‘ಮಾಣ್ ನಿಷಾದ ಮಾಣ್’. ಹುತ್ತದಿಂದ ಹೊರಬಂದ ವಾಲ್ಮೀಕಿ, ಹಾರುತ್ತಿದ್ದ ಕ್ರೌಂಚ ಪಕ್ಷಿಗಳಿಗೆ ಬೇಡನೊಬ್ಬ ತೊಟ್ಟ ಬಾಣವನ್ನು ಕಂಡು ಉಚ್ಚರಿಸಿದ ಮೊದಲ ಸಾಲು ಇದೆಂಬ ಪ್ರತೀತಿ.

ಮಹಾಕಾವ್ಯಗಳನ್ನು ವಿವಾದಕ್ಕೆ ಹಚ್ಚುವುದು ಭಾರತದಲ್ಲಿ ಹೊಸ ವಿಚಾರವೇನೂ ಅಲ್ಲ. ‘ಮಹಾಭಾರತ’, ‘ರಾಮಾಯಣ’ಗಳ ಪಾತ್ರಗಳ ಬಗೆಗಾಗಲಿ, ಅದನ್ನು ರಚಿಸಿದ ಕವಿಗಳ ವಿಚಾರವಾಗಿ ಆಗಲಿ ಅಥವಾ ಅದನ್ನು ಕುರಿತು ಬರುವ ಮತ್ತಾವುದೇ ವಿಮರ್ಶೆಗಳನ್ನಾಗಲಿ ತೆರೆದ ಮನಸ್ಸಿನಿಂದ ಸ್ವೀಕರಿಸುವುದು ಸುಲಭದ ವಿಚಾರವಲ್ಲ. ಸಂಸ್ಕೃತಿಯ ಭಾಗವಾದ ಕಾವ್ಯವೊಂದು ಎಲ್ಲರಿಗೂ ಸೇರಿರುತ್ತದೆ ಎಂದು ಭಾವಿಸಿದರೆ ವಿಮರ್ಶೆಯಾಗಲಿ, ತಪ್ಪು–ಸರಿ ಎಂಬ ಪ್ರಶ್ನೆಯಾಗಲಿ ಏಳುವುದಿಲ್ಲ.

ಈ ಕಾವ್ಯಗಳು ಕೇವಲ ಕಾವ್ಯಗಳಾಗಿ ಉಳಿದಿಲ್ಲ, ಈ ನಾಡಿನ ಬದುಕಿನ ಹಾದಿಗೆ ಹೆಣೆದುಕೊಂಡಿವೆ. ಹಾಗಾಗಿ ಎಲ್ಲರೂ ಅದರ ಮೇಲೆ ತಮ್ಮ ಹಕ್ಕನ್ನು ಚಲಾಯಿಸುತ್ತಾ ಬಂದಿದ್ದಾರೆ. ಕೆಲವರಿಗೆ ಕಾವ್ಯವಾದರೆ, ಮತ್ತೆ ಕೆಲವರಿಗೆ ಅದು ಧರ್ಮ, ಕಲೆ, ಆದರ್ಶ, ಪುರಾಣ ಎಲ್ಲವೂ ಆಗಿವೆ. ಅಯೋಧ್ಯೆ ವಿವಾದದ ಸಂದರ್ಭದ ಹೊತ್ತಿಗೆ ಕಾವ್ಯವನ್ನು ಚರಿತ್ರೆಯಾಗಿ ನೋಡಲಾಯಿತು. ನಂಬಿಕೆ, ಕಾವ್ಯ, ಧರ್ಮ, ದೇವರು ಎಲ್ಲಾ ಬೆರೆತು ರಾಜಕೀಯಗೊಂಡಿತು. ರಾಜಕೀಯಗೊಂಡ ಧರ್ಮ, ವೈಚಾರಿಕತೆಯನ್ನು ಕಳೆದುಕೊಳ್ಳುತ್ತದೆ. ಮೂಕ ಸಾಕ್ಷಿಯಾದ ದೇವರುಗಳೂ ಅಂದು ಬೆರಗುಗೊಂಡಿರಬೇಕು. ಅದರ ಮೂಲದ ರಚನೆಯನ್ನು ಬಿಟ್ಟು ಮತ್ತೇನೋ ಆಗಿ ನೋಡುವುದೇ ಈ ಕಾವ್ಯಗಳ ಬಗೆಗಿನ ಸಮಸ್ಯೆಯಾಗಿದೆ. ಎ.ಕೆ. ರಾಮಾನುಜನ್ ಬರೆದ ಮುನ್ನೂರು ರಾಮಾಯಣಗಳನ್ನು ಕುರಿತ ಪ್ರಬಂಧವನ್ನು ಎರಡು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯ ಪಠ್ಯವಾಗಿಸಿತು. ಅದರ ವಿರುದ್ಧ ಪ್ರತಿಭಟನೆ ತಲೆದೋರಿದಾಗಲೂ ರಾಮಾಯಣ ಕಾವ್ಯ ಹೀಗೇ ಇರಬೇಕೆಂದು ಹೇಳುವ ಮೂಲಭೂತವಾದ ಅಲ್ಲಿ ಮನೆ ಮಾಡಿತ್ತು.

