ಒಮ್ಮೆ ಕಣ್ಣಿನ ದವಾಖಾನೆಯೊಂದಕ್ಕೆ ಹೋಗಿದ್ದೆ. ಅಲ್ಲಿ ರೋಗಿಗಳು, ತಮ್ಮ ಪಾಳಿ ಬರುವವರೆಗೆ ನೋಡಲೆಂದು ಪತ್ರಿಕೆಗಳನ್ನು ಹರಡಲಾಗಿತ್ತು. ಅವು ಬಹುತೇಕ ಮತೀಯ ನಂಜಿನ ಪತ್ರಿಕೆಗಳಾಗಿದ್ದವು.

ಸದರಿ ವೈದ್ಯರು ರೋಗಿಗಳ ಕಣ್ಬೇನೆಯನ್ನೇನೊ ದುರಸ್ತಿ ಮಾಡುತ್ತಿದ್ದಾರೆ. ಆದರೆ ಅವರ ಒಣಗಣ್ಣನ್ನೂ ಕುರುಡು ಮಾಡುವಂತಹ ಸಾಹಿತ್ಯ ಇಟ್ಟಿದ್ದಾರಲ್ಲಾ, ದೃಷ್ಟಿದೋಷ ಸರಿಪಡಿಸುವರ ದೃಷ್ಟಿಯೇ ದೋಷಪೂರಿತವಾಗಿದೆಯಲ್ಲಾ ಅನಿಸಿ, ವಿಷಾದ ಹುಟ್ಟಿತು.

ದೈಹಿಕ ನೋವನ್ನು ನಿವಾರಿಸಬಲ್ಲ ಮತ್ತು ಸಾವನ್ನು ಮುಂದೂಡಬಲ್ಲ ವೈದ್ಯರು, ಮಾನವೀಯವೂ ವೈಜ್ಞಾನಿಕವೂ ಆದ ವೈದ್ಯಶಾಸ್ತ್ರದ ಮನೋಧರ್ಮಕ್ಕೇ ಸಲ್ಲದ ಸಾಮಾಜಿಕ ಕಾಯಿಲೆಗಳಿಂದ ಪೀಡಿತರಾಗಿರುವುದು ಒಂದು ವೈರುಧ್ಯವೇ ಸರಿ. ಇದು, ಅವರು ಪದವಿ ಸ್ವೀಕಾರದ ಹೊತ್ತಲ್ಲಿ ಮಾಡಿದ ಪ್ರಮಾಣ ವಚನಕ್ಕೂ ವಿರುದ್ಧವಾದುದು.

ಜರ್ಮನಿಯಲ್ಲಿ ನಾಜಿಗಳ ಕ್ರೂರ ಪ್ರಯೋಗಗಳಿಗೆ ಉಪಕರಣವಾಗಿ ನೆರವಾದ ವೈದ್ಯರು ಇಲ್ಲಿ ನೆನಪಾಗುತ್ತಾರೆ. ಮಾನವರನ್ನು ಮತದ ಹೆಸರಲ್ಲಿ ವಿಭಜಿಸುವ ಸಿದ್ಧಾಂತಗಳಿಗೆ ಬಲಿಯಾಗುವ ಈ ಸಮಸ್ಯೆ, ವೈದ್ಯಕೀಯದಲ್ಲಿ ಮಾತ್ರವಲ್ಲ, ಅಧ್ಯಾಪನ, ವಕೀಲಿ ಮುಂತಾದ ಕ್ಷೇತ್ರಗಳಲ್ಲೂ ಬೇಕಾದಷ್ಟಿದೆ.

ಆದರೆ ನಮ್ಮಲ್ಲಿ ಇನ್ನೂ ಕೆಲವು ವೈದ್ಯರಿದ್ದಾರೆ. ಇವರು ದೈಹಿಕ ಬೇನೆಗಳಿಗೆ ಮಾತ್ರವಲ್ಲ, ಲೋಕದ ಬೇನೆಗಳಿಗೂ ಮದ್ದರೆಯುವ ಕೆಲಸದಲ್ಲಿ ತೊಡಗಿದವರು; ಇವರು ತಮ್ಮ ಸಾರ್ವಜನಿಕ ವ್ಯಕ್ತಿತ್ವದಿಂದಾಗಿ ಕೇವಲ ವೈದ್ಯರಲ್ಲದವರು. ಇಂತಹ ಕೆಲವರ ಸಹವಾಸದಿಂದ ನನಗೆ, ನಮ್ಮದಲ್ಲದ ಜ್ಞಾನಕ್ಷೇತ್ರದವರಿಂದ ಸಿಗುವ ಅನುಭವ ಮತ್ತು ಜ್ಞಾನದ ಪರಿ ಏನೆಂದು ಮನದಟ್ಟಾಗಿದೆ.

ಡಾ. ಅನುಪಮಾ, ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರು. ತಮ್ಮ ಸಂಗಾತಿ ಡಾ. ಕೃಷ್ಣ ಅವರೊಡಗೂಡಿ, ಅನೇಕ ಸಾಹಿತ್ಯಕ ಕಾರ್ಯಕ್ರಮ ಏರ್ಪಡಿಸುವರು. ಇವಕ್ಕಿಂತ ಅವರ ಸಾಮಾಜಿಕ ಕಾರ್ಯಕ್ರಮಗಳೇ ಮಹತ್ವದವು.

ನಾನೊಮ್ಮೆ ಅತ್ತ ಹೋದಾಗ ಅನುಪಮಾ ಮನೆಗೆ ಹೋದೆ. ಅವರ ಗ್ರಂಥಾಲಯ ಕಂಡು ವಿಸ್ಮಯಗೊಂಡೆ. ಅವರು ಓದಿದ್ದ ಎಷ್ಟೋ ಆಂಗ್ಲ ಲೇಖಕರನ್ನು ನಾನು ಓದಿರಲಿಲ್ಲ. ಅವರು ನನಗೆ ವಿಲಿಯಂ ಡ್ಯಾಲ್ರಿಂಪಲನ `ವೈಟ್ ಮೊಗಲ್ಸ್~ ಪುಸ್ತಕವನ್ನು ಕೊಡುಗೆಯಾಗಿ ಕೊಟ್ಟರು.

