ಸುಮಾ, ಸುನೀತಾ, ಸುಜಾತ ಮತ್ತು ನಿಕಿತಾ ಅಲಿಯಾಸ್ ಬುಡ್ಡಿ ಪ್ರಾಣದ ಗೆಳತಿಯರು. ನಿಕಿತಾಳ ಅಪ್ಪನಿಗೆ ಅದ್ಯಾವ ಮಾಯೆಯಲ್ಲೋ ಏನೋ ರಷ್ಯನ್ ಪ್ರಭಾವವಾಗಿ ಮಗಳಿಗೆ ಚಂದದ ಹೆಸರಿಟ್ಟಿದ್ದರು. ಶರಣ ಸಂಸ್ಕೃತಿಯ ಬಹು ದೊಡ್ಡ ಕೇಂದ್ರವಾದ ಬೈಗುಳಗಳೇ ಜೀವಾಳವಾದ ದಾವಣಗೆರೆಯ ಪರಿಸರಕ್ಕೆ ಆ ಹೆಸರು ಎಷ್ಟೆಷ್ಟೂ ಹೊಂದುತ್ತಿರಲಿಲ್ಲ ಅಂತ ಅವಳ ಅಮ್ಮನಿಗೆ ಅನಿಸಿತ್ತು. ನಿಕಿತಾಳ ಅಮ್ಮ ಅರಸೀಕೆರೆ-ಕಡೂರಿನ ಕಂಡೀಷನಿಂಗ್ ಉಳ್ಳವರು. ಇಲ್ಲಿನ ಒರಟುತನ ಅಭ್ಯಾಸವಾಗಿದ್ದರೂ, ತಮ್ಮ ಸ್ವಲ್ಪ ಸ್ಟಾಂಡರ್ಡ್ ಹೆಚ್ಚಿಸುವ ಸಲುವಾಗಿ ಮಗಳಿಗೆ ನಿಕಿತಾ ಎಂಬ ಹೆಸರನ್ನು ಅನುಮೋದಿಸುತ್ತಲೇ ಒಂದು ನಿಕ್ ನೇಮ್ ಇಟ್ಟಿದ್ದರು. ಜಯಾ ಬಾಧುರಿಯ ಫ್ಯಾನ್ ಬೇರೆ ಆಕೆ. ಮಗಳನ್ನು ಮನೆಯಲ್ಲಿ ಗುಡ್ಡಿ ಎಂದು ಕರೆಯುತ್ತಿದ್ದರು.

ರುದ್ರೇಶಿ-ಪರಮೇಶಿ-ಬಸವರಾಜರ ಊರಿನಲ್ಲಿ ಅದು ಗುಡ್ಡಿ ಹೋಗಿ ಬುಡ್ಡಿ ಎಂದಾಗಿತ್ತು. ಮತ್ತೆ ಜೊತೆಗೆ ಟ್ರೇಡ್ ಮಾರ್ಕ್ ಮಾತೊಂದು ಸೇರಿ ಎಲ್ಲರಿಗೂ ಅವಳು ಬುಡ್ಡಿ ಬೋಸುಡಿ ಆಗಿದ್ದಳು. ತಾನೂ ಧಾರಾಳವಾಗಿ ಬೈಗುಳ ಉಪಯೋಗಿಸುತ್ತಿದ್ದರಿಂದ ನಿಕಿತಾ-ಗುಡ್ಡಿ-ಬುಡ್ಡಿ ಯಾವುದನ್ನೂ ಸೀರಿಯಸ್ಸಾಗಿ ತೆಗೆದುಕೊಳ್ಳದೆ ಆಗಾಗ ಕಾಲೇಜಿಗೆ ಹೋಗುತ್ತಾ ಸ್ನೇಹಿತೆಯರ ಜೊತೆ ತಿರುಗುತ್ತಾ ಹೊಸ ಹೊಸ ಸಾಹಸಗಳನ್ನು ಮಾಡಿ ಮನೆಮಂದಿಗೆಲ್ಲ ತಕ್ಕ ಮಟ್ಟಿನ ತಲೆನೋವಾಗಿದ್ದಳು.

ಕೈನೆಟಿಕ್ ಹೋಂಡಾ ಆಗೆಲ್ಲ ಮಹಿಳಾ ಸಶಕ್ತೀಕರಣದ ಸಾಧನವಾಗಿ ಹುಡುಗಿಯರ ಸಾಧನೆಗಳಿಗೆ ಪುಟವಿಡುವ ವಾಹನವಾಗಿತ್ತು. ನಾಲ್ಕೂ ಜನ ಗೆಳತಿಯರು ಒಂದೇ ತಕ್ಕಡಿಯಲ್ಲಿ ತೂಗುತ್ತಿದ್ದರು. ಸುಮಾ ಹತ್ತಿರ ಲೂನಾ ಇತ್ತು. ಹಾಗಾಗಿ ನಾಲ್ಕೂ ಜನ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು.

