ರಶ್ಮಿಯ ಅಪ್ಪ ಆರ್ಮಿಮ್ಯಾನ್. ಅದರ ಫಲವಾಗಿ ಈ ಹುಡುಗಿ ಮೈಸೂರಲ್ಲಿ ಹುಟ್ಟಿ, ಅಖಿಲ ಭಾರತದಲ್ಲಿ ಬೆಳೆದು ಟಿಸಿಲುಗಳನ್ನು ಬೆಳೆಸಿಕೊಂಡಿದ್ದಳು. ತೀರಾ ಸಿಟ್ಟು ಬಂದರೆ ಬಾಯಲ್ಲಿ ಹಿಂದಿ ಬೈಗುಳಗಳು, ಇಂಗ್ಲಿಷಿನ ‘ಬ್ಲಡಿ’ ’**** ಯೂ’ ಗಳೂ ಹೂವು ಅರಳುವಷ್ಟೇ ಸಹಜವಾಗಿ ಅರಳುತ್ತಿದ್ದವು.

ಅಂಥಿಂಥದ್ದಕ್ಕೆಲ್ಲ ಸಿಟ್ಟು ಮಾಡಿಕೊಳ್ಳುತ್ತಿರಲಿಲ್ಲ ಅವಳು. ಯಾರಾದರೂ ಕ್ಯೂ ಬ್ರೇಕ್ ಮಾಡಿದರೆ, ಅವಳ ವಸ್ತುಗಳನ್ನು ಕೇಳದೆ ಉಪಯೋಗಿಸಿದರೆ ಹೇಳತೀರದಷ್ಟು ಪಿತ್ತ ಏರುತ್ತಿತ್ತು. ಬಹಳ ಸೀರಿಯಸ್ಸಾಗಿ ಓದುವ ಪ್ಲಾನ್ ಇಟ್ಟುಕೊಂಡು ಮೈಸೂರಿಗೆ ಬಂದಿದ್ದಳಾದರೂ, ಉಳಿದ ಹುಡುಗಿಯರ ಜೊತೆ ಸೇರಿ ಎತ್ತು ಏರಿಗೆಳೆದರೆ ಕೋಣ ನೀರೆಗೆಳೆದಂಥಾ ಸಂದರ್ಭಗಳು ಬಹಳ ಸೃಷ್ಟಿಯಾಗುತ್ತಿದ್ದವು. ಹಾಗೆ ಆದಾಗಲೆಲ್ಲ ಮೊದಲಿಗೆ ಹೊಡೆತ ತಿನ್ನುತ್ತಿದ್ದುದು ಅವಳ ಓದುವ ಪ್ಲಾನು. ಮೆಜಾರಿಟಿ ಗುಂಪು ಓದಬಾರದು ಅಂತ ನಿರ್ಧಾರ ಮಾಡಿದಾಗ ಮೈನಾರಿಟಿ ಒಬ್ಬಿಬ್ಬರು ಓದುತ್ತೇವೆ ಅನ್ನುವ ಅಭೀಪ್ಸೆಯನ್ನಾದರೂ ಹೇಗೆ ಇಟ್ಟುಕೊಳ್ಳಲು ಸಾಧ್ಯವಾದೀತು?

ಮೈಸೂರಿಗೆ ಓದಲೆಂದು ಬಂದ ರಶ್ಮಿಗೆ ಕನ್ನಡ ಕಬ್ಬಿಣದ ಕಡಲೆಯಾಗಿತ್ತು. ಇದೇ ಊರಲ್ಲಿ ಅಜ್ಜಿಯ ಮನೆ ಇದ್ದರೂ ಹಾಸ್ಟೆಲಿನಲ್ಲಿ ಇರುವ ಸ್ವಾತಂತ್ರ್ಯ ಮನೆಯಲ್ಲಿ ಇರುವುದಿಲ್ಲ ಅಂತ ತಂದೆ ತಾಯಿಯನ್ನು ಒಪ್ಪಿಸಿ ಹಾಸ್ಟೆಲಿಗೆ ಬಂದಿದ್ದಳು. ಏನೇ ಆದರೂ ಓದು ಹಾಳಾಗಬಾರದು, ಅಂಕಗಳು ಕಡಿಮೆಯಾದರೆ ತನ್ನ ಜೀವನ ಏರುಪೇರಾಗಬಹುದು ಎನ್ನುವ ಎಚ್ಚರ ಅವಳಿಗೆ ದಟ್ಟವಾಗಿ ಇತ್ತು. ಅದನ್ನು ಉಳಿದವರಿಗೂ ಹೇಳಲು ಪ್ರಯತ್ನಿಸುತ್ತಿದ್ದಳಾದರೂ, ಒಮ್ಮೊಮ್ಮೆ ಎಲ್ಲರೂ ‘ಮಜಾ ಮಾಡನ’ ಎಂದು ನಿರ್ಧರಿಸಿದಾಗ ಇವಳ ಸಂಕಲ್ಪ ಮಕಾಡೆ ಬೀಳುತ್ತಿತ್ತು.

