ವ್ಯತ್ಯಾಸಗಳು ಎಷ್ಟೂ ಇರಬಹುದು; ವೈವಿಧ್ಯ ಅನಂತವಾಗಿರಬಹುದು, ಆದರೂ `ಮನುಷ್ಯ' ಮಾತ್ರ ಒಬ್ಬನೇ. ಹಾಗೆಯೇ ನುಡಿಗಳ ವೈವಿಧ್ಯ ಅಪಾರವಾಗಿದ್ದರೂ, ಒಂದೊಂದು ನುಡಿಯಲ್ಲೂ ರಚಿಸಬಹುದಾದ ವಾಕ್ಯಗಳ ಸಂಖ್ಯೆ ಅನಂತವಾಗಿದ್ದರೂ ಅವೆಲ್ಲ ಮೇಲುನೋಟಕ್ಕೆ ಕಾಣುವ ವಿಭಿನ್ನ ರಚನೆಗಳು;

ಈ ರಚನೆಗಳ ಆಳದ ವಿನ್ಯಾಸ ಮಾತ್ರ ಒಂದೇ; `ಭಾಷೆ' ಎಂಬ ಸಾಮರ್ಥ್ಯ ಒಂದೇ; ಅದು ಕಲಿಕೆಯಲ್ಲ, ಅನುಕರಣೆಯಲ್ಲ, ಅಭ್ಯಾಸವಲ್ಲ, ಇತರ ಮನುಷ್ಯ ಸಹಜ ಸಾಮರ್ಥ್ಯಗಳ ಹಾಗೆ ಹುಟ್ಟಿನಿಂದಲೇ ಬಂದದ್ದು.

ಈ ಸಾಮರ್ಥ್ಯದ ರೂಪ ಲಕ್ಷಣಗಳನ್ನು ಅರಿತರೆ ಮನುಷ್ಯನ ಮನಸಿನ ಸ್ವರೂಪ, ಮಿದುಳಿನ ಕಾರ್ಯವಿಧಾನ ಅರಿಯಲು ಸಾಧ್ಯವಾದೀತು. ಮನುಷ್ಯ ಭಾಷೆಯ ನಿಯಮಗಳನ್ನು ವಿವರಿಸಬಲ್ಲ ವಿಶ್ವಾತ್ಮಕ ವ್ಯಾಕರಣ ಎಂಬ ಸ್ಥಿತಿಯನ್ನು ತಿಳಿಯಲು ಯತ್ನಿಸುವುದೇ ಭಾಷೆಯನ್ನು ಕುರಿತು ನಾವು ಪಡೆಯಬಹುದಾದ ಜ್ಞಾನ.

ಇವು ತೀರ ಅಂದರೆ ತೀರ ಸ್ಥೂಲವಾಗಿ ಅವ್ರಾಮ್ ನೋಮ್ ಚಾಮ್ಸಕಿಯ ಪ್ರತಿಪಾದನೆಗಳು. ಡಿಸೆಂಬರ್ 7, 1928ರಂದು ಈಸ್ಟ್ ಓಕ್ ಲೇನ್‌ನಲ್ಲಿ ಹುಟ್ಟಿ ಅಮೆರಿಕೆಯ ಮೆಸಾಚುಸೆಟ್ಸ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐವತ್ತು ವರ್ಷಗಳ ಕಾಲ ಪ್ರಾಧ್ಯಾಪಕ ವೃತ್ತಿ ನಡೆಸಿದ ಚಾಮ್ಸಕಿ ಇಪ್ಪತ್ತನೆಯ ಶತಮಾನದ ಅತಿ ಪ್ರಖ್ಯಾತ ವಿದ್ವಾಂಸ;

ಭಾಷಾಶಾಸ್ತ್ರ, ತತ್ವಶಾಸ್ತ್ರ, ಕಾಗ್ನಿಟಿವ್ ಸೈನ್ಸ್, ಇವು ಅವನ ಆಸಕ್ತಿಗಳ ಒಂದು ಮುಖವಾದರೆ ರಾಜಕೀಯ ವಿಮರ್ಶೆ, ಅಮೆರಿಕದ ಪ್ರಭುತ್ವದ ಕಟು ವಿಮರ್ಶೆ, ರಾಜಕೀಯ ಆಕ್ಟಿವಿಸಂ ಇವು ಅಷ್ಟೇ ಮುಖ್ಯವಾದ ಅವನ ವ್ಯಕ್ತಿತ್ವದ ಇತರ ಆಯಾಮಗಳು.

