ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವನ್ನು ಬೆಂಗಳೂರಿಗೆ ವರ್ಗಾಯಿಸುವುದರ ವಿರುದ್ಧ ಮೈಸೂರಿನ ಕನ್ನಡ ಕಾರ್ಯಕರ್ತರು ಮತ್ತೊಮ್ಮೆ ದನಿಯೆತ್ತಿದ್ದಾರೆ. ಅವರ ಕಳೆದ ವಾರದ ಪ್ರತಿಭಟನೆಗೆ ಕಾರಣವೆಂದರೆ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆಯ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ ಅಥವಾ ಸಿಐಐಎಲ್) ನಿರ್ದೇಶಕ ಪ್ರೊ. ಅವಧೇಶ್ ಕುಮಾರ್ ಮಿಶ್ರಾ ಜುಲೈ 17ರಂದು ಸಾಂದರ್ಭಿಕವಾಗಿ ಸಂಸ್ಥೆಯ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಆಡಿದ ಮಾತುಗಳು. ಕನ್ನಡ ಮಾತ್ರವಲ್ಲ, ತೆಲುಗು ಶಾಸ್ತ್ರೀಯ ಅಧ್ಯಯನ ಕೇಂದ್ರವೂ ಈಗ ಹೈದರಾಬಾದಿಗೆ ವರ್ಗಾವಣೆಗೊಳ್ಳುತ್ತಿದೆ. ಸಿಐಐಎಲ್ನಲ್ಲಿಯೇ ಸ್ಥಾಪಿತವಾಗಿದ್ದ ತಮಿಳು ಶಾಸ್ತ್ರೀಯ ಅಧ್ಯಯನ ಕೇಂದ್ರ 2008ರಲ್ಲೇ ಚೆನ್ನೈಗೆ ಸ್ಥಳಾಂತರಗೊಂಡು, ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಕ್ಲಾಸಿಕಲ್ ತಮಿಳ್ (ಶಾಸ್ತ್ರೀಯ ತಮಿಳಿನ ಕೇಂದ್ರ ಸಂಸ್ಥೆ) ಎಂಬ ಸ್ವತಂತ್ರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ವಿದ್ಯಮಾನಗಳನ್ನು ಪ್ರಸ್ತಾಪಿಸಿದ ಪ್ರೊ. ಮಿಶ್ರಾ, ಕನ್ನಡದ ಕೇಂದ್ರವೂ ಬೆಂಗಳೂರಿಗೆ ವರ್ಗಾವಣೆಗೊಳ್ಳುವ ಪ್ರಕ್ರಿಯೆಗಳು ನಡೆಯುತ್ತಿವೆ ಎಂದರು.

ಈ ಕೇಂದ್ರ ಮೈಸೂರಿನಲ್ಲಿಯೇ ಇರಲಿ ಎಂಬ ಬೇಡಿಕೆ ಇಲ್ಲಿನ ಕನ್ನಡಪರ ಸಂಘಟನೆಗಳದ್ದು. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪ್ರಸಾದ್ ಅವರು ಸಹ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರಶ್ನೆ ಹಿಂದೆ ಉದ್ಭವಿಸಿದಾಗ 2014ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ಮೈಸೂರಿನಲ್ಲಿಯೇ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಇರಲಿ ಎಂದಿದ್ದರು.

