ಭಾರತದಲ್ಲಿ ಸಮಾಜಶಾಸ್ತ್ರ, ರಾಜ್ಯಶಾಸ್ತ್ರ ವಿಷಯಗಳಲ್ಲಿ ವಿಶೇಷ ಆಸಕ್ತಿ ಇರುವ ವಿದ್ಯಾರ್ಥಿಗಳು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆ.ಎನ್.ಯು.) ಓದಬೇಕೆಂಬ ಕನಸನ್ನು ಹೊತ್ತಿರುತ್ತಾರೆ. ಅದರಲ್ಲೂ ದೇಶದ ಚರಿತ್ರೆಯಲ್ಲಿ ಪರಿಣತಿ ಪಡೆಯಬಯಸುವ ವಿದ್ಯಾರ್ಥಿಗಳ ಗಮನ ಅಲ್ಲಿನ ‘ಸೆಂಟರ್ ಫಾರ್ ಹಿಸ್ಟರಿ’ ಕಡೆಗಿರುತ್ತದೆ. ಆ ವಿಭಾಗವನ್ನು ಕಟ್ಟಿ ಬೆಳೆಸಿದವರು ಪ್ರೊ.ಬಿಪಿನ್ ಚಂದ್ರ.

ಇವರ ಜೊತೆಗೆ ಅಲ್ಲಿದ್ದ ಮುಂಚೂಣಿಯ ಚರಿತ್ರಕಾರರಾದ ರೊಮಿಲಾ ಥಾಪರ್, ಎಸ್.ಗೋಪಾಲ್, ಸತೀಶ್ ಚಂದ್ರ ಅವರು ಆ ವಿಭಾಗಕ್ಕೆ ಮಾತ್ರವಲ್ಲ ದೇಶದ ಚರಿತ್ರೆಯ ಬರವಣಿಗೆಗೂ ಮಾರ್ಗವನ್ನು ಸೂಚಿಸಿದವರು. ಮೊನ್ನೆ ಅಂದರೆ ಆಗಸ್ಟ್ 30ರಂದು ಬಿಪಿನ್ ಚಂದ್ರ ಅವರ ಮರಣದ ವಾರ್ತೆಯನ್ನು ಕೇಳಿದಾಗ ಬಹುಶಃ ದೇಶದ ಯಾವುದೇ ಭಾಗದ ಚರಿತ್ರೆಯ ವಿದ್ಯಾರ್ಥಿಗಳಾದರೂ ಕೃತಜ್ಞತೆಯಿಂದ ಅವರನ್ನು ನೆನೆಯದೇ ಇರಲಾರರು.

ಏಕೆಂದರೆ ಅವರು ರಚಿಸಿದ ‘ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ’ ಎನ್.ಸಿ.ಇ.ಆರ್.ಟಿ. ಪಠ್ಯಕ್ರಮವಾಗುವ ಮೂಲಕ ವಿದ್ಯಾರ್ಥಿಗಳಿಗೆ ಅದನ್ನು ಓದುವ ಅವಕಾಶ ದೊರಕಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವ ಅಭ್ಯರ್ಥಿಗಳಿಗಂತೂ ‘ಹಿಸ್ಟರಿ ಆಫ್ ಮಾಡರ್ನ್ ಇಂಡಿಯಾ’ ಕೈಪಿಡಿಯೇ ಆಗಿದೆ. ಚರಿತ್ರೆಯ ಪಾಠ ಮಾಡಲು ನಿಲ್ಲುವವರಿಗೆ ಬಿಪಿನ್ ಅವರ ‘ಸ್ಟ್ರಗಲ್ ಫಾರ್ ಇಂಡಿಪೆಂಡನ್ಸ್’ ಪುಸ್ತಕದ ಓದು ಅನಿವಾರ್ಯವಾಗುತ್ತದೆ.

