‘ಬೂಟಾಟಿಕೆ ಮತ್ತು ಭಾರತೀಯ ಇತಿಹಾಸ’ ಎಂಬ ಶೀರ್ಷಿಕೆಯ ಮನವಿ ಪತ್ರವೊಂದು (goo.gl/ANVE53) ಬೆಂಬಲಿಗರನ್ನು ಹುಡುಕಾಡುತ್ತ ಅಂತರ್ಜಾಲದಲ್ಲಿ ಕಳೆದ ಎರಡು ವಾರಗಳಿಂದ ಪರ್ಯಟನ ಮಾಡುತ್ತಿದೆ. ಮಿಶೆಲ್ ದನಿನೊ ಎಂಬ ಫ್ರೆಂಚ್- ಭಾರತೀಯರ ಹೆಸರಿನಲ್ಲಿ ರಚಿತವಾಗಿರುವ ಈ ಮನವಿ ಪತ್ರ ಅಸಹಿಷ್ಣುತೆ ಕುರಿತಾದ ಎರಡು ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಹೊರಹೊಮ್ಮಿತು. ಇವುಗಳ ಪೈಕಿ ಮೊದಲಿನದು ರೊಮಿಲಾ ಥಾಪರ್, ಇರ್ಫಾನ್ ಹಬೀಬ್ ಸೇರಿದಂತೆ 53 ಇತಿಹಾಸಕಾರರು ‘ಭಾರತದಲ್ಲಿ ಇಂದು ಕಾಣಬರುತ್ತಿರುವ ಕಲುಷಿತ ವಾತಾವರಣದ ಬಗ್ಗೆ ಆತಂಕ ವ್ಯಕ್ತಪಡಿಸಿ’ ಅಕ್ಟೋಬರ್ 26ರಂದು ನೀಡಿದ ಹೇಳಿಕೆ.

ಎರಡನೆಯದು ಯುರೋಪ್ ಮತ್ತು ಅಮೆರಿಕದ ವಿಶ್ವವಿದ್ಯಾಲಯಗಳಲ್ಲಿ ಭಾರತವನ್ನು ಅಭ್ಯಸಿಸುವ ಸುಮಾರು 190 ವಿದ್ವಾಂಸರು ‘ಭಾರತದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕುರಿತಾಗಿ’ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರಿಗೆ ನವೆಂಬರ್ ಪ್ರಾರಂಭದಲ್ಲಿ ಬರೆದ ಪತ್ರ.
ಮೇಲಿನ ಎರಡೂ ಹೇಳಿಕೆಗಳಲ್ಲಿ ವ್ಯಕ್ತವಾಗುತ್ತಿರುವ ಕಾಳಜಿಗಳು ಬೌದ್ಧಿಕ ಮತ್ತು ಪಾಂಡಿತ್ಯದ ನೆಲೆಯಿಂದ ಹೊರಹೊಮ್ಮಿಲ್ಲ, ಬದಲಿಗೆ ಸೈದ್ಧಾಂತಿಕ ಮತ್ತು ರಾಜಕೀಯ ಉದ್ದೇಶಗಳಿಂದ ಪ್ರೇರಿತವಾದವು ಎಂದು ದನಿನೊ ಅವರ ಮನವಿ ಪತ್ರ ವಾದಿಸುತ್ತಿದೆ.

ಈ ಪತ್ರವನ್ನೇ ನವೆಂಬರ್ 17ರಂದು 47 ವಿದ್ವಾಂಸರು ಸಾರ್ವಜನಿಕ ಹೇಳಿಕೆಯಾಗಿ ಸಹ ಬಿಡುಗಡೆ ಮಾಡಿದ್ದರು. ಇದಕ್ಕೆ ಸಹಿ ಹಾಕಿರುವವರ ಪೈಕಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಪ್ರಾಕ್ತನಶಾಸ್ತ್ರಜ್ಞ ದಿಲೀಪ್ ಚಕ್ರಬರ್ತಿ, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಭಾಷಾಶಾಸ್ತ್ರಜ್ಞ ಕಪಿಲ್ ಕಪೂರ್ ಮತ್ತು ‘ಮಾನುಷಿ’ಯ ಸಂಪಾದಕಿ ಮಧು ಕಿಶ್ವರ್ ಪ್ರಮುಖರು. ಇವರಲ್ಲದೆ ಪ್ರಸ್ತುತದಲ್ಲಿ ಎನ್.ಡಿ.ಎ. ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪುನಾರಚನೆಗೊಂಡಿರುವ ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ನ (ಐ.ಸಿ.ಎಚ್.ಆರ್.) ಸದಸ್ಯರು ಮತ್ತು ಹಲವು ವಿಜ್ಞಾನಿಗಳು ಸಹಿ ಹಾಕಿದ್ದಾರೆ.

