ಇದೆಂಥಾ ದೌರ್ಭಾಗ್ಯ? ಅರಳಬೇಕಾದ ನೇಹದ ಮೊಗ್ಗೊಂದು ಹೀಗೆ ಅನ್ಯಾಯವಾಗಿ ಬಲಿಯಾಗಿದ್ದನ್ನು ಸಹಿಸುವುದು ಹೇಗೆ? ಹುಡುಗಿಯರು ಹೀಗೇ ಬಲಿಯಾಗುತ್ತಲೇ ಇರಬೇಕೆ? ಅರಳಿ ಘಮಘಮಿಸಬೇಕಾದ ಮಕ್ಕಳು ಅಮಾನುಷವಾಗಿ ಸಾಯುವ ದುರಂತ ಒಂದೆಡೆಯಾದರೆ, ಸಾರಿ ಸಾರಿ ಹೇಳಿದರೂ ಸ್ತ್ರೀಬಲಿಯ ಹಿಂದಿನ ಕಾರಣಗಳನ್ನು ಗಂಭೀರವಾಗಿ ಪರಿಗಣಿಸದ ಸಮಾಜ ಇನ್ನೊಂದೆಡೆ. ಒಂದೆಡೆ, ಇಂತಹ ದಾರುಣ ಸಾವುಗಳು ಕರುಳು ಕೊಯ್ಯುತ್ತಿದ್ದರೆ, ಇನ್ನೊಂದೆಡೆ, ಅವನ್ನು ತಮ್ಮ ಲಾಭದ ಭಿತ್ತಿಯಾಗಿಸಿಕೊಳ್ಳಲು ಯಾರ ಕೊರಳನ್ನಾದರೂ ಕೊಯ್ಯುವ ರಣ ಉತ್ಸಾಹದಲ್ಲಿ, ಹೆಣ ಬೀಳುವುದನ್ನೇ ಕಾಯುವವರ ನಿರ್ಲಜ್ಜೆಯ ನಿರಂಕುಶತೆಯ ಅಟ್ಟಹಾಸ ಬೆಚ್ಚಿಬೀಳಿಸುತ್ತದೆ. ಜನಪ್ರತಿನಿಧಿಗಳ ಅಸೂಕ್ಷ್ಮ ಹೇಳಿಕೆಗಳು, ವರ್ತನೆಗಳು ವಿಷಾದದ ಬೇಗೆಯನ್ನು ಹೆಚ್ಚಿಸುತ್ತವೆ. ಯಾರಿಗೂ ಅರ್ಥವಾಗದಿರುವುದು ಮತ್ತು ಬೇಕಿಲ್ಲದೇ ಇರುವುದು ತನ್ನದಲ್ಲದ ಕಾರಣಕ್ಕೆ ಹೆಣ್ಣೇ ಯಾಕೆ ಹೆಣವಾಗುತ್ತಿದ್ದಾಳೆ ಎಂಬ ಸತ್ಯ ಮಾತ್ರ!