ಲೂನಾ ಹಳೆಯದಾದ್ದರಿಂದ ಆಗಾಗ ರಿಪೇರಿಗೆ ಬರುತ್ತಿತ್ತು. ಸುಮಾ ಅವರಪ್ಪ ರಿಪೇರಿ ಮಾಡಿಸಿ ಸಾಕಾಗಿ ಆಗಾಗ ಗಾಡಿಯನ್ನು ಮುಟ್ಟುಗೋಲು ಹಾಕುವ ಕೊನೆಯ ಎಚ್ಚರಿಕೆಗಳನ್ನು ಆಗಾಗ ಕೊಡುತ್ತಿದ್ದರು. ಇವಳೋ ಅದನ್ನು ಗಂಭೀರವಾಗಿ ಪರಿಗಣಿಸುವ ಅಭ್ಯಾಸವನ್ನೇ ತೊಡೆದು ಹಾಕಿದ್ದಳು. ಒಮ್ಮೆ ಸುಮಾ ಲೂನಾ ರಿಪೇರಿಗೆ ಕೊಡಲು ಹೋದಾಗ ಅಂಗಡಿಯಲ್ಲಿ ಹುಡುಗನೊಬ್ಬ ಯಾವುದೋ ಗಾಡಿಯ ಪಂಚರ್ ಹಾಕಲು ಕುಕ್ಕುರುಗಾಲಿನಲ್ಲಿ ಕುಳಿತಿದ್ದ. ಸುಮಾ, ಸುನೀತಾ ಇಬ್ಬರೂ ಡಬ್ಬಲ್ ರೈಡಿನಲ್ಲಿದ್ದರು.

ಅಂಗಡಿ ಹತ್ತಿರಕ್ಕೆ ಹೋದಾಗ ರಸ್ತೆಗೆ ಬೆನ್ನು ಹಾಕಿಕೊಂಡು ಕೂತ ಹುಡುಗನ ಕುಂಡೆಯ ಸೀಳು ಇಬ್ಬರಿಗೂ ಕಂಡು ಅಸಾಧ್ಯ ನಗು ಬಂತು. ಅವನು ಏಕಾಗ್ರತೆಯಿಂದ ಪಂಚರ್ ಎಲ್ಲಿದೆ ಎಂದು ಚೆಕ್ ಮಾಡಲು ಟೈರಿನ ಟ್ಯೂಬಿಗೆ ಗಾಳಿ ತುಂಬಿ ಎದುರಿಗಿದ್ದ ದೊಡ್ಡ ಬಾಣಲೆಯಲ್ಲಿದ್ದ ಕೊಳಕು ನೀರಿಗೆ ಅದ್ದಿ ಅದ್ದಿ ಗಾಳಿಯ ಗುಳ್ಳೆಗಳು ಮೇಲೇಳುವುದನ್ನೇ ಗಮನಿಸುತ್ತಿದ್ದ.

ಕೇಕೆ ಹಾಕಿ ನಗುತ್ತಾ ಗಾಡಿ ಓಡಿಸಿದ ಸುಮಾ ಬ್ರೇಕ್ ಹಾಕುವುದನ್ನೇ ಮರೆತುಬಿಟ್ಟು ಸೀದಾ ಅವನ ಕುಂಡೆಗೆ ಹೋಗಿ ಗುದ್ದಿದಳು. ಇವರು ಹಿಂದಿನಿಂದ ಬರುತ್ತಿರುವುದು ಅರಿವಿಲ್ಲದ ಅಮಾಯಕ ಕಕ್-ಬಕ್ ಎನ್ನದೆ ಸೀದಾ ಬಾಣಲೆಯೊಳಕ್ಕೆ ಅನಾಮತ್ತಾಗಿ ಮುಖ ಮುಂದಾಗಿ ಬಿದ್ದ. ಇಬ್ಬರೂ ಕಿರಾತಕಿಯರಿಗೆ ಅದನ್ನು ನೋಡಿ ಇನ್ನೂ ನಗು ಬಂತು. ಅವನು ಎದ್ದ ಮೇಲೆ ನಗು ಇನ್ನೂ ಜಾಸ್ತಿಯಾಯಿತು. ಅವನಿಗೆ ಅವಮಾನವಾದರೂ ಬೈಯುವಂತಿಲ್ಲ. ಮಾಲೀಕನ ಪರಿಚಯದವರೇನೋ ಎಂದು ಮಾಲಿಕನ ಮುಖ ನೋಡಿ ಅರ್ಥವಾಗದೆ ಪೆಚ್ಚಾಗಿ ನಿಂತ.