ಡ್ಯಾಲ್ರಿಂಪಲ್, ಆಳವಾದ ಸಂಶೋಧನೆ ಮಾಡಿ ಕಾದಂಬರಿಯಂತೆ ಬರೆಯಬಲ್ಲವನು. ಚರಿತ್ರಕಾರನಲ್ಲದ ಚರಿತ್ರಕಾರನಿವನು. ಅವನ ಈ ಕೃತಿಯಲ್ಲಿ, ಹೈದರಾಬಾದ್ ನಿಜಾಮರ ಆಸ್ಥಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ರೆಸಿಡೆಂಟ್ ಆಗಿದ್ದ ಜೇಮ್ಸ ಕಿರ್ಕ್‌ಪ್ಯಾಟ್ರಿಕ್ (1800), ಅಲ್ಲಿನ ಪ್ರಧಾನಿಯ ಮಗಳೂ ಪರಮ ಸುಂದರಿಯೂ ಆದ ಖೈರುನ್ನೀಸಾಳನ್ನು ಪ್ರೇಮಿಸಿ ಲಗ್ನವಾದ ಕಥೆಯಿದೆ.

ನಾನು ಕವಲಕ್ಕಿಯಲ್ಲಿರುತ್ತ ಆಸುಪಾಸಿನ ಜನರೊಂದಿಗೆ ಮಾತಾಡಿದೆ. ಅನುಪಮಾ ಜನಪ್ರೀತಿ ಗಳಿಸಿರುವ ತಾಯ್ತನದ ವೈದ್ಯೆಯೆಂದು ಅರಿವಾಯಿತು. ನಮ್ಮ ತರುಣ ವೈದ್ಯರು ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ; ನಗರದ ಹೈಟೆಕ್ ಆಸ್ಪತ್ರೆಗಳಲ್ಲಿರುವುದಕ್ಕೆ ಹಾತೊರೆಯುತ್ತಾರೆ.

ಆದರೆ ಅನುಪಮಾರ ಹಳ್ಳಿಯ ಆಸ್ಪತ್ರೆಗೆ ಬಂದಿದ್ದ ರೋಗಿಗಳನ್ನು ನೋಡುತ್ತ ನನಗೆ ಡಾ. ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ~ ಕತೆ ನನಗೆ ನೆನಪಾಯಿತು; ತೇಜಸ್ವಿಯವರ `ಡಾ.ಕುಬಿ ಮತ್ತು ಇಯಾಲ~ ಕತೆ ಕೂಡ. ಕುಬಿಯಂತೆ ಮಾನವೀಯ ತಳಮಳವುಳ್ಳ ಅನುಪಮಾ, ಅನೇಕ ಇಯಾಲಗಳ ಕತೆಗಳನ್ನು ಬರೆದಿದ್ದಾರೆ.

ಅವುಗಳಲ್ಲಿ ಕೆಲವನ್ನು ಓದುತ್ತ ನಾನು ಜರ್ಝರಿತನಾಗಿದ್ದೇನೆ. ವೈದ್ಯರಿಗೆ ಮಾತ್ರ ಗೊತ್ತಾಗುವ ನಿಗೂಢ ಬೇನೆಗಳಿಂದ ನರಳಿದ ಜನರ ದಾರುಣ ಕತೆಗಳವು; ಜತೆಗೆ ನಮ್ಮ ಜನರ ವೇದನೆ, ಮುಗ್ಧತೆ, ಹಾಸ್ಯ ಮತ್ತು ಜೀವನಪ್ರೀತಿಗಳನ್ನು ಸ್ವಾರಸ್ಯಕರವಾಗಿ ಕಾಣಿಸುವ ಅನೇಕ ಬರೆಹಗಳನ್ನು ಅನುಪಮಾ ಮಾಡಿದ್ದಾರೆ.

ಧಾರವಾಡದ ಡಾ. ಸಂಜೀವ ಕುಲಕರ್ಣಿ, ತಮ್ಮ `ಒಂದು ಬೊಗಸೆ ಧ್ಯಾನ~ ಪುಸ್ತಕದ ಮೂಲಕ ಗುರುತಾದವರು. ನಮ್ಮಿಬ್ಬರಿಗೂ ಚಾರಣ, ಸೂಫಿಸಂ ಸಂಗೀತ, ಬೌದ್ಧಧರ್ಮ- ಇತ್ಯಾದಿ ವಿಷಯಗಳಲ್ಲಿ ಸಮಾನ ಆಸಕ್ತಿಗಳಿವೆ. ಈ ಕಾರಣ, ನಮ್ಮ ಪರಿಚಯ ಸ್ನೇಹವಾಯಿತು.

ಒಮ್ಮೆ ನಾವಿಬ್ಬರೂ ಒಂದು ಪುಟ್ಟ ಗುಂಪು ಕಟ್ಟಿಕೊಂಡು ಕರ್ನಾಟಕದಲ್ಲಿ ಬೌದ್ಧಪ್ರವಾಸ ಮಾಡಿದ್ದುಂಟು. ನಾನು ಧಾರವಾಡಕ್ಕೆ ಹೋದರೆ, ಪ್ರತಿ ಮರಕ್ಕೂ ಅಲ್ಲಮ ಬುದ್ಧ ಸರ್ವಜ್ಞ ಇತ್ಯಾದಿ ಹೆಸರಿಟ್ಟು ಸಾಕಿರುವ ಆ ತೋಟಕ್ಕೆ ಹೋಗುತ್ತೇನೆ. ಈಚೆಗೆ ಅವರು ತೋಟದಲ್ಲಿ ಸೂಫಿಗಾಯಕ ಮುಕ್ತಿಯಾರ್ ಅಲಿಯವರ ಹಾಡಿಕೆ ಏರ್ಪಡಿಸಿದ್ದರು.