ಹುಡುಗಿಯು ಹುಡುಗನ ಪ್ರೇಮವನ್ನು ಸ್ವೀಕರಿಸಿದರೂ ಕಷ್ಟ, ನಿರಾಕರಿಸಿದರೂ ಕಷ್ಟ. ಹುಡುಗಿಯರಿಗೆ ಬಹಳ ಸ್ವಾತಂತ್ರ್ಯ ಸಿಕ್ಕಿದೆ, ಎಲ್ಲವನ್ನೂ ಅವಳೇ ನಿರ್ಧರಿಸುವವಳಾಗಿದ್ದಾಳೆ ಎಂಬ ಕಥನ ಮೇಲ್ನೋಟಕ್ಕೆ ಬಹಳ ಚಲಾವಣೆಯಲ್ಲಿದೆ. ಆದರೆ ಅವಳ ಮನಸ್ಸನ್ನು ರೂಪಿಸುವಾಗಲೇ ಅವಳು ‘ಅವನಿಗೆ’ ಸರಿಯಾಗಿ ತನ್ನನ್ನು ಅಡಕಗೊಳಿಸಿಕೊಳ್ಳಬೇಕು ಎಂಬುದನ್ನು ಆಳದಲ್ಲಿ ಬೇರು ಬಿಡುವಂತೆ ನೀರೆರೆಯಲಾಗಿರುತ್ತದೆ. ಪ್ರೀತಿಯ ಹೆಸರಿನಲ್ಲಿ ಯಜಮಾನಿಕೆಯನ್ನು ಹೇರಿಕೆ ಮಾಡಲಾಗಿರುತ್ತದೆ. ಯಜಮಾನಿಕೆ ತೋರಿಸುವುದೇ ಪ್ರೀತಿ ಎಂಬಂತೆ ತಪ್ಪು ಸಂದೇಶಗಳನ್ನು ವಿವಿಧ ಮನರಂಜನಾ ಮಾಧ್ಯಮಗಳಲ್ಲಿ ಬಹಳ ಒರಟಾಗಿ ಬಿಂಬಿಸಲಾಗಿರುತ್ತದೆ. ಅವನು ಅವಳ ಬೆನ್ನುಬಿದ್ದು ಅವಳನ್ನು ತನ್ನವಳಾಗಿಸಿಕೊಳ್ಳುವುದನ್ನು ಎಷ್ಟು ಕೆಟ್ಟದಾಗಿ ದೃಶ್ಯಮಾಧ್ಯಮಗಳಲ್ಲಿ ತೋರಿಸಲಾಗುತ್ತದೆಯೆಂದರೆ, ಆ ಹಿಂಸೆಯೇ ಪ್ರೀತಿ ಎನ್ನುವುದಾದರೆ, ಅದಕ್ಕಿಂತ ದೊಡ್ಡ ಶಿಕ್ಷೆ ಇನ್ನೊಂದಿರಲಾರದು.

ಇಂತಹ ಒರಟುತನವನ್ನು ವೈಭವೀಕರಿಸಿ ಹುಡುಗಿಯೂ ಹುಡುಗನ ಈ ನಡೆಯನ್ನು ಗಂಡಸುತನ ಎಂದು ಭಾವಿಸಿ, ಪ್ರೀತಿ ಇರುವುದೇ ಹೀಗೆ ಎಂಬ ಭ್ರಮೆಗೆ ಒಳಗಾಗುತ್ತಾಳೆ ಮತ್ತು ಇಂತಹ ನಿರೂಪಣೆಗಳಿಗೆ ಸಿಗುವ ವ್ಯಾಪಕ ಸ್ವಾಗತವಂತೂ ನಿರಾಸೆಯುಂಟುಮಾಡುತ್ತದೆ.

ಇತ್ತೀಚೆಗೆ ‘ಅನಿಮಲ್’ ಎಂಬ ಸಿನಿಮಾ ಹೆಣ್ಣನ್ನು ತುಚ್ಛವಾಗಿ ಚಿತ್ರಿಸಿದ ಆರೋಪಕ್ಕೆ ಒಳಗಾಯಿತು. ಆದರೆ ಅದು ಕೋಟಿಗಳನ್ನು ದೋಚುವಲ್ಲಿ ದಾಖಲೆ ಮಾಡಿತು. ಅದರ ನಾಯಕಿಯೂ ಸ್ತ್ರೀದ್ವೇಷ ಎಂದೆಲ್ಲ ಏನೂ ಇಲ್ಲ, ಅಂತಹ ಪದಬಳಕೆಯಲ್ಲೇ ತನಗೆ ನಂಬಿಕೆಯಿಲ್ಲ ಎಂಬ ಹೇಳಿಕೆಯನ್ನೂ ಕೊಟ್ಟರು. ಆದರೆ ಅಂತಹ ನಿರೂಪಣೆಗಳು ಇಲ್ಲೆಲ್ಲೋ ಬದುಕುವ ನಿಷ್ಪಾಪಿ ಹುಡುಗಿಯರ ಪ್ರಾಣಕ್ಕೆ ಸಂಚಕಾರವಾಗುತ್ತವೆ. ಲಾಭ ಮತ್ತು ಮನರಂಜನೆ ಮಾತ್ರ ತಾವು ಮಾಡುವ ಸಿನಿಮಾದ ಗುರಿ ಎನ್ನುವವರು ಇದನ್ನೆಲ್ಲ ಕಿವಿಯ ಬೀಳಿಗೂ ಹಾಕಿಕೊಳ್ಳುವುದಿಲ್ಲ.