ಭಾಷೆಯನ್ನು ಕುರಿತು ಅವನ ಪ್ರತಿಪಾದನೆಗಳನ್ನು ಸರಿಯಾಗಿ ವಿವರಿಸಲು ಇಡೀ ಒಂದು ಪುಸ್ತಕವನ್ನೇ ಬರೆಯಬೇಕಾದೀತು. ಅವನ ಚಿಂತನೆಗಳ ತೀರ ಸ್ಥೂಲ ಪರಿಚಯ ಮಾತ್ರ ಈ ಅಂಕಣದಲ್ಲಿ ಸಾಧ್ಯ.
ಭಾಷೆಯ ಬಗ್ಗೆ ಅಧ್ಯಯನ ಮಾಡುವ ಕುತೂಹಲ ಯಾಕಿರಬೇಕು? ಭಾಷೆಯನ್ನು ಕುರಿತು ತಿಳಿಯುವುದೆಂದರೆ ಮನುಷ್ಯ ಮನಸಿನ ಮೂಲಕ ವ್ಯಕ್ತವಾಗುವ ಮನುಷ್ಯ ಸ್ವಭಾವವನ್ನೇ ಅಧ್ಯಯನ ಮಾಡುವ ಕೆಲಸ.

1957ರಲ್ಲಿ ಫ್ರೆಡರಿಕ್ ಸ್ಕಿನರ್ ಎಂಬ ಮನಶ್ಶಾಸ್ತ್ರಜ್ಞ (1904-1990) ಭಾಷೆಯನ್ನು `ಶಾಬ್ದಿಕ ವರ್ತನೆ' ಎಂದು ವಿವರಿಸಿದ್ದ. ಸುತ್ತಲ ಜನರ ಪ್ರಚೋದನೆ, ಅವರ ವರ್ತನೆಯ ಅನುಕರಣೆ ಇವುಗಳ ಮೂಲಕ ಯಾವ ಬಗೆಯ ಮಾತಿಗೆ ಯಾವ ಪ್ರತಿಫಲ ದೊರೆಯುತ್ತದೆ ಅನ್ನುವುದನ್ನು ಮಗು ಕ್ರಮೇಣ ಕಲಿಯುತ್ತದೆ. ಮನುಷ್ಯನ ಮಾತು ಅಂದರೆ ಪ್ರಚೋದನೆ-ಪ್ರತಿಫಲಗಳ ಸರಣಿಯನ್ನು ಅಭ್ಯಾಸದ ಮೂಲಕ ಅಳವಡಿಸಿಕೊಳ್ಳುವ ವರ್ತನೆಯ ವಿಧಾನ ಅನ್ನುವುದು ಸ್ಕಿನರ್‌ನ ವಿವರಣೆ.

ಮಕ್ಕಳು ತಾವು ಕೇಳುವ ವಾಕ್ಯಗಳ ಮಾದರಿಯನ್ನು ಮನಸ್ಸಿನಲ್ಲಿ ಉಳಿಸಿಕೊಂಡು ಅಂಥವೇ ಇತರ ವಾಕ್ಯಗಳನ್ನು ಸೃಷ್ಟಿಸುತ್ತಾರೆ ಎಂದು ಸಾದೃಶ್ಯಗಳ ಮೂಲಕ ಭಾಷಿಕ ಕಲಿಕೆ ನಡೆಯುತ್ತದೆ ಅನ್ನುವ ವಾದವೂ ಇತ್ತು.

