ಕಾಶ್ಮೀರದಲ್ಲಿ ಪಂಡಿತ ಸಮುದಾಯದ ಮೇಲೆ ಮುಸ್ಲಿಮ್ ಉಗ್ರರು ನಡೆಸಿದ ದೌರ್ಜನ್ಯದ ಕುರಿತು ಈಗ ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಆ ಅಟ್ಟಹಾಸವನ್ನು ಗಟ್ಟಿ ದನಿಯಲ್ಲಿ ಖಂಡಿಸಲೇಬೇಕು. ಆದರೆ, ದೇಶದಲ್ಲಿ ನಡೆದಿರುವುದು ಇದೊಂದೇ ಹತ್ಯಾಕಾಂಡವಲ್ಲ. ದಲಿತರು, ದಮನಿತರ ನರಮೇಧಗಳಿಗೂ ಸ್ವಾತಂತ್ರ್ಯೋತ್ತರ ಭಾರತ ಸಾಕ್ಷಿಯಾಗಿದೆ. ಅವುಗಳ ಕುರಿತು ಚರ್ಚೆಯೇ ಆಗುವುದಿಲ್ಲವಲ್ಲ, ಏಕೋ?

-ಡಿ.ಉಮಾಪತಿ

ಭಾರತದಲ್ಲಿ ದಲಿತರು, ಆದಿವಾಸಿಗಳು ಹಾಗೂ ಮುಸಲ್ಮಾನರ ಪ್ರಮಾಣ ಶೇ 39. ದೇಶದ ಜೈಲು ಪಾಲಾಗಿರುವ ಬಂದಿಗಳು ಮತ್ತು ವಿಚಾರಣಾಧೀನ ಕೈದಿಗಳ ಪೈಕಿ ಈ ಸಮುದಾಯಗಳ ಪ್ರಮಾಣ ಶೇ 51. ಈ ಶೇಕಡಾ ಮೂವತ್ತೊಂಬತ್ತು ಮಂದಿ ಬಂದೀಖಾನೆಗಳಲ್ಲಿ ಮಾತ್ರ ಬಂದಿಗಳಲ್ಲ. ಬಂದೀಖಾನೆಗಳ ಹೊರಗಣ ಬಯಲಿನಲ್ಲೂ ‘ಬಂದಿಗಳು’. ಕಾಶ್ಮೀರಿ ಬ್ರಾಹ್ಮಣರ ನೋವಿಗೆ ಆಕ್ರೋಶಗೊಳ್ಳುವವರ ಕಣ್ಣುಗಳು ನಿತ್ಯ ನಿರಂತರ ತಮ್ಮ ಸುತ್ತಮುತ್ತ ನಡೆಯುವ ದಲಿತ-ಆದಿವಾಸಿ-ಅಲ್ಪಸಂಖ್ಯಾತರ ಸಾವು ಸಂಕಟಗಳಿಗೆ ಯಾಕೆ ಹಸಿಯಾಗುವುದಿಲ್ಲ? ಕರುಣೆಯ ಜಲ ಇವರ ಪಾಲಿಗೆ ಬತ್ತಿ ಹೋಗಿರುವುದೇಕೆ?

ಭಾರತ ದೇಶದಲ್ಲಿ ದಲಿತರ ಮೇಲೆ ಪ್ರತಿ 18 ನಿಮಿಷಗಳಿಗೊಂದರಂತೆ ಅತ್ಯಾಚಾರವನ್ನು ನಡೆಸಲಾಗುತ್ತಿದೆ. ನೂರಾರು ತಲೆಮಾರುಗಳಿಂದ ಜಾತಿಪದ್ಧತಿಯ ಕ್ರೌರ್ಯದಡಿ ನಜ್ಜುಗುಜ್ಜಾಗುತ್ತ ಬಂದಿರುವವರ ಬದುಕು, ಬವಣೆ, ಅಸ್ಮಿತೆಗಳ ಕತೆಯೇನು?

ಅವಮಾನಿತ ಕೆಳಜಾತಿಗಳ ದಮನದ ಅಮಾನುಷ ಮುಖಗಳು ಹತ್ತು ಹಲವು. ದಲಿತರು ಚಪ್ಪಲಿ ಧರಿಸುವುದನ್ನು ನಿಷೇಧಿಸಿರುವ, ಊರು ಪ್ರವೇಶ ಮಾಡುವ ಮುನ್ನ ಚಪ್ಪಲಿಯನ್ನು ಕಳಚಿ ಕೈಲಿ ಹಿಡಿದು ನಡೆಯಬೇಕಾದ, ಏರಿದ್ದ ಸೈಕಲ್ಲನ್ನು ಇಳಿದು ಅದನ್ನು ತಳ್ಳಿಕೊಂಡೇ ಮೇಲ್ಜಾತಿಗಳ ವಸತಿಯನ್ನು ಹಾದು ಹೋಗಬೇಕಾದ ರೂಢಿ ಇಂದಿಗೂ ಜಾರಿಯಲ್ಲಿರುವ ಸಾವಿರಾರು ಹಳ್ಳಿಗಳಿವೆ.

ನಮ್ಮ ಹಳ್ಳಿಗಳ ದಲಿತರ ಕೇರಿಗಳು ಊರಿನ ಅಂಚಿಗಿರುತ್ತವೆ. ಪಶ್ಚಿಮ ದಿಕ್ಕಿಗಿರುವುದು ವಾಡಿಕೆ. ಮುಂಜಾನೆಯ ಸೂರ್ಯನ ಕಿರಣಗಳು ಮೇಲ್ಜಾತಿಗಳ ಕೇರಿಗಳ ಮೇಲೆ ಬೀಳುವ ಮುನ್ನ ಅಸ್ಪೃಶ್ಯರ ಹಟ್ಟಿಗಳನ್ನು ತಾಕಿ ಮೈಲಿಗೆ ಆಗದಂತೆ ವಹಿಸಿರುವ ಎಚ್ಚರಿಕೆ. ಚರಂಡಿಯ ರೊಜ್ಜು ಕೂಡ ಪೂರ್ವದ ಎತ್ತರದಿಂದ ಪಶ್ಚಿಮದ ತಗ್ಗಿನುದ್ದಕ್ಕೆ ಚಾಚಿ ಹರಿಯಬೇಕು.

