೆಲ್ 1948ರಲ್ಲಿ ನಡೆಯುತ್ತಿದ್ದ ಜಗತ್ತಿನ ರಾಜಕೀಯ ಬೆಳವಣಿಗೆಗಳನ್ನು ನೋಡುತ್ತಾ, ತನ್ನ ವಿಶಿಷ್ಟ ಮುಂಗಾಣ್ಕೆಯಿಂದ ಮುಂದೇನಾಗಬಲ್ಲದು ಎಂದು ಊಹಿಸಿ ‘1984’ ಎಂಬ ದಾರ್ಶನಿಕ ಕಾದಂಬರಿಯನ್ನು ಬರೆದ. ಈ ಕಾದಂಬರಿಯಲ್ಲಿ ಬರುವ ‘ಬಿಗ್ ಬ್ರದರ್ ಈಸ್ ವಾಚಿಂಗ್ ಯು’ ಎಂಬ ಎಚ್ಚರಿಕೆಯ ಮಾತು ಈಗ ಜಗತ್ತಿನ ಜನಪ್ರಿಯ ನುಡಿಗಟ್ಟಾಗಿದೆ. ಈಚಿನ ದಶಕಗಳಲ್ಲಿ ಜಗತ್ತಿನ ವ್ಯವಹಾರವನ್ನೆಲ್ಲ ನಿಯಂತ್ರಿಸಲೆತ್ನಿಸುವ ಅಮೆರಿಕವನ್ನು ‘ಬಿಗ್ ಬ್ರದರ್’ ಎಂದು ವಿಶ್ಲೇಷಕರು ಕರೆಯುತ್ತಿರುತ್ತಾರೆ.

ಯಾವುದೇ ಗಂಭೀರ ಪರಿಕಲ್ಪನೆಯನ್ನಾದರೂ ಜನಪರಿಚಿತವಾಗಿಸಬಲ್ಲ ಅಥವಾ ತೆಳುವಾಗಿಸಬಲ್ಲ ಟೆಲಿವಿಷನ್ ಲೋಕ ‘ಬಿಗ್ ಬ್ರದರ್’ ಎಂಬ ನುಡಿಗಟ್ಟನ್ನೂ ತೆಳುವಾಗಿಸಿತು. ಹದಿನೆಂಟು ವರ್ಷಗಳ ಕೆಳಗೆ ಡಚ್ ಟೆಲಿವಿಷನ್ ‘ಬಿಗ್ ಬ್ರದರ್’ ಎಂಬ ರಿಯಾಲಿಟಿ ಗೇಮ್ ಷೋ ಆರಂಭಿಸಿತು. ಹೊರ ಜಗತ್ತಿನ ಜೊತೆಗೆ ಸಂಬಂಧವಿಲ್ಲದೆ ಕೆಲ ಕಾಲ ಒಂದು ಮನೆಯಲ್ಲಿ ಇರುವ ‘ಹೌಸ್ ಗೆಸ್ಟ್’ಗಳ ಮನರಂಜನಾ ನಟನೆ ಶುರುವಾದದ್ದು ಆಗ. ತೊಳೆದಂತೆಲ್ಲ ಇಲ್ಲವಾಗುವ ‘ಡೈಲಿ ಸೋಪ್’ ಧಾರಾವಾಹಿಗಳಿಂದ ಬೋರಾಗಿದ್ದ ಜನಕ್ಕೆ ನೈಜತೆಯ ಮುಸುಕಿನ ಈ ನಟನೆ ಇಷ್ಟವಾಗಿರಬಹುದು. ಆನಂತರ ಅಮೆರಿಕನ್ ಟೆಲಿವಿಷನ್ ‘ಬಿಗ್ ಬ್ರದರ್’ ಎಂಬ ರಿಯಾಲಿಟಿ ಗೇಮ್ ಷೋ ಶುರು ಮಾಡಿತು. ವಿಭಿನ್ನ ಧೋರಣೆಗಳ ಜನ ಒಂದು ದೊಡ್ಡ ಮನೆಯಲ್ಲಿದ್ದು ಜಗಳವಾಡುವುದು, ಕಿರುಚುವುದು ಮುಂತಾದ ಅಬ್ಬರಗಳ ಷೋಗಳು ಅಮೆರಿಕದಿಂದ ಇಂಡಿಯಾಕ್ಕೂ ಆಮದಾದವು.

