ಆ ಕಂಪೆನಿಯ ಮುಖ್ಯಸ್ಥನಾಗಿದ್ದ ಆತ ಪ್ರತಿದಿನ ಕಿವಿ ಕಚ್ಚಿಸಿಕೊಳ್ಳುತ್ತಲೇ ಇದ್ದ. ಒಂದು ಸಂಸ್ಥೆಯ ಮುಖ್ಯಸ್ಥನಾದವನು ಎಲ್ಲರ ಮಾತನ್ನೂ ಕೇಳಿಸಿಕೊಳ್ಳಬೇಕೆಂದು ಅವನ ಇತ್ತೀಚಿನ ಮ್ಯಾನೇಜ್ಮೆಂಟ್ ಪಾಠ ಹೇಳಿಕೊಟ್ಟಿತ್ತು. ಆದರೆ ತಕ್ಷಣದ ಲಾಭದ ಮೇಲೆ ಕಣ್ಣಿಟ್ಟ ಈ ಕಾಲದ ಮ್ಯಾನೇಜ್ಮೆಂಟ್ ಪಾಠಗಳು ಮನುಷ್ಯನ ನೀಚತನಗಳನ್ನು ಸುಲಭವಾಗಿ ಗ್ರಹಿಸಲಾರವು ಹಾಗೂ ಮನುಷ್ಯನ ಮೂಲಭೂತ ದೌರ್ಬಲ್ಯಗಳನ್ನು ತೊಡೆಯಲಾರವು.

ಈ ಸತ್ಯ ಅವನಿಗೆ ಗೊತ್ತಿರಲಿಲ್ಲ. ಅವನು ಇತರರ ಮಾತನ್ನು ಕೇಳಿಸಿಕೊಳ್ಳುವ ರೀತಿಯಲ್ಲೇ ಅವನದು ಹಿತ್ತಾಳೆ ಕಿವಿಯೆಂದು ಕಂಪೆನಿಯವರಿಗೆಲ್ಲ ಗೊತ್ತಾಯಿತು. ಹೀಗಾಗಿ ಆ ಮುಖ್ಯಸ್ಥನ ಸುತ್ತ ತಮಗೆ ಬೇಕಾದ್ದನ್ನು ಹೇಳುವವರು ಹೆಚ್ಚಾದರು. ಆ ಮುಖ್ಯಸ್ಥ ಕೂಡ ಮೊದಮೊದಲು ತಾನು ಎಲ್ಲರಿಂದಲೂ ಮಾಹಿತಿ ಪಡೆದು ಹಳೆಯ ಕಾಲದ ರಾಜರಂತೆ ನೆಮ್ಮದಿಯಿಂದ ರಾಜ್ಯ ಆಳಬಹುದು ಎಂದು ತಿಳಿದಿದ್ದ. ಆದರೆ ಅದೆಲ್ಲ ಅಷ್ಟು ಸುಲಭವಿರಲಿಲ್ಲ. ಅವನಿಗೆ ಮಾಹಿತಿ ಕೊಡುವವರು ತಮ್ಮ ಅನುಕೂಲಕ್ಕೆ ತಕ್ಕ ಮಾಹಿತಿ ಕೊಡತೊಡಗಿದರು. ಅವನ ತಲೆ ಕೆಟ್ಟುಹೋಯಿತು.

