ತಮಿಳುನಾಡಿನ ಪೊಲೀಸ್ ಮಹಾನಿರ್ದೇಶಕರ ಪತ್ನಿಗೆ ನಾವು ಸಲ್ಯೂಟ್ ಮಾಡಿದೆವು ಎಂದು ನಾನು ಬರೆದಿದ್ದೆ. ಅದನ್ನು ಓದಿದ ಅನೇಕರು ನನ್ನನ್ನು ಅವರಿಗೇಕೆ ಸಲ್ಯೂಟ್ ಮಾಡಬೇಕು ಎಂದು ಪ್ರಶ್ನಿಸಿದರು.

ಕೆಲವು ಪೊಲೀಸರು ಕೂಡ ಇದೇ ಪ್ರಶ್ನೆ ಕೇಳಿದರು. ಇನ್ನು ಕೆಲವರು ಸಲ್ಯೂಟ್ ಹೊಡೆಯುವುದು ಗುಲಾಮಗಿರಿಯ ಸಂಕೇತವಲ್ಲವೇ ಎಂಬ ಪ್ರಶ್ನೆಯನ್ನೂ ತೇಲಿಬಿಟ್ಟರು.

ಸಲ್ಯೂಟ್ ಹೊಡೆಯುವುದು ಗುಲಾಮಗಿರಿಯ ಸಂಕೇತ ಎಂಬುದು ತಪ್ಪು ಭಾವನೆ. ಅದು ಶಿಸ್ತುಬದ್ಧವಾಗಿ ಗೌರವ ಸೂಚಿಸುವ ರೀತಿ. ಪೊಲೀಸ್, ವಾಯುಪಡೆ, ಭೂಸೇನೆ, ನೌಕಾಪಡೆಯಲ್ಲಿ ಸಲ್ಯೂಟ್ಗೆ ಮೊದಲಿನಿಂದಲೂ ಮಹತ್ವವಿದೆ.

ಸಲ್ಯೂಟ್ ಹೇಗೆ ಹೊಡೆಯುಬೇಕು ಎಂಬುದನ್ನು ಕಲಿಸಿಕೊಡಲೆಂದೇ ತರಬೇತಿಯ ಕೆಲವು ತರಗತಿಗಳನ್ನು ನಿಗದಿಪಡಿಸಿರುತ್ತಾರೆ. ಪೊಲೀಸರು ಹೊಡೆಯುವ ಅತ್ಯುನ್ನತ ಸಲ್ಯೂಟ್ ಎಂದರೆ `ನ್ಯಾಷನಲ್ ಸಲ್ಯೂಟ್~. ರಾಷ್ಟ್ರಧ್ವಜಕ್ಕೆ, ರಾಷ್ಟ್ರಪತಿಗೆ, ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ ಗೌರವ ಸೂಚಿಸಲು `ನ್ಯಾಷನಲ್ ಸಲ್ಯೂಟ್~ ಬಳಕೆಯಲ್ಲಿದೆ.

ಹಿರಿಯ ಅಧಿಕಾರಿಗಳು ಹಾಗೂ ಗೌರವಾನ್ವಿತರಿಗೆ ಮಾಡುವ ಸಲ್ಯೂಟ್ಗೆ ಜನರಲ್ ಸಲ್ಯೂಟ್ ಎನ್ನುತ್ತೇವೆ. ಸಮವಸ್ತ್ರದಲ್ಲಿದ್ದಾಗ ಸಲ್ಯೂಟ್ ಹೊರತುಪಡಿಸಿ ನಮಸ್ಕರಿಸುವುದು ತರವಲ್ಲ. ಬಗ್ಗಿ ನಮಸ್ಕರಿಸುವುದು, ಶಿರಸಾಷ್ಟಾಂಗ ನಮಸ್ಕಾರ ಮಾಡುವುದು, ಎರಡೂ ಕೈಗಳನ್ನು ಜೋಡಿಸಿ ವಂದಿಸುವುದನ್ನು ಮಾಡುವಂತಿಲ್ಲ. 5 ಬೆರಳುಗಳನ್ನು ಸೇರಿಸಿ ತರಬೇತಿಯಲ್ಲಿ ಹೇಳಿಕೊಟ್ಟಂತೆಯೇ ಸಲ್ಯೂಟ್ ಮಾಡಬೇಕು.

