ಚಳಿಗಾಲದ ಮಧ್ಯಾಹ್ನ. ಕೋಣೆಯೊಳಗೆ ಓರೆಯಾಗಿ ಬೆಳಕಿನ ಕಿರಣವೊಂದು ಬೀಳುತ್ತದೆ. ಚರ್ಚಿನ ಶೋಕಗೀತೆಯ ರಾಗದ ಹಾಗೆ ಭಾರವಾದ ಬೆಳಕು. ಮನಸು ನೋಯುತ್ತದೆ. ಗಾಯದ ಗುರುತಿಲ್ಲ. ಆ ಬೆಳಕು ಒಳಗಿನ ವ್ಯತ್ಯಾಸಗಳನ್ನು ಬೆಳಗುತ್ತದೆ. ಅರ್ಥಗಳು ಇರುವುದು ಆ ವ್ಯತ್ಯಾಸಗಳಲ್ಲೇ... ಅಮೆರಿಕದ ಕವಿ ಎಮಿಲಿ ಡಿಕಿನ್ಸನ್ ಬರೆದ ಕವಿತೆಯೊಂದರ ಸಾಲುಗಳು ಸ್ಥೂಲವಾಗಿ ಹೀಗಿವೆ.

ಅರ್ಥಗಳಿರುವುದು ವ್ಯತ್ಯಾಸದಲ್ಲಿ ಅನ್ನುವುದು ಕವಿಗೆ ಆದ ದರ್ಶನ. ಬೆಳಕಿನ ಓರೆ ಕಿರಣ ಸಾವು-ಬದುಕುಗಳ ವ್ಯತ್ಯಾಸ ಅವಳ ಮನಸ್ಸಿಗೆ ಹೊಳೆಯಿಸಿದೆ.ಅರ್ಥಗಳು ಇರುವುದು ವ್ಯತ್ಯಾಸಗಳಲ್ಲಿ ಅನ್ನುವುದನ್ನು ಬುದ್ಧಿಪೂರ್ವಕವಾಗಿ ತಿಳಿಯಲು, ವಿವರಿಸಲು ಹೊರಟಾಗ ಭಾಷೆ ಅನ್ನುವುದು ಹೇಗೆ ಒಂದು `ರಚನೆ' ಅನ್ನುವುದು ತಿಳಿಯುತ್ತದೆ.

ಹತ್ತೊಂಬತ್ತನೆಯ ಶತಮಾನದಲ್ಲಿ ಭಾಷೆಯನ್ನು ಕುರಿತು ತಿಳಿಯುವುದೆಂದರೆ ಪದಗಳು, ಪದಗಳ ಅರ್ಥ ಹೇಗೆ ಬದಲಾಗುತ್ತ ಬಂದವು ಅನ್ನುವ ಕುತೂಹಲ; ಒಂದೇ ಥರದ ಭಾಷೆಗಳಲ್ಲಿ ಬಳಕೆಯಾಗುವ ಧ್ವನಿಗಳ ಬದಲಾವಣೆಯ ವಿನ್ಯಾಸ ಎಂಥದು ಅನ್ನುವ ಹುಡುಕಾಟ ಇಂಥವೇ ಮುಖ್ಯವಾಗಿದ್ದವು. ಅದನ್ನು `ಫಿಲಾಲಜಿ' ಅನ್ನುತಿದ್ದರು.