ಧಾರವಾಡದ ವಿಶ್ವವಿದ್ಯಾಲಯಕ್ಕೆ ಹತ್ತಿಕೊಂಡಿರುವ ಒಂದು ಕೊಳ್ಳದಲ್ಲಿ, ಅವರದೊಂದು `ಬಾಲಬಳಗ~ ಎಂಬ ಅಪರೂಪದ ಶಾಲೆಯಿದೆ. `ಸಂತೋಷದ ಕಲಿಕೆಗೊಂದು ಪರಿಸರ ಮಿತ್ರಶಾಲೆ~ ಎಂಬುದು ಅದರ ಉಪಹೆಸರು.

ಕಲಿಕೆಯನ್ನು ಆಟವಾಗಿಸಿರುವ ಶಾಲೆಯಲ್ಲದ ಶಾಲೆಯದು. ಅನೇಕ ಕಷ್ಟಗಳಲ್ಲಿ ಅವರದನ್ನು ನಡೆಸುತ್ತಿದ್ದಾರೆ. ತಮ್ಮ ಸೃಜನಶೀಲ ಪ್ರಯೋಗಗಳಿಗೆಲ್ಲ ಸಂಜೀವ್ ಹೇಗೆ ಸಮಯ ಹೊಂದಿಸಿಕೊಳ್ಳುವರೊ ತಿಳಿಯದು. ಬಹುಶಃ ಕೆಲಸ ಮಾಡುವವರಿಗೇ ಜಾಸ್ತಿ ಪುರುಸೊತ್ತೆಂದು ಕಾಣುತ್ತದೆ.

ಮೈಸೂರಲ್ಲಿ ವೈದ್ಯರಾಗಿರುವ ಡಾ.ವಿ.ಎನ್. ಲಕ್ಷ್ಮಿನಾರಾಯಣ, ಯಾವಾಗ ನನ್ನ ಗೆಳೆಯರಾದರೊ ನೆನಪಿಲ್ಲ. ಅವರ ಜತೆಯಿದ್ದಾಗ ನನ್ನ ಕಿವಿಗೆ ಬಿದ್ದಿರುವುದು ಎರಡೇ ಸಂಗತಿ. 1. ಅವರ ಸ್ವಚ್ಛಂದ ಅಟ್ಟಹಾಸದ ನಗು. 2. ಮಾರ್ಕ್ಸನ ಹೇಳಿಕೆಗಳು. ಮಾರ್ಕ್ಸನ ಹೇಳಿಕೆಗಳನ್ನವರು ಒಂದು ವರ್ಷ ಕಾಲ, ಸುಪ್ರಭಾತದ ಹಾಗೆ, ನನಗೆ ಎಸ್ಸೆಮ್ಸೆಸ್ ಹಾಕಿದ್ದುಂಟು. ಮೂಲತಃ ಚಳವಳಿಗಾರರಾದ ಅವರು, ವಿಜ್ಞಾನಿಯಾದ ತಮ್ಮ ಸಂಗಾತಿ ಡಾ. ರತಿಯವರ ಜತೆಗೂಡಿ, ಸಾಮಾನ್ಯ ಜನರು ದಮನಕ್ಕೆ ಒಳಗಾದ ಜಾಗಗಳಿಗೆ ಮುದ್ದಾಮಾಗಿ ಹೋಗುತ್ತಾರೆ.

ಅವರ ಜತೆಗೊಮ್ಮೆ ದಲಿತರ ಮನೆಗಳನ್ನು ಸುಡಲಾದ ಒಂದು ಊರಿಗೆ ಕಾರಣ ಶೋಧದ ತಂಡದಲ್ಲಿ ಹೋಗಿದ್ದೆ. ಬೀದಿ ಜನರ ಜತೆ ಸರಳವಾಗಿ ಬೆರೆಯುವ, ತಮ್ಮ ದೊಡ್ಡಗಂಟಲಿನ ನೇರ ಮಾತಿನ ಮೂಲಕ ಜನರ ಭಾವನೆಯನ್ನು ಅರಿಯುವ ಅವರ ಪರಿಯೇ ವಿಶಿಷ್ಟ.

ಆದರೆ ತನಗೆ ಸರಿಯೆನಿಸಿದ್ದನ್ನು ಜಾರಿಮಾಡುವ ಕೆಟ್ಟಹಟ ಅವರಲ್ಲಿರುವ ಒಂದು ಸಣ್ಣ ದೋಷ. ಒಮ್ಮೆ ಮೈಸೂರಲ್ಲಿ- ಬೇಡವೆಂದರೂ ಕೇಳದೆ- ಜಂಬೂಸವಾರಿ ದಿನವೇ ನಾಡಿನ ಸಮಸ್ಯೆಗಳನ್ನು ಚರ್ಚಿಸುವ ಕಾರ್ಯಕ್ರಮವನ್ನವರು ಏರ್ಪಡಿಸಿದ್ದರು-ಅದೂ ದಸರಾ ಮೆರವಣಿಗೆ ಬರುವ ರಸ್ತೆ ಪಕ್ಕದ ಸಭಾಂಗಣದಲ್ಲಿ.

ನಾವೆಲ್ಲ ಒಳಗೆ ಭಯಂಕರ ಗಂಭೀರತೆಯಲ್ಲಿ ಚರ್ಚೆ ಮಾಡುತ್ತಿದ್ದರೆ, ನಮ್ಮ ಮಾತು ನಮಗೇ ಕೇಳಿಸದಂತೆ ರಸ್ತೆಯಿಂದ ನಾಗಸ್ವರ ಡೋಲು ತಮ್ಮಟೆಯ ಸದ್ದು ಹಾಲಿನೊಳಗೆ ನುಗ್ಗಿ ಬರುತ್ತಿತ್ತು. ಅತ್ತ ದಸರೆಯನ್ನೂ ನೋಡಲಿಲ್ಲ; ಇತ್ತ ಭಾಷಣಗಳನ್ನೂ ಆಲಿಸಲಾಗಲಿಲ್ಲ.

