ಟಿಪ್ಪು ಸುಲ್ತಾನನನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು? ಅವನೊಬ್ಬ ಸೆಕ್ಯುಲರ್, ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರನೇ ಅಥವಾ ಕ್ರೂರಿ, ಧರ್ಮಾಂಧ, ಕನ್ನಡ ವಿರೋಧಿ, ಅಧಿಕಾರ ಅಪಹಾರಕನೇ? ಟಿಪ್ಪುವನ್ನು 18ನೇ ಶತಮಾನದ ಅವನ ಸಂದರ್ಭದಲ್ಲಿಟ್ಟು ನಾವು ನೋಡುವುದಾದರೆ ಈ ಎರಡೂ ಚಿತ್ರಣಗಳೂ ಸರಿಯಿಲ್ಲದವು ಮಾತ್ರವಲ್ಲ, ಹಾಸ್ಯಾಸ್ಪದವಾದವು. ಏಕೆಂದರೆ ಟಿಪ್ಪುವಿನ ಪರ-ವಿರೋಧಿ ಬಣಗಳೆರಡೂ ಅವನನ್ನು ಗ್ರಹಿಸಲು ಬಳಸುತ್ತಿರುವ ಪರಿಕಲ್ಪನೆಗಳು ಅವನ ಕಾಲಕ್ಕೆ ಅಪ್ರಸ್ತುತವಾದಂತಹವು.

ಟಿಪ್ಪು ಪರವಾದ ಬಣದ ಚಿತ್ರಣವನ್ನು ಮೊದಲು ಚರ್ಚಿಸೋಣ. ದೇವಸ್ಥಾನಗಳಿಗೆ, ಹಿಂದೂ ಧರ್ಮಗುರುಗಳಿಗೆ ದಾನ, ದತ್ತಿ ಕೊಡುತ್ತಿದ್ದಂತೆ ಮುಸ್ಲಿಮ್ ಸುಲ್ತಾನನೊಬ್ಬ ಸೆಕ್ಯುಲರ್ ಆಗುವುದಿಲ್ಲ. ಸೆಕ್ಯುಲರಿಸಮ್ ಎಂದು ನಾವು ಇಂದು ಗುರುತಿಸುವ ವಿಚಾರಧಾರೆ ರಾಜ್ಯ ಮತ್ತು ಧರ್ಮಗಳನ್ನು ಪ್ರತ್ಯೇಕ ಎಂದು ಹೇಳುವುದು ಮಾತ್ರವಲ್ಲ, ಧರ್ಮವನ್ನು ಖಾಸಗಿ ವಲಯದ ವೈಯಕ್ತಿಕ ವ್ಯವಹಾರ ಎಂದು ಗುರುತಿಸುತ್ತದೆ. ಇಂತಹ ಚಿಂತನೆ, ನಡವಳಿಕೆ ಅಲ್ಲಲ್ಲಿ ಇತಿಹಾಸದಲ್ಲಿ ಕಾಣಸಿಗಬಹುದು. ಆದರೆ ರಾಜ್ಯ ಮತ್ತು ಸಮಾಜಗಳ ಮಟ್ಟದಲ್ಲಿ ಸ್ಥಾಪಿತ ವ್ಯವಸ್ಥೆಯಾಗುವುದು ಯುರೋಪ್-ಅಮೆರಿಕಗಳಲ್ಲಿಯೇ 19ನೇ ಶತಮಾನದಲ್ಲಿ. 18ನೇ ಶತಮಾನದ ಭಾರತದ ಒಬ್ಬ ರಾಜನನ್ನು ಸೆಕ್ಯುಲರ್ ಎಂದು ಕರೆಯಬೇಕಾದ ಅಗತ್ಯವಾದರೂ ಏನು?

