ಕಳೆದ ಕೆಲವು ಶತಮಾನಗಳ ವಿದ್ಯಮಾನಗಳು ನಮ್ಮ ಮನದಾಳದಲ್ಲಿ ಸಂಘರ್ಷಾತ್ಮಕತೆಯ ಬೀಜಗಳನ್ನು ನೆಟ್ಟುಬಿಟ್ಟಿವೆ. ನಿರಂತರ ಸಂಘರ್ಷದ ಹಿಡಿಗಟ್ಟು-ನುಡಿಗಟ್ಟು-ನಡೆಗಟ್ಟುಗಳು ನಮ್ಮೆಲ್ಲರ ಕನಸು ಮನಸುಗಳನ್ನು ಆವರಿಸಿಬಿಟ್ಟಿವೆ. ನಾವು ಕೊಲ್ಲದಿದ್ದರೆ ನಾವೇ ಕೊಲೆಯಾಗಿಬಿಡುವೆ-ವೆಂಬ ತತ್ವ ನಮ್ಮ ಆಚಾರ-ವಿಚಾರಗಳ ಚಾಲಕಶಕ್ತಿಗಳು. ಕೂಡುಬಾಳಿನ ಸೋಗಿನ ಪ್ರಜಾಪ್ರಭುತ್ವಗಳೂ ಆಧುನಿಕ ಜಗತ್ತಿನಲ್ಲಿ ಎದುರಾಳಿ ಕುರಿತ ಹೆದರಿಕೆಯ ಅಲುಗುತಳಹದಿಯ ಮೇಲೆ ನಿಂತಿವೆ. ಆಧುನಿಕ ಸಂಸ್ಕೃತಿ, ಸಮಾಜರಚನೆ, ವ್ಯಕ್ತಿಗತ ಬದುಕಿನ ವ್ಯವಹಾರಗಳೆಲ್ಲಾ ‘ಹೋರಾಟವೆ ಹಾದಿ’ ಎಂಬ ಅಪ್ರಜ್ಞಾಪೂರ್ವಕ ವಿಶ್ವಾಸದ ಕೈಗೊಂಬೆಗಳಾಗಿವೆ.

ಆಧುನಿಕವೆನ್ನುವ ಜಗತ್ತಿನ ನಿರ್ಣಾಯಕ ಸಿದ್ಧಾಂತಗಳನ್ನೇ ಗಮನಿಸಿದರೆ ಸಾಕು. ಡಾರ್ವಿನ್ನನ ವಿಕಾಸವಾದದ ರೀತ್ಯಾ ಜೀವದ ಅಸ್ತಿತ್ವದ ಮೂಲಕಾರಣ ಸಂಘರ್ಷ. ಪ್ರಾಣಿಜಾತಿಗಳ ನಡುವಿನ ಸಂಘರ್ಷದಲ್ಲಿ ಗೆಲುವೇ ಉಳಿವಿನ ಮರ್ಮ. ಸೋತವಕ್ಕೆ ಸಾವೇ ಕೊನೆ. ಈ ಸಿದ್ಧಾಂತ ರಚನೆಯಾದ ಹೊತ್ತುಗೊತ್ತಿನಲ್ಲಿ ರೂಹುತಾಳಿದ ಪ್ರಧಾನ ಲೋಕದೃಷ್ಟಿಗಳು ಉದಾರವಾದ ಮತ್ತು ಸಮಾಜವಾದ. ಇವೆರಡೂ ಸಂಘರ್ಷವಾದದ ಜೊತೆಗೆ ತಳಕುಹಾಕಿಕೊಂಡಿವೆ. ಮನುಷ್ಯನಿಗೆ ಪ್ರತಿಹಂತದಲ್ಲೂ ನಿಸರ್ಗ ಸವಾಲೊಡ್ಡುತ್ತದೆ. ಆದರೆ ವಿಜ್ಞಾನ, ತಂತ್ರಜ್ಞಾನಗಳು ಒಂದಲ್ಲಾ ಒಂದುದಿನ ನಿಸರ್ಗವನ್ನು ಪರಾಜಿತಗೊಳಿಸಿ, ಎಲ್ಲ ರಹಸ್ಯಗಳನ್ನೂ ಬಗೆದುನೋಡಿ, ಎಲ್ಲ ಕೊರೆಗಳನ್ನೂ ಸರಿಪಡಿಸಿ ಪ್ರಕೃತಿಯನ್ನು ಮನುಷ್ಯನ ಅಧೀನವಾಗಿಸಬಲ್ಲವು. ವಿಜ್ಞಾನದ ವಿಜಯ, ಪ್ರಕೃತಿಯ ಪರಾಜಯ, ಆದರ್ಶ ಮತ್ತು ಸುಖೀಜೀವನದ ಮುನ್ನುಡಿ. ಪರಜನಾಂಗಗಳ, ಪರಧರ್ಮೀಯರ ದಮನ ವಸಾಹತು-ಸಾಮ್ರಾಜ್ಯವಾದಗಳ ಮೂಲಮಂತ್ರ. ವರ್ಗಹೋರಾಟ ಮಾರ್ಕ್ಸ್ ವಾದದ ಬೀಜಾಕ್ಷರ. ಅನ್ಯರ ಅಳಿವು ಫ್ಯಾಸಿಸ್ಟ್ವಾದದ ಮೂಲತಂತ್ರ. ಇತರ ಜಡ-ಜಂಗಮಗಳ ನಿಯಂತ್ರಣ ಮಾನವಕೇಂದ್ರಿತ ವೈಜ್ಞಾನಿಕತೆಯ ಜೀವನಾಡಿ.