ಇದೊಂದು ಪ್ರಾತಿನಿಧಿಕ ಪ್ರಸಂಗ. ನಮ್ಮ ರಾಜಕೀಯ ನಾಯಕರಿಗೆ, ಸಂಸ್ಥೆಗಳ ಮುಖ್ಯಸ್ಥರಿಗೆ, ಅಥವಾ ಯಾರಿಗೇ ಅದರೂ ಇಂಥ ಸ್ಥಿತಿ ಪ್ರತಿದಿನ ಎದುರಾಗುತ್ತಿರುತ್ತದೆ. ಇದನ್ನೆಲ್ಲ ಹತ್ತಿರದಿಂದ ನೋಡುತ್ತಿದ್ದ ನನಗೆ ಇಂಥವರಿಗೆಲ್ಲ ಶೇಕ್ಸ್ಪಿಯರ್ ಬರೆದ ‘ಒಥೆಲೊ’ ನಾಟಕದ ಇಯಾಗೊ ಎಂಬ ಹುಟ್ಟು ಚಾಡಿಕೋರ ಸೃಷ್ಟಿಸಿದ ಸರಣಿ ದುರಂತ ಗೊತ್ತಿರಲಿಕ್ಕಿಲ್ಲ ಎನ್ನಿಸಿತು. ಎಲ್ಲ ಕಾಲದಲ್ಲೂ ಇರುವ ಇಯಾಗೋಗಳನ್ನು ಸರಿಯಾಗಿ ಗ್ರಹಿಸಿದವರು ಮಾತ್ರ ತಮ್ಮ ಆರೋಗ್ಯ ಉಳಿಸಿಕೊಳ್ಳಬಲ್ಲರು ಎನ್ನಿಸಿದ್ದರಿಂದ ಈ ಸಲ ಇಯಾಗೊ ಪ್ರಸಂಗ ಹೇಳುತ್ತಿರುವೆ: ವೆನಿಸ್ಸಿನ ಇಯಾಗೋಗೆ ತಾನು ಬಯಸಿದ ಉಪಸೇನಾನಿಯ ಹುದ್ದೆ ಕ್ಯಾಸಿಯೋಗೆ ಸಿಕ್ಕಿದ್ದಕ್ಕೆ ಕಹಿಯಿದೆ.

ಅದರ ಜೊತೆಗೆ, ಬಿಳಿಯನಾದ ತಾನು ಸೇನಾಧಿಪತಿ ‘ನೀಗ್ರೋ’ ಒಥೆಲೊನ ಸಹಾಯಕನಾಗಿ ಕೆಲಸ ಮಾಡಬೇಕಲ್ಲ ಎಂದು ಅವನ ಬಿಳಿಯ ಅಹಂಕಾರ ಕೆರಳಿದೆ. ಬಿಳಿ ಹುಡುಗಿ ಸುಂದರಿ ಡೆಸ್ಡಿಮೋನಾ ಒಥೆಲೊನನ್ನು ಒಲಿದಿದ್ದು ಕೂಡ ಇಯಾಗೋಗೆ ಉರಿಯೆಬ್ಬಿಸುತ್ತದೆ. ಇಯಾಗೋನ ಹೆಂಡತಿ ಎಮಿಲಿಯಾ. ಅವಳ ಜೊತೆ ಒಥೆಲೊ ಮಲಗಿರಬಹುದೆಂಬ ಅನುಮಾನ ಅದು ಹೇಗೋ ಇಯಾಗೋನಲ್ಲಿ ಹುಟ್ಟಿದೆ. ಇವೆಲ್ಲ ಸೇರಿ ಹುಟ್ಟಿದ ನೀಚತನದಿಂದ ಇಯಾಗೋನ ಎಲುಬಿಲ್ಲದ ನಾಲಗೆ ಎತ್ತೆಂದರತ್ತ ತಿರುಗತೊಡಗುತ್ತದೆ.

ತನ್ನ ಸ್ವಾರ್ಥಕ್ಕಾಗಿ ಯಾರಿಗೆ ಏನು ಬೇಕಾದರೂ ಹೇಳುವ ಕ್ರೂರಿ ಇಯಾಗೋ ಪ್ರಕಾರ ಜನರ ಕಿವಿಯಿರುವುದೇ ಚಾಡಿ ಹೇಳುವುದಕ್ಕೆ! ಅವನ ಮೊದಲ ಬಲಿಪಶು ರಾಡರಿಗೋ. ಡೆಸ್ಡಿಮೋನಾಳನ್ನು ಮದುವೆಯಾಗಬಯಸಿದ್ದ ರಾಡರಿಗೋನನ್ನು, ನೀನು ಒಲಿದವಳನ್ನು ‘ಕರಿಯ’ ಒಥೆಲೊ ಮದುವೆಯಾಗಿದ್ದಾನೆ ಎಂದು ಅವನನ್ನು ಒಥೆಲೊ ವಿರುದ್ಧ ಎತ್ತಿ ಕಟ್ಟುತ್ತಾನೆ. ಡೆಸ್ಡಿಮೋನಳ ಅಪ್ಪನ ಬಳಿ ಹೋಗಿ ಕರಿಯ ಒಥೆಲೊ ನಿನ್ನ ಮಗಳನ್ನು ಹಾರಿಸಿಕೊಂಡುಹೋಗಿದ್ದಾನೆ ಎಂದು ಕೆರಳಿಸುತ್ತಾನೆ. ಆದರೆ ಡೆಸ್ಡಿಮೋನ ತಾನು ಒಥೆಲೊನನ್ನು ಒಲಿದಿದ್ದೇನೆಂದು ಅಪ್ಪನೆದುರೇ ಸಾರಿದ ಮೇಲೆ ಇಯಾಗೊ ಒಥೆಲೊನ ಮದುವೆಯನ್ನೇ ಮುರಿಯ ಲೆತ್ನಿಸುತ್ತಾನೆ.