ಇವರಂತೆಯೇ ರೈತಸಂಘದ ಡಾ. ವೆಂಕಟರೆಡ್ಡಿಯಿದ್ದಾರೆ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಸಮಸ್ತ ಬಡವರ ವೈದ್ಯರವರು. ಅವರ ಶಾಪಿಗೆ ಜನ ಮುತ್ತಿಕೊಂಡಿರುತ್ತಾರೆ.

ಅವರಿಗೆ ಜನರ ಕಾಯಿಲೆಗಳಿಗಿಂತ, ಜನರ ಬಾಳಿನ ಸುಖದುಃಖಗಳ ಬಗ್ಗೆಯೇ ಹೆಚ್ಚು ಕಳವಳ. ಕೃಷಿ ವಿಶ್ವವಿದ್ಯಾಲಯವೊಂದರ ಹೊಲದಲ್ಲಿ ಸೂಕ್ತ ಅನುಮತಿಯಿಲ್ಲದೆ ಕುಲಾಂತರಿ ಬೆಳೆಯನ್ನು ಕಿತ್ತು ನಾಶಮಾಡುತ್ತ ಇರುವ ಅವಸ್ಥೆಯಲ್ಲಿ ಅವರನ್ನೊಮ್ಮೆ ನೋಡಿದೆ.

ಇದೇ ತರಹ, ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಇದ್ದಾರೆ; ಬೆಂಗಳೂರಿನ ಡಾ. ವಾಸು ಇದ್ದಾರೆ. ನಮ್ಮ ಸಮಾಜದ ಸಮಸ್ಯೆಗಳ ಬಗ್ಗೆ ಇವರಿಗಿರುವ ಆಳವಾದ ತಿಳಿವಳಿಕೆ, ಸ್ಪಷ್ಟತೆ ಮತ್ತು ಕಾಳಜಿ, ಕ್ರಿಯಾಶೀಲತೆ ವಿಶೇಷ ತರಹದ್ದಾಗಿದೆ. ಕರ್ನಾಟಕದ ತುಂಬ ಇಂತಹ ಎಷ್ಟೋ ವೈದ್ಯರು ಇರಬಹುದು.

ನನಗೆ ಇದಕ್ಕೂ ಭಿನ್ನ ಅನುಭವ ಸಿಕ್ಕಿದ್ದು ಪಶುವೈದ್ಯ ಗೆಳೆಯರಿಂದ. ಡಾ. ರಮಾನಂದರ `ವೈದ್ಯನ ಶಿಕಾರಿ~ ಪುಸ್ತಕ ಓದಿ, ಅದರೊಳಗಿನ ನವಿರಾದ ವಿನೋದಲೇಪಿತ ಗದ್ಯಕ್ಕೂ ಅನುಭವದ ಪ್ರಖರತೆಗೂ ಮಾರುಹೋದವನು ನಾನು. ರಮಾನಂದರು ಹೈದರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಕೆಲಸ ಮಾಡುತ್ತ ಪಡೆದ ಅನುಭವಗಳನ್ನು ಅದ್ಭುತವಾಗಿ ಬರೆದಿದ್ದಾರೆ.

ಸಮಾಜ ವಿಜ್ಞಾನಿಯ ಕಾಣ್ಕೆಯಿರುವ, ಜನರ ಮೇಲೆ ಪ್ರೀತಿ ಮತ್ತು ಬದ್ಧತೆಯಿರುವ ವೈದ್ಯರು ಮಾತ್ರ ಹೀಗೆ ಬರೆಯಬಲ್ಲರು. ಅವರು ಮಾಡಿರುವ ನಾಡಿನ ಸುತ್ತಾಟ ಕಂಡರೆ ಹೊಟ್ಟೆಕಿಚ್ಚಾಗುತ್ತದೆ. ದೇವರು ಧರ್ಮಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ಉಸಿರಾಟ ಮಾಡುವ ಸಮಸ್ತ ಜೀವಿಗಳಲ್ಲಿ ಪ್ರೀತಿಯನ್ನೂ ಕರುಣೆಯನ್ನೂ ತೋರುವ ಜೀವನದರ್ಶನ, ಅವರ ಬರೆಹದಲ್ಲಿ ಸುಪ್ತವಾಗಿದೆ. ಇನ್ನೊಬ್ಬ ಮಿತ್ರರು ಡಾ. ಮಿರ್ಜಾ ಬಶೀರ್.

ಸಾವಿನಂಚಿನಲ್ಲಿರುವ ನಾಯೊಂದನ್ನು ಉಪಚರಿಸಲು ಹೋದ ವೈದ್ಯನೊಬ್ಬನ ಅನುಭವ ಕುರಿತ ಕತೆಯನ್ನು ಓದಿಯೇ ನಾನು ಇವರ ಗೆಳೆಯನಾದವನು. ಲಂಕೇಶ್ ತೇಜಸ್ವಿ ಕುವೆಂಪು ಅವರನ್ನು ಚೆನ್ನಾಗಿ ಓದಿಕೊಂಡಿರುವ ಬಶೀರರ ಜತೆ ಚರ್ಚಿಸುವುದೇ ಒಂದು ಚೇತೋಹಾರಿ ಅನುಭವ.