ಹಿಂದಿನ ಸಾರಿ ರಿಪೇರಿ ಮಾಡಿಸಿಕೊಂಡಿದ್ದ ದುಡ್ಡನ್ನು ಕೊಡದೇ ಇದ್ದುದರಿಂದ ಮಾಲೀಕನಿಗೂ ಸುಮಾ ಅಪ್ಪನ ಮೇಲೆ ಸಿಟ್ಟಿತ್ತು. ಬರ್ಲಿ ಮಗ, ಮಾಡ್ತೀನಿ ಎಂದುಕೊಂಡು ಲೂನಾ ಬೀಗವನ್ನು ತಕ್ಷಣ ತನ್ನ ಸುಪರ್ದಿಗೆ ತೆಗೆದುಕೊಂಡು ಇಬ್ಬರಿಗೂ ಮುಖ ಒರೆಸಿಕೊಳ್ಳಲೂ ಪುರುಸೊತ್ತಾಗದಷ್ಟು ಬೈದ. ಹುಡುಗ ಸಂತಸದಿಂದ ಮತ್ತೆ ಟ್ಯೂಬನ್ನು ನೀರಿಗೆ ಅದ್ದತೊಡಗಿದ. ಇವರಿಬ್ಬರೂ ಮತ್ತೆ ಅವನನ್ನು ನೋಡಿ ನಗಬಾರದೆಂದು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಮಾಲೀಕ ಹುಚ್ಚು ಹಿಡಿದವನಂತಾಗಿ ಇಬ್ಬರನ್ನೂ ಅಲ್ಲಿಂದ ಅಟ್ಟಿದ. ಸುಮಾಗೆ ಒಂದೇ ಚಿಂತೆ. ಮನೆಯಲ್ಲಿ ಹೇಳುವಂತಿಲ್ಲ, ಹಾಗೇ ಸಮಸ್ಯೆ ಬಗೆ ಹರಿಯುವಂತಿಲ್ಲ.

ಬುಡ್ಡಿಗೆ ಬುಲಾವ್ ಹೋಯಿತು. ಆಕೆಯೂ ಸುಜಾತಾಳನ್ನು ಕರೆದುಕೊಂಡು ತನ್ನ ಕೈನೆಟಿಕ್ ಹೋಂಡಾದಲ್ಲಿ ಬಂದಳು. ಎಲ್ಲರೂ ತಕ್ಕ ಮಟ್ಟಿಗೆ ತೆಳ್ಳಗಿದ್ದರಿಂದ ಒಂದೇ ಗಾಡಿಯ ಮೇಲೆ ರಿಪೇರಿಯ ದುಡ್ಡಿಗೆ ರಣ ತಂತ್ರ ರೂಪಿಸುವ ಸಲುವಾಗಿ ಊರ ಹೊರಗಿನ ಧಾಬಾದಲ್ಲಿ ಕೂತು ಚರ್ಚೆ ಮಾಡುವುದೆಂದು ನಿರ್ಣಯಿಸಿ ಹೊರಟರು.

ಬೈ ಪಾಸ್ ಹತ್ತಿರ ಹೋಗುವಾಗ ಅನತಿ ದೂರದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ನಿಂತಿರುವುದು ಉಳಿದವರಿಗೆ ಸ್ಪಷ್ಟವಾದರೂ ಬುಡ್ಡಿಗೆ ಅಷ್ಟು ಚೆನ್ನಾಗಿ ಕಾಣಿಸಲಿಲ್ಲ. ಅವನು ಕೈ ಮಾಡಿದ. ಬುಡ್ಡಿಗೆ ಮುಂದೇನು ಮಾಡಲು ತಿಳಿಯದೆ ಸೀದಾ ಅವನ ಹತ್ತಿರ ಹೋಗಿ ಗಾಡಿ ನಿಲ್ಲಿಸಿ ಪೆದ್ದಿಯ ನಗೆ ನಕ್ಕಳು.

ಗಾಡಿ ಸ್ಲೋ ಆಗಿ ಇಳಿಯುವ ಮೊದಲು ಅವಳನ್ನು ಮೂರೂ ಜನ ಸೇರಿ ಬೈದರು. ಆದರೆ ಈಗ ಸಂದರ್ಭ ಕೈ ಮೀರಿರುವುದರಿಂದ ಆದಷ್ಟೂ ಅಮಾಯಕತನದಿಂದ ವರ್ತಿಸುವುದು, ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಡ್ಯಾಮೇಜ್ ಭರಿಸಲು ಪ್ರಯತ್ನ ಪಡುವುದು ಅಂತ ತೀರ್ಮಾನವಾಯಿತು. ಸಂದಿಗ್ಧ ಏನೆಂದರೆ ದಂಡ ಕಟ್ಟಿದರೆ ಟೀ ಕುಡಿಯಲು ದುಡ್ಡಿಲ್ಲ. ದಂಡ ಕಟ್ಟದಿದ್ದರೆ ಸುದ್ದಿ ಗೊತ್ತಾದ ತಕ್ಷಣ ಇರುವ ಒಂದು ಗಾಡಿಯನ್ನೂ ಮನೆಯವರು ಜಪ್ತಿ ಮಾಡಿಕೊಳ್ಳುತ್ತಾರೆ.