ರಾಮಾಯಣ, ಮಹಾಭಾರತಗಳ ವಿಭಿನ್ನ ನೋಟಗಳನ್ನೇ ಅಲ್ಲಿ ಪ್ರಶ್ನೆ ಮಾಡಲಾಯಿತು. ಕರ್ನಾಟಕದಲ್ಲಿ ಪೋಲಂಕಿ ರಾಮಮೂರ್ತಿ ಅವರು ‘ಸೀತಾಯಣ’ವನ್ನು ಬರೆದಾಗ ಬಂದ ವಿರೋಧ ಇದಕ್ಕೆ ಮತ್ತೊಂದು ಉದಾಹರಣೆ. ಕಾವ್ಯದ ವೈವಿಧ್ಯಮಯ ವ್ಯಾಖ್ಯಾನವನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿಯೇ ಸಮಸ್ಯೆಗೆ ಕಾರಣವಾಗಿದೆ. ಮಹಾಕಾವ್ಯದ ಹುಟ್ಟನ್ನು ಅರ್ಥ ಮಾಡಿಕೊಳ್ಳುವಲ್ಲಿ ಸಮಸ್ಯೆಯಿದೆ ಎನ್ನುವುದು ಸ್ಪಷ್ಟವಾಗುತ್ತದೆ.

ಪ್ರಾಚೀನ ಮಹಾಕಾವ್ಯಕ್ಕೆ ಮೂಲಗಳು ಹಲವಾರು. ಅದು ಅದರ ಸೊಬಗೂ ಹೌದು. ಜೀವನಾನುಭವಗಳನ್ನು ಜನರು ಕಥೆ ಕಟ್ಟಿ ಹೇಳತೊಡಗುತ್ತಾರೆ. ಅದರಲ್ಲೂ ಸಾಹಸದ ಗಳಿಗೆಗಳು ರೋಚಕತೆಯನ್ನು ಪಡೆದುಕೊಳ್ಳುತ್ತವೆ. ಕಟ್ಟಿಕೊಂಡ ಆಶಯಗಳು, ಕಂಡ ಕನಸುಗಳು, ಕಂಡುಂಡ ನೋವುಗಳು ಈ ಕಥೆಗಳ ತಿರುಳಾಗಿರುತ್ತವೆ. ಹೀಗೆ ಸಮಾಜದಲ್ಲಿ ಜನಜನಿತವಾದ ನೂರಾರು ಕಥೆಗಳು ಜನಪದರ ಬಾಯಲ್ಲಿ ಹರಿದಾಡುತ್ತಿರುತ್ತವೆ. ಅವು ಗಾದೆಗಳಾಗಿ, ಒಗಟುಗಳಾಗಿ ಜನಪದ ಗೀತೆಗಳಾಗಿ ರೂಪು ಪಡೆಯುತ್ತವೆ. ‘ಕವಿರಾಜಮಾರ್ಗ’ಕಾರ ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂದು ಹೇಳುತ್ತಾ ಜನಪದರ ಈ ಕಾವ್ಯಕಟ್ಟುವ ಗುಣವನ್ನು ಮೆಚ್ಚಿ ನುಡಿಯುತ್ತಾನೆ. ಇಂತಹ ಕಾವ್ಯಕಟ್ಟುವ ಗುಣ ಜಗತ್ತಿನಾದ್ಯಂತ ಜನಪದರಿಗಿತ್ತೆಂಬುದು ಸೋಜಿಗ ವೆನಿಸುತ್ತದೆ. ಅವರು ಹಳ್ಳಿಗರಾಗಿರಲಿ, ಗಿರಿಜನರಾಗಿರಲಿ, ಪಶುಪಾಲಕರಾಗಿರಲಿ ಅವರವರ ಹಿನ್ನೆಲೆಯ ಬದುಕು ಹಾಡಾಗಿ ಹೊರಹೊಮ್ಮಿದೆ.

