ಅದೇ ಆಗ ಕಾವ್ಯ, ಕತೆಗಳ ಲೋಕವನ್ನು ಸ್ಪರ್ಶಿಸುತ್ತಿದ್ದ ನನ್ನ ಹದಿಹರೆಯದ ಅರೆಬರೆ ರಾಜಕೀಯ ತಿಳಿವಳಿಕೆಗಳ ನಡುವೆ ಜಯಪ್ರಕಾಶ ನಾರಾಯಣರ ಹೆಸರು ಅಸ್ಪಷ್ಟವಾಗಿ ಮೂಡತೊಡಗಿತ್ತು. ನನ್ನಂಥವರ ಪ್ರಜ್ಞೆಯಲ್ಲಿ ಜೆ.ಪಿ. ಹೀರೊ ಆಗಿ ಬೆಳೆಯತೊಡಗಿದ್ದು ಇಂದಿರಾ ಗಾಂಧಿಯವರ ಎಮರ್ಜೆನ್ಸಿಯ ಕರಾಳ ಅನುಭವಗಳನ್ನು ಕುರಿತ ಬರಹಗಳು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗತೊಡಗಿದ ಮೇಲೆ. ಆಗ ಕವಿ ಎಸ್.ಜಿ. ಸಿದ್ಧರಾಮಯ್ಯನವರ ಪುಸ್ತಕದ ಕಟ್ಟುಗಳ ನಡುವೆ ಕಂಡ ಜೆ.ಪಿ.ಯವರ ‘ಸೆರೆಮನೆ ದಿನಚರಿ’ಯ ಡಿ.ಎಸ್. ನಾಗಭೂಷಣರ ಅನುವಾದ, ಚಂದ್ರಶೇಖರ ಪಾಟೀಲರ ‘ಗಾಂಧಿಸ್ಮರಣೆ’ಯ ಕವನಗಳು ಹೊಸ ರಾಜಕೀಯ ಪ್ರಜ್ಞೆಯನ್ನು ರೂಪಿಸಿಕೊಳ್ಳಲು ನೆರವಾದವು. ಜೆ.ಪಿ. ಚಳವಳಿಯಲ್ಲಿ ಭಾಗಿಯಾಗಿ, ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಸೆರೆಮನೆವಾಸ ಅನುಭವಿಸಿ, ಇವತ್ತಿಗೂ ಜೆ.ಪಿ. ಚಳವಳಿಯ ಮೂಲಚೈತನ್ಯವನ್ನು ಉಳಿಸಿಕೊಂಡಿರುವ ಚಂಪಾಗೆ ಭಾರತ ಯಾತ್ರಾ ಕೇಂದ್ರ ಈ ಸಲದ ‘ಲೋಕನಾಯಕ ಜಯಪ್ರಕಾಶ ನಾರಾಯಣ ಪ್ರಶಸ್ತಿ’ಯನ್ನು ಕೊಟ್ಟಿರುವುದು ಅರ್ಥಪೂರ್ಣ.

ಮೊನ್ನೆ ಅಕ್ಟೋಬರ್ 11ರಂದು ಜೆ.ಪಿ. ಹುಟ್ಟಿದ ದಿನ ಡಿ.ಎಸ್. ನಾಗಭೂಷಣ ಬರೆದ ‘ಜಯಪ್ರಕಾಶ ನಾರಾಯಣ: ಒಂದು ಅಪೂರ್ಣ ಕ್ರಾಂತಿಯ ಕಥೆ’; ಕೆ.ಎಸ್. ನಾರಾಯಣಸ್ವಾಮಿ ಅನುವಾದಿಸಿರುವ ‘ಸಮಾಜವಾದದಿಂದ ಸರ್ವೋದಯಕ್ಕೆ’; ಬಳ್ಕೂರು ಸುಬ್ರಾಯ ಭಟ್ ಅನುವಾದಿಸಿರುವ ‘ಜೆ.ಪಿ. ವಿಚಾರದೃಷ್ಟಿ’ ಪುಸ್ತಕಗಳನ್ನು ಓದುತ್ತಾ, ಈ ಕಾಲದಲ್ಲಿ ಜೆ.ಪಿ. ವ್ಯಕ್ತಿತ್ವ ಹಾಗೂ ರಾಜಕಾರಣಗಳನ್ನು ಇನ್ನಷ್ಟು ಆಳವಾಗಿ ನೋಡಬೇಕಾದ ಅಗತ್ಯ ಹೊಳೆಯತೊಡಗಿತು. ಆ ಅಗತ್ಯ ಇವತ್ತು ರಾಜಕೀಯ ಕ್ರಿಯೆಯನ್ನು ಗಂಭೀರವಾಗಿ ನೋಡಲೆತ್ನಿಸುತ್ತಿರುವ ತಲೆಮಾರಿಗೆ ಇನ್ನೂ ಹೆಚ್ಚು ಇದೆ ಎನ್ನಿಸತೊಡಗಿತು.

