ನಾವೇಕೆ ಐಎಸ್ ಉಗ್ರರನ್ನು ನಿರ್ಮೂಲನ ಮಾಡಬಾರದು? ಪ್ಯಾರಿಸ್‌ನಲ್ಲಿ ಕಳೆದ ಶುಕ್ರವಾರ ಐಎಸ್ ಉಗ್ರರು ನಡೆಸಿದ ಮಾರಣಹೋಮದ ನಂತರ ಈ ಪ್ರಶ್ನೆ ಜಗತ್ತಿನಾದ್ಯಂತ ಹಲವರ ಮನಸ್ಸನ್ನು ಕಾಡುತ್ತಿತ್ತು. ಇದಕ್ಕೆ ಸಾರ್ವಜನಿಕವಾಗಿ ದನಿ ನೀಡಿದವರು ಸಿಎನ್‍ಎನ್ ಸುದ್ದಿವಾಹಿನಿಯ ವರದಿಗಾರ ಜಿಮ್ ಅಕೊಸ್ಟ.

ಸೋಮವಾರ ಟರ್ಕಿಯಲ್ಲಿ ನಡೆಯುತ್ತಿದ್ದ ಜಿ-20 ಶೃಂಗಸಭೆಯ ಪತ್ರಿಕಾಗೋಷ್ಠಿಯೊಂದರಲ್ಲಿ ಸೋಮವಾರ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮರಿಗೆ ಈ ಪ್ರಶ್ನೆ ಕೇಳುತ್ತ , ಐಎಸ್ ಉಗ್ರರನ್ನು ವರ್ಣಿಸಲು ಅಸಭ್ಯ ಪದವೊಂದನ್ನು ಬಳಸಿದ್ದು ಅವರ ಮಾತುಗಳಿಗೆ ಮತ್ತಷ್ಟು ತೀವ್ರತೆಯನ್ನೂ ತಂದಿತ್ತು. ಅಮೆರಿಕ ಇಂದು ಜಗತ್ತಿನ ಅತ್ಯಂತ ಶಕ್ತಿಶಾಲಿ ಸೈನ್ಯವನ್ನು ಹೊಂದಿದೆ. ಐಎಸ್‌ನ ವಿರುದ್ಧದ ಕಾರ್ಯಾಚರಣೆಗೆ ಪ್ರಪಂಚದ ಬಹುತೇಕ ದೇಶಗಳ ಬೆಂಬಲವೂ ಇದೆ.

ಹಾಗಿದ್ದಾಗ ಐಎಸ್‌ನ ಉಗ್ರರನ್ನೇಕೆ ಸಹಿಸಬೇಕು? ಅವರು ಎಲ್ಲಾದರೂ ಇರಲಿ. ಅವರನ್ನೇಕೆ ಅವರಿರುವಲ್ಲಿಯೇ ಹತ್ಯೆ ಮಾಡಬಾರದು?
ಪ್ಯಾರಿಸ್ ಇಲ್ಲವೇ ಮುಂಬೈನಂತಹ ನಗರಗಳಲ್ಲಿ ನೂರಾರು ಮುಗ್ಧ ಸಾಮಾನ್ಯ ಜನರು ಬಲಿಯಾದ ತಕ್ಷಣದಲ್ಲಿ ಇಂತಹ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಅಂತಹ ಸಂದರ್ಭಗಳಲ್ಲಿ ಉಗ್ರಕ್ರಮಗಳನ್ನು ಕೈಗೊಳ್ಳಲು ಜಾಗತಿಕವಾಗಿ ಒಮ್ಮತವೂ ಇರುತ್ತದೆ.

ಐಎಸ್‌ನ ಪ್ಯಾರಿಸ್ ಭಯೋತ್ಪಾದನಾ ಚಟುವಟಿಕೆಗಳ ನಂತರ ಫ್ರಾನ್ಸ್‌ನ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್, ತನ್ನ ದೇಶ ಈಗ ಯುದ್ಧದಲ್ಲಿದೆ ಎಂದು ಘೋಷಿಸಿದರು. ಭಾರತವೂ ಸೇರಿದಂತೆ ಇತರ ದೇಶಗಳೂ ತಮ್ಮ ಬೆಂಬಲ, ಸಹಕಾರಗಳನ್ನು ಸೂಚಿಸಿದವು. 2001ರಲ್ಲಿ ನ್ಯೂಯಾರ್ಕ್ ನಗರದ ಮೇಲೆ ದಾಳಿ ನಡೆದ ನಂತರ ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಸಹ ಇದೇ ಪದಗಳ ಬಳಕೆಯನ್ನು ಮಾಡಿದ್ದರು.