ಇಂತಹ ಕಥೆಗಳು ಮುಂದೆ ಲಾವಣಿಗಳಾಗಿ ಕಥನ ಕವನಗಳಾಗಿ ಬೆಳೆಯುತ್ತವೆ. ಅದರಲ್ಲೂ ಕಾದಾಟಗಳನ್ನು ಕಂಡವರು, ತಮ್ಮ ಒಡೆಯನ ರಥಕ್ಕೆ ಸಾರಥಿಗಳಾದವರು ಊರಿಗೆ ಮರಳಿ ಬಂದಾಗ ಕದನವನ್ನು ಸ್ವಾರಸ್ಯಕರವಾಗಿ ವಿವರಿಸುತ್ತಿದ್ದರು. ಇಂತಹ ವೀರರ ಕಥೆಗಳು ಬೆಳೆದು ಅದರ ಹುಟ್ಟನ್ನು ಮರೆತು ಸರ್ವವ್ಯಾಪಿಯಾಗತೊಡಗುತ್ತವೆ. ಊರಿಂದ ಊರಿಗೆ ಅಲೆಯುವ ಮಂದಿ ತಮ್ಮ ಜೊತೆ ಕಥೆಗಳನ್ನೂ ತೆಗೆದುಕೊಂಡು ಹೋಗುತ್ತಾರೆ. ಪರ ಊರಿನ ಕಥೆಗಳನ್ನು ತಮ್ಮ ಊರಿಗೆ ತಂದು ಅಲ್ಲಿನ ಅನುಕೂಲಕ್ಕೆ ತಕ್ಕಂತೆ ನಿರೂಪಿಸುತ್ತಾರೆ. ಕಾಲಾಂತರದಲ್ಲಿ ಯಾರದೋ ಕಥೆ ಯಾರದೋ ಹೆಸರಿನಲ್ಲಿ ಕೇಳತೊಡಗುತ್ತದೆ. ಅಷ್ಟೇ ಅಲ್ಲದೆ, ತಾವು ಮೆಚ್ಚುವ ನಾಯಕನನ್ನು ತಮಗೆ ಬೇಕಾದಂತೆ ಚಿತ್ತಾರಗೊಳಿಸುತ್ತಾ ಹೋಗುತ್ತಾರೆ.

ಹೀಗೆ ಯಾವುದೋ ಕಾಲದಿಂದ ಹರಿದು ಬಂದ ಕಥೆಗಳು ಮಹಾ ನದಿಯನ್ನು ಸೇರುವ ಉಪನದಿಗಳಂತೆ ಕೂಡಿಕೊಳ್ಳುತ್ತವೆ. ಎಲ್ಲವನ್ನೂ ತಮ್ಮದಾಗಿಸಿಕೊಂಡು ಕಥೆ ಹೇಳುವ ಕಲೆಗಾರರ ಬಾಯಲ್ಲಿ ಎಲ್ಲವೂ ಆತ್ಮೀಯವಾಗತೊಡಗುತ್ತವೆ. ಆದ್ದರಿಂದಲೇ ಭರತ ಖಂಡದಲ್ಲಿ ಹುಟ್ಟಿದ ಕಥೆಗಳು ಮ್ಯಾನ್ಮಾರ್‌ನಲ್ಲೂ, ಮಲೇಷ್ಯಾದಲ್ಲೂ ಅವರದೇ ಕಥೆಗಳೆನ್ನುವಂತೆ ಜನಜನಿತವಾಗಿವೆ. ಇಷ್ಟೇ ಅಲ್ಲದೆ, ಅವು ಯಾವುದೋ ಒಂದು ಕಾಲಕ್ಕೆ ಸೇರಿದ ಕಥೆಗಳೂ ಅಲ್ಲ. ನಿರಂತರವಾಗಿ ಬೆಳೆಯುವ ಕಥೆಗಳು. ಇವು ಒಂದು ಹಂತಕ್ಕೆ ನಾವು ಕೇಳುವ ಜನಪದ ಮಹಾಕಾವ್ಯದ ಸ್ವರೂಪವನ್ನು ಪಡೆದುಕೊಳ್ಳುತ್ತವೆ. ಇದರ ಬೆಳವಣಿಗೆ ಅಲ್ಲಿಗೇ ನಿಲ್ಲುವುದಿಲ್ಲ. ಪ್ರತಿಭಾವಂತ ಕವಿ ಅದನ್ನೊಂದು ಬಿಗಿಯಾದ ಛಂದಸ್ಸಿಗೆ ಒಗ್ಗಿಸಿ ತನ್ನ ನಿಲುವುಗಳ ಜೊತೆಗೆ ಅದಕ್ಕೊಂದು ಚೌಕಟ್ಟನ್ನು ನೀಡುತ್ತಾನೆ.

