ಸಾರ್ವಜನಿಕ ಆಡಳಿತ ಮತ್ತು ಕಾನೂನಿನ ಆಡಳಿತದಲ್ಲಿ ಧರ್ಮವನ್ನು ಹೇರಲಾಗದು. ನ್ಯಾಯದಾನ ಪ್ರಕ್ರಿಯೆಯಲ್ಲಿ ಧರ್ಮ ಗ್ರಂಥಗಳು, ಪುರಾಣಗಳು ಸಂಪೂರ್ಣವಾಗಿ ಅಪ್ರಸ್ತುತ.

ಸಿರಿಗೆರೆ ಮಠದ ಅಧೀನದ ಎಲ್ಲ ಶಿಕ್ಷಣ ಸಂಸ್ಥೆಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಶಿಕ್ಷಕರಿಗಾಗಿ ಆಯೋಜಿಸಿದ್ದ ಬೃಹತ್ ಕಾರ್ಯಾಗಾರ ಒಂದರಲ್ಲಿ ನಾನು ಸಂವಿಧಾನದ ಕುರಿತು ವ್ಯಾಖ್ಯಾನ ಮಾಡುತ್ತಿದ್ದೆ. ಸಿರಿಗೆರೆಯ ಸ್ವಾಮೀಜಿಯವರೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ‘ಜಾತ್ಯತೀತತೆ ಸಂವಿಧಾನದ ಮೂಲಭೂತ ತತ್ವ. ಇದಕ್ಕೆ ಗೌರವ ನೀಡಿ ನಡೆದುಕೊಳ್ಳಬೇಕು’ ಎಂದು ಹೇಳಿದೆ. ‘ಜಾತ್ಯತೀತತೆ ಎಂದರೇನು? ವ್ಯಾಖ್ಯಾನಿಸಿ’ ಎಂದು ಒಬ್ಬರು ಪ್ರಶ್ನಿಸಿದರು. ‘ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಚರ್ಚ್ಗಳನ್ನು ರಾಜ್ಯಾಡಳಿತದಿಂದ ದೂರ ಇಡುವ (ಸಪ್ರೆಷನ್ ಆಫ್ ಚರ್ಚ್) ತತ್ವ ಪಾಲನೆಗೆ ಬಂತು. ಅದೇ ಮಾದರಿಯಲ್ಲಿ ಭಾರತದಲ್ಲಿ ಧರ್ಮವನ್ನು ರಾಜ್ಯಾಡಳಿತದಿಂದ ದೂರ ಇಡುವುದೇ ಜಾತ್ಯತೀತತೆ’ ಎಂದೆ. ಆ ಕಾಲದಲ್ಲಿ ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ವ್ಯಕ್ತಿಯೊಬ್ಬರು ನಾಲ್ಕು ಇಂಚು ಉದ್ದದ ನಾಮ ಹಾಕಿಕೊಳ್ಳುತ್ತಿದ್ದರು. ಸಭೆಯಲ್ಲಿದ್ದ ಪ್ರಾಧ್ಯಾಪಕರೊಬ್ಬರು, ಆಗಿನ ಮುಖ್ಯ ಚುನಾವಣಾ ಆಯುಕ್ತರು ಮಾಡುವುದು ಸರಿಯೆ? ಎಂದು ಪ್ರಶ್ನಿಸಿದರು. ಸ್ವಾಮೀಜಿಯವರು ಅದನ್ನು ಸಮರ್ಥಿಸುವಂತೆ ಮಾತನಾಡಿದರು. ನಾನು, ‘ಸಂವಿಧಾನದ ಹಿನ್ನೆಲೆಯಲ್ಲಿ ಈ ಬೆಳವಣಿಗೆಯನ್ನು ನೋಡುವುದು ಮುಖ್ಯ. ಮುಖ್ಯ ಚುನಾವಣಾ ಆಯುಕ್ತರ ಹುದ್ದೆಯಲ್ಲಿರುವ ವ್ಯಕ್ತಿಯನ್ನು ಅಲ್ಲಿಂದ ಎಬ್ಬಿಸಿಬಿಡಿ. ಆ ಕುರ್ಚಿಗೆ ಉದ್ದನೆಯ ನಾಮ ಹಾಕಿ ನೋಡಿ ಅಥವಾ ಯಾವುದಾದರೂ ಧರ್ಮಸೂಚಕ ಟೊಪ್ಪಿಯನ್ನು ಹಾಕಿ ನೋಡಿ ಅಥವಾ ಜುಟ್ಟು, ಜನಿವಾರ, ಶಿವದಾರ ಈ ಯಾವುದನ್ನಾದರೂ ತೊಡಿಸಿ ನೋಡಿ. ಅದು ಸರಿ ಕಾಣುತ್ತಾ? ಸರಿ ಕಾಣುವುದಿಲ್ಲ ಎಂದಾದರೆ ಸಾರ್ವಜನಿಕ ಕ್ಷೇತ್ರದಲ್ಲಿ, ರಾಜ್ಯಾಡಳಿತದಲ್ಲಿ ಕೆಲಸ ಮಾಡುವವರು ತಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಹಾಗೂ ಧರ್ಮ ಮತ್ತು ಜಾತಿ ಸೂಚಕ ಸಂಕೇತಗಳನ್ನು ಮುನ್ನೆಲೆಗೆ ತರಬಾರದು’ ಎಂದು ಹೇಳಿದೆ.

