ತಣ್ಣನೆಯ ನೆಲದ ಮೇಲೆ ಕುಳಿತೇ ಕನ್ನಡ ಶಾಲೆಯಲ್ಲಿ ಓದಿದವನು ನಾನು. ಉದ್ದನೆಯ ಮೂರು ನಾಲ್ಕು ಸಾಲುಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಮಾಸ್ತರು ಎದುರು ನಿಂತು ಕಪ್ಪು ಹಲಗೆಯ ಮೇಲೆ ಬರೆಯುತ್ತಿದ್ದರು. ಮಕ್ಕಳಾದ ನಮ್ಮ ನಡುವೆ ಯಾವ ಭಿನ್ನ ಭೇದವೂ ಇರುತ್ತಿರಲಿಲ್ಲ. ಎಲ್ಲರೂ ಬಹುತೇಕ ಬಡವರು. ಶ್ರೀಮಂತರ, ಅಧಿಕಾರಿಗಳ ಮಕ್ಕಳು ನಮ್ಮ ಜತೆಗೆ ಓದುತ್ತಿದ್ದರೂ ಅದರಿಂದ ನಮ್ಮ ಮೇಲೆ ಯಾವ ಪರಿಣಾಮವೂ ಆಗುತ್ತಿರಲಿಲ್ಲ. ಎಲ್ಲರೂ ಒಂದೇ ಬಳ್ಳಿಯ ಹೂಗಳಂತೆ ಶಾಲೆಗೆ ಬರುತ್ತಿದ್ದೆವು; ಓದುತ್ತಿದ್ದೆವು. ಪಾಸಾಗುವವರು ಆಗುತ್ತಿದ್ದರು. ನಪಾಸಾಗಿ ಹಿಂದೆ ಬೀಳುವವರೂ ಇರುತ್ತಿರಲಿಲ್ಲ ಎಂದು ಅಲ್ಲ. ಇದು ಅರವತ್ತರ ದಶಕದ ಕಥೆ.

ಐದು ದಶಕಗಳು ದಾಟಿ ಹೋಗಿವೆ. ಕನ್ನಡ ಶಾಲೆಗಳು ಬದಲಾಗಿವೆಯೇ? ಅವುಗಳ ಸಂಖ್ಯೆ ಹೆಚ್ಚಿರಬಹುದು; ಆದರೆ ಅವುಗಳ ಸ್ಥಿತಿಗತಿಯಲ್ಲಿ ಯಾವ ವ್ಯತ್ಯಾಸವೂ ಆಗಿಲ್ಲ. ಮಾಡುವ ಪ್ರಯತ್ನವೂ ನಡೆದಂತೆ ಕಾಣುವುದಿಲ್ಲ. ನಮಗೆ ಆದ್ಯತೆಗಳ ಸಮಸ್ಯೆ. ಸರ್ಕಾರಕ್ಕೆ ಏನು ಮಾಡಬೇಕು ಎಂದು ಗೊತ್ತಿರುತ್ತದೆ. ಆದರೆ, ಅದರ ಅನುಷ್ಠಾನದಲ್ಲಿ ದೊಡ್ಡ ಸಮಸ್ಯೆ ಇರುತ್ತದೆ. ಒಂದು ಶಾಲೆಯಲ್ಲಿ ಎಷ್ಟು ಕೊಠಡಿಗಳು ಇರಬೇಕು, ಎಷ್ಟು ಶೌಚಾಲಯಗಳು ಇರಬೇಕು ಎಂದೂ ನಮಗೆ ಗೊತ್ತಾಗುವುದಿಲ್ಲ.