ಇವರಲ್ಲೆಲ್ಲ ಚಿಕ್ಕನಾಯ್ಕನಹಳ್ಳಿಯ ಡಾ. ರಘುಪತಿಯವರದು ದಂಗುಬಡಿಸುವ ವ್ಯಕ್ತಿತ್ವ. ಹಳ್ಳಿಗಳಲ್ಲಿ ತಿರುಗಾಡುತ್ತ, ರೈತರನ್ನೂ ಅವರ ದನ ಕುರಿ ಎಮ್ಮೆಗಳ ಸುಖದುಃಖ ನೋಡುತ್ತ, ಖಾಸಗಿ ಜೀವನವೊಂದು ತಮಗಿದೆ ಎಂಬುದನ್ನೇ ಮರೆತಂತೆ ಬದುಕಿರುವವರು ಅವರು.

ತಾಲೂಕಿನ ರೈತಾಪಿ ಜನರ ಸಮಸ್ಯೆಗಳನ್ನೆಲ್ಲ ಬಲ್ಲಂತಿರುವ ಅವರದು ತಾಯಿಜೀವ. ಸಂಜೀವ್ ಇರುವೆಯಂತೆ ಕೆಲಸ ಮಾಡುತ್ತಾರಾದರೆ, ರಘುಪತಿಗೆ ಬೆಲ್ಲಕ್ಕೆ ಇರುವೆ ಮುತ್ತಿಕೊಳ್ಳುವಂತೆ ಹಳ್ಳಿಯ ಜನ ಮುತ್ತಿಕೊಳ್ಳುತ್ತಾರೆ. ಬಾಯಿಲ್ಲದ ಜೀವಗಳಿಗೆ ಉಪಚರಿಸುತ್ತ ಅವರು, ಬಾಯಿಲ್ಲದ ಸಮುದಾಯಗಳ ದುಗುಡಕ್ಕೂ ಮಿಡಿವ ಮನಸ್ಸನ್ನು ಪಡಕೊಂಡಂತಿದೆ.

ವಿಶೇಷವೆಂದರೆ, ಕುರಿಸಾಕಣೆ ಮತ್ತು ಕಂಬಳಿ ನೇಕಾರಿಕೆ ಬಗ್ಗೆ ಅವರು ಮಾಡಿರುವ ಸಂಶೋಧನೆ ಮತ್ತು ಬರವಣಿಗೆ. ಕರ್ನಾಟಕದಲ್ಲಿರುವ ಕಂಬಳಿ ನೇಯುವ ಜಾಗಗಳಿಗೆ ಹೋಗಬೇಕೆಂಬುದು ನಾವಿಬ್ಬರೂ ಹಾಕಿಕೊಂಡಿರುವ ಯೋಜನೆ, ಇನ್ನೂ ಈಡೇರಿಲ್ಲ.

ಇಲ್ಲಿನ ಬಹುತೇಕ ಮಿತ್ರರು, ತಮ್ಮ ವೃತ್ತಿ ತ್ಯಾಗಮಾಡಿ ಸಮಾಜ ಬದಲಾವಣೆಗೆ ಧುಮುಕಿದವರಲ್ಲ. ತಮ್ಮ ವೃತ್ತಿಯ ಜತೆಗೇ ಸಾಮಾಜಿಕ ಹೊಣೆಗಾರಿಕೆ ರೂಢಿಸಿಕೊಂಡವರು. ವಾರಾಂತ್ಯದಲ್ಲಿ ಸಾಮಾಜಿಕ ಕ್ರಿಯಾಶೀಲತೆ ಮಾಡುವ ವೈದ್ಯರಿಗೆ ಹೋಲಿಸಿದರೆ, ಇವರದು ನಿತ್ಯದ ಬೀದಿಯ ಸಾಮಾಜಿಕತೆ.

ಈ ಕಾರಣಕ್ಕೆ, ಭೂಭಾರ ಹೊತ್ತವರಂತೆ ಇವರ ಮುಖ ಬಿಗಿಗೊಂಡಿಲ್ಲ. ಇವರು `ನಗೀಕ್ಯಾದಿಗಿ ಮುಡಿದು~ ಬದುಕನ್ನು ಲೀಲೆಯಂತೆ ತೆಗೆದುಕೊಂಡವರು. ಇವರ ಬದ್ಧತೆ ವಿನೋದವನ್ನು ಕಸಿದಿಲ್ಲ. ವೃತ್ತಿನಿಷ್ಠೆ, ಸಾಮಾಜಿಕ ಬದ್ಧತೆ, ಜೀವನಪ್ರೀತಿ ಇವರಿಗೆ ಭಿನ್ನ ಜಗತ್ತುಗಳೇ ಅಲ್ಲ.

ವೈದ್ಯವೃತ್ತಿಯಲ್ಲಿದ್ದು ತಮ್ಮ ಮಿತಿಗಳಲ್ಲೇ ವ್ಯಕ್ತಿತ್ವಕ್ಕೊಂದು ಹೊಸ ವಿಸ್ತರಣೆ ಕೊಟ್ಟಿರುವ ಈ ಗೆಳೆಯರ, ಸಾಮಾಜಿಕ ಕ್ರಿಯಾಶೀಲತೆ, ಅವರ ವೃತ್ತಿಗೆ ಹೊಸ ಮಾನವೀಯತೆಯನ್ನೂ ಅವರ ಜ್ಞಾನಕ್ಕೆ ದಾರ್ಶನಿಕತೆಯೂ ಒದಗಿಸಿದೆ; ಅವರ ವೃತ್ತಿಜ್ಞಾನದಿಂದ ಅವರ ಸಾಮಾಜಿಕ ತಿಳಿವಳಿಕೆಗೂ ಹೊಸಮೊಗ ದಕ್ಕಿದೆ.