ಅಸೂಯೆಯನ್ನೇ ತಿಂದು ಬದುಕುವ ಇಯಾಗೋಗೆ ಯಾವುದೂ ಪವಿತ್ರವಲ್ಲ. ಅವನು ಎಲ್ಲರನ್ನೂ ದ್ವೇಷಿಸುತ್ತಾನೆ. ಪ್ರತಿ ಕ್ಷಣ ಒಬ್ಬರ ಮೇಲೆ ಒಬ್ಬರನ್ನು ಎತ್ತಿಕಟ್ಟದಿದ್ದರೆ ಅವನಿಗೆ ತೃಪ್ತಿಯಿಲ್ಲ. ಅವನ ಚಾಡಿಕೋರ ಬುದ್ಧಿ, ಅವನ ನಾಲಗೆ, ಅವನ ಗೋಸುಂಬೆ ನಟನೆ ಎಂಥ ಸನ್ನಿವೇಶವನ್ನಾದರೂ ದುರ್ಬಳಕೆ ಮಾಡಿಕೊಳ್ಳಲೆತ್ನಿಸುತ್ತದೆ. ‘ನಿತ್ಯ ಸಂಚುಜೀವಿ’ ಇಯಾಗೊ ‘ನನ್ನ ಸಣ್ಣ ಬಲೆಯಲ್ಲಿ ಈ ದೊಡ್ಡ ನೊಣ ಸಿಕ್ಕಿಕೊಳ್ಳುವಂತೆ ಮಾಡುವೆ’ ಎನ್ನುತ್ತಾ, ಒಥೆಲೊ ಕ್ಯಾಸಿಯೋನನ್ನು ಕೆಲಸದಿಂದ ತೆಗೆದು ಹಾಕುವ ಸನ್ನಿವೇಶ ಸೃಷ್ಟಿಸುತ್ತಾನೆ.

ಹಾಗೆ ಮಾಡಿದ ಮೇಲೆ ಕ್ಯಾಸಿಯೋಗೆ ಮತ್ತೆ ಅದೇ ಕೆಲಸ ಕೊಡಿಸುತ್ತೇನೆ ಎಂದು ಮತ್ತೊಂದು ಬಲೆ ಹೆಣೆಯುತ್ತಾನೆ. ನೀನೀಗ ಹೋಗಿ ಡೆಸ್ಡಿಮೋನಳನ್ನು ಬೇಡಿಕೊಂಡರೆ ಅವಳು ಒಥೆಲೊಗೆ ಹೇಳಿ ಮತ್ತೆ ನಿನ್ನ ಕೆಲಸ ಕೊಡಿಸುತ್ತಾಳೆ ಎಂದು ಕ್ಯಾಸಿಯೋನನ್ನು ಡೆಸ್ಡಿಮೋನಳ ಬಳಿ ಕಳಿಸುತ್ತಾನೆ. ಅತ್ತ ಕ್ಯಾಸಿಯೋ ಡೆಸ್ಡಿಮೋನಳ ಬಳಿ ಈ ಬೇಡಿಕೆ ಇಡಲು ಹೊರಟಾಗ ಒಥೆಲೊ ಬಳಿ ಹೋಗಿ, ಕ್ಯಾಸಿಯೋ ನಿನ್ನ ಹೆಂಡತಿಯ ಬಳಿ ಹೋಗಿದ್ದಾನೆ; ಕ್ಯಾಸಿಯೋನನ್ನು ಡೆಸ್ಡಿಮೋನ ಮೋಹಿಸಿದ್ದಾಳೆ ಎಂದು ಸುಳ್ಳು ಬಿತ್ತುತ್ತಾನೆ.