ಈಗ ಜಾರ್ಖಂಡ್ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಮನುಸ್ಮೃತಿಯನ್ನು ಉಲ್ಲೇಖಿಸಿ, ‘ಮಹಿಳೆಯು ತನ್ನ ಗಂಡನ ಕುಟುಂಬದ ಹಿರಿಯರನ್ನು ಆರೈಕೆ ಮಾಡುವುದು ಆಕೆಯ ಜವಾಬ್ದಾರಿ’ ಎಂಬ ಆದೇಶ ನೀಡಿರುವ ಪ್ರಕರಣಕ್ಕೂ ನನ್ನ ಮೇಲಿನ ಮಾತುಗಳು ಅನ್ವಯವಾಗುತ್ತವೆ.

ಭಾರತದ ಸಂವಿಧಾನದ 14, 15 ಮತ್ತು 16ನೇ ವಿಧಿಗಳಲ್ಲಿ ಲಿಂಗ ಆಧಾರಿತ ತಾರತಮ್ಯ ಸಲ್ಲದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಗಂಡಿಗೂ ಮತ್ತು ಹೆಣ್ಣಿಗೂ ಯಾವುದೇ ರೀತಿಯ ತಾರತಮ್ಯ ಇರಕೂಡದು ಎಂಬುದು ಸಂವಿಧಾನದ ಮೂಲ ತತ್ವಗಳಲ್ಲಿ ಒಂದಾಗಿದೆ. ಮಹಿಳೆಯು ತನ್ನ ಗಂಡನ ಮನೆಯವರನ್ನು ನೋಡಿಕೊಳ್ಳಬೇಕು ಎಂಬ ಅಂಶ ಸಂವಿಧಾನದ ಯಾವ ಭಾಗದಲ್ಲೂ ಇಲ್ಲ. ಗಂಡನ ಕುಟುಂಬದ ಹಿರಿಯರನ್ನು ನೋಡಿಕೊಳ್ಳಬೇಕು ಎಂಬ ಸದ್ಭಾವನೆ ಹೆಣ್ಣು ಮಕ್ಕಳಲ್ಲಿ ಇದ್ದೇ ಇರುತ್ತದೆ. ಬಹುತೇಕರು ಆ ಕೆಲಸವನ್ನು ಮಾಡುತ್ತಾರೆ. ಆದರೆ, ಅದನ್ನು ಒಂದು ಕರ್ತವ್ಯ ಎಂದು ನ್ಯಾಯಾಲಯ ಹೇಳಿರುವುದು ಗಂಭೀರವಾದ ಲೋಪ. ಸಂವಿಧಾನಕ್ಕೆ ಮಾಡಿದ ಅಪಚಾರ. ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಮಹಿಳೆಯರನ್ನು ಅವಮಾನಿಸುವಂತಹ, ಅವರ ದೌರ್ಜನ್ಯಕ್ಕೆ ಕಾರಣವಾಗುವಂತಹ ಪದ್ಧತಿಗಳನ್ನು ಸಂವಿಧಾನವೇ ರದ್ದುಗೊಳಿಸಿದೆ. ಸಂವಿಧಾನದ ವಿಧಿ 51–ಎ ಮೂಲಕ ಅಂತಹ ಆಚರಣೆಗಳನ್ನ ನಿಷೇಧಿಸಲಾಗಿದೆ. ಅದನ್ನು ನ್ಯಾಯಮೂರ್ತಿಗಳು ನೋಡಬೇಕಿತ್ತು. ಅವರು ನೋಡಿದ್ದರೆ ಈ ರೀತಿಯ ಆದೇಶವನ್ನು ಬರೆಯುತ್ತಿರಲಿಲ್ಲ.