ಕೆಲವೊಮ್ಮೆ ಆಶಯದಲ್ಲಿ ಒಳ್ಳೆಯ ಅಂಶ ಇರುವ ಸಿನಿಮಾಗಳೂ ಹೆಣ್ಣನ್ನು ಅಸೂಕ್ಷ್ಮವಾಗಿ ಚಿತ್ರಿಸುತ್ತವೆ. ‘ಮದ್ರಾಸ್’ ಎಂಬ ತಮಿಳು ಸಿನಿಮಾ, ರಾಜಕಾರಣದಲ್ಲಿ ಯಾರದೋ ಲಾಭಕ್ಕೆ ಯುವಕರು ಹೆಣವಾಗುವ ಕತೆಯನ್ನು ಹೇಳುತ್ತದೆ. ಆದರೆ ಅಲ್ಲಿಯೂ ಅತ್ಯಂತ ಒರಟಾಗಿ ವರ್ತಿಸುವ ಗಂಡನ್ನು ಹೆಣ್ಣು ಮೆಚ್ಚುತ್ತಾಳೆ ಎಂಬಂತೆ ತಪ್ಪಾಗಿ ಚಿತ್ರಿಸಲಾಗಿದೆ. ಹೀಗೆ ಚಿತ್ರಿಸಿ ಹುಡುಗಿಯರ ಸಂಕಟ ಹೆಚ್ಚು ಮಾಡಲಾಗುತ್ತಿದೆ. ಹುಡುಗರಿಗೆ ಪ್ರೀತಿಯ ಅಭಿವ್ಯಕ್ತಿ ಬಗೆಗೆ ತಪ್ಪು ದಾರಿ ತೋರಿಸಲಾಗುತ್ತಿದೆ. ಇನ್ನೊಂದೆಡೆ, ಹೆಣ್ಣು ಪ್ರೀತಿಯಿಂದ ಹೊರಗೆ ಬಂದರೆ ಅವಳನ್ನು ಕೊಚ್ಚಿಬಿಡಬೇಕು ಎಂದು ಅವನ ತಲೆಗೆ ತಪ್ಪಾಗಿ ತುಂಬಲಾಗುತ್ತದೆ. ಪ್ರೀತಿಯ ಮೂಲ ಸ್ನೇಹವೇ ವಿನಾ ದೌರ್ಜನ್ಯ ಅಲ್ಲವೇ ಅಲ್ಲ.

ಕೆಲವೇ ತಿಂಗಳುಗಳ ಹಿಂದೆ ಇದೇ ರೀತಿ ಪ್ರೇಮ ಸಂಬಂಧವನ್ನು ನಿರಾಕರಿಸಿದ್ದಕ್ಕಾಗಿ ಉಡುಪಿಯ ಯುವತಿ ಮಾತ್ರವಲ್ಲದೆ ಆಕೆಯ ಕುಟುಂಬದ ಇನ್ನೂ ಮೂವರನ್ನು ಅವಳ ಜೊತೆಗೇ ಕೊಂದು ಹಾಕಲಾಯಿತು. ಎಲ್ಲ ವಿಷಯಕ್ಕೂ ಧರ್ಮವನ್ನು ತಳುಕು ಹಾಕುವ ಇಂದಿನ ದಿನಮಾನದಲ್ಲಿ, ಆ ಪ್ರಕರಣದಲ್ಲಿ ಅಪರಾಧಿ ಹಿಂದೂವಾಗಿದ್ದ. ಸಂತ್ರಸ್ತ ಯುವತಿ ಮುಸ್ಲಿಮಳಾಗಿದ್ದಳು.

