ಹಾಲಿನಂಥ ಅತ್ಯಗತ್ಯ ಆಹಾರ ಸಾಮಗ್ರಿಯೊಂದು, ಚುನಾವಣೆಯ ಸಮಯದಲ್ಲಿ ಸಾರ್ವಜನಿಕ ಚರ್ಚೆಯ ಸಂಗತಿಯಾಗಿರುವುದು ಸ್ವಾಗತಾರ್ಹವೇ. ಬೇಸಿಗೆಯ ಈ ದಿನಗಳಲ್ಲಿ ಕೆಎಂಎಫ್ ಪ್ರತಿದಿನ ಉತ್ಪಾದಿಸುವ ಹಾಲು ಸುಮಾರು 96 ಲಕ್ಷ ಕೆ.ಜಿ.ಯಿಂದ 76 ಲಕ್ಷ ಕೆ.ಜಿ.ಗೆ ಇಳಿದಿರುವುದರಿಂದ, ರಾಜ್ಯದಾದ್ಯಂತ ‘ನಂದಿನಿ’ ಹಾಲಿನ ಪೂರೈಕೆಯಲ್ಲಿ ವ್ಯತ್ಯಯವಾಗಿರುವುದು ದಿಟ. ಈ ಸಮಯವನ್ನೇ ಬಳಸಿ ಕೆಲವು ಖಾಸಗಿ ಹಾಗೂ ಹೊರರಾಜ್ಯಗಳ ಹಾಲಿನ ಉತ್ಪನ್ನಗಳು ಮಾರುಕಟ್ಟೆಯನ್ನು ವ್ಯಾಪಿಸುತ್ತಿರುವುದು, ಹೈನುಗಾರರಿಗೆ ವೈಜ್ಞಾನಿಕ ಪ್ರೋತ್ಸಾಹಧನ ನೀಡುವಲ್ಲಿ ಸರ್ಕಾರದ ವಿಳಂಬ ಧೋರಣೆ, ಹಾಲು ಸಹಕಾರಿ ಸಂಘಗಳ ಆಡಳಿತದಲ್ಲಿ ಸರ್ಕಾರಿ ಹಸ್ತಕ್ಷೇಪ- ಇವೆಲ್ಲ ವಿಷಯಗಳು ಈಗ ರಾಜಕೀಯ ವಿವಾದದ ಸ್ವರೂಪ ಪಡೆಯುತ್ತಿವೆ.

ಉದಾರೀಕರಣ ನೀತಿಯು ಆರ್ಥಿಕತೆಯ ಎಲ್ಲ ಮಜಲುಗಳನ್ನೂ ತೀವ್ರವಾಗಿ ತಟ್ಟುತ್ತಿರುವ ಈ ಕಾಲಘಟ್ಟದಲ್ಲಿ, ಹಾಲಿನ ಮಾರುಕಟ್ಟೆಯ ಈ ವಿದ್ಯಮಾನಗಳು ಅನಿರೀಕ್ಷಿತವೇನೂ ಅಲ್ಲ. ನಾಡಿನ ಹಿತ ಕಾಯುವ ಸೂಕ್ತ ಹೈನೋದ್ಯಮ ನೀತಿಯೊಂದನ್ನು ರೂಪಿಸಲು ರಾಜ್ಯ ಸರ್ಕಾರ ಶಕ್ತವಾಗುವುದೇ ಎಂಬುದು ಮಾತ್ರ ಈಗ ಉಳಿದಿರುವ ಕುತೂಹಲ.