ಉತ್ತರಭಾರತದ ಮದುವೆಗಳಲ್ಲಿ ವರ ಕುದುರೆಯೇರಿ ದಿಬ್ಬಣ ಹೊರಡುವ ರಿವಾಜಿದೆ. ದಲಿತರು ಕುದುರೆ ಏರುವಂತಿಲ್ಲ. ಆನೆ, ಕುದುರೆ, ಎತ್ತಿನ ಗಾಡಿ ಏರಿದ ದಲಿತ ಮದುಮಕ್ಕಳನ್ನು ಮೇಲು ಜಾತಿಯವರು ಥಳಿಸಿ ರಂಪ ಮಾಡುವ ವಿದ್ಯಮಾನಗಳು ಇಂದಿಗೂ ಅಳಿದಿಲ್ಲ.

ಥಳಗುಟ್ಟುವ ಭಾರತದ ಆಚೆಗೆ ಬದುಕಿರುವ ಕಗ್ಗತ್ತಲ ಉದ್ದಗಲಗಳಲ್ಲಿ ಜಾತಿ ಬಲವುಳ್ಳವರು, ಹಣದ ಸೊಕ್ಕಿನವರು, ಧರ್ಮದುರಂಧರರು, ಪಿತೃಪ್ರಧಾನ್ಯದ ಪರಿಪಾಲಕರು, ಪೊಲೀಸರು ಹಾಗೂ ಪ್ಯಾರಾಮಿಲಿಟರಿಗಳ ಅಟ್ಟಹಾಸಗಳಲ್ಲಿ ಈ ಜೀವಗಳು ನಲುಗಿಹೋಗುತ್ತಿವೆ. ಇವರು ಮಾತು ಸತ್ತವರು, ಕಾಸಿಲ್ಲದವರು, ತುಳಿಸಿಕೊಂಡವರು, ಒಕ್ಕಲೆಬ್ಬಿಸಿ ದಬ್ಬಲಾದ ಅನಾಥ ಆದಿವಾಸಿಗಳು. ತಮ್ಮ ಮಾನ, ಪ್ರಾಣ, ಕಣ್ಣೀರುಗಳಿಗೆ ಕಾಸಿನ ಕಿಮ್ಮತ್ತೂ ಇಲ್ಲದ ದೈನೇಸಿಗಳು. ಖೈರ್ಲಂಜಿ, ಕಂಬಾಲಪಲ್ಲಿಗಳಲ್ಲಿ ಬೂದಿಯಾದವರು ಇವರು.

ಮೋಟರ್ ಸೈಕಲ್ ಸವಾರಿ ಮಾಡುವ ದಲಿತ ಯುವಕನ ಮೂಗು ಕತ್ತರಿಸುವ, ‘ಅಂಬೇಡ್ಕರ್ ರಿಂಗ್ ಟೋನ’ನ್ನು ತೆಗೆದು ಹಾಕಲಿಲ್ಲವೆಂದು ದಲಿತ ತರುಣನ ಪ್ರಾಣವನ್ನೇ ತೆಗೆಯುವ, ದಲಿತ ಪ್ರೊಫೆಸರರಿಗೆ ಬಾಡಿಗೆ ಮನೆ ನಿರಾಕರಿಸುವ, ಮೂರು ವರ್ಷದ ದಲಿತ ಹಸುಳೆಗೆ ಕ್ಷೌರ ಮಾಡಲು ನಿರಾಕರಿಸುವ, ಮೇಲ್ಜಾತಿಯ ಮಕ್ಕಳ ತಟ್ಟೆ ಮುಟ್ಟಿದನೆಂದು ಎಳೆಯ ದಲಿತ ಜೀವವನ್ನು ಥಳಿಸುವ ಘಟನೆಗಳು ಈ ಸಮಾಜದ ಆತ್ಮಸಾಕ್ಷಿಯನ್ನು ಕಲಕುವುದೇ ಇಲ್ಲ.

ಅತ್ಯಾಚಾರವನ್ನು ಪ್ರತಿಭಟಿಸಿದ ದಲಿತ ಬಾಲಕಿಯೊಬ್ಬಳ ಮೂಗು, ಕಿವಿ ಹಾಗೂ ತೋಳನ್ನು ಕತ್ತರಿಸಿ ಒಗೆದವರು ಮೇಲ್ಜಾತಿಗಳ ಬಲಾತ್ಕಾರಿಗಳು. ಆಕೆಯ ದುಪಟ್ಟಾದಿಂದಲೇ ಬಾಲೆಯ ಕಣ್ಣು ಕಟ್ಟಿದ ಧೂರ್ತರು ಮೂಗು, ಕಿವಿ, ತೋಳನ್ನು ಕೊಡಲಿಯಿಂದ ಕತ್ತರಿಸಿ ಒಗೆದದ್ದು ಮಧ್ಯಪ್ರದೇಶದ ಘಟನೆ.

2020ರಷ್ಟು ಇತ್ತೀಚಿನ ಈ ಉದಾಹರಣೆ ನೋಡೋಣ- ಉತ್ತರಪ್ರದೇಶದ ಸಹಾರಣಪುರ ಸನಿಹದ ಶಬ್ಬೀರ್ಪುರ್ ಗ್ರಾಮದ ರಜಪೂತರು ರಾಣಾಪ್ರತಾಪ ಉತ್ಸವದ ಮೆರವಣಿಗೆ ತೆಗೆದಿದ್ದರು. ಮೆರವಣಿಗೆ ದಲಿತ ವಸತಿ ಪ್ರದೇಶಗಳನ್ನು ಹಾಯುತ್ತಲಿತ್ತು. ಕಿವಿ ಗಡಚಿಕ್ಕುವ ಡಿ.ಜೆ.ಸಂಗೀತದ ಅಬ್ಬರವನ್ನು ತಗ್ಗಿಸಬೇಕೆಂಬ ದಲಿತರ ಮನವಿಗೆ ಬೆಲೆ ಸಿಗಲಿಲ್ಲ. ಪೊಲೀಸರ ಮಧ್ಯಪ್ರವೇಶದ ನಂತರ ಸಂಗೀತದ ಅಬ್ಬರ ಅಡಗಿತು.