ಹಾಗೆಯೇ ಟಿಪ್ಪು ರಾಷ್ಟ್ರೀಯವಾದಿ, ಸ್ವಾತಂತ್ರ್ಯ ಹೋರಾಟಗಾರನೇ? ಭಾರತದ ರಾಷ್ಟ್ರೀಯತೆಯ ಪರಿಕಲ್ಪನೆ ಸ್ಪಷ್ಟವಾಗಿ ಗೋಚರಿಸುವುದು 1860ರ ನಂತರವೇ ಹೊರತು 1780ರಲ್ಲಲ್ಲ. ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಡಿದ್ದು ನಿಜ. ಆದರೆ 18ನೇ ಶತಮಾನದಲ್ಲಿ ಬ್ರಿಟಿಷರು ಮತ್ತು ಅವರನ್ನು ಪ್ರತಿನಿಧಿಸುತ್ತಿದ್ದ ಈಸ್ಟ್ ಇಂಡಿಯಾ ಕಂಪೆನಿ ವ್ಯವಹರಿಸುತ್ತಿದ್ದ ರೀತಿ 19-20ನೇ ಶತಮಾನಗಳಿಗೆ ಹೋಲಿಸಿದಾಗ ಭಿನ್ನವಾಗಿತ್ತು. 18ನೇ ಶತಮಾನದುದ್ದಕ್ಕೂ ಬ್ರಿಟಿಷರು ಇತರ ಭಾರತದ ರಾಜರುಗಳಂತೆಯೇ ವರ್ತಿಸಿದರೇ ಹೊರತು ವಿದೇಶಿ ಸಾಮ್ರಾಜ್ಯಶಾಹಿ ಶಕ್ತಿಯಂತಲ್ಲ.

ಅಂದರೆ ವ್ಯಾಪಾರದ ಜೊತೆಗೆ ಪ್ರದೇಶಗಳನ್ನು ಗಳಿಸಲು 1750ರ ಸುಮಾರಿನಲ್ಲಿ ಅವರು ಪ್ರಾರಂಭಿಸಿದಾಗ ಅವರ ರಾಜಕೀಯ ಉದ್ದೇಶಗಳು ಮರಾಠರ, ನಿಜಾಮನ ಉದ್ದೇಶಗಳಂತಿದ್ದವು. ಬ್ರಿಟಿಷರು ಯಶಸ್ಸು ಗಳಿಸಿದ್ದು ಅವರೊಂದು ದೇಶಿ ಶಕ್ತಿಯಂತೆ ವ್ಯವಹರಿಸಿದ್ದರಿಂದಲೇ. ರಾಬರ್ಟ್ ಕ್ಲೈವ್, ವಾರೆನ್ ಹೇಸ್ಟಿಂಗ್ಸ್, ವೆಲ್ಲೆಸ್ಲಿ ಇವರೆಲ್ಲರೂ ಲಂಡನ್ನಿನಿಂದ ಕಳುಹಿಸುತ್ತಿದ್ದ ಆದೇಶಗಳನ್ನು ಬಹುಮಟ್ಟಿಗೆ ನಿರ್ಲಕ್ಷಿಸಿ, ಅವಕಾಶ ದೊರೆತಾಗಲೆಲ್ಲ ಮತ್ತಷ್ಟು ಪ್ರದೇಶಗಳನ್ನು ಗಳಿಸಲು ಪ್ರಯತ್ನಿಸಿದರು. ಹಾಗಾಗಿಯೇ ಇಂಗ್ಲೆಂಡಿಗೆ ವಾಪಸಾದ ನಂತರ ಕ್ಲೈವ್ ಮತ್ತು ಹೇಸ್ಟಿಂಗ್ಸರ ವಿರುದ್ಧ ಪಾರ್ಲಿಮೆಂಟಿನಲ್ಲಿ ವಿಚಾರಣೆ ಸಹ ನಡೆಯಿತು.