ಮಾರುಕಟ್ಟೆಯ ಸವಾಲುಗಳು ಹೈನೋದ್ಯಮದ ಒಂದು ಆಯಾಮ ಮಾತ್ರ. ರಾಜ್ಯದ ಒಟ್ಟೂ ಆರ್ಥಿಕತೆಯ (ಎಸ್‌ಜಿಡಿಪಿ) ಸುಮಾರು ಶೇ 16ರಿಂದ ಶೇ 17ರಷ್ಟು ಪಾಲು ಕೃಷಿಕ್ಷೇತ್ರದ್ದಾಗಿದ್ದು, ಇದರಲ್ಲಿ ಹೈನುಗಾರಿಕೆಯ ಪಾಲೂ ಮಹತ್ವದ್ದಿದೆ. ಬೆಳೆಗಳ ಉತ್ಪಾದನೆಯ ಏಳುಬೀಳುಗಳನ್ನು ಎದುರಿಸುವಲ್ಲಿ ಹಾಗೂ ಹಳ್ಳಿಗಳಲ್ಲಿ ಉದ್ಯೋಗಾವಕಾಶ ಸೃಷ್ಟಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಗಮನಾರ್ಹವಾದುದು. ಆದರೆ, ಸುಮಾರು ಎರಡು– ಮೂರು ದಶಕಗಳಿಂದ ಸೂಕ್ತ ಹೈನೋದ್ಯಮ ನೀತಿಯೇ ಇಲ್ಲದಾಗಿ, ಈ ಕ್ಷೇತ್ರದ ಶ್ರೇಯೋಭಿವೃದ್ಧಿ ಸಾಧಿಸಬಲ್ಲ ವಾತಾವರಣವನ್ನು ಪೋಷಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ! ಇದರಿಂದಾಗಿ, ಹೈನುಗಾರಿಕೆ ತೀವ್ರ ಸಂಕಷ್ಟ ಎದುರಿಸುತ್ತಿದೆ. ಮಾರುಕಟ್ಟೆ ಸಮಸ್ಯೆಯ ಹೊರತಾಗಿಯೂ ಈ ಪರಿಸ್ಥಿತಿಗೆ ಕಾರಣವಾದ ಮೂರು ಪ್ರಮುಖ ಸವಾಲುಗಳನ್ನು ಇಲ್ಲಿ ಚರ್ಚಿಸೋಣ.

ಮೊದಲಿನದು, ಮೇವಿನ ಮೂಲಾಧಾರವಾದ ಗೋಮಾಳ ನಾಶವಾಗುತ್ತಿರುವುದು. ಕರಾವಳಿ, ಮಲೆನಾಡು ಹಾಗೂ ಒಳನಾಡು- ಎಲ್ಲೆಡೆಯೂ ಹಿಂದಿನ ಮೂರು ದಶಕಗಳಿಂದ ಸಾಮೂಹಿಕ ಗೋಮಾಳಭೂಮಿ ನಾಶವಾಗುತ್ತಲೇ ಇದೆ. ಹಾಡಿ, ಬೆಟ್ಟ, ಕುಮ್ಕಿ, ಕಾವಲ್, ಗುಂಡುತೋಪುಗಳೆಂದೆಲ್ಲ ಗುರುತಿಸಲಾಗುವ ಮೇವಿನತಾಣಗಳೆಲ್ಲ ಅವೈಜ್ಞಾನಿಕ ಕಾಮಗಾರಿ, ಕೃಷಿ ವಿಸ್ತರಣೆ, ಅಕ್ರಮ ಭೂಪರಿವರ್ತನೆ, ಭೂಕಬಳಿಕೆಯಂತಹವುಗಳಿಗೆ ಬಲಿಯಾಗುತ್ತಿವೆ. ಕುಡಿಯುವ ನೀರು ಹಾಗೂ ಹಸಿರುಮೇವು ಒದಗಿಸುತ್ತಿದ್ದ ಕೆರೆಯಂಚು, ನದಿತೀರ, ಜೌಗುಗದ್ದೆಗಳು ಕಣ್ಮರೆಯಾಗುತ್ತಿವೆ. ಇತ್ತೀಚಿನ ಅಧ್ಯಯನದ ಪ್ರಕಾರ, ಹಿಂದಿನ ದಶಕವೊಂದರಲ್ಲೇ ಶೇ 30ಕ್ಕೂ ಹೆಚ್ಚು ಇಂಥ ಸಮೃದ್ಧ ಮೇವಿನಭೂಮಿ ನಾಶವಾಗಿದೆ. ಅನಾದಿಯಿಂದ ಹಳ್ಳಿಗಾಡಿನಲ್ಲಿ ಮೇಯುತ್ತಲೇ ಹಳ್ಳಿಗರ ಬದುಕನ್ನು ಹಸನಾಗಿಸಿದ್ದ ಹೈನುಗಳಿಗೆ ಈಗ ಓಡಾಡಲೂ ಸ್ಥಳವಿಲ್ಲ!