ಅತ್ತ ಕಾನ್‌ಸ್ಟೆಬಲ್‌ಗೆ ಇವರು ಗಾಡಿ ನಿಲ್ಲಿಸಬಹುದು ಎನ್ನುವ ನಿರೀಕ್ಷೆ ಇರಲಿಲ್ಲವಾದರೂ, ಹುಡುಗಿಯರು ಸೀದಾ ತನ್ನ ಹತ್ತಿರವೇ ಬಂದು ಪ್ರಣಾಮ ಮಾಡುವ ಹಾಗೆ ಇಳಿದದ್ದು ನೋಡಿ ಹಾಲು ಕುಡಿದಷ್ಟು ಸಂತೋಷವಾಯಿತು. ತ್ರಿಬ್ಬಲ್ ರೈಡು, ಐವತ್ರೂಪಾಯಿ ಲೆಕ್ಕಕ್ಕಿಲ್ಲದ ಫೈನು, ಈವತ್ತಿನ ದುಡಿಮೆ ಅಂತೆಲ್ಲ ಯೋಚಿಸುತ್ತಲೇ ನೋಡಿದ. ಮೂರು ಜನ ಅಂತ ನಿಲ್ಲಿಸಿದರೆ ಇಲ್ಲಿ ನಾಲ್ಕು ಜನ ಹುಡುಗಿಯರಿದ್ದಾರೆ! ಅವನು ತನ್ನ ಬತ್ತಳಿಕೆಯ ಬಾಣ ಚೂಪು ಮಾಡಿಕೊಂಡ.

ಇತ್ತ ಬುಡ್ಡಿ ಗಂಟಲು ಸರಿ ಮಾಡಿಕೊಂಡಳು.

‘ಏನ್ರವಾ, ತಾಯಾರಾ! ಕಾಲೇಜಿಗೆ ಅಂತ ಕಳಿಸಿದ್ರೆ ಬೈ ಪಾಸ್‌ನ್ಯಾಗ ತಿರುಗ್ತೀರೇನು?’
‘ಇಲ್ಲ ಸಾ, ಶಾಮನೂರಿಗೆ (ಪಕ್ಕದ ಊರಿನ ಹೆಸರು) ಅಜ್ಜಿ ಮನಿಗೆ ಹ್ವಂಟಿದ್ವಿ. ಅಕೀಗೆ ಹುಷಾರಿಲ್ಲ ಅದಕ್ಕ’

‘ಯಾರಿಗೆ ಹೇಳ್ತೀ ತಾಯೀ? ನನ್ನೇನ್ ಮಂಗ ಅನ್ಕಂಡೀಯಾ?’
‘ನಿಜಾ ಹೇಳಾಕತ್ತೀವ್ರೀ. ಬೇಕಾರ ನಮ್ಮಪ್ಪಗ ಪೋನ್ ಮಾಡಿ ಕೇಳ್ರೀ. ನಾವ್ ಇಲ್ಲೇ ನಿಂತಿರ್ತವಿ’

‘ಶಾಬಾಸ್. ನಮಗೇ ಜ್ವಾಪಾಳ ಗುಳಿಗಿ ಕೊಡ್ತೀಯೇನವಾ? ಅಲ್ಲಾ ಮೂರ್ ಜನಾ ಹೋಗಾದೇ ತಪ್ಪು. ಅದ್ರಾಗ ನಾಕ್ ಜನಾ ಹ್ವಂಟೀರೇನ? ಬುದ್ಧಿ ಎಲ್ಲಿಟಗಂಡೀಯವಾ?’
ಸುಮಾಗೆ ಕ್ರೈಸಿಸ್ ಸಂದರ್ಭಗಳಲ್ಲಿ ತಲೆ ವಿಪರೀತ ಕೆಲಸ ಮಾಡುತ್ತಿತ್ತು. ಬುಡ್ಡಿಯನ್ನು ಸುಮ್ಮನಿರುವಂತೆ ಹೇಳಿ, ಅವಳು ವಾದಕ್ಕೆ ನಿಂತಳು.

‘ಏನ್ ಮಾಡಬಕು ಹೇಳ್ರಿ ಈಗ?’.
‘ರೊಕ್ಕ ತೆಗಿ. ಐವತ್ರೂಪಾಯಿ ಫೈನು’.

‘ಯಾವದಕ್ಕ ಐವತ್ರೂಪಾಯಿ?’
‘ತ್ರಿಬ್ಬಲ್ ರೈಡಿಗೆ ಅಷ್ಟು ಫೈನು’

‘ನಾವ್ ತ್ರಿಬ್ಬಲ್ ರೈಡ್ ಮಾಡಿಲ್ಲಲ್ಲ?’
‘ನಾಕ್ ಜನಾ ಹ್ವಂಟೀರಿ, ಮತ್ತ ತ್ರಿಬ್ಬಲ್ ರೈಡ್ ಅಲ್ಲೇನ್ ಅದು? ಅದ್ನೂ ಮೀರಿದ್ದು’
‘ಹೌದ್ರೀ, ತ್ರಿಬ್ಬಲ್ ರೈಡಿಗೆ ಐವತ್ರೂಪಾಯಿ ಫೈನು. ನಾವು ಮೂರ್ ಜನ ಅಲ್ಲ, ನಾಕ್ ಜನ ಇದ್ದೀವು. ನಾಕ್ ಜನಕ್ಕ ಎಷ್ಟು ಫೈನು ಅಂತ ಮದ್ಲ ನೀವ್ ತಿಳ್ಕಬೇಕು. ಆಮ್ಯಾಲ್ ಕಟ್‌ತೀವಿ’