ಆದರೆ ಯುದ್ಧ ಯಾರ ವಿರುದ್ಧ, ಎದುರಾಳಿಗಳಾರು ಎಂಬುದು ಇಲ್ಲಿ ಅಸ್ಪಷ್ಟ. ದೇಶಗಳಲ್ಲದ, ಹಲವೆಡೆ ಹರಡಿರುವ ಅಲ್ ಕೈದಾ ಮತ್ತು ಐಎಸ್ ಗಳಂತಹ ಸಂಘಟನೆಗಳ ವಿರುದ್ಧ ಯುದ್ಧ ಮಾಡುವುದಾದರೂ ಹೇಗೆ? ನನ್ನ ಪ್ರಶ್ನೆಗಳ ಅರ್ಥವೇನೆಂದರೆ 21ನೇ ಶತಮಾನದಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಸರಳ ಉಪಾಯಗಳಿಲ್ಲ ಎಂಬುದು. ಈ ವಾರದ ಪ್ರಾರಂಭದಲ್ಲಿ ಫ್ರಾನ್ಸ್ ಯುದ್ಧವನ್ನೇನೋ ಪ್ರಾರಂಭಿಸಿತು. ಎರಡು ರಂಗಗಳಲ್ಲಿ (ಸಿರಿಯಾ-ಇರಾಕ್‌ಗಳಲ್ಲಿ ಮತ್ತು ಯುರೋಪಿನೊಳಗಡೆ) ನಡೆಯುತ್ತಿರುವ ಈ ಯುದ್ಧದ ಗುರಿಗಳೇನು ಮತ್ತು ಅಂತ್ಯ ಹೇಗೆ ಎಂಬುದು ಅಸ್ಪಷ್ಟ.

ಮೊದಲು ಮಧ್ಯ ಏಷ್ಯಾವನ್ನೇ ಪರಿಗಣಿಸೋಣ. ಐಎಸ್‌ನ ರಾಜಧಾನಿಯೆಂದು ಗುರುತಿಸಲಾದ ಸಿರಿಯಾದ ರಖ್ಖಾ ನಗರದ ಮೇಲೆ ಫ್ರಾನ್ಸ್‌ನ ಯುದ್ಧ ವಿಮಾನಗಳು ದಾಳಿ ಮಾಡಿ ಬಾಂಬ್ ಹಾಕಿವೆ. ಐಎಸ್‌ನ ಕೇಂದ್ರ ಕಾರ್ಯಾಲಯ, ನೇಮಕಾತಿ ಮತ್ತು ತರಬೇತಿ ಕೇಂದ್ರ ಹಾಗೂ ಶಸ್ತ್ರಾಸ್ತ್ರ ಸಂಗ್ರಹಣಾ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ಫ್ರಾನ್ಸ್‌ನ ಬಾಂಬ್ ದಾಳಿ ನಡೆದಿದೆ. ಇದು ಕೇವಲ ಪ್ರಾರಂಭ ಮಾತ್ರ.

ಫ್ರಾನ್ಸ್‌ನ ಯುದ್ಧ ವಿಮಾನ ವಾಹಕ ನೌಕೆ ‘ಚಾರ್ಲ್ಸ್ ಡ ಗಾಲ್’ ಅರಬ್ಬಿ ಸಮುದ್ರದತ್ತ ಧಾವಿಸುತ್ತಿದೆ. ಅಮೆರಿಕದ ವಾಯುಪಡೆ ಸಹ ಟರ್ಕಿಯಲ್ಲಿರುವ ತನ್ನ ನೆಲೆಗಳಿಂದ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿದೆ. ಅದರ ಮುಖ್ಯ ಗುರಿ ಐಎಸ್‌ಗೆ ಆದಾಯವನ್ನು ತರುವ ಪೆಟ್ರೋಲಿಯಂ ಉತ್ಪನ್ನಗಳನ್ನು ಕೊಂಡೊಯ್ಯುವ ವಾಹನಗಳನ್ನು ನಾಶಪಡಿಸುವುದು ಮತ್ತು ಅದರ ವಶದಲ್ಲಿರುವ ಪ್ರದೇಶಗಳನ್ನು ವಶಪಡಿಸಿಕೊಳ್ಳುವುದು.