ಇದರ ಪರಿಣಾಮವೇನು? ಅಮೃತಮಹಲ್, ಹಳ್ಳಿಕಾರ್, ಮಲೆನಾಡುಗಿಡ್ಡ, ಕಿಲಾರಿ, ದೇವಣಿ, ಕಾಸರಗೋಡು ತರಹದ ನಾಡಿನ ಉತ್ಕೃಷ್ಟ ದೇಸಿ ತಳಿಗಳನ್ನು ಉಳಿಸಿಕೊಳ್ಳಲು ರೈತರು ಸೋಲುತ್ತಿದ್ದಾರೆ. ಸುರಟಿ, ಮುರ್‍ರಾ, ಪಂಡರಾಪುರಿ, ಧಾರವಾಡಿಯಂಥ ಸಶಕ್ತ ಎಮ್ಮೆ ತಳಿಗಳು ಕಣ್ಮರೆಯಾಗುತ್ತಿವೆ. ಈ ಅನನ್ಯ ದೇಸಿ ಹೈನು ತಳಿವೈವಿಧ್ಯವೆಲ್ಲ ಕರಗಿ ಬರೀ ಜರ್ಸಿ, ಎಚ್.ಎಫ್.ನಂಥ ಬೆರಳೆಣಿಕೆಯ ವಿದೇಶಿ ಮಿಶ್ರತಳಿಗಳು ಕೊಟ್ಟಿಗೆಯಲ್ಲಿ ಉಳಿಯುತ್ತಿವೆ. ಮೂಲತಃ ತಂಪು ಪ್ರದೇಶದ ಈ ತಳಿಗಳನ್ನು ಇಲ್ಲಿನ ಉಷ್ಣ ವಾತಾವರಣಕ್ಕೆ ಒಗ್ಗಿಸಿ ಉಳಿಸಿಕೊಳ್ಳಲು ರೈತರು ಹಗಲಿರುಳು ಶ್ರಮಿಸಬೇಕಾಗಿದೆ. ಉದ್ಯಮವೊಂದು ಅರಳಿ ಉಳಿಯಬೇಕೆಂದರೆ, ಮಾನವ ಸಂಪನ್ಮೂಲ, ಆರ್ಥಿಕ ಸಂಪನ್ಮೂಲ ಹಾಗೂ ಮಾರುಕಟ್ಟೆ ಸೌಲಭ್ಯದ ಜೊತೆ, ಅದನ್ನು ಪೋಷಿಸುವ ನೈಸರ್ಗಿಕ ಪರಿಸರವೂ ಅತ್ಯಗತ್ಯವೆನ್ನುವ ಅರ್ಥಶಾಸ್ತ್ರದ ಪ್ರಾಥಮಿಕ ಜ್ಞಾನವನ್ನೇ ಮರೆತ ಸರ್ಕಾರಿ ನೀತಿಯ ಪರಿಣಾಮವಿದು!

ಎರಡನೇ ಸವಾಲೆಂದರೆ, ಹೆಚ್ಚುತ್ತಿರುವ ಪಶುರೋಗಗಳು. ಮಿಶ್ರತಳಿಗಳು ಹೆಚ್ಚಾದಂತೆಲ್ಲ, ಅವುಗಳ ರೋಗಗಳೂ ಹೆಚ್ಚಾಗುತ್ತಿವೆ. ಜಂತುಹುಳುವಿಗೆ ಆರು ತಿಂಗಳಿಗೊಮ್ಮೆ ಔಷಧಿ ಹಾಕಬೇಕು. ಕಾಲುಬಾಯಿ ಬೇನೆ ಮಣಿಸಲು ವರ್ಷಕ್ಕೆ ಎರಡು ಬಾರಿ ಲಸಿಕೆ ಬೇಕು. ಗಂಟಲುಬೇನೆ, ಚಪ್ಪೆಬೇನೆ ಎದುರಿಸಲೂ ವರ್ಷಕ್ಕೊಮ್ಮೆ ಲಸಿಕೆ ಬೇಕೇಬೇಕು. ಹೀಗಾಗಿ, ಪಶುರೋಗ ನಿರ್ವಹಣೆಯೆಂದರೆ ರೈತರಿಗೆ ಸದಾ ಆತಂಕದ ಮತ್ತು ವೆಚ್ಚ ತರುವ ಸಂಗತಿಯೇ. ಹಿಂದಿನ ವರ್ಷ ತೀವ್ರವಾಗಿ ಹರಡಿದ ಲಂಪಿ ಚರ್ಮರೋಗ, ರಾಜ್ಯದಲ್ಲಿ ಸುಮಾರು ಐವತ್ತು ಸಾವಿರ ಆಕಳುಗಳನ್ನು ಬಲಿ ಪಡೆಯಿತಲ್ಲ!