ಪ್ರಕೃತಿಯನ್ನು ಗೆಲ್ಲುವ ಮಾನವಪ್ರಯತ್ನಗಳು ತೀವ್ರವಾದ ಯುಗದಲ್ಲಿಯೇ ಮಾನವರು ಮಾನವರನ್ನು ಗೆಲ್ಲುವ ಪ್ರಯತ್ನಗಳೂ ಚುರುಕಾಗತೊಡಗಿ ದಮನಕಾರಿಯಾದ ಬಂಡವಾಳ ಮತ್ತು ವಸಾಹತು ಏರ್ಪಾಟುಗಳು ಸ್ಥಾಪಿತವಾದವು. ಕರಿ ಮತ್ತು ಹಳದಿತೊಗಲಿನ ಪಶುಮಾನವರನ್ನು ಹತ್ತಿಕ್ಕಿ ಹತೋಟಿಗೆ ತರುವುದು ಬಿಳಿಯರ ಪರಧರ್ಮವೆಂಬ ನಂಬುಗೆ ಕತ್ತಿ, ಸಿಡಿಮದ್ದು, ಬಂದೂಕು, ಫಿರಂಗಿಗಳ ಬಲದಿಂದ ಆಫ್ರಿಕಾ, ಏಷಿಯಾ ಮತ್ತು ಅಮೆರಿಕಗಳಲ್ಲಿ ನಿರ್ದಯೆಯ ನೆತ್ತರಿನ ಮಹಾಪೂರವನ್ನುಂಟು ಮಾಡಿ ನರಹತ್ಯಾಕಾಂಡಗಳ ಮಹಾನ್ ಧಾರಾವಾಹಿಯನ್ನು ಪ್ರಚೋದಿಸಿತು. ಶತಶತಮಾನಗಳ ಕರ್ತಾರಶಕ್ತಿಯ ಕುರುಹುಗಳಾಗಿದ್ದ ಜೀವಂತ ಜನಾಂಗಗಳು, ಭಾಷೆ-ಸಂಸ್ಕೃತಿ-ವಿಜ್ಞಾನಗಳು, ಕಲಾನಿರ್ಮಿತಿಗಳು, ಇಮಾರತಿಗಳು ಬಹುತೇಕ ಅಳಿದುಹೋದವು. ಅಳಿಯದೆ ಉಳಿದುಕೊಂಡವು ಗೆದ್ದವರ ಆಳಾಗಿ ದುಡಿಯತೊಡಗಿದವು. ಈ ವಿನಾಶಕಾರಿ ಪ್ರವೃತ್ತಿಗಳ ಪ್ರೇರಣೆಯೂ ಪರಿಣಾಮವೂ ಆಗಿದೆ ಇಂದು ಗೆದ್ದವರ ಹತಾರಾದ ಲಾಭಕೋರ ಮಾರುಕಟ್ಟೆಯ ಆರ್ಥಿಕ ವ್ಯವಸ್ಥೆ.

