ವಿಜಿಯ ಪಕ್ಕದ ರೂಮಿನಲ್ಲಿದ್ದ ಗೌಡರ ಹುಡುಗಿ ಇಂದುಮತಿ ಒಂಥರಾ ಮಜಾ ಇದ್ದಳು. ನೋಡಲು ಕಟ್ಟುಮಸ್ತಾಗಿ, ಗುಂಡ ಗುಂಡಗೆ ಇದ್ದಳು. ಹೆಂಗಸರ ಥರ ಬಳುಕಿ ನಡೆಯಲು ಅವಳಿಗೆ ಬರುತ್ತಿರಲಿಲ್ಲ. ಗಟವಾಣಿ ಥರದ ವ್ಯಕ್ತಿತ್ವ. ನಕ್ಕರೆ ಯಾರನ್ನೋ ಗೇಲಿ ಮಾಡುತ್ತಿದ್ದಾಳೇನೋ ಎನ್ನುವ ಥರದ ಗಹಗಹಿಸುವ ಪರಿಯಂತೂ ಮೈ ಎಲ್ಲಾ ನಡುಕ ತರಿಸುತ್ತಿತ್ತು. ಅಷ್ಟಗಲ ಹಣೆ, ಒಂಥರಾ ಔದಾಸೀನ್ಯವೂ, ಅಹಂಕಾರವೂ, ಲೇವಡಿಯೂ ತುಂಬಿದಂತಿದ್ದ ಅರ್ಧ ನಿಮೀಲಿತ ನೇತ್ರದ್ವಯಗಳು. ಎಣ್ಣೆ ಹಚ್ಚಿ ಕೆಂಡದಲ್ಲಿ ಸುಡಲು ರೆಡಿ ಮಾಡಿಟ್ಟ ಬದನೇಕಾಯಿಯಂಥ ಹೊಳೆ ಹೊಳೆಯುವ ಚರ್ಮ. ಸದಾ ಕೊಂಕಾಗಿದ್ದ ತುಟಿಗಳು.

ಬಾಯಿ ಬಿಟ್ಟರೆ ಬಣ್ಣಗೇಡು ಎನ್ನುವ ಮಾತನ್ನು ಕೇಳಿದ್ದೀರಲ್ಲಾ? ಇವಳದ್ದೂ ಹಾಗೇ! ಒಂದೇ ವ್ಯತ್ಯಾಸವೆಂದರೆ, ಇವಳು ಬಾಯಿ ಬಿಟ್ಟರೆ ಉಳಿದವರ ಬಣ್ಣಗೇಡಾಗುತ್ತಿತ್ತು. ಒಂದು ನಮೂನಿ ಹೆಣ್ಗಂಡು ಹುಡುಗಿ.

ಅವಳ ತಲೆಯಲ್ಲಿ ಕೂದಲು ಮಾತ್ರ ಅಲ್ಪಸಂಖ್ಯಾತವಾಗಿದ್ದವು. ಕಾರಣ ಮೊದಲೇ ಶಾರ್ಟ್ ಕಟ್ ಇದ್ದುದರಿಂದ ದಿನಾ ತಲೆಗೆ ಶಾಂಪೂ ಹಾಕಿ ಸ್ನಾನ ಮಾಡುತ್ತಿದ್ದಳು. ಹಾಗಾಗಿ ತಲೆಯ ಚರ್ಮ ಫಳ ಫಳ ಹೊಳೆಯುತ್ತಿತ್ತು. ಅಲ್ಲಲ್ಲಿ ಆಶಾವಾದದ ಚಿಗುರಿದ್ದ ಕೂದಲು. ಕುಸ್ತಿ ಮಾಡಿ ರಬ್ಬರ್ ಬ್ಯಾಂಡಿನಲ್ಲಿ ಹಿಡಿದು ಹಾಕಬೇಕೆಂದರೆ ಪುಟಾಣಿ ನಾಟಿ ಕೊತ್ತಂಬರಿ ಸೊಪ್ಪಿನ ಕಟ್ಟಿನಷ್ಟೇ ಗಾತ್ರ.