ಇವೆಲ್ಲ ನನ್ನ ಅನುಭವವೂ ಆಗಿರುವುದರಿಂದ ಜೆ.ಎನ್.ಯು.ನಲ್ಲಿ ರಿಫ್ರೆಷರ್ ಕೋರ್ಸ್ ನೆಪದಲ್ಲಿ ಒಂದು ತಿಂಗಳು ಕಳೆಯುವ ಅವಕಾಶ ಸಿಕ್ಕಾಗ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ನಾನು ದೆಹಲಿಯಲ್ಲಿ ಇದ್ದ ಹೊತ್ತಿನಲ್ಲಿ ಕಾರ್ಗಿಲ್ ಯುದ್ಧ ನಡೆದಿತ್ತು. ಹಾಗಾಗಿ ದೆಹಲಿಯಲ್ಲಿ ಎಲ್ಲೆಂದರಲ್ಲಿ ಸೈನ್ಯದ ತುಕಡಿಗಳಿದ್ದವು. ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಎನ್.ಸಿ.ಇ.ಆರ್.ಟಿ. ಪಠ್ಯಕ್ರಮದ ಪುನರ್ರಚನೆಯನ್ನು ಕೈಗೆತ್ತಿಕೊಂಡಿತ್ತು. ಹಾಗಾಗಿ ಈ ಎರಡೂ ವಿಷಯಗಳ ಚರ್ಚೆ ವಿಶ್ವವಿದ್ಯಾಲಯದಲ್ಲಿ ನಡೆದೇ ಇತ್ತು.

ದೇಶದ ಮೂಲೆಮೂಲೆಯಿಂದ ಈ ವಿಚಾರವಾಗಿ ಮಾತನಾಡಬಲ್ಲ ಪ್ರಾಧ್ಯಾಪಕರನ್ನು ಆಹ್ವಾನಿಸಿದ್ದರಿಂದ ಪಠ್ಯಪುಸ್ತಕದ ಕೇಸರೀಕರಣವನ್ನು ವಿರೋಧಿಸಿ ಅಲ್ಲಿ ಚಳವಳಿಯೇ ರೂಪುಗೊಂಡಿತ್ತು. ಬಿಪಿನ್ ಅವರನ್ನು ಅನುಸರಿಸಿ ಬಂದ ಶಿಷ್ಯರು ಹಾಗೂ ಮುಂದೆ ಬಂದ ಜೆ.ಎನ್.ಯು. ಪ್ರಾಧ್ಯಾಪಕರಿಂದ ಒಂದು ಆಲೋಚನಾ ಕ್ರಮವೇ ಬೆಳೆದುಬಂತು.

ಭಾರತ–-ಪಾಕಿಸ್ತಾನ ಯುದ್ಧದ ತಿರುಚಿದ ವ್ಯಾಖ್ಯಾನವಾಗಲೀ, ಪಠ್ಯಕ್ರಮದ ತಿರುಚುವಿಕೆಯ ಹುತ್ತದೊಳಗಿನ ಹಾವಾಗಲೀ ಕೋಮುವಾದವಲ್ಲದೆ ಬೇರೇನು? ದೇಶದಲ್ಲಿ ಬೆಳೆದು ಬಂದ ಕೋಮುವಾದವನ್ನು ಅಕಡೆಮಿಕ್ ಆಗಿ ವಿರೋಧಿಸುತ್ತಾ ಬಂದವರು ಮಾರ್ಕ್್ಸವಾದಿ ಚಿಂತಕರು. ಅದರ ಬಗ್ಗೆ ವಿಸ್ತಾರವಾಗಿ ಬರೆದವರು ಬಿಪಿನ್ ಚಂದ್ರ. ‘ಕಮ್ಯುನಲಿಸಂ ಇನ್ ಮಾಡರ್ನ್ ಇಂಡಿಯಾ’ ಪುಸ್ತಕ, ಈ ದೇಶಕ್ಕೆ ಕೋಮುವಾದ ಹೇಗೆ ವಸಾಹತು ಕೊಡುಗೆಯಾಗಿ ಬಂದಿದೆ ಎಂಬುದನ್ನು ತಿಳಿಸುತ್ತದೆ.

1857ರ ಬ್ರಿಟಿಷ್ ವಿರುದ್ಧದ ಹೋರಾಟದ ಸಂದರ್ಭದಲ್ಲಿ ಒಂದಾಗಿ ಹೋರಾಡಿದ ಹಿಂದೂ, ಮುಸಲ್ಮಾನರು, ಬ್ರಿಟಿಷರ ಒಡೆದು ಆಳುವ ನೀತಿಯ ತಂತ್ರಕ್ಕೆ ಬಲಿಯಾಗಿ ಪರಸ್ಪರ ದ್ವೇಷದ ಭಾವನೆಯನ್ನು ಬೆಳೆಸಿಕೊಂಡದ್ದು ದೇಶದ ದುರಂತವೇ ಸರಿ. 1875ರ ಹೊತ್ತಿಗೆ ಆರ್ಯ ಸಮಾಜ, ಅದೇ ಸುಮಾರಿಗೆ ಬಂದ ಅಲೀಘಡ ಚಳವಳಿಗಳು ಪರಸ್ಪರ ವಿರೋಧದ ನೆಲೆಯಲ್ಲಿ ಬೆಳೆಯತೊಡಗಿದವು. ಮುಂದೆ ಹಿಂದೂ ಮಹಾಸಭಾ ಮತ್ತು ಮುಸ್ಲಿಂಲೀಗ್ ಹುಟ್ಟಿಗೆ ಕಾರಣವಾದವು.