ಹಾಗಾಗಿ ಮಹಾಕಾವ್ಯದ ಸ್ವರೂಪ ಸಿಕ್ಕಿದಂತಾಗುತ್ತದೆ. ಜನಪದೀಯವಾದ ಹಲವು ಅಂಶಗಳನ್ನು ಉಳಿಸಿಕೊಳ್ಳುತ್ತಾ ಮಹಾಕವಿಯಿಂದ ಕೆಲವನ್ನು ಪಡೆದುಕೊಳ್ಳುತ್ತಾ ಮಹಾಕಾವ್ಯ ಅರಳುತ್ತದೆ. ಮಹಾಕವಿ ತನ್ನ ಶಿಷ್ಟತೆಯನ್ನು ತನಗರಿವಿಲ್ಲದಂತೆ ಅಲ್ಲಿಯ ಪಾತ್ರಗಳಿಗೆ ಬರಿಸುತ್ತಾನೆ. ಹೀಗೆ ರೂಪಿತವಾದ ಎರಡು ಸಂಸ್ಕೃತ ಮಹಾಕಾವ್ಯಗಳೆಂದರೆ ‘ಮಹಾಭಾರತ’ ಮತ್ತು ‘ರಾಮಾಯಣ’. ಸುಮಾರು ಮೂರು ಸಾವಿರ ವರ್ಷಗಳ ಹಿಂದಿನ ಕಥೆಗಳು. ಮಹಾಭಾರತ ಉತ್ತರ ಭಾರತದ ಹಲವು ಬುಡಕಟ್ಟುಗಳು ನಡೆಸಿದ ಕದನದ ಹಿನ್ನೆಲೆಯಲ್ಲಿ ಬೆಳೆದು ಬಂದ ಕಥೆ. ಆ ಕಥೆಗೆ ಹಿಡಿಂಬೆಯ ಹೆಸರಿನಲ್ಲಿ ಸೇರಿರುವ ಕಥಾ ಭಾಗ ಕನ್ನಡನಾಡಿನ ಚಿತ್ರದುರ್ಗ ಇರಬಹುದಾದರೆ, ವಾಲಿ–ಸುಗ್ರೀವರ ಭಾಗ ಕಿಷ್ಕಿಂದಾ ನಾಡೆನಿಸಿಕೊಂಡ ಇಂದಿನ ಹಂಪಿ ಪ್ರದೇಶದ ಕಥೆ. ಒಟ್ಟು ಮಹಾಕಾವ್ಯದಲ್ಲಿ ಬರುವ ಕಥೆಗಳು ಬೇರೆಬೇರೆ ಕಾಲಘಟ್ಟದಲ್ಲಿ ನಡೆದಿರಬಹುದಾದ ಘಟನೆಗಳು, ಅನುಭವಗಳು ಅವಾಗಿರಬಲ್ಲವು. ಅಷ್ಟೇ ಅಲ್ಲದೆ, ಜನಪದರ ಹಾಗೂ ಮಹಾಕವಿಯ ಕಲ್ಪನೆಗಳು, ಆಶಯಗಳು ಅದರಲ್ಲಿ ಸೇರಿಹೋಗಿರುತ್ತವೆ.