ಈಚೆಗೆ ನಟ, ನಿರ್ದೇಶಕ ವೆಂಕಟ್ ‘ಬಿಗ್ ಬಾಸ್’ ಷೋನಲ್ಲಿದ್ದ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿ ಹೊರ ಬಿದ್ದ ನಂತರ ನಡೆದ ಬೆಳವಣಿಗೆಗಳನ್ನು ನೀವು ಗಮನಿಸಿರಬಹುದು. ತಕ್ಷಣ ದೊರೆತ ಅತಿ ಪ್ರಚಾರದಲ್ಲಿ ತೇಲುತ್ತಿದ್ದ ವೆಂಕಟ್ ಮಾತಿನ ನಡುವೆ ಡಾ. ಅಂಬೇಡ್ಕರ್ ಅವರ ಬಗ್ಗೆ ಅವಹೇಳನದ ಮಾತಾಡಿ ಕಸ್ಟಡಿಯಲ್ಲಿದ್ದಾರೆ. ವೆಂಕಟ್ ಬಗ್ಗೆ ಹೆಚ್ಚು ಗೊತ್ತಿರದ ನಾನು ಅವರ ಹಿನ್ನೆಲೆ ಅರಿಯಲು ಸಿನಿಮಾ ಸ್ನೇಹಿತರನ್ನು ಕೇಳತೊಡಗಿದೆ. ಬಹುತೇಕರು ಅವರನ್ನು ವಿಚಿತ್ರ ವ್ಯಕ್ತಿ ಎನ್ನುತ್ತಿದ್ದರು. ಯೂ ಟ್ಯೂಬ್‌ನಲ್ಲಿ ಅವರ ವಿಚಿತ್ರ ಉದ್ಗಾರಗಳಿದ್ದವು. ಅವರ ಸಿನಿಮಾದ ಹಾಡೊಂದನ್ನು ನೋಡಿದರೆ, ಅದರಲ್ಲಿದ್ದ ಅತಿಯಾದ ಮೆಲೋಡ್ರಾಮ ನಮ್ಮ ಸಿನಿಮಾಗಳ ಒಟ್ಟು ಮೆಲೋಡ್ರಾಮವನ್ನೇ ಅಣಕಿಸುವಂತೆ ಕಾಣುತ್ತಿತ್ತು! ಯಾಕೋ ನನಗೆ ವೆಂಕಟ್ ‘ಹುಚ್ಚ’ ಅನ್ನಿಸಲಿಲ್ಲ. ಬದಲಿಗೆ, ಆಗಾಗ್ಗೆ ಉಕ್ಕುವ ಹಸಿ ಹಸಿ ಭಾವನೆಗಳನ್ನು ಹಾಗೇ ಚೆಲ್ಲುವ, ಕೊಂಚ ಅತಿ ನಡವಳಿಕೆಯ ವ್ಯಕ್ತಿ ಎನ್ನಿಸತೊಡಗಿತು.

ಮೊನ್ನೆ ಖಾಸಗಿ ಟಿವಿ ಚಾನೆಲ್‌ವೊಂದರ ಕಾರ್ಯಕ್ರಮದಲ್ಲಿ ವೆಂಕಟ್ ಅಣ್ಣ, ನಟ-ನಿರ್ದೇಶಕ ಕುಶಾಲ್ ಬಾಬು ವೆಂಕಟ್ ಬಗ್ಗೆ ಹೇಳುತ್ತಿದ್ದರು: ಎಂಜಿನಿಯರಿಂಗ್ ಪದವೀಧರನಾಗಿ, ಕಂಪೆನಿಯೊಂದರಲ್ಲಿ ಉತ್ತಮ ಕೆಲಸದಲ್ಲಿದ್ದ ವೆಂಕಟರಾಮನ್ (ವೆಂಕಟ್) ತನ್ನ ಗೆಳೆಯ ತೆಗೆದ ‘ಮೆಂಟಲ್ ಮಂಜ’ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡಿದ್ದರು; ಆ ಸಿನಿಮಾ ಕೊಂಚ ಯಶಸ್ವಿಯಾದಾಗ ವೆಂಕಟ್ ಅದೇ ರೀತಿಯ ಟೈಟಲ್ ಹುಡುಕಾಡಿ ‘ಹುಚ್ಚ ವೆಂಕಟ್’ ಎಂಬ ಸಿನಿಮಾ ಮಾಡಿದರು.