ಆದರೆ ಈ ದಾಳಿಗಳಿಂದ ಐಎಸ್‌ನ ಸಾಮರ್ಥ್ಯವೇನಾದರೂ ಕಡಿಮೆಯಾಗಿದೆಯೇ? ಒಂದು ವೇಳೆ ಐಎಸ್ ಅನ್ನು ನಾಶ ಮಾಡುವಲ್ಲಿ ಪಶ್ಚಿಮದ ರಾಷ್ಟ್ರಗಳು ಯಶಸ್ವಿಯಾದರೂ, ಮತ್ತೊಂದು ಅದರಂತಹ ಸಂಘಟನೆ ಹುಟ್ಟಿಕೊಳ್ಳುವುದನ್ನು ತಡೆಯುವುದರಲ್ಲಿ ಸಫಲವಾಗುತ್ತವೆಯೇ? ಇದಕ್ಕೆ ಕಾಲವೇ ಉತ್ತರಿಸಬೇಕು. ಆದರೆ ಇತ್ತೀಚಿನ ಇತಿಹಾಸ ನಮ್ಮಲ್ಲಿ ಭರವಸೆಯನ್ನು ಮೂಡಿಸುವಂತಿಲ್ಲ.

ಇದಕ್ಕೆ ಕಾರಣಗಳನ್ನು ಅರಿಯಲು ಐಎಸ್ ಇತಿಹಾಸವನ್ನೇ ಗಮನಿಸಿ. 1999ರಲ್ಲಿಯೇ ಜೋರ್ಡನ್ ಮೂಲದ ಮೂಲಭೂತವಾದಿ ಅಲ್-ಜರ್ಕಾವಿ (1966-2006) ಐಎಸ್‌ನ ಮಾತೃಸಂಸ್ಥೆಯನ್ನು ಸ್ಥಾಪಿಸಿದನು. ಆಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾಗಳಲ್ಲಿ ಪಾಶ್ಚಿಮಾತ್ಯ ದೇಶಗಳು ಹಸ್ತಕ್ಷೇಪ ಮಾಡುತ್ತಿದ್ದುದರ ವಿರುದ್ಧ ಹುಟ್ಟಿಕೊಂಡ ಹಲವಾರು ಮೂಲಭೂತವಾದಿ ಸಂಘಟನೆಗಳಲ್ಲಿ ಇದೂ ಒಂದು. 2003ರ ಇರಾಕ್ ದಾಳಿಯ ನಂತರ, ಅಮೆರಿಕದ ಸೈನ್ಯದ ವಿರುದ್ಧ ಇರಾಕ್‌ನಲ್ಲಿ ಅಲ್-ಜರ್ಕಾವಿ ಹೋರಾಡಲಾರಂಭಿಸಿದ ಹಾಗೂ ಒಸಾಮ ಬಿನ್ ಲಾಡೆನ್ ಜೊತೆಗೂಡಿ ಇರಾಕಿನ ಅಲ್ ಕೈದಾವನ್ನೂ ಅವನು ಹುಟ್ಟುಹಾಕಿದ.