1947ರವರೆಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಸಿಟ್ಟಿನ ತರುಣ ನಾಯಕರಾಗಿ ಹೊರಹೊಮ್ಮಿದ ಜೆ.ಪಿ., ಇಂಡಿಯಾದ ಎರಡನೆಯ ಸ್ವಾತಂತ್ರ್ಯ ಹೋರಾಟ ಎನ್ನಲಾಗುವ ಎಪ್ಪತ್ತರ ದಶಕದ ನವನಿರ್ಮಾಣ ಚಳವಳಿ ಹಾಗೂ ಎಮರ್ಜೆನ್ಸಿ ವಿರೋಧಿ ಹೋರಾಟವನ್ನು ಕಟ್ಟಿದರು. ಆ ಘಟ್ಟದಲ್ಲಿ ಬಿಹಾರದ ವಿದ್ಯಾರ್ಥಿಗಳನ್ನು ಅವರು ‘ಸಂಪೂರ್ಣ ಕ್ರಾಂತಿ’ಯ ಚಳವಳಿಗೆ ಧುಮುಕುವಂತೆ ಮಾಡಿದ್ದು ಇಂಡಿಯಾದ ಸ್ವಾತಂತ್ರ್ಯ ಚಳವಳಿಯ ಸ್ಪಿರಿಟ್ ಕಾಲಕಾಲಕ್ಕೆ ಮರುಹುಟ್ಟು ಪಡೆದಿರುವುದನ್ನೂ ಸೂಚಿಸುತ್ತದೆ.

ಬಿಹಾರದ ಚಪ್ರಾ ಜಿಲ್ಲೆಯ ಸಿತಾಬ್ದಿಯಾರ ಗ್ರಾಮದಲ್ಲಿ ಹುಟ್ಟಿದ ಜಯಪ್ರಕಾಶ್ ಹರೆಯದಲ್ಲೇ ಕಮ್ಯುನಿಸಂಗೆ ಒಲಿದು ಸಿಟ್ಟಿನ ಮಾರ್ಕ್ಸ್‌ವಾದಿಯಾಗಿದ್ದರು. ಮುಂದೆ ಅಮೆರಿಕದಲ್ಲಿ ಓದುವಾಗ ಮಾರ್ಕ್ಸ್ ವಾದವನ್ನು ಇನ್ನಷ್ಟು ಆಳವಾಗಿ ಅರಿತರು. ಮುಂದಿನ ವಿದ್ಯಾಭ್ಯಾಸಕ್ಕೆ ರಷ್ಯಾಕ್ಕೆ ತೆರಳಬೇಕಾಗಿದ್ದ ಅವರು ಅಮೆರಿಕದಲ್ಲಿ ಎಷ್ಟೇ ಬಗೆಯ ಸಣ್ಣ ಪುಟ್ಟ ಕೆಲಸ ಮಾಡಿದರೂ ರಷ್ಯಾಕ್ಕೆ ಹೋಗುವಷ್ಟು ಹಣ ಸಿಕ್ಕದೆ ಇಂಡಿಯಾಕ್ಕೆ ಹಾಗೂ ಸ್ವಾತಂತ್ರ್ಯ ಚಳವಳಿಗೆ ವಾಪಸಾದರು. ಅಹಿಂಸಾ ಮಾರ್ಗದ ಬಗ್ಗೆ ಅನುಮಾನಗಳನ್ನಿಟ್ಟುಕೊಂಡಿದ್ದ ಜೆ.ಪಿ. ಮುಂದೆ ಅಹಿಂಸಾ ಹೋರಾಟದ ಅನಿವಾರ್ಯತೆಯನ್ನೂ ಅರಿತರು. ಇಂಡಿಯಾದ ವಾಸ್ತವಕ್ಕೆ ತಕ್ಕ ಸಮಾಜವಾದವನ್ನು ರೂಪಿಸಲೆತ್ನಿಸಿದರು.