ಕೆಲವು ನಟರು ತಾವು ಮಾಡಿದ ಸಿನಿಮಾ ಅಥವಾ ಪಾತ್ರಗಳ ಮೂಲಕ ತಮ್ಮನ್ನು ಗುರುತಿಸಿಕೊಳ್ಳುವ ಹಾಗೆ ವೆಂಕಟ್ ಕೂಡ ‘ಹುಚ್ಚ ವೆಂಕಟ್’ ಎಂದು ಕರೆದುಕೊಂಡರು; ಜನ ಕೂಡ ಹಾಗೇ ಕರೆಯುವಂತೆ ಒತ್ತಾಯಿಸಿದರು. ಅವರ ಅಸಹಜ ನಡವಳಿಕೆಗಳು ಅತಿಯಾಗಲು ಅವರ ಸಿನಿಮಾಗಳು ಯಶಸ್ಸು ಕಾಣದೇ ಹೋದದ್ದು ಕೂಡ ಕಾರಣವಿರಬಹುದು. ಈ ಸೋಲಿನ ಜೊತೆಗೇ, ತಂದೆಯ ಹಣವನ್ನು ಪೋಲು ಮಾಡಿದೆನೆಂಬ ಪಾಪಪ್ರಜ್ಞೆಯಿಂದ ಕೂಡ ವೆಂಕಟ್ ಕುಸಿಯಲಾರಂಭಿಸಿದರು. ವಿಚಿತ್ರವೆಂದರೆ, ಹಲವರು ತಂತಮ್ಮ ಆಸೆ-ನಿರಾಸೆಗಳನ್ನು ವೆಂಕಟ್ ಮೂಲಕ ಕಂಡುಕೊಂಡು ಅವರನ್ನು ಮೆಚ್ಚತೊಡಗಿದರು; ಅವರ ಜೊತೆ ಗುರುತಿಸಿಕೊಳ್ಳುವ ಅಭಿಮಾನಿಗಳ ಸಂಖ್ಯೆಯೂ ಹೆಚ್ಚತೊಡಗಿತು… ಇದು ಕುಶಾಲ್ ಬಾಬು ಮಾತುಗಳ ಸಾರಾಂಶ.

ವಕ್ರ ನಡವಳಿಕೆಯನ್ನೇ ಹೀರೊಯಿಸಮ್ಮಾಗಿ ನೋಡುವ ಈ ಕಾಲದಲ್ಲಿ ವೆಂಕಟ್ ಈ ಇಮೇಜು ಪಡೆದಿರಬಹುದು ಎನ್ನಿಸಿ ಅವರನ್ನು ಹತ್ತಿರದಿಂದ ನೋಡಿದವರನ್ನು ವಿಚಾರಿಸತೊಡಗಿದೆ. ಹಲವರ ಪ್ರಕಾರ, ವೆಂಕಟ್ ವರ್ತನೆಯಲ್ಲಿ ಕೆಲವು ಅಸಹಜತೆಗಳಿದ್ದರೂ ಅವರದೇ ಆದ ಶಿಸ್ತುಗಳೂ ಇವೆ. ವೆಂಕಟ್ ತಾವು ಹಾಕಿಕೊಂಡ ಕೆಲಸವನ್ನು ಸಾಕಷ್ಟು ದಕ್ಷವಾಗಿ ಮಾಡಲೆತ್ನಿಸುತ್ತಾರೆ. ಹಣಕಾಸಿನ ವಿಷಯದಲ್ಲಿ ನಿಖರವಾಗಿ ಇರಬಲ್ಲ ವೆಂಕಟ್ ತಮ್ಮ ಜೊತೆಗೆ ದುಡಿದವರಿಗೆ ತಕ್ಕ ಸಂಭಾವನೆ, ಭತ್ಯೆ ಇತ್ಯಾದಿಗಳನ್ನು ಸರಿಯಾಗಿ ಕೊಡುತ್ತಾ ಬಂದಿದ್ದಾರೆ ಎಂಬುದನ್ನೂ ಹಲವರು ಒತ್ತಿ ಹೇಳುತ್ತಾರೆ. ತಮ್ಮ ಚಿತ್ರಗಳಲ್ಲಿ ಪಾಲ್ಗೊಂಡವರಿಗೆ ಅವರು ಸೆಟ್‌ನಲ್ಲೇ ಧಾರಾಳವಾಗಿ ಹಣ ಹಂಚಿದ್ದನ್ನು ಕುರಿತೂ ಮಾತಾಡುವವರಿದ್ದಾರೆ.