ಎಲ್ಲಕಿಂತಲೂ ಮುಖ್ಯವಾಗಿ ಮಹಿಳೆ ಖಾಸಗಿತನದ ಹಕ್ಕನ್ನು ಹೊಂದಿದ್ದಾಳೆ. ಮಹಿಳೆಯ ಮೇಲೆ ಪತಿ ಬಲವಂತ ಮಾಡುವುದನ್ನೂ ಅತ್ಯಾಚಾರ ಎಂದು ಪರಿಗಣಿಸುವ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿದೆ. ಜೀವಿಸುವ ಹಕ್ಕು ನಮ್ಮ ಸಂವಿಧಾನದ ಭಾಗವಾಗಿದೆ. ಮಹಿಳೆಯೊಬ್ಬರು ಪುರುಷನೊಬ್ಬನನ್ನು ಮದುವೆಯಾದ ಮಾತ್ರಕ್ಕೆ ಆಕೆಯು ಆತನ ಕುಟುಂಬವನ್ನೇ ವಿವಾಹವಾಗಿದ್ದಾಳೆ ಎಂದು ಭಾವಿಸಲಾಗದು. ಆ ದೃಷ್ಟಿಕೋನದಲ್ಲಿ ನೋಡುವುದೇ ತಪ್ಪು. ಸಂವಿಧಾನದ 21ನೇ ವಿಧಿಯು ಗೌರವಯುತ ಜೀವನ ನಡೆಸುವ ಹಕ್ಕನ್ನು ನೀಡಿದೆ. ಮಹಿಳೆಯು ಗಂಡ ಮತ್ತು ಆತನ ಕುಟುಂಬದವರ ಗುಲಾಮಳಂತೆ ಬದುಕಬೇಕು ಎಂದು ನಮ್ಮ ಸಂವಿಧಾನ ಹೇಳುವುದಿಲ್ಲ. ಸಂವಿಧಾನವು ಮಹಿಳೆಗೆ ಪುರುಷನಷ್ಟೇ ಸ್ವಾಯತ್ತೆ ನೀಡಿದೆ. ದೈಹಿಕ, ಸಾಮಾಜಿಕ, ಆರ್ಥಿಕ ಸ್ವಾಯತ್ತೆಯನ್ನು ಮಹಿಳೆಯರು ಹೊಂದಿದ್ದಾರೆ. ಇದೆಲ್ಲವನ್ನೂ ಗಾಳಿಗೆ ತೂರಿ ಜಾರ್ಖಂಡ್ ಹೈಕೋರ್ಟ್ನ ನ್ಯಾಯಮೂರ್ತಿ ಆದೇಶ ಹೊರಡಿಸಿದ್ದಾರೆ. ಸಂವಿಧಾನ ಮತ್ತು ಕಾನೂನುಗಳನ್ನು ನಿರ್ಲಕ್ಷಿಸಿ ಹೊರಡಿಸಿರುವ ಆದೇಶ (Per-Incuriam) ಎಂದು ಇದನ್ನು ಕಾನೂನಿನ ಪರಿಭಾಷೆಯಲ್ಲಿ ವ್ಯಾಖ್ಯಾನಿಸಬಹುದು. ಇಂತಹ ಆದೇಶಗಳು ಕಾನೂನಿನ ಅಡಿಯಲ್ಲಿ ಸಿಂಧುತ್ವವನ್ನು ಹೊಂದಿರುವುದಿಲ್ಲ.

