ಮಾತು– ಕೃತಿಗಳಿಂದ ಜನರನ್ನು ಸದಾ ಎಚ್ಚರದಲ್ಲಿಟ್ಟು ಪೊರೆಯುತ್ತಿದ್ದ ಕನ್ನಡ ನಾಡಿನ ತಲೆಮಾರೊಂದು ತನ್ನ ಕಾಯಕದಿಂದ ವಿರಮಿಸಿದೆ. ದಶಕಗಳ ಕಾಲ ಹೀಗೆ ತಮ್ಮ ಮಾತುಗಳಿಂದಲೇ ಕಾಡುತ್ತಿದ್ದ, ಮಲಗಿದಾಗೆಲ್ಲ ಕುಟುಕುತ್ತಿದ್ದ ಪ್ರಜ್ಞಾವಂತರ ಸಮೂಹದ ಪ್ರಮುಖ ಕೊಂಡಿ ಎನ್ನಬಹುದಾದ ಪ್ರೊ. ಚಂದ್ರಶೇಖರ ಪಾಟೀಲರು (ಚಂಪಾ) ಹೋದ ಬಳಿಕ ಒಂದು ರೀತಿಯ ಖಾಲಿತನ ಸುಡಲಾರಂಭಿಸಿದೆ.

‘ಆದಿ ಕವಿ ಪಂಪ– ಅಂತ್ಯ ಕವಿ ಚಂಪಾ’ ಎಂದು ಸ್ವಯಂ ಘೋಷಿಸಿಕೊಂಡು ಒಂದರ್ಥದಲ್ಲಿ ಹೆಗ್ಗಳಿಕೆಯನ್ನು, ಮಗದೊಂದು ಅರ್ಥದಲ್ಲಿ ಸ್ವಯಂ ಗೇಲಿಯನ್ನೂ ಮಾಡಿಕೊಳ್ಳುತ್ತಿದ್ದ ಪಾಟೀಲರು, ಯಾರನ್ನೂ ಬಿಟ್ಟವರಲ್ಲ. ಕಸಾಪ ಚುನಾವಣೆ ವೇಳೆ, ಸಮ್ಮೇಳನದ ಅಧ್ಯಕ್ಷರಾಗಿದ್ದ ವೇಳೆ ‘ಪಕ್ಷಪಾತ’ ಧೋರಣೆಯನ್ನು ಚಂಪಾ ಅನುಸರಿಸಿದ್ದುಂಟು. ಯಡಿಯೂರಪ್ಪನವರು ಕರ್ನಾಟಕ ಜನತಾ ಪಕ್ಷ ಕಟ್ಟಿದಾಗ ಅವರ ಜತೆಗೂ ಸೇರಿಕೊಂಡಿದ್ದು ಉಂಟು. ಈ ಮಿತಿಗಳಾಚೆಗೂ ಪ್ರಜಾತಂತ್ರವಾದಿಯಾಗಿದ್ದ ಚಂಪಾ, ದೇಶಕ್ಕೆ ಅಪಾಯ ತಂದೊಡ್ಡುವ ಕೋಮುಶಕ್ತಿಗಳ ವಿರುದ್ಧದ ನಿಲುವಿನಲ್ಲಿ ಅಚಲರಾಗಿಯೇ ಇದ್ದರು.