ಸರ್ಕಾರಕ್ಕೆ ಇದ್ದಕ್ಕಿದ್ದಂತೆ ಶೌಚಾಲಯಗಳ ಅಗತ್ಯ ಕಾಣುತ್ತದೆ. ಅದು ಅನುದಾನ ಬಿಡುಗಡೆ ಮಾಡುತ್ತದೆ. ಸರಿ, ಆ ಶಾಲೆಗೆ ಶೌಚಾಲಯ ಬೇಕೇ? ಅದಕ್ಕಿಂತ ಹೆಚ್ಚಾಗಿ ಮಕ್ಕಳು ಕುಳಿತುಕೊಳ್ಳಲು ಕೊಠಡಿಗಳು ಬೇಕೇ ಎಂದು ಯೋಚನೆ ಮಾಡಲು ಅನುಷ್ಠಾನ ಮಾಡುವವರಿಗೆ ವ್ಯವಧಾನ ಇರುವುದಿಲ್ಲ. ಶೌಚಾಲಯಕ್ಕೆ ಬಿಡುಗಡೆ ಮಾಡಿದ ಹಣವನ್ನು ಕೊಠಡಿಗೆ ಬಳಸಿಬಿಟ್ಟರೆ ಲೆಕ್ಕಪತ್ರ ಇಲಾಖೆಯ ಆಕ್ಷೇಪ ಬರಬಹುದು ಎಂಬ ಭಯವೂ ಅವರಿಗೆ ಇರಬಹುದು. ಸರಿ, ಶೌಚಾಲಯವನ್ನೇ ಕಟ್ಟಿಬಿಡುತ್ತಾರೆ. ಒಂದು ಶಾಲೆಗೆ ಎಷ್ಟು ಶೌಚಾಲಯಗಳು ಬೇಕು? ಒಂದಿದ್ದರೆ ಸಾಲದೇ? ಕನಿಷ್ಠ ಎರಡಾದರೂ ಬೇಕು. ಶಿಕ್ಷಕರಿಗಾಗಿ ಇನ್ನೊಂದು ಬೇಕು. ಮತ್ತೆ ಐದು, ಆರು ಶೌಚಾಲಯಗಳನ್ನು ಏಕೆ ಕಟ್ಟುತ್ತೇವೆ? ಅಲ್ಲಿ ನೀರಿನ ಸೌಲಭ್ಯ ಇದೆ ಎಂದಾದರೂ ನೋಡುವುದು ಬೇಡವೇ? ನಮ್ಮ ಪ್ರಾಥಮಿಕ ಶಿಕ್ಷಣ ಇಲಾಖೆ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿಯಬೇಕಾದರೆ ನಮ್ಮ ಯಾವ ಕನ್ನಡ ಶಾಲೆಯನ್ನಾದರೂ ಹೋಗಿ ನೋಡಬಹುದು. ನಾನು ಓದಿದ ಶಾಲೆ ಈಗಲೂ ಕೊಂಚವೂ ಬದಲಾಗಿಲ್ಲ. ಮೊನ್ನೆ ಮೊನ್ನೆಯಷ್ಟೇ ನೋಡಿ ಬಂದೆ. ಆ ಇಡೀ ಇಲಾಖೆಯಲ್ಲಿ ಒಂದು ವಿಧಾನ ಎಂಬುದೇ ಇಲ್ಲ. ಏಕೆಂದರೆ ಅದು ಯಾರಿಗೂ ಬೇಡವಾಗಿದೆ.

ಎರಡು ವಾರಗಳ ಹಿಂದೆ ನಾನು ತುಮಕೂರು ಬಳಿಯ ಹೆತ್ತೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅರವತ್ತನೇ ವಾರ್ಷಿಕೋತ್ಸವಕ್ಕೆ ಹೋಗಿದ್ದೆ. ಆ ಶಾಲೆಯಲ್ಲಿ ಹೆಣ್ಣು ಗಂಡು ಸೇರಿ 130 ಮಕ್ಕಳು ಓದುತ್ತಿವೆ. ಒಂದರಿಂದ ಎಂಟನೇ ತರಗತಿವರೆಗೆ ಅಲ್ಲಿ ಓದಬಹುದು. ಅದು ಅರವತ್ತು ವರ್ಷಗಳಷ್ಟು ಹಳೆಯ ಶಾಲೆ; ಆರಂಭವಾದಾಗ ಅಲ್ಲಿ ಎಪ್ಪತ್ತು ವಿದ್ಯಾರ್ಥಿಗಳು