ವೆಂಕಟ್ ಮ್ಯಾನರಿಸಂ ನೋಡಿದವರು ಅವರಲ್ಲಿ ಈ ಕಾಲದ ಎರಡು ಉತ್ಪ್ರೇಕ್ಷಿತ ಸಿನಿಮಾ ಮಾದರಿಗಳು ಇರುವುದನ್ನು ಗಮನಿಸಿರಬಹುದು: ಒಂದನೆಯದು, ಉಪೇಂದ್ರರ ಪಾತ್ರಗಳಲ್ಲಿ ಕಾಣಬರುವ, ಯಾವ ಬಗೆಯ ಅಸಹಜ ವರ್ತನೆ ಕ್ಲಿಕ್ಕಾಗಬಹುದು ಎಂಬ ಪ್ರಜ್ಞಾಪೂರ್ವಕ ಲೆಕ್ಕಾಚಾರದಿಂದ ಹುಟ್ಟಿದ ‘ಹುಚ್ಚು’. ಎರಡನೆಯದು, ಜಗ್ಗೇಶ್ ಪಾತ್ರಗಳ ಒರಟಾದ ಗ್ರಾಮೀಣ ಟಚ್ ಇರುವ ಬಿಡುಬೀಸು ನಾಲಗೆ. ಈ ಎರಡರ ವಿಚಿತ್ರ ಕಸಿ ವೆಂಕಟ್ ಮ್ಯಾನರಿಸಮ್ಮಿನಲ್ಲಿ ಕಂಡರೆ ಅಚ್ಚರಿಯಲ್ಲ! ಈ ದೃಷ್ಟಿಯಿಂದ ವೆಂಕಟ್ ಇಪ್ಪತ್ತೊಂದನೆಯ ಶತಮಾನದ ‘ವಿಕ್ಷಿಪ್ತ ಸಿನಿಮಾ ಸಂಸ್ಕೃತಿ’ಯೇ ಸೃಷ್ಟಿಸಿರುವ ಮತ್ತೊಂದು ರೂಪ, ಅಷ್ಟೆ! ಉದಾಹರಣೆಗೆ, ಅವರು ಎಲ್ಲದಕ್ಕೂ ‘ಎಕ್ಕಡಾ’ ಎನ್ನುವುದನ್ನು ‘ಪಂಚ್ ವರ್ಡ್’ ಮಾಡಿಕೊಂಡಿದ್ದಾರೆ.

ಅದನ್ನೇ ಅವರು ಮತ್ತೆ ಮತ್ತೆ ಹೇಳಲಿ ಎಂದು ನಿರೀಕ್ಷಿಸುವ ಅವರ ಅಭಿಮಾನಿಗಳು, ಅವರ ಅಸಹಜ ವರ್ತನೆಗಳನ್ನು ಪ್ರೋತ್ಸಾಹಿಸಿ ಕುಣಿಸಲೆತ್ನಿಸುವ ಮಾಧ್ಯಮಗಳು, ಅವರು ಹೇಳಿದ್ದನ್ನೆಲ್ಲ ಯಾವುದೇ ಕತ್ತರಿಯಿಲ್ಲದೆ ತಲುಪಿಸುವ ಯೂ ಟ್ಯೂಬ್… ಎಲ್ಲವೂ ಸೇರಿ ವೆಂಕಟ್ ಈಗ ರೂಢಿಸಿಕೊಂಡಿರುವ, ಹಾಗೂ ಸ್ವತಃ ಅವರೇ ‘ಆಕರ್ಷಕ’ ಎಂದು ನಂಬಿಕೊಂಡಂತಿರುವ ವಿಚಿತ್ರ ವ್ಯಕ್ತಿತ್ವವನ್ನು ಸೃಷ್ಟಿಸಿದಂತಿದೆ.