ಕವಿ ಪಂಪನಾದಿಯಾಗಿ ನಾಡು ಕಂಡ ಪ್ರಜ್ಞಾವಂತರೆಲ್ಲರೂ ಸರ್ವಾಧಿಕಾರವನ್ನು ತಮ್ಮ ಧ್ವನಿ, ಕವಿತ್ವ, ಅಕ್ಷರದ ಮೂಲಕವೇ ವಿರೋಧಿಸಿದವರು. ಬಸವಣ್ಣ, ಕುಮಾರವ್ಯಾಸ, ಕುವೆಂಪು, ಬೇಂದ್ರೆಯವರನ್ನು ಸೇರಿಸಿಕೊಂಡಂತೆ ಈ ಮಾತು ಹೇಳಿದರೆ ತಪ್ಪಾಗಲಿಕ್ಕಿಲ್ಲ. ನಂತರದ ತಲೆಮಾರಿನಲ್ಲಿ ಪಿ.ಲಂಕೇಶ್, ಯು.ಆರ್.ಅನಂತಮೂರ್ತಿ, ಎಂ.ಡಿ.ನಂಜುಂಡಸ್ವಾಮಿ, ಗಿರೀಶ ಕಾರ್ನಾಡ, ಪೂರ್ಣಚಂದ್ರ ತೇಜಸ್ವಿ, ಕೆ.ರಾಮದಾಸ್, ಚಂಪಾ ಈ ಸಾಲಿನಲ್ಲಿ ಮೊದಲಿಗರು. ಇವರಲ್ಲದೆಯೂ ಅನೇಕ ಮಹನೀಯರು ತಮ್ಮ ಬರವಣಿಗೆಗಳ ಮೂಲಕ ನಿಷ್ಠುರ ಸತ್ಯವನ್ನು, ಆಳುವವರ ಕ್ರೌರ್ಯವನ್ನು ತಮ್ಮ ಕೃತಿಗಳಲ್ಲಿ ಹೇಳಿದ್ದಾರೆ. ಆದರೆ, ಏನಾದರೊಂದು ಘಟಿಸಿದಾಗ, ತಕ್ಷಣಕ್ಕೆ ಪ್ರತಿಕ್ರಿಯಿಸಲು ಸಾಧ್ಯವಾಗದೇ ಇರುವವರಿಗೆ ತಮ್ಮದೇ ಹೊಳಹುಗಳ ಮುಖೇನ ಸರಿದಾರಿ ತೋರಿದವರು ಕೆಲವರಷ್ಟೇ. ಇವರೆಲ್ಲರೂ ಪರಸ್ಪರರ ತಪ್ಪುಗಳನ್ನು ಮುಲಾಜಿಲ್ಲದೆ ಟೀಕಿಸುವ ಪರಿಪಾಟವನ್ನೂ ರೂಢಿಸಿಕೊಂಡಿದ್ದರು. ಇವರ ಜಗಳವು ಪ್ರಜಾತಾಂತ್ರಿಕ ಸಂವಾದವೊಂದಕ್ಕೆ, ಅದರ ಮುಖೇನ ಹೊಸ ಮಾರ್ಗವೊಂದರ ಬಾಗಿಲನ್ನು ತೆರೆಯುತ್ತಿತ್ತು.

ಆಂಧ್ರಪ್ರದೇಶದಲ್ಲಿ ಕ್ರಾಂತಿಕಾರಿ ಹೋರಾಟ ಮುಂಚೂಣಿಯಲ್ಲಿದ್ದ ಕಾಲದಲ್ಲಿ ಕವಿ–ಲೇಖಕರು ಜನರ ಜತೆಗೆ ನಿಂತಿದ್ದರು. ಆಗಿನ ಸರ್ಕಾರವು ತೆಲುಗಿನ ಕವಿಗಳ ತಲೆಗೆ (ಹಿಡಿದುಕೊಟ್ಟವರಿಗೆ) ₹ 10 ಲಕ್ಷದವರೆಗೂ ಬಹುಮಾನ ಘೋಷಿಸಿತ್ತು. ಇದನ್ನು ಉಲ್ಲೇಖಿಸಿದ್ದ ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್, ‘ಆಂಧ್ರ ಸರ್ಕಾರ ಕವಿಗಳ ತಲೆಗೆ ದುಡ್ಡು ಕಟ್ಟಿದರೆ, ಕರ್ನಾಟಕ ಸರ್ಕಾರ ಬಹಳ ಬುದ್ಧಿವಂತಿಕೆಯಿಂದ ನಡೆದುಕೊಳ್ಳುತ್ತಿದೆ. ಲೇಖಕರ ತಲೆಗೆ ದುಡ್ಡು ಕಟ್ಟುವ ಬದಲು ಅವರಿಗೆ ನಿಗಮ, ಪ್ರಾಧಿಕಾರ, ವಿಧಾನಪರಿಷತ್ತಿನ ಆಸೆ ತೋರಿಸಿ ಅವರ ‘ತಲೆ’ಯನ್ನೇ ಖರೀದಿಸುತ್ತಿದೆ’ ಎಂದು ವ್ಯಂಗ್ಯವಾಡಿದ್ದರು. ರಾಜ್ಯವನ್ನು ಆಳಿದ ಎಲ್ಲ ಪಕ್ಷಗಳು ಈ ಅಸ್ತ್ರ ಬಳಸಿದ್ದುಂಟು. ಹಾಗಿದ್ದರೂ, ಜಾತಿ ದೌರ್ಜನ್ಯ, ಕೋಮು ಗಲಭೆ, ಸೌಹಾರ್ದ ಕೇಂದ್ರಗಳನ್ನು ಹಾಳುಗೆಡವಿ ಸಾಮರಸ್ಯವನ್ನೇ ಕೊಲ್ಲುವ ಪರಿಸ್ಥಿತಿಯನ್ನು ಕೋಮುವಾದಿಗಳು ಸೃಷ್ಟಿಸಿದಾಗಲೆಲ್ಲ ಮೇಲೆ ಉಲ್ಲೇಖಿಸಿದ ತಲೆಮಾರಿನವರು ನಿಷ್ಠುರ ಹಾಗೂ ಪ್ರಖರವಾಗಿ ಏರುಧ್ವನಿಯಲ್ಲಿ ಟೀಕಿಸಿ ಜನಪರತೆ ತೋರಿದ್ದರು.