‘ಅಯ್ಯ ನಿನ್ನ್ ಮತ್ತ. ನನಿಗೇ ಹೇಳಾಕ್ ಬರ್ತೀಯೇನ್?’
‘ಹೌದ್ ಮತ್ತ. ನಮ್ಮಪ್ಪನೂ ನಿಮ್ ಡಿಪಾರ್ಟ್ಮೆಂಟೇ. ಅದಕ್ಕ ಹೇಳಿದೆ. ರೂಲ್ಸು ಸರಿಯಾಗಿ ತಿಳ್ಕಬೇಕಲ್ಲ ನೀವೂ?’
ಇದ್ಯಾಕೋ ತನ್ನ ಕುತ್ತಿಗೆಗೆ ಬರುತ್ತದೆ ಅಂತ ಪೇದೆಗೆ ಅನ್ನಿಸಿ, ಅನಾಮತ್ತಲ್ಲಿ ಹತ್ತು ರೂಪಾಯಿ ತೆಗೆದುಕೊಂಡು ಹುಡುಗಿಯರನ್ನು ಬಿಟ್ಟ.

ಸತ್ಯಮೇವ ಜಯತೇ ಅಂತ ಇವರೂ ಜಾಗ ಖಾಲಿ ಮಾಡಿದರು. ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವುದು ಗಾದೆ ತಂದುಕೊಟ್ಟ ಜ್ಞಾನ. ಆಡಲು ಆಗದಿರುವ, ಪ್ರತ್ಯೇಕಿಸಿ ನೋಡಲಾಗದಿರುವ ಸುಪ್ತ ಜ್ಞಾನವಾಹಿನಿಯೊಂದು ಜನರ ಭಿತ್ತಿಯಲ್ಲಿ ದೈನಂದಿನ ಚಟುವಟಿಕೆಗಳಲ್ಲಿ ಅಡಗಿರುತ್ತದೆ. ಅದು ಆ ಕ್ಷಣಕ್ಕೆ ಆಹಾ! ಎಂಥಾ ಜ್ಞಾನೋದಯ ಎನ್ನುವ ಭಾವನೆಯನ್ನು ಮೂಡಿಸದಿದ್ದರೂ, ಜೀವನದುದ್ದಕ್ಕೂ ಹತ್ತು-ಹಲವಾರು ಸಂದರ್ಭಗಳಲ್ಲಿ ಪ್ರತಿಫಲಿತವಾಗುತ್ತಿರುತ್ತದೆ. ಪಾಯಸದಲ್ಲಿನ ಬೆಲ್ಲದಂತೆ, ಮಂಡಕ್ಕಿಯಲ್ಲಿನ ಖಾರದಂತೆ, ಮೆಣಸಿನಕಾಯಿಯಲ್ಲಿನ ಹಸಿರಿನಂತೆ! ಥೇಟ್ ಇಲ್ಲಿನ ಜನರ ಮಾತಿನಂತೆ.

ಏಕೆಂದರೆ ನಮಗೆ ಅಭ್ಯಾಸವಿರುವ ಸಂಗತಿಗಳಿಗೂ, ಅದರ ಪರಿಣಾಮಕ್ಕೂ ಯೂನಿವರ್ಸಾಲಿಟಿ ಎನ್ನುವ ನಿರ್ಬಂಧ ಇರುವುದಿಲ್ಲ. ಹಸಿರು ಬಣ್ಣ ಕಣ್ಣಿಗೆ ತಂಪು ಎನ್ನುವುದನ್ನು ಡಾಕ್ಟರು, ವಿಜ್ಞಾನಿಗಳಾದಿಯಾಗಿ ಎಲ್ಲರೂ ಒಪ್ಪುತ್ತಾರೆ. ಹೊಲದ ಹಸಿರು, ಗಿಡದ ಹಸಿರು ಕಣ್ಣಿಗೆ ಹಿತ ಎನ್ನುವುದು ಸತ್ಯವಾದ ಮಾತೇ ಆದರೂ, ಹಸಿರು ಯಾವುದರಲ್ಲಿ ಕಾಣುತ್ತದೆ ಎನ್ನುವುದೂ ಮುಖ್ಯ.

ಯಾಕೆಂದರೆ ಇದೇ ಹಸಿರಿಗೆ ಸಾರ್ವಕಾಲಿಕ ತಂಪಿನ ಭಾವನೆ ಇಲ್ಲದಿರುವ ವಸ್ತು ಒಂದಿದೆ. ಆ ಬಗೆಯ ದಟ್ಟ ಹಸಿರು ನೋಡಿದರೆ ಹೊಟ್ಟೆಯಲ್ಲಿ ತಳಮಳ ಅಗುವುದಂತೂ ನಿಶ್ಚಿತ. ಇಲ್ಲಿನ ಜನರ ಮಾತನ್ನು ಒಂದು ತರ್ಕಕ್ಕೆ ತರುವುದಾದರೆ ಇಲ್ಲಿನ ಆಹಾರ ಪದ್ಧತಿ ಮತ್ತು ಇಲ್ಲಿ ರೂಪುಗೊಂಡ ವ್ಯವಹಾರಗಳೇ ಮೂಲ ಅನ್ನಿಸುತ್ತದೆ. ದಲ್ಲಾಳಿ ಅಂಗಡಿ, ಕಾಲೇಜುಗಳು ಮತ್ತು ಖಾರ ಇಲ್ಲಿನ ಗುರುತು.