ಈ ಬಗೆಯ ಮ್ಯಾನರಿಸಂ ಹಾಗೂ ಡೈಲಾಗುಗಳಿಗೆ ಚಪ್ಪಾಳೆಗಳೂ ಬೀಳುತ್ತಿರುವುದರಿಂದ ವೆಂಕಟ್ ಅದನ್ನು ಅತಿಗೆ ತೆಗೆದುಕೊಂಡು ಹೋಗಿ, ಅದನ್ನೇ ಸಹಜಾಭಿನಯದ ಮಾದರಿಯಂತೆ ಮಾಡಿಕೊಂಡಂತಿದೆ. ಸಡಿಲ ನಾಲಗೆ ಸೃಷ್ಟಿಸುವ ಅಗ್ಗದ ಜನಪ್ರಿಯತೆಯ ಚಪಲದಿಂದಾಗಿಯೋ ಅಥವಾ ತನ್ನ ಮಾತಿನ ಪರಿಣಾಮದ ಅರಿವಿಲ್ಲದೆಯೋ ಅವರೀಗ ಕಾನೂನಿನ ಕ್ರಮ ಎದುರಿಸುತ್ತಿದ್ದಾರೆ. ಆದರೆ ಈ ಘಟ್ಟ ಒಂದು ಬಗೆಯಲ್ಲಿ ವೆಂಕಟ್ ಜೀವನದ ಬಹು ಮುಖ್ಯ ತಿರುವಾಗಬಹುದು. ಒಂದು ಕಾಲಕ್ಕೆ ಹೆಚ್ಚು ಮಾತಾಡದೆ ಇಂಟ್ರೋವರ್ಟ್ ಆಗಿದ್ದ ವೆಂಕಟ್ ಈಗ ನ್ಯಾಯಾಂಗ ಬಂಧನದಲ್ಲಿ ಹೆಚ್ಚು ಆರೋಗ್ಯಕರವಾಗಿ ವರ್ತಿಸುತ್ತಿರುವಂತೆ ಕಾಣುತ್ತದೆ.

ಅಲ್ಲಿನ ಕೌನ್ಸೆಲಿಂಗ್‌ಗೆ ಕೂಡ ಅವರು ಸರಿಯಾಗಿ ಸ್ಪಂದಿಸಿದ್ದಾರೆಂಬ ಸುದ್ದಿಗಳಿವೆ. ವೆಂಕಟ್ ಸಮಸ್ಯೆಗಳ ಬಗ್ಗೆ ವೈದ್ಯರು ಮಾತ್ರ ನಿಖರವಾಗಿ ಹೇಳಬಲ್ಲರೇ ಹೊರತು ಉಳಿದವರಲ್ಲ. ಬಹುಶಃ ವೆಂಕಟ್ ಒಳಗೆ ಅವರಿಗೇ ಅರಿವಿರದೆ ಬೆಳೆದಿರುವ ಸ್ವಮೋಹವೂ ಅವರನ್ನು ದಿಕ್ಕೆಡಿಸಿರಬಹುದು. ಈ ಬಗೆಯ ಸ್ವಮೋಹಕ್ಕೆ ಅನಿರೀಕ್ಷಿತ ಶಾಕ್ ಎದುರಾದಾಗ ಆ ಗೀಳುಗಳು ಗುಣವಾಗಬಲ್ಲವು. ವೆಂಕಟ್‌ಗೆ ಅಷ್ಟಿಷ್ಟು ಪ್ರತಿಭೆಯಿದ್ದರೆ, ಆ ಪ್ರತಿಭೆ ಹೊಸ ರೀತಿಯಲ್ಲಿ ವಿಕಾಸವಾಗಲು ಕೂಡ ಆಗ ಸಾಧ್ಯವಾಗಬಹುದು.