ಈ ನಡುವೆ ಜೆ.ಪಿ. ಭಾಗಿಯಾದ ಸ್ವಾತಂತ್ರ್ಯ ಚಳವಳಿಯ ಸಾಹಸಗಳಲ್ಲಿ ಅವರು ತಮ್ಮ ಗೆಳೆಯರ ಜೊತೆ ಜೈಲು ಗೋಡೆ ಹಾರಿದ ಘಟನೆಯೂ ಸೇರಿದೆ. ನಾಗಭೂಷಣರ ಪುಸ್ತಕದಿಂದ ಆಯ್ದ ಭಾಗಗಳು: ‘ಹತ್ತು ಜನರು ಸೇರಿ ಸೆರೆಮನೆಯ ಹೊರಗೋಡೆಯನ್ನು ಹಾರಿ ಪಲಾಯನ ಮಾಡುವ ಯೋಜನೆ ರೂಪಿಸಿದರು. ಅಂದು ದೀಪಾವಳಿ ಹಬ್ಬದ ಸಂಭ್ರಮ. ಕಾವಲು ಸಿಬ್ಬಂದಿಗೂ ಉಲ್ಲಾಸ. ಆ ಉಲ್ಲಾಸವನ್ನು ‘ಸದುಪಯೋಗ’ಪಡಿಸಿಕೊಳ್ಳಲು ಈ ಸ್ನೇಹಿತರ ತಂಡ ನಿರ್ಧರಿಸಿತು.

ಕಾವಲುಗಾರರನ್ನು ಕಾರ್ಯವಿಮಗ್ನಗೊಳಿಸುವ ಹೊಣೆ ಹೊತ್ತಿದ್ದ ನಾಲ್ವರು ಕಾವಲುಗಾರರನ್ನು ಕೂಡಿಸಿಕೊಂಡು ‘ದೀಪಾವಳಿ ಬಂದಿದೆಯೇ ಪ್ರಿಯೇ’ ಮುಂತಾದ ಪ್ರೇಮಗೀತೆಗಳನ್ನು ಹಾಡುತ್ತಾ ಅವರನ್ನು ನಗೆಗಡಲಿನಲ್ಲಿ ಮುಳುಗಿಸಿದ್ದರು. ರಾತ್ರಿ ಹತ್ತು ಗಂಟೆಗೆ ಸರಿಯಾಗಿ ಗೋಡೆ ಬದಿಗೆ ಮೇಜೊಂದನ್ನು ತಂದು ಹಾಕಿದರು. ಎಲ್ಲರ ಧೋತಿಗಳನ್ನೂ ಬಿಚ್ಚಿ ಒಂದಕ್ಕೊಂದು ಗಂಟು ಹಾಕಿ ಹಗ್ಗ ಮಾಡಿಕೊಳ್ಳಲಾಗಿತ್ತು. ಒಬ್ಬರ ಮೇಲೊಬ್ಬರು ಧೋತಿ ಹಗ್ಗ ಬಳಸಿಕೊಂಡು ಗೋಡೆ ಹಾರಿದರು’.

ತಮ್ಮ ಜೊತೆ ತಪ್ಪಿಸಿಕೊಂಡ ಉಳಿದ ಐವರ ಜೊತೆ ಕಾಡುಮೇಡುಗಳಲ್ಲಿ ಅಲೆದ ಜೆ.ಪಿ. ಅಪಾರ ಯಾತನೆ ಅನುಭವಿಸಿ ಬೇಹುಗಾರರ ಕಣ್ತಪ್ಪಿಸಿ ಕೊನೆಗೂ ಗಯಾ ಸೇರಿದರು. ಇದಕ್ಕಿಂತ ರೋಚಕ ಸಾಹಸವೊಂದು ಮುಂದೆ ನೇಪಾಳದ ಪೊಲೀಸರು ಜೆ.ಪಿ., ಲೋಹಿಯಾ ಮತ್ತು ಅವರ ಸಹಚರರನ್ನು ಬಂಧಿಸಿದಾಗ ನಡೆಯಿತು. ‘ಜಯಪ್ರಕಾಶ್ ಮತ್ತು ಅವರ ಸಹಚರರನ್ನು ಜಿಲ್ಲಾ ಕಲೆಕ್ಟರರ ನಿವಾಸದ ಪಡಸಾಲೆಯಲ್ಲಿ ಇರಿಸಲಾಗಿತ್ತು. ಆ ಹೊತ್ತಿಗೆ ಜಯಪ್ರಕಾಶರ ಗೆರಿಲ್ಲಾ ತಂಡ ಪೊಲೀಸರೆಲ್ಲಾ ಮಲಗಿದ್ದ ಸಮಯದಲ್ಲಿ ಮನೆಯ ಹಿತ್ತಲಿನ ಒಣಹುಲ್ಲಿಗೆ ಬೆಂಕಿ ಹತ್ತಿಸಿತು.