ಕನ್ನಡ ಅಷ್ಟು ಸ್ಪಷ್ಟವಾಗಿ, ಸರಾಗವಾಗಿ ಬರದ ಕಾರಣಕ್ಕೆ ಇಂಗ್ಲಿಷನ್ನೇ ಹೆಚ್ಚು ಬಳಸುತ್ತಿದ್ದಳು. ಒಮ್ಮೊಮ್ಮೆ ಅಕಸ್ಮಾತ್ತಾಗಿ ಅಸ್ಖಲಿತ ಹಿಂದಿಯೂ ಬರುತ್ತಿತ್ತು. ಕ್ಲಾಸಿನಲ್ಲಿ ಉಳಿದ ಹುಡುಗಿಯರು ಇವಳಂತಿಲ್ಲದ ಕಾರಣ ಇವಳು ಅಲ್ಪಸಂಖ್ಯಾತೆಯೂ ಅಲ್ಲ, ಬರೀ ಏಕಸಂಖ್ಯಾತೆಯಾಗಿದ್ದಳು. ಇದೇ ಕಾರಣಕ್ಕೆ ಮಿತ್ರರೂ, ಶತ್ರುಗಳೂ ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಇಂಗ್ಲಿಷ್ ಬರುತ್ತಿದ್ದ ಹುಡುಗರು ಅವಳಿಗೆ ಬಹಳ ಹತ್ತಿರವಾಗಿದ್ದರು. ಹುಡುಗರಲ್ಲಿ ವಿಶೇಷವಾಗಿ ಯಾರೂ ಆಪ್ತರಲ್ಲದಿದ್ದರೂ ಅದೇನೋ ಇಂಗ್ಲೀಷು ಮಾತಾಡುತ್ತಾ ಹುಡುಗಿಯರು ನಕ್ಕುಬಿಟ್ಟರೆ ಒಂದು ರೀತಿಯ ‘ಲೂಸ್ ಟಾಕ್’ ಎನ್ನುವ ಭಾವನೆ ಜನರಲ್ಲಿ ಬಂದುಬಿಡುತ್ತದೆ. ಅಂಥಾ ಹುಡುಗಿಯರೂ ಬಹಳ ಸುಲಭವಾಗಿ ‘ಫಾಸ್ಟ್’ ಎಂದು ಬ್ರಾಂಡ್ ಆಗುತ್ತಾರೆ.

ರಶ್ಮಿಯ ಕ್ಲಾಸಿನಲ್ಲಿ ಹಾಸನದಿಂದ ಬರುತ್ತಿದ್ದ ಶಿವರಾಜ ಎಂಬ ಹುಡುಗನೊಬ್ಬನಿದ್ದ. ಅವನಿಗೆ ರಶ್ಮಿಯನ್ನು ಕಂಡರೆ ಅದೇನೋ ಅಸಹನೆ. ಅವಳಷ್ಟೇ ಅಲ್ಲ, ಅವಳಂತೆ ‘ಪಟ್ಟಣ’ದಿಂದ ಬಂದ ಹುಡುಗಿಯರನ್ನು, ಅವರೊಂದಿಗೆ ಬಹಳ ‘ಕ್ಲೋಸ್’ ಆಗಿ ನಡೆದುಕೊಳ್ಳುತ್ತಿದ್ದ ಹುಡುಗರನ್ನೂ ಎದೆಯಾಳದಿಂದ ದ್ವೇಷಿಸುವವನಂತೆ ನಡೆದುಕೊಳ್ಳುತ್ತಿದ್ದ.

ಶಿವರಾಜನ ಅಸಹನೆ ಬೂದಿಮುಚ್ಚಿದ ಕೆಂಡದಂತೆ ಎಂದೂ ಹೊಗೆಯಾಡಲಿಲ್ಲ. ಬಯಲಲ್ಲಿ ಯಾವಾಗಲೂ ಜಾಜ್ವಲ್ಯಮಾನವಾಗಿ ಭಗಭಗನೆ ಉರಿಯುತ್ತಿತ್ತು. ಎದುರಿಗೆ ಬಂದವರು ಅವನ ಮುಖ ನೋಡಿದರೇ ಸಾಕು, ಇವನಿಗೆ ನಾವು ಭೂಮಿ ಮೇಲೆ ಬದುಕಿರುವುದು ಸಮ್ಮತವೋ ಇಲ್ಲವೋ ಎನ್ನುವುದು ಸ್ಪಷ್ಟವಾಗಿ ತಿಳಿದುಹೋಗುತ್ತಿತ್ತು. ಇಡೀ ವರ್ಷವೆಲ್ಲಾ ಇವನು ರಶ್ಮಿಯ ಮೇಲೆ ಉರಿ ಕಾಯಿಸುತ್ತಿದ್ದರೂ ಆ ಹುಡುಗಿಗೆ ಅದು ಲಕ್ಷ್ಯವೇ ಇರಲಿಲ್ಲ. ಏಕೆಂದರೆ ಅವಳಿಗೆ ಕ್ಲಾಸಿನಲ್ಲಿ ಶಿವರಾಜ ಇದ್ದಾನೆ ಎನ್ನುವ ಅಂಶವೇ ಗಮನಕ್ಕೆ ಬರದೇ ಹೋಗುತ್ತಿತ್ತು.