ಆದರೆ ಭಾಷೆಯ ಅಧ್ಯಯನಕ್ಕೆ ಸ್ಪಷ್ಟವಾದ ದಿಕ್ಕು ಸಿಕ್ಕಿರಲಿಲ್ಲ. ಇಪ್ಪತ್ತನೆಯ ಶತಮಾನದ ಆರಂಭದಲ್ಲಿ, ವಿಕೊನಂಥವರ ಚಿಂತನೆಗಳ ಕಾರಣದಿಂದ (ನ.18ರ ಸಂಚಿಕೆಯ ಬರಹ ನೋಡಿ) ಭಾಷೆಯನ್ನು ರಚನೆ ಎಂದು ನೋಡುವ ಸಾಧ್ಯತೆ ಹೊಳೆಯಿತು. ಭಾಷೆಯೊಂದು ರಚನೆ ಎಂಬ ತಿಳಿವಳಿಕೆ, `ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ' ತಿಳಿವಳಿಕೆ ಮನುಷ್ಯನ ಚಿಂತನೆಯ ವಿಕಾಸದಲ್ಲಿ ಎಷ್ಟು ಮುಖ್ಯವಾದ ಮಾತೋ ಅಷ್ಟೇ ಮುಖ್ಯವಾದದ್ದು.

ಮೊದಲಿಗೆ ಗಮನಿಸಬೇಕಾದ ಮಾತು ಭಾಷೆ ಅನ್ನುವುದು ತಾತ್ವಿಕವಾದ ಕಲ್ಪನೆ. ಬರಿಯ `ಮರ' ಅನ್ನುವುದು ಜಗತ್ತಿನಲ್ಲಿ ಎಲ್ಲೂ ಇಲ್ಲ. ಇರುವುದೆಲ್ಲ ಮಾವಿನ, ಬೇವಿನ, ಅರಳಿಯ, ತೇಗದ ಇತ್ಯಾದಿ ನಿರ್ದಿಷ್ಟ ಮರಗಳು ಮಾತ್ರ, ಅಲ್ಲವೇ? ಮರ ಅನ್ನುವುದು ತಾತ್ವಿಕ ಕಲ್ಪನೆ. ಹಾಗೆಯೇ ಕನ್ನಡ, ಇಂಗ್ಲಿಷು, ಹಿಂದಿ, ಕಾಶ್ಮೀರಿ, ಇತ್ಯಾದಿ ನಿರ್ದಿಷ್ಟ ನುಡಿಗಳು ಮಾತ್ರ ನಮಗೆ ಜಗತ್ತಿನಲ್ಲಿ ಕಾಣುತ್ತವೆ, ಕೇಳುತ್ತವೆ, ಬರಿಯ ಭಾಷೆ ಅನ್ನುವುದು ತಾತ್ವಿಕ ಕಲ್ಪನೆ.

ಬಹಳ ಸ್ಥೂಲವಾಗಿ `ಅರ್ಥವನ್ನು ಹೊಮ್ಮಿಸುವ, ರಚಿಸುವ, ಅರ್ಥಮಾಡಿಕೊಳ್ಳಲು ಸಹಾಯಮಾಡುವ ನಿಯಮಗಳ ಮೊತ್ತ' ಭಾಷೆ ಅನ್ನಬಹುದು- ಇಂತಿಂಥ ಲಕ್ಷಣ, ಗುಣ, ಸ್ವಭಾವ ಇರುವಂಥವೆಲ್ಲ `ಮರ' ಅಂದುಕೊಳ್ಳುತ್ತೇವಲ್ಲ ಹಾಗೆ. ಕನ್ನಡ ಅನ್ನುವ ಭಾಷೆಯ ನಿಯಮಗಳನ್ನು ಎಲ್ಲರೂ ಒಪ್ಪಿ ಪಾಲಿಸುತ್ತಿರುವುದರಿಂದಲೇ ಒಂದೊಂದು ಪ್ರದೇಶದ, ಒಬ್ಬೊಬ್ಬ ವ್ಯಕ್ತಿಯ ವಿಶಿಷ್ಟ ನುಡಿಗಳೂ, ಅವು ಎಷ್ಟೇ ವಿಶೇಷವಾಗಿದ್ದರೂ ನಮಗೆಲ್ಲ ಅರ್ಥವಾಗುತ್ತದೆ. ಭಾಷಾಶಾಸ್ತ್ರ ಅನ್ನುವುದು ಈ ಅಮೂರ್ತವಾದ ಭಾಷೆಯ ರಚನೆಗಳನ್ನು ಗುರುತಿಸಿ, ವಿವರಿಸಬೇಕು ಅನ್ನುವ ತಿಳಿವಳಿಕೆಯಿಂದ ಹುಟ್ಟಿತು.