ಓದುತ್ತಿದ್ದರು. ಅರವತ್ತು ವರ್ಷ ಕಳೆದ ನಂತರವೂ ಅಲ್ಲಿ ಓದುವ ಮಕ್ಕಳ ಸಂಖ್ಯೆ ದುಪ್ಪಟ್ಟು ಕೂಡ ಆಗಿಲ್ಲ; ಊರಿನ ಜನಸಂಖ್ಯೆ? ಎಷ್ಟೋ ಪಟ್ಟು ಹೆಚ್ಚಿದೆ. ಆ ಶಾಲೆಗೆ ಮಕ್ಕಳು ಸೇರಲು ಸಾಧ್ಯವೇ ಇರಲಿಲ್ಲ. ಯಾವಾಗಲೋ ಬಿದ್ದು ಬಿಡಬಹುದಾದ ಗೋಡೆಗಳು, ಮುರುಕಲು ಹೆಂಚುಗಳು, ಗಬ್ಬು ನಾರುವ ಶೌಚಾಲಯಗಳು, ರಾತ್ರಿ ವೇಳೆಯಲ್ಲಿ ಗಡಂಗಾಗಿ ಬಿಡುವ ಕೊಠಡಿಗಳು. ಶಿಕ್ಷಕರು ಬೆಳಿಗ್ಗೆ ಬಂದು ಬಾಟಲಿಗಳನ್ನು, ಮೂಳೆಗಳನ್ನು ಗುಡಿಸಿ ಹಾಕಿ ಪಾಠ ಮಾಡುತ್ತಿದ್ದರು. ಮಕ್ಕಳು ಅಲ್ಲಿಯೇ ಕುಳಿತು ಓದುತ್ತಿದ್ದರು. ಅವರೂ ನೆಲದ ಮೇಲೆಯೇ ಕುಳಿತು ಓದಬೇಕಿತ್ತು. ಅವರಲ್ಲಿ ಬಹುತೇಕ ಮಕ್ಕಳು ದಲಿತರೂ, ಬಡವರೂ ಆಗಿದ್ದುದು ಆಕಸ್ಮಿಕವಾಗಿರಲಾರದು. ನಮ್ಮ ಶಿಕ್ಷಣದ ಧೋರಣೆಯೇ ಅದು :ಉಳ್ಳವರಿಗೆ ಒಂದು ಶಾಲೆ, ಇಲ್ಲದವರಿಗೆ ಇನ್ನೊಂದು ಶಾಲೆ.

ಕೇವಲ ಎಂಟು ತಿಂಗಳು ಕಳೆದು ಹೋಗಿವೆ. ಈಗ ಆ ಶಾಲೆ ಬದಲಾಗಿದೆ. ಅಲ್ಲಿ ಹೊಸದಾಗಿ ಐದು ಕೊಠಡಿಗಳು ತಲೆ ಎತ್ತಿವೆ. ಅಲ್ಪ ಸ್ವಲ್ಪ ಗಟ್ಟಿಯಾಗಿದ್ದ ಮುಂಚಿನ ಕೊಠಡಿಗಳು ಇನ್ನಷ್ಟು ಗಟ್ಟಿಯಾಗಿವೆ. ಎಲ್ಲ ಕೊಠಡಿಗಳಿಗೆ ಬಣ್ಣ ಬಳಿದಿದ್ದಾರೆ. ಸುತ್ತಲೂ ಒಂದು ಆವರಣ ಗೋಡೆ ಬಂದಿದೆ. ಎಲ್ಲ ಕೊಠಡಿಗಳಿಗೆ ಗ್ರಾನೈಟ್ ನೆಲ ಹಾಸು ಸಿಕ್ಕಿದೆ. ಒಳಗೆ ಬರುವಾಗ ಬಾಗಿಲಲ್ಲಿಯೇ ಬಣ್ಣ ಬಣ್ಣದ ಕಾಲೊರೆಸು ಇವೆ. ಗ್ರಾನೈಟ್ ನೆಲ ಹಾಸಿನ ಮೇಲೆ ಮಕ್ಕಳ ವಯೋಮಾನಕ್ಕೆ ತಕ್ಕ ಎತ್ತರದ ಬೆಂಚುಗಳು ಬಂದಿವೆ. ಒಳ್ಳೆಯ ಕಪ್ಪು ಹಲಗೆ ಇದೆ. ರಾತ್ರಿ ವೇಳೆ ಬಾಟಲಿ ಹಿಡಿದುಕೊಂಡು ಬರುವವರನ್ನು ತಡೆಯಲು ಆವರಣ ಗೋಡೆ ಬಂದಿದೆ. ಅದಕ್ಕೆ ಒಂದು ಗೇಟು ಇದೆ. ಅಲ್ಲಲ್ಲಿ ಹೂಕುಂಡಗಳನ್ನು ಇಟ್ಟಿದ್ದಾರೆ. ಚಿಕ್ಕದೊಂದು ಕೈ ತೋಟ ಇದೆ.