ಜಯಪ್ರಕಾಶರ ತಂಡವನ್ನು ಕಾಯುತ್ತಿದ್ದ ಇಬ್ಬರು ಪೊಲೀಸರು ಇತರರನ್ನು ಎಬ್ಬಿಸಿ, ಬೆಂಕಿ ಇದ್ದ ಕಡೆ ಕಳಿಸಿದರು. ಉಳಿದಿದ್ದ ಇಬ್ಬರು ಕಾವಲು ಪೊಲೀಸರ ಮೇಲೆ ಗೆರಿಲ್ಲಾ ತಂಡ ದಾಳಿ ಮಾಡಿ ಒಬ್ಬನನ್ನು ಕೊಂದು ಹಾಕಿತು. ಜಯಪ್ರಕಾಶ್, ಲೋಹಿಯಾ ಹಾಗೂ ಇತರ ಕೈದಿಗಳು ಹಾಸಿಗೆಯಿಂದ ಜಿಗಿದು ಅಲ್ಲಲ್ಲಿ ಬಿದ್ದಿದ್ದ ಬಂದೂಕುಗಳನ್ನು ಎತ್ತಿಕೊಂಡು ಪರಾರಿಯಾದರು. ಪೊಲೀಸರು ತಮಗಾದ ಮೋಸವನ್ನು ಅರಿತು ಹಿಂಬಾಲಿಸುವ ಹೊತ್ತಿಗೆ ಅವರು ಗುಡ್ಡಗಳಲ್ಲಿ ಮರೆಯಾಗಿದ್ದರು. ಲೋಹಿಯಾ ಮಾತ್ರ ಗುಂಪಿನಲ್ಲಿ ಹಿಂದೆ ಬಿದ್ದು ಗುಂಡಿನೇಟನ್ನು ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದರು’.

ಮುಂದೆ ಮೇಹರಾಜ್ ಮೆಹತಾ ಎಂಬ ಹೆಸರಿನಲ್ಲೂ ಜೆ.ಪಿ. ಚಳವಳಿ ಮುನ್ನಡೆಸಿದರು. ಅನೇಕ ಕಾರ್ಮಿಕ ಸಂಘಟನೆಗಳ ನಾಯಕರಾದರು. ಭೂಗತರಾಗಿ ಜನರನ್ನು ಸಂಘಟಿಸಿದರು. ಒಂದು ಘಟ್ಟದಲ್ಲಿ ಜೆ.ಪಿ. ಕಾಂಗ್ರೆಸ್ ಅಧ್ಯಕ್ಷರಾಗಬೇಕೆಂಬುದೂ ಗಾಂಧೀಜಿ ಆಸೆಯಾಗಿತ್ತು. ಲೋಹಿಯಾ, ಜೆ.ಪಿ., ಅಶೋಕ ಮೆಹ್ತಾ ಇನ್ನಿತರರು ಸಮಾಜವಾದಿ ಪಕ್ಷ ಕಟ್ಟಿದರು. ನಂತರದ ಚರಿತ್ರೆ ಎಲ್ಲರಿಗೂ ಗೊತ್ತಿದೆ.

