ಅರವತ್ತರ ದಶಕದಲ್ಲಿ ಪ್ರೊ. ಸುಧಾಕರ, ಕೆಸರು ಗದ್ದೆಯಲ್ಲಿ ನಳನಳಿಸುವ, ಚಿನ್ನದ ಹೊಳಪಿನ, ನಾಟಿ ಪೈರಿನಂಥ ಕತೆಗಳನ್ನು ಬರೆದರು. ಅವರ ಕತೆಗಳಲ್ಲಿ ಕಣ್ಣಿ ಕಿತ್ತ ಹಸುಗಳಿದ್ದುವು. ಹೊರಲಾರದ ಹೊರೆ ಹೊತ್ತ ಹಳ್ಳಿಗರಿದ್ದರು. ಏಕನಾದ ಮಿಡಿಯುವ ಗೋಸಾಯಿಗಳಿದ್ದರು. ಯಾರಿಗೇನು ಕಮ್ಮಿ ಎಂದು ಬಂಡೆದ್ದ ತಳವರ್ಗದ ಪಾತ್ರಗಳಿದ್ದುವು. ಕೋಡಿಬೀಳುವ ಕೆರೆಗಳಿದ್ದುವು.

ಪೈರಿನ ಪ್ರಾಣದ ತ್ರಾಣವನ್ನೇ ಹೀರಿಹಾಕುವ ಗರಿಕೆ ಬೇರಿನ ಚಪ್ಪರಗಳಿದ್ದುವು. ಕತ್ತಾಳೆ ಕೊಳೆ ಹಾಕಿದ ಕೂಪಗಳಿದ್ದುವು. ಮಠದೊಳಗೆ ಪುಟನೆಗೆಯುವ ಬೆಕ್ಕುಗಳಿದ್ದುವು. ವಯಸ್ಕರ ಶಿಕ್ಷಣದ ಮೂಲಕ ಎಚ್ಚರಗೊಳ್ಳುವ ಮಾದಿಗರ ಜೀತದಾಳುಗಳಿದ್ದರು. ಹಸಿಬಿಸಿ ಕಾಮದ ಪ್ರಸಂಗಗಳಿದ್ದುವು. ಚುಚ್ಚುವ ಬಾಡುಬಕ್ಕನ ಮುಳ್ಳುಗಳಿದ್ದುವು. ಜಿನುಗುವ ಜಲದ ಕಣ್ಣುಗಳಿದ್ದುವು. ಹಳ್ಳಿಗರ ಸಾಮುದಾಯಿಕ ಬದುಕಿನ ಪ್ರೀತಿ, ಸಿಟ್ಟು, ಜಗಳ, ತಾಯ್ತನ, ನೀಚತನ, ಕಚ್ಚೆಹರುಕತನ, ಹಬ್ಬ, ಆಚರಣೆ, ಮೌಢ್ಯ ಮುಂತಾದ ನಾನಾ ಹಲ್ಲಂಡೆಗಳ ವ್ಯಾಪಕ ಚಿತ್ರಣಗಳಿದ್ದುವು.

ಅಡಿಗಡಿಗೆ ಜನಪದರ ಗಾದೆ, ಆಡುನುಡಿಗಳು ಕಾಸಿಗೊಂದು ಕೊಸರಿಗೊಂದು ಎರಚಾಡುತ್ತಿದ್ದವು. ಸುಧಾಕರ ಎಷ್ಟು ಗಟ್ಟಿ ಕತೆಗಾರರಾಗಿದ್ದರೆಂದರೆ ಅವರು ವಿದ್ಯಾರ್ಥಿಯಾಗಿದ್ದಾಗಲೇ ಸತತವಾಗಿ ಮೂರು ವರ್ಷ (೧೯೬೦, ೬೧, ೬೨) ‘ಪ್ರಜಾವಾಣಿ’ಯ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ನಂತರ ಅವರ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮನ್ನಣೆಗಳು ದೊರಕಿದ್ದವು. ನಮ್ಮ ನಡುವೆ ಈಗ ಇಲ್ಲವಾದ ಸುಧಾಕರ ಅವರ ಕಥೆಗಳು ಆಲನಹಳ್ಳಿ, ಬೆಸಗರಹಳ್ಳಿ, ದೇವನೂರ, ಕುಂವೀ, ಹಂದ್ರಾಳ, ನಾಗವೇಣಿಯರ ಕತೆಗಳನ್ನು ಹೋಲುತ್ತವೆ.