ಸರ್ಕಾರಿ ಶಾಲೆ ಎಂದರೆ ಎಲ್ಲ ರಾಷ್ಟ್ರ ನಾಯಕರ ಚಿತ್ರಗಳು ಇರಲೇಬೇಕು. ಅದೇ ಎಂಟು ಜನ ಕನ್ನಡದ ಸಾಹಿತಿಗಳ ಚಿತ್ರಗಳೂ ಇರಬೇಕು. ಗೋಡೆಗಳ ತುಂಬ ಒಂದಿಷ್ಟು ಗಾದೆ ಮಾತುಗಳು ಇರಬೇಕು. ಹುಲಿ, ಸಿಂಹ, ನವಿಲು, ಆನೆ... ಒಂದೇ ಎರಡೇ? ಸಿಟ್ಟಿಗೆದ್ದು ಏನಾದರೂ ಬರೆಯಬೇಕು ಎಂದರೂ ಒಂದು ಚೋಟು ಜಾಗವೂ ಖಾಲಿ ಇರದು. ಇಲ್ಲಿ ಹಾಗಿಲ್ಲ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬುದನ್ನು ಬಿಟ್ಟರೆ ಮತ್ತೆ ಯಾವ ಬರವಣಿಗೆಯೂ ಇಲ್ಲ. ಮೂರು ಶೌಚಾಲಯಗಳು ಇವೆ. ಎಲ್ಲ ಶೌಚಾಲಯಗಳಲ್ಲಿ ಆಳೆತ್ತರದ ಕನ್ನಡಿ ಇವೆ. ಒಂದು ಪುಟ್ಟ ಬೇಸಿನ್ ಇದೆ. ಅದರ ಮೇಲೆ ಕೈ ತೊಳೆಯಲು ಸಾಬೂನು ದ್ರಾವಣ ಇದೆ. ಕೈ ಒರೆಸಲು ಪುಟ್ಟ ನ್ಯಾಪ್‌ಕಿನ್ ಇದೆ. ಜತೆಗೆ ಒಂದು ಬಾಚಣಿಗೆಯೂ ಅಲ್ಲಿಯೇ ಇದೆ. ಮನೆಯಲ್ಲಿ ತಾಯಿ ತಲೆ ಬಾಚುತ್ತಾಳೋ ಇಲ್ಲವೋ? ಇಲ್ಲಿಯಾದರೂ ಕನ್ನಡಿಯಲ್ಲಿ ಮಗು ತನ್ನ ಮುಖ ನೋಡಿಕೊಳ್ಳಲಿ, ಅಂದ ಮಾಡಿಕೊಳ್ಳಲಿ!

ಮಧ್ಯಾಹ್ನದ ಊಟಕ್ಕೆ ಬೇರೆ ಕೊಠಡಿ ಇದೆ. ಒಂದು ಕಂಪ್ಯೂಟರ್ ಕೊಠಡಿ, ಅದರ ಒಳಗೆ ಹತ್ತು ಕಂಪ್ಯೂಟರ್‌ಗಳು ಇವೆ. ಕಂಪ್ಯೂಟರ್ ಶಿಕ್ಷಣ ಕೊಡಲು ಒಬ್ಬ ಶಿಕ್ಷಕಿ ಇದ್ದಾರೆ. ಇಡೀ ದಿನ ವಿದ್ಯುತ್ ಸಂಪರ್ಕ ಇದೆ. ಇಲ್ಲವಾದರೆ ಯುಪಿಎಸ್ ಬ್ಯಾಕಪ್ ಇದೆ. ಬೆಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ವರ್ಗ ಈ ಕಂಪ್ಯೂಟರ್‌ಗಳನ್ನು ದೇಣಿಗೆಯಾಗಿ ಕೊಟ್ಟಿದೆ. ಅಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ಕೊಠಡಿ ಇದೆ. ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಲು ವ್ಯವಸ್ಥೆ ಇದೆ. ಎಲ್ಲ ಪತ್ರಿಕೆಗಳನ್ನು ಸಾಲಾಗಿ ಜೋಡಿಸಿ ಇಟ್ಟಿದ್ದಾರೆ. ನೂರಾರು ಪುಸ್ತಕಗಳನ್ನು ಖರೀದಿಸಿ ಇಟ್ಟಿದ್ದಾರೆ. ಕುಳಿತುಕೊಳ್ಳಲು ಮಕ್ಕಳಿಗೆ ಪುಟ್ಟ ಪುಟ್ಟ ಕುರ್ಚಿಗಳು ಇವೆ. ನೀರಿಗಾಗಿ ಕೊಳವೆ ಬಾವಿ ಇದೆ ಅದನ್ನು ಶೋಧಿಸಲು ಜಲಶೋಧಕ ಯಂತ್ರ ಅಳವಡಿಸಿದ್ದಾರೆ.ನಾನು ಹೆತ್ತೇನಹಳ್ಳಿಯ ಸರ್ಕಾರಿ ಶಾಲೆಯ ಬಗೆಗೇ ಹೇಳುತ್ತಿದ್ದೇನೆ. ಇದೆಲ್ಲ ಅದೇ ಶಾಲೆಯಲ್ಲಿ ಇದೆ!