ಸಾರ್ವಜನಿಕ ಬದುಕು ಮತ್ತು ಸುತ್ತಾಟಗಳು, ದಾರ್ಶನಿಕರಿಗೂ ಹೊಸ ಅನುಭವ ಹೊಸ ಕಾಣ್ಕೆ ಕೊಡಬಲ್ಲದು. ಸಾಸಿವೆ ಪ್ರಕರಣದ ಮೂಲಕ ತಾಯೊಬ್ಬಳ ನೋವಿಗೆ ಮದ್ದುಕೊಟ್ಟ ಬುದ್ಧ ದಾರ್ಶನಿಕ ಮಾತ್ರವಲ್ಲ, ಲೋಕದ ವೈದ್ಯ ಕೂಡ. ಒಮ್ಮೆ ನಮ್ಮ ಅತ್ಯುತ್ತಮ ಮೇಷ್ಟರನ್ನು ನೆನಪಿಸಿಕೊಳ್ಳಿ.

ಅವರಲ್ಲಿ ಬಹುತೇಕರು ತಮ್ಮ ಜ್ಞಾನಶಿಸ್ತಿನ ಪರಿಧಿಯನ್ನು ಉಲ್ಲಂಘಿಸಿ ಕಲಿತಿದ್ದವರು ಎಂದು ಹೊಳೆಯುತ್ತದೆ. ಬರೆಹಗಾರರು ಪತ್ರಕರ್ತರಾದರೆ ಅವರ ಬರೆಹಕ್ಕೆ ಹೊಸ ಆಯಾಮ ಬರುವುದನ್ನು ಲಂಕೇಶರಲ್ಲಿ ನಾವು ಕಂಡಿದ್ದೇವೆ.

ಸಾಹಿತ್ಯಕ ಸಂವೇದನೆಯುಳ್ಳವರ ವಿಜ್ಞಾನದ ತಿಳಿವಳಿಕೆಗೆ ಅಥವಾ ವಿಜ್ಞಾನದ ತಿಳಿವಳಿಕೆ ಉಳ್ಳವರ ಸಾಹಿತ್ಯದ ಸಂವೇದನೆಗೆ ವಿಶಿಷ್ಟತೆ ಇರುವುದನ್ನು ಸಹ ನೋಡಬಹುದು. ತೇಜಸ್ವಿಯವರ ಪರಿಸರ ಬರೆಹಗಳು ಅಥವಾ ಸಸ್ಯವಿಜ್ಞಾನಿ ಬಿಜಿಎಲ್ ಸ್ವಾಮಿಯವರ ಸಾಂಸ್ಕೃತಿಕ ಶೋಧಗಳು ಇಲ್ಲಿ ನೆನಪಾಗುತ್ತಿವೆ.

ಆದರೆ, ಯಾಕೊ ಏನೊ, ರಾಜಕಾರಣಿಗಳಾದ ವೈದ್ಯರನ್ನು ನೋಡುವಾಗ, ಅವರು ತಮ್ಮ ವೃತ್ತಿಜೀವನ ಮತ್ತು ಜ್ಞಾನಕ್ಷೇತ್ರಗಳ ಪ್ರೇರಣೆಯಿಂದ ಭಿನ್ನವಾದ ರಾಜಕಾರಣ ಮಾಡಿದ ನಿದರ್ಶನಗಳೇ ಕಾಣುತ್ತಿಲ್ಲ.

ನಿಜ ಬದುಕಿನಲ್ಲಿ ಜ್ಞಾನವಾಗಲೀ ವೃತ್ತಿಯಾಗಲೀ, ಇತರ ವೃತ್ತಿ ಮತ್ತು ಜ್ಞಾನಶಾಖೆಗಳಿಂದ ಸಂಬಂಧ ಕತ್ತರಿಸಿಕೊಂಡ ವಿಭಜಿತ ಲೋಕಗಳಲ್ಲ. ಕೆಲಮಟ್ಟಿಗೆ ಅವು ಹಾಗೆ ಹೋಳಾಗಿದ್ದೇ ಆಧುನಿಕ ಕಾಲದಲ್ಲಿ ಮತ್ತು ಪಡುವಣದ ಕುರುಡು ನಕಲಿನಿಂದ.

ನಮ್ಮ ರೈತರು ಅವಸರ ಬಿದ್ದಾಗ ಕುಂಟೆ ನೇಗಿಲನ್ನು ಸರಿಪಡಿಸಿಕೊಳ್ಳುವ ಬಡಗಿಗಳಾಗುವುದು, ದನಗಳಿಗೆ ಕಾಯಿಲೆಗೆ ಔಷಧಿಕೊಡಬಲ್ಲ ವೈದ್ಯರೂ ಹೇಗೆ ಸಾಧ್ಯವಾಯಿತು? ಒಂದು ಕ್ಷೇತ್ರದ ಜ್ಞಾನ ಇನ್ನೊಂದರ ಸಹವಾಸದಲ್ಲಿ ಹೊಸಜನ್ಮ ಪಡೆಯಬಲ್ಲದು.

ಚೀನಾದಲ್ಲಿ ಮಾವೊ, ಉಚ್ಛವರ್ಗಗಳು ಅಧಿಕಾರಸ್ಥಾನ ಹಿಡಿದು ಸಾಮಾನ್ಯ ಜನರ ಹಿತರಕ್ಷಣೆಯನ್ನು ಕಡೆಗಣಿಸಿವೆ ಎಂದು ಭಾವಿಸಿ, ಕೆಲವು ವರ್ಷ ಕಾಲ ಶಾಲೆಗಳನ್ನು ಮುಚ್ಚಿಸಿ, ವೈದ್ಯರು ಅಧ್ಯಾಪಕರು ಬುದ್ಧಿಜೀವಿಗಳು ತಾವು ವಾಸಿಸುವ ನಗರಗಳನ್ನು ಬಿಟ್ಟು ಹೊಲಗದ್ದೆಗಳಲ್ಲಿ ಹಳ್ಳಿಯಲ್ಲಿದ್ದು ದುಡಿಯಬೇಕು ಮತ್ತು ರೈತರಿಂದ ಶ್ರಮದ ಪಾಠ ಕಲಿಯುವಂತೆ ಕಡ್ಡಾಯಗೊಳಿಸಿದನು.