ಹಿರಿಯರು ಬಂದಾಗ, ಮಠಾಧಿಪತಿ ಮುಂದೆ ಹೋದರೆ, ರಾಜಕಾರಣಿಗಳು ಬಂದರೆ ಗೌರವ ಸೂಚಿಸಲು ಸಲ್ಯೂಟ್ ಹೊಡೆಯಬೇಕೆ ಹೊರತು ನಮಸ್ಕರಿಸುವಂತಿಲ್ಲ. ಕಿರಿಯ ಅಧಿಕಾರಿಯ ಸಲ್ಯೂಟ್ ಸ್ವೀಕಾರ ಮಾಡುವುದು ಕೂಡ ಸಲ್ಯೂಟ್ ಮೂಲಕವೇ. ಡೊಗ್ಗುಸಲಾಮು, ಬಗ್ಗಿ ಹೊಡೆಯುವ ಸಲಾಮು ಇವೆಲ್ಲ ನಿಷಿದ್ಧ.

ಸಲ್ಯೂಟ್ ವಿಷಯದಲ್ಲಿ ಈಗೀಗ ಶಿಸ್ತು ಸಡಿಲವಾಗುತ್ತಿದೆ. ಮೊದಲು ಯಾವುದೇ ಶ್ರೇಣಿಯ ಕಿರಿಯ ಅಧಿಕಾರಿ ತನಗಿಂತ ಒಂದೇ ಒಂದು ದರ್ಜೆ ಹಿರಿಯ ಎದುರಲ್ಲಿ ಬಂದರೂ ಸಲ್ಯೂಟ್ ಮಾಡುವುದು ರೂಢಿಯಲ್ಲಿತ್ತು. ಪೊಲೀಸ್, ಮಿಲಿಟರಿಯಲ್ಲಿ ಸಂಖ್ಯಾಬಲ ಹೆಚ್ಚಾಯಿತು. ಅಧಿಕಾರಿಗಳ ಕಾರ್ಯವ್ಯಾಪ್ತಿ ಕಡಿಮೆಯಾಯಿತು.

ಬರಬರುತ್ತಾ ಅನೇಕರಿಗೆ ಸಲ್ಯೂಟ್ನ ಮಹತ್ವವೇ ಮರೆತುಹೋಯಿತು. ಶಿರಸ್ತ್ರಾಣ ಇದ್ದಾಗಲಂತೂ ಸಲ್ಯೂಟ್ ಮಾಡಲೇಬೇಕು. ಉಳಿದಂತೆ ಎದೆಯುಬ್ಬಿಸಿ ನಿಂತು ಗೌರವ ಸೂಚಿಸುವುದು ಉಂಟು. ಈಗ ತರಬೇತಿಯಲ್ಲಿ ಕೂಡ ಸಲ್ಯೂಟ್ಗೆ ಮೊದಲಿನಷ್ಟು ಆದ್ಯತೆ ಇಲ್ಲ ಎಂದು ಕೇಳಿದ್ದೇನೆ.

ಸಲ್ಯೂಟ್ಗೆ ಸಂಬಂಧಿಸಿದಂತೆ ಅನೇಕರು ನನ್ನೊಡನೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ನಿವೃತ್ತ ನ್ಯಾಯಮೂರ್ತಿ ಕೋ.ಚೆನ್ನಬಸಪ್ಪನವರು (ಕೋಚೆ) ನನ್ನೊಡನೆ ಕಾನ್ಸ್ಟೇಬಲ್ಗಳ ಬಗ್ಗೆ ತುಂಬಾ ಕಾಳಜಿಯಿಂದ ಮಾತಾಡಿದ್ದಾರೆ.