2676 ಭಾಷೆಗಳನ್ನು ಗಮನಿಸಿ, 11 ಮುಖ್ಯ ವಿಭಾಗಗಳ ಅಡಿಯಲ್ಲಿ, 144 ರಾಚನಿಕ ಅಂಶಗಳನ್ನು ಹೋಲಿಸಿ, ಈ ಎಲ್ಲ ಭಾಷೆಗಳು ಎಷ್ಟರ ಮಟ್ಟಿಗೆ ಸಮಾನ ಅಂಶಗಳನ್ನು ಹೊಂದಿವೆ, ಎಷ್ಟು ಭಿನ್ನವಾಗಿವೆ ಅನ್ನುವ, 2011ನೆಯ ಇಸವಿಯಲ್ಲಿ ತಯಾರಾದ ಅಟ್ಲಾಸ್ ಸರಣಿಯೊಂದನ್ನು ಠhttp://wals.info/supplement/ ಈ ಜಾಲತಾಣದಲ್ಲಿ ನೋಡಬಹುದು.

ಕೆಲವು ಸ್ವಾರಸ್ಯಗಳನ್ನು ನೋಡಿ: ಸ್ತ್ರೀಲಿಂಗ, ಪುಲ್ಲಿಂಗ ಹೀಗೆ ಲಿಂಗವ್ಯತ್ಯಾಸವನ್ನು ಮಾಡದೇ ಇರುವ 145, ಎರಡು ಲಿಂಗಗಳನ್ನು ಅಳವಡಿಸಿಕೊಂಡಿರುವ 50, ಮೂರುಲಿಂಗಗಳನ್ನು ಹೇಳುವ 26, ನಾಲ್ಕು ಲಿಂಗಗಳನ್ನು ಹೇಳುವ 12, ಐದಕ್ಕಿಂತ ಹೆಚ್ಚು ಲಿಂಗಗಳನ್ನು ಕುರಿತು ನುಡಿಯುವ 24 ಭಾಷೆಗಳು ಇವೆ; ಕನ್ನಡದಲ್ಲಿ `ನಾಯಿ ಬೆಕ್ಕನ್ನು ಓಡಿಸುತ್ತದೆ'; ಇಂಥದೇ ಕರ್ತೃ, ಕರ್ಮ, ಕ್ರಿಯೆ ಅನ್ನುವ ರಚನೆ ಇರುವ 565; ಇಂಗ್ಲಿಷ್‌ನಲ್ಲಿ `ನಾಯಿ ಓಡಿಸುತ್ತದೆ ಬೆಕ್ಕನ್ನು'; ಇಂಥ ಕರ್ತೃ, ಕ್ರಿಯೆ, ಕರ್ಮ ಅನ್ನುವ ರಚನೆ ಇರುವ 488; `ಓಡಿಸುತ್ತದೆ ನಾಯಿ ಬೆಕ್ಕನ್ನು' ಅನ್ನುವಂಥ ರಚನೆಯ 95; `ಓಡಿಸುತ್ತದೆ ಬೆಕ್ಕನ್ನು ನಾಯಿ' ಅನ್ನುವಂಥ ರಚನೆಯ 25; `ಬೆಕ್ಕನ್ನು ಓಡಿಸುತ್ತದೆ ನಾಯಿ' ಅನ್ನುವಂಥ ರಚನೆಯ 11; `ಬೆಕ್ಕನ್ನು ನಾಯಿ ಓಡಿಸುತ್ತದೆ' ಅನ್ನುವಂಥ ರಚನೆಯ 4, ಯಾವುದೇ ನಿರ್ದಿಷ್ಟ ಕ್ರಮವಿಲ್ಲದ 189 ಭಾಷೆಗಳಿವೆ.