ಮಹಾಕಾವ್ಯದ ಕಥೆಗಳು ಒಂದು ಕಾಲ ಘಟ್ಟದವೂ ಆಗಿರಲಾರವು ಎನ್ನುವುದಕ್ಕೂ ನಮಗೆ ಪ್ರಾಕ್ತನ ಆಧಾರಗಳೇ ದೊರಕುತ್ತವೆ. ಪ್ರಾಕ್ತನ ಶಾಸ್ತ್ರಜ್ಞರಾದ ಎಸ್.ಡಿ. ಸಂಕಾಲಿಯ ಈ ನಿಟ್ಟಿನಲ್ಲಿ ನಡೆಸಿದ ಸಂಶೋಧನೆ ಬಹು ಅಪರೂಪದ್ದೆಂದೇ ಹೇಳಬೇಕಾಗುತ್ತದೆ. ಇವತ್ತು ನಾವು ಕೇಳುತ್ತಿರುವ ರಾಮಾಯಣ, ಮಹಾಭಾರತದ ನಗರಗಳ ವೈಭವ ಸುಮಾರು ಸಾವಿರದ ಐನೂರರಿಂದ ಏಳುನೂರು ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ. ಎಂದರೆ ಬಹುತೇಕ ಗುಪ್ತರ ಕಾಲದ ಆಸ್ಥಾನಗಳನ್ನು ಇಲ್ಲಿ ವರ್ಣಿಸಲಾಗಿದೆ. ಆದ್ದರಿಂದ ರಾಮಾಯಣ, ಮಹಾಭಾರತದ ಕಥೆಗಳಲ್ಲಿ ಕಾಣುವ ವೈದಿಕ ಕಾಲದ ಬೆಳವಣಿಗೆಯ ಹಂತ ಇದಾಗಿಲ್ಲ. ರಾಮಾಯಣ ಕಾಲದ್ದೆಂದು ನಂಬಿರುವ ಅಯೋಧ್ಯ ಆ ಕಾಲದಲ್ಲಿ ಇರಲಿಲ್ಲವೆಂದು ಈಗಾಗಲೇ ಚರಿತ್ರೆಕಾರರು ಕಂಡುಕೊಂಡಿದ್ದಾರೆ. ಆದ್ದರಿಂದ ಗುಪ್ತರ ಕಾಲದ ಪ್ರಸಿದ್ಧ ನಗರವೊಂದು ಕಾವ್ಯದ ಕೇಂದ್ರಬಿಂದುವಾಯಿತು. ಕಾವ್ಯಗಳು ನಿರಂತರವಾಗಿ ಬೆಳೆಯುತ್ತಿರುತ್ತವೆ ಎನ್ನುವುದಕ್ಕೆ ಇದು ಒಂದು ಒಳ್ಳೆಯ ಉದಾಹರಣೆಯಾಗಿದೆ.