‘ನಾನು ಸ್ವಲ್ಪ ಶಾರ್ಟ್ ಟೆಂಪರ್ಡ್; ಅದೊಂದು ಬಿಟ್ಟರೆ ಐ ಆ್ಯಮ್ ಲೈಕ್ ಎ ಕಿಡ್’ ಎಂದು ವೆಂಕಟ್ ‘ಬಿಗ್ ಬಾಸ್’ ಮನೆಯಲ್ಲಿ ತಮ್ಮನ್ನು ತಾವು ಪರಿಚಯಿಸಿಕೊಂಡದ್ದು ಕೂಡ ಪ್ರಾಮಾಣಿಕ ಮಾತಿನಂತೆಯೇ ಕಾಣುತ್ತದೆ. ‘ಬಿಗ್ ಬಾಸ್’ ನೋಡುವ ಜನ ಹಾದಿಬೀದಿಯಲ್ಲಿ ‘ಆ ಷೋನಲ್ಲಿ ಇನ್ನಿತರ ಪಾತ್ರಧಾರಿಗಳು ವೆಂಕಟ್ ಕೆರಳುವ ಪ್ರಶ್ನೆಗಳನ್ನೇ ಕೇಳಿ ಪ್ರಚೋದಿಸಿದ್ದು ‘ಬಿಗ್ ಬಾಸ್’ನಲ್ಲಿ ಆದ ಅನಾಹುತಕ್ಕೆ ಕಾರಣ’ ಎನ್ನುತ್ತಿದ್ದಾರೆ. ಈ ಜನಾಭಿಪ್ರಾಯ ಕೂಡ ಅಷ್ಟಿಷ್ಟು ಸತ್ಯವಿರಬಹುದು. ‘ಇಲ್ಲಿ ನಾಟಕಕ್ಕೆ ಅವಕಾಶ ಇಲ್ಲ’ ಎಂದು ಬಿಗ್ ಬಾಸ್ ಜಾಹೀರಾತು ಹೇಳುತ್ತಿರುವುದೇ ಇದು ನಿಜಕ್ಕೂ ‘ಷೋ’ ಎಂಬ ‘ರಿಯಾಲಿಟಿ’ಯನ್ನು ಎಲ್ಲರಿಗೂ ನೆನಪಿಸುವಂತಿದೆ! ಈ ಹಿಂದೆ ಹೇಳಿದ ಅಮೆರಿಕದ ‘ಬಿಗ್ ಬ್ರದರ್’ ಷೋನಿಂದ ಹಿಡಿದು, ಆನಂತರದ ಇನ್ನಿತರ ಬಗೆಯ ರಿಯಾಲಿಟಿ ಷೋಗಳಿಗೂ ‘ಷೋಆಫ್’ ಮೂಲ ಬಂಡವಾಳ ಎಂಬುದು ಅಲ್ಲಿ ನಟಿಸುವವರಿಗೂ ವೀಕ್ಷಕರಿಗೂ ಗೊತ್ತಿದೆ.

ಜಗತ್ತಿನ ಮಹಾಪ್ರತಿಭೆಗಳಾದ ಶೇಕ್ ಸ್ಪಿಯರ್, ದಾಸ್ತೊವಸ್ಕಿ, ಟಾಲ್ ಸ್ಟಾಯ್, ಸಿಗ್ಮಂಡ್ ಫ್ರಾಯ್ಡ್ ಥರದವರು ಮಾನವ ಮನಸ್ಸಿನ ಹಾಗೂ ಜಗತ್ತಿನ ಅಗೋಚರ ‘ರಿಯಾಲಿಟಿ’ಯನ್ನು ಅಥವಾ ‘ವಾಸ್ತವ’ವನ್ನು ‘ಹುಡುಕಲು’ ಯತ್ನಿಸುತ್ತಿದ್ದೇವೆ ಎಂಬ ವಿನಯದಿಂದ ಬರೆಯಲೆತ್ನಿಸಿದರು; ಆದರೆ ಕ್ಷಣಿಕ ಮನರಂಜನೆಯ ಟೆಲಿಲೋಕ ತಾನು ‘ರಿಯಾಲಿಟಿ’ಯನ್ನು ತೋರಿಸುತ್ತೇನೆಂಬ ಧಾರ್ಷ್ಟ್ಯದಲ್ಲಿ ಮಾತಾಡುತ್ತಿದೆ! ಇಲ್ಲಿ ‘ವಾಸ್ತವ’ ಹೇಗೆ ಸೃಷ್ಟಿಯಾಗುತ್ತಿರುತ್ತದೆ ಎಂಬ ಬಗ್ಗೆ ಅಲ್ಲಿ ಭಾಗಿಯಾಗಿರುವ ಸೂಕ್ಷ್ಮಜೀವಿಗಳು ಸತ್ಯ ನುಡಿಯತೊಡಗಿದಾಗ ಮಾತ್ರ ಅದರ ನಿಜ ಸ್ವರೂಪ ಎಲ್ಲರಿಗೂ ಗೊತ್ತಾಗುತ್ತದೆ.