ಪರಪೀಡನಪರಾಯಣಮೂಲದ ಸೋಗಲಾಡಿ ಮಾನವತಾವಾದದ ಇತಿಹಾಸದ ಕಡೆ ಹೊರಳಿ ನೋಡಿದಾಗ ಮಹಾಕವಿ ಶ್ರೀಶ್ರೀ ಅವರ ನುಡಿಗಳು ಆಧುನಿಕ ನಾಗರಿಕತೆಯ ಗೋರಿಬರಹದಂತೆ ಕಾಣುತ್ತವೆ:

‘ಯೇ ದೇಶ ಚರಿತ್ರ ಸೂಸಿನಾ ಏಮುನ್ನದಿ ಗರ್ವಕಾರಣಂ?
ನರಜಾತಿ ಚರಿತ್ರಸಮಸ್ತಂ ಪರಪೀಡನಪರಾಯಣತ್ವಂ’
ಮಾನವತಾವಾದೀ ಯುಗದಲ್ಲಿ ನರರಕ್ತದಾಹಿಗಳಾದ ಜೀವಬಲಿಪ್ರಿಯರಾದ ದೇವತೆಗಳು ಪದಚ್ಯುತರಾಗಿ ಅವರಿಗಿಂತಲೂ ಹಿಂಸ್ರಬುದ್ಧಿಯ ಗಂಡುಮಾನವನೇ ಆ ಸ್ಥಾನವನ್ನಾಕ್ರಮಿಸಿದಂತೆ ತೋರುತ್ತದೆ.

ಪರಪೀಡನಪರಾಯಣತ್ವವು ಆಧುನಿಕ ಮಾನವತಾವಾದೀ ನಾಗರಿಕತೆಯ ಏಳಿಗೆಯ ಯುಗದಲ್ಲಿ ಅತ್ಯಂತ ವ್ಯವಸ್ಥಿತವಾದ ಸಿದ್ಧಾಂತ ಮತ್ತು ಪ್ರಯೋಗವಾಗಿ ಆವಿರ್ಭವಿಸಿತೆನ್ನುವುದು ದಿಟ ವಾದರೂ ಅದರ ಬೀಜಗಳು ಆಧುನಿಕಪೂರ್ವ ಇತಿಹಾಸದಲ್ಲೇ ಇದ್ದವು. ಪರಸತಿ, ಪರಧನಗಳನ್ನು ಲೂಟಿ ಮಾಡದ ವೀರಗಾಥೆಗಳು ಯಾವಾಗಲೂ ಇರಲಿಲ್ಲ.

ಪರಪೀಡನೆಯ ಪ್ರವೃತ್ತಿಯ ಇನ್ನೊಂದು ಮೋರೆ ಸ್ವಕೀಯಪೀಡನೆ. ಪರಪೀಡಕರು ಕೊನೆಗೆ ತಮಗೆ ತಾವೇ ಹಗೆಯಾಗುವುದರ ಗುರುತು ಇರುವುದು ಕೇವಲ ಭಸ್ಮಾಸುರನ ನೀತಿಕತೆಯೊಂದರಲ್ಲೇ ಅಲ್ಲ. ಮನುಕುಲದ ಸಾಮುದಾಯಿಕ ತಿಳಿವಳಿಕೆಯ ಖಜಾನೆಗಳಾದ ಅದೆಷ್ಟೋ ಜನಪದ, ದಂತಕತೆಗಳಲ್ಲಿದೆ. ತೋಡ ಜನಾಂಗದ ಕತೆಯೊಂದರಲ್ಲಿ ಯುವಕನೊಬ್ಬ ತನ್ನ ಕುಲನಿಯಮಗಳ ರೀತ್ಯಾ ಮದುವೆಯ ದಿನ ಮದುವಣಗಿತ್ತಿಗೆ ಒಬ್ಬ ಗಂಡನ್ನು ಹೊಡೆದುಹಾಕಿ ಅವನ ತಲೆಬುರುಡೆಯನ್ನು ವಧೂದಕ್ಷಿಣೆಯಾಗಿ ನೀಡಬೇಕು. ಆದರಂದು ಅವನಿಗೆ ಗಂಡಾಳುಗಳಾರೂ ಸಿಗುವುದಿಲ್ಲ. ಹತಾಶನಾದ ಆತ ಕೊನೆಗೊಬ್ಬ ಹುಡುಗಿಯನ್ನು ಹೊಡೆದುಹಾಕಿ ಅವಳ ಬುರುಡೆಯನ್ನೇ ಕೊಂಡೊಯ್ಯುತ್ತಾನೆ. ಆದರೆ ತನ್ನ ಕೈಯಲ್ಲಿ ರಾರಾಜಿಸುತ್ತಿರುವ ತಲೆಬುರುಡೆ ತಾನು ವರಿಸಬೇಕಾಗಿದ್ದ ಹುಡುಗಿಯದೇ ಎಂದು ಕೊನೆಗವನಿಗೆ ತಿಳಿಯುತ್ತದೆ.