ನೆಹರೂ ನೇತೃತ್ವದ ಸರ್ಕಾರದ ಬಗ್ಗೆ ಶುರುವಾದ ಭ್ರಮನಿರಸನ ಹಾಗೂ ಪಕ್ಷ ರಾಜಕಾರಣದ ಬಗೆಗಿನ ನಿರುತ್ಸಾಹ ಎಲ್ಲ ಸೇರಿ ಜೆ.ಪಿ.ಪಕ್ಷ ಹಾಗೂ ಸರ್ಕಾರಗಳ ಆಚೆಗೆ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸಲು ಬಿಹಾರದ ಸೆಖೊದೆವೋರಾದಲ್ಲಿ ಸರ್ವೋದಯ ಕೇಂದ್ರವನ್ನು ಕಟ್ಟಿದರು. ಈ ನಡುವೆ ವಿನೋಬಾ ಭಾವೆಯವರ ಸರ್ವೋದಯ ತತ್ವವೂ ಅವರನ್ನು ಸೆಳೆದಿತ್ತು. ವಿನೋಬಾ ಆರಂಭಿಸಿದ ಭೂದಾನ ಚಳವಳಿಯಿಂದ ಹದಿನೈದು ಲಕ್ಷ ಎಕರೆ ಭೂಮಿ ಮರುಹಂಚಿಕೆಯಾಗಿತ್ತು. ಭೂದಾನ ಚಳವಳಿ ಸೇರಿದ ಜೆ.ಪಿ. ಪ್ರೇರಣೆಯಿಂದ ಕೂಡ ಸಾವಿರಾರು ಎಕರೆ ಭೂಮಿಯನ್ನು ಜಮೀನ್ದಾರರು ಬಿಟ್ಟುಕೊಟ್ಟರು.

ಇಂದಿರಾ ಗಾಂಧಿಯವರ ಸರ್ವಾಧಿಕಾರದ ಕಾಲ ಮತ್ತೆ ಜೆ.ಪಿ.ಯವರನ್ನು ಚಳವಳಿ ರಾಜಕಾರಣಕ್ಕೆ ಕರೆತಂದಿತು. ಸಂಪೂರ್ಣ ಕ್ರಾಂತಿಯಲ್ಲಿ ನಂಬಿಕೆಯಿಟ್ಟ ಜೆ.ಪಿ.ಗೆ ಒಂದು ಸರ್ಕಾರ ಹೋಗಿ ಇನ್ನೊಂದು ಸರ್ಕಾರ ಬರುವುದರ ಮೂಲಕ ದೊಡ್ಡ ಬದಲಾವಣೆಯಾಗುತ್ತದೆ ಎಂಬ ನಂಬಿಕೆಯಿರಲಿಲ್ಲ. ಆದರೂ ತಮ್ಮೊಡನೆ ಜನತೆಯ ಚಳವಳಿಯಲ್ಲಿ ಸೇರಿರುವ ಜಡ್ಡು ಹಿಡಿದ ನಾಯಕರು ಮಾಗಹುದೆಂದು ಜೆ.ಪಿ. ನಿರೀಕ್ಷಿಸಿದ್ದರು. ಆ ಕನಸು ಅವರ ಕಣ್ಮುಂದೆಯೇ ಮುರಿದುಬಿತ್ತು. ಅವರು ರೂಪಿಸಿದ ಜನತಾ ಸರ್ಕಾರ ಎರಡೂವರೆ ವರ್ಷವಾಗುವ ಹೊತ್ತಿಗೆ ಕುಸಿದು ಬಿತ್ತು.

ಆ ಹೊತ್ತಿಗೆ ಜೆ.ಪಿ.ಯವರ ಆರೋಗ್ಯ ತೀರ ಕೆಟ್ಟಿತ್ತು. 1979ರ ಅಕ್ಟೋಬರ್ 9ರಂದು ಜೆ.ಪಿ. ತೀರಿಕೊಂಡಾಗ ಇಂಡಿಯಾದ ಸ್ವಾತಂತ್ರ್ಯ ಹೋರಾಟದಲ್ಲಿ ಅರಳಿದ್ದ ಶ್ರೇಷ್ಠ ಚಿಂತಕ-ನಾಯಕರ ಕೊನೆಯ ಕೊಂಡಿ ಕಳಚಿ ಬಿತ್ತು. ಆದರೆ ರಾಜಕೀಯ ಅಧಿಕಾರ ಹಿಡಿಯುವ ಧಾವಂತವಿಲ್ಲದೆ, ಜನರ ದನಿ, ಆತ್ಮಸಾಕ್ಷಿಯಾಗುವ ಮೂಲಕ ಇವತ್ತಿಗೂ ಇಂಡಿಯಾದ ಜನಮಾನಸದಲ್ಲಿ ಹೊಸ ನಂಬಿಕೆ ಹುಟ್ಟಿಸಬಹುದೆಂಬುದನ್ನು ಜೆ.ಪಿ. ಮತ್ತೊಮ್ಮೆ ತೋರಿಸಿಕೊಟ್ಟಿದ್ದರು.