ಇದರಿಂದ ನಗರವಾಸಿ ಅಧಿಕಾರಿಗಳು ವೈದ್ಯರು ಅಧ್ಯಾಪಕರು ಗ್ರಾಮಗಳಿಗೆ ಹೋಗಬೇಕಾಯಿತು. ಆದರೆ ಸದ್ದುದ್ದೇಶವುಳ್ಳ ಈ ವಿಶಿಷ್ಟ ಸಾಂಸ್ಕೃತಿಕ ಪ್ರಯೋಗವು, ಸೈನಿಕ ಬಲಾತ್ಕಾರದ ಜತೆಗೆ ನಡೆದ ಕಾರಣ, ದುಷ್ಟರಿಣಾಮಗಳಲ್ಲಿ ಕೊನೆಗಂಡಿತು.

ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಸೇವೆಸಲ್ಲಿಸಬೇಕೆಂದು ಸರ್ಕಾರ ನಿರ್ಣಯ ಮಾಡಿದಾಗೆಲ್ಲ, ನಮ್ಮ ವೈದ್ಯ ವಿದ್ಯಾರ್ಥಿಗಳು ಬೀದಿಗೆ ಬಂದು ಪ್ರತಿಭಟಿಸುವುದನ್ನು ಇವತ್ತಿಗೂ ನೋಡಬಹುದು. ಬಲಾತ್ಕರಿಸಿದರೆ ದುಷ್ಪರಿಣಾಮ. ಅವರ ಆಯ್ಕೆಗೆ ಬಿಟ್ಟರೆ, ಪರಿಣಾಮವಿಲ್ಲ. ಜನರಿಗೆ ಬೇಕಾದ ಜ್ಞಾನ ಮತ್ತು ಸೇವೆಗಳು, ಅವರಿರುವ ಜಾಗದಲ್ಲಿ ದಕ್ಕುವುದಿಲ್ಲ.

ಅವಕ್ಕಾಗಿ ಅವರು ಅವಿದ್ದಲ್ಲಿಗೇ ಬರಬೇಕು, ದುಬಾರಿ ಬೆಲೆಯನ್ನೂ ತೆರಬೇಕು ಎನ್ನುವಂತೆ ಸನ್ನಿವೇಶ ಬದಲಾಗಿದೆ. ಬಹುಶಃ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ಞಾನಕ್ಕೆ ಸಾಮಾಜಿಕ ಹೊಣೆಗಾರಿಕೆಯನ್ನು ಬೆರೆಸುವ ವ್ಯವಸ್ಥೆ ಶಿಕ್ಷಣದಲ್ಲಿ ಮತ್ತು ಬದುಕಿನಲ್ಲಿ ಇಲ್ಲದಿರುವುದರಿಂದ ಹೀಗೆಲ್ಲ ಆಗುತ್ತಿದೆಯೇ?

ಸಾಮಾಜಿಕ ಹೊಣೆಗಾರಿಕೆ ಮಾತಂತಿರಲಿ, ಕರ್ನಾಟಕದಲ್ಲಿ ವೈದ್ಯಕೀಯದವರು ಇಂಜಿನಿಯರಿಂಗ್ ಕಲಿಯುವವರು ನಮ್ಮ ಅತ್ಯುತ್ತಮ ಸಾಹಿತ್ಯವನ್ನೂ ಕಲಿಯಬೇಕೆಂದು ಒಂದು ಸಣ್ಣ ಪ್ರಯೋಗ ಮಾಡಲಾಯಿತು. ಅದು ಸಹ ಬಹಳ ಯಶಸ್ಸು ಕಾಣಲಿಲ್ಲ.

ನನ್ನ ವೈದ್ಯಮಿತ್ರರು ಸಾಮಾಜಿಕ ಪ್ರಜ್ಞೆಯುಳ್ಳವರಾಗಿರುವುದಕ್ಕೂ, ಅವರು ಸಾಹಿತ್ಯದ ಗಂಭೀರ ಓದುಗರೂ ಹಾಗೂ ಸ್ವತಃ ಲೇಖಕರೂ ಆಗಿರುವುದಕ್ಕೂ ಏನೋ ಸಂಬಂಧವಿದೆ. ಬಹುಶಃ ಸಾಹಿತ್ಯದ ಓದು ಮತ್ತು ಬರೆಹ ಅವರ ವ್ಯಕ್ತಿತ್ವಕ್ಕೊಂದು ಹೊಸ ಕೆಚ್ಚನ್ನು ಕೂಡಿಸಿದೆ. ಒಬ್ಬ ಒಳ್ಳೆಯ ಬರೆಹಗಾರನಿಗೂ ಒಳ್ಳೆಯ ವೈದ್ಯನಿಗೂ ವ್ಯತ್ಯಾಸವಿಲ್ಲ.

ಪ್ರಶ್ನೆಯೆಂದರೆ, ಹೊಸ ಅನುಭವಕ್ಕಾಗಿ ಹೊಸ ಅರಿವಿಗಾಗಿ, ನಮ್ಮ ವೃತ್ತಿಕ್ಷೇತ್ರದ ಪರಿಧಿಯಾಚೆ ಎಷ್ಟು ದೂರದವರೆಗೆ ಹೋಗಬಹುದು? ಈ ಸೀಮೋಲ್ಲಂಘನೆ ನಮ್ಮ ವೃತ್ತಿಗೆ ಮಾಡುವ ಅನ್ಯಾಯವಾಗುದಿಲ್ಲವೇ? ಇಲ್ಲಿಯೇ ಡಾ. ವಿನಾಯಕ ಸೇನರು ನೆನಪಾಗುತ್ತಾರೆ; ಡಾ. ಚೆಗೆವಾರ ನೆನಪಾಗುತ್ತಾನೆ.