ಶಾಸ್ತ್ರೀಯ ಭಾಷೆ ಮಾನ್ಯತೆಯನ್ನು ಕೊಡುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು, ಮನ್ನಣೆ ಪಡೆದ ಭಾಷೆಗಳ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಇವುಗಳಲ್ಲಿ ಮುಖ್ಯವಾದವುಗಳೆಂದರೆ ಮೈಸೂರಿನ ಸಿಐಐಎಲ್ನಲ್ಲಿ ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಶಾಸ್ತ್ರೀಯ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸುವುದು ಮತ್ತು ಹಿರಿಯ-ಕಿರಿಯ ವಿದ್ವಾಂಸರಿಗೆ ಪ್ರಶಸ್ತಿಗಳನ್ನು ನೀಡುವುದು. ಇದನ್ನು ಅನುಸರಿಸಿಯೇ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲೂ ಸಹ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರವೊಂದು 2011ರಲ್ಲಿಯೇ ಪ್ರಾರಂಭವಾಗಿದೆ. ಪಿಎಚ್.ಡಿ. ಸೇರಿದಂತೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಶೈಕ್ಷಣಿಕ ಕಾರ್ಯಕ್ರಮ ನಡೆಸಲು ಇಲ್ಲಿ ಅವಕಾಶವಿದೆ. ಇಲ್ಲಿಗೆ ಪೂರ್ಣಾವಧಿಯ ನಿರ್ದೇಶಕರು ನೇಮಕಗೊಂಡು, 2012ರ ಜೂನ್ನಲ್ಲಿಯೇ ಮಾರ್ಗದರ್ಶಿ ಕೈಪಿಡಿ ಸಿದ್ಧಗೊಂಡಿತ್ತು. ಈ ಮಹತ್ವಾಕಾಂಕ್ಷೆಯ ಕೈಪಿಡಿ ಪ್ರಸ್ತಾವಿತ ಕಾರ್ಯಕ್ರಮಗಳ ವಿಸ್ತೃತ ಪಟ್ಟಿಯೊಂದನ್ನು ಒದಗಿಸುತ್ತದೆ. ಆದರೆ ಈ ಬಗೆಯ ಕೇಂದ್ರವೊಂದನ್ನು ಕಟ್ಟಲು ಅಗತ್ಯವಿರುವ ಸ್ಪಷ್ಟ ದೃಷ್ಟಿಕೋನ ಮತ್ತು ಕಾರ್ಯಕ್ರಮ ವೇಳಾಪಟ್ಟಿ ಅಭಾವ ಕೈಪಿಡಿಯಲ್ಲಿ ಎದ್ದು ಕಾಣುತ್ತದೆ. ನಾನು ಗಮನಿಸಿರುವ ಹಾಗೆ ಇಲ್ಲಿ ಸೂಚಿಸಿರುವ ಕೆಲವು ಕಾರ್ಯಕ್ರಮಗಳ ಅನುಷ್ಠಾನವೂ ಆದಂತಿಲ್ಲ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕಥೆ ಇದಾದರೆ ಸಿಐಐಎಲ್ನ ಪರಿಸ್ಥಿತಿ ಮತ್ತಷ್ಟು ಚಿಂತಾಜನಕವಾದುದು. ಆರಂಭದಿಂದಲೂ ಕೇಂದ್ರ, ಶಾಸ್ತ್ರೀಯ ಭಾಷೆ ಅಭಿವೃದ್ಧಿ ಯೋಜನೆಗಳಿಗೆ ಸಿಐಐಎಲ್ ಅನ್ನು ಸಂಪರ್ಕ (ನೋಡಲ್) ಸಂಸ್ಥೆಯೆಂದೇ ಪರಿಗಣಿಸುತ್ತ ಬಂದಿದೆ. ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಕಾರ್ಯಕ್ರಮಗಳನ್ನು ಮತ್ತು ಹೊಸ ಸಂಸ್ಥೆಗಳನ್ನು ರೂಪಿಸುವ ಸಾಮರ್ಥ್ಯ ಸಿಐಐಎಲ್ಗೆ ಇಲ್ಲ ಎಂಬುದು ತಮಿಳು, ಕನ್ನಡ ಮತ್ತು ತೆಲುಗು ಭಾಷೆಗಳ ಸಂದರ್ಭದಲ್ಲಿ ಕಳೆದ ದಶಕದಲ್ಲಿ ಸ್ಪಷ್ಟವಾಗಿದೆ. ಕನ್ನಡದ ಉದಾಹರಣೆಯನ್ನೇ ಗಮನಿಸಿ. 2011ರಿಂದ ಈ ಕೇಂದ್ರಕ್ಕೆ ನಿರ್ದೇಶಕರು ಮತ್ತು ಸಿಬ್ಬಂದಿಯನ್ನು ನೇಮಿಸಲೂ ಆಗಿರಲಿಲ್ಲ. 2015ರಲ್ಲಿ ನೇಮಕಗೊಂಡ ನಿರ್ದೇಶಕರು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಆಯ್ಕೆಗೊಂಡರು. ಅವರ ನಿರ್ಗಮನದ ನಂತರ ಮತ್ತೆ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ. ಜೊತೆಗೆ ಸಿಐಐಎಲ್ನಲ್ಲಿ ಹತ್ತಾರು ದೊಡ್ಡ ಯೋಜನೆಗಳು ಮತ್ತು ಘಟಕಗಳು ಈಗಾಗಲೇ ಇವೆ. ಅವುಗಳೊಳಗೆ ಈ ಬಗೆಯ ಮಹತ್ವಾಕಾಂಕ್ಷೆಯ ಹೊಸ ಸಂಸ್ಥೆಯೊಂದನ್ನು ಕಟ್ಟುವುದು ಅಸಾಧ್ಯ.

ಅಲ್ಲದೆ ಇನ್ನೂ ಮುಖ್ಯವಾದ ಮತ್ತೊಂದು ಅಂಶವೆಂದರೆ ಭಾಷಾವಿಜ್ಞಾನವೇ ಪ್ರಾಬಲ್ಯ ಹೊಂದಿರುವ ಬೌದ್ಧಿಕ ಸಂಸ್ಕೃತಿ ಸಿಐಐಎಲ್ನಲ್ಲಿ ಪ್ರಚಲಿತವಾಗಿದೆ. ಇದಕ್ಕೆ ಅಪವಾದವೆನ್ನುವಂತೆ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನಗಳಲ್ಲಿ ಆಸಕ್ತಿಯಿರುವ ಕೆಲವು ವಿದ್ವಾಂಸರು ಇದ್ದರೂ ಕೂಡ, ಭಾಷಾವಿಜ್ಞಾನದ ತಾಂತ್ರಿಕ ಚರ್ಚೆಗಳಾಚೆಗೆ ಬರಲಾಗದವರೇ ಹೆಚ್ಚಿನವರು. ಶಾಸ್ತ್ರೀಯ ಭಾಷೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕ ಆಯಾಮಗಳ ಬಗ್ಗೆ ಸಿಐಐಎಲ್ ಎಂದೂ ಹೆಚ್ಚಿನ ಕೆಲಸ ಮಾಡಿಲ್ಲ. ಆ ಸಂಸ್ಥೆಯ ಪ್ರಕಟಣೆಗಳನ್ನು ನೋಡಿದರೆ ನನ್ನ ಮಾತು ಸ್ಪಷ್ಟವಾಗುತ್ತದೆ. ಜೊತೆಗೆ ಇದುವರೆಗೆ ಅಲ್ಲಾಗಿರುವ ಕೆಲಸವೆಂದರೆ ಅಪರೂಪಕ್ಕೊಮ್ಮೆ ಶಾಸ್ತ್ರೀಯ ಕನ್ನಡ ಕುರಿತಾದ ಕಾರ್ಯಾಗಾರಗಳನ್ನು ಆಯೋಜಿಸಿರುವುದು ಮತ್ತು ಒಂದೆರಡು ಪುಸ್ತಕಗಳನ್ನು ಪ್ರಕಟಸಿರುವುದು. ಹಾಗಾಗಿ ಸಿಐಐಎಲ್ನ ಒಂದು ಘಟಕವಾಗಿ ಉಳಿಯದೆ, ತನ್ನದೇ ಆದ ಸ್ವತಂತ್ರ ಅಸ್ತಿತ್ವ ಹೊಂದಿರುವ ಸಂಸ್ಥೆಯಾಗಿ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ರೂಪುಗೊಳ್ಳಬೇಕು.