ಅದರಲ್ಲೂ ಟ್ರಾಫಿಕ್ ಕಾನ್ಸ್ಟೇಬಲ್ಗಳ ಕುರಿತು ಅವರಿಗೆ ಕಾಳಜಿ ತುಸು ಹೆಚ್ಚೇ ಎನ್ನಬಹುದು. ಅವರು ಬೆಂಗಳೂರಿನ ಬಸವೇಶ್ವರ ನಗರದಲ್ಲಿ ವಾಸವಿದ್ದಾಗ ನಿತ್ಯವೂ ಕೋರ್ಟ್ಗೆ ಕಾರಿನಲ್ಲಿ ಹೋಗುತ್ತಿದ್ದರು. ಜಂಕ್ಷನ್ ಒಂದರಲ್ಲಿ ನಿಲ್ಲುತ್ತಿದ್ದ ಟ್ರಾಫಿಕ್ ಕಾನ್ಸ್ಟೇಬಲ್ ಒಬ್ಬರು ಇವರ ಕಾರನ್ನು ಕಂಡೊಡನೆ ಅದನ್ನು ಗುರುತಿಸಿ, ಎಷ್ಟೇ ಟ್ರಾಫಿಕ್ ಜಂಜಡ ಇದ್ದರೂ ಸಲ್ಯೂಟ್ ಹೊಡೆಯುತ್ತಿದ್ದರು. ಕೋಚೆಯವರಿಗೆ ಇದು ಮುಜುಗರ ತಂದಿತು.

ಒಂದು ದಿನ ಆ ಕಾನ್ಸ್ಟೇಬಲ್ ಎಂದಿನಂತೆ ಸಲ್ಯೂಟ್ ಹೊಡೆದರಂತೆ. ಅವತ್ತು ಟ್ರಾಫಿಕ್ ಜಂಜಡವಿರಲಿಲ್ಲವಂತೆ. ಕಾರನ್ನು ಸ್ವಲ್ಪ ಮುಂದೆ ನಿಲ್ಲಿಸುವಂತೆ ಡ್ರೈವರ್ಗೆ ಹೇಳಿದ ಕೋಚೆ, ಆ ಕಾನ್ಸ್ಟೇಬಲ್ಗೆ ಬರಲು ಹೇಳಿದರಂತೆ. `ನೋಡಪ್ಪಾ ನೀನು ನಿನ್ನ ಕರ್ತವ್ಯವನ್ನು ಸರಿಯಾಗಿಯೇ ಮಾಡುತ್ತಿದ್ದೀಯೆ.

ಆದರೆ, ಜನ ಕಚೇರಿಗಳಿಗೆ ಹೋಗುವ ಧಾವಂತದಲ್ಲಿ ಇರುವ ಸಂದರ್ಭದಲ್ಲಿ ಬೇರೆಯವರಿಗೆ ಟ್ರಾಫಿಕ್ ತೊಂದರೆಯಾದರೂ ಪರವಾಗಿಲ್ಲ ಎಂಬಂತೆ ನನಗೆ ಸಲ್ಯೂಟ್ ಹೊಡೆಯುವುದು ಯಾಕೋ ಸರಿಕಾಣುತ್ತಿಲ್ಲ. ಈ ವಿಷಯದಲ್ಲಿ ತುಂಬಾ ಶಿಸ್ತುಬದ್ಧವಾಗಿ ಇರುವುದೂ ಕಷ್ಟ.

ಅದರಿಂದ ನನಗೂ ಮುಜುಗರವಾಗುತ್ತದೆ. ಅದಕ್ಕೇ ಇನ್ನು ಮುಂದೆ ನನಗೆ ನೀನು ಸುಮ್ಮನೆ ನಿಂತಲ್ಲಿಯೇ ಎದೆಯುಬ್ಬಿಸಿ ಗೌರವ ಸೂಚಿಸಿದರೆ ಸಾಕು; ಸಲ್ಯೂಟ್ನ ಅಗತ್ಯವಿಲ್ಲ~ ಎಂದರಂತೆ. ಕೋಚೆ ದೊಡ್ಡ ಮನುಷ್ಯರಾದ್ದರಿಂದ ಸಲ್ಯೂಟ್ನ ಮಹತ್ವ ಹಾಗೂ ಅದನ್ನು ಪಾಲಿಸಲು ಟ್ರಾಫಿಕ್ ಪೊಲೀಸರು ಹೆಣಗಾಡುವ ರೀತಿಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು, ನಿಯಮದಲ್ಲೇ ತುಸು ಸಡಿಲಿಕೆ ಕೊಟ್ಟರು.

ಮುಂದೆ ಆ ಕಾನ್ಸ್ಟೇಬಲ್ ಕೋಚೆ ಹೇಳಿದಂತೆಯೇ ನಡೆದುಕೊಂಡರಂತೆ. ಸಲ್ಯೂಟ್ ಹೊಡೆಯುವ ನಿಯಮವನ್ನು ಅನೂಚಾನವಾಗಿ ಪಾಲಿಸಿಕೊಂಡು ಬಂದಿದ್ದ ಕಾನ್ಸ್ಟೇಬಲ್ಗೆ ಕೋಚೆಯವರ ಮಾನವೀಯ ಮುಖ ಕಂಡು ಅಚ್ಚರಿಯಾಗಿರಬಹುದು.