ನಂತರ ದೇಶವು ಬ್ರಿಟಿಷರ ನಿರೀಕ್ಷೆಯನ್ನೂ ಮೀರಿದ ತಾರ್ಕಿಕ ಅಂತ್ಯವನ್ನು ಕಂಡು ವಿಭಜನೆಯಲ್ಲಿ ಕೊನೆಗೊಂಡಿತು. ಹಾಗೆಂದು ನಮ್ಮ ಸಮಸ್ಯೆಗಳು ಅಲ್ಲಿಗೇ ಕೊನೆಗೊಳ್ಳಲಿಲ್ಲ. ಅದರ ಮುಂದುವರಿದ ಭಾಗವಾಗಿ ಕಾಶ್ಮೀರ ನಿರಂತರವಾಗಿ ರಕ್ತಸಿಕ್ತವಾಗಿದೆ. ಆಗಾಗ್ಗೆ ಮೈ ಮೇಲಿನ ಕಜ್ಜಿಯನ್ನು ಕೆರೆದು ವ್ರಣ ಮಾಡಿಕೊಳ್ಳುವ ನಾಯಿಯಂತಾಗಿದೆ ದೇಶದ ಸ್ಥಿತಿ. ಕಾರ್ಗಿಲ್ ಯುದ್ಧವೂ ಹಾಗೇ ಕೆರೆದ ಒಂದು ಗಾಯವೇ ಆಗಿತ್ತು. ಹೀಗೆ ಒಂದಕ್ಕೊಂದು ಹೆಣೆದುಕೊಂಡ ವಿಚಾರವನ್ನು ಮತ್ತು ಘಟನಾವಳಿಗಳನ್ನು ಒಂದು ಕ್ರಮಕ್ಕೆ ತಂದು ಬಿಪಿನ್ ತಮ್ಮ ವಾದದ ಸರಣಿಯನ್ನು ಮಂಡಿಸುತ್ತಾರೆ.

ಸರ್ಕಾರಗಳು ಬದಲಾದಂತೆ ತಾವು ನಂಬಿದ ಸಿದ್ಧಾಂತಕ್ಕೆ ಅನುಗುಣವಾಗಿ ಪಠ್ಯಕ್ರಮವನ್ನು ಬದಲಿಸುತ್ತವೆ. ಅದರಲ್ಲೂ ಚರಿತ್ರೆಯ ಪುಸ್ತಕಗಳ ಮೇಲೆ ಅವುಗಳ ಕಣ್ಣು ನೆಟ್ಟಿರುತ್ತದೆ. ಬ್ರಿಟಿಷರು ಭಾರತದ ಚರಿತ್ರೆಯನ್ನು ಬರೆಯುವಾಗ ಅದಕ್ಕೆ ವಸಾಹತುಶಾಹಿಯ ಉದ್ದೇಶಗಳಿದ್ದವು. ತಮ್ಮ ಅಗತ್ಯಕ್ಕೆ ತಕ್ಕಂತೆ ಅವರು ಭಾರತದ ಚರಿತ್ರೆಯನ್ನು ರಚಿಸಿದರು. ಪ್ರಾಚೀನ ಕಾಲವನ್ನು ಹಿಂದೂ ಕಾಲವೆನ್ನುವಾಗ ಅಥವಾ ಮಧ್ಯಕಾಲವನ್ನು ಮುಸ್ಲಿಂ ಕಾಲವೆಂದು ಪಟ್ಟ ಕಟ್ಟುವಾಗ ಉದ್ದೇಶಗಳಿದ್ದವು.