ಸಾಮಾನ್ಯವಾಗಿ ಎಲ್ಲ ಭಾಷೆಗಳಲ್ಲೂ ಪದ, ಪದಗಳೊಡನೆ ಸೇರುವ `ಗಳು' ಅಂಥ ಪ್ರತ್ಯಯಗಳು, ಪದಗಳ ಅನುಕ್ರಮ ಮತ್ತು ಉಚ್ಚಾರಣೆಯ ಒತ್ತು ಇವು ಮುಖ್ಯವಾದ ರಾಚನಿಕ ಅಂಶಗಳಾಗಿರುತ್ತವೆ. ಇವೆಲ್ಲ ಅಂಶಗಳೂ ವ್ಯತ್ಯಾಸವನ್ನು ಸೂಚಿಸುವ ಮೂಲಕವೇ ಅರ್ಥವನ್ನು ನಿರ್ಮಿಸುತ್ತವೆ. ರಮ, ರಾಮ, ಮರ ಇಂಥ ಸಾಮಾನ್ಯ ಪದಗಳನ್ನೇ ನೋಡಿ. ರ ಅನ್ನುವ ಧ್ವನಿಯ ವ್ಯತ್ಯಾಸ, ರ ಮತ್ತು ಮ ಧ್ವನಿಗಳ ಸ್ಥಾನ ವ್ಯತ್ಯಾಸದಿಂದಲೇ ಅರ್ಥಗಳೂ ಬೇರೆಯಾಗುತ್ತವೆ. ಭಾಷೆ ಮತ್ತು ಅರ್ಥ ನಿಂತಿರುವುದೇ ವ್ಯತ್ಯಾಸಗಳ ಆಧಾರದ ಮೇಲೆ.

ಹಾಗಿದ್ದರೆ ಪದಗಳಿಗೂ ಅರ್ಥಕ್ಕೂ ಇರುವ ಸಂಬಂಧ ಎಂಥದ್ದು?
ತಾರ್ಕಿಕ ಸಂಬಂಧವಂತೂ ಇಲ್ಲ. ಮರ ಅಂದರೆ ಮರವೇ ಯಾಕೆ ಆಗಬೇಕು? ಕುದುರೆ ಅನ್ನುವ ಪದದ ರೂಪಕ್ಕೂ ವಾಸ್ತವ ಜಗತ್ತಿನಲ್ಲಿರುವ ಕುದುರೆ ಎಂಬ ಪ್ರಾಣಿಗೂ ಯಾವ ಸಂಬಂಧವೂ ಇಲ್ಲ. ಕನ್ನಡವನ್ನು ಬಳಸುವ ಸಮುದಾಯದ ಜನ ಇಂಥ ಧ್ವನಿ ಸಮೂಹಕ್ಕೆ ಇಂಥ ಅರ್ಥ ಎಂದು ಒಪ್ಪಿಕೊಳ್ಳುವುದರಿಂದ ಮರ ಮತ್ತು ಕುದುರೆ ಅಥವ ಯಾವುದೇ ಪದದ ಅರ್ಥಗಳು ನಿರ್ಧಾರವಾಗುತ್ತವೆ.

ಅಂದರೆ ಅರ್ಥ ಅನ್ನುವುದು ಭಾಷೆ ಎಂಬ ವ್ಯವಸ್ಥೆಯ ಒಳಗೆ ಏರ್ಪಡುವ ಸಂಬಂಧಗಳ ವ್ಯತ್ಯಾಸದಿಂದ ಮೂಡುತ್ತದೆ. ಜೊತೆಗೇ ವಾಕ್ಯದಲ್ಲಿ ಒಂದು ಪದದ ಜಾಗದಲ್ಲಿ ಯಾವ ಇನ್ನೊಂದು ಪದ ಬರಬಹುದು, ಯಾವ ಪದದೊಡನೆ ಇನ್ನು ಯಾವ ಪದ ಜೊತೆಯಾಗಬಹುದು ಇಂಥ ಸಂಬಂಧಗಳೂ ಮುಖ್ಯ.