ಈ ಪಟ್ಟಿಯಲ್ಲಿ ಖ್ಯಾತ ಇತಿಹಾಸಕಾರರು ಯಾರೂ ಇಲ್ಲ, ಬಹುಪಾಲು ಸಾಧಾರಣ ಇಲ್ಲವೇ ಕಳಪೆ ದರ್ಜೆಯ ಇತಿಹಾಸಕಾರರಿದ್ದಾರೆ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಆದರೆ ಎಡಪಂಥೀಯ ಚಿಂತನೆಯನ್ನು ಸಮರ್ಥವಾಗಿ ವಿಮರ್ಶಿಸಿ, ಹೊಸ ಪರ್ಯಾಯಗಳನ್ನು ಒದಗಿಸಿದವರು, ಒದಗಿಸುವ ಸಾಮರ್ಥ್ಯವಿರುವವರು ಯಾರೂ ಈ ಪಟ್ಟಿಯಲ್ಲಿ ಇಲ್ಲ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ.

ಹೀಗೆ ಹೇಳುವಾಗ ನಾನು ಮೇಲೆ ಹೆಸರಿಸಿದ ಮೂವರು ವಿದ್ವಾಂಸರ ಬಗ್ಗೆ ವೈಯಕ್ತಿಕವಾಗಿ ನನಗೆ ಗೌರವವಿದೆ ಎನ್ನುವುದನ್ನೂ ದಾಖಲಿಸಲು ಆಶಿಸುತ್ತೇನೆ. ಈ ಮೂರೂ ವಿದ್ವಾಂಸರ ಬರಹ-ಚಿಂತನೆಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ. ಮಧು ಕಿಶ್ವರ್ ಅವರು ‘ಇಂಡಿಕ್ ಧರ್ಮ’ಗಳ ಕುರಿತಾಗಿ ಆಯೋಜಿಸಿದ ಸಮ್ಮೇಳನಗಳಲ್ಲಿ ನಾನೂ ಪಾಲ್ಗೊಂಡು, ಪ್ರಬಂಧಗಳನ್ನು ಮಂಡಿಸಿದ್ದೇನೆ. ಮಧು ಕಿಶ್ವರ್ ತಮ್ಮ ವಿರೋಧಿಗಳು ಎಂದು ಈಗ ಪರಿಗಣಿಸುವ ಹತ್ತಾರು ವಿದ್ವಾಂಸರು ಸಹ ಈ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ.
ದನಿನೊ ಅವರ ಮನವಿ ಪತ್ರದಲ್ಲಿ ಏಳು ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ಈ ಎಲ್ಲ ಅಂಶಗಳ ವಿಸ್ತೃತ ಚರ್ಚೆಗೆ ಇಲ್ಲಿ ಸ್ಥಳಮಿತಿಯ ಕಾರಣದಿಂದ ಸಾಧ್ಯವಿಲ್ಲ. ಇಲ್ಲಿನ ಮುಖ್ಯ ವಾದವಿಷ್ಟೆ: ಎಡಪಂಥೀಯ ಇತಿಹಾಸಕಾರರು ತಮ್ಮ ಸಂಕುಚಿತ ದೃಷ್ಟಿಕೋನವನ್ನು ಭಾರತೀಯ ಇತಿಹಾಸ ಬರವಣಿಗೆಯ ಮೇಲೆ ಹೇರಿದ್ದಾರೆ ಹಾಗೂ 1970ರ ನಂತರ ಬಹುಪಾಲು ಎಲ್ಲ ಮುಖ್ಯ ಇತಿಹಾಸಕ್ಕೆ ಸಂಬಂಧಿಸಿದ ಸಂಸ್ಥೆಗಳನ್ನು (ಐ.ಸಿ.ಎಚ್.ಆರ್. ಸೇರಿದಂತೆ) ನಿಯಂತ್ರಿಸುತ್ತಿದ್ದಾರೆ. ಈ ಎಡಪಂಥೀಯರು ಹುಟ್ಟು ಹಾಕಿರುವ ಭಾರತೀಯ ನಾಗರಿಕತೆಯ ಚಿತ್ರಣದಿಂದ ಭಾರತೀಯ ವಿದ್ಯಾರ್ಥಿಗಳಲ್ಲಿ ತಮ್ಮ ನಾಗರಿಕತೆಯ ಕುರಿತಾಗಿಯೇ ಪರಕೀಯತೆಯ ಭಾವನೆ ಮತ್ತು ತಮ್ಮ ಸಾಂಸ್ಕೃತಿಕ ಬೇರುಗಳನ್ನು ದುರ್ಬಲಗೊಳಿಸುವ ಸ್ವ-ಚಿತ್ರಣ ಮೂಡುತ್ತಿದೆ. ಹಾಗಾಗಿ ಹೊಸದೊಂದು ಇತಿಹಾಸದ ಬರವಣಿಗೆಯ ಪರಂಪರೆಯನ್ನು ಇಂದು ಹುಟ್ಟುಹಾಕಬೇಕಿದೆ.