ಅವರ ಕತೆಗಳನ್ನು ಓದುತ್ತಿದ್ದರೆ ನಾವು ನೀಗಿಕೊಂಡ ಸಮಸ್ತವೂ ನೆನಪಾಗಿ ಬಾಯಿ ಚಪ್ಪರಿಸುವಂತಾಗುತ್ತದೆ. ಅವರು ಚಿತ್ರಿಸಿದ್ದ ಗದ್ದೆಗಳು, ಕೋಡಿ ಬಿದ್ದ ಕೆರೆಗಳು ಈಗ ಸೈಟುಗಳಾಗಿರುವುದರಿಂದ ನಮ್ಮ ಸಮಕಾಲೀನ ವಿಮರ್ಶಕರು ಸುಧಾಕರ ಅವರನ್ನು ಮರೆತೇಬಿಟ್ಟಂತೆ ತೋರುತ್ತದೆ. ಉತ್ತಮವಾದ ಹತ್ತು ಕತೆಗಳಲ್ಲಿ ಸುಧಾಕರ ಅವರಿಗೆ ಜಾಗ ಸಿಗದಿರಬಹುದು. ಉತ್ತಮವಾದ ನೂರು ಕತೆಗಳಲ್ಲಿ ಅವರಿಗೆ ಜಾಗ ಸಿಗದಿದ್ದರೆ ಅದು ಪ್ರಜ್ಞಾಪೂರ್ವಕ ದ್ರೋಹ.

‘ವಿಮರ್ಶಕರು ಎನಿಸಿಕೊಂಡವರ ಸಂಪಾದಕತ್ವದಲ್ಲಿ ಹೊರಬಂದ ಎಲ್ಲ ಕತೆಗಳ ಆಂಥಾಲಜಿಗಳಲ್ಲೂ ನನ್ನ ಕಥೆಗಳು ಸೇರ್ಪಡೆಯಾಗಲಿಲ್ಲ’ ಎಂದು ಸುಧಾಕರ ಮುನ್ನುಡಿಯಲ್ಲಿ ಬೇಸರಿಸಿಕೊಂಡಿರುವುದು ಸ್ವಮರುಕದಿಂದಲ್ಲ. ನಿಜಕ್ಕೂ ಅದು ಅನ್ಯಾಯ. ತಮ್ಮವರಿಂದಾಚೆಗೆ ನೋಡದ, ತಮ್ಮವರಲ್ಲದವರನ್ನು ಓದದ, ತಮ್ಮವರದೇ ಗಲ್ಲಿಯ ಕತೆಗಳನ್ನು ಒಗ್ಗೂಡಿಸಿ ಅವನ್ನೇ ಜಗತ್ತಿನ ಶ್ರೇಷ್ಠ ಕಥೆಗಳು ಎಂದು ಕರೆದುಕೊಳ್ಳುವ ಪಟ್ಟಭದ್ರರು ಮಾಡಿರುವ ಅನ್ಯಾಯ.

ಕನ್ನಡ ಪುಸ್ತಕ ಪ್ರಾಧಿಕಾರದಲ್ಲಿದ್ದ ಡಾ. ಸಿದ್ಧಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿದ್ದ ವೈ.ಕೆ. ಮುದ್ದುಕೃಷ್ಣ, ಮನು ಬಳಿಗಾರ್, ಕಾ.ತ.ಚಿಕ್ಕಣ್ಣ ಮತ್ತು ಜನಪ್ರಿಯ ಸಾಹಿತ್ಯ ಪ್ರಕಟಣ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಪ್ರೊ. ಜಿ. ವೆಂಕಟಸುಬ್ಬಯ್ಯ-ಇವರುಗಳೆಲ್ಲ ಬೇರೆ ಬೇರೆ ಸಂದರ್ಭಗಳಲ್ಲಿ, ಹಲವು ಕೃತಿಗಳನ್ನು ಅಚ್ಚು ಮಾಡದಿದ್ದರೆ ಸುಧಾಕರರ ಕೃತಿಗಳು ಕಣ್ಮರೆಯಾಗುತ್ತಿದ್ದುವೇನೋ. ಗ್ರಾಮೀಣ ಕೃಪಾಂಕದ ಔದಾರ್ಯದಿಂದೇನೂ ಇವನ್ನು ಓದಬೇಕಿಲ್ಲ.