ಭಾಷೆ ಬೇರೆ, ನುಡಿ ಬೇರೆ; ಪದಕ್ಕೂ ಅರ್ಥಕ್ಕೂ ತರ್ಕಬದ್ಧ ಸಂಬಂಧವಿಲ್ಲ; ಭಾಷೆಯ ನಿಯಮಗಳ ಚೌಕಟ್ಟಿನಲ್ಲಿ ಹಲವು ಹಂತಗಳ ವ್ಯತ್ಯಾಸಗಳನ್ನು ಆಧರಿಸಿ ಅರ್ಥದ ನಿರ್ಮಾಣ ನಡೆಯುತ್ತದೆ; ಯಾವುದೇ ಭಾಷಿಕ ಕ್ರಿಯೆಯನ್ನು ಅಧ್ಯಯನ ಮಾಡುವುದಕ್ಕೆ ಭಾಷೆಯು ಒಂದು `ರಚನೆ' ಎಂಬುದನ್ನು ಸ್ವೀಕರಿಸಬೇಕು. ಭಾಷೆಯ ಗುಣಗಳೆಲ್ಲ ಅದರ ರಾಚನಿಕ ಗುಣಗಳೇ ಅನ್ನುವುದನ್ನು ತಿಳಿಯಬೇಕು.

ಈ ರಾಚನಿಕ ಗುಣ ಹೊರತುಪಡಿಸಿದರೆ ಭಾಷೆಯ ಮಿಕ್ಕೆಲ್ಲ ಅಂಶಗಳೂ ಆಕಸ್ಮಿಕ, ಅಂಚಿನ ಸಂಗತಿಗಳು ಅನ್ನುವುದನ್ನು ಆಧುನಿಕ ಕಾಲದಲ್ಲಿ ಮೊದಲು ಪ್ರತಿಪಾದಿಸಿದ್ದು ಸ್ವಿಟ್ಸರ್‌ಲ್ಯಾಂಡಿನ ಭಾಷಾಶಾಸ್ತ್ರಜ್ಞ ಫರ್ಡಿನೆಂಡ್ ಡಿ ಸಸೂರ್ (1857-1913). ಜಿನೀವಾ ವಿಶ್ವವಿದ್ಯಾಲಯದಲ್ಲಿ 1907-11ರ ವರೆಗೆ ಮೂರು ಕೋರ್ಸುಗಳನ್ನು ನಡಸಿದ. ಇವುಗಳ ವಿದ್ಯಾರ್ಥಿ ಟಿಪ್ಪಣಿಗಳನ್ನು ಆಧರಿಸಿ, ಸಂಯೋಜಿಸಿ ಅವನ ಸಹೋದ್ಯೋಗಿಗಳು `ಕೋರ್ಸ್ ಇನ್ ಜನರಲ್ ಲಿಂಗ್ವಿಸ್ಟಿಕ್ಸ್' (1916) ಎಂಬ ಪುಸ್ತಕ ಪ್ರಕಟಿಸಿದರು.

ನಾಯಿ, ಬೆಕ್ಕು, ಮನುಷ್ಯನ ದೇಹ, ಗಿಡ ಮರಗಳು, ಅಣುವಿನ ರಚನೆ, ಸೇತುವೆ, ಕಾರು, ಜಗತ್ತಿನ ಎಲ್ಲ ವಸ್ತುಗಳೂ ತಾವು ನಿರ್ವಹಿಸುವ ಕಾರ್ಯಕ್ಕೆ ತಕ್ಕ ರಚನೆಯನ್ನು ಪಡೆದುಕೊಂಡಿವೆ. ರಚನೆಯನ್ನೂ ವಸ್ತು ಅಥವ ಜೀವದ ಕಾರ್ಯವನ್ನೂ ಬೇರೆ ಮಾಡಲು ಬರುವುದೇ ಇಲ್ಲ.
ಭಾಷೆಯನ್ನು ಕೇವಲ ಹೆಸರುಗಳ ಮೊತ್ತ ಎಂದು ಭಾವಿಸುವುದರಿಂದ ಅದರ ರಾಚನಿಕತೆಯನ್ನು ತಿಳಿಯುವುದು ಕಷ್ಟವಾಗುತ್ತದೆ.

