ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಿಡಿಸಿದ ಪಟಾಕಿ, ಕಟ್ಟಡ ನಿರ್ಮಾಣ ಚಟುವಟಿಕೆಯಿಂದ ಸೃಷ್ಟಿಯಾದ ದೂಳು, ನೆರೆ ರಾಜ್ಯಗಳಲ್ಲಿ ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಗುವ ಹೊಗೆಯ ಪರಿಣಾಮದಿಂದ ರಾಷ್ಟ್ರ ರಾಜಧಾನಿ ದೆಹಲಿಯ ವಾಯು ಗುಣಮಟ್ಟ ಅಪಾಯಕಾರಿ ಹಂತ ತಲುಪಿದೆ. ಗಾಳಿಯ ಗುಣಮಟ್ಟವುದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ಆರೋಗ್ಯ ತುರ್ತುಸ್ಥಿತಿ ಘೋಷಿಸಲಾಗಿದೆ. ವಾಯುಮಾಲಿನ್ಯದ ಕಾರಣ ತ್ವಚೆಯ ಅಲರ್ಜಿ, ಉಸಿರಾಟದ ಸಮಸ್ಯೆ, ಕಣ್ಣಿನ ಉರಿ ಮತ್ತು ಹೃದಯ ಸಂಬಂಧಿ ತೊಂದರೆಗಳಿಂದ ಆಸ್ಪತ್ರೆಗೆ ಬರುವವರ ಪ್ರಮಾಣದಲ್ಲಿ ಕೆಲವು ದಿನಗಳಿಂದ ತೀವ್ರ ಏರಿಕೆ ಆಗಿದೆ. ಅದರಲ್ಲೂ ಮಕ್ಕಳು ಮತ್ತು ವೃದ್ಧರನ್ನು ಈ ಸಮಸ್ಯೆಗಳು ಹೆಚ್ಚಿಗೆ ಕಾಡತೊಡಗಿರುವುದು ಆತಂಕಕಾರಿ. ದೆಹಲಿಯಲ್ಲಿ ಶಾಲೆಗಳಿಗೆ ಈ ತಿಂಗಳ 5ರವರೆಗೆ ರಜೆ ಘೋಷಿಸಲಾಗಿದೆ.

ದೆಹಲಿ ಮತ್ತು ಅದರ ಸುತ್ತಮುತ್ತಲಿನ ಗಾಜಿಯಾಬಾದ್, ಫರೀದಾಬಾದ್, ನೊಯಿಡಾ ಮತ್ತು ಗುರುಗ್ರಾಮ ಪ್ರದೇಶದ ಗಾಳಿಯು ಉಸಿರಾಟಕ್ಕೆ ಯೋಗ್ಯವಲ್ಲದ ಸ್ಥಿತಿ ಮುಟ್ಟಿದೆ. ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರವು ಹಲವು ತುರ್ತು ಕ್ರಮಗಳನ್ನು ಪ್ರಕಟಿಸಿದೆ. ದೆಹಲಿ ಸರ್ಕಾರವುಶಾಲಾ ಮಕ್ಕಳಿಗೆ 50 ಲಕ್ಷದಷ್ಟು ಮುಖಗವಸು ವಿತರಿಸುವ ಮೂಲಕ ಸಮಸ್ಯೆಗೆ ತಕ್ಷಣ ಸ್ಪಂದಿಸಿದೆಯಾದರೂ ಇವೆಲ್ಲಾ ತಾತ್ಕಾಲಿಕ ಉಪಶಮನದ ಪರಿಹಾರಗಳು ಮಾತ್ರ.

ಪ್ರತಿ ಘನಮೀಟರ್ ಗಾಳಿಯಲ್ಲಿರುವ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆಯನ್ನು ಆಧರಿಸಿ ಗಾಳಿಯ ಗುಣಮಟ್ಟವನ್ನು ಆರು ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಈ ಕಣಗಳ ಸಂಖ್ಯೆ ಕಡಿಮೆ ಆದಷ್ಟೂ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ. ಪ್ರತಿ ಘನಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ (ಪಿ.ಎಂ) ಸಂಖ್ಯೆ 50ರಷ್ಟಿದ್ದರೆ, ಗಾಳಿಯ ಗುಣಮಟ್ಟ ಉತ್ತಮ ಎಂದು ಕರೆಯಬಹುದು. ಈ ಕಣಗಳ ಸಂಖ್ಯೆ 401ರಿಂದ 500ರವರೆಗೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ. ದೆಹಲಿಯ ಗಾಳಿಯಲ್ಲಿ ಪಿ.ಎಂ. ಕಣಗಳ ಸಂಖ್ಯೆ ಈಗ 500 ದಾಟಿದೆ. ಅಲ್ಲಿನ ಗಾಳಿಯ ಗುಣಮಟ್ಟ ಅಸಹನೀಯ ಹಂತ ತಲುಪಿರುವುದನ್ನು ಇದು ಸ್ಪಷ್ಟಪಡಿಸುತ್ತದೆ. ‘ದೆಹಲಿಯು ಗ್ಯಾಸ್ ಚೇಂಬರ್ ಆಗಿದೆ.