ಇದನ್ನು ಅವಮಾನ ಎಂದು ಬಗೆದ ರಜಪೂತರು ತಲವಾರುಗಳು, ಬಂದೂಕುಗಳು, ಕಲ್ಲುಗಳನ್ನು ಹಿಡಿದು ದಲಿತರ ಮನೆಗಳ ಮೇಲೆ ದಾಳಿ ನಡೆಸಿದರು. ಅಂಬೇಡ್ಕರ್ ಪ್ರತಿಮೆ ಭಗ್ನವಾಯಿತು. ಸಂತ ರವಿದಾಸರ ದೇವಾಲಯಕ್ಕೆ ನುಗ್ಗಿ ಪ್ರತಿಮೆ ಉರುಳುಸಿ ಮೂತ್ರ ವಿಸರ್ಜಿಸಿದರು. ಮನೆಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟರು. ಅಂಬೇಡ್ಕರ್ ಪಟಗಳು, ಪುಸ್ತಕಗಳು, ಒಲೆ ಮೇಲಿನ ಅಡುಗೆ, ಕಾಳು ಕಡ್ಡಿಗಳು, ಮೋಟರ್ ಸೈಕಲ್, ಟೀವಿ ಸೆಟ್ಟುಗಳನ್ನು ಸುಟ್ಟು ಹಾಕಿದರು. ನಗನಾಣ್ಯ ದೋಚಿದರು. ಪಾತ್ರೆ ಪಡಗಗಳನ್ನೂ ಬಿಡದೆ ಕೊಚ್ಚಿ ಹಾಕಿದರು. ಅಡ್ಡ ಬಂದವರ ಮೇಲೆ ತಲವಾರುಗಳ ಬೀಸಿದರು. ಹೆಣ್ಣುಮಕ್ಕಳ ಬಟ್ಟೆ ಹರಿದರು. ಸ್ತನ ಕತ್ತರಿಸುವ ಪ್ರಯತ್ನಗಳಲ್ಲಿ ಗಾಯಗೊಂಡವರ ಗಾಯಗಳು ಇನ್ನೂ ಹಸಿ ಹಸಿ. ಹಲ್ಲೆಕೋರರಿಂದ ರಕ್ಷಿಸಲು ಮಕ್ಕಳನ್ನು ಮಂಚಗಳೊಳಗೆ ಮುಚ್ಚಿಡಲಾಯಿತು. ಮುಖ್ಯಮಂತ್ರಿ ಖುದ್ದು ರಜಪೂತ ಕುಲಕ್ಕೆ ಸೇರಿದವರು. ಹೀಗಾಗಿ ದಾಳಿಕೋರರಿಗೆ ಪೊಲೀಸರ ಸಂಪೂರ್ಣ ‘ಸಹಕಾರ’ವಿತ್ತು.

ಛತ್ತೀಸಗಡದ ಬಸ್ತರ್ ಸೀಮೆಯ ಸುಕ್ಮಾದ ಹಳ್ಳಿ. ಅಲ್ಲಿ ಕಾವಾಸಿ ಹಿಡ್ಮೆ ಎಂಬ ಗೊಂಡ್ ಯುವತಿ. ತನ್ನ ವಿಧವೆ ಚಿಕ್ಕಮ್ಮನೊಂದಿಗೆ ತುಂಡು ಜಮೀನು ಉತ್ತು ಹೊಟ್ಟೆ ಹೊರೆಯುತ್ತಿದ್ದ ಲವಲವಿಕೆಯ ಸ್ವಾಭಿಮಾನಿ. ಸುಗ್ಗಿಯ ನಂತರ ಜಾತ್ರೆಯಲ್ಲಿ ರಿಬ್ಬನ್ನು, ಗಾಜಿನ ಬಳೆ ಕೊಂಡಳು. ಹಾಡಿ ನರ್ತಿಸುತ್ತಿದ್ದ ಆದಿವಾಸಿಗಳ ಗುಂಪೊಂದರ ಜೊತೆಗೆ ಕೊರಳು ಸೇರಿಸಿ ಹೆಜ್ಜೆ ಹಾಕಿ ದಣಿದಳು. ದಾಹವಾಗಿ ನೀರು ಕುಡಿಯಲೆಂದು ಸನಿಹದ ಕೊಳವೆಬಾವಿಯ ಪಂಪಿಗೆ ಬೊಗಸೆ ಒಡ್ಡಿದ್ದಳು. ಹಠಾತ್ತನೆ ಸುತ್ತುವರೆದಿದ್ದರು ಪೊಲೀಸರು. ಮುಡಿಗೆ ಕೈ ಹಾಕಿ ಎಳೆದಾಡಿದರು. ಕೈ ಕಾಲು ಕಟ್ಟಿ ಟ್ರಕ್ಕಿಗೆಸೆದು ಠಾಣೆಗೆ ಒಯ್ದರು. ಆ ಠಾಣೆಯ ದೈಹಿಕ ಕಾಮನೆ ತಣಿದ ನಂತರ ಮತ್ತೊಂದು ಠಾಣೆಗೆ ಒದೆಯುವ ಕಾಲ್ಚೆಂಡಾದಳು ಅಮಾಯಕ ಆದಿವಾಸಿ ಕಾವಾಸಿ. ಈ ಕುಟಿಲ ಕಾರಸ್ಥಾನದ ಬಲಿವೇದಿಕೆ ಏರುವ ಆದಿವಾಸಿ ಯುವತಿಯರ ಪೈಕಿ ಕಾವಾಸಿ ಮೊದಲಿಗಳಂತೂ ಅಲ್ಲ, ಸದ್ಯಕ್ಕೆ ಕೊನೆಯವಳೂ ಆಗುವುದಿಲ್ಲ.

ಕೆಲ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ನಂತರವೇ ಕಾಲ ಮೇಲೆ ನಿಂತಳು ಕಾವಾಸಿ. ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಹೊರಿಸಿದ್ದು ಸಿ.ಆರ್.ಪಿ.ಎಫ್. ಸಿಬ್ಬಂದಿಯ ಹತ್ಯೆ ಆಪಾದನೆ. ಜಗದಾಳಪುರದ ಜೈಲು ಪಾಲಾದಳು. ಅಮಾನುಷ ಲೈಂಗಿಕ ಹಿಂಸೆಯಿಂದ ಜರ್ಝರಿತವಾಗಿ ತತ್ತರಿಸಿದ್ದ ಒಡಲು ಹಠಾತ್ತನೆ ಗರ್ಭಕೋಶವನ್ನು ಹೊರ ಜಾರಿಸಿತ್ತು (ಪ್ರೊಲ್ಯಾಪ್ಸ್). ತೀವ್ರ ರಕ್ತಸ್ರಾವದಿಂದ ಹೌಹಾರಿದ ಬಾಲೆ ದಿಕ್ಕೆಟ್ಟಳು. ಪ್ರಯತ್ನಪಟ್ಟು ಪುನಃ ಒಡಲೊಳಗೆ ಕಳಿಸಿದಳು.