ದಾವಣಗೆರೆಯ ಕಡೆ ಸಿಪ್ಪೆ ತೆಳ್ಳಗಿರುವ ಅತೀ ಖಾರದ ಹಸಿರು ಮೆಣಸಿನಕಾಯಿ ಸಿಗುತ್ತದೆ. ನೋಡಲು ಅತೀ ವಿಧೇಯ ವಿದ್ಯಾರ್ಥಿಯಂತೆ ಕಾಣುವ ಈ ಮೆಣಸಿನಕಾಯಿಯನ್ನು ಹಸಿಯಾಗಿ ರೊಟ್ಟಿಯ ಜೊತೆ, ಅನ್ನದ ಜೊತೆ ಅಥವಾ ಸ್ವಲ್ಪವೇ ಹುರಿದು ಬೆಳ್ಳುಳ್ಳಿಯ ಜೊತೆ ಕುಟ್ಟಿ ಚಟ್ನಿ ಮಾಡಿ ಮುದ್ದೆ-ರೊಟ್ಟಿಯ ಜೊತೆ ಉಣ್ಣುತ್ತಾರೆ. ಈ ಖಾರದ ಸ್ಕೇಲು ನಿರ್ಧರಿತವಾಗುವುದು ತಿಂದುಂಡಾಗ ಮಾತ್ರ ಅಲ್ಲ, ಮಾರನೇ ದಿನ ಬೆಳಿಗ್ಗೆ ನಿತ್ಯ ಕರ್ಮಗಳನ್ನು ತೀರಿಸಲು ಹೋದಾಗಲೂ ರಿಸಲ್ಟ್ ಅನುಭವಕ್ಕೆ ಬಂದರೆ ಮಾತ್ರ ಖಾರದ ಟೆಸ್ಟು ಪಾಸಾಯಿತು ಅಂತ ಅರ್ಥ.

ಬೆಂಗಳೂರಲ್ಲಿ-ಮೈಸೂರಲ್ಲಿ ಮೀಡಿಯಂ ಖಾರ ಸ್ಪೈಸಿ ಅಂತೆಲ್ಲ ಯುವ ಜನತೆ ನಾಜೂಕಾಗಿ ಹೇಳುತ್ತಾರೆ. ಕೃಷ್ಣನ ಸುದರ್ಶನ ಚಕ್ರದಂತೆ, ಅರ್ಜುನನ ಪಾಶುಪತಾಸ್ತ್ರದಷ್ಟೇ ಅಪರೂಪ ವಾದ ಸರ್ಟಿಫಿಕೇಟು ಖಾರಕ್ಕೂ ದೊರೆಯುತ್ತದೆ. ಮಿರ್ಚಿಯ ಮೂಲಕ ಅಥವಾ ಚಟ್ನಿ ಇಲ್ಲವೇ ಹಸಿ ಮೆಣಸಿನಕಾಯಿಯನ್ನು ರುಬ್ಬಿ ಮಾಡಿದ ಕರಿಂಡಿ ಎನ್ನುವ ಪದಾರ್ಥವನ್ನು ಸೇವಿಸಿ ಅತ್ಯುನ್ನತ ದರ್ಜೆಯ ಖಾರ ಸೇವನೆಯಿಂದಾಗಿ ಜೀವವಿನ್ನೂ ಒಳಗೆ ಮಿಡಿಯುತ್ತಿರುವುದು ಖಾತ್ರಿಯಾದಾಗ, ಮನಸ್ಸಿಗೆ ಒಂದು ರೀತಿಯ ನಿರ್ವಾಣ ಸ್ಥಿತಿ ಅರಿವಿಗೆ ಬರುತ್ತದೆ. ಆಗ ಹೊರಡುವ ಅಭಿವ್ಯಕ್ತಿ ಬಹಳ ಅಪರೂಪದ್ದು. ಮಿರ್ಚಿಯ ಮಾರಾಟಕ್ಕೆ ಹೆಚ್ಚಾಗಿ ಈ ಭಾಷೆ ಬಳಕೆಯಾಗುತ್ತದೆ. ಮಂಡಿ ಪೇಟೆ, ಅಶೋಕಾ ರಸ್ತೆ, ವಸಂತ ಟಾಕೀಸು, ಜಂತಾ (ಜನತಾ) ಬಜ಼ಾರು ಇಲ್ಲಿನ ಇಕ್ಕಟ್ಟಿನ ಗಲ್ಲಿಗಳಲ್ಲಿ ನಡೆಯುವ ಮಾರಾಟ ಬಹಳ ಜೀವನ್ಮುಖಿಯಾದದ್ದು.

