ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಏಳು ಅಂತಸ್ತಿನ ಕಟ್ಟಡ ಕುಸಿದು, ದೇಶದ ಬೇರೆ ಬೇರೆ ರಾಜ್ಯಗಳ ಎಂಟು ಕಾರ್ಮಿಕರು ಜೀವ
ಕಳೆದುಕೊಂಡಿದ್ದಾರೆ. ನಾಪತ್ತೆಯಾಗಿರುವ ಒಬ್ಬರ ಸುಳಿವು ಮೂರು ದಿನ ಕಳೆದರೂ ಪತ್ತೆಯಾಗಿಲ್ಲ. ಅವಶೇಷಗಳಡಿ ಸಿಕ್ಕಿಬಿದ್ದಿರುವ ಸಂಶಯದ ಮೇಲೆ, ಶೋಧ ಕಾರ್ಯಾಚರಣೆ ಮುಂದುವರಿದಿದೆ. ಇಂತಹ ಅನಾಹುತ ಘಟಿಸಿದಾಗಲೆಲ್ಲ ಸರ್ಕಾರದ ನೇತಾರರು, ಹಿರಿಯ ಅಧಿಕಾರಿಗಳು, ‘ಇನ್ನು ಮುಂದೆ ಹೀಗಾಗದಂತೆ ಕಟ್ಟೆಚ್ಚರ ವಹಿಸಲಾಗುವುದು, ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು’ ಎಂದು ಘೋಷಿಸುತ್ತಾರೆ. ಜೀವಹಾನಿಯ ಆಘಾತ ನೆನಪಿನಿಂದ ಮರೆಯಾಗುತ್ತಿದ್ದಂತೆ, ಆಡಳಿತದ ಚುಕ್ಕಾಣಿ ಹಿಡಿದವರು, ಅಧಿಕಾರಿಗಳು ಮೌನವಾಗುತ್ತಾರೆ. ಮತ್ತೊಂದು ಅವಘಡ ನಡೆಯುವವರೆಗೆ ಕಾಯ್ದೆ, ನಿಯಮಗಳ ಅನುಷ್ಠಾನ, ಶಿಸ್ತುಕ್ರಮ ಎಲ್ಲವನ್ನೂ
ಮರೆತುಬಿಡುತ್ತಾರೆ.

ಹೀಗಾಗಿ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಕಟ್ಟಡಗಳ ಕುಸಿತ ಹಾಗೂ ಸಾವಿನ ಪ್ರಕರಣಗಳು ಮರುಕಳಿಸುತ್ತಲೇ ಇವೆ. ಬಾಬು ಸಾ ಪಾಳ್ಯದ ಪ್ರಕರಣವನ್ನೇ
ನೋಡುವುದಾದರೆ, ನಿರ್ಮಾಣ ಹಂತದ ಕಟ್ಟಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿಯೇ ಇದೆಯಾದರೂ ಅದು ಸರ್ಕಾರದ ಯಾವುದೇ ನಗರ ಯೋಜನಾ ಪ್ರಾಧಿಕಾರದ ಅನುಮೋದನೆ ಪಡೆಯದ ರೆವಿನ್ಯೂ ಬಡಾವಣೆಯ ಪ್ರದೇಶ. ರಾಜಕೀಯ ನಾಯಕರು, ರಿಯಲ್ ಎಸ್ಟೇಟ್ ಉದ್ಯಮಿಗಳ ಹಿತಾಸಕ್ತಿ ಹಾಗೂ ಪಾಲಿಕೆಗೆ ವರಮಾನ ಬರಬೇಕೆಂಬ ಏಕೈಕ ಕಾರಣಕ್ಕೆ ಇಂತಹ ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ‘ಬಿ’ ಖಾತೆಯನ್ನು ನೀಡಲಾಗುತ್ತಿದೆ. ‘ಬಿ’ ಖಾತೆಯನ್ನೂ ಸಕ್ರಮಗೊಳಿಸಿ ‘ಎ’ ಖಾತೆ ನೀಡಬೇಕೆಂಬ ಬೇಡಿಕೆ–ಪ್ರಕ್ರಿಯೆ ದಶಕಗಳಿಂದ ನನೆಗುದಿಗೆ ಬಿದ್ದಿದೆ. ಆಡಳಿತ ನಡೆಸಿದ ಎಲ್ಲ ಪಕ್ಷಗಳ ನಾಯಕರೂ ಈ ಅಕ್ರಮದ ಮಹಾಪೋಷಕರಂತೆ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ, ಯಾರೋ ಒಬ್ಬರನ್ನು ದೂರಿದರೆ ಪ್ರಯೋಜನವೇನೂ ಆಗದು.