ಹುಸಿಯನಾಡುವ ನಾಲಗೆ, ಸದಾ ಒಸರುವ ವಿಷ, ನಟನೆ, ಕುತಂತ್ರ ಎಲ್ಲವೂ ಸೇರಿಕೊಂಡು ಇಯಾಗೋ ನಿರ್ದಯನಾಗುತ್ತಾ ಹೋಗುತ್ತಾನೆ. ಪ್ರಕೃತಿಗೆ ಹತ್ತಿರವಿರುವ ಒಥೆಲೊ ಇಯಾಗೊ ಹೇಳಿದ್ದನ್ನು ನಂಬತೊಡಗುತ್ತಾನೆ. ಇಯಾಗೋನ ಕ್ರೂರ ಅಸೂಯೆ ಒಥೆಲೊನ ನೆಮ್ಮದಿಗೆಡಿಸುವ ಹಸಿ ಅಸೂಯೆಯಾಗಿ ಅವನನ್ನು ದಹಿಸತೊಡಗುತ್ತದೆ. ಡೆಸ್ಡಿಮೋನಳ ಬಗೆಗಿನ ಅವನ ಮುಗ್ಧ ಪ್ರೀತಿ ಹಠಾತ್ತನೆ ಕುರುಡು ದ್ವೇಷವಾಗುತ್ತದೆ.

ಇಯಾಗೋನ ವಿನಾಶಕರ ಬುದ್ಧಿ ಮೂರು ಹೊತ್ತೂ ಸಂಚು ರೂಪಿಸುವುದನ್ನು ಕುರಿತೇ ಯೋಚಿಸುತ್ತದೆ. ಒಥೆಲೊ ಡೆಸ್ಡಿಮೋನಾಗೆ ಪ್ರೀತಿಯಿಂದ ಕೊಟ್ಟ ಕರವಸ್ತ್ರವನ್ನು ಕದ್ದು ಬಳಸಿಕೊಳ್ಳುವ ಇಯಾಗೊ ಆ ಕರವಸ್ತ್ರ ಕ್ಯಾಸಿಯೋನ ಬಳಿ ಸಿಕ್ಕಿತೆಂದು ಒಥೆಲೊಗೆ ಹೇಳುತ್ತಾನೆ. ಕುಟಿಲ ಮಾತು, ಕಪಟ ಪುರಾವೆ, ಕೃತಕ ಸನ್ನಿವೇಶ ಎಲ್ಲವನ್ನೂ ಸೃಷ್ಟಿಸುವ ಇಯಾಗೋನನ್ನು ನಂಬುವ ಒಥೆಲೊ ಕುದಿಯತೊಡಗುತ್ತಾನೆ. ಇಯಾಗೋನ ಶಬ್ದಜಾಲ ಆ ಕುದಿಯನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಒಥೆಲೊ ಡೆಸ್ಡಿಮೋನಳ ಕತ್ತು ಹಿಸುಕುತ್ತಾನೆ. ಆ ಘಟ್ಟದಲ್ಲಿ ಎಮಿಲಿಯ, ಇಯಾಗೋನ ಸಂಚನ್ನು ಬಯಲುಗೊಳಿಸಿದ ಮೇಲೆ ಒಥೆಲೊನ ತೀವ್ರ ದ್ವೇಷ ತನ್ನ ಬಗೆಗಿನ ತೀವ್ರ ಅಸಹ್ಯಕ್ಕೆ ತಿರುಗುತ್ತದೆ. ಒಥೆಲೊ ತನ್ನನ್ನೇ ತಾನು ಇರಿದುಕೊಳ್ಳುತ್ತಾನೆ. ಅಷ್ಟರಲ್ಲಿ ಅನೇಕ ದುರಂತಗಳಾಗಿವೆ. ಈ ನಡುವೆ ಇಯಾಗೋಗೆ ಕೂಡ ಇರಿತವಾಗಿದೆ. ಕುಟಿಲ ಚಾಡಿಕೋರನೊಬ್ಬ ಸೃಷ್ಟಿಸಿದ ದುರಂತದ ಜೊತೆಗೇ, ಇಯಾಗೊ ಥರದವರು ಹೇಳಿದ್ದನ್ನೆಲ್ಲ ನಂಬುವ ಒಥೆಲೋನಲ್ಲಿ ಮೂರ್ಖ