ಹೀಗಾಗಿ, ಇದು ದೊಡ್ಡ ಸದ್ದು ಮಾಡಲಿಲ್ಲ. ನಾಡಿಗೆ ಬೆಂಕಿ ಬೀಳಲಿಲ್ಲ. ಸೌಜನ್ಯಾ ಪ್ರಕರಣದಲ್ಲಿ ಧರ್ಮದ ಲೇಪ ಇಲ್ಲ. ಆ ಕಾರಣಕ್ಕೆ ಆ ಬಗ್ಗೆ ಕೆಲವರು ಮಾತೇ ಆಡುವುದಿಲ್ಲ. ಹಿಂದಿನ ತಿಂಗಳು ತುಮಕೂರಿನಲ್ಲಿ ರುಕ್ಸಾನ ಎಂಬಾಕೆ ಪ್ರದೀಪ್ ಎಂಬ, ತಾನು ಪ್ರೀತಿಸಿದ ವ್ಯಕ್ತಿಯಿಂದ ಅಮಾನುಷವಾಗಿ ಕೊಲೆಯಾದಳು. ಆ ಪ್ರಕರಣವು ಸುದ್ದಿಯೇ ಆಗಲಿಲ್ಲ. ವಾಸ್ತವದಲ್ಲಿ ಇಂತಹ ಪ್ರಕರಣಗಳೇ ಸಂಭವಿಸಬಾರದು. ಕಾನೂನು ಸುವ್ಯವಸ್ಥೆ ಅಷ್ಟು ಬಿಗಿಯಾಗಿ ಕೆಲಸ ಮಾಡಬೇಕು ಎನ್ನುವುದು ಎಷ್ಟು ನಿಜವೋ ಹೆಣ್ಣುಮಕ್ಕಳ ಮೇಲಿನ ಆಕ್ರಮಣ ಸಹಜ ಎಂಬಂತೆ ಇರುವ ಮನಃಸ್ಥಿತಿಯನ್ನು ನಾಶ ಮಾಡಬೇಕಿರುವುದೂ ಅಷ್ಟೇ ಮುಖ್ಯ.

ಇಂತಹ ಪ್ರಕರಣದಲ್ಲಿ ಅಪರಾಧಿಗಳ ಧರ್ಮದ ಆಧಾರದಲ್ಲಿ ಪ್ರಕರಣಗಳನ್ನು ಪರಿಗಣಿಸುವುದು, ಅಪರಾಧದ ಇನ್ನೊಂದು ರೂಪವಷ್ಟೇ ಆಗಿರುತ್ತದೆ. ಆರೋಪಿಯ ಹಿನ್ನೆಲೆ ತನಗೆ ಅನುಕೂಲಕರ ಅನ್ನಿಸಿದರೆ ಆ ಸಂಭ್ರಮ ಎಷ್ಟಿರುತ್ತದೆಂದರೆ, ಸಂತ್ರಸ್ತಳ ನೋವು ಟಿಆರ್‌ಪಿಯ ಹಿನ್ನೆಲೆ ಸಂಗೀತದಂತೆ ಇವರಿಗೆ ಕೇಳಿಸುತ್ತದೆ. ಬಕಪಕ್ಷಿಯ ಉನ್ಮಾದ, ರಣಹದ್ದಿನ ಕೇಕೆಗಳಿಗೆ ನ್ಯಾಯ ಅನ್ಯಾಯದ, ಸರಿ ತಪ್ಪಿನ ವಿವೇಚನೆಯೇ ಇರುವುದಿಲ್ಲ. ಕೆಲವರಿಗೆ ಇದು ವೋಟು ತಂದುಕೊಡುವ ಅಕ್ಷಯ ಪಾತ್ರೆಯಂತೆ ಕಂಡರೆ, ಇನ್ನು ಕೆಲವರಿಗೆ ಇದು ಎಲ್ಲಿ ವೋಟನ್ನು ಕಳೆದುಬಿಡುತ್ತದೋ ಎಂಬ ಆತಂಕ ಮಾತ್ರ ಆಗುತ್ತದೆ. ಕಳೆದುಕೊಂಡವರ ನೋವನ್ನೂ ಊಟದ ತಟ್ಟೆಯ ಅನ್ನ ಎಂಬಂತೆ ಗಪಗಪಿಸುವ ಇವರ ವರ್ತನೆಗಳನ್ನು ಅಳೆಯಲಾರದ ಮಂದಿಯ ಮೊದ್ದುತನ ವಿಷಾದಪರ್ವದ ಇನ್ನೊಂದು ಅಧ್ಯಾಯ. ಇಂತಹ ಪ್ರಕರಣಗಳನ್ನು ಸ್ಪಷ್ಟವಾಗಿ, ದಿಟ್ಟವಾಗಿ, ಖಚಿತವಾಗಿ ಒಕ್ಕೊರಲಿನಿಂದ ಧಿಕ್ಕರಿಸುವ ನಡೆಯೇ ಕಾಣಿಸದಿರುವುದು ಏನನ್ನು ಹೇಳುತ್ತಿದೆ?