ಈ ಹಿನ್ನೆಲೆಯಲ್ಲಿಯೇ ಸ್ವತಂತ್ರ, ಸ್ವಾಯತ್ತ ಕೇಂದ್ರ ಏನು ಮಾಡಲಿದೆ, ಯಾವ ಬಗೆಯ ಸಂಸ್ಥೆಯಾಗಿ ಮೂಡಲಿದೆ ಎಂಬುದು ನಮ್ಮ ಮುಂದಿರುವ ಬಹುಮುಖ್ಯ ಪ್ರಶ್ನೆ. ಹೀಗೆ ನೋಡಿದಾಗ ಈ ಸಂಸ್ಥೆ ಮೈಸೂರಿನಲ್ಲಿರಬೇಕೋ ಅಥವಾ ಬೆಂಗಳೂರಿಗೆ ಸ್ಥಳಾಂತರಗೊಳ್ಳುವುದು ಉಚಿತವೋ ಎನ್ನುವುದು ಅಷ್ಟೇನೂ ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಚಾರವಲ್ಲ. ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಹೆಚ್ಚಿನ ಸೌಕರ್ಯಗಳು ದೊರಕಬಹುದೇನೋ. ಆ ಕಾರಣವನ್ನೇ ಸ್ಥಳಾಂತರಕ್ಕೆ ಮುಂದಿಟ್ಟು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಮೂರು ಎಕರೆ ಭೂಮಿಯನ್ನೂ ಈ ಕೇಂದ್ರಕ್ಕಾಗಿ ಪಡೆದುಕೊಂಡಿದೆ. ಇಲ್ಲಿ ಗಮನಾರ್ಹ ವಿಚಾರವೆಂದರೆ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ಎಲ್ಲಿದ್ದರೂ ಸಹ ಮಾನವ ಸಂಪನ್ಮೂಲ ಸಚಿವಾಲಯದ ಅಡಿಯಲ್ಲಿ ಬರುವ ಸ್ವಾಯತ್ತ ಕೇಂದ್ರವಾಗಿರುತ್ತದೆ. ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಈ ಸಂಸ್ಥೆಯ ನಿಯಂತ್ರಣ ದೆಹಲಿಯಲ್ಲಿರುತ್ತದೆ.
ಅಲ್ಲಿನ ಆಡಳಿತ ವೈಖರಿ ಅರಿಯಲು ತಮಿಳಿನ ಅನುಭವವನ್ನೇ ನೋಡಿ.

ಚೆನ್ನೈಗೆ ವರ್ಗಾವಣೆಗೊಂಡ ಶಾಸ್ತ್ರೀಯ ತಮಿಳು ಕೇಂದ್ರ ಸಂಸ್ಥೆಯು ಕಾಯಂ ನಿರ್ದೇಶಕರೇ ಇಲ್ಲದೆ ಸುಮಾರು ಒಂದು ದಶಕ ಕಾಲ ಹಾಕಿದೆ. ರಾಷ್ಟ್ರ ರಾಜಕಾರಣದಲ್ಲಿ ನುರಿತ ತಮಿಳರ ಪರಿಸ್ಥಿತಿಯೇ ಹೀಗೆಂದರೆ ಕನ್ನಡ ಕೇಂದ್ರದ ಪರಿಸ್ಥಿತಿಯೇನಾಗಬಹುದು? ಇದಕ್ಕಾಗಿಯೇ ನಾನು ಹೇಳಿದ್ದು ಈ ಕೇಂದ್ರ ಎಲ್ಲಿರುತ್ತದೆ ಎನ್ನುವುದು ಅಮುಖ್ಯ ಎಂದು. ಹಾಗಾದರೆ ಹೊಸ ಸಂಸ್ಥೆ ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಮೂರು ಸಲಹೆಗಳನ್ನು ಓದುಗರ ಮುಂದಿಡಬಯಸುತ್ತೇನೆ. ಈ ಮೂರೂ ವಿಚಾರಗಳು ಮೂರು ಸ್ವತಂತ್ರ ಲೇಖನಗಳನ್ನೇ ನಿರೀಕ್ಷಿಸುವಷ್ಟು ಪ್ರಮುಖವಾದವುಗಳಾದರೂ ಇಲ್ಲಿ ಸೂತ್ರ ರೂಪದಲ್ಲಿ ಮಂಡಿಸಿ, ಮುಂದೊಮ್ಮೆ ವಿಸ್ತರಿಸಿ ಬರೆಯುತ್ತೇನೆ.