2006ರ ನಂತರ ಇರಾಕಿನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಕಟ್ಟಲು ಪ್ರದೇಶಗಳನ್ನು ಆಕ್ರಮಿಸಿಕೊಳ್ಳತೊಡಗಿದರು. ಅಲ್-ಜರ್ಕಾವಿ ಅಮೆರಿಕನ್ನರಿಂದ 2006ರಲ್ಲಿ ಹತ್ಯೆಗೊಳಗಾದರೂ, ನಂತರದ ವರ್ಷಗಳಲ್ಲಿ ಅವನ ಸಂಘಟನೆ ಐಎಸ್ ಎಂಬ ಹೆಸರಿನಲ್ಲಿ ಇರಾಕ್ ಮತ್ತು ಸಿರಿಯಾಗಳಲ್ಲಿ ಹತೋಟಿಯನ್ನು ಸ್ಥಾಪಿಸಿತು. ಇರಾಕಿನಿಂದ ಅಮೆರಿಕದ ಪಡೆಗಳು ಹೊರಬರಲಾರಂಭಿಸಿದಂತೆ ಐಎಸ್ ಅಲ್ಲಿನ ಹಲವಾರು ನಗರಗಳು ಮತ್ತು ತೈಲನಿಕ್ಷೇಪಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಕ್ರಮ ತೈಲ ಮಾರಾಟದ ಮೂಲಕ ಸಾಕಷ್ಟು ಆದಾಯವನ್ನೂ ಗಳಿಸಲಾರಂಭಿಸಿತು.

ಐಎಸ್ ಪ್ರದೇಶಗಳನ್ನು ಹೊಂದಿದ್ದರೂ ಸಹ, ಸರ್ಕಾರವಿರುವಂತೆ ಗೋಚರಿಸಿದರೂ ಕೂಡ ಅದೊಂದು ದೇಶವಲ್ಲ. ಹಾಗಾಗಿ ಅದಕ್ಕೊಂದು ನಿರ್ದಿಷ್ಟ ಮತ್ತು ಕಾಯಂ ಕೇಂದ್ರವಿಲ್ಲ. ಅಲ್ಲದೆ ಕಳೆದ 15 ವರ್ಷಗಳಲ್ಲಿ ಈ ಸಂಘಟನೆ ಹಲವಾರು ಅವತಾರಗಳಲ್ಲಿ ಕಾಣಿಸಿಕೊಂಡಿದೆ. ಈಗ ಜಾಗತಿಕ ‘ಕಾಲಿಫೇಟ್’ ಕಟ್ಟುವ ಉದ್ದೇಶದೊಡನೆ ಎಲ್ಲೆಡೆ ಇರುವ ಮುಸ್ಲಿಮರ ಮೇಲೆ ಧಾರ್ಮಿಕ, ರಾಜಕೀಯ ಮತ್ತು ನೈತಿಕ ನಿಯಂತ್ರಣವನ್ನು ನಿರೀಕ್ಷಿಸುತ್ತಿದೆ.

ಹೀಗಾಗಿ ಅದರ ವ್ಯಾಪ್ತಿ, ಪ್ರಭಾವ ಮತ್ತು ಆಕರ್ಷಣೆ ಎಲ್ಲೆಡೆ ಹರಡುತ್ತಿದೆ. ಹೊಸ ತಂತ್ರಜ್ಞಾನ ಮತ್ತು ಸಾಮಾಜಿಕ ತಾಣಗಳನ್ನು ಐಎಸ್ ತುಂಬ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತದೆ. ಅದರ ಮೂಲಭೂತವಾದಿ ಸಂದೇಶ ಧಾರ್ಮಿಕ ಪರಿಶುದ್ಧತೆಯ ಸೋಗನ್ನು ಪಡೆದಿದೆ.

ಅಲ್ಲದೆ ಪಶ್ಚಿಮದ ದೇಶಗಳು ನಡೆಸುವ ದಾಳಿಗಳಲ್ಲಿ ಹತ್ತಾರು ಸಾವಿರಾರು ಮುಗ್ಧರ ಸಾವೂ ಮಧ್ಯಏಷ್ಯಾದ ದೇಶಗಳಲ್ಲಾಗುತ್ತಿದೆ. ಈ ಎರಡೂ ಕಾರಣಗಳಿಂದ ಭಾರತವೂ ಸೇರಿದಂತೆ ಹಲವು ದೇಶಗಳಿಂದ ಹೊಸದಾಗಿ ತರುಣರು ಐಎಸ್‌ಗೆ ಸೇರ್ಪಡೆಯಾಗುತ್ತಲೇ ಇದ್ದಾರೆ. ಹಾಗಾಗಿ ಐಎಸ್ ಅಥವಾ ಅಂತಹ ಸಂಘಟನೆಗಳು ರಕ್ತಬೀಜಾಸುರರಂತೆ ಮತ್ತೆ ಮತ್ತೆ ಹುಟ್ಟುತ್ತಿವೆ.