ಈ ವಾಸ್ತವ 19ನೇ ಶತಮಾನದಲ್ಲಿ ಬದಲಾಯಿತು. ಭಾರತದಾದ್ಯಂತ ಪ್ರದೇಶಗಳನ್ನು ಗಳಿಸಿದ ಬ್ರಿಟಿಷರು ಇಲ್ಲೊಂದು ಸಾಮ್ರಾಜ್ಯ ಕಟ್ಟುವ, ತಮ್ಮ ನೆಲೆಯನ್ನು ಭದ್ರಪಡಿಸಿಕೊಳ್ಳುವ ಬಗ್ಗೆ ಲಂಡನ್ನಿನಲ್ಲಿಯೇ ವ್ಯವಸ್ಥಿತವಾಗಿ ಯೋಜಿಸಲಾರಂಭಿಸಿದರು. ಈ ಪ್ರಕ್ರಿಯೆ ಸಿಪಾಯಿ ದಂಗೆಯ ನಂತರ ಮತ್ತಷ್ಟು ಯೋಜಿತವಾದ ಪೂರ್ಣಪ್ರಮಾಣದ ವಸಾಹತುಶಾಹಿಯಾಗಿ ಹೊರಹೊಮ್ಮುತ್ತದೆ. ಅಂದರೆ ನನ್ನ ಮಾತಿನ ಅರ್ಥವಿಷ್ಟೆ: 18ನೇ ಶತಮಾನದುದ್ದಕ್ಕೂ ಬ್ರಿಟಿಷ್ ವಸಾಹತುಶಾಹಿಯ ಉದ್ದೇಶ ಅನಿಶ್ಚಿತವಾದುದು ಮತ್ತು ಸಂದರ್ಭಕ್ಕೆ ಪ್ರತಿಕ್ರಿಯಿಸುವುದಾಗಿತ್ತು. ಇಲ್ಲೊಂದು ಸಾಮ್ರಾಜ್ಯ ಸ್ಥಾಪಿಸುವ ಯೋಜಿತ ಪಿತೂರಿಯಿತ್ತೆಂಬುದು ಕಾಣುವುದಿಲ್ಲ.

ಇದು ಐತಿಹಾಸಿಕ ವಾಸ್ತವವಾದರೆ ಬ್ರಿಟಿಷರ ವಿರುದ್ಧ ಟಿಪ್ಪು ನಡೆಸಿದ ಹೋರಾಟವನ್ನು ಸ್ವಾತಂತ್ರ್ಯ ಹೋರಾಟವೆಂದು ಏಕೆ ಪರಿಗಣಿಸಬೇಕು? ರಾಷ್ಟ್ರೀಯತೆಯ ಸಿದ್ಧಾಂತಗಳು ಇನ್ನೂ ಹುಟ್ಟೇ ಇಲ್ಲದಿದ್ದ ಸಂದರ್ಭದಲ್ಲಿ ರಾಷ್ಟ್ರೀಯವಾದಿಯೆಂದೇಕೆ ಕರೆಯಬೇಕು? ತನ್ನ ಅಸ್ತಿತ್ವಕ್ಕಾಗಿ, ತನ್ನ ಪ್ರಭುತ್ವ ಬಲಪಡಿಸಿಕೊಳ್ಳಲು ಹೋರಾಡಿದವನೆಂದರೆ ಟಿಪ್ಪುವನ್ನು ಅವಮಾನಿಸಿದಂತಾಗುತ್ತದೆಯೇ?