ಕೃಷಿ ತ್ಯಾಜ್ಯ ಸುಡುವುದನ್ನು ಪಂಜಾಬ್ ಮತ್ತು ಹರಿಯಾಣ ಸರ್ಕಾರ ನಿಯಂತ್ರಿಸಬೇಕು’ ಎಂದು ಹೇಳುವ ಮೂಲಕ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ವಾಯುಮಾಲಿನ್ಯಕ್ಕೆ ನೆರೆ ರಾಜ್ಯಗಳನ್ನು ಹೊಣೆಯಾಗಿಸಿದ್ದಾರೆ. ಅವರ ಮಾತಿನಲ್ಲಿ ಸತ್ಯಾಂಶ ಇಲ್ಲದೇ ಇಲ್ಲ. ಆದರೆ, ಪರಸ್ಪರ ದೋಷಾರೋಪಕ್ಕಿಂತ ಈ ಗಂಭೀರ ಪರಿಸ್ಥಿತಿಯನ್ನು ವಿವೇಚನೆಯಿಂದ ನಿರ್ವಹಿಸಬೇಕಾಗಿರುವುದು ಸದ್ಯದ ಅನಿವಾರ್ಯ. ದೇಶದ ರಾಜಧಾನಿಯಲ್ಲಿ ಕಳೆದ ವರ್ಷ ಕೂಡ ಇಂತಹುದೇ ಸ್ಥಿತಿ ಉಂಟಾಗಿತ್ತು. ಆ ಬಳಿಕ, ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸರಿ– ಬೆಸ ನೋಂದಣಿ ಸಂಖ್ಯೆಯ ವಾಹನಗಳಿಗೆ ದಿನ ಬಿಟ್ಟು ದಿನ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಈ ಪ್ರಯೋಗದಿಂದ ವಾಯುಮಾಲಿನ್ಯ ಸ್ವಲ್ಪಮಟ್ಟಿಗೆ ತಗ್ಗಿತ್ತು. ಆದರೆ, ವಾಹನ ನಿರ್ಬಂಧವೊಂದರಿಂದಲೇ ಮಾಲಿನ್ಯವನ್ನು ಪೂರ್ತಿ ನಿಯಂತ್ರಿಸಲಾಗದು. ಅದಕ್ಕೆ ಕಾರಣವಾಗುವ ಎಲ್ಲಾ ಚಟುವಟಿಕೆಗಳ ಮೇಲೂ ನಿಯಂತ್ರಣ ಹೇರುವ ಅಗತ್ಯವನ್ನು ಮಿತಿಮೀರಿದ ಮಾಲಿನ್ಯವೇ ಸೂಚಿಸುತ್ತಿದೆ.

ಚೀನಾದ ಬೀಜಿಂಗ್ ಸಹ ಇದೇ ರೀತಿಯ ಮಾಲಿನ್ಯ ಸಮಸ್ಯೆಯನ್ನುಕೆಲ ವರ್ಷಗಳ ಹಿಂದೆ ಎದುರಿಸಿತ್ತು. ಆದರೆ, ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಮಾಲಿನ್ಯಕ್ಕೆ ಕಡಿವಾಣ ಹಾಕುವಲ್ಲಿ ಚೀನಾ ತಕ್ಕಮಟ್ಟಿಗೆ ಯಶಸ್ಸು ಪಡೆದಿದೆ.ಯುರೋಪಿನ ದೇಶಗಳು ಹಸಿರು ತಂತ್ರಜ್ಞಾನವನ್ನು ಬಳಸುವ ಮೂಲಕ ಮಾಲಿನ್ಯವನ್ನು ನಿಯಂತ್ರಿಸಿವೆ. ಈ ದಿಸೆಯಲ್ಲಿ ಭಾರತ ಕೈಗೊಂಡಿರುವ ಕ್ರಮಗಳು ಸಾಲದು. ಕೈಗಾರಿಕೆ ಮತ್ತು ವಾಹನಗಳಲ್ಲಿ ಡೀಸೆಲ್ ಹಾಗೂ ಪೆಟ್ರೋಲ್ ಬಳಕೆಯು ಕಡಿಮೆ ಆಗಬೇಕು. ಕೃಷಿ ತ್ಯಾಜ್ಯ ಸುಡುವ ಪರಿಪಾಟವನ್ನು ಕೈಬಿಡಬೇಕು.

ವಿದ್ಯುತ್ಚಾಲಿತ ವಾಹನಗಳಿಗೆ ಉತ್ತೇಜನ ದೊರೆಯಬೇಕು. ಇದಕ್ಕಾಗಿ, ಕೇಂದ್ರ ಸರ್ಕಾರದ ನೀತಿಯಲ್ಲೇ ಆಮೂಲಾಗ್ರ ಬದಲಾವಣೆ ಆಗಬೇಕು. ಪರಿಸರಸ್ನೇಹಿ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರವು ಎಲ್ಲ ಬಗೆಯ ಮಾರ್ಗೋಪಾಯಗಳನ್ನೂ ಅನುಸರಿಸಬೇಕು. ಜೊತೆಗೆ ಈ ಕುರಿತು ಜನಜಾಗೃತಿಗೂ ಮುಂದಾಗಬೇಕು. ಮಾಲಿನ್ಯಮುಕ್ತ ಪರಿಸರವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಗುರುತರ ಹೊಣೆ ಸಮಾಜದ ಮೇಲೆ ಇದೆ. ದೆಹಲಿಯ ಈಗಿನ ಸ್ಥಿತಿಯು ಇಡೀ ದೇಶಕ್ಕೆ ಎಚ್ಚರಿಕೆಯ ಗಂಟೆ. ಕೂಡಲೇ ಎಚ್ಚೆತ್ತುಕೊಳ್ಳುವುದು ಅಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.