ಇತಿಹಾಸ ತಿರುಚುವಿಕೆಯ ಬಗ್ಗೆ ಬಲಪಂಥೀಯರು ದೂರುವುದು ಹೊಸದೇನಲ್ಲ. ಅವರ ದೃಷ್ಟಿಯಲ್ಲಿ ವಸಾಹತುಶಾಹಿ ಇತಿಹಾಸಕಾರರು ಮತ್ತು ಎಡಪಂಥೀಯರಿಬ್ಬರೂ ಇತಿಹಾಸ ತಿರುಚಿದ್ದಾರೆ. ಇಂದಿನ ಚರ್ಚೆಯ ಸಂದರ್ಭದಲ್ಲಿ ಹೆಚ್ಚಿನ ಟೀಕೆಗಳನ್ನು ಎಡಪಂಥೀಯ ಇತಿಹಾಸಕಾರರೇ ಎದುರಿಸಿದ್ದಾರೆ. ನನಗೆ ಅನ್ನಿಸುವಂತೆ ಎಡಪಂಥೀಯ ಇತಿಹಾಸಕಾರರ ಬೌದ್ಧಿಕ ಸಂಶೋಧನೆಯ ಬಗ್ಗೆಯೇ ಬಲಪಂಥೀಯರಿಗೆ ಮೂಲಭೂತವಾದ ಸಂದೇಹಗಳಿವೆ. ಬಹುಶಃ ಭಾರತೀಯ ಇತಿಹಾಸದ ಬರವಣಿಗೆಗೆ ಎಡಪಂಥೀಯ ಇತಿಹಾಸಕಾರರು ಪರಿಚಯಿಸಿದ್ದೇನು ಎಂದು ಕೇಳಿಕೊಂಡರೆ ನಮಗೆ ಈ ಮೇಲಿನ ಸಂದೇಹಗಳು ಸ್ಪಷ್ಟವಾಗಬಹುದು.

ಮಾರ್ಕ್ಸ್ನ ಹಿಸ್ಟಾರಿಕಲ್ ಮೆಟೀರಿಯಲಿಸಮ್ (ಐತಿಹಾಸಿಕ ಭೌತಿಕವಾದ) ಬೌದ್ಧಿಕ ಮಾದರಿಯನ್ನು ಭಾರತೀಯ ಇತಿಹಾಸದ ಅಧ್ಯಯನಕ್ಕೆ ಅಳವಡಿಸುವ ಮೂಲಕ ಎಡಪಂಥೀಯ ಇತಿಹಾಸಕಾರರು ಎರಡು ಮುಖ್ಯ ನಾವೀನ್ಯತೆಗಳನ್ನು ಪರಿಚಯಿಸಿದರು. ಮೊದಲಿಗೆ, ಸಾಮಾಜಿಕ ವಾಸ್ತವವನ್ನು ರೂಪಿಸುವ ಆರ್ಥಿಕ ಸಂಬಂಧಗಳತ್ತ, ಅದರಲ್ಲೂ ಉತ್ಪಾದನೆಯ ಸಂಬಂಧಗಳತ್ತ ಗಮನ ಹರಿಸಿದರು. ಎರಡನೆಯದಾಗಿ, ಐತಿಹಾಸಿಕ ಬದಲಾವಣೆಯನ್ನು ವಿವರಿಸಲು ಸಾಮಾಜಿಕ ಸಂಘರ್ಷಗಳನ್ನು ಅಧ್ಯಯನ ಮಾಡಿದರು.