ಅದರ ಮೇಲೆ ಭರ್ಜರಿ ದಬ್ಬಾಳಿಕೆ ಮಾಡಿ, ಒಮ್ಮೊಮ್ಮೆ ಜುಟ್ಟು ಕಟ್ಟುತ್ತಿದ್ದಳು. ಉಳಿದಂತೆ ಭುಜವನ್ನೂ ತಾಕದಂತೆ ಇದ್ದ ಆ ಕೇಶರಾಶಿ ಬಹಳ ಸಂಕಟದಲ್ಲಿ ಬದುಕುತ್ತಿದ್ದಂತೆ ತೋರುತ್ತಿತ್ತು. ಒಮ್ಮೊಮ್ಮೆ ವಿಕ್ರಮನ ಭುಜದ ಮೇಲೆ ಬಿದ್ದ ಬೇತಾಳದಂತೆ ಜೀವಚ್ಛವದಂತೆ ಕಾಣುತ್ತಿದ್ದ ಕೂದಲು ಕಪ್ಪು ಬಣ್ಣದಿಂದ ತಾಮ್ರದ ಬಣ್ಣಕ್ಕೆ ಎಂದೋ ತೇರ್ಗಡೆ ಹೊಂದಿದ್ದವು. ದಿನಾ ಸೋಪು, ಶಾಂಪೂ ಹಾಕಿ ಕೂದಲನ್ನು ಪೋಷಿಸುವ ನೆಪದಲ್ಲಿ ಶೋಷಿಸಿದರೆ, ಆ ಸತ್ತ ಜೀವಕಣಗಳು ಪ್ರತಿರೋಧವನ್ನು ತೋರಿಸುವುದಾದರೂ ಹೇಗೆ?

ಇನ್ನು ಅವಳ ಕೈಕಾಲುಗಳು ಗಟ್ಟಿ ಕೆಲಸಕ್ಕೆ ಆರ್ಡರು ಕೊಟ್ಟು ಮಾಡಿಸಿದಂತಿದ್ದವು. ಧಪ ಧಪ ಎಂದು ಹೆಜ್ಜೆ ಹಾಕುತ್ತಾ ಅವಳು ಬಂದರೆ ಎಂಥೆಂಥವರ ಗುಂಡಿಗೆಯೇ ಕೆಲಸ ನಿಲ್ಲಿಸುತ್ತಿತ್ತು. ಆದರೆ ಇಂದುಮತಿಗೆ ತನ್ನ ಇರುವಿಕೆಗೆ ಅವಳ ಸುತ್ತಲೂ ಹೊಮ್ಮುತ್ತಿದ್ದ ಯಾವ ಪ್ರತಿಕ್ರಿಯೆಯೂ ಗಮನಕ್ಕೆ ಬರುತ್ತಿರಲಿಲ್ಲ. ಅಥವಾ ತನ್ನ ಗಮನಕ್ಕೆ ಏನೂ ಬಾರದು ಎನ್ನುವ ಹಾಗೆ ನಟಿಸುತ್ತಿದ್ದಳೋ ಆ ಪರಮಾತ್ಮನಿಗೇ ಅರ್ಥವಾಗುವಂತಿತ್ತು.

ಲಲನೆಯರು ನಡೆಯುವಾಗ ಕೈಗಳನ್ನು ತಮ್ಮ ದೇಹದ ಹತ್ತಿರದಲ್ಲೇ ಬೀಸಿದರೆ, ಗಟ್ಟಿ ಹೆಣ್ಣುಗಳು ಕೈಗಳನ್ನು ದೇಹದಿಂದ ದೂರಕ್ಕೆ ಬೀಸುತ್ತಾರೆ. ಇಂದುಮತಿಯ ಕೈಗಳು ಅವಳ ದೇಹದಿಂದ ದೂರ ಹೋಗಿ ಅತ್ತಿತ್ತ ನಡೆಯುವವರನ್ನೂ ತಾಗುತ್ತಿದ್ದವು. ಅಷ್ಟು ‘ವಿಸ್ತೃತ’ ವ್ಯಕ್ತಿತ್ವ ಅವಳದ್ದು. ಕಟ್ಟಿಗೆ ಒಲೆಯ ನಿಗಿ ನಿಗಿ ಬೆಂಕಿಯ ಮೇಲೆ ಎಸರು, ಹಿಟ್ಟು ತೊಳಸಿ ದಿಮ್ಮಗೆ ಭದ್ರವಾಗಿ, ಗುಂಡಗೆ ಕಟ್ಟಿದ್ದ ರಾಗಿಮುದ್ದೆಯಂತೆ ಭಾಸವಾಗುತ್ತಿದ್ದಳು.