ಇದು ಟಿಪ್ಪು ಪರವಾದವರ ವಾದದಲ್ಲಿರುವ ತೊಡಕಾದರೆ, ಟಿಪ್ಪು ವಿರೋಧಿಗಳು ಸಹ ಇತಿಹಾಸವನ್ನು ಗ್ರಹಿಸುವಲ್ಲಿ ಸೋಲುತ್ತಿದ್ದಾರೆ. ಎರಡನೆಯ ಗುಂಪಿನವರು ಟಿಪ್ಪುವನ್ನು ಕ್ರೂರಿ ಮತ್ತು ಬಲಾತ್ಕಾರದಿಂದ ಇಸ್ಲಾಮಿಗೆ ಪರಿವರ್ತನೆ ಮಾಡಿಸಿದವನು ಎಂದು ಆರೋಪಿಸುತ್ತಾರೆ. ತಮ್ಮ ವಾದಕ್ಕೆ ಆಧಾರವಾಗಿ ಕೊಡಗು, ಮಲಬಾರ್ ಮತ್ತು ಮಂಗಳೂರು ಪ್ರದೇಶಗಳಲ್ಲಿ ಅವನ ಚಟುವಟಿಕೆಗಳನ್ನು ತೋರಿಸುತ್ತಾರೆ. ಈ ಎಲ್ಲ ಉದಾಹರಣೆಗಳಲ್ಲಿ ಟಿಪ್ಪು ಕ್ರೌರ್ಯದಿಂದ ನಡೆದುಕೊಂಡಿರುವುದು, ಹತ್ಯೆ ಮಾಡಿಸಿರುವುದು ಮತ್ತು ಇಸ್ಲಾಮಿಗೆ ಬಲಾತ್ಕಾರದಿಂದ ಮತಾಂತರ ಮಾಡಿಸಿರುವುದು ಐತಿಹಾಸಿಕ ಸತ್ಯ. ಇದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ಆದರೆ ಅವನ ಈ ಚಟುವಟಿಕೆಗಳ ಉದ್ದೇಶಗಳನ್ನು ವಿವರಿಸುವಾಗ ಟಿಪ್ಪು ವಿರೋಧಿಗಳು ದಾರಿ ತಪ್ಪುತ್ತಿದ್ದಾರೆ. ಕೊಡಗು, ಮಲಬಾರ್ ಮತ್ತು ಮಂಗಳೂರುಗಳು ಟಿಪ್ಪುವಿನ ರಾಜ್ಯದ ಅಂಚಿನಲ್ಲಿದ್ದ, ಅವನ ನಿಯಂತ್ರಣದಲ್ಲಿಲ್ಲದ ಪ್ರದೇಶಗಳು. ಇಲ್ಲಿ ಅವನ ಕಂದಾಯ ನೀತಿಗೆ ಸ್ಥಳೀಯ ಜಮೀನುದಾರರ ವಿರೋಧವೂ ಇತ್ತು. ಹಾಗಾಗಿ ಇಲ್ಲಿ ನಾವು ನೋಡುವ ಕ್ರೌರ್ಯ ಮತ್ತು ಧಾರ್ಮಿಕ ಶೋಷಣೆ (ಪರ್ಸಿಕ್ಯೂಶನ್) ರಾಜಕೀಯ ಉದ್ದೇಶಗಳಿಂದ ಪ್ರೇರಿತವಾದುದು, ಮತಾಂತರದ ಬಗ್ಗೆ ಟಿಪ್ಪು ಉತ್ಸುಕನಾದುದರಿಂದಲ್ಲ.

ಟಿಪ್ಪು ವ್ಯವಸ್ಥಿತವಾಗಿ ಇಸ್ಲಾಮಿಕ್ ರಾಜ್ಯ-ಸಮಾಜ ಸ್ಥಾಪಿಸುವ ಉದ್ದೇಶ ಹೊಂದಿದ್ದರೆ ಅವನು ತನ್ನ ರಾಜ್ಯದ ಕೇಂದ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಮತಾಂತರ ಮಾಡಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಮೈಸೂರು ರಾಜ್ಯದ ಬಹುಪಾಲು ಸಾಮಾನ್ಯ ಜನರು ತಮ್ಮ ಹಳೆಯ ಧರ್ಮವನ್ನೇ ಅನುಸರಿಸಿದರು. ಟಿಪ್ಪುವಿನ ಆಡಳಿತದಲ್ಲಿ ಮತ್ತು ಆಪ್ತ ವಲಯದಲ್ಲಿ ಹಿಂದೂಗಳೂ ದೊಡ್ಡ ಸಂಖ್ಯೆಯಲ್ಲಿಯೇ ಇದ್ದರು. ಶ್ರೀರಂಗಪಟ್ಟಣ ಮತ್ತು ಬೆಂಗಳೂರುಗಳಲ್ಲಿ ಮತಾಂತರ ಗೊಂಡವರು ಉನ್ನತ ವರ್ಗಕ್ಕೆ ಸೇರಿದ, ಸುಲ್ತಾನನ ಆಪ್ತರಾಗಿದ್ದವರು. ಮತಾಂತರ ಹೊಂದಿದ್ದ 200–300 ಯುರೋಪಿಯನ್ನರೂ ಟಿಪ್ಪುವಿನ ಬಳಿ ಕೆಲಸ ಮಾಡುತ್ತಿದ್ದರು. ಇವರ ನಿಷ್ಠೆಯನ್ನು ಸಂಪಾದಿಸಲು ಟಿಪ್ಪು ಮತಾಂತರ ಮಾಡಿಸಿ, ಅವರಿಗೆ ಉನ್ನತ ವರ್ಗದ ಮುಸ್ಲಿಂ ಹೆಣ್ಣುಮಕ್ಕಳ ಜತೆ ಮದುವೆ ಮಾಡಿಸಿದ್ದ.