ಈ ಹೊಸ ಆಯಾಮಗಳನ್ನು ಪರಿಚಯಿಸುವುದರ ಹಿಂದಿನ ತಾತ್ವಿಕತೆ ಸರಳವಾದುದು. ತನ್ನ ಉಳಿವಿಗಾಗಿ ಮನುಷ್ಯ ಬದುಕಿನ ಅವಶ್ಯಕತೆಗಳ ಉತ್ಪಾದನೆ ಮತ್ತು ಮರು ಉತ್ಪಾದನೆಯಲ್ಲಿ ತೊಡಗಲೇಬೇಕು. ಇದನ್ನು ಮನುಷ್ಯ ಸಮಾಜದೊಳಗೆ ಮಾಡುವುದರಿಂದ ನಮ್ಮ ಸಾಮಾಜಿಕ ಸಂಬಂಧಗಳು ಮೂಲಭೂತವಾಗಿ ಉತ್ಪಾದನೆಯ ಸಂಬಂಧಗಳೇ ಆಗಿವೆ. ಅಂದರೆ ಸಾಮಾಜಿಕ ಸಂಬಂಧಗಳನ್ನು ಉತ್ಪಾದನೆಯ ಸಂಬಂಧಗಳು ರೂಪಿಸುತ್ತವೆ. ಇಲ್ಲಿ ಬಹಳ ಮುಖ್ಯವಾದ ಒಳನೋಟವೊಂದನ್ನು ಗ್ರಹಿಸಬೇಕು. ಅದೇನೆಂದರೆ ಸಮಾಜ ಮತ್ತು ಸಂಸ್ಕೃತಿಗಳನ್ನು ರೂಪಿಸುವುದು ಮಾನವನ ಶ್ರಮ (ಅಥವಾ ಲೇಬರ್). ಅಂದರೆ ಶ್ರಮದ ಮೂಲಕವೇ ನಮ್ಮ ಸಾಮಾಜಿಕ ಅಸ್ತಿತ್ವದ ನಿರ್ಮಾಣ ಮತ್ತು ಮನುಷ್ಯ ಪ್ರಜ್ಞೆಯನ್ನು ಕಟ್ಟುವ ಕೆಲಸ ನಡೆಯುತ್ತದೆ. ಇದರ ಅರ್ಥ ಇತಿಹಾಸ ಸಹ ಶ್ರಮದ ಮೂಲಕವೇ ಹುಟ್ಟುತ್ತದೆ.

‘ಮಾನವ ಶ್ರಮ’ಕ್ಕೆ ಮಾರ್ಕ್ಸ್ ಮತ್ತು ಮಾರ್ಕ್ಸಿಸ್ಟರು ಕೊಟ್ಟ ಪ್ರಾಮುಖ್ಯತೆ ಗಮನಾರ್ಹ. ಅದನ್ನು ಅನುಸರಿಸಿ ನಾನಿಲ್ಲಿ ಒಂದು ಮುಖ್ಯ ತಾತ್ವಿಕ ಎಳೆಯನ್ನು ಓದುಗರ ಮುಂದಿಡುತ್ತಿದ್ದೇನೆ. ಮನುಷ್ಯನ ಇತಿಹಾಸ ಕೇವಲ ಅನಿರೀಕ್ಷಿತ ಆಕಸ್ಮಿಕಗಳ ಪಟ್ಟಿ ಮಾತ್ರವಲ್ಲ ಅಥವಾ ರಾಜಕೀಯ ಇತಿಹಾಸದ ಘಟನಾವಳಿಯಲ್ಲ. ಬದಲಿಗೆ ರೈತ, ಕುಶಲಕರ್ಮಿ ಮತ್ತಿತರ ಉತ್ಪಾದಕ ವರ್ಗದ ಪ್ರತಿನಿಧಿಗಳನ್ನು ಇತಿಹಾಸದ ಬರವಣಿಗೆಯೊಳಕ್ಕೆ ತರಲು ಎಡಪಂಥೀಯರು ಬಯಸುತ್ತಾರೆ.