ಮರುದಿನ ಮತ್ತೆ ಅದೇ ವ್ಯಥೆ. ಏಕಾಂತ ಸಿಕ್ಕಾಗ ಬ್ಲೇಡಿನಿಂದ ಕತ್ತರಿಸಲು ಮುಂದಾದಳು. ಈ ಘೋರ ಇತರೆ ಮಹಿಳಾ ಕೈದಿಗಳ ಕಣ್ಣಿಗೆ ಬಿದ್ದು ಕಲ್ಲೋಲವೇ ಎದ್ದಿತು. ಆಸ್ಪತ್ರೆಗೆ ಕಳಿಸಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಮತ್ತೆ ಜೈಲಿಗೆ ಮರಳಿದಳು.

ಇವೇ ಜೈಲುಗಳಲ್ಲಿ ನರಕ ಎದುರಿಸಿದ ಇನ್ನೊಬ್ಬ ಆದಿವಾಸಿ ಹೆಣ್ಣುಮಗಳ ಹೆಸರು ಸೋನಿ ಸೋರಿ. ಕಾವಾಸಿಯನ್ನು ಬಿಡುಗಡೆ ಮಾಡಿಸಲು ನೆರವಾದವಳು ಈಕೆ. ಕಾವಾಸಿಯನ್ನು ಪುನಃ ಜೈಲಿಗೆ ಅಟ್ಟುವ ದುರುಳ ಪ್ರಯತ್ನಗಳು ಇನ್ನೂ ನಿಂತಿಲ್ಲ.

ಇಂತಹ ಸಾವಿರ ಕಾಡು ಕಾವಾಸಿಗಳ ನೋವಿನ ಕತೆಗಳು ಕಣ್ಣೀರು ನಾಗರಿಕ ಎಂದು ಕರೆದುಕೊಳ್ಳುವ ಅನಾಗರಿಕ ಜಗತ್ತಿಗೆ ದಾಟಿ ಬರುವುದಿಲ್ಲ. ಬಂದರೂ ಅಳುವವರು ಬಹಳವೇನೂ ಇಲ್ಲ. ಅಸ್ಸಾಮಿನಲ್ಲಿ ನ್ಯಾಯ ಕೇಳಿ ಮೆರವಣಿಗೆ ಹೊರಟಿದ್ದ ಆದಿವಾಸಿಗಳ ತಂಡದಲ್ಲಿದ್ದ ಲಕ್ಷ್ಮೀ ಓರಾಂಗ್ ಎಂಬ ಯುವತಿಯನ್ನು ಬಹಿರಂಗವಾಗಿ ವಿವಸ್ತ್ರಗೊಳಿಸಿ ಜನನಾಂಗದ ಮೇಲೆ ಕಾಲಿಂದ ಒದೆಯುತ್ತಿದ್ದ ನಾಗರಿಕರ ಛಾಯಾಚಿತ್ರಗಳ ನೆನಪಿದೆಯೇ?

‘ಬನ್ನಿ ನಮ್ಮನ್ನು ರೇಪ್ ಮಾಡಿ’ ಎಂಬ ಬರಹವಿದ್ದ ಬ್ಯಾನರ್ ಹಿಡಿದು ಅಸ್ಸಾಮ್ ರೈಫಲ್ಸ್ ತುಕಡಿಯ ನಿವಾಸ ಕಾಂಗ್ಲಾ ಫೋರ್ಟ್ ಮುಂದೆ ಪೂರ್ಣ ಬೆತ್ತಲಾಗಿ ಪ್ರತಿಭಟಿಸಿದ ತಾಯಂದಿರ ಚಿತ್ರ ಸಾಕ್ಷಿಪ್ರಜ್ಞೆಯಿಂದ ಸುಲಭಕ್ಕೆ ಮಾಸುವಂತಹುದಲ್ಲ.

ಆರು ವರ್ಷಗಳ ಹಿಂದೆಯಷ್ಟೇ ಛತ್ತೀಸಗಡದಲ್ಲಿ ನಡೆದ ದೌರ್ಜನ್ಯ ಎಂದಿನಂತೆ ನಾಗರಿಕ ಜಗತ್ತಿನ ನಿರ್ಲಕ್ಷ್ಯದಡಿ ಹೂತು ಹೋಯಿತು. ತಡವಾಗಿಯಾದರೂ ಮೂರು ಕಂತುಗಳಲ್ಲಿ ಚಿತ್ರಗಳ ಸಹಿತ ವರದಿ ಮಾಡಿದ್ದು ಒಂದೇ ಒಂದು ಇಂಗ್ಲಿಷ್ ದಿನಪತ್ರಿಕೆ.

ಇನ್ನೂರು ಆಳುಗಳ ಬಲದ ಸಿ.ಆರ್.ಪಿ.ಎಫ್. ಸಿಬ್ಬಂದಿ ಛತ್ತೀಸಗಡದ ಬಿಜಾಪುರ ಜಿಲ್ಲೆಯ ಮಾವೊವಾದಿಗಳು ಎಡತಾಕುತ್ತಿದ್ದರೆನ್ನಲಾದ ಗ್ರಾಮಗಳ ಮೇಲೆ ಎರಗಿ ನಡೆಸಿರುವ ಕೃತ್ಯಗಳು ಆತ್ಮಸಾಕ್ಷಿ ಉಳ್ಳ ನಾಗರಿಕ ಜಗತ್ತು ತಲೆ ತಗ್ಗಿಸುವಂತಹವು.

ದನ ಮೇಯಿಸುತ್ತಿದ್ದ ಹದಿಹರೆಯದ ಅಪ್ರಾಪ್ತ ವಯಸ್ಸಿನ ಬಾಲೆ ಮತ್ತು ಗರ್ಭಿಣಿ ಹೆಣ್ಣುಮಗಳು ಸೇರಿದಂತೆ ಮೂವರ ಮೇಲೆ ನಡೆದದ್ದು ಸಾಮೂಹಿಕ ಅತ್ಯಾಚಾರ. ಮಕ್ಕಳನ್ನೂ ಬಿಡದೆ ಬಟ್ಟೆ ಹರಿದು ಅವುಗಳ ಮೈ ಮೇಲೆ ಬಾರಿಸಲಾಗಿದೆ. ಕಂಕುಳಲ್ಲಿ ಕೂಸುಗಳಿರುವ ತಾಯಂದಿರ ಕೂದಲು ಹಿಡಿದು ಮನೆಯಿಂದ ಹೊರಗೆ ಎಳೆದಾಡಲಾಗಿದೆ.