ಅಂಥ ರಿಯಾಯಿತಿಗಳನ್ನು ಪಡೆದು ಯಾವನೇ ಬರಹಗಾರ, ಕಲಾಕಾರ ಬಹಳ ಕಾಲ ಉಳಿಯಲಾರ. ಸೃಜನಶೀಲ ಶಕ್ತಿ ಮತ್ತು ಅದರ ಸಾರ್ವತ್ರಿಕ ಮೌಲ್ಯಗಳು ಮಾತ್ರ ಅವನನ್ನು ಉಳಿಸಬಲ್ಲವು. ನಮ್ಮವರು ಏನೇನು ಆಡುತ್ತಿದ್ದರು, ಹಾಡುತ್ತಿದ್ದರು, ಬಳಸುತ್ತಿದ್ದರು, ಉಣ್ಣುತ್ತಿದ್ದರು, ಮಾಡುತ್ತಿದ್ದರು ಮತ್ತು ಯೋಚಿಸುತ್ತಿದ್ದರು ಅನ್ನುವುದನ್ನು ಅರಿಯುವ ಕುತೂಹಲ ಉಳ್ಳ, ಹಳ್ಳಿಗಾಡಿನ ಮನಸ್ಸು ಇವರ ಕತೆಗಳನ್ನು ಓದಿ ನೊಚ್ಚಗಾಗಬಹುದು. ತುಂಬಾ ಬೆಲೆ ಬಾಳುವ ಬಾಳೊಂದು ಹಳ್ಳಿಗಳಿಂದ ಕಳೆದುಹೋಯಿತೆ ಎಂದು ಮರುಗಬಹುದು. ಕತೆಗಾರನನ್ನು ಚರಿತ್ರಕಾರ ಎನ್ನಬೇಕಾದ್ದು ಇದೇ ಕಾರಣಕ್ಕೆ.

ಸುಧಾಕರ ನನಗೆ ಪಾಠ ಹೇಳಿದ ಮೇಷ್ಟ್ರು. ಮಾನಸಗಂಗೋತ್ರಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಎಂ.ಎ. ಕಲಿಯುವಾಗ ನಮಗೆ ಕುವೆಂಪು ಅವರ ‘ಶ್ರೀ ರಾಮಾಯಣ ದರ್ಶನಂ’ ಪಠ್ಯವಾಗಿತ್ತು. ಸುಧಾಕರ ಅವರು ತರಗತಿಗೆ ಬಂದರೆ ನಮಗೆಲ್ಲ ಪುಳಕ. ಮಾತಿಗೊಂದು ಆಡುನುಡಿ ಇಲ್ಲವೇ ಗಾದೆ ತೆಗೆದು ಎಸೆಯುತ್ತಿದ್ದರು. ಅವರು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಎಣ್ಣೆಗೆರೆಯವರು. ಕ್ಷೇತ್ರಕಾರ್ಯ ಮಾಡಿ ‘ನಮ್ಮ ಸುತ್ತಿನ ಗಾದೆಗಳು’ ಎಂಬ ಪುಸ್ತಕ ಪ್ರಕಟಿಸಿದ್ದರು. ಸಭ್ಯ-ಅಸಭ್ಯ ಗೆರೆಗಳಿಲ್ಲದ, ಎರಡು ಸಾವಿರ ಗಾದೆಗಳುಳ್ಳ ಪುಸ್ತಕ ಅದು.