ಒಂದು ಸಮಾಜವಾಗಿ ನಾವು ಹೇಗೆ ವ್ಯವಹರಿಸುತ್ತಿದ್ದೇವೆ? ನಮಗೆ ಬೇಕಾದಾಗ ಅಬ್ಬರಿಸಿ, ಬೇಡವಾದಾಗ ಮೌನಕ್ಕೆ ಶರಣಾಗುತ್ತೇವೆ. ವ್ಯಕ್ತಿಗತ ಸ್ಪಂದನೆ ಮತ್ತು ಜವಾಬ್ದಾರಿಗಳನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವೆಯೇ? ನಾವು ಹಾಗೆ ನಿರ್ವಹಿಸದೇ ಇದ್ದಲ್ಲಿ ಪರೋಕ್ಷವಾಗಿ ಕೆಲವು ಕೊಲೆ, ಅತ್ಯಾಚಾರಗಳನ್ನು ಬೆಂಬಲಿಸಿದಂತೆ ಆಗುವುದಿಲ್ಲವೇ? ಆ ಬಗ್ಗೆ ನಮ್ಮ ಆತ್ಮಸಾಕ್ಷಿ ಮಾತಾಡುವುದಿಲ್ಲವೇ? ನಮ್ಮ ಜಾತಿ, ಧರ್ಮ, ಪಕ್ಷ, ಪಂಥದ ಬಗೆಗಿನ ಪ್ರೀತಿಯು ಮನುಷ್ಯತ್ವವನ್ನೇ ಬಲಿ ಕೊಡುತ್ತಿದೆ. ಆದರೆ ಇದರ ಪರಿಣಾಮವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತಪ್ಪು ಯಾರು ಮಾಡಿದರೂ ತಪ್ಪೇ. ತಪ್ಪು ಸರಿಯ ವಿವೇಚನೆಯೊಂದೇ ಅಂತಿಮ ಮಾನದಂಡವಾಗಬೇಕು. ನೇಹಾ ಪ್ರಕರಣದಲ್ಲಿ ತಪ್ಪಿತಸ್ಥನ ಬಂಧನ ಆಗಿದೆ. ಆದರೆ ಇದಿಷ್ಟೇ ಸಾಲದು. ತಕ್ಷಣವೇ ಆತನಿಗೆ ಯಾವ ಕಠಿಣ ಶಿಕ್ಷೆ ಆಗಬೇಕೋ ಅದು ಆಗಬೇಕು. ಇದರಲ್ಲಿ ವಿಳಂಬವಾದರೆ ಅದಕ್ಕೆ ಯಾವ ಸಮರ್ಥನೆಯೂ ಇರುವುದಿಲ್ಲ.