ಸ್ನಾನ ಮಾಡುತ್ತಿದ್ದ ಹೆಣ್ಣುಮಗಳನ್ನು ಓಡಿಸಿ ಥಳಿಸಲಾಗಿದೆ. ಬಾಣಂತಿಯರು ಎಂದರೂ ಬಿಡಲಿಲ್ಲ. ರವಿಕೆ ಬಿಚ್ಚಿಸಿ ಹಾಲು ಒಸರುತ್ತಿದೆಯೇ ಎಂದು ಹಿಸುಕಿ ನೋಡಲಾಗಿದೆ.

ತಮ್ಮ ಕೆಳವಸ್ತ್ರಗಳನ್ನು ಎತ್ತಿ ಲೈಂಗಿಕ ಹಿಂಸೆಯ ಬೆದರಿಕೆ ಹಾಕಲಾಯಿತು. ಜನನಾಂಗಗಳಿಗೆ ಮೆಣಸಿನ ಖಾರ ತುರುಕುವುದಾಗಿ ಹೆದರಿಸಲಾಯಿತು. ಕೆಲವರ ಬಟ್ಟೆ ಬಿಚ್ಚಿ ಓಡಿಸಲಾಯಿತು. ಚಿಲ್ಲರೆ ನಾಣ್ಯಗಳಲ್ಲಿ ಕೂಡಿಟ್ಟಿದ್ದ ಹಣವನ್ನು ದೋಚಲಾಯಿತು. ಮನೆಗಳನ್ನು ಒಡೆದು ಕೆಡಹುವ ಪ್ರಯತ್ನಗಳು ನಡೆದವು. ಕೋಳಿ, ಅಕ್ಕಿ, ಎಣ್ಣೆ ಮುಂತಾದ ದಿನಸಿಯನ್ನು ದೋಚಿ ತಿನ್ನಲಾಯಿತು ಎಂದು ಮಹಿಳೆಯರು ಸಂದರ್ಶನಗಳಲ್ಲಿ ತಮ್ಮ ಪಾಡು ತೋಡಿಕೊಂಡಿದ್ದಾರೆ.

ಛತ್ತೀಸಗಡದ ಬಿಜಾಪುರ ಜಿಲ್ಲೆಯ ಸರ್ಕೇಗುಡದಲ್ಲಿ 2012ರಲ್ಲಿ ಹುಸಿ ಎನ್ಕೌಂಟರ್ ಒಂದು ನಡೆಯಿತು. ಆರು ಮಂದಿ ಅಪ್ರಾಪ್ತ ವಯಸ್ಕರೂ ಸೇರಿದಂತೆ 17 ಮಂದಿ ಆದಿವಾಸಿಗಳನ್ನು ಈ ಎನ್ಕೌಂಟರ್ನಲ್ಲಿ ಕೊಲ್ಲಲಾಗಿತ್ತು. ಹತರಾದವರಿಗೆ ಮಾವೊವಾದಿಗಳ ಹಣೆಪಟ್ಟಿ ಹಚ್ಚಲಾಗಿತ್ತು. ನ್ಯಾಯಮೂರ್ತಿ ವಿ.ಕೆ. ಅಗರವಾಲ್ ಆಯೋಗ 2019ರಲ್ಲಿ ಸಲ್ಲಿಸಿದ ವರದಿಯ ಪ್ರಕಾರ 17 ಮಂದಿಯ ಪೈಕಿ ಯಾರೂ ಮಾವೊವಾದಿಗಳಾಗಿರಲಿಲ್ಲ.

ಅಡವಿಗಳ ನಡುವೆ ನಡೆವ ಅತ್ಯಾಚಾರಗಳು ಅಕ್ಷರಶಃ ಅರಣ್ಯ ರೋದನಗಳು. ಅವುಗಳನ್ನು ಪ್ರತಿಭಟಿಸಿ ಇಂಡಿಯಾ ಗೇಟಿನಲ್ಲಿ ಮೋಂಬತ್ತಿ ಮೆರವಣಿಗೆಗಳು ಜರುಗುವುದಿಲ್ಲ.

ದಲಿತರು, ದಮನಿತರ ನರಮೇಧ

ಗೋಧ್ರಾ ಹತ್ಯಾಕಾಂಡ

2002ರ ಫೆಬ್ರುವರಿ 27ರ ಮುಂಜಾನೆ ಗುಜರಾತಿನ ಗೋಧ್ರಾ ಬಳಿ ಸಾಬರಮತಿ ಎಕ್ಸ್ಪ್ರೆಸ್ನ ಕರಸೇವಕರಿದ್ದ ಬೋಗಿಗೆ ಬೆಂಕಿ ಬಿದ್ದು 59 ಮಂದಿ ಆಹುತಿಯಾಗಿದ್ದರು. ಬೆಂಕಿಯ ಹಿಂದೆ ಕೈವಾಡವಿದ್ದರೆ ಅದು ಅಮಾನುಷ ಕೃತ್ಯ. ಕಾರಣರಾದವರನ್ನು ಕಾನೂನಿನ ಕುಣಿಕೆಗೆ ಸಿಕ್ಕಿಸಲೇಬೇಕು. ಗೋಧ್ರಾ ಹತ್ಯಾಕಾಂಡದ ನಂತರ ಹೊತ್ತಿಕೊಂಡ ಕೋಮುಗಲಭೆಗಳ ದಳ್ಳುರಿ ಗುಜರಾತಿನ ಉದ್ದಗಲಕ್ಕೆ ಅಲ್ಪಸಂಖ್ಯಾತರ ಮಾರಣಹೋಮ, ಲೂಟಿ, ವಿಧ್ವಂಸ ಕೃತ್ಯ ಹಾಗೂ ಅತ್ಯಾಚಾರಗಳಿಗೆ ಕಾರಣವಾಯಿತು.

ಗರ್ಭಿಣಿ ಬಿಲ್ಕಿಸ್ ಬಾನು ಮೇಲೆ ಬಿಟ್ಟೂಬಿಡದೆ 22 ಬಾರಿ ಅತ್ಯಾಚಾರ ನಡೆಯಿತು. ಮೂರು ವರ್ಷದ ಮಗಳ ತಲೆಯನ್ನು ನೆಲಕ್ಕೆ ಅಪ್ಪಳಿಸಿ ಕೊಲ್ಲಲಾಯಿತು. ಆಕೆಯ ತಾಯಿಯೂ ಸೇರಿದಂತೆ ಕುಟುಂಬದ ಇತರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಕೊಚ್ಚಿ ಹಾಕಲಾಯಿತು. ಕಣ್ಣೆದುರಿಗೇ ಕುಟುಂಬದ 14 ಹೆಣಗಳು ಉರುಳಿದವು. ಗೋಧ್ರೋತ್ತರ ಹಿಂಸಾಚಾರ ಇಂತಹ ಬಿಲ್ಕಿಸ್ ಬಾನುಗಳ ಹತ್ತಾರು ಕತೆಗಳಿವೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ 1,044 ಮಂದಿ ಈ ಹಿಂಸೆಗೆ ಬಲಿಯಾದರು. 233 ಮಂದಿ ಕಾಣೆಯಾದರು.