2014ರ ಚುನಾವಣೆ ಹೊಸ್ತಿಲಿನಲ್ಲಿ ‘ಮೋದಿ ಪ್ರಧಾನಮಂತ್ರಿಯಾದರೆ ನಾನು ದೇಶದಲ್ಲಿ ಇರ ಬಯಸುವುದಿಲ್ಲ’ ಎಂದು ಯು.ಆರ್.ಅನಂತಮೂರ್ತಿ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ಅವರ ಹೇಳಿಕೆಯನ್ನು ಬೀದಿಗೆ ತಂದು ನಿಲ್ಲಿಸಿದವರಿಗೆ ಮೂರ್ತಿಯವರ ಹೇಳಿಕೆಯ ಧ್ವನ್ಯಾರ್ಥವೇ ಗೊತ್ತಾಗದೆ ವಾಚ್ಯಾರ್ಥವೇ ಪ್ರಮುಖವಾಗಿ ಬಿಟ್ಟಿತ್ತು. ಆದರೆ, ಇಂದಿನ ದಿನಗಳಲ್ಲಿ ಬಡವರು, ಕೂಲಿಕಾರರು, ಮಧ್ಯಮ ವರ್ಗದ ಜನರು ಪಡುತ್ತಿರುವ ಪಾಡನ್ನು ನೋಡಿದರೆ ಅನಂತಮೂರ್ತಿಯವರು ಹೇಳಿದ ಮಾತು ಇವತ್ತು ಬಿಜೆಪಿಯವರಿಗೂ ಅಪಥ್ಯವೆನಿಸಲಾರದು.