ಮನಸ್ಸು ಇದ್ದಲ್ಲಿ ಮಾರ್ಗ ಇರುತ್ತದೆ. ನಮ್ಮ ಬಹುತೇಕ ಜನಪ್ರತಿನಿಧಿಗಳ ಬಗ್ಗೆ ನನಗೆ ಅಷ್ಟು ಒಳ್ಳೆಯ ಅಭಿಪ್ರಾಯ ಇಲ್ಲ. ಆದರೆ, ಒಮ್ಮೊಮ್ಮೆ ನಮ್ಮ ಅಭಿಪ್ರಾಯಗಳು ಎಷ್ಟು ತಪ್ಪು ಎನ್ನುವಂತೆ ಅವರು ನಡೆದುಕೊಳ್ಳುತ್ತಾರೆ. ಎಲ್ಲ ಶಾಸಕರಿಗೂ ಸರ್ಕಾರ ವಾರ್ಷಿಕ ತಲಾ ಎರಡು ಕೋಟಿ ಕೊಡುತ್ತದೆ. ಅದನ್ನು ಅವರು ಹೇಗೆ ಖರ್ಚು ಮಾಡುತ್ತಾರೋ ಏನೋ? ಬಹುಪಾಲು ಅವರ ಹಿಂಬಾಲಕರ ಪುಟಗೋಸಿ ಕೆಲಸಗಳಿಗೇ ಅದು ಖರ್ಚಾಗುತ್ತದೆ. ಸಂಸದರಿಗೆ ವಾರ್ಷಿಕ ಐದು ಕೋಟಿ ರೂಪಾಯಿ ಸಿಗುತ್ತದೆ. ಅವರೂ ಹೇಗೆ ಖರ್ಚು ಮಾಡುತ್ತಾರೋ ಏನೋ?

ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶಗೌಡರು ಎಲ್ಲ ಶಾಸಕ ಮಿತ್ರರಿಗೆ ಹೊಸ ಮಾದರಿಯೊಂದನ್ನು ಹಾಕಿಕೊಟ್ಟಿದ್ದಾರೆ. ಅವರು ತಮ್ಮ ಶಾಸಕ ನಿಧಿಯಿಂದ ಹೆತ್ತೇನಹಳ್ಳಿ ಶಾಲೆಯ ಅಭಿವೃದ್ಧಿಗೆ ಐವತ್ತು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ತಮ್ಮ ಪರಿಚಯದವರನ್ನು ಹಿಡಿದು ಆ ಈ ಕೆಲಸ ಮಾಡಿಸಿದ್ದಾರೆ, ಕಂಪ್ಯೂಟರ್ ಕೊಡಿಸಿದ್ದಾರೆ. ಗುತ್ತಿಗೆದಾರರಿಗೆ ಹೆಚ್ಚು ಲಾಭ ಮಾಡಿಕೊಳ್ಳದೇ ಕೆಲಸ ಮಾಡಿಕೊಡಿ ಎಂದು ಕೇಳಿಕೊಂಡಿದ್ದಾರೆ.