ತನಕ್ಕೆ ಹತ್ತಿರವಿರುವ ಮುಗ್ಧತೆ ಕೂಡ ಈ ಸರಣಿ ದುರಂತಕ್ಕೆ ಕಾರಣವಾಗುತ್ತದೆ. ಕೊನೆಗೆ ಎಲ್ಲರೂ ನಾಶವಾಗುತ್ತಾರೆ.
ಚಾಡಿಕೋರನಿಂದ ಸೃಷ್ಟಿಯಾದ ಈ ದುರಂತ ಕತೆಯನ್ನು ಕೇಳಿದ ಮೇಲಾದರೂ ಆ ಅಧಿಕಾರಿಗೆ ತಾನು ಹಾಗೂ ತನ್ನ ಸಂಸ್ಥೆ ದುರಂತಕ್ಕೆ ಹತ್ತಿರವಿರುವುದು ಅರಿವಾಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ಈ ನಾಟಕವನ್ನು ಆಗಾಗ್ಗೆ ಧ್ಯಾನಿಸುವುದು ನಮ್ಮ ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಮುಖ್ಯ.

ತಮ್ಮ ಲಾಭಕ್ಕಾಗಿ ಯಾರಿಗೆ ಏನು ಬೇಕಾದರೂ ಹೇಳಬಹುದು ಎನ್ನುವ ಮಂದಿ ಹೆಚ್ಚುತ್ತಿರುವ ಈ ಕಾಲದಲ್ಲಿ ಈ ನಾಟಕದ ಅರ್ಥವನ್ನು ಅರಿಯುವುದು ನಮ್ಮ ಉಳಿವಿನ ದೃಷ್ಟಿಯಿಂದ ಕೂಡ ಅಗತ್ಯ. ನಿತ್ಯ ಚಾಡಿ ಹೇಳುವ ಎಲ್ಲರೂ ತಂತಮ್ಮ ಲಾಭಕ್ಕಾಗಿ ಆ ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಆದರೆ ಇಯಾಗೊ ಥರದ 24x7 ಚಾಡಿಕೋರರು ಇನ್ನಷ್ಟು ಅಪಾಯಕಾರಿ. ಕಾರಣ, ವಿಮರ್ಶಕ ನೊಬ್ಬ ಗುರುತಿಸುವಂತೆ, ‘ಇಯಾಗೊ ಮನುಷ್ಯರನ್ನು ಮೊದಲು ದ್ವೇಷಿಸಲು ಶುರು ಮಾಡುತ್ತಾನೆ; ನಂತರ ಅದಕ್ಕೆ ಕಾರಣ ಹುಟ್ಟಿಸಿಕೊಳ್ಳುತ್ತಾನೆ!’ ಅಷ್ಟೇ ಅಲ್ಲ, ಮನುಷ್ಯ ಯಾವ ಕಾರಣವೂ ಇಲ್ಲದೇ ನೀಚನಾಗಬಲ್ಲ ಎಂಬುದನ್ನೂ ಇಯಾಗೊ ಪಾತ್ರ ಸೂಚಿಸುತ್ತದೆ.

ಆಟಕ್ಕಾಗಿ ಇತರರನ್ನು ನಾಶ ಮಾಡುವ ಇಯಾಗೋಗಳು ಎಲ್ಲ ಕಾಲಕ್ಕೂ ಇರುತ್ತಾರೆ; ಅಂಥವರ ಕುಟಿಲತೆಯನ್ನು ಅರಿಯಬಲ್ಲ ವಿವೇಕಿಗಳೂ ಇರುತ್ತಾರೆ. ಹಾಗೆಯೇ ಇಯಾಗೋನ ಜಾಲ ತಿಳಿಯದೆ ನಾಶವಾಗುವ ಹುಂಬ ಒಥೆಲೊಗಳು ಕೂಡ ಎಲ್ಲ ಕಾಲಕ್ಕೂ ಇರುತ್ತಾರೆ. ಕೊನೆಯ ಪಕ್ಷ ಶೇಕ್ಸ್ಪಿಯರ್ನ ನಾಟಕದಿಂದಲಾದರೂ ಈ ಸತ್ಯ ತಿಳಿದವರು ಮಾತ್ರ ಈ ದುರಂತದಿಂದ ಪಾರಾಗುವ ಹಾಗೂ ತಮ್ಮ ಪರಿಸರವನ್ನು ದುರಂತದಿಂದ ಪಾರು ಮಾಡುವ ಸಾಧ್ಯತೆ ಇರುತ್ತದೆ.