ಈ ಒಟ್ಟುಕತೆಯ ನೀತಿಯನುಸಾರ ತಮ್ಮ ಪರಮಧರ್ಮದ ಶ್ರೇಷ್ಠತೆಯ ಅಮಲಿನಲ್ಲಿ ಪರಧರ್ಮೀಯರನ್ನು ಯಾವುದೇ ರೀತಿಯ ಹಿಂಸೆಯಿಂದ ದಮನ ಮಾಡಲು ಸಿದ್ಧವಿರುವ ತಾಲಿಬಾನ್ ಮತಾಂಧವಾದಿಗಳು ತಮ್ಮ ಧರ್ಮದವರ ಮಕ್ಕಳನ್ನೇ ಕೊಂದು ಪರಧರ್ಮಪೀಡನೆ ಸ್ವಧರ್ಮಪೀಡನೆಯೂ ಆಗಬಲ್ಲುದೆಂದು ಸಾಬೀತು ಮಾಡಿದ್ದಾರೆ. ಈ ಪ್ರಯತ್ನದಲ್ಲಿ ತಮ್ಮನ್ನು ತಾವೂ ಬಲಿಕೊಟ್ಟುಕೊಂಡಿದ್ದಾರೆ.
ಬಸವಣ್ಣನವರೆಂದಂತೆ ‘ಕೊಂದವನುಳಿದನೆ ಕೂಡಲಸಂಗಮದೇವ?’

ಸ್ವಪೀಡನೆಯ ಪ್ರಧಾನರೂಪಗಳಲ್ಲಿ ಧಾರ್ಮಿಕ ಸ್ವಹಿಂಸಾಪರತೆಯೂ ಇದೆ. ಹೊರಗಿನ ಹಗೆಯನ್ನು ತನ್ನೊಳಗೇ ಒಳಾಂತರಿಸಿಕೊಳ್ಳುತ್ತಾರೆ ಅತಿವೈರಾಗ್ಯಪರ ಧಾರ್ಮಿಕರು. ತಮ್ಮ ಸೃಜನಶೀಲತೆಯ ಬೀಜನಾದ ಕಾಮನನ್ನು ಕೊಂದೆನೆಂದು ಕೊಚ್ಚಿಕೊಳ್ಳುವರು ಕೆಲವರು. ತನ್ನೊಡಲನ್ನೊ ತಲೆಯನ್ನೋ ಅಂಗಾಂಗಗಳನ್ನೋ ಇಷ್ಟದೇವತೆಗೋ ದೊರೆಗೋ ಆದರ್ಶಕ್ಕೋ ಕೊಯ್ದು ಖಂಡವಿದೆ ಕೋ ಎಂದರ್ಪಿಸುವರು ಕೆಲವರು. ಹೊರಗನ್ನು ಗೆಲ್ಲಲಾಗದೆ ತನ್ನ ಸೋಲನ್ನೊಪ್ಪಲಾಗದೆ ತನ್ನ ತಾನೇ ಈಡಾಡಿಕೊಳ್ಳುವ ಆತ್ಮಹತ್ಯಾಪ್ರವೀಣರೂ ಇಂಥವರೇ.