ಹಸಿಮೇವು, ಕುಡಿಯಲು ಸ್ವಚ್ಛ ನೀರು, ಅಡ್ಡಾಡಲು ಒಂದಷ್ಟು ಸಹಜ ಜಾಗ- ಇವು ಇರದಿದ್ದುದರ ಪರಿಣಾಮವಿದು. ಈ ಬಗೆಯ ರೋಗವೈವಿಧ್ಯಕ್ಕೆ ಹವಾಮಾನ ಬದಲಾವಣೆಯೂ ಇಂಬು ಕೊಡುತ್ತಿದೆ. ದಶಕಗಳ ಮೊದಲು, ವಿಶೇಷ ಔಷಧೋಪಚಾರವೇ ಇಲ್ಲದೆ ಆರೋಗ್ಯಕರವಾಗಿರುತ್ತಿದ್ದ ರಾಸುಗಳಿಗೆ ಈಗ ಪ್ರತಿದಿನವೂ ಬಗೆಬಗೆಯ ಔಷಧಿಯನ್ನು ನುಂಗಿಸಿಯೇ ಸಾಕಬೇಕಾಗಿದೆ!

ಅಂತಿಮವಾಗಿ, ಮಾರುಕಟ್ಟೆಯಲ್ಲಿನ ಹಾಲಿನ ಗುಣಮಟ್ಟದ ಕುರಿತು. ನಂದಿನಿ, ಅಮುಲ್ ತರಹದ ಬ್ರ್ಯಾಂಡುಗಳೇನೋ ಗುಣಮಟ್ಟವನ್ನು ಕಾಯ್ದುಕೊಂಡಿರಬಹುದು. ಆದರೆ, ಇನ್ನುಳಿದ ಹಾಲಿನ ಮೂಲ ಹಾಗೂ ಸ್ವರೂಪವನ್ನು ಮಾತ್ರ ಗುರುತಿಸುವುದೇ
ಸಾಧ್ಯವಾಗುತ್ತಿಲ್ಲ. ನೀರು ಹಾಗೂ ಯೂರಿಯಾ ಕಲಬೆರಕೆ ಪ್ರಕರಣಗಳಂತೂ ಹೆಚ್ಚುತ್ತಲೇ ಇವೆ. ರೋಗವಿರುವ ಹಾಗೂ ಚಿಕಿತ್ಸೆಯಲ್ಲಿರುವ ರಾಸುಗಳ ಹಾಲು ಹಿಂಡಬಾರದೆನ್ನುವ ನಿಯಮವಿದ್ದರೂ ಅಂಥ ಹಾಲು ಗ್ರಾಹಕರ ಕೈಸೇರುತ್ತಿದೆ. ಸ್ಟ್ರೆಪ್ಟೋಮೈಸಿನ್, ಟೆಟ್ರಾಸೈಕ್ಲಿನ್‌ನಂಥ ಪ್ರತಿವಿಷಗಳು, ಬಿಎಸ್‌ಟಿ ಹಾಗೂ ಆಕ್ಸಿಟೋಸಿನ್ ತರಹದ ಹಾರ್ಮೋನುಗಳು, ಸ್ಟಿರಾಯ್ಡ್, ಕ್ರಿಮಿನಾಶಕ, ಕಳೆನಾಶಕ- ಇವೆಲ್ಲ ಅಪಾಯಕಾರಿ ರಾಸಾಯನಿಕ ಶೇಷವಿರುವ ಸಂದರ್ಭಗಳು ಹೆಚ್ಚುತ್ತಿವೆ.

ಹಿಂಡುವಲ್ಲಿಂದ ಬಳಕೆದಾರರಿಗೆ ತಲುಪುವವರೆಗೆ ಹಾಲಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸೂಕ್ತ ನಿಯಮಾವಳಿಗಳ ಅನುಷ್ಠಾನ ಇರದಿರುವುದರ ಪರಿಣಾಮವಿದು. ಹೈನೋದ್ಯಮದಲ್ಲಿ ‘ಹಾಲಾಹಲ’ ಎನ್ನದೆ ವಿಧಿಯುಂಟೇ?

ಹೀಗಾಗಿ, ಈ ಸವಾಲುಗಳನ್ನೆಲ್ಲ ಮೀರಿ ಗುಣಮಟ್ಟದ ಹಾಲು ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವ ನಾಡಿನ ಹೈನುಗಾರರು ಅಪಾರ ಸಂಕಷ್ಟ ಎದುರಿಸುತ್ತಿದ್ದಾರೆ. ಹಸುವೊಂದು ವರ್ಷಕ್ಕೆ ಒಂದಾದರೂ ಕರು ಹಾಕುವಂತೆ ನೋಡಿಕೊಳ್ಳಬೇಕು. ನಿರಂತರ ಔಷಧೋಪಚಾರ ಮಾಡಬೇಕು. ಪ್ರತಿದಿನವೂ ಶುದ್ಧನೀರು, ಗುಣಮಟ್ಟದ ಹಸಿಮೇವು, ರಸಮೇವು, ಲವಣಾಂಶ ಒದಗಿಸಬೇಕು.