ಅದರಲ್ಲೂ ನಾಯಕನಾದವನಿಗೆ ಯಾರು ಪ್ರಾಮಾಣಿಕ, ಯಾರು ಕುಟಿಲ ಎಂಬುದನ್ನು ಅರಿಯುವ ಸೂಕ್ಷ್ಮತೆಯಿಲ್ಲದಿದ್ದರೆ ದುರಂತ ಗ್ಯಾರಂಟಿ. ಆದರೆ ಇಯಾಗೋನಂಥವರ ಕುಟಿಲ ಮಾತುಗಳು ರೂಢಿಯಾದ ನಾಯಕರ ಕಿವಿಗಳಿಗೆ ಪ್ರಾಮಾಣಿಕರ ಗಿಲೀಟಿಲ್ಲದ ಮಾತುಗಳು ರುಚಿಸುವುದು ಕಷ್ಟ. ಹಿಂದೊಮ್ಮೆ ಬೇರಾವುದೋ ಸಂಸ್ಥೆಯ ಅಧಿಕಾರಿಯಾಗಿದ್ದವನು ತನ್ನ ಕಚೇರಿಯ ಮತ್ತೊಂದು ಬಗೆಯ ಸಮಸ್ಯೆಯ ಬಗ್ಗೆ ಹೇಳಿದ್ದು ಇಲ್ಲಿ ನೆನಪಾಗುತ್ತಿದೆ. ಅವನ ಸಮಸ್ಯೆಯ ವಿವರಗಳನ್ನು ಕೇಳಿಸಿಕೊಳ್ಳುತ್ತಿರುವಾಗ ಅವನು ಎಲ್ಲಿ ಎಡವಿದ್ದ ಎಂಬುದು ಹೊಳೆಯತೊಡಗಿತು. ತಾನು ಕಡುಜಾಣನೆಂದು ತಿಳಿದಿದ್ದ ಅವನು ಇತರರ ಮಾತನ್ನು ಸರಿಯಾಗಿ ಕೇಳಿಸಿಕೊಳ್ಳುತ್ತಿರಲಿಲ್ಲ.
ಕೇಳಿಸಿಕೊಂಡರೂ ತನಗೆ ಇಷ್ಟವಿರುವ ಮಾತನ್ನು ಮಾತ್ರ ಕೇಳಿಸಿಕೊಳ್ಳುತ್ತಿದ್ದ. ಹೀಗಾಗಿ ಎಲ್ಲರೂ
ಅವನನ್ನು ಹೊಗಳುತ್ತಿದ್ದರು; ತಂತಮ್ಮ ಲಾಭಗಳಿಗಾಗಿ ಅವನಿಗೆ ಪ್ರಿಯವಾದ ಮಾತುಗಳನ್ನಷ್ಟೆ ಹೇಳುತ್ತಿದ್ದರು.

ಲಂಕೇಶರ ‘ಗುಣಮುಖ’ ನಾಟಕದಲ್ಲಿ ಚಕ್ರವರ್ತಿ ನಾದಿರ್ ಶಾಗೆ ಕಾಯಿಲೆಯಾದಾಗ ಸರ್ಕಾರಿ ವೈದ್ಯರು ರಾಜನಾದ ಅವನನ್ನು ಹೊಗಳಿ ಹೊಗಳಿ ಅವನ ಕಾಯಿಲೆಯನ್ನು ಹೆಚ್ಚು ಮಾಡುತ್ತಾರೆ. ಆಗ ಪ್ರಾಮಾಣಿಕ ಹಕೀಮ ಅಲಾವಿಖಾನ್ ‘ಕಿವುಡ! ನಿನ್ನ ಕಾಯಿಲೆಯೆಲ್ಲ ನಿನ್ನ ಕಿವಿಯಿಂದಲೇ ಶುರುವಾಗಿದೆ’ ಎಂದು ರೇಗುತ್ತಾ ನಾದಿರ್ ಶಾನ ಅನಾರೋಗ್ಯದ ಬಗ್ಗೆ ಕೆಲವು ಕಟುಸತ್ಯಗಳನ್ನು ಹೇಳತೊಡಗುತ್ತಾನೆ. ಈ ಕಟುಸತ್ಯಗಳನ್ನು ಕೇಳಿಸಿಕೊಳ್ಳುತ್ತಾ ನಾದಿರ್ ನಿಧಾನವಾಗಿ ಗುಣಮುಖನಾಗತೊಡಗುತ್ತಾನೆ.