ಈ ಹಿಂದೆ ಅಮೆರಿಕನ್ನರು ತಾಲಿಬಾನ್ ಮತ್ತು ಅಲ್ ಕೈದಾಗಳನ್ನು ನಾಶಗೊಳಿಸಿ, ಇರಾಕ್ ಹಾಗೂ ಆಫ್ಘಾನಿಸ್ತಾನಗಳಲ್ಲಿ ಸ್ಥಿರ ಸರ್ಕಾರ ಸ್ಥಾಪಿಸಲು ಪ್ರಯತ್ನವನ್ನೇನೋ ಮಾಡಿದರು. ಈ ಪ್ರಯತ್ನದಲ್ಲಿ ಅಪಾರ ಹಣವನ್ನೂ, ಅಮೆರಿಕದ ಸೈನಿಕರ ಪ್ರಾಣಗಳನ್ನೂ ವ್ಯಯ ಮಾಡಿದ್ದಾಯಿತು. ಆದರೆ ಮಧ್ಯ ಏಷ್ಯಾದಲ್ಲಿ ಉಗ್ರರ ಮತ್ತು ಭಯೋತ್ಪಾದನೆಯ ಸಮಸ್ಯೆಯನ್ನೂ, ಅಲ್ಲಿನ ದೀರ್ಘಕಾಲೀನ ರಾಜಕೀಯ ಬಿಕ್ಕಟ್ಟುಗಳನ್ನು ಪರಿಹರಿಸಲಾಗಲಿಲ್ಲ.

ಮತ್ತೊಂದೆಡೆ ಯುರೋಪಿನೊಳಗೆ ಏನಾಗುತ್ತಿದೆ ಗಮನಿಸಿ. ಫ್ರಾನ್ಸಿನ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್ ಹೇಳಿದಂತೆ, ಪ್ಯಾರಿಸ್ ನಗರದ ಮೇಲಿನ ಕಳೆದ ವಾರದ ದಾಳಿಗಳ ಯೋಜನೆ ಸಿರಿಯಾ-ಇರಾಕ್ ಗಳಲ್ಲಿ ಆದರೂ ಸಹ ಅದನ್ನು ಕಾರ್ಯಗತಗೊಳಿಸಿದ್ದು ಯುರೋಪಿನ ಪ್ರಜೆಗಳೇ ಆದ ಉಗ್ರರು.

ಕಳೆದ ದಶಕದಲ್ಲಿ ನಿಚ್ಚಳವಾಗುತ್ತಿರುವ ಹೊಸ ವಿದ್ಯಮಾನವೆಂದರೆ ಇಂಗ್ಲೆಂಡ್, ಜರ್ಮನಿ, ಫ್ರಾನ್ಸ್ ಮತ್ತು ಬೆಲ್ಜಿಯಮ್ ನಂತಹ ದೇಶಗಳಲ್ಲಿ ಅಲ್ಲಿಯೇ ಹುಟ್ಟಿ ಬೆಳೆದವರು ಮೂಲಭೂತವಾದದ ಆಕರ್ಷಣೆಗಳಿಗೊಳಗಾಗಿ ಉಗ್ರಗಾಮಿಗಳಾಗುತ್ತಿರುವುದು. ಅಂದರೆ ಉತ್ತಮ ಗುಣಮಟ್ಟದ ಬದುಕು, ಉದಾರವಾದಿ ಸಮಾಜ, ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶಗಳು ಇರುವ ಆಧುನಿಕ ಅರ್ಥವ್ಯವಸ್ಥೆ ಮತ್ತು ಸಮಾಜಗಳನ್ನು ಕಟ್ಟಿಕೊಂಡರೆ ಭಯೋತ್ಪಾದನೆಯ ಅಪಾಯವನ್ನು ತೊಡೆಯಬಹುದು ಎಂಬ ನಂಬಿಕೆಯನ್ನು ಯುರೋಪಿನ ಈ ಬೆಳವಣಿಗೆ ಹುಸಿಮಾಡುತ್ತಿದೆ.