ಸೇನರು ವೈದ್ಯಸೇವೆ ಸಲ್ಲಿಸುತ್ತಲೇ ಬುಡಕಟ್ಟು ಜನರ ಹೈರಾಣಗೊಂಡ ಬದುಕಿನ ಭಾಗವಾಗಿ ಹೋದವರು; ಕಾರ್ಪೋರೆಟಿಗರ ಹಿತಕ್ಕಾಗಿ ಕಾಡಿನ ಜನರ ಮೇಲೆ `ಪ್ರಭುತ್ವ~ ಸೃಷ್ಟಿಸಿರುವ ನರಕವನ್ನು ಖಂಡಿಸುತ್ತ ತಾವೂ ಪಾಡುಪಟ್ಟವರು. ಆದರೆ `ಚೆ~ ಹಿಡಿದ ಹಾದಿ ಇನ್ನೂ ಕಟುತರವಾಗಿತ್ತು.

ಭೀಕರ ತುಳಿತಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕ ದೇಶಗಳ ಆರ್ಥಿಕ ರಾಜಕೀಯ ಸಂಕಟಗಳ ನಿವಾರಣೆಗಾಗಿ, ಸಾಮ್ರೋಜ್ಯಶಾಹಿಯ ವಿರುದ್ಧ ಸೆಣಸಾಡುತ್ತ `ಚೆ~ ತುಪಾಕಿ ಹಿಡಿದು ಹೋರಾಟಕ್ಕೆ ಧುಮುಕಿದವನು; ಅವನ ಚಾರಿತ್ರಿಕ ಒತ್ತಡಗಳೇ, ವೈದ್ಯವೃತ್ತಿಗಿಂತ ಕ್ರಾಂತಿಯ ಹಾದಿಯನ್ನು ಹಿಡಿಯುವಂತೆ ಮಾಡಿದವು.

ಮಹಾ ಜೀವನಪ್ರೀತಿಯಿದ್ದ ಆತ, ತನ್ನ ಅಸ್ತಮಾ ಕಾಯಿಲೆ ಲೆಕ್ಕಿಸದೆ, ಕಾಡುಮೇಡುಗಳಲ್ಲಿ ಅಲೆಯುತ್ತ ಸೆಣಸುತ್ತ, ಒಂದು ದಿನ ಹಗೆಗಳ ಕೈಗೆ ಸಿಕ್ಕು ಕೊಲ್ಲಲ್ಪಟ್ಟನು. ವೈದ್ಯನೊಬ್ಬ ಕ್ರಾಂತಿಕಾರಿಯಾಗಿ ಲೇಖಕನಾಗಿ ರೂಪಾಂತರ ಪಡೆದ `ಚೆ~ ದು ಒಂದು ದಂತಕತೆ.

ಯಾವುದೇ ವೃತ್ತಿಸಂಬಂಧ ಜ್ಞಾನವು ಅತಿಯಾಗಿ ಸ್ಪೆಶಲೈಜೇಶನ್ ಪಡೆದರೆ, ಸ್ವಕೇಂದ್ರಿತವಾದರೆ, ಇನ್ನೊಂದರ ಸಂಗಕ್ಕೆ ಹಾತೊರೆದು ಬದಲಾಗದಿದ್ದರೆ, ಜನಪರ ಕ್ರಿಯಾಶೀಲತೆಯ ಜತೆಗಾರಿಕೆಗೆ ಪಡೆಯದೆ ಹೋದರೆ, ಬೇಗನೆ ಗೊಡ್ಡಾಗಿಬಿಡುತ್ತದೆ;

ಅದರಲ್ಲೂ ಜೀವಕರುಣೆ ಬೇಡುವ ವೈದ್ಯಕೀಯದಂತಹ ಕ್ಷೇತ್ರದಲ್ಲಿ ಈ ರೂಪಾಂತರ ಸಂಭವಿಸದಿದ್ದರೆ, ದೊಡ್ಡ ನಷ್ಟ. ದುರಂತವೆಂದರೆ, ನಮ್ಮ ಸಮಾಜದ ಕಾಯಿಲೆಗಳ ರೋಗಾಣುಗಳು ಅವರಿಗೆ ಸೋಂಕುತ್ತಿರುವುದು. ಔಷಧಿಯೇ ನಂಜಾದರೇ ಏನು ಮಾಡಬೇಕು?

ಬಹುಶಃ ಈ ದುರಂತದ ಕಾರಣ ಹುಡುಕಬೇಕಾದುದು ವ್ಯಕ್ತಿಗಳಲ್ಲಿ ಅಲ್ಲ; ಅವರನ್ನು ರೂಪಿಸುವ ಪರಿಸರದಲ್ಲಿ. ರೋಗಿಗಳ ರೋಗಪರಿಹಾರ ಆಗಬೇಕಾದ್ದು ಕೇವಲ ದೈಹಿಕ ನೆಲೆಯಲ್ಲಿ ಅಲ್ಲ. ವ್ಯವಸ್ಥೆಯ ನೆಲೆಯಲ್ಲಿ. ಕುವೆಂಪು ಅವರ `ಧನ್ವಂತರಿಯ ಚಿಕಿತ್ಸೆ~ ಕತೆಯ ನಾಟಕೀಯವಾಗಿ ಈ ಸತ್ಯವನ್ನೇ ಹೀಳುವಂತಿದೆ.

ಅಲ್ಲಿ ಬರುವ ಧನ್ವಂತರಿ, ರೈತನ ರೋಗವನ್ನು ಕಾಣುವುದು ದೇಹದಲ್ಲಲ್ಲ; ``ಎದೆಯ ಮೇಲಿರುವ ರಾಜ್ಯದ ಭಾರವನ್ನು ತೆಗೆದು ಹಾಕಿದರೆ, ಕಾಯಿಲೆ ಸರಿಹೋಗುತ್ತದೆ ಎಂದು ಅವನು ನುಡಿಯುತ್ತಾನೆ. ಕಾರಣ, ಅಲ್ಲಿ ಅವನು ಕೇವಲ ವೈದ್ಯನಲ್ಲದ ವೈದ್ಯನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.