ಅವಳು ನಡೆಯುತ್ತಿದ್ದ ರೀತಿ ನೋಡಿದರೆ ಗದ್ದೇಲಿ ಕೆಲ್ಸ ಮಾಡೋ ಹೆಣ್ಮಕ್ಳು ನೆನಪಾಗುತ್ತಿದ್ದರು. ನಾಟಿ ಕೆಲಸಕ್ಕೆ, ಒಕ್ಕುವ ಕೆಲಸಕ್ಕೆ ಬರುವ ಹಳ್ಳಿಯ ಹೆಣ್ಣುಮಕ್ಕಳ್ಯಾರೂ ‘ಬಾಗಿ ಬಳುಕಿ’ ನಡೆಯುವುದಿಲ್ಲ. ಅವರ ನಡಿಗೆಯಲ್ಲಿ ಒಂದು ರೀತಿಯ ಸದೃಢತೆ ಇರುತ್ತದೆ. ಹೆಜ್ಜೆಗಳಲ್ಲಿ ಖಚಿತತೆ ಇರುತ್ತದೆ.

ಏಕತಾನತೆಯ ಕೆಲಸವೇ ಆದರೂ ಆ ಕೆಲಸಕ್ಕೊಂದು ದಿಕ್ಕು ಇರುತ್ತದೆ. ಮೈಯಲ್ಲಿ, ತೋಳುಗಳಲ್ಲಿ, ಕೈ-ಕಾಲುಗಳಲ್ಲಿ ಕಸುವು ತುಂಬಿರುತ್ತದೆ. ಹತ್ತು ಮಕ್ಕಳನ್ನು ಹೆತ್ತರೂ ವಾರದೊಳಗೇ ಕೆಲಸಕ್ಕೆ ಬರುವಷ್ಟು ದೈಹಿಕ ಮಿತಿಗಳ ಬಗ್ಗೆ, ಸಂಸಾರದ ಕಷ್ಟಗಳ ಬಗ್ಗೆ ಒಂದು ಬಗೆಯ ಆಳವಾದ ನಿರ್ಲಿಪ್ತ ಭಾವ ಇರುತ್ತದೆ.

ಇಂದುಮತಿಯ ಅಪ್ಪ ಬೆಂಗಳೂರಿನಲ್ಲಿರುತ್ತಿದ್ದರು. ಇವಳು ಮನೆಗೆ ಹೋಗುತ್ತಿದ್ದಳಾದರೂ ಉಳಿದವರಷ್ಟು ರೆಗ್ಯುಲರ್ ಆಗಿ ಮನೆಗೆ ಕಾಲಿಟ್ಟಿದ್ದು ಅಪರೂಪವೇ. ಮನೆ ಎಲ್ಲಿ ಎಂದು ಕೇಳಿದರೆ ‘ಡಾಲರ್ಸ್ ಖಾಲ್ನಿ’ (ಡಾಲರ್ಸ್ ಕಾಲೋನಿ) ಎಂದು ಒಂದು ಬಗೆಯ ತೋರಿಕೆಯ ಪ್ರತಿಷ್ಠೆಯಲ್ಲಿ ಹೇಳಿಕೊಳ್ಳುತ್ತಿದ್ದಳು.

ಆದರೆ, ಅವಳ ದುರ್ಗುಣಗಳನ್ನು, ಅಹಂಕಾರಿ ಎನ್ನುವ ಪದರವನ್ನು, ಅವಳ ದಪ್ಪ ಚರ್ಮವನ್ನೂ ಮೀರಿ ಹತ್ತಿರವಾದವರಿಗೆ ಮಾತ್ರ ‘ಡಾಲರ್ಸ್ ಖಾಲ್ನಿ’ಯಲ್ಲಿನ ಖಾಲಿತನ ಅರ್ಥವಾಗುತ್ತಿತ್ತು. ಸ್ವಲ್ಪ ಹತ್ತಿರದಿಂದ ನೋಡಿದರೆ ಕಣ್ಣ ಕೊನೆಯಲ್ಲಿ ಒಂದು ಹನಿ ನೀರು ಜಿನುಗುತ್ತಿದ್ದುದು ಕಾಣಿಸುತ್ತಿತ್ತು. ಆದರೆ, ಚಿಕ್ಕ ವಯಸ್ಸಿನಲ್ಲಿ ಅಷ್ಟು ವ್ಯವಧಾನವಾದರೂ ಯಾರ ಹತ್ತಿರ ಇರಲು ಸಾಧ್ಯ?