ಮನುಷ್ಯನೇಕೆ ನೀಚನಾಗುತ್ತಾನೆ? ಅದಕ್ಕೆ ಕಾರಣಗಳಿವೆಯೆ? ಅದು ನಿಷ್ಕಾರಣವೆ? ನೀಚನಾಗುವುದರಲ್ಲಿ ಅವನಿಗೆ ಆನಂದವಿದೆಯೆ? ಇಯಾಗೋಗೆ ತನ್ನ ಕುಟಿಲ ಭಾಷೆಯ ಬಳಕೆಯಿಂದ ಆನಂದವೂ ಆಗುತ್ತಿರಬಹುದು. ಯಾಕೆಂದರೆ, ಮನುಷ್ಯರು ಬರಬರುತ್ತಾ ತಮ್ಮ ನೀಚತನವನ್ನು ಆನಂದಿಸತೊಡಗುತ್ತಾರೆ. ಇದೆಲ್ಲ ಹುಂಬ ಒಥೆಲೊಗೆ ಅರ್ಥವಾಗುವುದಿಲ್ಲ. ಇಯಾಗೋನಂತೆ ಪೂರ್ಣಾವಧಿ ನೀಚನಾಗಿರುವ ವ್ಯಕ್ತಿಗೆ ಯಾರು ಬೇಕಾದರೂ ಬಲಿಯಾಗಬಹುದು. ಒಥೆಲೊ ಸೋತ ಕಡೆ ನಾದಿರ್ ಶಾ ಗೆಲ್ಲುತ್ತಾನೆ. ನಾದಿರ್ ಗೆಲ್ಲುವುದು ಚಾಡಿಕೋರರನ್ನು ಕೊಲ್ಲುವುದರಿಂದ. ನಾಯಕನಾದವನಿಗೆ ತಾನು ಕೇಳಿಸಿಕೊಳ್ಳುವ ಮಾತುಗಳಲ್ಲಿ ಯಾವುದು ಪ್ರಾಮಾಣಿಕ, ಯಾವುದು ಅಪ್ರಾಮಾಣಿಕ ಎಂಬ ತೀಕ್ಷ್ಣ ಅರಿವಿರಬೇಕು; ಅದಿಲ್ಲದಿದ್ದರೆ ಅದು ಕೇಳಿಸಿಕೊಳ್ಳುವವನನ್ನೇ ನಾಶ ಮಾಡುತ್ತದೆ ಎಂಬ ಅರಿವು ನಾದಿರ್ ಶಾಗಿತ್ತು.

ನಾಯಕರ ನಿತ್ಯದ ಕಷ್ಟಗಳು ಒಂದೊಂದಲ್ಲ. ಆದರೆ ಯಾವುದು ಸತ್ಯ, ಯಾವುದು ಸುಳ್ಳುಚಾಡಿ ಎಂದು ಗುರುತಿಸಲಾಗದ ನಾಯಕರು ತಮ್ಮ ಪತನವನ್ನೂ ತಾವೇ ಸೃಷ್ಟಿಸಿಕೊಳ್ಳುತ್ತಾರೆ; ಜೊತೆಗೆ ಸುತ್ತಲಿನವರ ಪತನವನ್ನೂ ಸೃಷ್ಟಿಸುತ್ತಾರೆ. ಒಥೆಲೊಗೆ ಈ ಸತ್ಯ ಕೊನೆಯವರೆಗೂ ತಿಳಿಯಲಿಲ್ಲ. ಆದ್ದರಿಂದ ಅವನು ಅಸೂಯೆಯಿಂದ ಕುದಿಕುದಿದು ಹುಚ್ಚಿನ ಸ್ಥಿತಿ ತಲುಪಿದ; ಸತ್ಯ ತಿಳಿದ ಮೇಲೆ ತನ್ನ ಬಗೆಗೇ ಅಸಹ್ಯವಾಗಿ ತನ್ನನ್ನೇ ಇರಿದುಕೊಂಡು ಸತ್ತ. ಆದರೆ ನಾದಿರ್ ಶಾ ಇತರರ ಮಾತುಗಳನ್ನು ಪರೀಕ್ಷಿಸಿ ಸತ್ಯವನ್ನು ಗುರುತಿಸಿಕೊಳ್ಳಬೇಕೆಂಬ ಪ್ರಜ್ಞೆ ಗಳಿಸಿಕೊಂಡದ್ದರಿಂದ ಕೂಡ ತನ್ನ ಕಾಯಿಲೆಯಿಂದ ಗುಣಮುಖನಾಗತೊಡಗಿದ. ಮುಗ್ಧ ಒಥೆಲೊನ ಸಾವು ಮತ್ತು ಜಾಣ ನಾದಿರ್ ಶಾನ ಉಳಿವು ಸಾರ್ವಜನಿಕ ಜೀವನದಲ್ಲಿರುವ ಎಲ್ಲರಿಗೂ ಒಳ್ಳೆಯ ಪಾಠಗಳಾಗಬಲ್ಲವು.
ಕೊನೆ ಟಿಪ್ಪಣಿ: ‘ತಡವಾಗಿ ಬಂದ ಬೆಳಕೇ!’