ಅವರ ಹುನ್ನಾರಗಳನ್ನು ಗಮನಿಸದೆ, ಅವರು ಹಾಕಿಕೊಟ್ಟ ಜಾಡಿನಲ್ಲೇ ಹೋದ ಭಾರತದ ರಾಷ್ಟ್ರೀಯವಾದಿ ಇತಿಹಾಸಕಾರರು ಅದಕ್ಕೆ ಮತ್ತಷ್ಟು ಗೊಬ್ಬರ, ನೀರು ಹಾಕಿದರು. ಇಂತಹ ಹೊತ್ತಿನಲ್ಲಿ ಹೊಸ ದೃಷ್ಟಿಕೋನದಿಂದ ಹೊರಟ ಮಾರ್ಕ್್ಸವಾದಿ ಚರಿತ್ರಕಾರರು ಆರ್ಥಿಕ ಹಾಗೂ ಸಾಮಾಜಿಕ ಪ್ರಶ್ನೆಗಳನ್ನು ಮುಂದಾಗಿಸಿಕೊಂಡು ಸಂಶೋಧನೆಯಲ್ಲಿ ತೊಡಗಿದರು. ಪ್ರಾಚೀನ ಭಾರತದ ಅಧ್ಯಯನದಲ್ಲಿ ವಿಶೇಷ ಕುತೂಹಲವನ್ನು ಹೊಂದಿದ ಡಿ.ಡಿ.ಕೊಸಾಂಬಿ ಅವರು ಹೊಸ ಸಂಶೋಧನಾ ಮಾರ್ಗವನ್ನೇ ಕಂಡುಕೊಂಡರೆ, ರೊಮಿಲಾ ಥಾಪರ್ ಅವರು ಆ ಜಾಡನ್ನು ಮುಂದುವರಿಸಿದರು. ಆಧುನಿಕ ಭಾರತದ ಬಗ್ಗೆ ಬರೆದ ಬ್ರಿಟಿಷರು ಅದನ್ನು ಗವರ್ನರ್ ಜನರಲ್ಗಳ ಸಾಧನೆಯ ಕಾಲವೆಂದು ಹೇಳತೊಡಗಿದರು.

ನಮ್ಮ ರಾಷ್ಟ್ರೀಯವಾದಿ ಚರಿತ್ರಕಾರರು ಬಹುತೇಕ ಅದೇ ಜಾಡಿನಲ್ಲೇ ಮುಂದುವರಿದರು. ಅದಕ್ಕೊಂದು ವಿಭಿನ್ನ ದೃಷ್ಟಿಕೋನದ ಅಗತ್ಯವಿತ್ತು. ಆ ಲೆಕ್ಕಕ್ಕೆ ರಾಷ್ಟ್ರೀಯವಾದಿಯೇ ಆಗಿದ್ದೂ, ಆರ್ಥಿಕ ಹಿನ್ನೆಲೆಯಲ್ಲಿ ವಸಾಹತು ಶೋಷಣೆಯನ್ನು ಬಹಿರಂಗಗೊಳಿಸಿದ ಸಾಹಸ ದಾದಾಭಾಯಿ ನವರೋಜಿ ಅವರಿಗೆ ಸಲ್ಲಬೇಕು. ವಿಭಿನ್ನ ಜಾಡನ್ನು ತುಳಿದವರಲ್ಲಿ ರಜನಿ ಪಾಲ್ಮೆ ದತ್ ಮತ್ತು ಆರ್.ಸಿ. ದತ್ ಅವರು ಮುಖ್ಯರಾಗುತ್ತಾರೆ ಮತ್ತು ಆರ್ಥಿಕ ಚರಿತ್ರೆಗೆ ಬುನಾದಿ ಹಾಕುತ್ತಾರೆ. ಎ. ಆರ್. ದೇಸಾಯಿ ಅವರಿಗೆ ಭಾರತೀಯ ನೆಲೆಯಿಂದ ಸಮರ್ಥವಾಗಿ ಚರಿತ್ರೆ ಕಟ್ಟಲು ಸಾಧ್ಯವಾಗಿತ್ತು.

ಇದರ ಮುಂದುವರಿಕೆಯಾಗಿ ಕಾಣುವುದು ಬಿಪಿನ್ ಚಂದ್ರ ಅವರ ‘ದಿ ರೈಸ್ ಅಂಡ್ ಗ್ರೋತ್ ಆಫ್ ಎಕನಾಮಿಕ್ ನ್ಯಾಷನಲಿಸಂ ಇನ್ ಇಂಡಿಯಾ’ ಹಾಗೂ ಅದಕ್ಕೆ ಪೂರ್ವದಲ್ಲಿ ಬಂದ ‘ನ್ಯಾಷನಲಿಸಂ ಅಂಡ್ ಕಲೋನಿಯಲಿಸಂ ಇನ್ ಮಾಡರ್ನ್ ಇಂಡಿಯಾ’. ರಾಷ್ಟ್ರೀಯತೆಯನ್ನು ಚರ್ಚಿಸುವಾಗ ಅವರ ಮೇಲೆ ಇಟಲಿಯ ದಾರ್ಶನಿಕ ಆಂಟೋನಿಯೊ ಗ್ರಾಮ್ಷಿ ಚಿಂತನೆ ಗಾಢವಾದ ಪರಿಣಾಮವನ್ನು ಬೀರಿದ್ದರೆ ಅದು ಸಹಜವೆಂದೇ ಭಾವಿಸಬೇಕಾಗುತ್ತದೆ.