ಹೀಗೆ ಟಿಪ್ಪುವಿನ ಮತಾಂತರದ ನೀತಿಯ ಉದ್ದೇಶ ರಾಜಕೀಯ ತಂತ್ರಗಾರಿಕೆಯದು; ಧರ್ಮಾಂಧತೆಯದಲ್ಲ ಎಂದರೆ ಅವನ ಕ್ರೌರ್ಯವನ್ನು ಅನುಭವಿಸಿದ ಪ್ರದೇಶಗಳ ಜನರಿಗೆ ಸಾಂತ್ವನ ಸಿಗುವುದಿಲ್ಲ ಎಂಬುದು ಸತ್ಯವೇ. ಆದರೆ ಐತಿಹಾಸಿಕ ಆಧಾರಗಳನ್ನು ಜವಾಬ್ದಾರಿಯಿಂದ ವಿಶ್ಲೇಷಿಸಿದಾಗ, ಇದಕ್ಕಿಂತ ಭಿನ್ನವಾದುದನ್ನು ಹೇಳಲು ಸಾಧ್ಯವಿಲ್ಲ. ಮಧ್ಯಕಾಲೀನ ಭಾರತೀಯ ಇತಿಹಾಸದಲ್ಲಿ ಯಾರೊಬ್ಬ ಮುಸ್ಲಿಮ್ ಸಾಮ್ರಾಟನೂ ಬಲಾತ್ಕಾರದ ಮತಾಂತರ ಯೋಜನೆಯನ್ನು ವ್ಯವಸ್ಥಿತವಾಗಿ ಮಾಡಿ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಿರಲಿಲ್ಲ. ಇದು ಅಲ್ತಮಷನಿಂದ ಟಿಪ್ಪುವಿನ ತನಕ ಎಲ್ಲರಿಗೂ ಗೊತ್ತಿದ್ದ ಸತ್ಯ.

ಟಿಪ್ಪು ಮತ್ತು ಹೈದರಾಲಿ ಇಬ್ಬರನ್ನೂ ಕ್ರೂರಿಗಳೆಂದು ಬಿಂಬಿಸಲು ಬಹುಮುಖ್ಯ ಕಾರಣವೆಂದರೆ ಸಮಕಾಲೀನ ಬ್ರಿಟಿಷ್ ದಾಖಲೆಗಳಲ್ಲಿ ಅವರು ಹಾಗೆ ಬಣ್ಣಿಸಲ್ಪಟ್ಟಿರುವುದು. ತಮ್ಮ ಬಂಧನದಲ್ಲಿದ್ದ ಬ್ರಿಟಿಷ್ ಸೈನಿಕರು ಮತ್ತು ತಮ್ಮ ರಾಜ್ಯದೊಳಗಿನ (ಒಡೆಯರ್ ರಾಜಮನೆತನದವರೂ ಸೇರಿದಂತೆ) ಎದುರಾಳಿಗಳಿಗೆ ಟಿಪ್ಪು-ಹೈದರ್ ಇಬ್ಬರೂ ಚಿತ್ರಹಿಂಸೆ ನೀಡುತ್ತಿದ್ದರು.