ಜಯಪ್ರಕಾಶ ನಾರಾಯಣರ ಬಗ್ಗೆ ಇವತ್ತಿಗೂ ಇಂಡಿಯಾದುದ್ದಕ್ಕೂ ಹಬ್ಬಿರುವ ಅಪಾರ ಗೌರವಕ್ಕೆ ಅವರು ರಾಜಕೀಯ ಅಧಿಕಾರದ ಹೊರಗೆ ಉಳಿದಿದ್ದು ಕೂಡ ಒಂದು ಕಾರಣ. ಇಂಡಿಯಾದಲ್ಲಿ ಈ ಬಗೆಯ ‘ಸಂತತನ’ ಕೂಡ ನೈತಿಕ ಶಕ್ತಿಯಾಗಿ ವಿಕಾಸಗೊಳ್ಳುತ್ತಾ ಬಂದಿದೆ. ಆದರೆ ಇಂಥ ಉದಾತ್ತ ನಾಯಕರ ನಿಜವಾದ ಪ್ರಭಾವ ಅಷ್ಟಿಷ್ಟಾದರೂ ಮುಗ್ಧತೆಯನ್ನು ಉಳಿಸಿಕೊಂಡ ಜನರ ಮೇಲೆ ಆಗಬಲ್ಲದೇ ಹೊರತು ಅಧಿಕಾರದಾಹಿ ರಾಜಕಾರಣಿಗಳ ಮೇಲೆ ಆಗಲಿಕ್ಕಿಲ್ಲ ಎಂಬ ಕಟು ಸತ್ಯವೂ ಚರಿತ್ರೆಯಲ್ಲಿ ಎದುರಾಗುತ್ತದೆ.

ಯಾವಯಾವುದೋ ಕಾರಣಗಳಿಗೆ ಡಕಾಯಿತರಾಗಿ ಚಂಬಲ್ ಕಣಿವೆ ಸೇರಿಕೊಂಡಿದ್ದವರು ಜೆ.ಪಿ.ಯವರ ಎದುರು ಶರಣಾಗತರಾದರು; ಜೆ.ಪಿ.ಯವರ ಸಲಹೆಯಂತೆ ಬಯಲು ಬಂದಿಖಾನೆಯಲ್ಲಿದ್ದು ಹೊಸ ಹುಟ್ಟು ಪಡೆಯಲೆತ್ನಿಸಿದರು. ಆದರೆ ಜೆ.ಪಿ.ಯವರ ನೇತೃತ್ವದಲ್ಲಿ ಮಹಾತ್ಮ ಗಾಂಧಿಯವರ ಸಮಾಧಿಯೆದುರು ಪ್ರತಿಜ್ಞೆ ಮಾಡಿದ ರಾಜಕಾರಣಿಗಳಿಗೆ ಮಾತ್ರ ತಮ್ಮ ಹಳೆಯ ತೆವಲುಗಳನ್ನು ಬಿಟ್ಟು ಹೊಸ ಮನುಷ್ಯರಾಗುವುದು ಸಾಧ್ಯವಾಗಲಿಲ್ಲ. ಈ ವಾಸ್ತವ ಇಂಡಿಯಾದ ರಾಜಕಾರಣದಲ್ಲಿ ತೊಡಗಿರುವ ಬಹುತೇಕರ ಆಳದ ಸಿನಿಕತೆ ಹಾಗೂ ಭಂಡತನವನ್ನು ಸೂಚಿಸುತ್ತಿದೆಯೇ? ಇಂದಿರಾ ಗಾಂಧಿಯವರ ಸರ್ವಾಧಿಕಾರ ಎಂಬ ಶತ್ರುವನ್ನು ವಿರೋಧಿಸಲು ಹಲಬಗೆಯ ಗುಂಪುಗಳನ್ನು, ಜನಸಂಘದಂಥ ಕೋಮುವಾದಿ ಪಕ್ಷಗಳನ್ನು ಜನತಾ ಪಕ್ಷದ ಭಾಗವಾಗಿಸಿದ್ದರ ಭೀಕರ ಪರಿಣಾಮವೇನೆಂಬುದು ಈಗ ಎಲ್ಲರಿಗೂ ಗೊತ್ತಿದೆ.