They are the sublime wisdom of the people. The proverbs are an index of the sense of humour with which people look at life with detachment ಎಂದು The Hindu ಪತ್ರಿಕೆ ವಿಮರ್ಶಿಸಿತ್ತು. ಅವರು ಮಹಾಕಾವ್ಯ ಬೋಧಿಸುವಾಗಲೂ ಮಾತಿಗೊಂದು ಗಾದೆ ಜೋಡಿಸುತ್ತಿದ್ದುದು ಸ್ವಾರಸ್ಯಕರವಾಗಿತ್ತು. ಅವುಗಳಲ್ಲಿ ಜಾತಿ ನಿಂದೆ, ವ್ಯಕ್ತಿ ನಿಂದೆಗಳಿದ್ದರೂ ಅವು ಸಾಮಾಜಿಕ ವಾಸ್ತವಕ್ಕೊಂದು ವ್ಯಾಖ್ಯಾನದಂತಿದ್ದವು. ಉದಾಹರಣೆಗೆ : ‘ಅತ್ತೆ ಅಗಸನ ತಾಕೆ ಹೋದ್ರೆ, ಸೊಸೆ ಕೆಲಸದವನ ತಾಕೆ ಹೋಯ್ತಳೆ; ಆಚಾರಿ ಮಾತು ಆಚ್ಗೊಂದು ಈಚ್ಗೊಂದು ;

ಈ ಊರಿನಾಗೆ ಗೌಡ, ಪರೂರಿನಾಗೆ ಲೌಡ ; ಓಡಿಹೋಗೋಳು ಹಾಲಿಗೆ ಹೆಪ್ಪಾಕ್ತಾಳ? ; ಕುರುಬ ಕೂಡಿ ಕೆಟ್ಟ, ದೊಂಬ ಅಗಲಿ ಕೆಟ್ಟ ; ಗದ್ದೆಗೆ ತೆವರಿ ಇರ್ಬೇಕು, ಹೆಣ್ಣಿಗೆ ತವರು ಇರ್ಬೇಕು ; ಗೊಲ್ಲ ಗೆಳೆಯ ಅಲ್ಲ ; ತುರುಕ ದಾಸ ಅಲ್ಲ ; ತೇರು ಆದ್ಮೇಲೆ ಜಾತ್ರೆಗೆ ಹೋಗ್ಬೇಡ, ಧಾರೆ ಬಿದ್ಮೇಲೆ ಮದುವೆಗೆ ಹೋಗ್ಬೇಡ ; ದಂಡಿಗೆ ಹೋದ್ರೂ ಮಿಂಡ್ರ ಕಾಟ ; ವಾಜರ ಮಾತು ಗೋಜಗೋಜಲು ; ಶೆಟ್ಟರ ಬುದ್ಧಿ ಸುಟ್ರೂ ಹೋಗಲ್ಲ ; ಹಸಿದ ಬ್ರಾಂಬ್ರೂ ಒಂದೇ, ಉಂಡ ಸಾಬ್ರೂ ಒಂದೇ ; ಹಿಟ್ಟು ತಿಂದ್ರೆ ಗಟ್ಟಿ ಮೂಳೆ, ಅನ್ನ ತಿಂದ್ರೆ ಹಕ್ಕಿ ಮೂಳೆ’.
ಸುಧಾಕರ ಎಂದರೆ ಗಾದೆಗಳ ಕಣಜ. ಅವು ಕಚಗುಳಿ ಇಟ್ಟು ಪಕ್ಕನೆ ನಗಿಸುತ್ತಲೇ ಚಿಂತನೆಗೊಡ್ಡುವ ಜನಸಾಮಾನ್ಯರ ಸಹಜಾಭಿವ್ಯಕ್ತಿಗಳು.