ಮೊದಲಿಗೆ, ಹಳೆಗನ್ನಡ-ನಡುಗನ್ನಡಗಳನ್ನು ಕಲಿಯುವ ಆಸಕ್ತಿ ಕ್ಷೀಣಿಸುತ್ತಿದ್ದು, ಅದರ ಪುನರುಜ್ಜೀವನ ಮಾಡಬೇಕಾದ ತುರ್ತಿನ ಸಂದರ್ಭದಲ್ಲಿ ನಾವಿದ್ದೇವೆ. ಇಂದು ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲಿಯೇ ‘ಶಬ್ದಮಣಿದರ್ಪಣ’ದಂತಹ ಶಾಸ್ತ್ರೀಯ ಕೃತಿಗಳನ್ನು ಪಾಠ ಮಾಡಬಲ್ಲವರ ಸಂಖ್ಯೆ ಕಡಿಮೆಯಾಗುತ್ತಿದೆ. ಅಲ್ಲದೆ ಪಠ್ಯಕ್ರಮದಲ್ಲೂ ಆಧುನಿಕಪೂರ್ವ ಕನ್ನಡ ಸಾಹಿತ್ಯದ ಓದು ಪ್ರಮುಖವಾಗಿ ಉಳಿದಿಲ್ಲ. ಇದಕ್ಕೆ ಕಾರಣಗಳು ಹಲವು. 1970ರ ದಶಕದಿಂದ ಈಚೆಗೆ ಕನ್ನಡ ಸಾಹಿತ್ಯ ಪರಂಪರೆಯ ಸೊಗಡಿಲ್ಲದೆ ನಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬಹುದು ಎಂಬ ನಂಬಿಕೆಯನ್ನು ದಲಿತ-ಬಂಡಾಯದ ಬರಹಗಾರರಲ್ಲಿ, ನಂತರದ ಹೊಸ ಲೇಖಕರಲ್ಲಿ ನಾವು ಕಾಣುತ್ತೇವೆ. ಇದು ಒಂದು ತಾತ್ವಿಕ ನಿಲುವಾಗಿಯೇ ತೇಜಸ್ವಿಯವರಿಂದ ಇತ್ತೀಚಿನ ನಾಗರಾಜ ವಸ್ತಾರೆಯವರ ತನಕ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತವಾಗಿದೆ. ಈ ನಂಬಿಕೆಯನ್ನು ನಾನು ಪ್ರಶ್ನಿಸುತ್ತಿಲ್ಲ. ಕನ್ನಡದ ಹಿರಿಮೆಯನ್ನು ಸಾಧಿಸಲು ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕಾಗಿ ಹೋರಾಡುವ ಸಂದರ್ಭದಲ್ಲಿಯೇ ಅದರ ಉಪೇಕ್ಷೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಇದ್ದೇವೆ ಎಂಬುದನ್ನು ನಾವಿಲ್ಲಿ ಗುರುತಿಸಿಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿಯೇ ನಾವು ಆಧುನಿಕಪೂರ್ವ ಕನ್ನಡ ಸಾಹಿತ್ಯದಿಂದ ನಮಗೇನು ಬೇಕು, ನಮ್ಮ ಇಂದಿನ ಸಾಹಿತ್ಯಿಕ-ಸಾಂಸ್ಕೃತಿಕ ಅಭಿವ್ಯಕ್ತಿಗೆ ಸಂಬಂಧವೇನು ಎಂಬುದನ್ನು ಮತ್ತೆ ಕೇಳಿಕೊಳ್ಳಬೇಕಾಗಿದೆ. ಈ ಬಗೆಯ ಪ್ರಶ್ನೆಗಳು ಸಾಧಾರಣವಾಗಿ ವ್ಯಕ್ತಿನೆಲೆಯಲ್ಲಿಯೇ

ಚರ್ಚಿತವಾಗುತ್ತವೆ. ಆದರಿಂದು ಸಂಸ್ಥೆಯ ನೆಲೆಯಲ್ಲಿಯೂ ಕೂಡ ಈ ಪ್ರಶ್ನೆಗಳು ಮುಖ್ಯವಾಗುತ್ತಿವೆ. ಏಕೆಂದರೆ ಶಾಸ್ತ್ರೀಯ ಕನ್ನಡದ ಕಲಿಕೆಯ ಮತ್ತು ಅಧ್ಯಯನಕ್ಕೆ ಇಂದು ಹೊಸ ಚೈತನ್ಯದ ಅಗತ್ಯವಿದ್ದು, ಅದು ಬಹುಮಟ್ಟಿಗೆ ಹೊಸ ಸಂಸ್ಥೆಯೊಂದರಿಂದ ಮಾತ್ರ ಸಾಧ್ಯ. ಎರಡನೆಯದಾಗಿ, ಈ ಹೊಸ ಸಂಸ್ಥೆ ಕನ್ನಡೇತರರಿಗೆ ಕನ್ನಡ ಕಲಿಕೆಯ, ಶಾಸ್ತ್ರೀಯ ಭಾಷೆಯ ಅಧ್ಯಯನದ ಕೇಂದ್ರವಾಗಬೇಕಿದೆ. ಭಾರತದ ಇತರೆಡೆಗಳಲ್ಲಿ, ಯುರೋಪ್ ಮತ್ತು ಅಮೆರಿಕಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಶಾಸ್ತ್ರಗ್ರಂಥಗಳನ್ನು ಗಂಭೀರವಾಗಿ ಅಧ್ಯಯನ ಮಾಡುವ ಆಸಕ್ತಿ ಹೊಂದಿರುವವರಿದ್ದಾರೆ. ಅವರಿಗೆ ವ್ಯವಸ್ಥಿತವಾದ ತರಬೇತಿ ನೀಡುವ ವ್ಯವಸ್ಥೆ ಈಗ ಜಗತ್ತಿನಲ್ಲಿ ಎಲ್ಲೂ ಇಲ್ಲ. ನನಗೇ ತಿಳಿದಿರುವಂತೆ ದಕ್ಷಿಣ ಭಾರತವನ್ನು ಅಭ್ಯಸಿಸುವ ಹಲವಾರು ಹಿರಿಯ ವಿದ್ವಾಂಸರು ಕನ್ನಡ ಕಲಿಯುವ, ಅವರ ವಿದ್ಯಾರ್ಥಿಗಳನ್ನು ಕನ್ನಡದ ಸಂಶೋಧನೆಯಲ್ಲಿ ತೊಡಗಿಸುವ ಆಸಕ್ತಿ ಹೊಂದಿದ್ದಾರೆ. ಅಂತಹವರಿಗೆ ನೆರವಾಗುವಂತೆ ಕನ್ನಡದ ಬಗೆಗೆ ಇರುವ ಕುತೂಹಲ, ಆಸಕ್ತಿಗಳನ್ನು ತಣಿಸುವ ಸಂಸ್ಥೆಯೊಂದರ ಅಗತ್ಯ ಇಂದು ತುಂಬ ಹೆಚ್ಚಿದೆ.