ಪ್ಯಾರಿಸ್ ನಗರದ ಮೇಲಿನ ಕಳೆದ ವಾರದ ದಾಳಿಗಳ ಸೂತ್ರಧಾರನೆಂದು ಗುರುತಿಸಲಾಗಿರುವ ಅಬ್ದೆಲ್‍ಹಮೀದ್ ಅಬಾವುದ್‌ನನ್ನೇ ಗಮನಿಸಿ. ಮೊರಾಕ್ಕೊ ಹಿನ್ನೆಲೆ, ಬೆಲ್ಜಿಯಂನಲ್ಲಿ ನೆಲೆಸಿರುವ ವ್ಯಾಪಾರಿ ಕುಟುಂಬದವನು. ಬ್ರಸೆಲ್ಸ್‌ನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುವ ಅವಕಾಶ ದೊರಕಿದರೂ, ಅಬಾವುದ್ ಅಪರಾಧದ ಬದುಕಿನಲ್ಲಿ ವ್ಯಸ್ತನಾಗಿ, 2010ರಲ್ಲಿ ಜೈಲಿಗೂ ಹೋದನು. ಹೊರಬಂದ ನಂತರ 2014ರಲ್ಲಿ ಐಎಸ್ ಆಕರ್ಷಣೆಗೆ ಸಿಲುಕಿ ಸಿರಿಯಾಗೆ ತೆರಳಿದನು.

ತನ್ನ 13 ವರ್ಷದ ತಮ್ಮನನ್ನು ಮೂಲಭೂತವಾದಿಯಾಗಿ ಪರಿವರ್ತಿಸಿ ಅವನನ್ನೂ ಸಿರಿಯಾಗೆ ತೆರಳುವಂತೆ ಪ್ರೇರೇಪಿಸಿದನು. ಹಾಗಾಗಿಯೇ ಕಳೆದ ವರ್ಷ ಆಬಾವುದ್‌ನ ಕುಟುಂಬಕ್ಕೆ ಅವನು ಸತ್ತಿದ್ದಾನೆ ಎಂಬ ಸುದ್ದಿ ತಿಳಿದಾಗ ಅದರ ಸದಸ್ಯರೇ ಸಂತೋಷಪಟ್ಟರು. ಆದರೆ ಆಗ ವಾಸ್ತವದಲ್ಲಿ ಅಬಾವುದ್ ಸಿರಿಯಾದಿಂದ ಯುರೋಪಿಗೆ ವಾಪಸಾಗುತ್ತಿದ್ದ ಮತ್ತು ಪ್ಯಾರಿಸ್ ದಾಳಿಯಂತಹ ಕಾರ್ಯಾಚರಣೆಗಳನ್ನು ಯೋಜಿಸುತ್ತಿದ್ದ.

ಅಬಾವುದ್‌ನ ಚಟುವಟಿಕೆಗಳ ಬಗ್ಗೆ ಯುರೋಪಿನ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳಿಗೆ ತಿಳಿದಿದ್ದರೂ, ಅವನನ್ನು ತಡೆಯುವುದು ಸಾಧ್ಯವಾಗಲಿಲ್ಲ. ಅಬಾವುದ್ ಕೂಡ ಐಎಸ್‌ನ ದೊಡ್ಡ ನಾಯಕ ಇಲ್ಲವೇ ಮುಖ್ಯ ಕಾರ್ಯಕರ್ತನೇನಲ್ಲ. ಅವನಂತಹವರು ನೂರಾರು ಬಹುಶಃ ಸಾವಿರಾರು ಯುರೋಪಿನ ದೇಶಗಳ ನಾಗರಿಕರೇ ಆಗಿರುವ ಮೂಲಭೂತವಾದಿಗಳು ಯುರೋಪಿನೊಳಗಿದ್ದಾರೆ ಎಂಬುದು ಅಲ್ಲಿನ ದೇಶಗಳು ಎದುರಿಸುತ್ತಿರುವ ಬಹುದೊಡ್ಡ ಸವಾಲು.