ಮೊದಲನೆ ವರ್ಷ ಹೇಗೋ ಕಳೆಯಿತು. ಆರ್ಮಿ ಸ್ಕೂಲುಗಳಲ್ಲಿ ಓದಿದ ಪರಿಣಾಮ ಅವಳ ಗ್ರಹಣ ಶಕ್ತಿ ಮತ್ತು ವಿಷಯಗಳ ಬಗ್ಗೆ ಇದ್ದ ಅರಿವು ಬಹಳ ಆಳವಾಗಿತ್ತು. ಕ್ಲಾಸಿನಲ್ಲಿ ಬಹಳ ಆಕ್ಟಿವ್ ಆಗಿರುತ್ತಿದ್ದಳು. ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದಳು. ಮೇಷ್ಟ್ರುಗಳಿಗೆ ಬಹಳ ಅಚ್ಚುಮೆಚ್ಚಿನ ಶಿಷ್ಯೆಯಾಗಿದ್ದಳು.

ಮೊದಲನೇ ವರ್ಷದ ರಿಸಲ್ಟು ಬಂದಾಗ ಸಹಜವಾಗಿಯೇ ರಶ್ಮಿಗೆ ಒಳ್ಳೆ ಅಂಕಗಳು ಬಂದಿದ್ದವು. ಎರಡನೇ ವರ್ಷದಲ್ಲೂ ಒಳ್ಳೆ ಅಂಕಗಳನ್ನು ಪಡೆದು ಹೇಗಾದರೂ ಒಳ್ಳೆ ಕೆಲಸಕ್ಕೆ ಸೇರಿ ಮದುವೆ ಎನ್ನುವ ಕುಣಿಕೆಯನ್ನು ಸ್ವಲ್ಪವಾದರೂ ಮುಂದೂಡಬೇಕು ಎನ್ನುವ ಕೆಚ್ಚು ಅವಳನ್ನು ಮುನ್ನಡೆಸುತ್ತಿತ್ತು. ಏಕೆಂದರೆ, ಅವಳ ತಂದೆ ಆಗಲೇ ಅವಳಿಗೆ ವರನನ್ನು ಹುಡುಕುವ ತಯಾರಿಯಲ್ಲಿ ಅವಳು ರಜೆಗೆಂದು ಮನೆಗೆ ಹೋದಾಗಲೆಲ್ಲ ಒಂದೆರಡು ಉಪ್ಪಿಟ್ಟು ಸಮೋಸ ಕಾರ್ಯಕ್ರಮಗಳನ್ನಿಟ್ಟು ಹುಡುಗರನ್ನು ಕರೆಸುತ್ತಿದ್ದರು. ಹೀಗಿದ್ದಾಗ ಓದು, ಮತ್ತು ಅದರ ಮೂಲಕ ಕಾಣಬಹುದಾದ ಒಂದು ಉದ್ಯೋಗದ ದಾರಿ– ಇವೆರಡೇ ರಶ್ಮಿಯ ಲಕ್ಷ್ಯದಲ್ಲಿ ಇದ್ದುದು.

ಮೊದಲನೆ ವರ್ಷದ ಅಂಕಗಳು ಅವಳಿಗೆ ಬೇಕಿದ್ದ ಉತ್ತೇಜನ ತುಂಬಿದವು. ಶಿವರಾಜ ಮತ್ತು ರಶ್ಮಿ ಒಂದು ಸಬ್ಜೆಕ್ಟಿನ ಪೇಪರಿನಲ್ಲಿ ಮುಖಾಮುಖಿಯಾದರು. ಆ ಪೇಪರಿನಲ್ಲಿ ಅವನೂ ಚೆನ್ನಾಗಿ ಮಾಡಿದ್ದನಾದರೂ ರಶ್ಮಿಗೆ ಹೆಚ್ಚು ಅಂಕಗಳು ಬಂದಿದ್ದು ಶಿವರಾಜನಿಗೆ ಬಹಳ ಅವಮಾನ ಉಂಟು ಮಾಡಿತು. ಅದಕ್ಕೆ ಸರಿಯಾಗಿ ಇವಳು ತನ್ನ ಮುಖ ಕೊಟ್ಟು ಮಾತನಾಡಿಸುತ್ತಿಲ್ಲ ಎನ್ನುವ ಉರಿಯೂ ಸೇರಿ ರಶ್ಮಿಯನ್ನು ಕಂಡರೇ ಧುಮುಧುಮು ಎನ್ನತೊಡಗಿದ. ಯಾವ ಪೇಪರಿನಲ್ಲಿ ಇವನು ರಶ್ಮಿಗಿಂತ ಕಡಿಮೆ ಅಂಕಗಳನ್ನು ತೆಗೆದಿದ್ದನೋ ಆ ಲೆಕ್ಚರರ್ ಡಿಸೋಜ ಅವರನ್ನು ಕಾಣಲು ಶಿವರಾಜ ಸ್ನೇಹಿತರ ದಂಡು ಕಟ್ಟಿಕೊಂಡು ಹೋದ.