ಆದರೆ ನೋಡಿ. ನಾವು ದಿನವೂ ಆಡುವ ಎಷ್ಟೋ ವಾಕ್ಯಗಳನ್ನು ಜಗತ್ತಿನಲ್ಲಿ ಎಂದೂ ಯಾರೂ ಆಡಿರುವುದಿಲ್ಲ, ಕೇಳಿರುವುದಿಲ್ಲ. ಆದರೂ ಅವನ್ನೆಲ್ಲ ಆಡುತ್ತೇವೆ, ಕೇಳಿ ಅರ್ಥಮಾಡಿಕೊಳ್ಳುತ್ತೇವೆ. ನಮ್ಮ ಮನೆಯ ಎದುರಿಗೆ ಒಂದು ನೀಲಗಿರಿ ಮರ ಇದೆ. ನಮ್ಮ ಸಮರ್ಥನಿಗೆ ಅವರಮ್ಮ ದಿನವೂ ಆಫೀಸಿಗೆ ಹೋಗುವುದು ಇಷ್ಟವಾಗುವುದಿಲ್ಲ.

`ಮಮ್ಮಿ, ನಿಮ್ಮ ರಾಜಿ ಬಾಸ್ ಆಫೀಸಿಗೆ ಕರೆಯುವುದಕ್ಕೆ ಬಂದಾಗ ಮರ ಹತ್ತಿ ಕೂತುಕೊಂಡು ಬಿಡು. ನೀನು ಇಲ್ಲ ಅಂತ ಹೊರಟು ಹೋಗ್ತಾರೆ. ಆಮೇಲೆ ಇಳಿದು ಬಂದು ಬಿಡು, ಆಟ ಆಡಣ' ಅಂದ ಒಂದು ದಿನ. ಅವನು ಎಲ್ಲೂ ಎಂದೂ ಕೇಳಿರದ ವಾಕ್ಯ. ತಪ್ಪಿಲ್ಲದೆ ರಚನೆ ಮಾಡಿದ್ದ. ಹಾಗೆಯೇ ಹೊಸ ವಾಕ್ಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿಯೂ ಅವನಿಗೆ ಇದೆ.

ಹೊಸ ವಾಕ್ಯವನ್ನು ತಪ್ಪಿಲ್ಲದೆ ರಚನೆ ಮಾಡುವ ಶಕ್ತಿಯೇ `ಸೃಜನಶೀಲತೆ', ಅದಕ್ಕೆ ಕಾರಣವಾಗುವುದು ಭಾಷೆಯಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವುದನ್ನು ಗ್ರಹಿಸುವ `ಸಾಮರ್ಥ್ಯ'. ಅನುಕರಣೆಯ ಮೂಲಕ ಭಾಷೆ ಅನ್ನುವುದಾದರೆ ಹೊಸ ವಾಕ್ಯಗಳ ಸೃಷ್ಟಿಯೇ ಅಸಾಧ್ಯ. ಸಾದೃಶ್ಯಗಳ ಮೂಲಕ ಭಾಷೆಯನ್ನು ಕಲಿಯುತ್ತೇವೆ ಅನ್ನುವುದಾದರೆ ನಮ್ಮ ಮಿದುಳಿನಲ್ಲಿ ವಾಕ್ಯಗಳ ಮಾದರಿಗಳು ಇವೆ ಅಂದುಕೊಳ್ಳಬೇಕಾಗುತ್ತದೆ. ಇವೆರಡೂ ಅಸಾಧ್ಯ.

ಅಂದಮೇಲೆ `ಅರ್ಥ'ಗಳನ್ನು ಸೃಷ್ಟಿಸುವ ನಿಯಮಗಳು, ಮನುಷ್ಯನ ಇತರ ಸಾಮರ್ಥ್ಯಗಳಂತೆಯೇ ಹುಟ್ಟಿನಿಂದಲೇ ಬಂದಿರಬಹುದು. ಈ ನಿಯಮಗಳು ಮಿದುಳಿನಲ್ಲಿ ಅಂತರ್ಗತವಾಗಿರುತ್ತವೆ. ಇವುಗಳ ಆಧಾರದ ಮೇಲೆಯೇ ಮಗು ತನ್ನ ಸುತ್ತಲಿನ ನಿರ್ದಿಷ್ಟ ನುಡಿಯನ್ನು ಸಂಪಾದಿಸಿಕೊಂಡು ತನ್ನದಾಗಿಸಿಕೊಳ್ಳುತ್ತದೆ.