ಗಾದೆಗಳ ಎರಡು ಸಂಪುಟಗಳಲ್ಲದೆ ‘ದಡ ಕುಸಿದ ಬಾವಿ’, ‘ಪ್ರೇಮಸುಧಾ’, ‘ಜನಪದ ಬೆಡಗಿನ ವಚನಗಳು’, ‘ಒಡಚುವ ಕಥೆಗಳು’, ‘ಶಿವಗಂಗೆ ಸುತ್ತಿನ ಜನಪದ ಕಥೆಗಳು’, ‘ಜನಪದ ನುಡಿಗಟ್ಟುಗಳ ಕೋಶ’, ‘ಜಾನಪದ ಕಲಬೆರಕೆತನ’ ಮುಂತಾದವುಗಳನ್ನು ಪ್ರಕಟಿಸಿದ್ದರು. ಈ ಸರಣಿಯಲ್ಲಿನ ಮಹತ್ವದ ಕೃತಿ ‘ಬಿತ್ತನೆ-ಹರ್ತನೆ’. ಇದನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಆಗಿನ ಗೌರವ ನಿರ್ದೇಶಕ ಪ್ರೊ. ಡಿ.ಕೆ.ರಾಜೇಂದ್ರ ಪ್ರಕಟಿಸಿದ್ದರು.

ಆಗಿನ ಕುಲಪತಿ ಪ್ರೊ. ಬಿ.ಎ.ವಿವೇಕ ರೈ ಈ ಕೃತಿಗೆ ಮುನ್ನುಡಿ ಬರೆಯುತ್ತಾ ಶಿಕ್ಷಣವನ್ನು ಹೊಂದುವ ಏಕಧಾರೆಯ ವಾಹಿನಿ ಕಣ್ಮರೆಯಾಗಿ, ಬಹುಧಾರೆಯ ಸಂವಹನ ವಾಹಿನಿಗಳು ತೆರೆದುಕೊಂಡಿರುವುದನ್ನು ಉಲ್ಲೇಖಿಸುತ್ತಾ ಇದು ಬದ್ಧತೆಯಿಂದ ಬುದ್ಧತೆಯೆಡೆಗೆ ಚಲಿಸುವ ಕ್ರಮ ಎಂದಿದ್ದಾರೆ. ಹಳ್ಳಿಗಾಡಿನ ಕತೆಗಳನ್ನು ಬರೆಯುವವನನಿಗೆ ಜನಪದೀಯ ಅರಿವು ಎಷ್ಟಿರಬೇಕು? ಸುಧಾಕರ ಅವರು ಗಾದೆಗಳನ್ನು ಝಳಪಿಸತೊಡಗಿದರೆ ಕತೆಗಳೇ ಕಳೆದುಹೋಗುತ್ತಿದ್ದವು. ನಾನೂ ಹಿಡಿಯಷ್ಟು ಗ್ರಾಮಮುಖಿ ಕಥೆಗಳನ್ನು ಬರೆದವ. ಆದರೆ ನಾನು ಬಲ್ಲಂತೆ ಸುಧಾಕರರಂತೆ ಗಾದೆಗಳನ್ನು ಟೂಲ್ಗಳಾಗಿ ಬಳಸಿ ಕಥೆ ಬರೆದವರಿಲ್ಲ.

ಗಾದೆಗಳು ಅವರ ಶಕ್ತಿಯಾಗಿಯೂ ದೌರ್ಬಲ್ಯವಾಗಿಯೂ ಕಥೆಗಳಲ್ಲಿ, ಬೋಧನೆಯಲ್ಲಿ ಪ್ರಕಟಗೊಳ್ಳುತ್ತಿದ್ದವು. ಈಗಿನ ಐಫೋನಿನ ಹಳ್ಳಿಗಳು ಗಾದೆ ಹುಟ್ಟಿಸಲು, ಹುಟ್ಟಿರುವ ಗಾದೆಗಳನ್ನು ಉಳಿಸಿಕೊಳ್ಳಲು ಅಶಕ್ತವಾಗಿವೆ. ಅರ್ಬನ್ ಹೊಗೆ ಆವರಿಸಿರುವ ಹಳ್ಳಿಗಳ ಬಗ್ಗೆ ಈಗ ಬರೆಯುವುದೇನು? ಬರೆಯಬಾರದ್ದೇನು? ಬರೆದರೆ ಓದುವರಾರು? ಕೃಷಿ ಇಲ್ಲದ, ಜನಪದವಿಲ್ಲದ ಬರಡು ಹಳ್ಳಿಗಳಲ್ಲಿ ಲೇಖಕ ನೆಡಬೇಕಾದ ನಾಟಿ ಯಾವುದು ? ನೆಟ್ಟರೆ ಊರ್ಜಿತವಾಗುತ್ತವೆಯೆ ? ಸುಧಾಕರ ಅವರ ಕತೆಗಳನ್ನು ಓದುವಾಗ ಇಂಥ ಪ್ರಶ್ನೆಗಳು ಎದುರಾಗುತ್ತವೆ. ಖಾಸಗಿಯಾಗಿ ಅವರಿಗಿದ್ದ ವ್ಯಸನ ಕುದುರೆ ಜೂಜು.