ಇಷ್ಟೆಲ್ಲ ಮಾಡಿ ಹಾಲು ಉತ್ಪಾದಿಸಲು ಲೀಟರಿಗೆ ಕನಿಷ್ಠ ₹ 30 ಖರ್ಚಾಗುತ್ತದೆ ಎಂದು ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ (ಎನ್‌ಡಿಡಿಬಿ) ಅಧಿಕೃತವಾಗಿಯೇ ಹೇಳಿದೆ. ಆದರೆ, ಹಳ್ಳಿಯಲ್ಲಿ ಹಸು ಕಟ್ಟಿ ಹಾಲು ಮಾರುವವರಿಗೆ ಇಂದಿಗೂ ₹ 28-30ಕ್ಕಿಂತ ಹೆಚ್ಚು ದೊರಕುತ್ತಿಲ್ಲ. ಅಕ್ಷರಶಃ ಲಾಭವಿಲ್ಲ! ಶ್ರಮವಿಟ್ಟು ದುಡಿದರೂ ಒಂದಿನಿತೂ ಲಾಭವಿರದೆ ಬೇಸತ್ತ ರೈತರು ಹೈನುಗಾರಿಕೆಯಿಂದ ಹಿಮ್ಮುಖರಾಗುತ್ತಿರುವುದಕ್ಕೆ ಯಾರನ್ನು ದೂಷಿಸಬೇಕು?

ದೇಶದ ಹಾಲಿನ ಉತ್ಪಾದನೆಯಲ್ಲಿ ಗುಜರಾತ್ ನಂತರ ಎರಡನೆಯ ಸ್ಥಾನದಲ್ಲಿರುವ ಕರ್ನಾಟಕದ ಹೈನೋದ್ಯಮವು ಅಪಾಯಕ್ಕೆ ಸಿಲುಕಿರುವ ಪರಿಯಿದು. ಇಲ್ಲಿರುವ ಇನ್ನೊಂದು ವಿಪರ್ಯಾಸವನ್ನೂ ಗಮನಿಸಿ. ಹರಿಯಾಣದಲ್ಲಿರುವ ರಾಷ್ಟ್ರೀಯ ಹೈನುಗಾರಿಕಾ ಸಂಶೋಧನಾ ಸಂಸ್ಥೆಯ (ಎನ್‌ಡಿಆರ್‌ಐ) ವಿಜ್ಞಾನಿಗಳು, ಹೆಚ್ಚು ಹಾಲು ನೀಡುವ ದೇಸಿ ತಳಿಯಾದ ಗೀರ್ ಆಕಳನ್ನು ಮೊದಲ ಬಾರಿಗೆ ತದ್ರೂಪಿ ತಂತ್ರಜ್ಞಾನದಲ್ಲಿ (ಕ್ಲೋನಿಂಗ್) ಯಶಸ್ವಿಯಾಗಿ ವಂಶಾಭಿವೃದ್ಧಿ ಮಾಡಿರುವ ಯಶಸ್ಸನ್ನು ಇದೀಗ ಸಂಭ್ರಮಿಸುತ್ತಿದ್ದಾರೆ. ಆದರೆ, ನಾಡಿನಾದ್ಯಂತ ರೈತರು ಗೀರ್ ಸೇರಿದಂತೆ ಆಕಳು ಸಾಕುವ ಜೀವನೋಪಾಯವನ್ನೇ ಕೈಬಿಡುತ್ತಿದ್ದಾರೆ!

ಹೈನುಗಾರರ ಸಮಸ್ಯೆಗಳಿಗೆ ಸ್ಪಂದಿಸುವುದು ಹಾಗೂ ಗ್ರಾಹಕರಿಗೆ ಗುಣಮಟ್ಟದ ಹಾಲನ್ನು ನ್ಯಾಯಯುತ ಬೆಲೆಯಲ್ಲಿ ಒದಗಿಸುವುದು ಸರ್ಕಾರದ ಜವಾಬ್ದಾರಿ. ಈ ದಿಸೆಯಲ್ಲಿ ಸೂಕ್ತ ನೀತಿಯನ್ನು ಶೀಘ್ರದಲ್ಲಿ ಜಾರಿಗೆ ತರಲೇಬೇಕಿದೆ. ಹೈನೋದ್ಯಮವೆಂಬ ‘ನಂದಿನಿ’ ಬಾಳಿ ಬೆಳಗಬೇಕಾದರೆ, ಗೋವಳರ ನೋವುಗಳನ್ನು ಸರ್ಕಾರ ಕೇಳಿಸಿಕೊಳ್ಳಲೇಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.