ನಮ್ಮ ದೇಶವು ಮನುಸ್ಮೃತಿಯನ್ನು ದಾಟಿಕೊಂಡು ಬಹಳ ದೂರ ಬಂದಿದೆ. ಮನುಸ್ಮೃತಿಯಲ್ಲಿರುವ ಪ್ರತಿಯೊಂದು ಕಟ್ಟಳೆಯನ್ನೂ ಸಂವಿಧಾನವು ತುಂಡು ತುಂಡು ಮಾಡಿ ಬಿಸಾಡಿದೆ. 1927ರ ಡಿಸೆಂಬರ್ 25ರಂದು ಡಾ.ಬಿ.ಆರ್. ಅಂಬೇಡ್ಕರ್ ಅವರು ಎರಡನೇ ಮಹಾಡ್ ಸತ್ಯಾಗ್ರಹದಲ್ಲಿ ಮನುಸ್ಮೃತಿಯಲ್ಲಿರುವ ತಾರತಮ್ಯದ ವಿಷಯಗಳನ್ನು ಓದಿ, ಆ ಕೃತಿಯನ್ನು ಸುಟ್ಟು ಹಾಕಿದ್ದರು. ಹಿಂದೂ ಸಮಾಜವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸುವುದಕ್ಕಾಗಿ ಅಂಬೇಡ್ಕರ್ ಅವರು ಆ ಕೆಲಸವನ್ನು ಮಾಡಿದ್ದರು. ಗುಲಾಮಗಿರಿ ಮತ್ತು ಧರ್ಮ ಒಟ್ಟಾಗಿ ಸಾಗಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಮನುಸ್ಮೃತಿಯು ಗುಲಾಮಗಿರಿಯನ್ನು ಹೇರುವ ದಾಖಲೆ. ಮಹಿಳೆಯರು, ಶೂದ್ರರು ಮತ್ತು ದಲಿತರು ಗುಲಾಮರಂತೆ ಬದುಕಬೇಕು ಎಂಬುದೇ ಮನುಸ್ಮೃತಿಯ ಪ್ರಮುಖ ಪ್ರತಿಪಾದನೆ. ಹಿಂದೂ ಧರ್ಮದಲ್ಲಿ ಸುಧಾರಣೆ ತರುವುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಫ್ರೆಂಚ್ ಕ್ರಾಂತಿಯಿಂದ ಪ್ರಭಾವಿತರಾಗಿದ್ದ ಅವರು, ಮನುಸ್ಮೃತಿಯನ್ನು ಸುಟ್ಟು ಹಾಕಿದ ದಿನವೇ ಜೀವಿಸುವ ಹಕ್ಕು, ಸಮಾನತೆಯ ಹಕ್ಕು ಸೇರಿದಂತೆ ಆರು ಘೋಷಣೆಗಳನ್ನೂ ಮಾಡಿದ್ದರು. ಅದನ್ನೇ ವಿಸ್ತೃತವಾಗಿ ಚರ್ಚಿಸಿ ಸಂವಿಧಾನದಲ್ಲಿ ಸೇರಿಸಲಾಯಿತು.

ಮನುಸ್ಮೃತಿಯ ಒಂಬತ್ತನೇ ಅಧ್ಯಾಯದಲ್ಲಿ, ‘ಅಪ್ರಾಮಾಣಿಕತೆ ಮತ್ತು ಕಾಮ ಹೆಣ್ಣಿನ ಸಹಜ ಗುಣ. ಪತಿದ್ರೋಹ, ದುರ್ನಡತೆ ಹೆಣ್ಣಿನ ಸ್ವಾಭಾವಿಕ ಗುಣ. ಸ್ತ್ರೀಯರು ವೇದ ಅಧ್ಯಯನ ಮಾಡದ ಕಾರಣ ಸದಾ ಅಶುದ್ಧರು. ಹೆಂಡತಿಗೆ ಮಕ್ಕಳಾಗದಿದ್ದರೆ ಗಂಡನು ಎಂಟನೇ ವರ್ಷದಲ್ಲಿ ಮರು ಮದುವೆ ಆಗಬಹುದು. ಹತ್ತನೇ ವರ್ಷದಲ್ಲಿ ಮತ್ತೊಂದು ಮದುವೆ ಆಗಬಹುದು. ಹೆಂಡತಿಯು ಹೆಣ್ಣು ಮಕ್ಕಳಿಗಷ್ಟೇ ಜನ್ಮ ನೀಡುತ್ತಿದ್ದರೆ ಗಂಡ ಬೇರೊಂದು ಮದುವೆ ಆಗಬಹುದು’ ಎಂಬ ಮಹಿಳೆಯರ ಘನತೆಗೆ ಧಕ್ಕೆ ತರುವ ಅಂಶಗಳಿವೆ. ಮಹಿಳೆಯರನ್ನು ಕೀಳಾಗಿ ನೋಡುವ, ಗುಲಾಮರಂತೆ ಪರಿಗಣಿಸುವ ಅನೇಕ ಸಂಗತಿಗಳು ಮನುಸ್ಮೃತಿಯಲ್ಲಿ ಇವೆ. ಮನುಸ್ಮೃತಿಯನ್ನು ಯಾವ ಹೆಣ್ಣು ಮಗಳೂ ಗೌರವಿಸಲು ಸಾಧ್ಯವಿಲ್ಲ. ಮಹಿಳೆಯರು ಮನುಸ್ಮೃತಿಯನ್ನು ಪಾಲಿಸಬೇಕು ಎಂದು ನ್ಯಾಯಮೂರ್ತಿಯೊಬ್ಬರು ಹೇಳುವುದು ಆಶ್ಚರ್ಯಕರ ಸಂಗತಿ. ಇದು ಮಹಿಳೆಯರ ಘನತೆಗೆ ಧಕ್ಕೆ ತರುವಂತಹ ವಿಚಾರ.

ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆ– 2007 ಜಾರಿಯಲ್ಲಿದೆ. ಇದು ಸಂಸತ್ತು ರೂಪಿಸಿದ ಕಾಯ್ದೆ. ಈ ಕಾಯ್ದೆಯ ಅಡಿಯಲ್ಲಿ ಪೋಷಕರನ್ನು ಸಾಕುವ ಕರ್ತವ್ಯ ಮಗನಿಗೆ ಇದೆ. ಸೊಸೆಯ ಮೇಲಿಲ್ಲ. ಆಸ್ತಿಯ ಒಡೆತನದ ಕಾರಣಕ್ಕಾಗಿ ಮೊಮ್ಮಗನಿಗೂ ಕರ್ತವ್ಯ ಇರುತ್ತದೆ. ಆಸ್ತಿ ವರ್ಗಾವಣೆಯಾದ ಸಂದರ್ಭದಲ್ಲಷ್ಟೇ ಸೊಸೆಗೆ ಕರ್ತವ್ಯ ಇರುತ್ತದೆ. ನ್ಯಾಯಮೂರ್ತಿಯವರು ಈ ಕಾಯ್ದೆಯನ್ನು ಪರಿಗಣಿಸದೇ ಆದೇಶ ನೀಡಿದ್ದಾರೆ. ಕಾನೂನಿನ ಅಂಶಗಳನ್ನು ಪಕ್ಕಕ್ಕಿಟ್ಟು ಮನುಸ್ಮೃತಿ ಆಧರಿಸಿ ತೀರ್ಪು ಕೊಡುವುದು ಮಿದುಳು ಪಳೆಯುಳಿಕೆಯಾಗುವುದರ ಉದಾಹರಣೆ. ಸಂವಿಧಾನವನ್ನೇ ಓದದಿರುವುದರ ಸಂಕೇತ.