ಏಕೆಂದರೆ ಅವಳ ಅಪ್ಪ ಇಂದೂವಿನ ಅಮ್ಮ ತೀರಿದ ನಂತರ ಎರಡನೆ ಮದುವೆ ಆಗಿದ್ದರು. ಅವರದ್ದೂ ಚಿಕ್ಕ ವಯಸ್ಸು. ವ್ಯಾಪಾರ ವಹಿವಾಟು ಬಹಳ ದೊಡ್ಡದು. ಮನೆಯಲ್ಲಿ ಆಧಾರಸ್ತಂಭ ಇಲ್ಲದಿದ್ದರೆ ಆಗುವುದಿಲ್ಲ ಎನ್ನುವ ಪರಿಸ್ಥಿತಿ. ಇಂದೂವಿನ ತಂಗಿ ಒಬ್ಬಳಿದ್ದಳು. ಅವಳು ಸೌಂದರ್ಯದಲ್ಲೂ, ನಡವಳಿಕೆಯಲ್ಲೂ ಇಂದೂವಿನ ತದ್ವಿರುದ್ಧ. ಬಹಳ ಸೌಮ್ಯ ಹುಡುಗಿ, ಚಂದದ ನಗು ಹೊತ್ತವಳು. ಅವಳಿಗೆ ಮದುವೆಯಾಗಿತ್ತು.

ಇಂದೂ ಮಾತ್ರ ಒಬ್ಬಂಟಿಯಾಗಿಬಿಟ್ಟಿದ್ದಳು. ನಾನು-ತಾನು-ನೀನು-ಏನುಗಳ ಪ್ರಪಂಚದಲ್ಲೇ ಪೈಪೋಟಿ ನಡೆಯುತ್ತಿರುವಾಗ ಮನುಷ್ಯರು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಮನಸ್ಸು ಹುಟ್ಟುವುದೇ ಇಲ್ಲ. ಆ ವ್ಯವಧಾನ ಹುಟ್ಟುವ ಹೊತ್ತಿಗೆ ಕಾಲ ಸರಿದುಹೋಗಿರುತ್ತದೆ. ವಯಸ್ಸು ಮಾಗಿರುತ್ತದೆ. ಸಂಬಂಧಗಳು ಕಳಚಿಹೋಗಿರುತ್ತವೆ.

ಇಂದುಮತಿಗೆ ಇವೆಲ್ಲ ಅರ್ಥವಾಗುತ್ತಿರಲಿಲ್ಲ ಎಂತಲ್ಲ. ಅವಶ್ಯಕತೆ, ಕೆಟ್ಟತನ, ನೀಚ ಬುದ್ಧಿ, ಸ್ವಾರ್ಥ ಇವ್ಯಾವೂ ಇಂದುಮತಿಯಲ್ಲಿ ಹರಳುಗಟ್ಟಿರಲಿಲ್ಲ. ಆದರೆ, ಯಾರಿಗಾದರೂ ಅವಳು ಇವೆಲ್ಲವನ್ನೂ ಸಾಕಷ್ಟು ಪ್ರಮಾಣದಲ್ಲಿ ಹೊಂದಿದ ಹೆಣ್ಗಂಡ್ಸಿನಂತೆ ಕಾಣುತ್ತಿದ್ದಳು. ಅವಳ ಪ್ರೀತಿಯ ಅಭಿವ್ಯಕ್ತಿ ಬಹಳ ಅಪರೂಪದ್ದು. ಅವಳಿಗೂ ರಿಂಕಿಗೂ ಅಥವಾ ವಿಜಿಗೂ ಈ ತೆರನಾದ ಮಾತುಕತೆಗಳು ಆಗಾಗ ನಡೆಯುತ್ತಿದ್ದವು.

‘ಇಂದೂ, ಸ್ವಲ್ಪ ಟೇಪ್ ರೆಕಾರ್ಡರ್ ಬೇಕಿತ್ತು ಕಣೆ’ ‘ಯಾವಳೇ? ಎಲ್ರಿಗೂ ದಾನ ಕೊಡಕ್ಕೆ ಇಟ್ಟಿದೀನಾ ಇದನ್ನ? ಕಾಸ್ ಕೊಟ್ಟು ಕೊಂಡ್ಕೊಂಡಿರೋದು ಅಮ್ಮಣ್ಣಿ!’