ಶೇಕ್ಸ್ಪಿಯರನ ‘ಕಿಂಗ್ ಲಿಯರ್’ ನಾಟಕದಲ್ಲಿ ಮಹಾರಾಜ ಲಿಯರ್ ತನ್ನ ಎಂಬತ್ತನೆಯ ವಯಸ್ಸಿನಲ್ಲಿ ತನ್ನ ಮೂವರು ಹೆಣ್ಣು ಮಕ್ಕಳಿಗೆ ರಾಜ್ಯ ಹಂಚುವ ಮುನ್ನ ‘ನಿಮಗೆ ನನ್ನನ್ನು ಕಂಡರೆ ಎಷ್ಟು ಪ್ರೀತಿ, ಹೇಳಿ ನೋಡೋಣ’ ಎನ್ನುತ್ತಾನೆ. ಮೊದಲ ಇಬ್ಬರು ಹೆಣ್ಣುಮಕ್ಕಳು ಅವನನ್ನು ಬಾಯಿಗೆ ಬಂದಂತೆ ಹೊಗಳುತ್ತಾರೆ. ಉಬ್ಬಿದ ಲಿಯರ್ ಅವರಿಬ್ಬರಿಗೂ ರಾಜ್ಯದ ಒಂದೊಂದು ಪಾಲು ಕೊಡುತ್ತಾನೆ. ಕಿರಿ ಮಗಳು ಕಾರ್ಡೀಲಿಯಾ ಮಾತ್ರ ‘ಒಬ್ಬ ಮಗಳು ತನ್ನ ತಂದೆಯನ್ನು ಎಷ್ಟು ಪ್ರೀತಿಸಬಹುದೋ ಅಷ್ಟು ಮಾತ್ರ ನಿನ್ನನ್ನು ಪ್ರೀತಿಸುವೆ’ ಎಂಬ ಉತ್ತರ ಕೊಡುತ್ತಾಳೆ.

ಅವಳ ಪ್ರಾಮಾಣಿಕ ಭಾಷೆ ರುಚಿಸದ ಲಿಯರ್ ಅವಳಿಗೆ ರಾಜ್ಯದಲ್ಲಿ ಪಾಲು ಕೊಡದೆ ಓಡಿಸುತ್ತಾನೆ. ಆದರೆ ತನ್ನನ್ನು ಬಾಯ್ತುಂಬ ಹೊಗಳಿದ ಹೆಣ್ಣು ಮಕ್ಕಳು ಕೊನೆಗೆ ತನ್ನನ್ನು ಮನೆ ಬಿಟ್ಟು ಓಡುವಂತೆ ಮಾಡಿದ ಮೇಲೆ ಲಿಯರ್ ಮಹಾರಾಜನಿಗೆ ಕಾರ್ಡೀಲಿಯಾಳ ಪ್ರಾಮಾಣಿಕತೆಯ ಅರಿವಾಗ ತೊಡಗುತ್ತದೆ. ಆದರೆ ಆ ಸತ್ಯ ಹೊಳೆಯುವ ಹೊತ್ತಿಗೆ ಲಿಯರ್ ಸಾವಿನ ಹಂತ ತಲುಪಿದ್ದಾನೆ. ಸಾವಿನ ಅಂಚಿನಲ್ಲಿ ಲಿಯರ್ ಕಣ್ಣೆದುರು ಸುಳಿದ ಬೆಳಕು ಲಿಯರ್ ಕತೆ ಕೇಳಿದವರ ಬಳಿ ಬೇಗ ಸುಳಿಯಲಿ!
ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.