ಆಯಾ ಕಾಲಘಟ್ಟದಲ್ಲಿ ಬಳಸುತ್ತಿದ್ದ ವಸ್ತುಗಳನ್ನು ಆಧರಿಸಿ ಸಂಕಾಲಿಯ ಅವರು ರಾಮಾಯಣ ಹಾಗೂ ಮಾಹಾಭಾರತದಲ್ಲಿ ಬಂದು ಹೋಗುವ ವಿದ್ಯಮಾನಗಳು ಯಾವ ಕಾಲಘಟ್ಟದವು ಎನ್ನುವುದರ ಬಗೆಗೆ ಬೆಳಕು ಚೆಲ್ಲುತ್ತಾರೆ. ಮುದ್ರೆಯುಂಗುರ ದುಷ್ಯಂತ ಹಾಗೂ ಶಕುಂತಲೆಯರ ಕಥೆಗೆ ತಿರುವು ನೀಡುವ ಪ್ರಸಂಗ. ಭಾರತದ ಚರಿತ್ರೆಯಲ್ಲಿ ಮುದ್ರೆಯುಂಗುರವೊಂದು ಕಾಣಿಸಿಕೊಳ್ಳುವುದು ಒಂದನೇ ಶತಮಾನದಲ್ಲಿ. ಅದರ ಅರ್ಥ ಮುದ್ರೆಯುಂಗುರದ ಪ್ರಸಂಗ ಆನಂತರದಲ್ಲಿ ಮಹಾಕಾವ್ಯಕ್ಕೆ ಬಂದು ಸೇರಿದೆ. ರಾಮಾಯಣದಲ್ಲಿ ಹನುಮಂತ, ರಾಮನ ಮುದ್ರೆಯುಂಗುರವನ್ನು ಸೀತೆಗೆ ತೋರಿಸಿದಾಗ ಒಂದನೇ ಶತಮಾನ ಕಳೆದುಹೋಗಿರಬೇಕು. ಇಂತಹ ನೂರಾರು ವಿಚಾರಗಳು ಚರಿತ್ರೆಯ ಸಂಶೋಧನೆಗೆ ಸಿಗುತ್ತವೆ. ಅದೇ ಸಾಮಾಜಿಕ ಹಿನ್ನೆಲೆಯನ್ನು ನೋಡಿದರೆ ಈ ಕಾವ್ಯಗಳಲ್ಲಿ ಬರುವ ರಾಕ್ಷಸರು ಯಾರು? ಕಾವ್ಯಗಳಲ್ಲಿ ವರ್ಣಿಸಿರುವಂತೆ ವಿಕಾರವಾಗಿದ್ದರೇ? ಇಂತಹ ಪ್ರಶ್ನೆಗಳು ಬಹುಶಃ ಕಾವ್ಯದ ಗುಣವನ್ನು ಕಳೆಯುತ್ತವೆ.

ಆದರೂ ಮಹಾಕಾವ್ಯಗಳನ್ನು ರಚಿಸಿದ ಹೆಗ್ಗಳಿಕೆ ವಾಲ್ಮೀಕಿ ಹಾಗೂ ವ್ಯಾಸರಿಗೆ ಸಲ್ಲುತ್ತದೆ. ಹಾಗೆಂದು ಆ ಕಾವ್ಯಗಳು ಅಲ್ಲಿಗೇ ನಿಲ್ಲುವುದೂ ಇಲ್ಲ. ಮಹತ್ವದ ಬದಲಾವಣೆಗಳನ್ನು ಮುಂದೆ ಬಂದ ಕವಿಗಳು ಅದಕ್ಕೆ ನೀಡಿದ್ದಾರೆ. ಆ ಕಥೆಗಳ ವಿಸ್ತರಣೆಯಲ್ಲಿ ಎಷ್ಟರಮಟ್ಟಿಗೆ ಒಬ್ಬೊಬ್ಬ ಕವಿಯೂ ಕಾರಣನಾಗಿದ್ದಾನೆಂದು ನೋಡುವುದು ಕವಿಚರಿತ್ರೆಕಾರರ ಕುತೂಹಲಕ್ಕೆ ಬಿಟ್ಟ ವಿಚಾರವಾಗುತ್ತದೆ. ಅವರಾಡುವ ಭಾಷೆಗೆ ಆ ಕಥೆಗಳನ್ನು ಒಳಗುಮಾಡಿಕೊಳ್ಳುವ ಮೂಲಕ ಹೊಸವಿಸ್ತಾರವನ್ನು ನೀಡುತ್ತಾ ಹೋಗುತ್ತಾರೆ. ಇಲ್ಲಿ ಕಾವ್ಯ ಮೂಲದ ಪ್ರಶ್ನೆ, ಕಾವ್ಯವನ್ನು ಆಸ್ವಾದಿಸುವ ಓದುಗನಿಗೆ ಮುಖ್ಯವಾಗುವುದಿಲ್ಲ. ಅಕಾಡೆಮಿಕ್ ಪ್ರಶ್ನೆಯಾಗಿ ಮಾತ್ರ ಉಳಿಯುತ್ತದೆ. ಕಾವ್ಯದ ಜೀವಂತಿಕೆ ಇರುವುದೇ ಅದರ ವಿಕಾಸ ಗುಣದಲ್ಲಿ. ಮೂಲಕಾವ್ಯದಲ್ಲಿ ಕಾಣದ ಹೊಸದಾದ ಸರ್ವೋದಯವೆಂಬ ಆದರ್ಶ ಕಂಡರೆ ಅದು ಕುವೆಂಪು ಅವರ ಕೊಡುಗೆಯಾಗುತ್ತದೆ. ಹೀಗೊಂದು ವಿದ್ವತ್ ಮಟ್ಟದ ಸಂವಾದವೂ ಸದಾಕಾಲಕ್ಕೂ ಸಾಗಿಬರುತ್ತದೆ. ಅದರಲ್ಲಿ ವಿದ್ವತ್ ಪ್ರಪಂಚ ಬೌದ್ಧಿಕ ನೆಲೆಯಲ್ಲಿ ಕಾವ್ಯವನ್ನು ಆಸ್ವಾದಿಸಬಲ್ಲದು.