ಚೆಸ್ ಆಟದ ಮೂಲ ನಿಯಮಗಳು ಮತ್ತು ನಿರ್ದಿಷ್ಟ ಚೆಸ್ ಆಟಕ್ಕೆ ಈ ಸಂಬಂಧವನ್ನು ಹೋಲಿಸಬಹುದು. ಚೆಸ್ ಆಟದಲ್ಲಿ ಒಂದೊಂದು ಕಾಯಿಯ ನಡೆ ಹೇಗೆ ಎಂಬ ನಿಯಮಗಳು ಕೆಲವೇ, ಅವುಗಳ ಆಧಾರದ ಮೇಲೆ ನಡೆಯುವ ಒಂದೊಂದು ಚೆಸ್ ಆಟವೂ ವಿಶಿಷ್ಟ, ಅನನ್ಯ.

ಅಂತೆಯೇ ಮಗು ಭಾಷಿಕ ರಚನೆಯ ಮೂಲ ತತ್ವಗಳ ಜ್ಞಾನವನ್ನು ಹುಟ್ಟಿನಿಂದಲೇ ಪಡೆದು ಬಂದಿರುತ್ತದೆ. ಯಾವ ಬಗೆಯ ರಚನೆ, ಯಾವ ರಚನೆ ತಪ್ಪು ಅನ್ನುವುದನ್ನು ತನ್ನ ಸುತ್ತಲ ನುಡಿಯ, ಮನುಷ್ಯರ, ಪರಿಸರದ ಮೂಲಕ, ಅದಕ್ಕೆ ತಕ್ಕ ಹಾಗೆ ಬಳಸಲು ಕಲಿಯುತ್ತದೆ.

ಯಾವುದೇ ನಿರ್ದಿಷ್ಟ ನುಡಿಯಲ್ಲಿ ನಮಗೆ ಎದುರಾಗುವ ವಾಕ್ಯರಚನೆಗಳೆಲ್ಲ ಮೇಲ್ಪರದವು. ಅವುಗಳ ಆಳದ ರಚನೆ `ಭಾಷೆ'ಯ ಮೂಲ ತತ್ವಗಳನ್ನು, ನಿಯಮಗಳನ್ನು ಆಧರಿಸಿದವು. ನುಡಿ ವೈವಿಧ್ಯ ಇರಬಹುದು, ಆದರೆ ಭಾಷೆ ಮಾತ್ರ ಮನುಷ್ಯರಿಗೆಲ್ಲ ಒಂದೇ. ತನ್ನ ಸುತ್ತಲ ನುಡಿಗೆ ಅನುಗುಣವಾಗಿ ಸರಿ ತಪ್ಪುಗಳನ್ನು ಗುರುತಿಸಿಕೊಳ್ಳುವುದನ್ನೆ ಭಾಷೆಯ ಕಲಿಕೆ ಅನ್ನುತ್ತೇವೆಯೋ ಏನೋ.

ಮಗು ಬೆಳೆಯುವ ವಯಸ್ಸಿನಲ್ಲಿ ಅದಕ್ಕೆ ಸಹಜ ನುಡಿಗಳ ವಾತಾವರಣ ಕಲ್ಪಿಸಿದರೆ ಅದು ಗ್ರಹಿಸಬಹುದಾದ, ಬಳಸಬಹುದಾದ ನುಡಿಗಳೂ ಹೆಚ್ಚಾಗುತ್ತವೆ, ವೈವಿಧ್ಯಮಯವಾಗುತ್ತವೆ.
ರಾಚನಿಕ ವಿಶ್ಲೇಷಣೆ ನಿರ್ದಿಷ್ಟ ನುಡಿಯೊಳಗಿನ, ಭಾಷೆಗಳ ನಡುವಿನ `ವ್ಯತ್ಯಾಸ'ಗಳಿಗೆ ಪ್ರಾಮುಖ್ಯ ನೀಡುವ ಧೋರಣೆಯದು.