ಸಂಘರ್ಷದೃಷ್ಟಿ ಒಳಹೊರಗುಗಳೆರಡನ್ನೂ ಶಾಂತಿಯಿಂದ ವಂಚಿತವಾದ ನಿರಂತರ ರಣರಂಗವನ್ನಾಗಿಸುತ್ತದೆ. ಹೊಡೆತ, ಬಡಿತ, ಇರಿತ, ಕೊಲೆ, ಸುಲಿಗೆಗಳ ಕೈಬಾಯಿಸನ್ನೆಗಳಲ್ಲಿ, ಕ್ರಿಯೆಗಳಲ್ಲಿ ಮಾತಾಡುತ್ತದೆ. ಎದ್ದೂ ಮಾಡದ ನಿದ್ದೆಯನ್ನೂ ಕೊಡದ ಅಸಹಾಯಕ ಆದರೂ ಆಕ್ರಮಣಕಾರಿ ವಿಕೃತಿ ಅದು. ಪೂರ್ವದ ಚಾಣಕ್ಯನ, ಪಶ್ಚಿಮದ ಮ್ಯೆಕಾವಿಲ್ಲಿಯ ಮತ್ಸ್ಯನೀತಿಯ ರಾಜಕೀಯ ಮಾದರಿಗಳೂ ಇಂಥವೇ.

ಜೀವಂಜೀವೇನ ಭಕ್ಷಯೇತ್; ಹೆಂಮೀನುಗಳು ಕಿರಿಮೀನುಗಳನ್ನು ತಿಂದೇ ಬದುಕಬೇಕು; ಕೊಲ್ಲದಿದ್ದರೆ ಗೆಲ್ಲಲಾಗದು; ಸೋತವನಿಗೆ ಸ್ವರ್ಗ ಸಿಗದು; ಎದ್ದವನು ಎದ್ದ ಬಿದ್ದವನು ಬಿದ್ದ-. ಈ ಎಲ್ಲವೂ ಸಂಘರ್ಷವಾದೀ ಧರ್ಮಸಿದ್ಧಾಂತಗಳ ನಾಣ್ನುಡಿಗಳು...
ಹೊಡೆದಾಟವೇ ಉಸಿರಾಟವೆನ್ನುವ ದೃಷ್ಟಿಗೆ ಪ್ರತಿಸ್ಪರ್ಧಿ ಪರಸ್ಪರ ಸಾಂಗತ್ಯದ, ಹೊಂದಾಣಿಕೆಯ ಸಮನ್ವಯದೃಷ್ಟಿ. ಇದು ಪ್ರಧಾನವಾಗಿ ಅನುಭಾವಿಗಳ, ಕಲಾಕಾರರ ಕಾಣ್ಕೆಯಾಗಿದೆ. ಕರುಣೆಯ ಬಾಷ್ಪಗಳಲ್ಲಿ ನೆನೆದ ಕಣ್ಣುಗಳಿಗೆ ಭೂಮಿ ಆಕಾಶಗಳು ಒಂದು ಜೀವನದುದರವಾಗಿ ತೋರುತ್ತವೆ. ‘ಚಿಕ್ಕ ಮರಿಗೆ ತನ್ನ ರೆಕ್ಕೀ ಬೀಸಣಿಗೇಲಿ ಅಕ್ಕ ಜಳಕಕ್ಕ ಹಾಕ್ಯಾದ ನೋಡವ್ವ ಹಕ್ಕಿ ಜಾತ್ಯಾನ ಅಕ್ಕರಿತಿ’–- ಇದು ಪ್ರಾಣಿಜಗತ್ತಿನ ಪರಸ್ಪರ ಪ್ರೇಮದ ಕುರುಹಾಗಿ ಕಾಣುತ್ತದೆ.