ಡಿಸೋಜ ಅವರೋ ಹಳೆಯ ಕುಳ. ರಸಿಕ ಎಂದೇ ಹೆಸರಾದ ಮನುಷ್ಯ. ಅವರಿಗೆ ಅದೇನು ಸಮಸ್ಯೆಯಿತ್ತೋ ದೇವನೇ ಬಲ್ಲ. ಕಂಡಕಂಡವರ ಹತ್ತಿರ ಆ ಹುಡುಗಿ ನನ್ನ ಜೊತೆ ಮಲಗಿದ್ದಾಳೆ, ಈ ಹುಡುಗಿ ನಾಳೆ ನನ್ನ ಜೊತೆ ಬರುತ್ತಾಳೆ ಎಂದೆಲ್ಲಾ ಹೇಳಿಕೊಂಡು ತಿರುಗುತ್ತಿದ್ದರು. ಇದನ್ನೆಲ್ಲ ಕೇಳಿ ಕೆಲವು ಹುಡುಗಿಯರು ಭಯಭೀತರಾಗಿದ್ದರು.

ಈ ಮನುಷ್ಯ ಹಬ್ಬಿಸುತ್ತಿದ್ದ ಸುದ್ದಿಗಳು ಹೇಗಿದ್ದವೆಂದರೆ ಅವನ್ನು ಸುಳ್ಳು ಎಂದರೂ ಹುಡುಗಿಯರ ಮರ್ಯಾದೆಯೇ ಬಲಿಯಾಗುವಂತೆ ಇತ್ತು. ಅಲ್ಲದೆ, ಅಂಕ ಕೊಡುವಲ್ಲಿ ತಾರತಮ್ಯ ಮಾಡಿ ಹುಡುಗಿಯರಿಗೇ ಹೆಚ್ಚು ಕೊಡುತ್ತಾರೆ ಎನ್ನುವ ವದಂತಿಯೂ ಇತ್ತು. ಆದ್ದರಿಂದ ಹುಡುಗಿಯರಿಗೆ ತಾವು ಓದಿದ್ದಕ್ಕೆ ಅಂಕ ಬಂದವೋ ಅಥವಾ ಹುಡುಗಿ ಎನ್ನುವ ಕಾರಣಕ್ಕೆ ಅಂಕ ಬಂದವೋ ಎಂದು ನಿರ್ಧರಿಸಲಾಗದೆ ತೊಳಲಾಡುತ್ತಿದ್ದರು. ಈ ವಿಷಯವನ್ನು ಅವರಲ್ಲಿ ಕೇಳಿದರೂ ಅವಲಕ್ಷಣ, ಬಿಟ್ಟರೂ ಅವಮಾನ ಎನ್ನುವಂತಿತ್ತು ಪರಿಸ್ಥಿತಿ.

ಏನೇ ಇರಲಿ. ಆ ಲೆಕ್ಚರರ್ ವಿಷಯದಲ್ಲಿ ಹುಡುಗಿಯರಿಗೆ ಹೆಚ್ಚು ಅಂಕ, ಹುಡುಗರಿಗೆ ಕಡಿಮೆ ಅಂಕ ಬರುತ್ತಿದ್ದುದಂತೂ ನಿಜವೇ. ಈ ಎಲ್ಲಾ ಊಹಾಪೋಹಗಳನ್ನು ಪೋಷಿಸುತ್ತಲೇ ತನ್ನ ವರ್ಚಸ್ಸನ್ನು ಹೆಚ್ಚಿಸಿಕೊಂಡ ಆ ಲೆಕ್ಚರರ್ರು ಹುಡುಗರು ಗುಂಪು ಗುಂಪಾಗಿ ಅವರ ಚೇಂಬರಿನೊಳಕ್ಕೆ ಬಂದರೆ ನಡುಗಿಬಿಡುತ್ತಿದ್ದರು.

ಶಿವರಾಜನಿಗೆ ಇದು ಗೊತ್ತಿತ್ತು. ಅದಕ್ಕಾಗಿಯೇ ಅವನು ಸ್ನೇಹಿತರ ದಂಡನ್ನು ಕಟ್ಟಿಕೊಂಡು ಎರಡನೇ ಫ್ಲೋರಿನಲ್ಲಿರುವ ಅವರ ಚೇಂಬರಿಗೆ ಹೋಗಿ ತನಗೆ ಅಂಕಗಳನ್ನು ಕಡಿಮೆ ಕೊಟ್ಟದ್ದಕ್ಕೆ ಕಾರಣ ಕೇಳಿದ. ಮೊದಮೊದಲಿಗೆ ಲೆಕ್ಚರರು ವಕ್ರವಕ್ರವಾಗಿ ಮಾತನಾಡಿದರೂ ಸ್ವಲ್ಪ ಹೊತ್ತಿನಲ್ಲಿಯೇ ಅಸಹಾಯಕರಾಗಿ ಧ್ವನಿ ಏರಿಸಿಕೊಂಡು ಜೋರುಜೋರಾಗಿ ಎಲ್ಲರ ಗಮನ ಸೆಳೆಯುವಂತೆ ಕೂಗಾಡತೊಡಗಿದರು.