‘ನೀ ಪುಗಸಟ್ಟೆ ತಂದಿದೀಯ ಅನ್ಲಿಲ್ಲ ಕಣೆ, ಒಂದು ಹಾಡು ಕೇಳ್ಬೇಕು ಅನ್ನಿಸ್ತಿದೆ. ಸ್ವಲ್ಪ ಹೊತ್ತು ಕೊಡೇ’

‘ಏಯ್! ಮುಚ್ಕೊಂಡು ವೋಗೆಲೆ! ಹಾಡ್ ಕೇಳ್ತಾಳಂತೆ ಹಾಡು. ಥೂ ಅವನು ಯಾವಾಗ್ಲೂ ಸಾಯೋ ಹಂಗೆ ಗಜಲ್ ಹಾಡ್ತಾನೆ, ಅದನ್ನೆಲ್ಲ ಕ್ಯಾಸೆಟ್ ಮಾಡಕ್ಕೆ ಇನ್ನೊಬ್ಬ...ಕೇಳಕ್ಕೆ ನೀನೊಬ್ಳು ಗರ್ತಿ (ಗರತಿ). ಕೆಲ್ಸ ಇಲ್ಲಾ? ಹೋಗ್!’

‘ಸರಿ ಬಿಡು. ಇನ್ನೊಂದ್ ಸಾರಿ ನಮ್ ರೂಮಲ್ಲಿ ಅಡುಗೆ ಮಾಡ್ದಾಗ ನಾಯಿ ತರ ಮೂಸ್ಕೊಂಡು ಬಾ. ಆವಾಗ ಹೇಳ್ತೀನಿ. ಕಳ್ ಲೌಡಿ’

‘ಏಯ್! ಬಾರೆ ಇಲ್ಲಿ. ನಾನ್ ಯಾವಾಗ ಬಂದಿದ್ದೆ ನಿಂ ರೂಮಿಗೆ? ಲೈ! ನನ್ಗೂ ಅಡಿಗೆ ಮಾಡ್ಕೊಳ್ಳಕ್ಕೆ ಬರುತ್ತೆ! ಆದ್ರೆ ನನ್ಗೇನು ಕಾಟ? ಅಡ್ಗೆ ಮಾಡ್ಕೊಂಡು ಸಾಯಕ್ಕೆ? ನಮ್ಮಪ್ಪ ಕೆಲ್ಸದೋರನ್ನ ಇಟ್ಟಿದಾರೆ ಮನೇಲಿ. ಅದಕ್ಕೆಲ್ಲ ಸರ್ವೆಂಟ್ಸ್ ಅಂತ ಇರ್ತಾರೆ ಗೊತ್ತಾ? ನಿಂಗೇನು ಗೊತ್ತಾಗುತ್ತೆ? ಕೂಲಿ ಕ್ಲಾಸ್ ನೀನು!’

‘ವದ್ದಾ ಅಂದ್ರೆ ಒಳಗಿರೋದೆಲ್ಲ ಮಿಸೈಲ್ ಥರಾ ಹೊರಗ್ ಬರ್ಬೇಕು. ಈಗೇನ್ ಕೊಡ್ತೀಯಾ ಇಲ್ವಾ?’

‘ಸರಿ ತಗೊಂಡು ಹೋಗು. ಆದ್ರೆ ಆ ಸಾಯೋ ಹಾಡ್ ಮಾತ್ರ ಹಾಕ್ಬೇಡ. ನನ್ ಟೇಪ್ ರೆಕಾರ್ಡರ್ ಮೈಲಿಗೆ ಆಗುತ್ತೆ’

ಅದ್ಯಾಕೋ ಜಗಜೀತ್ ಸಿಂಗನ ಗಜಲುಗಳು ಅಂದ್ರೆ ಅವಳಿಗೆ ಆಗ್ತಿರಲಿಲ್ಲ. ಸಾಯೋ ಹಾಡು, ಕಣ್ಣೀರಾಕೋ ಹಾಡು ಅಂತೆಲ್ಲ ರಿಜೆಕ್ಟ್ ಮಾಡುತ್ತಿದ್ದಳು. ಆದರೆ ಒಬ್ಬಳೇ ಇದ್ದಾಗ ಗಜಲುಗಳನ್ನು ಕೇಳಿದ್ದನ್ನು ರಿಂಕಿ, ರಶ್ಮಿ, ವಿಜಿ ಎಲ್ಲರೂ ಕಂಡಿದ್ದರು.

ಒಮ್ಮೊಮ್ಮೆ ಇಂದೂ ಬಹಳ ಒಬ್ಬಂಟಿ ಎನ್ನಿಸುತ್ತಿತ್ತು. ಆದರೆ ಯಾರೂ ಆವಳ ಹತ್ತಿರ ಹೋಗುವ ಹಾಗಿರಲಿಲ್ಲ. ಹೋದರೂ ತನಗೆ ಗೊತ್ತಿಲ್ಲದಂತೆಯೇ ಹತ್ತಿರ ಬಂದವರನ್ನು ದೂರ ಮಾಡಿಕೊಳ್ಳುತ್ತಿದ್ದಳು. ಅವಳ ಒಳಗಿನ ಜಗತ್ತು, ಅದರ ದುಃಖ, ಒಂಟಿತನ, ಖಿನ್ನತೆ—ಇವೆಲ್ಲ ಬಯಲಾಗುವುದು ಇಂದೂವಿಗೆ ಬೇಕಿರಲಿಲ್ಲ. ಹಾಗಂತ ಅವಳದ್ದೊಂದು ಸುರಕ್ಷಾ ವಲಯ ನಿರ್ಮಿಸಿಕೊಂಡಿದ್ದಳು.