ವಸಾಹತುಶಾಹಿಯೊಂದಿಗೆ ಭಾರತಕ್ಕೆ ಬಂದ ರಾಷ್ಟ್ರೀಯತೆಯ ಕಲ್ಪನೆ ತನ್ನ ಇನ್ನೂರು ವರ್ಷಗಳ ಬೆಳವಣಿಗೆಯಲ್ಲಿ ಹಲವು ಘಟ್ಟಗಳನ್ನು ದಾಟಿ ಬರುತ್ತದೆ. ಬ್ರಿಟಿಷ್ ವಸಾಹತುಶಾಹಿ ಭಾರತಕ್ಕೆ ಬರುವಾಗ ಅದೊಂದು ಸಿದ್ಧಾಂತವಾಗಿಯೇನೂ ಇಲ್ಲಿಗೆ ಬರಲಿಲ್ಲ, ಸ್ವಾರ್ಥವೇ ಅದರ ತಳಹದಿಯಾಗಿತ್ತು. ವ್ಯಾಪಾರದ ಹಂತದಿಂದ ಈ ದೇಶವನ್ನು ವಸಾಹತುವಾಗಿ ಮಾರ್ಪಡಿಸುವಾಗ ಪ್ರತಿ ಹೆಜ್ಜೆಯಲ್ಲೂ ತನ್ನ ತಾಯ್ನಾಡಿನ ಹಿತ ಚಿಂತನೆಯನ್ನು ಕಾಯ್ದುಕೊಂಡಿತ್ತು.

ಈ ನಾಡಿನ ವ್ಯಾಪಾರವನ್ನು ಬ್ರಿಟಿಷರು ತಮ್ಮ ಕೈಗೆ ತೆಗೆದುಕೊಂಡ ಬಗೆಯಾಗಲೀ, ಅವರು ಜಾರಿಗೆ ತಂದ ಭೂಸುಧಾರಣಾ ಕಾಯ್ದೆಗಳಾಗಲೀ ಎಲ್ಲವೂ ಅವರ ಒಳಿತಿಗಾಗಿಯೇ ರೂಪಿತವಾಗಿತ್ತು. ಅದರಲ್ಲೂ ಭೂ ಸುಧಾರಣೆ ಎಂಬ ಆಲೋಚನೆಯೇ ಹಾಸ್ಯಭರಿತವಾಗಿದೆ. ಅವರು ಜಾರಿಗೆ ತಂದ ಜಮೀನುದಾರಿ ಪದ್ಧತಿಯಾಗಲೀ, ಜಾಗೀರುದಾರಿ ಪದ್ಧತಿಯಾಗಲೀ ಈ ನೆಲದ ಪಸೆಯನ್ನು ಎಷ್ಟು ಸೊಗಸಾಗಿ ಹೀರಬಹುದೆಂಬುದಕ್ಕೆ ಕಂಡುಕೊಂಡ ಸೂತ್ರಗಳೇ ಆಗಿದ್ದವು.

ಅವು ರೈತನ ಉದ್ಧಾರಕ್ಕಾಗಿ ಜಾರಿಗೆ ಬಂದ ಆಡಳಿತ ವ್ಯವಸ್ಥೆಗಳಾಗಿರಲಿಲ್ಲ. ತಮ್ಮ ಮನಸ್ಸಿಗೆ ಬಂದಂತೆ ಇಲ್ಲಿನ ಕೃಷಿಯನ್ನು ಅವರು ನಿರ್ದೇಶಿಸಿದರು. ಬೆಳೆದ ಬೆಳೆಯನ್ನು ತಮ್ಮ ದೇಶಕ್ಕೆ ಕೊಂಡೊಯ್ದರು. ಈ ನೆಲ ಹಿಂದೆಂದೂ ಕಾಣದಂತಹ ಕ್ಷಾಮಕ್ಕೆ ತುತ್ತಾಯಿತು. ಬ್ರಿಟಿಷರು ಕಾಲಿಟ್ಟ ನೆಲ ಹತ್ತು ಹದಿನೈದು ವರ್ಷಗಳಲ್ಲಿ ಹೆಣದ ಬಣವೆಯಾಯಿತು. ಇಡೀ ಜಗತ್ತಿಗೇ ಬಟ್ಟೆಯನ್ನು ನೇಯ್ದು ಹೊದಿಸಿದ ಜನರ ಮೈಮೇಲಿನ ಬಟ್ಟೆಯನ್ನೂ ಅವರು ಕೀಳಿದರು. ಯೂರೋಪ್ ಕೈಗಾರಿಕಾ ಕ್ರಾಂತಿಯೆಂದು ಸಂಭ್ರಮಿಸುವ ಹೊತ್ತಿಗೆ ನಮ್ಮ ನೂಲುವ ರಾಟೆ ಮುರಿದು ಬಿದ್ದಿತ್ತು.