ವೆಂಕಟ್ ಅತಿಗಳನ್ನು ಯಾರೂ ಕ್ಷಮಿಸಬೇಕಿಲ್ಲ. ಆದರೆ ಅವರ ಇವತ್ತಿನ ಬಿಕ್ಕಟ್ಟಿನಲ್ಲಿ ಅವರಂತೆಯೇ ಅವರ ಅಸಹಜತೆಯನ್ನು ಬಳಸಿಕೊಂಡವರ ಪಾಲೂ ಇದೆ. ಈ ಅಂಕಣ ಪ್ರಕಟವಾಗುವ ದಿನ ನ್ಯಾಯಾಲಯ ವೆಂಕಟ್ ಬೇಲ್ ಬಗ್ಗೆ ತೀರ್ಪು ಕೊಡುವ ಸಾಧ್ಯತೆ ಇದೆ. ಆ ತೀರ್ಪು ಏನೇ ಇದ್ದರೂ, ವೆಂಕಟ್ ತೀವ್ರ ಆತ್ಮಪರೀಕ್ಷೆ ಮಾಡಿಕೊಳ್ಳಲು ಇದು ಸಕಾಲ. ಭಾಷೆಯ ಅಗ್ಗದ, ಅಶ್ಲೀಲ ಬಳಕೆ ನಮ್ಮ ಸುತ್ತಲಿನ ಸಮಾಜದಲ್ಲಿ ತಕ್ಷಣದ ನಗೆಯನ್ನು, ಆದರೆ ದೀರ್ಘ ಕಾಲದ ಕಾಯಿಲೆಯನ್ನು ಸೃಷ್ಟಿಸುತ್ತದೆ; ಭಾಷೆಯನ್ನು ಹಾಗೆ ಬಳಸುವವರೂ ಅಸ್ವಸ್ಥರಾಗತೊಡಗುತ್ತಾರೆ. ಈ ಸರಳ ಸತ್ಯ ವೆಂಕಟ್ ಅವರಂತೆಯೇ ಅವರನ್ನು ಅನುಸರಿಸುವರಿಗೂ ದುರ್ಬಳಕೆ ಮಾಡಿಕೊಳ್ಳುವವರಿಗೂ ಅರಿವಾಗಬೇಕಾಗುತ್ತದೆ.

ತಮ್ಮ ಘೋಷಿತ ಹುಚ್ಚಿಗೆ ತಕ್ಕಂತೆ ಇಮೇಜ್ ರೂಪಿಸಿಕೊಳ್ಳಲೆತ್ನಿಸುವ ಅಪ್ರಜ್ಞಾಪೂರ್ವಕ ಬಯಕೆ ಹಾಗೂ ಸಮೂಹ ಮಾಧ್ಯಮ ಕೊಟ್ಟ ಅತಿಪ್ರಚಾರಗಳ ಬಲಿಪಶುವಿನಂತೆ ಕಾಣುವ ವೆಂಕಟ್ ತಮ್ಮ ಟೆಂಪರ್ ಮೆಂಟಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಹೊರ ಬರುವುದು ಅಸಾಧ್ಯವೇನಲ್ಲ; ಅದಕ್ಕಾಗಿ ವೆಂಕಟ್ ಕೆಲ ಕಾಲವಾದರೂ ತಮ್ಮ ‘ಎಂಜಿನಿಯರ್’ ವೆಂಕಟರಾಮನ್ ವ್ಯಕ್ತಿತ್ವಕ್ಕೆ ವಾಪಸಾಗಬೇಕಾಗುತ್ತದೆ. ತಾನೇ ಸೃಷ್ಟಿಸಿಕೊಂಡ ಇಮೇಜಿಗೆ ಬಲಿಯಾದ ವ್ಯಕ್ತಿಯೊಬ್ಬ ಅದರಿಂದ ಪಾರಾಗುವ ಹಾದಿಯನ್ನು ಕೂಡ ತನ್ನ ಆಳದಲ್ಲಿ ಚಿಂತಿಸಿ ಹುಡುಕಿಕೊಳ್ಳಬೇಕಾಗುತ್ತದೆ.