ಭಾಷೆಗೂ ಭಾಷೆಯಾಚೆಗೆ ಸ್ವತಂತ್ರವಾಗಿ ಇರುವುದಕ್ಕೂ ಸಂಬಂಧ ಕಲ್ಪಿಸಿ ವಿವರಿಸುವುದು ತೀರ ಮಿತವಾದ ತಿಳಿವಳಿಕೆಯಾಗುತ್ತದೆ. ಇದರಿಂದ ಭಾಷೆ ವರ್ತಿಸುವ ಬಗೆ ತಿಳಿಯುವುದಿಲ್ಲ. ವಸ್ತುಗಳ, ಘಟನೆಗಳ ಪಟ್ಟಿಯನ್ನು ಮೊದಲೇ ತಯಾರಿಸಿ ಇವಕ್ಕೆ ಪದಗಳನ್ನು ಹುಡುಕಿಕೊಳ್ಳಿ ಎಂದು ನಿಸರ್ಗವೇನೂ ಹೇಳುವುದಿಲ್ಲ. ಮನುಷ್ಯರೇ ಸಾಮೂಹಿಕವಾಗಿ ಯಾವ ಬಗೆಯ ಭಾಷಿಕ ವ್ಯತ್ಯಾಸಗಳು ತಮ್ಮ ವಿನಿಮಯ ವ್ಯವಸ್ಥೆಗೆ ಅಗತ್ಯ ಅನ್ನುವುದನ್ನು ತೀರ್ಮಾನಿಸಿಕೊಳ್ಳುತ್ತಾರೆ. ಅರ್ಥ/ಮೌಲ್ಯ ಹುಟ್ಟುವುದು ಅಂಥ ವ್ಯವಸ್ಥೆಯಿಂದಲೇ.

ಸ್ವರ, ವ್ಯಂಜನ, ಪ್ರತ್ಯಯ ಇತ್ಯಾದಿಗಳೆಲ್ಲ ಪರಿಮಿತ ಸಂಖ್ಯೆಯಲ್ಲಿರುತ್ತವೆ. ಅವನ್ನು ಬಳಸಿಕೊಂಡು ರಚಿಸಬಹುದಾದ ಪದಗಳು ಅಸಂಖ್ಯ ಅನ್ನುವಷ್ಟು ಹೇರಳವಾಗಿದ್ದರೆ, ರಚಿಸಬಹುದಾದ ವಾಕ್ಯಗಳಂತೂ ಅಕ್ಷರಶಃ ಅನಂತ. ಪರಿಮಿತ ಸಾಮಗ್ರಿಯನ್ನು ಬಳಸಿಕೊಂಡು ಅನಂತ ಅರ್ಥಗಳನ್ನು ರಚಿಸಬಲ್ಲ ಭಾಷೆ ಮನುಷ್ಯ ರೂಪಿಸಿಕೊಂಡ ಪ್ರಾಥಮಿಕ ರಚನೆ ಎಂಬ ಸಸೂರ್‌ನ ಪ್ರತಿಪಾದನೆ ಮಾನವಿಕ ಅಧ್ಯಯನಗಳನ್ನೆಲ್ಲ ಪ್ರಭಾವಿಸಿತು.