ಮೊರಾರ್ಜಿ, ಚರಣ್ ಸಿಂಗ್ ಅಧಿಕಾರಕ್ಕಾಗಿ ಅನೇಕ ಅವಾಂತರಗಳನ್ನು ಸೃಷ್ಟಿಸಿಕೊಂಡರು. ಮುಂದೆ ಅಡ್ವಾಣಿ ಭಾರತವನ್ನು ವಿಭಜಿಸುವ ರಥಯಾತ್ರೆ ಮಾಡಿದರು; ವಾಜಪೇಯಿ ಆ ರಥಯಾತ್ರೆಯನ್ನು ಅನುಮೋದಿಸಿ ಅದರ ಫಲದಿಂದ ಪ್ರಧಾನಿಯಾದರು. ಈ ಬಗೆಯ ಶಕ್ತಿಗಳು ಬೆಳೆಸಿದ ಕೋಮುವಾದ ಇಂದು ಭೀಕರವಾದ ಹಲ್ಲು ಉಗುರುಗಳನ್ನು ಬೆಳೆಸಿಕೊಂಡು ದೇಶವನ್ನೇ ನಾಶ ಮಾಡುತ್ತಿದೆ. ಸ್ವಾತಂತ್ರ್ಯೋತ್ತರ ಇಂಡಿಯಾದ ಈ ದುರಂತಗಳಿಗೆ ಚರಿತ್ರೆಯ ಒಂದು ಘಟ್ಟದಲ್ಲಿ ತಮಗರಿವಿಲ್ಲದೆಯೇ ಜಯಪ್ರಕಾಶ ನಾರಾಯಣರೂ ಕಾರಣರಾದರು ಎಂಬುದು ದಟ್ಟ ವಿಷಾದವನ್ನು ಹುಟ್ಟಿಸುತ್ತದೆ. ಅದಕ್ಕೂ ಹಿಂದೆ ‘ಕಾಂಗ್ರೆಸ್ ವಿರೋಧಿವಾದಿ’ ರಾಜಕಾರಣವನ್ನು ರೂಪಿಸುವಾಗ ಲೋಹಿಯಾ ಕೂಡ ಈ ಬಗೆಯ ತಪ್ಪು ಮಾಡಿದ್ದರು.

ಆದರೆ ಈ ಇಬ್ಬರೂ ಇವತ್ತು ಇದ್ದಿದ್ದರೆ ಈ ಕೋಮುಶಕ್ತಿಗಳ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗುತ್ತಿದ್ದರು ಎಂಬ ಬಗ್ಗೆ ಯಾರಿಗೂ ಅನುಮಾನ ಬೇಡ. ಇವತ್ತಿಗೂ ಅವರ ಚಿಂತನೆಗಳನ್ನು ಒಪ್ಪುವವರು ಅಲ್ಲಲ್ಲಿಯಾದರೂ ಈ ಹೋರಾಟಗಳ ಜೊತೆಗಿದ್ದಾರೆ ಎಂಬುದು ಕೊಂಚ ಭರವಸೆ ಹುಟ್ಟಿಸುತ್ತದೆ. ಕರ್ನಾಟಕದಲ್ಲಿ ಹುಟ್ಟಿದ ರೈತ, ದಲಿತ ಚಳವಳಿ, ಬಂಡಾಯ ಸಾಹಿತ್ಯಗಳ ಹಿನ್ನೆಲೆಯಲ್ಲಿ ಹಾಗೂ ನವ್ಯಸಾಹಿತ್ಯ ತನ್ನ ದಿಕ್ಕು ಬದಲಿಸಿಕೊಂಡ ಹಿನ್ನೆಲೆಯಲ್ಲಿ ಜೆ.ಪಿ. ಚಳವಳಿಯೂ ಕೆಲಸ ಮಾಡಿದೆ. ಮೂರು ವರ್ಷಗಳ ಕೆಳಗೆ ನಡೆದ ಭ್ರಷ್ಟಾಚಾರ ವಿರೋಧಿ ಆಂದೋಲನ ಯು.ಪಿ.ಎ. ಸರ್ಕಾರವನ್ನು ಉರುಳಿಸುವ ಉದ್ದೇಶದಿಂದ ಹುಟ್ಟಿದ್ದು ನಿಜವಾದರೂ, ಅದರ ಫಲವಾಗಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದದ್ದು ಕೂಡ ಜೆ.ಪಿ. ಸ್ಪಿರಿಟ್ ಇಂಡಿಯಾದಲ್ಲಿ ಇನ್ನೂ ಉಳಿದಿರುವುದನ್ನು ತೋರಿಸುತ್ತದೆ.