‘ಮಿರ್ಚಿ ಹ್ಯಂಗದವಪಾ?’
‘ಕಾದ್ ಎಣ್ಣ್ಯಾಗ್ ಅರ್ಧ ತಾಸ್ ಬಿಟ್ಟೇನಣಾ. ಬಾಯಾಗ ಹಾಕ್ಯಂಡ್ರ ಹಂಗೇ ಕರಿಗಿ ಹೋಕ್ಕಾವ. ತಿಂದು ನೋಡ್ರೀ’

‘(ಮೆಣಸಿನ) ಕಾಯಿ ಕಾರ ಹ್ಯಂಗೈತಪಾ?’
‘ಮುಕ್ಳರಿಯ ಕಾರ ಐತಣಾ! (ಮುಕುಳಿ ಹರಿಯುವಷ್ಟು ಖಾರ ಇದೆಯಣ್ಣಾ)’

ಈ ಮಾತಿಗೆ ಯಾವ ವಿಕಾರವೂ ಇರುವುದಿಲ್ಲ. ಹೊರಗಿನ ವಾತಾವರಣಕ್ಕೂ, ಆಹಾರ ಪದ್ಧತಿಗೂ ಯಾವ ಸಂಬಂಧವೂ ಇಲ್ಲದೆ ಜನ ಬದುಕುತ್ತಾರೆ. ಅದನ್ನು ತಪ್ಪು ಅಂತಲೂ ಹೇಳಬಹುದು ಅಥವಾ ಸರಿ ಅಂತಲೂ ಒಪ್ಪಬಹುದು. ಯಾಕೆಂದರೆ ಖಾರ ತಿನ್ನುವ ಜನ ಗಟ್ಟಿಮುಟ್ಟಾಗಿ ಎಪ್ಪತ್ತು ಎಂಬತ್ತರ ತನಕ ಎಲ್ಲರ ಮೇಲೂ ರಾಜ್ಯಭಾರ ಮಾಡುತ್ತಾ ಬದುಕುವಾಗ ಬೆಳ್ಳುಳ್ಳಿ-ಈರುಳ್ಳಿ ತಾಮಸ ಆಹಾರ. ಅದನ್ನು ತ್ಯಜಿಸಿಬಿಡಿ ಅಂತ ಹೇಳುವವ ಅಪ್ರಸ್ತುತವಾಗಿ ಕಾಣುತ್ತಾನೆ.

ಲಂಕೇಶರ ಸಂಕ್ರಾಂತಿ ನಾಟಕದಲ್ಲಿ ನಾಯಕ ಶರಣ ರುದ್ರನ ತಂದೆಯಾದ ಉಜ್ಜ ಬಸವಣ್ಣ ತಮ್ಮ ಮೇಲೆ ಆರೋಪಿಸುತ್ತಿರುವ ಹೊಸ ಜೀವನ ಪದ್ಧತಿಯನ್ನು ಧಿಕ್ಕರಿಸುತ್ತಾ ಕೇಳುತ್ತಾನೆ. ‘ಎಂಡ ಬುಡು, ಹೇಣ್ತಿ ಬುಡು, ಖಂಡ ಬುಡು, ಸುಳ್ಳು ಬುಡು ಎಲ್ಲಾ ಬಿಟ್ಟು ಎಂಗಪ್ಪಾ ಇರಾದು?’ ಎಲ್ಲವನ್ನೂ ಬಿಟ್ಟು ಇರುವುದಾದರೂ ಏತಕ್ಕೆ ಎನ್ನುವ ಧ್ವನಿಯಲ್ಲಿ ಕೇಳುತ್ತಾನೆ. ಬಿರು ಬೇಸಿಗೆ ಇದ್ದರೂ, ತಂಪನೆಯ ಸಂಜೆ ಇದ್ದರೂ ಖಾರ ತಿನ್ನುವ ನಾಲಿಗೆಗಳಿಗೆ ಬಿಡುವೂ ಇಲ್ಲ; ವ್ಯತ್ಯಾಸವೂ ಇಲ್ಲ. ಅಂತಲೇ ಅಲ್ಲಿ ಕರುಣೆ, ವಾತ್ಸಲ್ಯ, ಮಮತೆ ಇಂತಹ ಪದಗಳಿಗೆ ವ್ಯಾಖ್ಯಾನವೇ ಬೇರೆ, ಇವುಗಳನ್ನು ಅರ್ಥೈಸುವ ಹಾವ-ಭಾವಗಳೂ ಅನನ್ಯವೇ.