ಯಾರಾದರೂ ಹತ್ತಿರ ಬಂದರೆ, ಅವರನ್ನು ತಕ್ಷಣ ಅವಮಾನಿಸಿಯೋ, ಲೇವಡಿ ಮಾಡಿಯೋ ಸೇಫ್ ಡಿಸ್ಟೆನ್ಸ್ನಲ್ಲಿ ಇಡುತ್ತಿದ್ದಳು. ತನ್ನ ತಂಗಿಯ ಸಂಸಾರವನ್ನು ನೋಡಿದಾಗಲೆಲ್ಲ ಮದುವೆಯಾಗಬೇಕೆಂಬ ಆಸೆ ಇಂದೂವಿಗೆ ಬಲವಾಗಿ ಆಗುತ್ತಿತ್ತಾದರೂ, ಯಾರ ಹತ್ತಿರ ಹೇಳಿಕೊಳ್ಳುವುದು? ಅಪ್ಪನಿಗೆ ಇವಳನ್ನು ದಡ ಸೇರಿಸುವ ಯಾವ ಧಾವಂತವೂ ಇರಲಿಲ್ಲ.

ಅವಳ ಮಲತಾಯಿ ಅಥವಾ ಚಿಕ್ಕಮ್ಮನಿಗೋ, ಇವಳು ಖರ್ಚಾದರೆ ಸಾಕಿತ್ತು. ಆದರೆ, ಹಾಗಂತ ಸಿಕ್ಕಾಪಟ್ಟೆ ದುಡ್ಡು ಸುರಿದು ಇವಳ ಮದುವೆ ಮಾಡಲು ಅವರು ತಯಾರಿರಲಿಲ್ಲ. ಚಿಕ್ಕಮ್ಮನಿಗೂ ಇಬ್ಬರು ಮಕ್ಕಳಿದ್ದರು. ಒಂದು ಎಳೇ ಸಂಜೆ ರಿಂಕಿ, ಇಂದೂ, ವಿಜಿ, ರಶ್ಮಿ ಎಲ್ಲಾ ಚಹಾ ಕುಡಿದು ಮಾತನಾಡುತ್ತಾ ಕೂತಿರುವಾಗ ಇಂದುವಿನ ತಂದೆ ಫೋನ್ ಮಾಡಿದರು.

ಇಂದೂ ಬಹಳ ಸಂಭ್ರಮದಿಂದ ಹೋಗಿ ತನ್ನ ಅಪ್ಪನ ಹತ್ತಿರ ಮಾತನಾಡಿ ಬಂದಳು. ಸಾಮಾನ್ಯವಾಗಿ ಅಪ್ಪನ ಹತ್ತಿರ ಮಾತನಾಡಿ ಬಂದ ಮೇಲೆ ಇಂದೂ ಬಹಳ ಕ್ಷೋಭೆಗೆ ಒಳಗಾಗುತ್ತಿದ್ದಳು. ಆದರೆ, ಬಹಳ ಅಪರೂಪಕ್ಕೆ ಅವಳ ಅಪ್ಪನ ಫೋನ್ ಬಂದ ಮೇಲೂ ಇಂದುಮತಿ ನಗುತ್ತಲೇ ಮಾತಾಡುತ್ತಿದ್ದಳು. ಎಲ್ಲರಿಗೂ ಒಂದು ಕ್ಷಣ ಆಶ್ಚರ್ಯವೆನಿಸಿದರೂ ಸುಮ್ಮನೆ ಪ್ರಶ್ನೆ ಕೇಳಿ ಅವಲಕ್ಷಣ ಮಾಡಿಕೊಳ್ಳುವುದು ಬೇಡ ಅಂತ ಸುಮ್ಮನಾದರು.