ನಿರ್ಗತಿಕ ಸ್ಥಿತಿ ನಮ್ಮನ್ನು ಒಂದಾಗಿಸಿತು. ಬಂಗಾಳದವರಾಗಲೀ, ತಮಿಳರಾಗಲೀ ಎಲ್ಲರ ಮನೆಯೂ ಸೋರಿತ್ತು. ಈ ಕಡುಕಷ್ಟ ಅವರಿಗೆಲ್ಲ ಒಂದಾಗಿ ಹೋರಾಡುವುದನ್ನು ಕಲಿಸಿತು. ಹೀಗೆ ಎಳೆಎಳೆಯಾಗಿ ವಸಾಹತುಶಾಹಿಯನ್ನು ಬಿಚ್ಚಿಟ್ಟ ಬಿಪಿನ್ ಒಬ್ಬ ಮಾರ್ಕ್್ಸವಾದಿ ಎನಿಸಿಕೊಂಡರೆ ಅದು ಗೌರವವೇ ಹೊರತು ಟೀಕೆಯಲ್ಲ. ವಸಾಹತುಶಾಹಿ ವಿರೋಧ, ರಾಷ್ಟ್ರೀಯತೆಯನ್ನು ಹುಟ್ಟುಹಾಕಿತು. ಅದನ್ನು ನೋಡಿಕೊಂಡು ಬ್ರಿಟಿಷರು ಬಾಯಲ್ಲಿ ಬೆಟ್ಟನ್ನು ಇರಿಸಿಕೊಂಡಿರಲಿಲ್ಲ. ಚೆನ್ನಾಗಿಯೇ ಮಗುವನ್ನು ಚಿವುಟಿ, ತೊಟ್ಟಿಲನ್ನೂ ತೂಗಿದರು.

ನಾವೆಲ್ಲರೂ ಒಂದು ಎಂದು ಭ್ರಮಿಸಿದಂತೆ, ಅರೆಬರೆ ಚರಿತ್ರೆಯ ತಿಳಿವು ನಮ್ಮಲ್ಲಿ ಕೆಲವರು ಬೇರೆ ಎನ್ನುವುದನ್ನೂ ಕಲಿಸಿತು. ಕಲ್ಪಿತ ರಾಷ್ಟ್ರೀಯತೆ ಕಲ್ಪಿತ ಧರ್ಮವನ್ನೂ ಹುಟ್ಟುಹಾಕಿತು. ವಸಾಹತುಶಾಹಿ, ರಾಷ್ಟ್ರೀಯತೆ, ಕೋಮುವಾದ ಇವೆಲ್ಲಾ ಒಂದಕ್ಕೊಂದು ಹೆಣೆದುಕೊಂಡು ಬೆಳೆದ ವಟವೃಕ್ಷಗಳೇ ಆದವು. ಇದನ್ನೆಲ್ಲ ಸಮತೂಕದಲ್ಲಿ ವಿವರಿಸಬೇಕಾದರೆ ಚರಿತ್ರೆಯನ್ನು ಬರೆಯುವ ಅದರದ್ದೇ ಆದ ಕ್ರಮವೂ ಬೇಕಾಗುತ್ತದೆ. ಅದನ್ನು ದಕ್ಕಿಸಿಕೊಂಡ ಹೆಗ್ಗಳಿಕೆ ಬಿಪಿನ್ರಿಗೆ ಸಲ್ಲುತ್ತದೆ. ಈ ದಿಕ್ಕಿನಲ್ಲಿ ಸಂಶೋಧನೆಯನ್ನು ಮಾಡಬಲ್ಲ ಅವರ ಶಿಷ್ಯ ಪಡೆ ಬೆಳೆದು ಬಂದುದನ್ನೂ ಪರಿಗಣಿಸಬೇಕಾಗುತ್ತದೆ.