‘ರುದ್ರವಿಲಾಸದ ಪರಿಯೇ ಬೇರೆ ಶಿವಕರುಣೆಯು ಹಿರಿದು’ ಎಂದಿದ್ದಾರೆ ವರಕವಿ ಬೇಂದ್ರೆ. ‘ಹೂಹೂವಿನೊಳಗಡೆ ಕೈಲಾಸ ಮೂಡ್ಯಾವು’ ಅನ್ನುತ್ತಾರೆ ಕಂಬಾರರು. ಕುವೆಂಪು ಅವರಿಗೆ ಸೂರ್ಯೋದಯ ಚಂದ್ರೋದಯಗಳು ದೇವರಕೃಪೆಯಾಗಿ ಕಂಡಿವೆ. ಕೊಲ್ಲುವ ಶಕ್ತಿಗಿಂತಾ ಕಾಯುವ ಶಕ್ತಿ ಹಿರಿದೆನ್ನುತ್ತದೆ ಕನ್ನಡದ ಗಾದೆ ಮಾತು. ‘ಆನೆಯೂ ಸಿಂಹನೂ ಒಂದಾಗಿ ಮೇವುದ ಕಂಡು ಆನು ಬೆರಗಾದೆ’ನೆನ್ನುತ್ತಾನೆ ಅಲ್ಲಮ.

ಬ್ರಹ್ಮಾಂಡದ ಹೊಂದಿಕೆ-ಬಂದಿಕೆಗಳ ರಹಸ್ಯವನ್ನು ಸೂಫೀದರ್ಶನದಲಿ ‘ಇಷ್ಕ್’ ಎಂದು ಕರೆಯಲಾಗಿದೆ. ಗ್ರಹತಾರೆಗಳಲ್ಲಿ ಇಷ್ಕ್ ತತ್ವದ ಪರಸ್ಪರಾಕರ್ಷಣೆಯಿಲ್ಲದೆ ಹೋಗಿದ್ದರೆ ಇಡೀ ಸೃಷ್ಟಿಯೇ ಛಿದ್ರಛಿದ್ರವಾಗುತ್ತಿತ್ತು, ಜಲಾಲುದ್ದೀನ್ ರೂಮಿಯ ಪ್ರಕಾರ.

ಹೊಂದಾಣಿಕೆಯ ಆತ್ಯಂತಿಕ ಮತ್ತು ಅತಿಸ್ಪಷ್ಟವಾದ ಅಭಿವ್ಯಕ್ತಿ ಪಡಿಮೂಡಿದ್ದು ಮಹಾಯಾನ ಬೌದ್ಧದರ್ಶನದ ಸಾವಿರದ ಕೈಗಳ ಅವಲೋಕಿತೇಶ್ವರನ ಮೂರ್ತಿಯಲ್ಲಿ. ಆತ ಬ್ರಹ್ಮಾಂಡಚಾಲನೆಯ ಮಹಾಕರುಣೆಯ ತತ್ವದ ಸಾಕಾರ ರೂಪ. ಈ ತತ್ವ ಗಂಡುಬುದ್ಧಿಗಿಂತ ತಾಯಿಕರುಳಿಗೆ ಹತ್ತಿರವಾದುದರಿಂದ ಚೀನಾ ಮತ್ತು ಜಪಾನಿನ ಮಹಾಯಾನ ಕಲ್ಪನೆಯಲ್ಲಿ ಅವಲೋಕಿತೇಶ್ವರ ಬೋಧಿಸತ್ವನನ್ನು ಸ್ತ್ರೀರೂಪದಲ್ಲಿ ಚಿತ್ರಿಸಲಾಗಿದೆ. ಜಪಾನಿನ ಸನಾತನ ನಗರ ಕ್ಯೋತೋದಲ್ಲಿನ ತಿಳಿನೀರಿನ ದೇಗುಲದಲ್ಲಿ ಮೂರ್ತವಾಗಿರುವುದು. ಈ ದೈವತ್ವವನ್ನು ಚೀನಿ ಭಾಷೆಯಲ್ಲಿ ಗ್ವಾನ್ಯಿನ್ ಎಂದೂ ಜಪಾನಿಯಲ್ಲಿ ಕನೋನ್ ಎಂದೂ ಕರೆಯಲಾಗಿದೆ. ಭಾರತದ ಆರ್ಷೇಯ ಅರಿವಿನ ಕುರುಹಾಗಿರುವ ‘ಉದಾರಚರಿತಾನಾಂ ವಸುಧೈವ ಕುಟುಂಬಕಂ’ ಎಂಬ ವೈದಿಕಮೂಲ ಉಕ್ತಿಯೂ ಈ ತೆರನ ದೃಷ್ಟಿಯಿಂದಲೇ ಪ್ರೇರಿತ.