ಜೊತೆಗೆ ಬ್ರಿಟಿಷರ ಪ್ರದೇಶಗಳ ಮೇಲೆ ದಾಳಿ ಮಾಡಿದಾಗ, ಅಲ್ಲಿನ ಹಳ್ಳಿಗಳನ್ನು-ಬೆಳೆಗಳನ್ನು ನಾಶ ಮಾಡುತ್ತಿದ್ದರು. ತಮ್ಮ ಮಂತ್ರಿ ಮತ್ತು ದಂಡನಾಯಕರನ್ನು ಸಂಶಯದಿಂದ ನೋಡುತ್ತಿದ್ದರು ಎಂಬುದೆಲ್ಲವೂ ವಾಸ್ತವವೇ. ಆದರೆ ಈ ಬಗೆಯ ನಡವಳಿಕೆ ಹೈದರ್-ಟಿಪ್ಪುರಿಗೆ ಮಾತ್ರ ವಿಶೇಷವಾದುದಲ್ಲ. ಅಶೋಕನಿಂದ ಎರಡನೆಯ ಪುಲಕೇಶಿಯ ತನಕ, ಆರನೆಯ ವಿಕ್ರಮಾದಿತ್ಯನಿಂದ ಅಕ್ಬರನ ತನಕ ಯಾವುದೇ ಪ್ರಸಿದ್ಧ ಸಾಮ್ರಾಟನ ಉದಾಹರಣೆಯನ್ನು ತೆಗೆದುಕೊಳ್ಳಿ. ಅವರೆಲ್ಲರ ನಡವಳಿಕೆಯೂ ಇದಕ್ಕಿಂತ ಭಿನ್ನವಾಗಿರಲಿಲ್ಲ.

ಒಡೆಯರ್ ರಾಜಮನೆತನದಿಂದ ಮೈಸೂರು ರಾಜ್ಯವನ್ನು ಹೈದರ್- ಟಿಪ್ಪು ಕಿತ್ತುಕೊಂಡದ್ದನ್ನು ಅಕ್ಷಮ್ಯ ಅಪರಾಧವೆಂದೇ ಟಿಪ್ಪು ವಿರೋಧಿ ಪಾಳೆಯ ಗುರುತಿಸುತ್ತದೆ. ಒಡೆಯರರ ಕುರಿತಾದ ಆರಾಧನಾಭಾವ ಇದಕ್ಕೆ ಒಂದು ಕಾರಣ. ಆದರೆ 18ನೇ ಶತಮಾನದ ಮೈಸೂರಿನ ಅರಸರು ಬಹುಪಾಲು ಅಸಮರ್ಥರಾಗಿದ್ದರು. ಆದ್ದರಿಂದಲೇ ತಮಗೆ ದೊರಕಿದ ಅವಕಾಶಗಳನ್ನು ಹೈದರ್- ಟಿಪ್ಪು ಇಬ್ಬರೂ ಬಳಸಿಕೊಂಡರು ಎಂಬುದು ವಿರೋಧಿಗಳಿಗೆ ಒಪ್ಪಿಗೆಯಿಲ್ಲ. ಹಾಗಾಗಿ ಇವರು ಅಧಿಕಾರದ ಅಪಹಾರಕರು, ಇವರ ಆಳ್ವಿಕೆ ನ್ಯಾಯಬದ್ದವಲ್ಲ (ಇಲ್ಲೆಜಿಟಮೇಟ್) ಎಂಬ ಆರೋಪಕ್ಕೆ ಗುರಿಯಾಗುತ್ತಾರೆ.

ಹೈದರ್- ಟಿಪ್ಪು ಮುಸ್ಲಿಮರಲ್ಲದೆ ಹಿಂದೂಗಳಾಗಿದ್ದರೆ ಈ ಅಪವಾದವೇ ಬರುತ್ತಿರಲಿಲ್ಲ. ಹಾಗಾಗಿಯೇ ಟಿಪ್ಪು ತನ್ನದೇ ಆದ ತೂಕ ಮತ್ತು ಅಳತೆಗಳ ವ್ಯವಸ್ಥೆ, ಕಾಲೆಂಡರ್, ಕಂದಾಯ ವ್ಯವಸ್ಥೆ ಇವುಗಳನ್ನು ಅಳವಡಿಸಿಕೊಂಡದ್ದೇ ತಪ್ಪು ಎಂಬುವಂತೆ ಬಿಂಬಿತವಾಗಿದೆ. ಇದೇ ಕೆಲಸಗಳನ್ನು ಮಾಡಿದ ಇತರ ಸಾಮ್ರಾಟರು ದಕ್ಷ ಮತ್ತು ಮಹತ್ವಾಕಾಂಕ್ಷಿಗಳೆಂದು ಹೊಗಳಿಕೆಗೆ ಪಾತ್ರರಾಗುತ್ತಾರೆ.