ಅದಕ್ಕಿಂತ ಭಿನ್ನವಾಗಿ ಮನುಷ್ಯ ಭಾಷೆಯಲ್ಲಿರುವ ಅರ್ಥನಿರ್ಮಾಣ ಸಾಮರ್ಥ್ಯವನ್ನು ನಿಯಂತ್ರಿಸುವ ಮೂಲ ನಿಯಮಗಳನ್ನು ಕಂಡುಕೊಳ್ಳುವುದು `ವ್ಯಾಕರಣ'ದ ಉದ್ದೇಶವಾಗಬೇಕು ಎಂದ ಚಾಮ್ಸಕಿ. ನಿರ್ದಿಷ್ಟ ವಾಕ್ಯವೊಂದರ ವಿವಿಧ ಅಂಗಗಳಿಗೆ ಹೆಸರಿಡುವ, ಅವುಗಳ ಸಂಬಂಧವನ್ನು ವಿವರಿಸುವ ವ್ಯಾಕರಣಕ್ಕಿಂತ, ವಾಕ್ಯದ ನುಡಿ-ಕಟ್ಟುಗಳ ರಚನೆಯನ್ನು ವಿವರಿಸುವ ವ್ಯಾಕರಣಕ್ಕಿಂತ ಭಿನ್ನವಾದ ವ್ಯಾಕರಣವನ್ನು ಚಾಮ್ಸಕಿ ಕಲ್ಪಿಸಿಕೊಂಡ. ಅದನ್ನು ಉತ್ಪಾದಕ ವ್ಯಾಕರಣವೆಂದು ಕರೆದ.

ಪರಿಮಿತವಾದ ಕೆಲವೇ ಆಳರಚನೆಯ ವಿನ್ಯಾಸಗಳು ಹೇಗೆ ಅಸಂಖ್ಯ ವಾಕ್ಯಗಳ ಉತ್ಪಾದನೆಗೆ ಕಾರಣವಾಗುತ್ತವೆ ಅನ್ನುವುದನ್ನು ಅರಿಯುವ, ವಿವರಿಸುವ ಪ್ರಯತ್ನದಲ್ಲಿ ತೊಡಗಿದ.
ನಾವು ಸಾಮಾನ್ಯವಾಗಿ ವ್ಯಾಕರಣವೆಂದು ಕರೆಯುತ್ತೇವಲ್ಲ ಅದು ಈಗಾಗಲೇ ಭಾಷೆಯನ್ನು ಬಳಸಬಲ್ಲವರನ್ನು ಉದ್ದೇಶಿಸಿ ರಚಿಸಿದ್ದು.

ಭಾಷೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಅನ್ನುವ ವಿವರಣೆಯನ್ನು ನೀಡುವುದು ಸಾಮಾನ್ಯವಾಗಿ ವ್ಯಾಕರಣಗಳ ಉದ್ದೇಶ. ಆದರೆ ಚಾಮ್‌ಸ್ಕಿ ತಿಳಿಯಲು ಯತ್ನಿಸಿದ್ದು ಮನುಷ್ಯ ಮನಸ್ಸು, ಮನುಷ್ಯ ಮಿದುಳು ಹೇಗೆ ನಿರ್ದಿಷ್ಟ ಭಾಷೆಯೊಂದನ್ನು ನುಡಿಯುತ್ತದೆ, ಅರ್ಥಮಾಡಿಕೊಳ್ಳುತ್ತದೆ ಎಂಬ ಪ್ರಶ್ನೆಯನ್ನು. ಅವನು ಪ್ರತಿಪಾದಿಸಿದ ವಿಶ್ವಾತ್ಮಕ ವ್ಯಾಕರಣ ನಾವು ನೀವು ಬಳಸಬಹುದಾದ ರೀತಿಯ ವ್ಯಾಕರಣವಲ್ಲ. ಅದು ತೀರ ತಾತ್ವಿಕವಾದ ಚಿಂತನೆ.