ಹೊಂದಾಣಿಕೆ–-ಒಂದಾಣಿಕೆಯ ಸಂಕೇತಗಳನ್ನು ಕೇವಲ ಧಾರ್ಮಿಕ–-ಪೌರಾಣಿಕ ಹಿಡಿಗಟ್ಟು-ಕುರುಹುಗಳಲ್ಲಿ ಕಾಣಬೇಕಾಗಿಲ್ಲ. ನಿತ್ಯ ಬದುಕಿನ ವಿವರಗಳಲ್ಲಿಯೇ ಕಾಣಸಿಗುತ್ತವೆ.

ಒಂದು ಕುಟುಂಬದಲ್ಲಿ, ಸಮುದಾಯದಲ್ಲಿ, ಸಂಸ್ಥೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಕೊಡುವುದಕ್ಕಿಂತ ಹೆಚ್ಚಾಗಿ ಪಡೆದುಕೊಳ್ಳುವುದರಲ್ಲಿ ತೊಡಗಿರುತ್ತಾರೆ. ಇದು ಶೋಷಣೆಯ, ಅದರ ವಿರುದ್ಧ ಸಂಘರ್ಷದ ನೆಲೆ. ಆದರೆ ಆ ವಿವರಗಳ ಹಿನ್ನೆಲೆಯಲ್ಲೊಂದು ಹೊಂದಾಣಿಕೆ ಇರುತ್ತದೆ. ಪರಸ್ಪರ ಭಕ್ಷಕರಾಗಿರುವ ಸಮುದ್ರಪ್ರಾಣಿಗಳು ಒಂದೇ ಸಮುದ್ರಸಂಸಾರದಲ್ಲಿ ಕೂಡುಬಾಳನ್ನೂ ನಡೆಸುತ್ತಿರುತ್ತವೆ. ಪ್ರಶ್ನೆಯಿರುವುದು ಜೀವವ್ಯವಹಾರಗಳ ಆಧಾರ ಯಾವುದೆಂಬುದರ ಬಗ್ಗೆ.

ಮಾನವ ಸಮಾಜದಲ್ಲಿದ್ದಂತೆ ನಿಸರ್ಗದಲ್ಲೂ ಆಕರ್ಷಣೆ–-ವಿಕರ್ಷಣೆಗಳು, ಹೊಂದಾಣಿಕೆ–-ಹೋರಾಟಗಳು ಒಟ್ಟಿಗೇ ಚಾಲತಿಯಲ್ಲಿವೆ. ಅಣುಪ್ರಪಂಚದಲ್ಲಿದ್ದಂತೆ ಅಂತರಿಕ್ಷದಲ್ಲೂ ಭೌತಿಕ ಕಣಗಳ, ಪ್ರವಾಹಗಳ, ವಸ್ತುಗಳ ಪರಸ್ಪರಾಕರ್ಷಣೆ–- ವಿಕರ್ಷಣೆಗಳಿವೆ. ನಮ್ಮ ಅನುಭವ ಸತ್ಯದಲ್ಲೂ ಈ ಇಬ್ಬಗೆಯ ವಿವರಗಳನ್ನು ದಿನಾ ಕಾಣುತ್ತಿದ್ದೇವೆ.

ಆದರೆ ಸೃಷ್ಟಿಯ ಮೊದಲ ಆಧಾರೀಭೂತ ಸತ್ಯ ಯಾವುದು? ಕೋಳಿ ಮೊದಲೊ? ತತ್ತಿ ಮೊದಲೊ? ಬಿಡಿಸಲಾಗದ ತಾರ್ಕಿಕ ಕಗ್ಗಂಟು.