ಕೆರೆ-ಕಾಲುವೆಗಳನ್ನು ಯಾರು ಕಟ್ಟುತ್ತಿದ್ದಾರೆ, ನಿರ್ವಹಿಸುತ್ತಿದ್ದಾರೆ, ಇದರ ಮೂಲಕ ಕೃಷಿ ವಿಸ್ತರಣೆ ಅಥವಾ ಹೊಸ ನಗರಗಳ ನಿರ್ಮಾಣ ಹೇಗಾಗುತ್ತಿದೆ, ಈ ಪ್ರಕ್ರಿಯೆಯಲ್ಲಿ ಅಧಿಕಾರ ಗಳಿಸುತ್ತಿರುವವರು ಯಾರು, ಹೀಗೆ ಅಧಿಕಾರ ಪಡೆದ ನಂತರ ಅವರು ಯಾವ ಬಗೆಯ ಸಂಸ್ಕೃತಿ ನಿರ್ಮಾಣಕ್ಕೆ ಬೆಂಬಲ ನೀಡುತ್ತಿದ್ದಾರೆ, ಇಂತಹ ಪ್ರಶ್ನೆಗಳನ್ನು ಕೇಳಿಕೊಳ್ಳುವ ಆರ್ಥಿಕ ಚರಿತ್ರೆಯಲ್ಲಿ ‘ವಿಜಯನಗರದ ಬೀದಿಗಳಲ್ಲಿ ಮುತ್ತು-ಚಿನ್ನಗಳ ಮಾರಾಟವಾಗುತ್ತಿತ್ತು’ ಎಂದು ಮಾತ್ರ ಹೇಳುತ್ತ ಪ್ರಾಚೀನ ಭಾರತವನ್ನು ವೈಭವೀಕರಿಸಲು ಅವಕಾಶವಿರುವುದಿಲ್ಲ.

ಓದುಗರಿಗೆ ನನ್ನ ಮೇಲಿನ ವಿಶ್ಲೇಷಣೆಯಲ್ಲಿ ಏನೂ ಸಮಸ್ಯೆ ಕಾಣದಿರಬಹುದು. ಆದರೆ ಬಲಪಂಥೀಯರಿಗೆ ಎರಡು ತಾತ್ವಿಕ ತೊಡಕುಗಳು ಹುಟ್ಟುತ್ತವೆ. ಮೊದಲಿಗೆ, ಮನುಷ್ಯನ ಪ್ರಜ್ಞೆಯನ್ನು ಅವನ ಸಾಮಾಜಿಕ ಅಸ್ತಿತ್ವ ರೂಪಿಸುತ್ತದೆ ಎಂದ ಕೂಡಲೇ ಅಪೌರುಷೇಯ (ಮಾನವೇತರ) ಮೂಲದ ಧರ್ಮ, ದೇವರು ಇಂತಹ ಪರಿಕಲ್ಪನೆಗಳಿಗೆ ಇತಿಹಾಸದೊಳಗೆ ಸ್ಥಳ ದೊರಕಿಸುವುದು ಕಷ್ಟ.

ಹಾಗಾದಾಗ ವೇದ-ಪುರಾಣ-ದರ್ಶನಗಳಲ್ಲಿ ತಮ್ಮ ಅಸ್ತಿತ್ವದ ವಿವರಣೆ ಹುಡುಕುವವರು ಏನು ಮಾಡಬೇಕು? ಎರಡನೆಯದಾಗಿ, ಐತಿಹಾಸಿಕ ಬದಲಾವಣೆಯ ವಿವರಣೆ ಹೆಚ್ಚಾಗಿ ಸಂಘರ್ಷಗಳ ಮೂಲಕವೇ ಆಗುತ್ತದೆ. ಹಾಗಾಗಿಯೇ ಬುದ್ಧ ಇಲ್ಲವೇ ಬಸವರ ಚಿಂತನೆಗಳನ್ನು ಘರ್ಷಣೆಗಳ ಚೌಕಟ್ಟಿನಲ್ಲಿ ಎಡಪಂಥೀಯರು ನೋಡುತ್ತಾರೆ. ಭಾರತೀಯ ಇತಿಹಾಸವನ್ನು ಸೌಹಾರ್ದದ ಚೌಕಟ್ಟಿನಲ್ಲಿಯೇ ನೋಡಬೇಕು.