ಟಿಪ್ಪು ವಿರೋಧಿಗಳ ಕಲ್ಪನೆಯಲ್ಲಿ ಇಂದು ಕರ್ನಾಟಕದಲ್ಲಿ ಕನ್ನಡ ಮಾಧ್ಯಮ ಇರದಿರುವುದಕ್ಕೆ, ಕರ್ನಾಟಕದ ಮುಸ್ಲಿಮರು ಕನ್ನಡ ಕಲಿಯದಿದ್ದರೆ, ಕನ್ನಡದಲ್ಲಿ ಪರ್ಶಿಯನ್-ಅರಾಬಿಕ್ ಪದಗಳಿರುವುದಕ್ಕೆ ಟಿಪ್ಪುವೇ ಕಾರಣ. ಈ ಆರೋಪಗಳು ಎಷ್ಟು ಹಾಸ್ಯಾಸ್ಪದವಾದವುಗಳೆಂದರೆ ಇಂತಹ ದೂರುಗಳನ್ನು ಹೊತ್ತಿರುವ ಟಿಪ್ಪುವಿನ ಮೇಲೆ ಯಾರಿಗಾದರೂ ಕರುಣೆ ಮೂಡದಿರದು.

ಹಾಗಾದರೆ ಈ ಎರಡೂ ಚಿತ್ರಣಗಳಾಚೆಗೆ ಟಿಪ್ಪುವನ್ನು 18ನೇ ಶತಮಾನದ ಉತ್ತರಾರ್ಧದ ವ್ಯಕ್ತಿಯಾಗಿ ಹೇಗೆ ನೋಡಬೇಕು? ಕರ್ನಾಟಕದ ಇತಿಹಾಸದಲ್ಲಿ ಅವನ ಪ್ರಾಮುಖ್ಯತೆಯನ್ನು ಹೇಗೆ ನಿರ್ಣಯಿಸುವುದು? ನನಗನ್ನಿಸುವಂತೆ ಟಿಪ್ಪುವಿನ ಶ್ರೇಷ್ಠತೆ ಅವನ ಬಗೆಗಿನ ಮೇಲಿನ ಚಿತ್ರಣಗಳನ್ನು ಮೀರಿದ್ದು. ಅವನ ಪ್ರಾಮುಖ್ಯತೆಯನ್ನು ಎರಡು ನೆಲೆಗಳಲ್ಲಿ ಅರಿಯಬಹುದು.

ಮೊದಲಿಗೆ, 1760-1795ರ ನಡುವೆ ಜಾಗತಿಕವಾಗಿ ಬ್ರಿಟಿಷ್‌್ ಸಾಮ್ರಾಜ್ಯಕ್ಕೆ ಇದ್ದ ಎರಡು ದೊಡ್ಡ ಎದುರಾಳಿಗಳೆಂದರೆ ಅಮೆರಿಕದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಹೈದರ್-ಟಿಪ್ಪು. ಭಾರತದಲ್ಲಿಯೇ ಮತ್ತಷ್ಟು ಶಕ್ತಿಶಾಲಿಗಳಾದ, ಸಂಪನ್ಮೂಲಗಳನ್ನು ಹೊಂದಿದ್ದ ಮರಾಠರಾಗಲಿ, ನಿಜಾಮನಾಗಲಿ ಇದ್ದರೂ ಸಹ ಬ್ರಿಟಿಷರ ಪ್ರಭುತ್ವವನ್ನು ಹೊಂದಾಣಿಕೆ ಮಾಡಿಕೊಳ್ಳದೆ ವಿರೋಧಿಸಿದ್ದು ಹೈದರ್ ಮತ್ತು ಟಿಪ್ಪು ಮಾತ್ರ. ಆದರೆ ಬ್ರಿಟಿಷರ ಸಾಮ್ರಾಜ್ಯಶಾಹಿ ನೀತಿಯನ್ನು ಟಿಪ್ಪು ಗ್ರಹಿಸಿದ್ದನು ಎಂಬುದು ಉತ್ಪ್ರೇಕ್ಷೆ.