ಅಲ್ಲೇ ಕ್ಲಾಸಿನಲ್ಲಿದ್ದ ಬೇರೆ ವಿದ್ಯಾರ್ಥಿಗಳಿಗೆ ಈ ಗಲಾಟೆ ಕೇಳಿಸತೊಡಗಿತು. ಶಿವರಾಜನಿಗೆ ತಲೆ ಕೆಟ್ಟಂತಾಯಿತು. ಮೊದಲೇ ಹಾಸನದ ಹುಡುಗ. ಕಟ್ಟುಮಸ್ತಾಗಿ ದೇಹ ಬೆಳೆಸಿಕೊಂಡಿದ್ದ. ಅವನ ಮುಂದೆ ಲೆಕ್ಚರರು ಆಡುತ್ತಿದ್ದ ಆಟಗಳಿಗೆ ಲೆಕ್ಕವಿಲ್ಲದೇ ಹೋಗಿ, ಅನಾಮತ್ತಾಗಿ ಅವರನ್ನು ಎರಡೂ ಕೈಗಳಿಂದ ಎತ್ತಿಬಿಟ್ಟ. ಆಗೆಲ್ಲ ಕಿಟಕಿಗಳಿಗೆ ಸರಳುಗಳಿರಲಿಲ್ಲ. ಹೀಗೆ ಡಿಸೋಜ ಅವರನ್ನು ಎತ್ತಿದವನೇ ಶಿವರಾಜ ಕಿಟಕಿಯ ಹತ್ತಿರ ನಿಂತು ‘ಮುಚ್ಚು ಮಗ್ನೆ. ಇಲ್ಲಾಂದ್ರೆ ಕೆಳಗ್ ಬಿಸಾಡಿಬಿಡ್ತೀನಿ’ ಅಂತ ಹೆದರಿಸಿದ ಎನ್ನುವ ವಿಷಯವನ್ನು ಅವನ ಸಂಗಡಿಗರು ಎಲ್ಲರ ಹತ್ತಿರ ಹೇಳಿಕೊಂಡು ಓಡಾಡಿದರು. ಲೆಕ್ಚರರ್ರು ಸುಮ್ಮನಾದರು, ಜೀವ ಉಳಿಯಿತು.

ಆಮೇಲೆ ಆದ ಚರ್ಚೆಯಲ್ಲಿ ಲೆಕ್ಚರರು ರಶ್ಮಿಗೆ ಹೆಚ್ಚು ಅಂಕ ಕೊಡಬಾರದೆಂತಲೂ, ಶಿವರಾಜನಿಗೆ ಹೆಚ್ಚು ಪ್ರಾಶಸ್ತ್ಯ ಕೊಡಬೇಕಂತಲೂ ತೀರ್ಮಾನವಾಯಿತಂತೆ. ಆದರೆ, ಇದಕ್ಕೆ ಸಾಕ್ಷೀಭೂತರಾಗಿ ಶಿವರಾಜನ ಅಭಿಮಾನಿ ಪಡೆ ಮಾತ್ರ ಇದ್ದುದರಿಂದ ಇದರಲ್ಲಿ ನಂಬುವ ಪಾಲೆಷ್ಟು, ಹಾಗೇ ನಕ್ಕು ಮರೆತುಬಿಡಬಹುದಾದ ಪಾಲೆಷ್ಟು ಎನ್ನುವುದು ಗೊತ್ತಾಗಲಿಲ್ಲ. ಆದರೆ ಇದೆಲ್ಲಕ್ಕೂ ರಶ್ಮಿ ಮಾತ್ರ ವಿಮುಖಳಾಗಿ ಇದ್ದುದರ ಕಾರಣ ಈ ಘಟನೆಗಳನ್ನು ಅವಳಿಗೆ ಹೇಳುವವರು ಯಾರೂ ಇರಲಿಲ್ಲ.

ಇಂಥ ಸಂದರ್ಭದಲ್ಲಿ ರಶ್ಮಿಯ ಕ್ಲಾಸಿಗೆ ಹೊಸ ಪಾರ್ಟ್ ಟೈಮ್ ಲೆಕ್ಚರರ್ ರವಿಕುಮಾರ್ ಅವರ ಆಗಮನವಾಯಿತು. ಬಹುತೇಕ ಕನ್ನಡ ಮಾಧ್ಯಮದಲ್ಲಿ ಕಲಿತು ಈಗ ಇಂಗ್ಲಿಷಿನಲ್ಲಿ ಪಾಠ ಹೇಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ರವಿಕುಮಾರ್ ಬಂದು ನಿಂತಿದ್ದರು. ಕ್ಲಾಸಿನ ಮುಂದೆ ನಿಂತರೆ ಅವರ ಸಂಕಟ ಹೇಳತೀರದು. ‘ಗುಡ್ ಮಾರ್ನಿಂಗ್’ ಎಂದು ಶುರು ಮಾಡಿ ಮುಂದೆಲ್ಲಾ ಕನ್ನಡದಲ್ಲೇ ಪಾಠ ಹೇಳಿ ಪರಿಸ್ಥಿತಿಯನ್ನು ಹೇಗೋ ಹತೋಟಿಗೆ ತೆಗೆದುಕೊಳ್ಳುತ್ತಿದ್ದರು. ಪ್ರತೀ ಕ್ಲಾಸಿನಲ್ಲೂ ಇದೇ ಸರ್ಕಸ್ ನಡೆಯುತ್ತಿತ್ತು. ಅದೊಂದು ದಿನ ಅವರ ಕ್ಲಾಸ್ ಮುಗಿಸಿ ರಶ್ಮಿ ರೂಮಿಗೆ ಬರುವಾಗ ಬಹಳ ಚಿಂತಿತಳಾಗಿದ್ದಳು.

ಕನಿಷ್ಠ ಮುಖ್ಯ ಅಂಶಗಳನ್ನಾದರೂ ಇಂಗ್ಲಿಷಿನಲ್ಲಿ ಹೇಳಿ ಆಮೇಲೆ ಕನ್ನಡ ಪದಗಳನ್ನು ಬಳಸಿದರೆ ಅರ್ಥವಾಗುತ್ತದೆ. ಇಡೀ ಕ್ಲಾಸು ಕನ್ನಡದಲ್ಲೇ ನಡೆದರೆ ತನಗೆ ಏನೂ ಅರ್ಥವಾಗುವುದಿಲ್ಲ ಎನ್ನುವ ಕಷ್ಟ ಅವಳದ್ದು. ಆದರೆ ಉಳಿದವರಿಗೆ ಯಾರಿಗೂ ಈ ಕಷ್ಟ ಇಲ್ಲದಿರುವುದರಿಂದ ತನ್ನೊಬ್ಬಳ ಅಳಲನ್ನು ಯಾರು ಕೇಳುತ್ತಾರೆ ಎನ್ನುವುದೂ ಒಂದು ಸವಾಲಾಗಿತ್ತು. ವಿಜಿ ಹತ್ತಿರ ಈ ಅಳಲನ್ನು ಹೇಳಿಕೊಂಡಳು.

‘ಈವತ್ತಿನ್ ಕ್ಲಾಸಲ್ಲಿ ಏನ್ ಅರ್ಥ ಆಗಲಿಲ್ಲ ನಿಂಗೆ?’ ವಿಜಿ ಕೇಳಿದಳು.
‘ಅದ್ಯಾರೋ ಜಯರಥನ ಬಗ್ಗೆ ಹೇಳ್ತಾ ಇದ್ದರು. ಅವನ ಹೆಸರನ್ನೇ ಕೇಳಿಲ್ಲ ನಾನು’ ಎಂದಳು ರಶ್ಮಿ.
‘ಅದ್ಯಾವ ಜಯರಥನ ವಿಷಯ ಹೇಳಿದ್ರು? ನಾನೂ ಅಲ್ಲೇ ಇದ್ದೆನಲ್ಲ?’
‘ನೀನ್ ನಿದ್ದೆ ಮಾಡಿದ್ಯೇನೋ! ಸಾವ್ರ ಸಾರಿ ಟೀವಿಲಿ, ಪೇಪರಲ್ಲಿ ಬರೋ ಜಯರಥ ಅಂತ ಹೇಳಿದ್ರಲ್ಲ?’
‘ಟೀವಿ, ಪೇಪರಲ್ಲಾ?
‘ಹೂಂ’
‘ಜಯರಥನಾ? ಆ ಹೆಸರು ಉಪಯೋಗಿಸಲೇ ಇಲ್ವಲ್ಲಾ?’
‘ಜೈರತ್ ಜೈರತ್ ಅಂತ ಹೇಳ್ತಾನೇ ಇದ್ರು. ಅವನಿಗೆ ತುಂಬಾ ದುಡ್ಡಾಗುತ್ತಂತೆ’
‘ಥೂ ನಿನ್ನ! ಅದು ಜೈರತ್ ಅಲ್ಲಾ! ಜಾಹೀರಾತು - ಅಂದ್ರೆ ಅಡ್ವರ್ಟೈಸ್ಮೆಂಟು!’
‘ಅಯ್ಯೋ ನನ್ ಕರ್ಮ! ಇವ್ರು ಹಿಂಗೇ ಪಾಠ ಹೇಳಿದ್ರೆ ನಾನು ಪರೀಕ್ಷೇಲಿ ಇನ್ನೇನೋ ಬರ್ದಿರ್ತೀನಿ ಅಷ್ಟೇ. ನಾಳೆ ಕ್ಲಾಸಲ್ಲಿ ಹೇಳ್ತೀನಿ, ಸ್ವಲ್ಪನಾದ್ರೂ ಇಂಗ್ಲಿಷಲ್ಲಿ ಹೇಳಿ ಸರ್ ಅಂತ’
ಮಾರನೇ ದಿನ ರಶ್ಮಿ ಈ ವಿಷಯವನ್ನು ಕ್ಲಾಸಿನಲ್ಲಿ ಮಂಡಿಸುವಾಗ ಇದ್ದಕ್ಕಿದ್ದಂತೆ ಕ್ಲಾಸು ಇಬ್ಭಾಗವಾಗಿ ಇಡೀ ಪ್ರಕರಣ ಕನ್ನಡಪರ ಮತ್ತು ಕನ್ನಡ ವಿರೋಧ ಎನ್ನುವ ಬಣ್ಣ ಪಡೆದುಕೊಂಡುಬಿಟ್ಟಿತು.