ಘರ್ಷಣೆ ಏನಿದ್ದರೂ ಮುಸ್ಲಿಮರೊಡನೆ ಮಾತ್ರ ಎನ್ನುವ ಬಲಪಂಥೀಯರಿಗೆ ಇದು ಸಹಿಸಲಾಗದ ವಿಚಾರ. ಹಾಗಾಗಿಯೇ ಸಾಮಾಜಿಕ ಸಂಘರ್ಷಗಳ ಬಗ್ಗೆ, ಜಾತಿ ವ್ಯವಸ್ಥೆಯ ಬಗೆಗಿನ ಬರವಣಿಗೆಗಳನ್ನು ಸಂಶಯದಿಂದ, ಮುಜುಗರದಿಂದ ಬಲಪಂಥೀಯರು ನೋಡುತ್ತಿದ್ದಾರೆ. ಈ ಬಗೆಯ ಚಿಂತನೆಯನ್ನೇ ಅವರು ಇತಿಹಾಸದ ತಿರುಚುವಿಕೆ ಎನ್ನುತ್ತಿರುವುದು.

ಇಷ್ಟಾದರೂ ನನ್ನ ತಲೆಮಾರಿನವರು ಎಡಪಂಥೀಯ ಇತಿಹಾಸದ ಮಾದರಿಗಳ ಮಿತಿಗಳನ್ನೂ ಸ್ಪಷ್ಟವಾಗಿ ಗುರುತಿಸಲು ಆರಂಭಿಸಿದ್ದೆವು. ಹಾಗಾಗಿಯೇ ಸಂಸ್ಕೃತ ಮತ್ತು ದೇಶಿ ಭಾಷೆಗಳಲ್ಲಿರುವ ಭಾರತೀಯ ಬೌದ್ಧಿಕ ಪರಂಪರೆಗಳ ಅಧ್ಯಯನ, ಭಕ್ತಿ ಸಂಪ್ರದಾಯಗಳ ಸಾಮಾಜಿಕ, ಸಾಹಿತ್ಯಿಕ ಆಯಾಮಗಳು, ಭಾರತೀಯ ಸಮಾಜದ ಪ್ಲೂರಲಿಸಮ್ನ ಸ್ವರೂಪದ ಚರ್ಚೆ ಇತ್ಯಾದಿ ವಿಚಾರಗಳನ್ನು ಅನ್ವೇಷಿಸಲು ಹೊಸ ಬೌದ್ಧಿಕ ಚೌಕಟ್ಟುಗಳನ್ನು ಹುಡುಕಲಾರಂಭಿಸಿದ್ದೆವು. ಈ ಬಗೆಯ ಹುಡುಕಾಟ ಗಂಭೀರವಾಗಿ ಬಲಪಂಥೀಯರಿಂದ ಮಾಡಲಾಗುತ್ತಿಲ್ಲ. ಇದಕ್ಕೆ ಕಾರಣ ಅವರ ಸೀಮಿತ ಬೌದ್ಧಿಕ ಆಸಕ್ತಿಗಳು ಮತ್ತು ತಾವು ಬಲಿಪಶುಗಳಾಗಿದ್ದೇವೆ ಎಂಬ ಮನೋಭಾವ.