ಕಾವ್ಯದ ಮೂಲ ನೆಲೆಯನ್ನು ಜನಪದರಲ್ಲಿ ಕಂಡುಕೊಂಡಂತೆ ಅವು ಮರಳಿ ಜನಪದರಿಗೆ ಹೋದಾಗಲೂ ಬೇರೊಂದು ಸೊಬಗನ್ನು ಅಲ್ಲಿ ಕಾಣಬಹುದು. ಅದಾವುದೂ ಇಲ್ಲದೆ ತಮ್ಮದೇ ಶೈಲಿಯಲ್ಲಿ ಹಗಲು ವೇಷದವರು ಮುಖಕ್ಕೆ ಬಣ್ಣ ಬಳಿದು ರಾಮ, ಸೀತೆ, ಹನುಮಂತನಾಗಿ ಕುಣಿದರೆ, ಜಗಜಗಿಸುವ ಆಭರಣಗಳನ್ನು ತೊಟ್ಟು, ಬಣ್ಣಬಣ್ಣದ ಸೀರೆಯುಟ್ಟು ಪೌರಾಣಿಕ ನಾಟಕಗಳನ್ನು ಆಡುವ ಕಲಾವಿದರು ಅವರವರ ಕಲ್ಪನೆಗೆ ತಕ್ಕಂತೆ ಸಂಭ್ರಮಿಸುತ್ತಾರೆ. ಅದರ ಹಿಂದಿನ ಕಥೆಯ ಮೂಲ ಆಶಯವನ್ನು ಉಳಿಸಿಕೊಂಡು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಮೆರೆಸುತ್ತಾರೆ. ಹಾಗೆಂದರೆ ಇವರು ಮೂಲಮಾತೃಕೆಗೆ ಸದಾ ನಿಷ್ಠರಾಗಿರಬೇಕೆಂದೇನೂ ಅಲ್ಲ. ದೂರ ಸರಿಯುವ ಎಲ್ಲಾ ಹಕ್ಕನ್ನೂ ಪಡೆದೇ ಇರುತ್ತಾರೆ.

ಕಾವ್ಯದ ಮೇಲಿನ ಒಡೆತನ ಇಡೀ ಸಮಾಜಕ್ಕೇ ಸೇರಿರುತ್ತದೆ. ಇಂತಹ ಮಾರ್ಪಾಡುಗಳು ಯಕ್ಷಗಾನದಲ್ಲಿ ಹೇರಳವಾಗಿ ಕಾಣುತ್ತವೆ. ಕೃಷ್ಣಸಂಧಾನದ ಸಮಯದಲ್ಲಿ ಬಹುಸಹಜವಾಗಿ ಸಮಕಾಲೀನ ರಾಜಕೀಯ ವಿಡಂಬನೆಗಳು ಸೇರಿರುತ್ತವೆ. ಮಹಾಕಾವ್ಯವನ್ನು ತಮ್ಮ ನೆಲೆಗೆ ದಕ್ಕಿಸಿಕೊಳ್ಳುವಲ್ಲಿ ಜನಪದರು ನಿಸ್ಸೀಮರು.