ಒಮ್ಮೆ ಕೆ.ಆರ್.ಸರ್ಕಲ್ನಲ್ಲಿ ಬಿಗಿ ಬಂದೋಬಸ್ತ್ ಇತ್ತು. ಕೆಲವರು ರಸ್ತೆತಡೆ ಮಾಡುತ್ತಿದ್ದರು. ಅಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸರು ರಸ್ತೆತಡೆ ನಡೆಸುತ್ತಿದ್ದವರನ್ನು ಪಕ್ಕಕ್ಕೆ ಚದುರಿಸುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಅಲ್ಲಿಗೆ ಡಿ.ಜಿ. ಬಂದರು. ಅವರು ಸಲ್ಯೂಟ್ಗೆ ಮಹತ್ವ ಕೊಡುತ್ತಿದ್ದಂಥ ವ್ಯಕ್ತಿ. ಅವರು ಬಂದ ಸಂದರ್ಭದಲ್ಲೇ ದೊಂಬಿ ಶುರುವಾಯಿತು.

ಪೊಲೀಸರ ಕಾರೂ ಸುಗಮವಾಗಿ ಹೋಗಬೇಕು, ಅಲ್ಲಿ ಗಲಭೆಯೂ ಆಗಕೂಡದು ಎಂದು ನಿಗಾ ವಹಿಸಿ ಮೈಯೆಲ್ಲಾ ಕಣ್ಣಾಗಿ ಕೆಲಸ ಮಾಡುತ್ತಿದ್ದವರಲ್ಲಿ ಸಿ.ಕೆ.ಹರಿಸಿಂಗ್ ಎಂಬ ಸಬ್ ಇನ್ಸ್ಪೆಕ್ಟರ್ ಕೂಡ ಇದ್ದರು. ಅವರು ಗಲಭೆಕೋರರನ್ನು ದೂರ ಚದುರಿಸುತ್ತಿದ್ದ ಸಂದರ್ಭದಲ್ಲಿಯೇ ಡಿ.ಜಿ. ವಾಹನ ಅಲ್ಲಿಗೆ ಬಂದಿತು. ಪರಿಸ್ಥಿತಿ ಹೇಗಿದೆ ಎಂದು ಡಿ.ಜಿ. ಕೇಳಿದ ಆ ಗಳಿಗೆಯಲ್ಲಿ ಹರಿಸಿಂಗ್ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಸಲ್ಯೂಟ್ ಹೊಡೆಯುವ ಯೋಚನೆ ಮಾಡುವ ಪರಿಸ್ಥಿತಿಯೇ ಇರಲಿಲ್ಲ. ಹಾಗಾಗಿ ಹರಿಸಿಂಗ್ ಸಲ್ಯೂಟ್ ಹೊಡೆಯಲು ಆಗಲಿಲ್ಲ. ಆ ಡಿ.ಜಿ. ಅದನ್ನೇ ದೊಡ್ಡದು ಮಾಡಿದರು. ಡಿ.ಸಿ.ಪಿಯವರನ್ನು ಕರೆಸಿದರು. `ಈ ಸಬ್ ಇನ್ಸ್ಪೆಕ್ಟರ್ಗೆ ಶಿಸ್ತಿಲ್ಲ. ಸಲ್ಯೂಟ್ ಹೊಡೆಯಬೇಕೆಂಬ ಪ್ರಜ್ಞೆಯಿಲ್ಲ.

ಗುಲ್ಬರ್ಗಕ್ಕೆ ವರ್ಗಾವಣೆ ಮಾಡಿಸಿದರೆ ಶಿಸ್ತಿನ ಪಾಠ ಗೊತ್ತಾಗುತ್ತದೆ~ ಎಂದೆಲ್ಲಾ ಮಾತನಾಡಿದರು. ಆಗ ಡಿ.ಸಿ.ಪಿ ಆ ಸಬ್ ಇನ್ಸ್ಪೆಕ್ಟರ್ ಅಂಥವರಲ್ಲ ಎಂದೂ ಗಲಭೆ ಪರಿಸ್ಥಿತಿಯ ಒತ್ತಡ ದಿಂದಾಗಿ ಸಲ್ಯೂಟ್ ಹೊಡೆಯಲು ಸಾಧ್ಯವಾಗಿಲ್ಲವೆಂದೂ ಮನದಟ್ಟು ಮಾಡಿಸಿದರು. ಡಿ.ಜಿ ಅವರನ್ನು ಸಮಾಧಾನ ಮಾಡುವುದೇ ಆಗ ದೊಡ್ಡ ವಿಷಯವಾಯಿತು.

ಬೆಂಗಳೂರಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಬಂದಿತ್ತು. ಬಹುಶಃ ಇಮ್ರಾನ್ ಖಾನ್ ನಾಯಕತ್ವದ ತಂಡವದು. ಆಗ ಪಾಕಿಸ್ತಾನದವರ ಮೇಲೆ ಹಲ್ಲೆಯಾಗುವ ಸಂಭವ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ಕೊಟ್ಟಿದ್ದರಿಂದ ಕ್ರಿಕೆಟ್ ತಂಡದವರ ಚಟುವಟಿಕೆ ಇರುವ ಕಡೆಯೆಲ್ಲಾ ವಿಶೇಷ ರಕ್ಷಣೆ ನೀಡಲಾಗಿತ್ತು.

ಕೆಲವು ಒಳ್ಳೊಳ್ಳೆಯ ಅಧಿಕಾರಿಗಳನ್ನು ಆಯ್ಕೆ ಮಾಡಿ ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದರು. ನನ್ನ ಓರಗೆಯವರೇ ಆದ ಹಾಲ್ತೊರೆ ರಂಗರಾಜನ್ ಪ್ರಕಾಶ್ ಕೂಡ ಆಗ ಸಬ್ ಇನ್ಸ್ಪೆಕ್ಟರ್ ಆಗಿದ್ದು, ಅವರನ್ನೂ ಈ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಅಯ್ಯಂಗಾರ್ ಕುಟುಂಬ ದವರಾದ ರಂಗರಾಜನ್ ಪ್ರಕಾಶ್ ಶಿಸ್ತಿನ ಪೊಲೀಸ್.

ಅವರದ್ದು ಹೊಂಬಣ್ಣ. ಮೀಸೆ ಕೂಡ ಕೆಂಚಗಿತ್ತು. ಅವರನ್ನು ಕಂಡರೆ ಬ್ರಿಟಿಷ್ ಅಧಿಕಾರಿಯನ್ನು ನೋಡಿದಂತಾಗುತ್ತಿತ್ತು. ಪಾಕಿಸ್ತಾನ ತಂಡ ತಂಗಿದ್ದ ತಾರಾ ಹೋಟೆಲ್ ಆವರಣದಲ್ಲಿ ರಕ್ಷಣೆಯ ಉಸ್ತುವಾರಿಯನ್ನು ಅವರಿಗೆ ವಹಿಸಲಾಗಿತ್ತು.

ಕಟ್ಟುನಿಟ್ಟಾಗಿ ಎಲ್ಲಾ ಸೂಚನೆಗಳನ್ನು ಪಾಲಿಸುತ್ತಿದ್ದ ರಂಗರಾಜನ್ ಪ್ರಕಾಶ್ ನೀಲಿ ಬಣ್ಣದ ಸೂಟ್ ಧರಿಸಿ, ಟೈ ಕಟ್ಟಿಕೊಂಡು ಠಾಕುಠೀಕಾಗಿ ಅಲ್ಲಿನ ವ್ಯವಸ್ಥೆ ಗಮನಿಸುತ್ತಿದ್ದರು. ರಾಜ್ಯದ ಗುಪ್ತಚರ ಇಲಾಖೆ, ಕೇಂದ್ರದ ಗುಪ್ತಚರ ಇಲಾಖೆ ಮೊದಲಾದ ಪ್ರಮುಖ ಭದ್ರತಾ ಪಡೆಯವರೆಲ್ಲಾ ಅಲ್ಲಿ ನಿಗಾ ಇಟ್ಟಿದ್ದರು.