ಕಡೆ ಮಾತು: ಈ ಚರ್ಚೆಗೆ ಸ್ಥಳೀಯ ಆಯಾಮವೊಂದಿದೆ. ದನಿನೊ ಅವರ ಮನವಿ ಪತ್ರಕ್ಕೆ ಸಹಿ ಹಾಕಿರುವವರಲ್ಲಿ ಬೆಂಗಳೂರು ಸಾಹಿತ್ಯ ಹಬ್ಬದ ಸಂಘಟಕರಲ್ಲೊಬ್ಬರಾದ ವಿಕ್ರಮ್ ಸಂಪತ್ ಇದ್ದಾರೆ. ಪ್ರಶಸ್ತಿ ವಾಪಸು ನೀಡಿದ ಬರಹಗಾರರ ಬಗ್ಗೆ ಅವರ ನಿಲುವು ವಿವಾದಕ್ಕೊಳಗಾಗಿದೆ.

ತನಗಿಂತ ಬೆಂಗಳೂರು ಸಾಹಿತ್ಯ ಹಬ್ಬ ಮುಖ್ಯ, ಅದನ್ನು ಉಳಿಸಲು ತಾನು ಹೊರಬರುವುದಾಗಿ ಸಂಪತ್ ಉದಾರವಾಗಿಯೇ ಹೇಳಿದ್ದಾರೆ. ಆದರೆ ಶೋಚನೀಯ ವಿಚಾರವೆಂದರೆ ಅದೇ ಉದಾರತೆಯನ್ನು ತಮ್ಮ ಎದುರಾಳಿಗಳ ನಿಲುವನ್ನು ಅರಿಯುವಲ್ಲಿ ಅವರು ತೋರುತ್ತಿಲ್ಲ. ತಮಗೆ ಸರಿತೋರಿದ ಅಭಿಪ್ರಾಯವನ್ನು ಹೊಂದುವ ಅಥವಾ ಅಭಿವ್ಯಕ್ತಿಸುವ ಸ್ವಾತಂತ್ರ್ಯ ಸಂಪತ್ ಅವರಿಗೆ ಇಲ್ಲ ಎಂದು ಯಾರೂ ಹೇಳುತ್ತಿಲ್ಲ. ಅವರ ಅಭಿಪ್ರಾಯವನ್ನು ಅವರೇ ಸಂಘಟಿಸುತ್ತಿರುವ ವೇದಿಕೆಯಲ್ಲಿ ಚರ್ಚಿಸುವ ಅನಿವಾರ್ಯ, ಆ ಮೂಲಕ ಸಂಪತ್ ಅವರಿಗೆ ಅಧಿಕೃತತೆ ಒದಗಿಸುವ ಅವಶ್ಯಕತೆ ಕನ್ನಡದ ಬರಹಗಾರರಿಗೆ ಇಲ್ಲ.

ಬೆಂಗಳೂರಿನ ಕಡೆಯ ‘ಸೆಂಟ್ರಿಸ್ಟ್’ ಸ್ಥಳವನ್ನು ತಾನು ಬೆಂಗಳೂರು ಸಾಹಿತ್ಯ ಹಬ್ಬದ ಮೂಲಕ ಉಳಿಸುತ್ತಿದ್ದೇನೆ ಎನ್ನುವಾಗ ಸಂಪತ್ ಅವರ ಹಮ್ಮು ಎದ್ದು ಕಾಣುತ್ತದೆ ಮಾತ್ರವಲ್ಲ, ಆ ಬಗೆಯ ನೂರಾರು ಸ್ಥಳಗಳನ್ನು ಬೆಂಗಳೂರಿನಲ್ಲಿ ಮತ್ತು ರಾಜ್ಯದಾದ್ಯಂತ ಪೋಷಿಸಿಕೊಂಡು ಬಂದಿರುವವರಿಗೆ ಅವಮಾನ ಮಾಡಿದಂತಾಗುತ್ತದೆ. ಆರಿಫ್ ರಾಜಾ ಇಲ್ಲದೆ ಬೆಂಗಳೂರು ಸಾಹಿತ್ಯ ಹಬ್ಬ ಅಪೂರ್ಣ. ಆದರೆ ರಾಜಾರಿಗೆ ಅದರಿಂದ ಏನು ಸಿಗುತ್ತದೆ ಎಂಬ ಅನುಮಾನ ನನಗಿದೆ. ನನ್ನ ಅನುಮಾನವನ್ನು ಸಂಪತ್ ಸಹ ಒಂದು ಕ್ಷಣ ಪರಿಗಣಿಸಿದರೆ ಅವರ ಮನಸ್ಸನ್ನು ತುಂಬಿರುವ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.