ದೋಪ್ದಿಯ ಆ ಅಮಾನುಷ ಚಿತ್ರಹಿಂಸೆ

ಆದಿವಾಸಿಗಳ ಅಕ್ಕ- ಅಮ್ಮನೆಂದೇ ಪ್ರೀತಿಯಿಂದ ಕರೆಯಿಸಿಕೊಂಡವರು ದಿವಂಗತ ಮಹಾಶ್ವೇತಾದೇವಿ. ‘ದೋಪ್ದಿ’ (ದ್ರೌಪದಿ) ಅವರ ಬಹುಚರ್ಚಿತ ಸಣ್ಣ ಕತೆ. ಅದರ ಕಥಾನಾಯಕಿಯ ಹೆಸರು ದೋಪ್ದಿ. 70ರ ದಶಕದ ಪಶ್ಚಿಮ ಬಂಗಾಳದ ‘ಸಜ್ಜನ ಕ್ರಾಂತಿಕಾರಿ’ಗಳೆಂದು ಕರೆಯಲಾದ ನಕ್ಸಲೀಯರ ಬೆಂಬಲಿಗ ಆದಿವಾಸಿ ದಂಪತಿಯ ಹೆಸರು ದೋಪ್ದಿ ಮತ್ತು ದುಲ್ನಾ ಮಾಝೀ. ‘ಸಜ್ಜನ ಕ್ರಾಂತಿಕಾರಿ’ಗಳಿಗೆ ಗುಪ್ತ ಮಾಹಿತಿ ಒದಗಿಸುವ ಪತಿಪತ್ನಿ. ಆದಿವಾಸಿಗಳ ವಿರುದ್ಧ ದೌರ್ಜನ್ಯಗಳನ್ನು ಎಸಗಿದ ಬಲಿಷ್ಠ ಜಾತಿಯ ಭೂಮಾಲೀಕ ಸೂರ್ಯಕಾಂತ ಸಾಹುವಿನ ಹತ್ಯೆ ಸಂಬಂಧ ಇವರನ್ನು ಬಂಧಿಸಲಾಯಿತು. ದ್ರೌಪದಿಯನ್ನು ಚಿತ್ರಹಿಂಸೆ ಮತ್ತು ಅತ್ಯಾಚಾರಕ್ಕೆ ಗುರಿ ಮಾಡಲಾಯಿತು. ತನ್ನ ಸಹಚರರ ಹೆಸರು ವಿವರಗಳನ್ನು ಆಕೆ ಬಿಟ್ಟುಕೊಡುವುದಿಲ್ಲ. ಜರ್ಝರಿತ ರಕ್ತಸಿಕ್ತ ಬೆತ್ತಲು ದೇಹದ ಆಕೆಯನ್ನು ಸೇನಾಧಿಕಾರಿಯ ಮುಂದೆ ಹಾಜರುಪಡಿಸಲಾಯಿತು.

ದೋಪ್ದಿಯ ಅಂಗಾಂಗಗಳು ಅತ್ಯಾಚಾರ ಮತ್ತು ಅಮಾನುಷ ಚಿತ್ರಹಿಂಸೆಯಿಂದ ಜರ್ಝರಿತಗೊಂಡಿರುತ್ತವೆ. ಕೈ ಕಾಲುಗಳ ಅಗಲಿಸಿ ಕಟ್ಟಿ ಹಾಕಿ ಇರುಳೆಲ್ಲ ಆಕೆಯ 'ಒಡಲನ್ನು ಸೀಳಲಾಗಿತ್ತು’. ಯಾತನೆಯಿಂದ ಮೂರ್ಛೆ ಎಚ್ಚರಗಳ ನಡುವೆ ಜೀಕುತ್ತ ಕಣ್ತೆರೆದಾಗ ಸಾವಿರ ಚಂದ್ರ ಸೂರ್ಯರು ಕಣ್ಣಮುಂದೆ ಗರಗರನೆ ತಿರುಗಿದಂತೆ... ಒಂದರ ನಂತರ ಮತ್ತೊಂದರಂತೆ ರಕ್ತಮಾಂಸದ ಪುರುಷದಂಡಗಳು ಆಕೆಯನ್ನು ಬಗೆಯುತ್ತಲೇ ಇದ್ದವು.

ಮಹಾಶ್ವೇತಾ ಅವರ ಈ ದೋಪ್ದಿ ಭಾರತ ದೇಶದ ಆದಿವಾಸಿ ಸಮುದಾಯದ ನೆನ್ನೆ ಇಂದಿನ ವಾಸ್ತವ. ನಾಳೆಯೂ ಪರಿಸ್ಥಿತಿ ಬದಲಾಗುವ ಭರವಸೆ ಇಲ್ಲ. ದೇಶದ ಜೈಲುಗಳಲ್ಲಿ ಕೊಳೆಯುತ್ತಿರುವ ನೂರಾರು ದೋಪ್ದಿಗಳಿಗೆ ಕಣ್ಣೀರಿಡುವವರು ಯಾರು?

ಕಂಬಾಲಪಲ್ಲಿ ಕಹಿನೆನಪು

ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ಬಲಾಢ್ಯ ಜಾತಿಯ ಜನರ ಗುಂಪೊಂದು ದಲಿತರ ಮನೆಗಳ ಮೇಲೆ ದಾಳಿ ನಡೆಸಿ ಏಳು ಮಂದಿ ದಲಿತರನ್ನು ಮನೆಯೊಳಗೆ ಕೂಡಿ ಹಾಕಿ ಸೀಮೆಎಣ್ಣೆ ಸುರಿದು ಜೀವಂತವಾಗಿ ಸುಟ್ಟು ಹಾಕಿತು. ಜಮೀನುದಾರರ ಹೊಲಗಳಲ್ಲಿ ದುಡಿಯುತ್ತಿದ್ದ ದಲಿತರು ಮನುಷ್ಯರಂತೆ ಬದುಕಲು ತಮ್ಮ ಹಕ್ಕುಗಳನ್ನು ಸಮರ್ಥಿಸಿಕೊಂಡದ್ದೇ ಈ ಹತ್ಯಾಕಾಂಡಕ್ಕೆ ಪ್ರಚೋದನೆ.