ಇದೇ ಚಾನ್ಸು ಅಂತ ರಶ್ಮಿ ಮೇಲಿದ್ದ ಸಿಟ್ಟಿಗೆ ಶಿವರಾಜ ರವಿಕುಮಾರ್ ಪರ ನಿಂತು ರಶ್ಮಿಯನ್ನು ಬಾಯಿಗೆ ಬಂದಂತೆ ಅಂದ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ರಶ್ಮಿ ತತ್ತರಿಸಿಹೋದಳು. ‘ನೀನ್ ಬಂದಿರೋದು ಕನ್ನಡ ದೇಸಕ್ಕೆ. ನೀನ್ ಕನ್ನಡ ಕಲ್ತುಕೋ. ಅವ್ರಿಗೆ ಇಂಗ್ಲಿಷಲ್ಲಿ ಪಾಠ ಹೇಳು ಅಂತ ಕೇಳ್ಬ್ಯಾಡ’ ಎಂದೆಲ್ಲ ಶಿವರಾಜ ಕೂಗಾಡುವಾಗ ರವಿಕುಮಾರ್ ತನ್ನ ನಿಯಂತ್ರಣ ಮೀರಿ ನಡೆಯುತ್ತಿದ್ದ ಘಟನೆಗಳನ್ನು ಕಂಡು ಅಧೀರರಾಗಿದ್ದರು.

ಹಾಳಾಗಿ ಹೋಗ್ಲಿ ಎಂದು ಸುಮ್ಮನಾದಳು ರಶ್ಮಿ. ಆದರೂ ಅವಳಿಗೆ ಶಿವರಾಜ ತನ್ನ ಮೇಲೆ ವಿನಾಕಾರಣ ಕೂಗಾಡಿದ ಎಂದು ಮನಸ್ಸಿನಲ್ಲಿ ಕೊರೆಯುತ್ತಿತ್ತು. ರವಿಕುಮಾರ್ ಪಾಠ ಮಾಡುವ ಸಬ್ಜೆಕ್ಟಿನ ಪುಸ್ತಕಗಳನ್ನು ಲೈಬ್ರರಿಯಿಂದ ಎರವಲು ಪಡೆದುತಂದು ಓದಿಕೊಳ್ಳುವುದು ಎಂದು ನಿರ್ಧರಿಸಿ ರಶ್ಮಿ ರೆಗ್ಯುಲರ್ ಆಗಿ ಲೈಬ್ರರಿಗೆ ಹೋಗತೊಡಗಿದಳು. ಶಿವರಾಜನೂ ಅಲ್ಲಿಗೆ ಬರುತ್ತಿದ್ದ. ಒಂದು ದಿನ ಅವನು ಇಂಗ್ಲಿಷ್ ಪುಸ್ತಕ ತೆಗೆದುಕೊಳ್ಳುವುದು ನೋಡಿ ರಶ್ಮಿ ಕಿಸಕ್ಕೆಂದು ನಕ್ಕಳು ಎಂಬ ಸಂಪೂರ್ಣ ಸುಳ್ಳನ್ನು ಶಿವರಾಜನ ಅಭಿಮಾನಿ ಪಡೆ ಅವನಿಗೆ ಸುದ್ದಿ ಮುಟ್ಟಿಸಿತು. ತಣ್ಣಗಾಗಿದ್ದ ಕಿಚ್ಚು ಮತ್ತೆ ಹೊತ್ತಿ ಉರಿಯಲು ಶುರುವಾಯಿತು. ಒಂದು ಸಂಜೆ ಲೈಬ್ರರಿಯಿಂದ ಹಾಸ್ಟೆಲ್ಲಿಗೆ ಹಿಂತಿರುಗುತ್ತಿದ್ದ ರಶ್ಮಿಯನ್ನು ನಿಲ್ಲಿಸಿ ಅವಳಿಗೆ ಧಮಕಿ ಹಾಕಿದ. ಹಾಸ್ಟೆಲಿಗೆ ಬಂದವಳೇ ವಿಜಿಯನ್ನು ಹುಡುಕಿದಳು ರಶ್ಮಿ. ‘ಅತಿ ಆಚಾರ ಅಂದ್ರೆ ಏನು?’ ಎಂದು ಕೇಳಿದಳು.