ಮಾರ್ಕ್್ಸವಾದಿ ಚಿಂತನಾ ಕ್ರಮ ಕೆಲವೊಮ್ಮೆ ತೊಡಕಾಗಿಯೂ ಕಂಡುಬಂದಿದೆ. ನೇರವಾಗಿ ಮಾರ್ಕ್್ಸನ ವಿಚಾರಧಾರೆಯನ್ನೇ ಅಳವಡಿಸಿಕೊಳ್ಳುವುದಾಗಲೀ ಅಥವಾ ಮಾರ್ಕ್್ಸನ ವಿಚಾರದಿಂದ ಹೊರಗುಳಿದವರನ್ನು ಪರಿಗಣಿಸದೆ ಹೋಗುವುದಾಗಲೀ ಚರಿತ್ರೆಯನ್ನು ಅಪೂರ್ಣವಾಗಿಸುತ್ತದೆ. ಸುಮಿತ್ ಸರ್ಕಾರರು ಆಧುನಿಕ ಭಾರತದ ಚರಿತ್ರೆಯನ್ನು ಬರೆದಾಗ ಅಥವಾ ನಂಬೂದರಿಪಾಡ್ ಅವರ ಸ್ವಾತಂತ್ರ್ಯ ಹೋರಾಟದ ಕೃತಿಗಳಲ್ಲಿ ರಾಷ್ಟ್ರೀಯ ಕಾಂಗ್ರೆಸ್ನ ಪಾತ್ರ ಗೌಣವಾಗಿತ್ತು. ಅದರಲ್ಲೂ ಗಾಂಧೀಜಿ ಅವರ ಅಹಿಂಸಾತ್ಮಕ ಹೋರಾಟಕ್ಕಿಂತ ಕಾರ್ಮಿಕ ಹೋರಾಟ ಮುಖ್ಯವಾಗಿ ಕಂಡುಬಂದಿತು.

ಮಾರ್ಕ್್ಸವಾದಿಗಳು ಮಾಡಿದ ಹೋರಾಟ ಮಾತ್ರ ಶ್ರೇಷ್ಠ ಎಂದು ಭಾವಿಸದ ಬಿಪಿನ್ ತಮ್ಮ ಅಧ್ಯಯನ ಕ್ರಮವನ್ನು ‘ಓಪನ್ ಎಂಡೆಡ್’ (ಮುಕ್ತತೆ) ಎಂದು ಕರೆದುಕೊಳ್ಳುತ್ತಾರೆ. ಹಾಗಾಗಿ ರಾಷ್ಟ್ರೀಯ ಹೋರಾಟದ ವಿಸ್ತಾರವಾದ ಕ್ಯಾನ್ವಾಸ್ನ ಮೇಲೆ ಅವರವರಿಗೆ ಸಲ್ಲಬೇಕಾದ ಸ್ಥಾನ, ಬಣ್ಣಗಳನ್ನು ಕೊಡುವ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಗಾಂಧೀಜಿಯ ಹೋರಾಟಕ್ಕೆ ಹೆಚ್ಚಿನ ಮನ್ನಣೆಯನ್ನೇ ನೀಡಿದ್ದಾರೆ. ಗಾಂಧೀಜಿ ಅವರದು ಚರಿತ್ರಕಾರರ ಕುತೂಹಲಕ್ಕೆ ಸಿಕ್ಕ ವ್ಯಕ್ತಿತ್ವ. ಅವರು ನಡೆಸಿದ ಅಸಹಕಾರ ಆಂದೋಲನ, ಕರ ನಿರಾಕರಣೆ, ಭಾರತ ಬಿಟ್ಟು ತೊಲಗಿ ಇವು ರಾಷ್ಟ್ರೀಯ ಹೋರಾಟದ ಮೈಲಿಗಲ್ಲುಗಳಾಗಿವೆ.

ಜೊತೆ ಜೊತೆಯಲ್ಲೇ ಬುಡಕಟ್ಟು ಹೋರಾಟಗಳನ್ನೂ, ರೈತ ಹೋರಾಟಗಳನ್ನೂ ಮತ್ತು ಸಮಾಜ ಸುಧಾರಣಾ ಚಳವಳಿಗಳನ್ನೂ ಗುರುತಿಸಲು ಸಾಧ್ಯವಾಗಿದ್ದು ಭಾರತ ರಾಷ್ಟ್ರೀಯ ಹೋರಾಟವನ್ನು ‘ಎಪಿಕ್’ (ಮಹಾಕಾವ್ಯ) ಎನ್ನಲು ಕಾರಣವಾಯಿತು. ಇಂತಹ ‘ಮಹಾಕಾವ್ಯ’ವನ್ನು ರಚಿಸುವಾಗ ಬರವಣಿಗೆಗಳು ಮಾತ್ರವೇ ಆಧಾರಗಳಾಗಿಲ್ಲ. ದೇಶದಾದ್ಯಂತ ಜನರ ನೆನಪುಗಳನ್ನು, ಅನುಭವಗಳನ್ನು ದಾಖಲಿಸಲಾಯಿತು. ಆದ್ದರಿಂದಲೇ ಅವರು ಅದನ್ನು ಜನರ ಚರಿತ್ರೆಯೆಂದು ಕರೆದುಕೊಳ್ಳುತ್ತಾರೆ. ಹೀಗೆ ಸಂಗ್ರಹಿಸಿದ ಧ್ವನಿಸುರುಳಿಗಳನ್ನು ನವದೆಹಲಿಯ ನ್ಯಾಷನಲ್ ಮ್ಯೂಸಿಯಂನಲ್ಲಿ ಸಂಗ್ರಹಿಸಿಡಲಾಗಿದೆ.