ಈಗಿನ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗುತ್ತಿದೆ. ಒಂದೆಡೆ ನಮ್ಮೆಲ್ಲರ ಬದುಕಿನ ಆದರ್ಶ ಮಾರ್ಗಸೂಚಿಯಾಗಿ ಯಾವತ್ತೂ ಉಳಿಯಲೇಬೇಕಾದ ಸಂವಿಧಾನವನ್ನೇ ಬದಲಿಸಿ, ಪ್ರಜಾತಂತ್ರದ ಸಮಾಧಿ ಕಟ್ಟುವ ಹುನ್ನಾರಗಳು ನಡೆಯುತ್ತಿವೆ. ಸಹಿಷ್ಣುತೆ, ಶಾಂತಿ, ಸೌಹಾರ್ದದ ಪಾಠ ಹೇಳಬೇಕಾದ ಧರ್ಮ ಸಂಸತ್ಗಳು ಅಧರ್ಮದ ವರ್ತನೆಗೆ ಜನರನ್ನು ಪ್ರೇರೇಪಿಸುವ ಕೊಳ್ಳಿದೇವಗಳ ಆವಾಸಗಳಾಗುತ್ತಿವೆ. ಸರ್ವಾಧಿಕಾರದ ಕಡೆಗಿನ ಹೆಜ್ಜೆಯ ಸಪ್ಪಳ ಅಬ್ಬರದತ್ತ ಸಾಗುತ್ತಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಪ್ರಥಮ ದರ್ಜೆ ಕಾಲೇಜೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಬ್ (ತಲೆಗವಸು) ಹಾಕಿಕೊಳ್ಳುವುದಕ್ಕೆ ನಿರ್ಬಂಧಿಸಬೇಕೆಂದು ತಗಾದೆ ತೆಗೆದ ಒಂದು ಗುಂಪು, ತಾವೂ ಕೇಸರಿ ಶಲ್ಯ ಹಾಕಿಕೊಂಡು ಬರುತ್ತೇವೆ ಎಂದು ಪಟ್ಟು ಹಿಡಿಯಿತು. ಕರಾವಳಿಗೆ ಸೀಮಿತವಾಗಿದ್ದ ಇಂತಹ ಘಟನೆ ಈಗ ಬೇರೆಡೆಗೂ ಹಬ್ಬುತ್ತಿದೆ. ಆರ್ಎಸ್ಎಸ್ನ ಸರಸಂಘ ಚಾಲಕ ಮೋಹನ್ ಭಾಗವತ್ ಅವರು ಮೊನ್ನೆ ಕಲಬುರಗಿಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದರು. ಆರ್ಎಸ್ಎಸ್ನ ‘ಗಣವೇಷ’ ಹಾಕಿಕೊಂಡು ಬಂದರಷ್ಟೇ ಒಳ ಪ್ರವೇಶಿಸಲು ಅವಕಾಶ ಎಂದು ಪತ್ರಕರ್ತರನ್ನು ನಿರ್ಬಂಧಿಸಲಾಯಿತು. ಸಂಘದ ಸಿದ್ಧಾಂತ, ವೇಷವನ್ನು ಒಪ್ಪದವರು ಕಾರ್ಯಕ್ರಮಕ್ಕೆ ಬೇಡ ಎನ್ನುವವರು ಮುಂದೆ ಯಾವ ರೀತಿ ನಡೆದುಕೊಳ್ಳಬಲ್ಲರು? ಹೀಗೆ ಹೇಳುವಾಗ, ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ’ ಎಂದು ಕರೆ ಕೊಟ್ಟ ಕುವೆಂಪು ನೆನಪಾಗುತ್ತಾರೆ.

‘ಮತಿ ಮಾನವನ ಸರ್ವೋತ್ಕೃಷ್ಟವಾದ ಆಯುಧ. ಮತಿಯೇ ಕತ್ತಲಲ್ಲಿ ದಾರಿ ತೋರುವ ರತ್ನದ ಕೈದೀವಿಗೆ. ಮತಿಯ ದೆಸೆಯಿಂದಲೇ, ಪ್ರಾಣಿಮಾತ್ರವಾಗುತ್ತಿದ್ದ ನರಜೀವಿ ಮನುಷ್ಯತ್ವಕ್ಕೆ ಏರಿದ್ದಾನೆ... ಸ್ವಲ್ಪವಾಗಿಯೋ ಹೆಚ್ಚಾಗಿಯೋ ಮತಿ ಮನುಷ್ಯರೆಲ್ಲರಲ್ಲಿಯೂ ಇರುತ್ತದೆ. ಆದರೆ, ಮೌಢ್ಯದಿಂದಲೂ ಮತಾಚಾರಗಳಿಂದಲೂ ಸಮಾಜ ಭೀತಿಯಿಂದಲೂ... ಮತಿ ಈಗ ಸತ್ವರಹಿತವಾಗಿದೆ. ಮತಿಗೆ ಅಂಕುಶಗಳು ಅತಿಯಾಗಿ ಜೀವವೆ ನಿಸ್ತೇಜವಾಗಿದೆ. ಮತ ನಮಗೊಂದು ದೊಡ್ಡ ಬಂಧನವಾಗಿದೆ; ನಾಡಿನ ಏಳ್ಗೆಯ ಕುತ್ತಿಗೆಗೆ ಉರುಳಾಗಿದೆ... ಈಗ ಅದು ಸಾಮಾಜಿಕವಾದ ಕಟ್ಟುಕಟ್ಟಲೆಗಳ ಕಾಡಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡ
ನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ, ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಕೆಲಸಕ್ಕೆ ಬಾರದ ನೂರಾರು ಆಚಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿದೆ... ಯುವಕರಾದವರು ಎಚ್ಚೆತ್ತುಕೊಂಡು ದೀರ್ಘದೃಷ್ಟಿ ಹಾಗೂ ವಿಶಾಲ ಹೃದಯದಿಂದ ಚಿರನವೀನವಾದ ‘ದರ್ಶನ’ವನ್ನು ಪಡೆದು ತಮ್ಮನ್ನೂ ದೇಶವನ್ನೂ ಉದ್ಧಾರ ಮಾಡಿಕೊಳ್ಳಬೇಕಾಗಿದೆ...’ ಎಂದು ಕುವೆಂಪು ಹೇಳುತ್ತಾರೆ. ಅದರ ಫಲವೇ, ಒಂದೆರಡು ತಲೆಮಾರು ಅಂತಹ ದರ್ಶನಗಳನ್ನು ನಮ್ಮೆದುರು ಕೊಟ್ಟಿತ್ತು.