ಮಾರನೇ ದಿನ ಬೆಳಿಗ್ಗೆ ಇಂದುಮತಿ ಯಾರದೋ ಮನೆಗೆ ಹೋಗುತ್ತೀನಿ ಅಂತ ಹೇಳಿ ಹೊರಟುಹೋದಳು. ಸಂಜೆ ಎಲ್ಲರೂ ಕ್ಲಾಸ್ ಮುಗಿಸಿ ವಾಪಾಸು ಬಂದಾಗ ಯಾವುದೋ ಹೆಂಗಸು ಇಂದೂವಿನ ರೂಂ ಬಾಗಿಲು ತೆಗೆಯಲು ಪ್ರಯತ್ನ ಪಡುತ್ತಿರುವಂತೆ ಇತ್ತು. ಇದ್ಯಾರಪ್ಪಾ ಎಂದುಕೊಂಡು ದಿಟ್ಟಿಸಿ ನೋಡಿದರೆ ಅದು ಇಂದೂನೇ!

ಅಸಡಾ ಬಸಡಾ ರೇಷ್ಮೆ ಸೀರೆ ಉಟ್ಟುಕೊಂಡು, ಕೈತುಂಬಾ ಬಳೆ ತೊಟ್ಟುಕೊಂಡು ಕೊತ್ತಂಬರಿ ಸೊಪ್ಪಿನ ಜುಟ್ಟಿಗೆ ಮಲ್ಲಿಗೆ ಮಾಲೆಯ ಬಲವಂತದ ಅಲಂಕಾರ ಮಾಡಿದ್ದಳು. ಕೂದಲಿನ ಅಳತೆಗಿಂತ ಮಾಲೆ ಉದ್ದವಿದ್ದುದರಿಂದ ಮಲ್ಲಿಗೆಯ ಮೊಗ್ಗುಗಳು ಇವಳ ಜುಟ್ಟಿನಿಂದ ಹೊರಗೆ ಅನಾಥವಾಗಿ ನೇತಾಡುತ್ತಿದ್ದವು. ಇಂತಿಪ್ಪ ಇಂದುಮತಿ ಸಾಲಂಕೃತೆಯಾಗಿ ರೂಮಿಗೆ ಬಂದು ಬೀಗ ತೆಗೆದು ಒಳಗೆ ಹೋಗಲು ಒದ್ದಾಡುತ್ತಿದ್ದಳು. ಬಾಗಿಲು ಕಚ್ಚಿಕೊಂಡುಬಿಟ್ಟಿತ್ತು.

ಅವಳು ಒಳಗೆ ಹೋಗಿ ಸೀರೆ ಬದಲಾಯಿಸುವುದಕ್ಕೂ ರಶ್ಮಿ, ರಿಂಕಿ, ವಿಜಿ ಇಂದೂವಿನ ರೂಮಿನೊಳಗೆ ನುಗ್ಗಿ ಹೊಟ್ಟೆ ಹಿಡಿದುಕೊಂಡು ನಗಲಾರಂಭಿಸಿದರು. ಇಂದು ಹಲ್ಲು ಕಚ್ಚಿ ಮುಷ್ಠಿ ಕಟ್ಟುತ್ತಾ ನಿಂತಳು. ‘ಏಯ್, ಮುಚ್ರೆ ಸಾಕು. ಒಬ್ಬೊಬ್ಬಳ್ದೂ ಹಲ್ ಮುರ್ದುಬಿಡ್ತೀನಿ’ ಎಂದು ತಾರಸಿ ಹಾರಿಹೋಗುವಂತೆ ಕೂಗಿದಳು.

ಹುಡುಗಿಯರು ಸುಮ್ಮನಾದರು. ‘ಅಲ್ಲಾ ಕಣೆ, ನಿಂಗೇನೇ ಆಗಿದೆ? ಹಿಂಗೆ ಅವತಾರ?’ ಸಿಟ್ಟಿನಲ್ಲಿ ಕುದಿಯುತ್ತಲೇ ಹೇಳಿದಳು.

‘ಹೌದು. ಯಾವ್ದೋ ಗಂಡು ಬರುತ್ತೇಂತ ನಮ್ಮಪ್ಪ ಹೇಳಿದ್ರು. ಅದಕ್ಕೆ ನಂ ಅಂಕಲ್ ಮನೆಗೆ ಹೋಗಿದ್ದೆ’

‘ಗಂಡು ನೋಡಕ್ಕೆ ನೀನೇ ಹೋಗಿದ್ಯಾ?’

‘ಹೌದು. ನಮ್ಮಪ್ಪಂಗೆ ಬರೋಕೆ ಟೈಮ್ ಇಲ್ವಂತೆ. ಅದಕ್ಕೇ ನಾನೇ ಹೋಗಿದ್ದೆ’

ಭಪ್ಪರೇ ಹುಡುಗಿ!