ಬಿಪಿನ್ ಅವರ ಈ ವಿದ್ವತ್ಪೂರ್ಣ ಸಂಶೋಧನೆಗಳನ್ನು ಟೀಕಿಸುವವರಿಗೂ ಕೊರತೆ ಇಲ್ಲ. ಕೋಮುವಾದವನ್ನು ಕುರಿತು ಮಾತನಾಡುವ ಹೊತ್ತಿನಲ್ಲಿ, ದೇಶದ ಸನಾತನವಾದಿಗಳನ್ನು ಅವರು ಕಟುವಾಗಿ ವಿಮರ್ಶಿಸುತ್ತಾರೆ. ಹಿಂದೂ ಮೂಲಭೂತವಾದ ಮತ್ತು ಮುಸ್ಲಿಂ ಮೂಲ–ಭೂತವಾದಗಳೆರಡರ ಅಪಾಯವನ್ನು ಬಿಪಿನ್ ಗಮನಿಸಿದರೂ ಹಿಂದುತ್ವವಾದಿಗಳು ಅವರನ್ನು ಗುಮಾನಿಯಿಂದಲೇ ನೋಡುತ್ತಾರೆ.
ನೆಹರೂ ಬದುಕಿನ ಭಿನ್ನ ಹಂತಗಳನ್ನು ಗುರುತಿಸುತ್ತಾ, ಅವರು ಮೂಲದಲ್ಲಿ ಮಾರ್ಕ್್ಸವಾದಿಯಾಗಿದ್ದು ನಂತರ ಗಾಂಧೀಜಿಯ ಸಹವಾಸ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರುತ್ತದೆ ಎಂದಿದ್ದಾರೆ.

ಬಂಡವಾಳಶಾಹಿಗಳೊಂದಿಗಿನ ಅವರ ಒಡನಾಟವನ್ನು ಬಿಪಿನ್ ಕಟುವಾಗಿ ಟೀಕಿಸಿದರೂ, ಸ್ವಾತಂತ್ರ್ಯೋತ್ತರ ಭಾರತದ ಬಗ್ಗೆ ಬರೆಯುವಾಗ ನೆಹರೂ ಅವರಿಗೆ ಕೊಡುವ ಆದ್ಯತೆ ಆಧುನಿಕೋತ್ತರವಾದಿಗಳ ಟೀಕೆಗೆ ಗುರಿಯಾಗಿದೆ. ಈ ಎಲ್ಲ ಟೀಕೆ ಟಿಪ್ಪಣಿಗಳ ಆಚೆಗೂ ಇಡೀ ಜಗತ್ತು ಕಂಡ ಅತಿ ದೊಡ್ಡ ಜನಾಂದೋಲನವಾದ ಭಾರತದ ರಾಷ್ಟ್ರೀಯ ಹೋರಾಟವನ್ನು ಸಮರ್ಥವಾಗಿ ಕಟ್ಟಿಕೊಡಲು ಸಾಧ್ಯ
ವಾಗಿದ್ದು ಬಿಪಿನ್ ಅವರಿಗೇ. ಆಯಾ ಕ್ಷೇತ್ರದಲ್ಲಿ ವಿದ್ವತ್ ಉಳ್ಳವರು ಶಾಲಾ ಪಠ್ಯಗಳನ್ನು ಬರೆಯಬೇಕೆಂದು ಅವರು ಒತ್ತಾಯಿಸುತ್ತಿದ್ದರು. ತಮ್ಮ ಕಿರಿಯ ಶಿಷ್ಯರಿಂದಲೂ ಬಿಪಿನ್ ಎಂದು ಮಾತ್ರ ಕರೆಸಿಕೊಳ್ಳಲು ಅವರು ಬಯಸುತ್ತಿದ್ದರು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.