ಉತ್ತರ ಕನ್ನಡ ಜಿಲ್ಲೆಯ ‘ಗಾಮೊಕ್ಕಲ ಭಾರತ’ ಕೃತಿಯಲ್ಲಿ ದ್ರೌಪದಿಯನ್ನು ಈ ಒಕ್ಕಲು ಸಮುದಾಯದ ಹೆಣ್ಣು ಮಗಳಂತೆ ಚಿತ್ರಿಸಿಕೊಳ್ಳುತ್ತಾರೆ. ಗುಡಿಸಲಿಗೆ ಸೆಗಣಿ ಹಾಕಿ ಸಾರಿಸುತ್ತಾರೆ. ದ್ರೌಪದಿಯನ್ನು ಪಣಕ್ಕೊಡ್ಡಿ ಪಗಡೆಯಾಟದಲ್ಲಿ ಪಾಂಡವರು ಸೋತಾಗ ಮೈದುನ ದುಶ್ಯಾಸನ ಅವಳನ್ನು ಸಭೆಗೆ ಕರೆತರುವ ಪ್ರಸಂಗದಲ್ಲಿ, ಅವಳು ಮುಟ್ಟಾಗಿ ಗುಡಿಸಲಿನಲ್ಲಿರುತ್ತಾಳೆ. ಸಭೆಗೆ ಬಂದ ದ್ರೌಪದಿ ತನ್ನ ಗಂಡಂದಿರಿಗೆ ಛೀಮಾರಿ ಹಾಕಿ ಆ ದೊಡ್ಡ ಗುಡಿಸಲಿನಿಂದ ಹೊರಹೋಗುತ್ತಾಳೆ. ಅಲ್ಲಿ ಅವಳೊಬ್ಬ ಅಸಹಾಯಕ ಮಹಿಳೆಯಲ್ಲ. ಆದರೆ, ಭಾಗವತದ ಪ್ರಭಾವಕ್ಕೆ ಒಳಗಾದ ಕವಿಗಳು ಅವಳ ಸೀರೆ ಅಪರಿಮಿತವಾಗಿ ಹೆಚ್ಚಿ ಅವಳ ಮಾನವನ್ನು ಕೃಷ್ಣ ಕಾಪಾಡುವಂತೆ ಕಲ್ಪಿಸಿದ್ದಾರೆ. ಬಹುಶಃ ಬುಡಕಟ್ಟು ಮಹಿಳೆಗೆ ಆ ಅಸಹಾಯಕತೆಯನ್ನು ತೋರುವುದು ವಿಚಿತ್ರವೆನಿಸಿರಬೇಕು. ಅದೇ ರೀತಿ ರಾಮಾಯಣದ ಸೀತೆ ಅಗ್ನಿಪ್ರವೇಶ ಮಾಡುವುದು ಯಾರ ಆಶಯವಾಗಿರಬಹುದು ಎಂಬುದನ್ನು ನಾವು ಇಂದು ಯೋಚಿಸಬೇಕಾಗುತ್ತದೆ.

ಈ ಕಾವ್ಯದ ಹರವು ಭಾರತಕ್ಕೆ ಮೀಸಲಾಗಿರದೆ ಏಷ್ಯಾದಾದ್ಯಂತ ಪಸರಿಸಿದೆ. ಆ ವೈಶಾಲ್ಯ ಅದನ್ನು ಓದುವವರೂ ಆಚರಿಸುವವರೂ ರೂಢಿಸಿಕೊಳ್ಳಬೇಕಾಗಿದೆ. ಕವಿ, ಆಶಯ, ಅದರ ಹಿಂದಿನ ಚಾರಿತ್ರಿಕ ಸತ್ಯ ಎಲ್ಲವನ್ನೂ ಸಮಕಾಲೀನಗೊಳಿಸಿ ರಾಜಕೀಯ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾವ್ಯವನ್ನು ನಂಬುವಂತೆ ಕವಿಯ ಮೂಲಕ್ಕೂ ಸೊಗಸಾದ ಕಥೆಗಳಿವೆ. ಕಾವ್ಯದ ಒಳಹೊಕ್ಕ ಆ ಕಥೆಗಳೇ ಅದರ ಆಕರಗಳೂ ಆಗಿರುತ್ತವೆ. ಭಾರತದ ಇಂದಿನ ಜಾತಿ ರಾಜಕಾರಣ ಈ ಎಲ್ಲದರಲ್ಲೂ ತನ್ನ ಹಸ್ತಕ್ಷೇಪವನ್ನು ಮಾಡುತ್ತಿರುತ್ತದೆ. ವೈಚಾರಿಕ ಪ್ರಶ್ನೆಯೊಂದಿಗೆ ಹೊರಟರೆ ಸಿಕ್ಕುವ ಉತ್ತರ ವೈಚಾರಿಕವಾಗಿರುತ್ತದೆ...

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.