ಗಾದೆಗಳ ಮತ್ತು ಕುದುರೆಗಳ ಹಿಂದೆ ಅವರು ಒಟ್ಟಿಗೇ ಓಡುತ್ತಿದ್ದರು. ತರಗತಿಯಾಚೆಗಿನ ಅಧ್ಯಾಪಕರ ಖಾಸಗಿ ವಿಷಯಗಳನ್ನು ಸಂಗ್ರಹಿಸಿ, ವಿನಿಮಯಿಸಿ ರಂಜನೆ ಪಡೆಯುವ ಎಳೆನಿಂಬೆಕಾಯಿಗುಣ ನಮ್ಮ ಸಹಪಾಠಿ ಸಂಕುಲದಲ್ಲಿತ್ತು. ಆದರೆ ಅವರ ಬಗೆಗಿನ ಗೌರವ ಮುಕ್ಕಾಗುತ್ತಿರಲಿಲ್ಲ. ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳಲ್ಲಿ ಅಗ್ಗವಾದ ವ್ಯಕ್ತಿತ್ವ ಉಳ್ಳ ಒಬ್ಬರೇ ಒಬ್ಬ ಅಧ್ಯಾಪಕರೂ ನಮಗಿರಲಿಲ್ಲ. ಸುಧಾಕರ ಅವರಿಗೆ ಬಸವಣ್ಣ, ಅಂಬೇಡ್ಕರ್, ಕುವೆಂಪು ವಿಚಾರಧಾರೆಗಳ ಬಗ್ಗೆ ಒಲವಿತ್ತು.

ಶೇಕ್ಸ್ಪಿಯರ್ನ ‘ಮ್ಯಾಕ್ಬೆತ್’ ಮತ್ತು ‘ಹ್ಯಾಮ್ಲೆಟ್’ಗಳನ್ನು ಅನುವಾದಿಸಿದ್ದರು. ಇವೆಲ್ಲಕ್ಕಿಂತ ಮುಖ್ಯವಾದದ್ದು ಅವರು ಕನಕದಾಸರ ಬಗ್ಗೆ ಮಾಡಿರುವ ಸಂಶೋಧನೆ. ಕನಕ ಅಧ್ಯಯನ ಪೀಠದ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಕಾಗಿನೆಲೆ ಕನಕದಾಸೋತ್ತಮ’, ‘ಕನಕರೂಪಕ’, ‘ಕನಕದಾಸರ ಕೀರ್ತನೆಗಳ ಕೃತಿಚೌರ್ಯ’, ‘ಕನಕದಾಸರ ಕೀರ್ತನೆಗಳು’ ಮತ್ತು ‘ಮುಂಡಿಗೆಗಳು’, ‘ಮೋಹನ ತರಂಗಿಣಿಯ ಗದ್ಯಾನುವಾದ’, ‘ಕನಕದಾಸರ ರಾಗಿ ರಾಮಾಯಣ ದರ್ಶನ’ ಈ ಕೃತಿಗಳಲ್ಲಿ ಎರಡು ಮುಖ್ಯ ಅಂಶಗಳು ವ್ಯಕ್ತವಾಗಿವೆ.