ಹೆತ್ತೇನಹಳ್ಳಿ ಶಾಲೆಗೆ ಕೇವಲ ಎಂಟು ತಿಂಗಳ ಹಿಂದೆ ಮಕ್ಕಳು ಬಂದರೆ ಬಂದರು. ಇಲ್ಲವಾದರೆ ಇಲ್ಲ. ಶಿಕ್ಷಕರಿಗೆ ಬೇರೆ ಗತಿ ಇರಲಿಲ್ಲ. ಅಕ್ಷರಶಃ ವಾಂತಿ ಆಗುವಂಥ, ಗಬ್ಬು ನಾರುವ ಶೌಚಾಲಯಗಳ ಪಕ್ಕ ಕುಳಿತು ಎದ್ದು ಹೋಗುತ್ತಿದ್ದರು. ಮಕ್ಕಳು, ಶಿಕ್ಷಕರು ಎಲ್ಲೋ ಮರೆ ಹುಡುಕಿ ನಿಸರ್ಗ ಕರೆ ಪೂರೈಸುತ್ತಿದ್ದರು. ಶಿಕ್ಷಕಿಯರು ಗಟ್ಟಿಗರು. ಬೆಳಿಗ್ಗೆ ಬಂದವರು ಸಂಜೆ ವರೆಗೆ ಎಲ್ಲೂ ಕದಲುತ್ತಿರಲಿಲ್ಲ. ಅವರು ಸರ್ಕಾರಕ್ಕೆ ಶಾಪ ಹಾಕುತ್ತಿರಲಿಲ್ಲ ಎಂದರೆ ನಂಬುವುದು ಕಷ್ಟ. ಈಗ ಒಂದು ರೂಪಾಂತರ ಆಗಿದೆ. ಮಕ್ಕಳು ಸರ್ಕಾರ ಕೊಟ್ಟ ಸಮವಸ್ತ್ರ ಹಾಕಿಕೊಂಡು ಶಾಸಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿಯವರು ಕೊಡಿಸಿದ ಷೂ ಹಾಕಿಕೊಂಡು ಠಾಕು ಠೀಕಾಗಿ ಶಾಲೆಗೆ ಬರುತ್ತವೆ. ಶಿಕ್ಷಕ–ಶಿಕ್ಷಕಿಯರಿಗೆ ಪಾಠ ಮಾಡಲು ಎಲ್ಲಿಲ್ಲದ ಉತ್ಸಾಹ, ಹುಕಿ. ಒಂದು ಮಗುವೂ ಈಗ ಶಾಲೆ ತಪ್ಪಿಸುತ್ತಿಲ್ಲ. ಆಟ, ಪಾಠ, ಓದು, ಕಂಪ್ಯೂಟರ್, ಏನಿಲ್ಲ ಅಲ್ಲಿ? ಅಲ್ಲಿ ಒಂದು ‘ಪ್ರಾಮಾಣಿಕ ಅಂಗಡಿ’ ಇದೆ. ಅಲ್ಲಿ ಪೆನ್ನು, ಪೆನ್ಸಿಲ್ಲು, ಇರೇಜರು ಎಲ್ಲ ಇವೆ. ಅವುಗಳ ಬೆಲೆ ನಮೂದಿಸಲಾಗಿದೆ. ಅದರ ಮುಂದೆ ಒಂದು ಡಬ್ಬ ಇದೆ. ಮಕ್ಕಳು ಅದರಲ್ಲಿ ಹಣ ಹಾಕಿ ತಮಗೆ ಬೇಕಾದ ವಸ್ತುವನ್ನು ಖರೀದಿಸಬೇಕು. ಮಕ್ಕಳಿಗೆ ಇದೂ ಒಂದು ಪರೀಕ್ಷೆ!