ಅಥವ ಅದನ್ನು ಮನುಷ್ಯನಿಗೆ ಇರುವ ಭಾಷೆಯ ಸಾಮರ್ಥ್ಯದ ಪ್ರಾಥಮಿಕ ಸ್ಥಿತಿ ಎಂದೂ ಕರೆಯಬಹುದು. ಅವನು ಪ್ರತಿಪಾದಿಸಿದ್ದು ಭಾಷೆಯ ಆಳದ ತತ್ವಗಳ ಬಗ್ಗೆ. ಅದನ್ನು ಚಾಮ್ಸಕಿ `ವಿಶ್ವಾತ್ಮಕ ವ್ಯಾಕರಣ' ಎಂದು ಕರೆದ.

ಹದಿಮೂರನೆಯ ಶತಮಾನದಲ್ಲೇ ರೋಜರ್ ಬೇಕನ್ ಎಂಬ ತತ್ವಜ್ಞಾನಿ ಜಗತ್ತಿನ ಎಲ್ಲ ಭಾಷೆಗಳೂ ಸಮಾನವಾದೊಂದು ವ್ಯಾಕರಣವನ್ನು ಆಧರಿಸಿದ್ದು ಎಂದು ಹೇಳಿದ್ದ. ನಮ್ಮಲ್ಲೂ ಸರ್ವಭಾಷಾಮಯೀ ಇತ್ಯಾದಿ ಮಾತುಗಳು ಹೇಳಿಕೆಗಳು ಇವೆ.

ಆದರೆ ಇವು ಸಹೊಳಹು, ಒಳನೋಟಗಳಾಗಿ ಮನಸಿನಲ್ಲಿ ಮಿಂಚಿ ಮಾಯವಾಗುತ್ತವೆ. ಆದರೆ ಚಾಮ್ಸಕಿಯ ಪ್ರತಿಪಾದನೆಗಳು ಮನುಷ್ಯ ಸಮಾನತೆಯಲ್ಲಿ ನಂಬಿಕೆ, ವಿಶ್ವಾಸಗಳನ್ನಿಟ್ಟವರನ್ನು ಮಾತ್ರವಲ್ಲ ಇತರ ಜ್ಞಾನಶಾಖೆಗಳಲ್ಲೂ ವಾಗ್ವಾದಕ್ಕೂ ಬೆಳವಣಿಗೆಗೂ ಕಾರಣವಾಯಿತು.

ಮೊದಲನೆಯದಾಗಿ ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗೂ ಸಾಮಾಜಿಕ ಮಾನವಶಾಸ್ತ್ರದ ಒಂದು ಭಾಗವೆಂದು ಪರಿಗಣಿತವಾಗುತಿದ್ದ ಭಾಷಾಶಾಸ್ತ್ರ ಚಾಮ್ಸಕಿಯ ನಂತರ ಗ್ರಹಿಕೆಯ ಮನೋವಿಜ್ಞಾನ (ಕಾಗ್ನಿಟಿವ್ ಸೈಕಾಲಜಿ)ದತ್ತ ಹೊರಳಿಕೊಂಡಿತು.

ಭಾಷೆಯ ಮೂಲಕ ಮನುಷ್ಯನ ಗ್ರಹಿಕೆಯ ವಿನ್ಯಾಸಗಳನ್ನು, ಆ ವಿನ್ಯಾಸಗಳಿಗೆ ಕಾರಣವೂ ಆಧಾರವೂ ಆಗಿರುವ ಮಿದುಳಿನ ಕಾರ್ಯವಿಧಾನಗಳ ಅಧ್ಯಯನಕ್ಕೆ ಹೊಸದೊಂದು ಗುರಿ ದೊರೆಯಿತು.