ಮೂರನೆಯ, ಮತ್ತು ನನ್ನ ದೃಷ್ಟಿಯಲ್ಲಿ, ಬಹುಮುಖ್ಯವಾದ ಕೆಲಸವೆಂದರೆ ಶಾಸ್ತ್ರೀಯ ಕನ್ನಡವನ್ನು ಈ ಹೊಸ ಸಂಸ್ಥೆ ಮುದ್ರಣಯುಗದಿಂದ ಡಿಜಿಟಲ್ ಯುಗಕ್ಕೆ ಕರೆತರಬೇಕಿದೆ. ನನ್ನ ಮಾತಿನ ಅರ್ಥ ಸರಳವಾದುದು. ಹಳೆಗನ್ನಡ ಕಾವ್ಯಗಳಿರಲಿ ಅಥವಾ ಶಾಸ್ತ್ರಗ್ರಂಥಗಳಿರಲಿ; ಕಾದಂಬರಿಗಳಂತೆ ಏಕಾಂತದಲ್ಲಿ ಒಬ್ಬ ಓದುಗ ಓದಬಹುದಾದ ಕೃತಿಗಳಲ್ಲ. ಇವುಗಳ ರಚನೆಯ ಸಂದರ್ಭದಲ್ಲಿ ಈ ಕೃತಿಗಳನ್ನು ವಾಚಿಸಲೆಂದೇ ರಚಿಸಲಾಗಿತ್ತು. ಅಲ್ಲದೆ ವ್ಯಾಖ್ಯಾನಗಳ (ಲಿಖಿತ ಇಲ್ಲವೇ ಮೌಖಿಕ) ಜೊತೆಗೆ ಪಡೆಯಬೇಕೆನ್ನುವ ಸಾಂಸ್ಕೃತಿಕ ಗ್ರಹಿಕೆಯೂ ಕೃತಿಯ ಅಂತಃಸತ್ವದಲ್ಲಿಯೇ ಇದೆ. ಆಧುನಿಕಪೂರ್ವದ ಕೃತಿಗಳ ಈ ಎಲ್ಲ ಆಯಾಮಗಳನ್ನು ನಾವು ಮುದ್ರಣದಲ್ಲಿ ತರಲು ಸಾಧ್ಯವೇ ಇಲ್ಲ. ಮುದ್ರಿತ ಪಠ್ಯ, ಅದರ ವಾಚನ, ವ್ಯಾಖ್ಯಾನಗಳು, ಪದಾರ್ಥ ಹೀಗೆ ಈ ಎಲ್ಲ ಆಯಾಮಗಳನ್ನು ಒಳಗೊಂಡ ಡಿಜಿಟಲ್ ಪಠ್ಯಗಳಾಗಿ ಪುನಃ ಸೃಷ್ಟಿಸಬಹುದು. ಅದರ ಸ್ವರೂಪ, ವ್ಯವಸ್ಥೆ ಮತ್ತು ರಚನೆಗಳು ಹೇಗಿರಬೇಕು ಎಂಬುದನ್ನು ನಾವು ಚರ್ಚಿಸಬೇಕು. ಈ ಬಗೆಯ ಯೋಜನೆಗಳು, ಪ್ರಯೋಗಗಳು ನೇಪಾಲಿ, ಟಿಬೆಟನ್ನಂತಹ ಭಾಷೆಗಳಲ್ಲಿಯೇ ನಡೆಯುತ್ತಿವೆ, ಕನ್ನಡದಲ್ಲಿ ಏಕಿಲ್ಲ ಎನ್ನುವುದು ನನ್ನನ್ನು ಕಾಡುವ ಪ್ರಶ್ನೆ.

ಈ ಮೂರೂ ಕೆಲಸಗಳನ್ನು ಒಟ್ಟಿಗೆ ನಡೆಸಬಲ್ಲ ಶಕ್ತಿಯನ್ನು ಹೊಂದಿರುವ ಕನ್ನಡ ಶಾಸ್ತ್ರೀಯ ಅಧ್ಯಯನ ಕೇಂದ್ರ ನಮಗಿಂದು ಬೇಕು. ಅದೆಲ್ಲಿದ್ದರೂ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.