ನಮ್ಮ ಸಂವಿಧಾನವು ಜಾತ್ಯತೀತ ತತ್ವದ ಮೇಲೆ ನಿಂತಿದೆ. ಅದರ ಜತೆಯಲ್ಲೇ ಧಾರ್ಮಿಕ ಸ್ವಾತಂತ್ರ್ಯವನ್ನೂ ನೀಡಿದೆ. ಆದರೆ, ಈ ಸ್ವಾತಂತ್ರ್ಯವು ನಿರ್ಬಂಧರಹಿತವಾದುದಲ್ಲ. ಸುಧಾರಣೆ, ಸಾರ್ವಜನಿಕ ಸ್ವಾಸ್ಥ್ಯ, ಸಾರ್ವಜನಿಕ ಸುರಕ್ಷತೆಗೆ ಅಪಾಯಕಾರಿಯಾಗದಂತೆ ಬಳಸಬೇಕಾದ ಸ್ವಾತಂತ್ರ್ಯವಿದು. ಧಾರ್ಮಿಕ ಸ್ವಾತಂತ್ರ್ಯವು ವ್ಯಕ್ತಿಗತವಾದುದು. ನಮ್ಮ ಧಾರ್ಮಿಕ ಸ್ವಾತಂತ್ರ್ಯವು ಬೇರೆಯವರಿಗೆ ತೊಂದರೆ ಮಾಡುವಂತಿಲ್ಲ. ಕುಟುಂಬ ಮತ್ತು ಮನೆಯೊಳಕ್ಕೆ ಸೀಮಿತವಾಗಿ ಅನುಭವಿಸಬಹುದಾದ ಸ್ವಾತಂತ್ರ್ಯವಿದು. ರಾಜ್ಯಾಡಳಿತದ ಭಾಗವಾಗಿ ಇದ್ದುಕೊಂಡು ಸರ್ಕಾರಿ ಕುರ್ಚಿಯ ಮೇಲೆ ಕುಳಿತು ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸಲಾಗದು. ನಮ್ಮ ದೇಶದಲ್ಲಿ ಪುರೋಹಿತಶಾಹಿ ಆಡಳಿತ ವ್ಯವಸ್ಥೆ ಇಲ್ಲ. ಭಾರತ ಹಿಂದೂ ರಾಷ್ಟ್ರವೂ ಅಲ್ಲ. ಹಿಂದೂ ಧಾರ್ಮಿಕ ಗ್ರಂಥಗಳನ್ನು ಬರೆದಿರುವುದು ಪುರಾಣ ಕಾಲದಲ್ಲಿ. ಆಗ ಗಂಡು ಮತ್ತು ಹೆಣ್ಣು ಸಮಾನರು ಎಂಬ ಪರಿಕಲ್ಪನೆಯೇ ಇರಲಿಲ್ಲ. ಹೆಣ್ಣಿಗೆ ಸ್ವಾತಂತ್ರ್ಯ ಇರಕೂಡದು ಎಂದು ಆ ಕಾಲದಲ್ಲಿ ಹೇಳಿದ್ದರು. ಈಗ ಆ ಮಾತನ್ನು ಹೇಳುವ ಗ್ರಂಥಗಳನ್ನು ಸುಟ್ಟು ಹಾಕಬೇಕು ಎಂಬ ಕೂಗು ಬಲವಾಗಿದೆ. ಪುರಾಣ ಗ್ರಂಥಗಳನ್ನು ಕಟ್ಟಳೆಯಾಗಿ, ಕಾನೂನಾಗಿ ಪರಿಗಣಿಸಲು, ನ್ಯಾಯದಾನ ಪ್ರಕ್ರಿಯೆಯಲ್ಲಿ ಆಧಾರವಾಗಿ ಬಳಸಲು ಅವಕಾಶವಿಲ್ಲ. ಪುರಾಣ ಗ್ರಂಥಗಳನ್ನು ಬೇಕಿದ್ದರೆ ಮಕ್ಕಳಿಗೆ ಕತೆ ಹೇಳಲು ಬಳಸಬಹುದು. ಹಿಂದೂ, ಮುಸ್ಲಿಂ, ಕ್ರೈಸ್ತ, ಪಾರ್ಸಿ ಸೇರಿದಂತೆ ಆಯಾ ಧರ್ಮದ ಕಟ್ಟುಪಾಡುಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಮಾತ್ರ ಧರ್ಮ ಗ್ರಂಥಗಳನ್ನು ಆಧಾರವಾಗಿ ಪರಿಗಣಿಸಬಹುದು. ಸಾರ್ವಜನಿಕ ಆಡಳಿತ ಮತ್ತು ಕಾನೂನಿನ ಆಡಳಿತದಲ್ಲಿ ಧರ್ಮವನ್ನು ಹೇರಲಾಗದು. ನ್ಯಾಯದಾನ ಪ್ರಕ್ರಿಯೆಯಲ್ಲಿ ಧರ್ಮ ಗ್ರಂಥಗಳು, ಪುರಾಣಗಳು ಸಂಪೂರ್ಣವಾಗಿ ಅಪ್ರಸ್ತುತ. ಅಂತಹ ಪುರಾಣಗಳಿಗೆ ಯಾವುದೇ ರೀತಿಯ ಸಾಂವಿಧಾನಿಕ ಮಾನ್ಯತೆಯೂ ಇಲ್ಲ.

ಲೇಖಕ: ಹಿರಿಯ ವಕೀಲ

ನಿರೂಪಣೆ– ವಿ.ಎಸ್. ಸುಬ್ರಹ್ಮಣ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.