ವಾಕ್ಯದ ಆಳವಿನ್ಯಾಸ, ಶ್ರೇಣೀಕರಣ ಇತ್ಯಾದಿಗಳ ಬಗ್ಗೆ ಚಾಮ್ಸಕಿಯ ಪ್ರತಿಪಾದನೆ ಕಂಪ್ಯೂಟರ್ ಲಾಂಗ್ವೆಜ್‌ಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿತು ಎಂದು ಗುರುತಿಸ್ದ್ದಿದಾರೆ. ಮಗುವು ಮಾತೃಭಾಷೆಯನ್ನು ಗಳಿಸಿಕೊಳ್ಳುವ, ದ್ವಿತೀಯ ಭಾಷೆಯನ್ನು ಕಲಿತುಕೊಳ್ಳುವ ವಿಧಾನಗಳ ಬಗ್ಗೆ ಹೊಸ ರೀತಿಯ ಚಿಂತನೆಗಳು ಬೆಳೆಯಲು ಕಾರಣವಾಯಿತು.

ಚಾಮ್ಸಕಿ 1998ರಲ್ಲಿ ಪ್ರಕಟಿಸಿದ ಮ್ಯಾನುಫ್ಯಾಕ್ಚರಿಂಗ್ ಕಂಟೆಂಟ್ ಎಂಬ ಪುಸ್ತಕ ಅಮೆರಿಕದ ಮುಖ್ಯ ವಾಹಿನಿಯ ಸಮೂಹಮಾಧ್ಯಮಗಳ ಹರಿತವಾದ ವಿಶ್ಲೇಷಣೆ. ಅಮೆರಿಕದಂಥ ಪ್ರಜಾಪ್ರಭುತ್ವವಾದಿ ದೇಶ ಅತ್ಯಂತ ಅಹಿಂಸಾತ್ಮಕವಾಗಿಯೇ ಜನರ ಮನಸ್ಸು, ಅಭಿಪ್ರಾಯಗಳನ್ನೆಲ್ಲ ನಿಯಂತ್ರಿಸುತ್ತದೆ ಅನ್ನುವುದನ್ನು ಚಾಮ್ಸಕಿ ತೋರಿಸಿಕೊಟ್ಟಿದ್ದಾನೆ.

`ನಿರಂಕುಶಾಧಿಕಾರದಲ್ಲಿ ಲಾಠಿ ಮಾಡುವ ಕೆಲಸವನ್ನು ಪ್ರಜಾಪ್ರಭುತ್ವದಲ್ಲಿ ಪ್ರಚಾರ ಮಾಡುತ್ತದೆ' ಅನ್ನುವುದು ಅವನ ಸುಪ್ರಸಿದ್ಧ ಹೇಳಿಕೆ. ಅಮೆರಿಕದ ವಿದೇಶಾಂಗ ನೀತಿಗಳ ಕಟು ವಿಮರ್ಶಕ ಚಾಮ್ಸಕಿ. ಜಗತ್ತಿನ ಪ್ರಮುಖ ರಾಷ್ಟ್ರಗಳೇ, ಅವುಗಳ ರಾಜಕೀಯ ಕ್ರಿಯೆಗಳೇ ಭಯೋತ್ಪಾದನೆಯ ಮೂಲ ಸ್ರೋತವೆನ್ನುತ್ತಾ ಆಫ್ಘಾನಿಸ್ತಾನದ ಮೇಲೆ ಅಮೆರಿಕ ನಡೆಸಿದ ಆಕ್ರಮಣ ಭಯೋತ್ಪಾದನೆಯೇ ಹೊರತು ಭಯೋತ್ಪಾದನೆಯ ವಿರುದ್ಧ ನಡೆಸಿದ ಯುದ್ಧವಲ್ಲ ಅನ್ನುತ್ತಾನೆ.