ತುಮಕೂರು ನಗರವೂ ಸೇರಿದ ತುಮಕೂರು ತಾಲ್ಲೂಕಿನಲ್ಲಿ 485 ಪ್ರಾಥಮಿಕ ಶಾಲೆಗಳು ಇವೆ. ಅವೆಲ್ಲ ಬಹುತೇಕ ಮಾಜಿ ಹೆತ್ತೇನಹಳ್ಳಿ ಶಾಲೆಯಂತೆಯೇ ಇವೆ. ಈಗ ಹೆತ್ತೇನಹಳ್ಳಿಯ ಪುಟ್ಟ ಶಾಲೆ ಆ ತಾಲ್ಲೂಕಿಗೆ ಒಂದು ಮಾದರಿ ಶಾಲೆ, ಅತ್ಯುತ್ತಮ ಸೌಲಭ್ಯಗಳು ಇರುವ ಶಾಲೆ. ಬಹುಶಃ ತುಮಕೂರು ಜಿಲ್ಲೆಯ ಅತ್ಯುತ್ತಮ ಶಾಲೆಯೂ ಅದೇ ಆಗಿದ್ದರೂ ಆಗಿರಬಹುದು.

ಇಲ್ಲಿ ಅನೇಕ ಪಾಠಗಳು ಇವೆ: ಕನ್ನಡ ಶಾಲೆಗಳು ಹೇಗಿರಬೇಕು, ಅವುಗಳನ್ನು ಸುಧಾರಿಸುವುದು ಹೇಗೆ, ಕನ್ನಡ ಶಾಲೆಗಳಿಗೆ, ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೇಗೆ ಸೆಳೆಯಬಹುದು, ಅದಕ್ಕೆಲ್ಲ ಹಣ ಹೇಗೆ ಹೊಂದಿಸಬಹುದು... ಹೀಗೆಯೇ ಕಲಿಯಬೇಕಾದ ಪಾಠಗಳ ಪಟ್ಟಿ ಮಾಡುತ್ತ ಹೋಗಬಹುದು. ಶಾಸಕರೇ ಇದನ್ನೆಲ್ಲ ಮಾಡಬೇಕು, ತಮ್ಮ ನಿಧಿಯಲ್ಲಿಯೇ ಮಾಡಬೇಕು ಎಂದರೆ ಅವರು ಐದು ವರ್ಷಗಳ ತಮ್ಮ ಅವಧಿಯಲ್ಲಿ ಐದು ಶಾಲೆಗಳನ್ನು ಸುಧಾರಿಸಬಹುದು; ಹೆಚ್ಚೆಂದರೆ ಹತ್ತು ಶಾಲೆಗಳನ್ನು ಸುಧಾರಿಸಬಹುದು.

ಅವರು ಅಷ್ಟಾದರೂ ಜನೋಪಯೋಗಿ ಕೆಲಸ ಮಾಡಬೇಕು. ಶಾಸಕರಿಗೆ ನಿಧಿ ಕೊಡುವಾಗ ಆ ನಿಧಿಯಲ್ಲಿ ವರ್ಷಕ್ಕೆ ಒಂದು ಶಾಲೆಯನ್ನಾದರೂ ಅವರು ಹೀಗೆ ಸುಧಾರಿಸಬೇಕು ಎಂದು ಸರ್ಕಾರ ಷರತ್ತು ಹಾಕಲು ಸಾಧ್ಯವಿಲ್ಲವೇ? ಅಥವಾ ಇಂಥದೇ ಒಂದು ‘ಆಸ್ತಿ’ಯನ್ನು ನಿರ್ಮಿಸಬೇಕು ಎಂದು ಹೇಳಲು ಆಗದೇ? ಸುರೇಶಗೌಡರು ತಾವೇ ಯೋಚಿಸಿ ಅಂಥ ಮಾದರಿ ಹಾಕಿಕೊಟ್ಟಿದ್ದಾರೆ. ನಮ್ಮ ಎಲ್ಲ 224 ಮಂದಿ ಶಾಸಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಬಹಳ ಹಿಂದೆಯೇ ಹೀಗೆಯೇ ಮಾಡಿದ್ದರೆ ನಮ್ಮ ಮಕ್ಕಳನ್ನು ನಾವು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಕಳುಹಿಸುತ್ತಿದ್ದೆವೆ? ಹಾದಿಗೊಂದು, ಬೀದಿಗೊಂದು ಇಂಗ್ಲಿಷ್ ಮಾಧ್ಯಮ ಶಾಲೆಗಳು ತಲೆ ಎತ್ತುತ್ತಿದ್ದವೇ? ಸುಪ್ರೀಂ ಕೋರ್ಟಿನವರೆಗೆ ಹೋಗಿ ನಾವು ಸೋಲುತ್ತಿದ್ದೆವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.