ಕೊನೆ ಟಿಪ್ಪಣಿ: ಪುಟ್ಟ ಹುಡುಗಿಯ ಗಂಭೀರ ಪ್ರಶ್ನೆ ಈ ಅಂಕಣಕ್ಕೆ ಟಿಪ್ಪಣಿ ಮಾಡಿಕೊಳ್ಳುತ್ತಿದ್ದ ದಿನ ನಮ್ಮ ಶ್ರೇಷ್ಠ ನಾಯಕರ ಹುಟ್ಟು ಹಬ್ಬಗಳ ಸಂದರ್ಭದಲ್ಲಿ ಬರೆಯುವ ಈ ಬಗೆಯ ಬರಹಗಳು ಯಾಂತ್ರಿಕವಲ್ಲವೆ ಎಂಬ ಅನುಮಾನ ಅಡ್ಡಾಡತೊಡಗಿತ್ತು. ಆದರೆ ಅದೇ ದಿನ ದೂರದರ್ಶನದಲ್ಲಿ ಜಯಪ್ರಕಾಶ ನಾರಾಯಣರನ್ನು ಕುರಿತು ಕೆ.ಸಿ. ಶಿವರಾಮ್ ನಡೆಸಿಕೊಟ್ಟ ‘ಹಲೋ ಗೆಳೆಯರೆ’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಪುಟ್ಟ ಹುಡುಗಿಯೊಬ್ಬಳ ಪ್ರಶ್ನೆ ನನ್ನ ಈ ಅನುಮಾನವನ್ನು ಚದುರಿಸಿತು. ‘ನನ್ನ ಎಷ್ಟೋ ಫ್ರೆಂಡ್ಸ್‌ಗೆ ಗಾಂಧಿ, ಜೆ.ಪಿ.ಯಂಥ ದೊಡ್ಡವರ ಹೆಸರು ಕೂಡ ಗೊತ್ತಿರುವುದಿಲ್ಲ.

ನಾನು ಇವರ ಹೆಸರು ಹೇಳಿದರೆ ಇವರೆಲ್ಲಾ ಯಾರು ಎಂದು ನಗುತ್ತಾರೆ; ನಮ್ಮ ಟೀಚರ್ಸ್ ಇಂಥವರ ಬಗ್ಗೆ ಯಾಕೆ ಹೇಳಿಕೊಡುವುದಿಲ್ಲ?’ ಎಂದು ಆ ಹುಡುಗಿ ಕೇಳುತ್ತಿದ್ದಳು. ಅವಳ ಮುಗ್ಧ ಹಾಗೂ ಉತ್ಸಾಹದ ದನಿ ಕೇಳುತ್ತಿದ್ದಂತೆ ಇಂಥ ಆದರ್ಶ ಮಾದರಿಗಳನ್ನು ಎಲ್ಲ ಕಾಲದಲ್ಲೂ ಸಿನಿಕತೆಯಿಲ್ಲದೆ ಹಾಗೂ ದಣಿವರಿಯದೆ ತೋರಿಸುತ್ತಲೇ ಇರಬೇಕಾಗುತ್ತದೆ; ಅವುಗಳಿಂದ ಸ್ಫೂರ್ತಿ ಪಡೆದು ಹೊಸದನ್ನು ಸೃಷ್ಟಿಸುವ ಮನಸ್ಸುಗಳು ಎಲ್ಲ ಕಾಲದಲ್ಲೂ ಇರುತ್ತವೆ ಎಂಬ ಸತ್ಯ ಮತ್ತೊಮ್ಮೆ ಮನವರಿಕೆಯಾಗತೊಡಗಿತು.

editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.