‘ಹೆಂಗಿದ್ದ?’

‘ಸುಮಾರಾಗಿದ್ದ. ಸೈಂಟಿಸ್ಟ್ ಅಂತೆ. ಅಮೆರಿಕದಲ್ಲಿ ಇದಾನೆ’

‘ಮಾತಾಡಿದ್ನಾ?’

‘ಸ್ವಲ್ಪ’

‘ಏನಂದ?’

‘ಮನೆ ಕೆಲ್ಸ ಎಲ್ಲಾ ಬರುತ್ತಾ ಅಂದ’

‘ಅಂದ್ರೆ?’

‘ಅಡುಗೆ ಕೆಲ್ಸ, ರಂಗೋಲಿ ಎಲ್ಲಾ ಬರುತ್ತಾ ಅಂದ’

ಅಬ್ಬಬ್ಬ! ಎಂಥಾ ಪ್ರಶ್ನೆ!

‘ನೀ ಏನ್ ಹೇಳಿದಿ?’

‘ಬರುತ್ತೆ ಸುಮಾರಾಗಿ. ನಿಂ ಸಂಬಳ ಎಷ್ಟು ಅಂತ ಕೇಳಿಬಿಟ್ಟೆ’

‘ಲೈ ಲೈ ಲೈ...ಯಾರಾದ್ರೂ ಹಾಗೆ ಕೇಳ್ತಾರೇನೆ?’

‘ಅವ್ನು ನನ್ನ ಏನ್ ಬೇಕಾದ್ರೂ ಕೇಳಬಹುದಾ?’

‘ಮತ್ತೇನ್ ಕೇಳಿದ?’

‘ಹಾಡೋಕೆ ಬರುತ್ತಾ? ಮಕ್ಕಳನ್ನ ಸಾಕೋಕೆ ಗೊತ್ತಾ ಅಂದ’

‘ಥತ್!’

‘ಎಗ್ಸಾಕ್ಟ್ಲೀ! ನಾನೂ ಬಿಡ್ಲಿಲ್ಲ ನಿಂಗೆ ಹಾಡೋಕೆ, ಅಡುಗೆ ಮಾಡೋಕೆ, ಮಕ್ಕಳನ್ನ ಸಂಭಾಳಿಸೋಕೆ ಬರುತ್ತಾ ಅಂದೆ’

‘ಹಂಗಂತಾರೇನೆ ಇಂದೂ?’

‘ಅಲ್ಲಾ ಕಣೇ. ಹಿಂದಿನ ಕಾಲ್ದಲ್ಲಿ ಕೆಲವು ಜಾತಿಯ ಹೆಣ್ಣು ಮಕ್ಳು ಇದನ್ನೆಲ್ಲ ಕಲೀತಿದ್ರು. ಮನೇಲಿದ್ದವ್ರಿಗೆ ಅದೇ ಔಟ್ ಲೆಟ್. ಈಗ್ಲೂ ಅದನ್ನೇ ಅಳತೆ ಅನ್ನೋ ಥರ ಇಟ್ಕೊಂಡ್ರೆ? ನೂರ್ ವರ್ಷ ಹಿಂದಿನ್ ಕತೆನೇ ಹೇಳ್ತಿದ್ರೆ ಕೇಳೋರ್ಯಾರು?’

‘ಏನೀಗ?’

‘ಐ ವೋಗ್. ಅವನಿಲ್ಲ ಅಂದ್ರೆ ಕತ್ತೆ ಬಾಲ’

ಈ ವಧುಪರೀಕ್ಷೆಯ ಫಲಿತಾಂಶ ಹೇಳಬೇಕಾಗೇ ಇಲ್ಲ. ಆದರೆ ಅಂದು ಮೂರೂ ಜನ ಹುಡುಗೀರಿಗೆ ಒಂದು ರೀತಿಯ ಸ್ವಾಭಿಮಾನದ ದರ್ಶನವಾಯ್ತು. ಗಂಡಿಗೆ ಮಾತ್ರ ಅನಾಯಾಸ ಪ್ಯಾಂಟು ತೊಡಿಸಿ ಹುಡುಗೀರಲ್ಲಿ ಈಗಲೂ ಕಾಳಿದಾಸನ ಶಕುಂತಲೆಯನ್ನೇ ಬಯಸುವ ಸಮಾಜದ ವಿಶ್ವರೂಪದ ಹೊಳಹು ಮಿಂಚಿ ಮರೆಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.