ಹಾಗೆಯೇ ದೃಷ್ಟಿ-ಸೃಷ್ಟಿಗಳ ಸಂಬಂಧ. ಸೃಷ್ಟಿ ಮೊದಲೆಂಬ ಭೌತಿಕವಾದಿಗಳ, ದೃಷ್ಟಿ ಮೊದಲೆಂಬ ಸತ್ವವಾದಿಗಳ ಮೂಲನಂಬುಗೆಗಳು ಇಂದು ಅಪವಾದಗಳಿಗೆ ಹೊರತಲ್ಲ. ಹೀಗಾಗಿ ತನ್ನನ್ನು ಬದಲಾಯಿಸಿಕೊಂಡವರು ಜಗತ್ತನ್ನು ಪ್ರಭಾವಿಸಬಲ್ಲರೇ ಹೊರತು ಬದಲಾಯಿಸಲಾರರು. ಹೊರಗನ್ನು ತಿದ್ದಹೊರಟವರು ತಮ್ಮನ್ನೇ ತಿದ್ದಿಕೊಳ್ಳದೆ ಹೋದುದರಿಂದ ಯಾವುದನ್ನೂ ತಿದ್ದಲಾಗದೆಹೋದರು.
ಪ್ರತಿದಿವಸ, ಪ್ರತಿಕ್ಷಣ ನಮ್ಮ ಮುಂದೆ ಸಾಕಾರವಾಗುತ್ತಿರುವ ಅನುಭವ ಸತ್ಯ ಒಳ-ಹೊರಗುಗಳ ಜಂಟಿನಿರ್ಮಿತಿ.

ದಿನೇ ದಿನೇ ದಶಗುಣವಾಗಿ ಹಬ್ಬುತ್ತಿರುವ ಅತ್ಯಾಚಾರ, ಹಿಂಸಾಚಾರ, ಭ್ರಷ್ಟಾಚಾರ, ಅನಾಚಾರಗಳಿಂದ ಜಗತ್ತಿಗೆ ಬಿಡುಗಡೆ ನೀಡಬೇಕಿದೆ. ಇದಕ್ಕೆ ಅತ್ಯಗತ್ಯವಾಗಿರುವ ಕಾನೂನು, ಆಡಳಿತಾತ್ಮಕ ಕ್ರಮಗಳು ಈ ಹಿಂಸ್ರಘಟನೆಗಳನ್ನು ನಿಯಂತ್ರಿಸುವಲ್ಲಿ ವಿಫಲವಾಗುತ್ತಿರುವುದರ ಕಾರಣವೇನು? ಇಂಥಾ ಹಿಂಸಾಕೃತ್ಯಗಳ ಮತ್ತು ಅವನ್ನೆದುರಿಸಲು ನಾವು ಚಾಲನೆಗೊಳಿಸುವ ಕ್ರಮಗಳು ಇಂದು ಅಂತರಂಗ ಬಹಿರಂಗಗಳಲ್ಲಿ ಪ್ರಜ್ಞಾಪೂರ್ವಕ ನೆಲೆಗಳಲ್ಲಿ ಸರ್ವವ್ಯಾಪಕವಾಗಿರುವ ಸಂಘರ್ಷವಾದೀ ಮೂಲಪ್ರೇರಣೆಗಳ ಚೌಕಟ್ಟಿನಲ್ಲೇ ನಡೆಯುತ್ತಿದೆಯಲ್ಲ, ಅದೇ ಇರಬಹುದು.

ಕಳೆದ ಶತಮಾನಗಳ ಸಂಘರ್ಷವಾದೀ ಇತಿಹಾಸದ ನಿತ್ಯ ಕೃತ್ಯಗಳಿಗೆ ವಿದಾಯ ಹೇಳಬೇಕಾದರೆ ಭಾವನೆ-ಚಿಂತನೆ–-ಕ್ರಿಯೆಗಳನ್ನು ಒಟ್ಟಾಗಿಸಿ, ಮನದಾಳಗಳಲ್ಲಿ ಸರ್ವಹಿತಕಾರಿಯಾದ ಸಹಬಾಳುವೆಯ ಮೂಲತತ್ವಗಳನ್ನು ನಾವು ವ್ಯಾಪಕವಾಗಿ ನೆಡತೊಡಗಿದರೆ ಮಾತ್ರ ಹಿಂಸಾಮುಕ್ತ ಜಗತ್ತು ನಿರ್ಮಾಣವಾಗಬಹುದೇನೊ. ಆಗ ನಮ್ಮ ಚಿಕಿತ್ಸಾತ್ಮಕ ಕ್ರಮಗಳ ಸ್ವರೂಪವೂ ಬದಲಾಗಿ ಅವು ಹೆಚ್ಚಿನ ಸಾಫಲ್ಯವನ್ನು ಪಡೆಯಬಲ್ಲುವೇನೊ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.