ಕೊಲೆಗೆ ಕಾರಣಗಳನ್ನು ಹುಡುಕುವುದು ಅರ್ಥಹೀನ. ಯಾವ ಕಾರಣವೂ ಕೊಲೆಗೆ ಸಮರ್ಥನೆಯಾಗುವುದಿಲ್ಲ. ಹಿಂದಿನ ಹತ್ತಾರು ವರ್ಷಗಳಿಂದ ದೇಶದಾದ್ಯಂತ ನಡೆದ ಅತ್ಯಾಚಾರ ಮತ್ತು ಕೊಲೆಯ ಪ್ರಕರಣಗಳಲ್ಲಿ ಅಪರಾಧಿ ಮತ್ತು ಸಂತ್ರಸ್ತರ ಹಿನ್ನೆಲೆಯು ಹೆಚ್ಚು ಸದ್ದು ಮಾಡಿರುವುದು ಕಂಡುಬರುತ್ತಿದೆ. ನಿರ್ಭಯಾ ಪ್ರಕರಣದಲ್ಲಿ ದೇಶದಾದ್ಯಂತ ಕಾಣಿಸಿದ ಆಕ್ರೋಶ ಮತ್ತು ಪ್ರತಿಭಟನೆ ಆನಂತರದಲ್ಲಿ ಸಂಘಟಿತವಾಗಿ ಕಾಣಿಸುತ್ತಿಲ್ಲ. ಇದೆಲ್ಲಾ ಚಿಂತಾಜನಕ ಸಂಗತಿ.

ಹೆಣ್ಣಿನ ಬಗೆಗಿರುವ ತುಚ್ಛ ಭಾವನೆ, ಅವಳು ತನ್ನ ಸೊತ್ತು ಎಂಬ ಮೂರ್ಖ ಚಿಂತನೆ, ಅವಳು ಗಂಡಿನ ಭೋಗಕ್ಕಾಗಿ, ಸೇವೆಗಾಗಿ ಹುಟ್ಟಿದವಳು ಎಂಬ ಅನೀತಿ, ಗಂಡನ್ನು ಹೆಣ್ಣು ಉಡುಗೆ ತೊಡುಗೆ ವರ್ತನೆಗಳಿಂದ ಪ್ರಚೋದಿಸಿದಾಗ ಅವನಿಗೆ ನಿಯಂತ್ರಣ ಇರುವುದಿಲ್ಲ ಎಂಬೆಲ್ಲಾ ರಿಯಾಯಿತಿಯ ಮಾತುಗಳಿಂದ ಅಪರಾಧಿಗಳನ್ನು ರಕ್ಷಿಸುವ ಕುತಂತ್ರ ಇವೆಲ್ಲವೂ ಶಿಕ್ಷಾರ್ಹ ಸಂಗತಿಗಳೇ. ಮೊದಲು ಇವನ್ನು ಅಳಿಸಿಹಾಕಬೇಕಿದೆ.

ಹೆಣ್ಣು ಸಮಾನ ಮೌಲ್ಯವುಳ್ಳವಳು ಎಂಬುದನ್ನು ಬಾಲ್ಯದಿಂದಲೇ ಅರೆದು ಕುಡಿಸಬೇಕಾಗಿದೆ. ಕೆಲಸವಿಲ್ಲದ ಬೇಜಾವಾಬ್ದಾರಿ ಹುಡುಗರು ಕುಡಿತ, ಗಾಂಜಾ, ರಮ್ಮಿ, ಸೆಕ್ಸ್ ವಿಡಿಯೊಗಳ ದಾಸರಾಗಿ ಪರಿವೆ ಇಲ್ಲದೆ ಬೀಡುಬಿಟ್ಟಿರುವುದಕ್ಕೂ ನಮ್ಮ ಆಡಳಿತ ನೀತಿಗೂ ಸಂಬಂಧ ಇಲ್ಲವೇ? ಅಪರಾಧಿಗಳು ಬದಲಾಗದೆ ಅಪರಾಧ ಬದಲಾಗುವುದೇ? ಇಂತಹ ದುರಂತಗಳು ಮತ್ತೆ ಘಟಿಸದಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.