1775–83ರ ನಡುವೆ ಅಮೆರಿಕವನ್ನು ಕಳೆದುಕೊಂಡ ನಂತರ ಬೆಳೆಯುತ್ತಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ತಡೆಯಲು ಪ್ರಯತ್ನಿಸಿದವನು ಟಿಪ್ಪು ಮಾತ್ರ. ಇಂತಹ ಜಾಗತಿಕ ಪ್ರಾಮುಖ್ಯತೆ ಪಡೆದಿದ್ದ ಕನ್ನಡದ ದೊರೆ ಮತ್ತೊಬ್ಬನಿಲ್ಲ. ಎರಡನೆಯದಾಗಿ, ಮೈಸೂರಿನಲ್ಲಿ ಆಧುನಿಕ ಆಡಳಿತ ವ್ಯವಸ್ಥೆಯೊಂದನ್ನು ರೂಪಿಸಲು ಟಿಪ್ಪು ಹಲವಾರು ನಾವೀನ್ಯ ಕ್ರಮಗಳನ್ನು ಅನುಷ್ಠಾನಗೊಳಿಸಿದನು. ಇವುಗಳಲ್ಲಿ ಮುಖ್ಯವಾದುದು ರಾಜ್ಯ ಮತ್ತು ರೈತನ ನಡುವೆ ನೇರವಾಗಿ ಸಂಬಂಧ ಕಲ್ಪಿಸಿದ್ದು. ಟಿಪ್ಪುವಿನ ಆಡಳಿತಾತ್ಮಕ ಸುಧಾರಣೆಗಳು ಅವನನ್ನು ಯಾರಿಗಾದರೂ ಸರಿಸಮನೆನಿಸುವ ಆಡಳಿತಗಾರನೆಂದು ಸಾಬೀತು ಮಾಡುತ್ತವೆ.

ಹೈದರ್-ಟಿಪ್ಪುರ ಕುರಿತಾದ ನಮ್ಮ ಐತಿಹಾಸಿಕ ಸಂಶೋಧನೆಗಳು, ಸಾರ್ವಜನಿಕ ಚರ್ಚೆಗಳು ಅರ್ಥಪೂರ್ಣವಾಗಿರದಿದ್ದರೆ, ಅರೆತಿಳಿವಳಿಕೆಯ ರಾಜಕಾರಣಿಗಳು ಮತ್ತು ಬುದ್ಧಿಜೀವಿಗಳು ಮನತೋಚಿದಂತೆ ಮಾತನಾಡಿ ಹಿಂಸೆ-ಸಾವುನೋವುಗಳು ಸಂಭವಿಸಿದರೆ, ಅದರ ಜವಾಬ್ದಾರಿಯನ್ನು ಕರ್ನಾಟಕದ ಇತಿಹಾಸಕಾರರೂ ಹೊರಬೇಕು. ಇದುವರೆಗೆ ಟಿಪ್ಪುವಿನ ಬಗ್ಗೆ ಸಮರ್ಥವಾಗಿ ಬರೆದಿರುವವರು ಕೇಟ್ ಬ್ರಿಟಲ್‍ಬ್ಯಾಂಕ್ ಎಂಬ ಆಸ್ಟ್ರೇಲಿಯಾದ ಇತಿಹಾಸಕಾರ್ತಿ ಮಾತ್ರ. ಇತಿಹಾಸದ ವೃತ್ತಿಪರ ವಿದ್ಯಾರ್ಥಿಯಾಗಿ ನನಗಿದು ನಾಚಿಕೆಯ, ವಿಷಾದದ, ಜುಗುಪ್ಸೆಯ ವಿಚಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.