ಅಪ್ಪ-ಮಕ್ಕಳ ಸಿಟ್ಟಿನ ಜಗಳಗಳಂತೂ ನೋಡುವಂತಿರುತ್ತವೆ. ತಾಯಿಯಾದವಳು ಇಲ್ಲಿ ಸೀರಿಯಲ್ಲಿನಂತೆ ಸೆರಗು ಕಚ್ಚಿ ಕಣ್ಣೀರು ಹಾಕುವುದಿಲ್ಲ. ಅವಳೂ ತಕ್ಕ ಮಟ್ಟಿನ ಬೈಗುಳಗಳ ಅಸ್ತ್ರದೊಂದಿಗೆ ತನ್ನ ಸಿಟ್ಟನ್ನು ಹೊರಗೆಡವಿ, ಅಪ್ಪ-ಮಕ್ಕಳು ಮತ್ತೆ ಪಾರ್ಟಿ ಕಟ್ಟಿಕೊಳ್ಳುವಂತೆ ಮಾಡುತ್ತಾಳೆ. ಪ್ರೀತಿ, ಪ್ರೇಮ, ಅಕ್ಕರೆ ಎಲ್ಲವೂ ಸಿಟ್ಟು-ಬೈಗುಳಗಳ ಮೂಲಕವೇ ಸಾಧನೆಯಾಗುವ ಒಂದು ಅಪರೂಪದ ಸಾಮಾಜಿಕ ವ್ಯವಸ್ಥೆ ಎನ್ನಲಿಕ್ಕೆ ಅಡ್ಡಿಯಿಲ್ಲ.

ವ್ಯವಹಾರವೇ ಸಕಲ ಜೀವಾತ್ಮಗಳಿಗೂ ಆಸರೆಯಾಗಿರುವ ಈ ಭೂಮಿಯ ಮೇಲೆ ತನ್ನ ರಕ್ಷಣೆಯನ್ನು ತಾನೇ ಮಾಡಿಕೊಳ್ಳಬೇಕೆಂಬ ಕರ್ತವ್ಯನಿಷ್ಠೆ ಇರಲೇಬೇಕು. ಅದನ್ನು ಕಲಿಯಬೇಕಾದರೆ ದಾವಣಗೆರೆಯಂಥ ಹೃದಯವಂತ ಪುಟ್ಟ ಊರುಗಳಿಗೆ ಬರಬೇಕು. ಏಕೆಂದರೆ ಇಲ್ಲಿ ಸಾಮಾನ್ಯವಾಗಿ ಚಿಕ್ಕ ಮಕ್ಕಳೂ ತಮ್ಮ ಜಗಳಗಳನ್ನು ತಾವೇ ಆಡಿಕೊಂಡು ಬಗೆಹರಿಸಿಕೊಳ್ಳುತ್ತಾರೆ. ಹೊಸದಾಗಿ ಊರನ್ನು ಒಪ್ಪಿಕೊಂಡವರಿಗೆ, ನಾರ್ಮಲ್ಲಾಗಿ ಬದುಕುವುದು ಎಂದರೆ ಪಂಚತಾರಾ ವೈಭವವಲ್ಲ. ಭಾಷೆಯ ಸಕಲ ಸಾಧ್ಯತೆಗಳನ್ನೂ ಬಳಸಿಕೊಂಡು ಬದುಕುವುದು ಎಂದು ಮನದಟ್ಟಾದರೂ ಸಾಕು.

ಏಕೆಂದರೆ ಈ ಊರಿಗೆ ಇರುವುದು ಒಂದು ರೀತಿಯ ಐಡೆಂಟಿಟಿ ಕ್ರೈಸಿಸ್. ಯಾವ ರೀತಿಯ ಅಹಂ ಅನ್ನು ಹೊಂದಲು ದಾವಣಗೆರೆಗೆ ಇರುವ ಅವಕಾಶಗಳು ಬಹಳ ಮಿತವಾದುವು. ಜುಳು ಜುಳು ಹರಿಯುವ ತೊರೆಗಳಿಲ್ಲ, ಕಾಡಿನ ಸ್ನಿಗ್ಧ ಸೌಂದರ್ಯವಿಲ್ಲ, ಧಾರವಾಡದ ಕವಿತ್ವವಾಗಲೀ, ಸಂಗೀತ ಪೊರೆಯುವ ಪರಿಸರವಾಗಲೀ ಇಲ್ಲವೇ ಇಲ್ಲ. ಮಲೆನಾಡಿನ ಸೊಬಗಿಲ್ಲ, ತುಳುನಾಡಿನ ಗಾಢ ಗಾಂಭೀರ್ಯ ಇಲ್ಲ, ಬೆಂಗಳೂರಿನ ಅಹಂ ಇಲ್ಲ, ಮೈಸೂರಿನ ಹಿರಿತನವಾಗಲೀ, ಸೌಂದರ್ಯವಾಗಲೀ ಇಲ್ಲ. ಇಲ್ಲಿನ ಜನಗಳೇ ಇಲ್ಲಿನ ಜೀವಾಳ. ವ್ಯಾಪಾರ ವಹಿವಾಟುಗಳೇ ಇಲ್ಲಿನ ಗುರುತು. ಇಲ್ಲಿರುವುದು ನಮ್ಮನೆ. ಇಲ್ಲಿನ ಅನನ್ಯತೆ ಹುಡುಕಿದವರಿಗೆ ಮಾತ್ರ ಸಿಗುವಂಥದ್ದು. ಸಿಕ್ಕರೆ ಬಿಡದಂಥದ್ದು. ಬಿಟ್ಟರೆ ಬಾರದಂಥದ್ದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.