ಸಿರಿಯಾ ಮತ್ತು ಇರಾಕಿನ ನಗರಗಳ ಮೇಲೆ ಬಾಂಬ್ ಹಾಕಬಹುದು. ಆದರೆ ಪ್ಯಾರಿಸ್, ಲಂಡನ್ ಮತ್ತು ಬ್ರಸೆಲ್ಸಿನ ಮನೆಗಳೊಳಗಿರುವ, ಅಲ್ಲಿನ ನಾಗರಿಕರೇ ಆಗಿರುವವರನ್ನು ಹೇಗೆ ನಿಗ್ರಹಿಸುವುದು? ಫ್ರಾನ್ಸ್ ಅಧ್ಯಕ್ಷರು ತಮ್ಮ ದೇಶದಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ ಮತ್ತು ನಾಗರಿಕ ಹಕ್ಕುಗಳನ್ನು ತಾತ್ಕಾಲಿಕವಾಗಿ ಮೊಟಕು ಮಾಡಿದ್ದಾರೆ.

21ನೇ ಶತಮಾನದ ಯುದ್ಧಗಳ ವಾಸ್ತವವಿದು: ಇವುಗಳಿಗೆ ಪ್ರಾರಂಭ ಮಾತ್ರವಿದೆ, ಅಂತ್ಯ ಸ್ಪಷ್ಟವಾಗಿ ಗೋಚರಿಸುವುದಿಲ್ಲ. ಹಾಗಾಗಿ ಅಮೆರಿಕ, ಫ್ರಾನ್ಸ್ ಮತ್ತು ಭಾರತದಂತಹ ದೇಶಗಳು ಕಾಯಂ ಯುದ್ಧದ ಮನಸ್ಥಿತಿಯಲ್ಲಿರಲು ಸಿದ್ಧವಾಗಬೇಕಾಗಿದೆ. ಅಸಂತುಷ್ಟ ವ್ಯಕ್ತಿಗಳು ಮತ್ತು ಸಂಘಟನೆಗಳಿಗೆ ಬಾಂಬ್‌ಗಳು, ಎಕೆ 47 ಅಂಥ ಆಕ್ರಮಕ ಬಂದೂಕುಗಳು ಇಂದು ಸುಲಭವಾಗಿ ದೊರಕುತ್ತವೆ. ಹಾಗಾಗಿ ಮುಂಬೈ ಮತ್ತು ಪ್ಯಾರಿಸ್‌ಗಳಲ್ಲಿ ಸಂಭವಿಸಿದ ರೀತಿಯ ದಾಳಿಗಳು ಸರ್ವೇಸಾಮಾನ್ಯವಾಗುತ್ತವೆ.

ಈ ಹಿನ್ನೆಲೆಯಲ್ಲಿ ಈ ವಾರದ ವೈಮಾನಿಕ ದಾಳಿಗಳು ಮತ್ತಿತರ ಕಾರ್ಯಾಚರಣೆಗಳು ಏನನ್ನು ಸಾಧಿಸಬಹುದು? ಬಹುಶಃ ಗಾಸಿಗೊಂಡ ಫ್ರೆಂಚರ ಮನಸ್ಸುಗಳಿಗೆ ಸ್ವಲ್ಪ ಸಾಂತ್ವನ ಕೊಡಬಹುದಷ್ಟೆ. ಆದರೆ ಈ ದಾಳಿಗಳಿಂದ ಸಾವು-ನೋವು ಅನುಭವಿಸಿದ ಸಿರಿಯಾದ ರಖ್ಖಾದಲ್ಲಿ, ಆ ದೃಶ್ಯಗಳನ್ನು ಟಿವಿಗಳಲ್ಲಿ ನೋಡಿದ ಇತರ ಭಾಗಗಳಲ್ಲಿ ಮತ್ತಷ್ಟು ಮೂಲಭೂತವಾದಿಗಳು ಹುಟ್ಟುತ್ತಾರೆ. ಹಿಂಸೆಯ ಈ ವಿಷವರ್ತುಲದೊಳಗೆ ದೀರ್ಘಕಾಲೀನ ಶಾಶ್ವತ ಪರಿಹಾರಗಳು ಅಷ್ಟು ಸುಲಭವಾಗಿ ಕಾಣುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.