ವಸ್ತುಗಳ ಸ್ವಭಾವ ಅನ್ನುವುದು ಆಯಾ ವಸ್ತುಗಳಲ್ಲೇ ಇಲ್ಲ, ವಸ್ತುಗಳ ನಡುವೆ ನಾವು ರೂಪಿಸಿಕೊಳ್ಳುವ, ರಚಿಸಿಕೊಳ್ಳುವ ಸಂಬಂಧಗಳಿಂದ ವ್ಯತ್ಯಾಸಗಳಿಂದ ನಿರ್ಧಾರವಾಗುತ್ತದೆ ಅನ್ನುವುದು ಬಲು ಮುಖ್ಯವಾದ ತಾತ್ವಿಕ ಧೋರಣೆಯಾಯಿತು. ಸಾಹಿತ್ಯ ಮೀಮಾಂಸೆ, ಮಾನವಶಾಸ್ತ್ರ, ತತ್ವಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ಇಂಥ ಮಾನವಿಕ ಶಿಸ್ತುಗಳೆಲ್ಲವೂ ರಚನಾವಾದದ ಪ್ರಭಾವಕ್ಕೆ ಒಳಗಾದವು.

ಇದರ ಪರಿಣಾಮವಾಗಿ ಭಾಷೆಯ ರಚನೆ ಅನ್ನುವುದು ಇನ್ನಿತರ ಅರ್ಥನಿರ್ಮಾಣದ ಬಗೆಗಳನ್ನೂ ವಿವರಿಸುವ ರೂಪಕವಾಯಿತು. ಸಿನಿಮಾದ ಯಂತ್ರಭಾಷೆ, ರಂಗಭೂಮಿಯ ಭಾಷೆ, ವಿಜ್ಞಾನದ ಭಾಷೆ, ದೇಹಭಾಷೆ, ಕಲೆಯ ಭಾಷೆ, ಧರ್ಮದ ಭಾಷೆ, ಆಚರಣೆಯ ಭಾಷೆ ಹೀಗೆ ಮನುಷ್ಯ ಬದುಕಿನ ವಿವಿಧ ಅಂಶಗಳನ್ನು ರಾಚನಿಕವಾಗಿ ನೋಡುವ ಪ್ರವೃತ್ತಿ ಬೆಳೆಯಿತು. ಉದಾಹರಣೆಗೆ ಕೆ.ವಿ. ಸುಬ್ಬಣ್ಣನವರು ರಚಿಸಿರುವ ಸಿನಿಮಾದ ಯಂತ್ರಭಾಷೆಯನ್ನು ನೋಡಿ.

ರಶಿಯದ ವಿದ್ವಾಂಸ ರೋಮನ್ ಜಾಕಬ್‌ಸನ್ ಕಾವ್ಯದ ಭಾಷೆಯನ್ನು ರಾಚನಿಕವಾಗಿ ವಿವರಿಸಲು ಯತ್ನಿಸಿದರೆ ಮಾನವಶಾಸ್ತ್ರಜ್ಞ ಕ್ಲಾಡ್ ಲೆವಿ ಸ್ಟ್ರಾಸ್ ಭಾಷೆಯ ಅಧ್ಯಯನದ ರಾಚನಿಕ ಮಾದರಿಯನ್ನು ಸಮಾಜದ ಅಧ್ಯಯನಕ್ಕೆ ಬಳಸಿಕೊಂಡ.

ಜಾಕ್ವೆಸ್ ಲಕಾನ್ ಮನಸ್ಸಿನ ರಚನೆ, ಕನಸುಗಳ ಸ್ವರೂಪವನ್ನು ತಿಳಿಯುವುದಕ್ಕೆ ಭಾಷೆಯನ್ನು ರೂಪಕವಾಗಿ ಬಳಸಿಕೊಂಡ. ಕಾರ್ಲ್‌ಮಾರ್ಕ್ಸ್‌ನ ವಿಶ್ಲೇಷಣೆಯೂ ರಾಚನಿಕ ತತ್ವವನ್ನೇ ಆಧರಿಸಿದ್ದು. ನಮ್ಮ ಕಾಲದ ಮಹಾ ಚಿಂತಕ ನೋಮ್ ಚಾಮ್ಸಕಿ ವ್ಯತ್ಯಾಸಗಳ ಬದಲಿಗೆ ಅನಂತ ವಾಕ್ಯಗಳ ಉತ್ಪತ್ತಿಗೆ ಕಾರಣವಾಗಬಲ್ಲ ವಾಕ್ಯ ರಚನೆಗಳ ಮಾದರಿಗಳ ಶೋಧದಲ್ಲಿ ತೊಡಗಿದ.