ರಾತ್ರಿ ಪಾಳಿಯಲ್ಲಿ ಕಾರ್ಯನಿರತರಾಗಿದ್ದಾಗ ಸರದಿ ಮೇಲೆ ಅಧಿಕಾರಿಗಳು ಬಂದು ಇವರನ್ನು ಪರಿಸ್ಥಿತಿ ಹೇಗಿದೆ ಎಂದೆಲ್ಲಾ ವಿಚಾರಿಸುವ ವ್ಯವಸ್ಥೆ ಇತ್ತು. ಆ ದಿನ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಬಂದು, `ನೀವೆಲ್ಲಿಂದ ಬಂದಿದ್ದೀರಾ?~ ಎಂದು ಕೇಳಿದರು. `ಎಸ್.ಬಿಯಿಂದ ಬಂದಿದ್ದೇನೆ~ ಎಂದು ಹಾಲ್ತೊರೆ ರಂಗರಾಜನ್ ಹೇಳಿದರು.

ಸ್ಪೆಷಲ್ ಬ್ರ್ಯಾಂಚ್ ಎಂಬುದರ ಸಂಕ್ಷಿಪ್ತ ರೂಪ ಎಸ್.ಬಿ. ಬಂದೋಬಸ್ತ್ ಸಮರ್ಪಕವಾಗಿದೆ ಎಂದು ಆ ಅಧಿಕಾರಿ ಹೇಳಿ ಹೊರಟರು. ಆಮೇಲೆ ಅವರು ಒಳಗೆ ಇದ್ದ ಹಿರಿಯ ಅಧಿಕಾರಿಗಳಿಗೆ, `ಎಸ್.ಬಿಯಿಂದ ಬಂದಿರುವ ರಂಗರಾಜನ್ ಪ್ರಕಾಶ್ ಸರಿಯಾಗಿಯೇ ಬಂದೋಬಸ್ತ್ ಮಾಡಿಸಿದ್ದಾರೆ~ ಎಂದು ಶಹಬ್ಬಾಸ್ಗಿರಿ ಕೊಟ್ಟರು. ಅದನ್ನು ಕೇಳಿದ ಬೆಂಗಳೂರಿನ ಡಿ.ಸಿ.ಪಿ ಒಬ್ಬರು ರಂಗರಾಜನ್ ಇದ್ದಲ್ಲಿಗೆ ಬಂದರು.

ಅವರು ಎಸ್.ಬಿ. ಎಂಬುದನ್ನು ಏನೆಂದು ಗ್ರಹಿಸಿದರೋ ಗೊತ್ತಿಲ್ಲ, ಬಂದವರೇ ಸಲ್ಯೂಟ್ ಹೊಡೆಯಲಾರಂಭಿಸಿದರು. ರಂಗರಾಜನ್ ಪ್ರಕಾಶ್ ಸುಮ್ಮನೆ `ಚೆಸ್ಟ್ಅಪ್~ ಮಾಡಿ, ಸಾವಧಾನದಲ್ಲಿ ನಿಂತರು. ತಮ್ಮ ಕಣ್ಣಿನಲ್ಲೇ ತಾವು ಹಿರಿಯ ಅಧಿಕಾರಿ ಅಲ್ಲ ಎಂದು ಡಿಸಿಪಿಗೆ ಸೂಚನೆ ನೀಡಿದರೂ ಅದು ಅವರಿಗೆ ಅರ್ಥವಾಗಲಿಲ್ಲ.

ಆಮೇಲೆ ಅವರು ಸಬ್ ಇನ್ಸ್ಪೆಕ್ಟರ್ ಎಂಬುದು ಗೊತ್ತಾದದ್ದೇ ಡಿಸಿಪಿ ಪೇಚಾಡಿಕೊಂಡರು. ಹಾಲ್ತೊರೆ ರಂಗರಾಜನ್ ಗತ್ತಿನಿಂದ ಅವರಿಗೆ ಸಲ್ಯೂಟ್ ಸಿಕ್ಕಿತ್ತು!
ಸಮಾಜದ ಯಾವುದೇ ಗೌರವಾನ್ವಿತ ವ್ಯಕ್ತಿಗೆ ಪೊಲೀಸರು ಸಲ್ಯೂಟ್ ಹೊಡೆದರೆ ಅದು ಗುಲಾಮಗಿರಿಯ ಸಂಕೇತವಲ್ಲ; ಮರ್ಯಾದೆ ಸಲ್ಲಿಸುವ ರೀತಿಯಷ್ಟೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.