ಬಿಹಾರದ ಬೆಲ್ಚಿ, ಪಿಪ್ರಾ, ಪಾರಸಬಿಖಾ, ದಾಂವರ್ ಬಿಠಾ, ಗೈನಿ, ಶಂಕರಬಿಘಾ, ಮಹಾರಾಷ್ಟ್ರದ ಖೈರ್ಲಾಂಜಿ, ಆಂಧ್ರದ ಕರಂಚೇಡು, ಗುಜರಾತಿನ ಪಂಖಾನ್… ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಇನ್ನು ಪ್ರಭುತ್ವ ಪ್ರಾಯೋಜಿತ ನರಮೇಧಗಳು ಆಳುವವರು ಬಯಸಿದಾಗಲೆಲ್ಲ ಕಾಲ ಕಾಲಕ್ಕೆ ಎದ್ದು ನಿಲ್ಲುವ ವಿಷವೃಕ್ಷಗಳು. ಈ ವಿಷ ವೃಕ್ಷಗಳ ಹಣ್ಣುಗಳನ್ನು ಮೆಲ್ಲುತ್ತ ಮೈಮರೆತಿದೆ ಸಮಾಜ. ಆಳುವವರ ಪಾಲಿಗೆ ವರವಾಗಿ ಪರಿಣಮಿಸಿದೆ ಈ ಮೈಮರೆವು. ಸರ್ಕಾರಿ ಪ್ರಾಯೋಜಿತ ನರಮೇಧಗಳ ಎರಡು ಭೀಕರ ಉದಾಹರಣೆಗಳು ಇಲ್ಲಿವೆ

ಮಾರೀಚಝಪಿ (1979): ಪಶ್ಚಿಮ ಬಂಗಾಳದ ಮಾರೀಚಝಪಿ ದ್ವೀಪದ 'ಅಕ್ರಮ ದಲಿತ- ಹಿಂದುಳಿದ ನಿವಾಸಿ'ಗಳನ್ನು ಪಶ್ಚಿಮ ಬಂಗಾಳದ ಪೊಲೀಸರು, ಗಡಿ ಭದ್ರತಾ ಪಡೆಗಳು ಹಾಗೂ ಸ್ಥಳೀಯ ಗೂಂಡಾಗಳು ಸುತ್ತುವರಿದು ಗುಂಡಿಟ್ಟು ಕೊಂದರು. ದೇಶವಿಭಜನೆಯ ನಂತರ ಬಾಂಗ್ಲಾ ದೇಶದಿಂದ ನಡೆದ ಎರಡನೆಯ ಅಲೆಯ ವಲಸೆಯಲ್ಲಿ ಬಂದ ದಲಿತರು ಈ ದ್ವೀಪದಲ್ಲಿ ಬದುಕು ಕಂಡುಕೊಂಡಿದ್ದರು. ಹುಲಿ ಆವಾಸದ ರಕ್ಷಿತ ಅರಣ್ಯ ಪ್ರದೇಶದಿಂದ ಇವರನ್ನು ತೆರವು ಮಾಡಿಸಲು ಎಡರಂಗದ ಸರ್ಕಾರ ಭೀಷಣ ಕ್ರಮ ಜರುಗಿಸಿತು. ಆರ್ಥಿಕ ದಿಗ್ಬಂಧನಗಳ ಹೇರಿತು. ಕುಡಿಯುವ ನೀರು, ಆಹಾರ ಸಾಮಗ್ರಿ- ಔಷಧಿ ಪೂರೈಕೆ ತಡೆಯಿತು. ಕೊಳವೆ ಬಾವಿಗೆ ವಿಷ ಬೆರೆಸಿದ ಕಾರಣ 13 ಮಂದಿ ಸತ್ತರು. ಸರ್ಕಾರಗಳ ಮೂಗಿನಡಿಯಲ್ಲಿ ಮಾನವೀಯ ಹಕ್ಕುಗಳ ಘೋರ ಉಲ್ಲಂಘನೆ ನಡೆಯಿತು. ನಿರಾಯುಧ ಜನರ ಮೇಲೆ ಗುಂಡು ಹಾರಿಸಲಾಯಿತು. ಕಳೇಬರಗಳನ್ನು ರೈಮಂಗಲ್ ನದಿಗೆ ಎಸೆಯಲಾಯಿತು, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದವು, ದ್ವೀಪವಾಸಿಗಳ ಗುಡಿಸಿಲುಗಳು ಮತ್ತು ದೋಣಿಗಳನ್ನು ಸುಡಲಾಯಿತು. 1977ರ ಸೋಲಿನ ನಂತರ ಕಾಂಗ್ರೆಸ್ ದುರ್ಬಲವಾಗಿತ್ತು. ಕೇಂದ್ರದಲ್ಲಿ ಮೊರಾರ್ಜಿ ದೇಸಾಯಿ ಅವರ ಸರ್ಕಾರ ಎಡರಂಗದ ಊರುಗೋಲಿನಿಂದ ನಡೆದಿತ್ತು. ಕಾನ್ಷಿರಾಮ್ ಅವರ ಸಂಘಟನೆಗೆ ಇನ್ನೂ ಬಲ ಬಂದಿರಲಿಲ್ಲ. ಹೀಗಾಗಿ ಈ ದಲಿತ ನಾಮಶೂದ್ರ ನಿರಾಶ್ರಿತರ ಪರವಾಗಿ ದನಿಯೆತ್ತುವವರೇ ಇರಲಿಲ್ಲ.

ಈ ನರಮೇಧದಲ್ಲಿ ಸತ್ತವರ ಸಂಖ್ಯೆ ಇಂದಿಗೂ ಖಚಿತವಾಗಿ ತಿಳಿಯದು. ಸಾವಿರಗಳ ಸಂಖ್ಯೆಯಲ್ಲಿ ಅಂದಾಜು ಮಾಡಲಾಗಿದೆ. ದೊಡ್ಡ ಮಟ್ಟದ ವಿಚಾರಣೆಯೂ ಈ ಹತ್ಯಾಕಾಂಡದ ಕುರಿತು ನಡೆಯಲಿಲ್ಲ. ಯಾರ ಮೇಲೆಯೂ ಚಾರ್ಜ್ ಶೀಟ್ ಹಾಕಲಾಗಿಲ್ಲ.