ಮನಸ್ಸು-ಭಾಷೆ-ಚಿಂತನೆಗಳ ಸಂಬಂಧವನ್ನು ಪರಿಶೀಲಿಸುವ ಗ್ರಹಿಕೆಯ ಮನೋವಿಜ್ಞಾನವೂ ಬೆಳೆಯಿತು.ಈ ಲೇಖನದ ಮೊದಲಿನಲ್ಲಿ ಉಲ್ಲೇಖಿಸಿದ ಎಮಿಲಿ ಡಿಕಿನ್‌ಸನ್ ವ್ಯತ್ಯಾಸಗಳನ್ನು ಆಧರಿಸಿ ಅರ್ಥಗಳು ಇರುತ್ತವೆ ಅಂದಿದ್ದಳು. ಬಲು ಹಳಬ ಕಾಳಿದಾಸ ವಾಕ್ ಮತ್ತು ಅರ್ಥಗಳು ಬೇರ್ಪಡಿಸಲಾಗದ ಆದಿ ದಂಪತಿ ಪಾರ್ವತಿ ಪರಮೇಶ್ವರರಂತೆ ಎಂದಿದ್ದ. ಕವಿಗಳಿಗೆ `ಹೊಳೆದದ್ದು' ಆಧುನಿಕ ಕಾಲದಲ್ಲಿ ಜಟಿಲವಾದ ಚಿಂತನೆಯಾಗಿ, ತಾತ್ವಿಕ ಪಂಥವಾಗಿ ಬೆಳೆದಿದೆ.

ವ್ಯತ್ಯಾಸದ ಪದರುಗಳು ಎಷ್ಟು, ಯಾವವು? ವಾಕ್ ಮತ್ತು ಅರ್ಥದ ಸಂಬಂಧ/ವಿರೋಧ ಯಾವ ಯಾವ ಪಾತಳಿಗಳಲ್ಲಿ ಅನ್ನುವ ಅನ್ವೇಷಣೆ ಇಪ್ಪತ್ತನೆಯ ಶತಮಾನದ ಮುಖ್ಯ ಆಸಕ್ತಿಯಾಗಿತ್ತು.
ಮನುಷ್ಯ ಮನಸ್ಸು ರಚಿಸಿಕೊಂಡ ಭಾಷೆಯ ಮೂಲಕ ಸತ್ಯವನ್ನು ಕಾಣುವುದಕ್ಕೆ ಆಗುತ್ತದೆಯೇ? ಇದು ಬಹಳ ಹಳೆಯ ತಾತ್ವಿಕ ಪ್ರಶ್ನೆ. ನಮ್ಮ ನಿಮ್ಮ ದಿನ ನಿತ್ಯದ ಭಾಷಿಕ ವ್ಯವಹಾರದ ಪಾತಳಿಯದ್ದಲ್ಲ. ಆದರೆ ಅದು ಮುಖ್ಯ ಪ್ರಶ್ನೆಯೇ ಹೌದು. ಅನುಭಾವಿಗಳು ಮತ್ತು ಬೌದ್ಧ ಚಿಂತಕರು ಈ ಪ್ರಶ್ನೆಯನ್ನು ಎದುರಿಸಿದ ರೀತಿಯನ್ನು ಮುಂದೆ ನೋಡೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.