ಈಗ ಹೀಗೆಲ್ಲ ಮಾತನಾಡಿದರೆ ದೇಶದ್ರೋಹದ ಪಟ್ಟ ಕಟ್ಟಿ ಸಮಾಜದಿಂದ ಒಂದರ್ಥದಲ್ಲಿ ಬಹಿಷ್ಕರಿಸುವ ಕೆಲಸ ಶುರುವಾಗುತ್ತದೆ. ಇಂದಿನ ದಿನಮಾನಗಳು ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ನೆನಪಿಸುತ್ತಿವೆ. ಪ್ರೊ. ಚಂಪಾ ನಿಧನರಾದ ದಿನ, ಅವರು ತುರ್ತುಪರಿಸ್ಥಿತಿ ಕಾಲದಲ್ಲಿ ಬರೆದ ಕವನವನ್ನು ಉಲ್ಲೇಖಿಸಿ, ಸಂಸ್ಕೃತಿ ಚಿಂತಕ ರಹಮತ್ ತರೀಕೆರೆ ತಮ್ಮ ಫೇಸ್ಬುಕ್ ಪುಟದಲ್ಲಿ ನಮನ ಸಲ್ಲಿಸಿದ್ದರು. ‘ಒಂದಾನೊಂದು ಕಾಲಕ್ಕೆ’ ಎಂಬ ಶೀರ್ಷಿಕೆಯ ಕವನ ಹೀಗಿದೆ...

ಒಂದಾನೊಂದು ಕಾಲಕ್ಕೆ, ಗೆಳೆಯರೆ

ಈ ಬಾನಿಗೆ ಅಂಚೆಂಬುದು ಇರಲಿಲ್ಲ.

ಈ ನೆಲಕ್ಕೆ ಗಡಿಯೆಂಬುದು ಇರಲಿಲ್ಲ.

ನೀವು ಕೂಗಿದ್ದೇ ಆಗ ಕಾವ್ಯವಾಗಿತ್ತು.

ಕೇಳುವವರಿರಲಿಲ್ಲ

ನೀವು ಹಿಡಿದದ್ದೇ ಆಗ ಹಾದಿಯಾಗಿತ್ತು

ತುಳಿಯುವವರಿರಲಿಲ್ಲ

ನಿಮ್ಮ ಬಾಯಿಗೆ ಈಗ ಬಟ್ಟೆ ತುರುಕಿದ್ದಾರೆ.

ನಿಮ್ಮ ಕಾಲಿಗೆ ಈಗ ಬೇಡಿ ಬಿಗಿದಿದ್ದಾರೆ

ನೀವೀಗ ಸ್ವಲ್ಪ ಝಾಡಿಸಿದರೆ ಕಾಲು,

ಬೇಡಿ ಹರಿಯಲಿಕ್ಕಿಲ್ಲ; ಆದರೆ

ಬಾನಲ್ಲಿ ಹಾಲುಹಾದಿ ಮೂಡುತ್ತದೆ.

ಮೌನ ಮುರಿಯಲು ಸ್ವಲ್ಪ ಹೆಣಗಿದರೆ ನೀವು

ಶಬ್ದ ಹೊರಡಲಿಕ್ಕಿಲ್ಲ; ಆದರೆ

ನೆಲವೇ ಎದೆ ಬಿರಿದು ಹಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.