ಕಿಳ್ವೆನ್ಮಣಿ ನರಮೇಧ

ಕಿಳ್ವೆನ್ಮಣಿ (1968)- ತಮಿಳುನಾಡಿನ ಈ ನರಮೇಧದಲ್ಲಿ 44 ಮಂದಿ ದಲಿತ ಕೃಷಿ ಕೂಲಿಗಳನ್ನು ಜಮೀನುದಾರರು ಕೊಂದರು. ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಅನುಗುಣವಾಗಿ ಕೂಲಿ ದರವನ್ನೂ ಹೆಚ್ಚಿಸುವಂತೆ ಆಗ್ರಹಿಸಿ ಸಂಘಟಿತರಾದದ್ದು ಇವರ ಅಪರಾಧ.

ಲಾರಿಗಳಲ್ಲಿ ಬರುವ ಹಂತಕರು ಕೂಲಿಕಾರ್ಮಿಕರ ಗುಡಿಸಿಲುಗಳ ಮುತ್ತಿ ಬೆಂಕಿ ಇಟ್ಟರು. ಹೇಗಾದರೂ ಬದುಕಿಕೊಳ್ಳಲೆಂದು ಹಡೆದವರು ಗುಡಿಸಲಿನಿಂದ ಹೊರಗೆಸೆದ ಎರಡು ಕರುಳ ಕುಡಿಗಳನ್ನು ಎತ್ತಿಕೊಂಡು ಪುನಃ ಜ್ವಾಲೆಗಳಿಗೆ ಒಗೆಯುತ್ತಾರೆ ಕೊಲೆಗಡುಕರು. ಬೇಯುವ ಗುಡಿಸಲಿನಿಂದ ಹೊರಬಿದ್ದವರನ್ನು ಹಿಡಿದು ಕಡಿದು ಪುನಃ ಬೆಂಕಿಗೆ ಎಸೆಯಲಾಯಿತು. ಈ ನರಮೇಧದಲ್ಲಿ ಕರಕಲಾದವರು ಒಟ್ಟು 44 ಮಂದಿ- 23 ಮಕ್ಕಳು, 16 ಮಂದಿ ಹೆಣ್ಣುಮಕ್ಕಳು ಐವರು ವೃದ್ಧರು.

ಈ ಘಟನೆಯನ್ನು ಆಧರಿಸಿ ಇಂದಿರಾ ಪಾರ್ಥಸಾರಥಿ ಅವರು ಬರೆದ ‘ಕರುಧಿಪ್ಪುನಾಳ್’ ಕಾದಂಬರಿ 1977ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾಯಿತು. ಇದೇ ಕಾದಂಬರಿ ಆಧರಿಸಿ 1983ರಲ್ಲಿ ಬಿಡುಗಡೆಯಾದ ಚಲನಚಿತ್ರ ‘ಕಣ್ ಸಿವಂಥಾಲ್ ಮಣ್ ಸಿವಕ್ಕುಮ್’. ಅರವಿಂಧನ್, ರಾಮಯ್ಯವಿನ್ ಕುಡಿಸೈ ಎಂಬ ಚಲನಚಿತ್ರ ಮತ್ತು ಸಾಕ್ಷ್ಯಚಿತ್ರಗಳು ತಯಾರಾದವು. ಇತ್ತೀಚಿನ ಧನುಷ್ ಅಭಿನಯದ ‘ಅಸುರನ್’ ನಲ್ಲಿಯೂ ಕಿಳ್ವೆನ್ಮಣಿಯ ದೃಶ್ಯಗಳಿವೆ.

lಚುಂಡೂರು (1991)- ಸಿನೆಮಾ ಥಿಯೇಟರಿನಲ್ಲಿ ದಲಿತ ತರುಣನೊಬ್ಬನ ಕಾಲು ರೆಡ್ಡಿ ಜಾತಿಯ ವ್ಯಕ್ತಿಯೊಬ್ಬನಿಗೆ ಆಕಸ್ಮಿಕವಾಗಿ ತಗುಲಿದ ಕಾರಣ ನಡೆದ ಈ ನರಮೇಧದಲ್ಲಿ ಬಲಿಯಾದ ದಲಿತರು 13 ಮಂದಿ.

lಬಥಾನಿ ಟೋಲಾ (1996)- ಬಿಹಾರದ ಭೋಜಪುರದ ಈ ನರಮೇಧದಲ್ಲಿ ಬಲಿಷ್ಠ ಜಾತಿಯ ರಣವೀರಸೇನೆ 21 ಮಂದಿ ದಲಿತರನ್ನು ಕೊಂದಿತು. ಈ ಪೈಕಿ ಹಸುಳೆಗಳನ್ನು ಆರಿಸಿ ವಧಿಸಲಾಯಿತು.

lಲಕ್ಷ್ಮಣಪುರ ಬಾಥೆ (1997)- 37 ಮಂದಿ ಬಲಿಷ್ಠ ಜಾತಿ ಭೂಮಿಹಾರರ ಹತ್ಯೆಗೆ ಪ್ರತೀಕಾರವಾಗಿ 58 ಮಂದಿ ದಲಿತರನ್ನು ಗುಂಡಿಟ್ಟು ಕೊಲ್ಲಲಾಯಿತು.

ಸಿಖ್ ನರಮೇಧ

1984ರಲ್ಲಿ ‘ಆಪರೇಷನ್ ಬ್ಲೂಸ್ಟಾರ್’ ಹೆಸರಿನಲ್ಲಿ ಅಮೃತಸರದ ಸ್ವರ್ಣಮಂದಿರದಲ್ಲಿ ಅಡಗಿದ್ದವರ ವಿರುದ್ಧ ಕಾರ್ಯಾಚರಣೆಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಆದೇಶಿಸಿದ್ದರು. ಈ ಕಾರ್ಯಾಚರಣೆ ಸಿಖ್ ಧರ್ಮೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದಾದ ಕೆಲವೇ ತಿಂಗಳಲ್ಲಿ ಸಿಖ್ ಧರ್ಮಕ್ಕೆ ಸೇರಿದ್ದ ಇಂದಿರಾಗಾಂಧಿ ಅಂಗರಕ್ಷಕರೇ ಇಂದಿರಾಗಾಂಧಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಇಂದಿರಾಗಾಂಧಿ ಹತ್ಯೆ ತರುವಾಯ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರದಲ್ಲಿ ಸುಮಾರು 2,800 ಸಿಖ್ಖರು ಬಲಿಯಾಗಿದ್ದರು. ದೇಶದ ಹಲವೆಡೆಯೂ ಸಿಖ್ ನರಮೇಧ ನಡೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.