‘ಅತಿ ಆಚಾರ ಅಂದ್ರೆ ಸಂಪ್ರದಾಯ ಇತ್ಯಾದಿಯನ್ನು ಬಹಳ ಫಾಲೋ ಮಾಡೋದು’
‘ಹೌದಾ? ಶಿವರಾಜ ಇದನ್ನ ಹೆದರಿಸೋ ಹಾಗೆ ಹೇಳಿದ್ನಲ್ಲ?’
‘ಶಿವರಾಜ ಹೇಳಿದ್ನಾ? ನಿನಗೆಲ್ಲಿ ಸಿಕ್ಕ ಅವನು? ಸ್ವಲ್ಪ ದೂರ ಇರೇ ಅವನಿಂದ!’
‘ಅಯ್ಯೋ ಅವನ ಕಷ್ಟ ನೋಡಿದ್ರೆ ಪಾಪ ಅನ್ಸುತ್ತೆ ಕಣೇ. ಕೂಗಾಡೋದು ಬಿಟ್ಟು ಸ್ವಲ್ಪ ಇಂಗ್ಲಿಷ್ ಕಲ್ತುಕೊಂಡ್ರೆ ಅವನ ಪ್ರಾಬ್ಲಮ್ ಮುಗಿದುಹೋಗುತ್ತೆ. ಆದರೆ ಅವನ ಸುತ್ತ ಇರೋರು ಅವನಿಗೆ ದಾರಿ ತಪ್ಪಿಸ್ತಾ ಇದ್ದಾರೆ. ಇರ್ಲಿ ಬಿಡು ಅವನ್ ಹಣೆ ಬರಹ. ಆದರೆ, ಅತಿ ಆಚಾರ ಅಂತ ನನಗೆ ಯಾಕೆ ಹೇಳಿದ ಅಂತ ಅರ್ಥ ಆಗ್ತಿಲ್ಲ’
‘ಯಾವಾಗ ಹೇಳ್ದ?’
‘ಈಗ. ಹತ್ತ್ ನಿಮಿಷದ ಹಿಂದೆ’
‘ಏನಂತ ಹೇಳ್ದ?’
‘ಏ ರಶ್ಮಿ, ತೀರಾ ಆಡ್ತಿದ್ರೆ ನಿನ್ ಅತಿ ಆಚಾರ ಮಾಡಿಸಿಬಿಡ್ತೀನಿ ಅಂದ’
ವಿಜಿಗೆ ನಗು ಉಕ್ಕುಕ್ಕಿ ಬಂತು. ಧಮ್ಕಿ ಹಾಕೋದು ಹಾಕಿದ್ದಾನೆ, ಇವಳಿಗೆ ಅರ್ಥ ಆಗೋ ಹಂಗಾದ್ರೂ ಹಾಕ್ಬೇಕಿತ್ತಲ್ವಾ ಅಂತ. ಇಲ್ಲಿ ನೋಡಿದ್ರೆ ಅವನ ಧಮ್ಕಿ ಕಾಮಿಡಿಯಾಗಿ ಕೂತಿದೆ.

‘ಲೈ! ಅವ್ನ್ ಹೇಳಿರೋದು ನಿನ್ ರೇಪ್ ಮಾಡಿಸಿಬಿಡ್ತೀನಿ ಅಂತ’
‘ಅತಿ ಆಚಾರ ಅಂದ್ರೆ ಟ್ರೆಡಿಶನ್ ಅನ್ಲಿಲ್ವಾ ನೀನು?’
“ಇದು ಅತಿ ಆಚಾರ ಅಲ್ಲ, ‘ಅತ್ಯಾಚಾರ”
‘ಹಹಾಹಾ!! ರೈಟ್ ಅದನ್ನೇ ಅಂದಿದ್ದು ಅವನು!’
ಅತ್ಯಾಚಾರ ಎನ್ನುವ ಪದ ರಶ್ಮಿಯನ್ನು
ವಿಚಲಿತಳನ್ನಾಗಿಸಲಿಲ್ಲ. ಬದಲಿಗೆ, ಭರ್ಜರಿ ತಮಾಷೆಯಾಯಿತು. ಮಾರನೇ ದಿನ ಶಿವರಾಜ ಕ್ಲಾಸ್ ಹತ್ತಿರ ಬೈಕ್ ಮೇಲೆ ಪಾರ್ಕಿಂಗ್ ಲಾಟಿನಲ್ಲಿ ಕೂತಿದ್ದ. ಇವಳನ್ನು ನೋಡಿ ಮೀಸೆ ಮರೆಯಲ್ಲಿ ಗಂಡಸು ನಗೆ ನಕ್ಕ. ಇವಳು ಸೀದಾ ಅವನ ಹತ್ತಿರ ಹೋದಳು.

‘ನಿನ್ನೆ ನನ್ನ ಹೆದ್ರಸಕ್ಕೆ ಹೇಳಿದ್ಯಲ್ಲ? ಆ ಪದ ಅರ್ಥ ಆಗಲಿಲ್ಲ. ನನ್ ಸ್ನೇಹಿತರ ಹತ್ತಿರ ಹೋಗಿ ಅರ್ಥ ಕೇಳ್ಕೊಂಡೆ. ಅಂದ ಹಾಗೆ ಅದಕ್ಕೆ ರೇಪ್ ಅಂತಾರೆ. ದಿನಕ್ಕೊಂದು ಇಂಗ್ಲಿಷ್ ಪದ ಕಲ್ತುಕೋ. ನಾನೇ ಬೇಕಾದ್ರೆ ಹೇಳಿಕೊಡ್ತೀನಿ. ನೀನು ನಂಗೆ ಕನ್ನಡ ಹೇಳಿಕೊಡು. ಇಬ್ರುಗೂ ಒಳ್ಳೇದು’ ಎಂದು ಬಹಳ ಮುಗ್ಧವಾಗಿ ಹೇಳಿದಳು.

ಶಿವರಾಜನ ಕಣ್ಣಲ್ಲಿ ನೀರು ತುಂಬಿಕೊಂಡಿತು. ತಲೆ ತಗ್ಗಿಸಿ ‘ಸಾರಿ ಸಿಸ್ಟರ್’ ಎಂದ. ಸ್ನೇಹದ ಬೀಜವೊಂದು ಮೊದಲಿಗೆ ಬೇರು ಬಿಟ್ಟು ಚಿಗುರನ್ನು ಹೊರಡಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.