ವೆಂಕಟ್‌ಗೆ ನಿಜಕ್ಕೂ ಬೇಕಾಗಿರುವುದು ಕೆಲ ಕಾಲ ಕುಟುಂಬದ ಜೊತೆಗೆ ಆರಾಮಾಗಿ ಇರುವ ಸ್ಥಿತಿ ಎಂದು ಕಾಣುತ್ತದೆ. ಸದಾ ಏನಾದರೂ ಮಾಡಬೇಕು ಎಂಬ ತುಡಿತವಿರುವ ಚಡಪಡಿಕೆಯ ವ್ಯಕ್ತಿತ್ವಗಳಿಗೆ ಈ ಬಗೆಯ ‘ಆರಾಮು’ ಸುಲಭವಲ್ಲ. ಆದರೆ ಅವರ ಅಣ್ಣ ಕುಶಾಲ್ ಬಾಬು ಆಡಿದ ಕೆಲವು ಒಳನೋಟದ ಮಾತುಗಳನ್ನು ಕೇಳಿಸಿಕೊಂಡವರಿಗೆ ವೆಂಕಟ್ ಅವರ ಸಣ್ಣ ಪುಟ್ಟ ಹಾಗೂ ಗಂಭೀರ ಸಮಸ್ಯೆಗಳನ್ನು ಕುಶಾಲ್ ಬಾಬು ಅವರ ಆತ್ಮೀಯ ಸಂಗ ಕೆಲ ಮಟ್ಟಿಗಾದರೂ ಪರಿಹರಿಸಬಲ್ಲದು ಎಂದು ತೋರುತ್ತದೆ. ಆ ಕಾಲ ಬೇಗ ಬರಲಿ.

ಕೊನೆ ಟಿಪ್ಪಣಿ: ಪ್ರತಿಭೆ ಮತ್ತು ಮಾನಸಿಕ ಏರುಪೇರು
ವೆಂಕಟ್ ಪ್ರಕರಣವನ್ನು ಗಮನಿಸುತ್ತಿದ್ದ ಮನೋವಿಶ್ಲೇಷಣೆಯ ಗಂಭೀರ ವಿದ್ಯಾರ್ಥಿ ಪ್ರೊ.ರಾಜಾರಾಂ, ಜಾನ್ ನ್ಯಾಷ್ ಎಂಬ ಅಮೆರಿಕದ ಗಣಿತಶಾಸ್ತ್ರಜ್ಞನನ್ನು ಕುರಿತ ‘ಎ ಬ್ಯೂಟಿಫುಲ್ ಮೈಂಡ್’ ಪುಸ್ತಕ ಹಾಗೂ ಡಾಕ್ಯುಮೆಂಟರಿಯ ಬಗ್ಗೆ ನನ್ನ ಗಮನ ಸೆಳೆದರು. ಹದಿಹರೆಯದಲ್ಲೇ ಜೀನಿಯಸ್ ಎನ್ನಿಸಿಕೊಂಡಿದ್ದ ನ್ಯಾಷ್ ತಾರುಣ್ಯದಲ್ಲಿ ಅವರ ಒರಿಜಿನಲ್ ಗಣಿತಶಾಸ್ತ್ರ ಪ್ರತಿಭೆ ಅರಳತೊಡಗಿತ್ತು. ಆದರೆ ಮೂವತ್ತೊಂದನೆಯ ವಯಸ್ಸಿನಲ್ಲಿ ಅವರಿಗೆ ಸಿಝೋಫ್ರೇನಿಯಾ ಶುರುವಾಯಿತು. ಯಾರೋ ಬೆನ್ನು ಹತ್ತಿದ್ದಾರೆ ಎಂಬ ಭಯ ಕಾಡತೊಡಗಿತು. ಅಪಾರ ಮಾನಸಿಕ ಏಳುಬೀಳುಗಳನ್ನು ಎದುರಿಸಿದ ನ್ಯಾಷ್, ಹನ್ನೊಂದು ವರ್ಷಗಳ ನಂತರ ಅದರಿಂದ ಪಾರಾಗಿ ಸಂಶೋಧನೆ, ಬೋಧನೆ ಮುಂದುವರಿಸಿದರು. ತಮ್ಮ ‘ಗೇಮ್ ಥಿಯರಿ’ ಗಾಗಿ 1994ರಲ್ಲಿ ನೊಬೆಲ್ ಪ್ರಶಸ್ತಿ ಪಡೆದರು. ಇಂಥ ಮರುಹುಟ್ಟಿನ ಮಾದರಿಗಳು ಮಾನಸಿಕ ಏರುಪೇರುಗಳಿಂದ ಬಳಲುವ ಎಲ್ಲರಿಗೂ ಪ್ರೇರಣೆಯಾಗಬಲ್ಲವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.