ರಾಜಕೀಯ ಆಕ್ಟಿವಿಸ್ಟ್ ಆಗಿ ಚಾಮ್ಸಕಿಯ ನಿಲುವು, ಪ್ರತಿಪಾದನೆಗಳು ವ್ಯಾಪಕವಾದ ಚರ್ಚೆಗಳಿಗೆ ವಾಗ್ವಾದಗಳಿಗೆ ಕಾರಣವಾಗಿವೆ. ವಿವಿಧ ಜ್ಞಾನಶಾಖೆಗಳನ್ನು ಪ್ರಭಾವಗೊಳಿಸಿದ ವಿದ್ವಾಂಸನೊಬ್ಬ ರಾಜಕೀಯ ಆಕ್ಟಿವಿಸ್ಟನೂ ಆಗಿರುವ ಅಪರೂಪದ ಉದಾಹರಣೆಯನ್ನು ಚಾಮ್ಸಕಿಯಲ್ಲಿ ಕಾಣಬಹುದು. ಇಪ್ಪತ್ತನೆಯ ಶತಮಾನದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಪಟ್ಟಂತೆ ಅತಿ ಹೆಚ್ಚು ಉಲ್ಲೇಖಗೊಂಡ ಹತ್ತು ವಿದ್ವಾಂಸ-ಲೇಖಕರಲ್ಲಿ ಚಾಮ್ಸಕಿ ಒಬ್ಬನು.

ಅರ್ಧ ಗಂಟೆಯಲ್ಲಿ ಬೇಲೂರಿನ ದೇವಸ್ಥಾನವನ್ನೋ ಇಡೀ ಹಂಪಿಯನ್ನೋ ಪರಿಚಯಮಾಡಿಕೊಡುವ ಮಾರ್ಗದರ್ಶಿಯ ಮಾತುಗಳಂಥದ್ದು ಈ ಬರಹ. ಚಾಮ್ಸಕಿಯ ವಿಚಾರಗಳ ಬಗ್ಗೆ ಕನ್ನಡದಲ್ಲೇ ಹೆಚ್ಚಿನ ತಿಳಿವಳಿಕೆ ಪಡೆಯಲು ಬಯಸುವವರು ರವಿಕುಮಾರ್ ಅವರು 2001ರಲ್ಲಿ ಸಂಪಾದಿಸಿ ಪ್ರಕಟಿಸಿರುವ `ಮನುಕುಲದ ಮಾತುಗಾರ ಚಾಮ್ಸಕಿ' ಪುಸ್ತಕವನ್ನು ನೋಡಬಹುದು.

ಇಂಗ್ಲಿಷ್‌ನಲ್ಲಿ 1991ರಲ್ಲಿ ಪ್ರಕಟವಾದ ಜಾನ್ ಲ್ಯಾನ್ಸ್‌ನ ಪುಸ್ತಕ `ಚಾಮ್ಸಕಿ' ಒಳ್ಳೆಯ ಪ್ರವೇಶವನ್ನು ಒದಗಿಸುತ್ತದೆ. ಚಾಮ್ಸಕಿಯ ರಾಜಕೀಯ ಚಿಂತನೆಗಳ ಪ್ರಾತಿನಿಧಿಕ ಸಂಕಲನವನ್ನು 1987ರಲ್ಲಿ ಜೇಮ್ಸಪೆಕ್ ಸಂಪಾದಿಸಿರುವ `ಚಾಮ್ಸಕಿ ರೀಡರ್' ಪುಸ್ತಕದಲ್ಲಿ ಕಾಣಬಹುದು. ಚಾಮ್ಸಕಿಯ ನಿಲುವುಗಳ ಟೀಕೆ, ವಿಮರ್ಶೆಗಳನ್ನು ಪೀಟರ್ ಕಾಲಿಯರ್ 2004ರಲ್ಲಿ ಸಂಪಾದಿಸಿರುವ `ಆಂಟಿ ಚಾಮ್ಸಕಿ' ರೀಡರ್‌ನಲ್ಲಿ ನೋಡಬಹುದು.

http://www.chomsky.info ಚಾಮ್ಸಕಿಯ ಅಧಿಕೃತ ಜಾಲತಾಣದಲ್ಲಿ ಉಪಯುಕ್ತ ಮಾಹಿತಿ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.