ಮೊದಲನೆಯ ಅಂಶವೆಂದರೆ ಕನಕದಾಸರ ಜೀವನ, ಕಾಲ, ಕೃತಿಗಳ ಬಗ್ಗೆ ಹೊಸಬೆಳಕು ಚೆಲ್ಲುತ್ತಾ ಅವರ ಪ್ರತಿ ಕೀರ್ತನೆಗೂ ವಿವರವಾದ ಭಾವ ಮತ್ತು ಅರ್ಥಗಳನ್ನು ನೀಡಿರುವುದು. ಕನಕದಾಸರನ್ನು ಆಳವಾಗಿ, ವಿಸ್ತಾರವಾಗಿ ಅರ್ಥ ಮಾಡಿಕೊಳ್ಳಲು ಈ ಭಾವಾರ್ಥಗಳು ಕೈಮರಗಳು. ಸಮಾಜದಲ್ಲಿ ಮೇಲು ಕೀಳು ಎಂಬುದು ಇಲ್ಲದಂತಾಗಿ ಸರ್ವಸಮಾನತೆ ನೆಲೆಸಬೇಕೆಂದು ಕನಕದಾಸರು ಆಶಿಸಿ ಅನ್ಯಾಯದ ವಿರುದ್ಧ ಬಂಡೆದ್ದವರು.

ಎರಡನೆಯ ಅಂಶ – ಅದು ಅಂಶವಲ್ಲ ; ಗುರುತರವಾದ ಆರೋಪ. ಸುಧಾಕರ ಅವರು ಸ್ಪಷ್ಟವಾಗಿ ಹೇಳುವುದು ಏನೆಂದರೆ ಅನ್ಯಾಯದ ವಿರುದ್ಧ ಬಂಡೆದ್ದ ಕನಕದಾಸರೇ ಅನ್ಯಾಯಕ್ಕೊಳಗಾದರು. ಕನಕದಾಸರ ಅನೇಕ ಕೀರ್ತನೆಗಳು, ಮುಂಡಿಗೆಗಳು ಹಾಗೂ ಉಗಾಭೋಗಗಳು ಪುರಂದರ ದಾಸರ ಹೆಸರಲ್ಲಿ ವಿರಾಜಮಾನವಾಗಿವೆ. ಕನಕದಾಸರ ಅಮೂಲ್ಯ ಆಸ್ತಿಯ ಚಕ್ಕುಬಂದಿಯನ್ನು ದಾಟಿ, ದುರಾಸೆಯಿಂದ ದೋಚಿಕೊಳ್ಳಲಾಗಿದೆ.

ಉದಾಹರಣೆಗೆ ‘ಏನಾದರೂ ಒಂದಾಗಲಿ’ ಎಂಬ ಮುಂಡಿಗೆ ; ‘ಅಣುವಾಗಬಲ್ಲ ಮಹತ್ತಾಗಬಲ್ಲ’ ಎಂದು ಮೊದಲಾಗುವ ಸುಳಾದಿ ; ‘ಕೋಳಿಗೆ ಹೊನ್ನ ಪಂಜರವ್ಯಾತಕೆ’ ಎಂಬ ಉಗಾಭೋಗ. ಕೆಲವು ಅನಭಿಜ್ಞರು ಹಿಂದೆ ಇಂಥ ಕೆಲಸವನ್ನು ಮಾಡಿದ್ದಾರೆ. ಕನಕದಾಸರ ನೂರಕ್ಕೂ ಹೆಚ್ಚು ಕೀರ್ತನೆಗಳನ್ನು ಪುರಂದರ ದಾಸರ ಶಿಷ್ಯಪ್ರಶಿಷ್ಯರು ದೋಚಿದ್ದಾರೆ. ಕಾಲದ ಅಗ್ನಿದಿವ್ಯ, ಪೂರ್ವಗ್ರಹರಹಿತ ಸಂಶೋಧನೆಯ ಮೂಲಕ ಸುಧಾಕರ ಅವರ ಆರೋಪಗಳನ್ನು ವಿದ್ವಜ್ಜನರು ಪರಿಶೀಲಿಸಬೇಕಾಗಿದೆ. ಈ ಅಪಹೃತ ಕೀರ್ತನೆಗಳೆಂಬ ಒಡವೆಗಳು ನಿಜಕ್ಕೂ ಯಾರಿಗೆ ಸೇರಿದವು ಎಂದು ನಿರ್ಣಯಿಸಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.