ಬಾಬು ಸಾ ಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡವು ರೆವಿನ್ಯೂ ಬಡಾವಣೆ ವ್ಯಾಪ್ತಿಯಲ್ಲಿ ಇದ್ದುದರಿಂದಾಗಿ, ನಿರ್ಮಾಣಕ್ಕೆ ಮುನ್ನ ಕಟ್ಟಡ ನಕ್ಷೆಗೆ ಅನುಮೋದನೆ ಪಡೆದಿರಲಿಲ್ಲ. ತರಾತುರಿಯಲ್ಲಿ ನಿರ್ಮಿಸಿ, ಯಾರಿಗೋ ಮಾರಾಟ ಮಾಡಿ ದುಡ್ಡು ಸಂಪಾದಿಸುವ ಕಟ್ಟಡ ಮಾಲೀಕನ ದುರಾಸೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಡಪಾಯಿ ಕಾರ್ಮಿಕರು ಬಲಿಯಾಗಿದ್ದಾರೆ. ಹೀಗಾಗಿಯೇ, ಭದ್ರವಾದ ತಳಪಾಯ ಹಾಕದೇ ಏಳು ಅಂತಸ್ತಿನ ಕಟ್ಟಡವನ್ನು ನಿರ್ಮಿಸಲಾಗುತ್ತಿತ್ತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟಡಗಳನ್ನು ನಕ್ಷೆಗೆ ಅನುಗುಣವಾಗಿ
ನಿರ್ಮಿಸಲಾಗುತ್ತಿದೆಯೇ? ನಿಯಮ ಉಲ್ಲಂಘಿಸಲಾಗಿದೆಯೇ ಎಂಬುದರ ಪರಿಶೀಲನೆಗೆ ಪ್ರತ್ಯೇಕ ವಿಭಾಗವೇ ಇದೆ. ಇಂತಹ ಕಟ್ಟಡಗಳ ಬಗ್ಗೆ ಯಾರಿಗೆ ಸಂದೇಹ ಬಂದರೂ ಸಂಬಂಧಿಸಿದ ವಾರ್ಡ್ನ ಕಿರಿಯ ಅಥವಾ ಸಹಾಯಕ ಎಂಜಿನಿಯರ್ಗೆ ದೂರು ನೀಡಬಹುದು.

ದೂರು ಬಂದ 24 ಗಂಟೆಯೊಳಗೆ ಈ ಎಂಜಿನಿಯರ್ಗಳು ಸ್ಥಳ ಪರಿಶೀಲನೆ ಮಾಡಿ, ಉಲ್ಲಂಘನೆಯಾಗಿದ್ದರೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗೆ ವರದಿ ಸಲ್ಲಿಸಬೇಕು. ಸ್ಥಳ ಭೇಟಿಗೆ 15 ದಿನದೊಳಗೆ ಸಮಯ ನಿಗದಿ ಮಾಡುವಂತೆ ಕಟ್ಟಡ ಮಾಲೀಕನಿಗೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನೋಟಿಸ್ ನೀಡಬೇಕು. ಅದರೊಳಗೆ ಸ್ಥಳ ಪರಿಶೀಲನೆ ಮಾಡಿ, ಮೇಲಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ನಿಯಮ ಉಲ್ಲಂಘಿಸಿ ನಿರ್ಮಿಸಿದ್ದರೆ, ನಿರ್ಮಿಸುತ್ತಿದ್ದರೆ 30 ದಿನದೊಳಗೆ ಅದನ್ನು ತೆರವುಗೊಳಿಸುವಂತೆ ಗಡುವು ನೀಡಿ ನೋಟಿಸ್ ಜಾರಿಗೊಳಿಸಬೇಕು. ನೋಟಿಸ್ ಜಾರಿಯಾದ ದಿನದಿಂದ ನಿರ್ಮಾಣ ಹಂತದ ಕಟ್ಟಡದ ಯಥಾಸ್ಥಿತಿ ಕಾಪಾಡುವುದು ವಾರ್ಡ್ ಮಟ್ಟದ ಎಂಜಿನಿಯರ್ ಹೊಣೆಯಾಗಿರುತ್ತದೆ. ಈ ಪ್ರಕರಣದಲ್ಲಿ ಸೆಪ್ಟೆಂಬರ್ 21ರಂದೇ ಇಂತಹ ನೋಟಿಸ್ ನೀಡಲಾಗಿತ್ತು.

ಹಾಗಿದ್ದರೂ ಕಟ್ಟಡ ಕಾಮಗಾರಿ ಮುಂದುವರಿದಿತ್ತು. ನೋಟಿಸ್ ಕೊಟ್ಟ ಬಳಿಕ ಕಾಮಗಾರಿ ಸ್ಥಗಿತಗೊಳಿಸಲು ಕ್ರಮ ಜರುಗಿಸದೇ ಇದ್ದುದು ಅಧಿಕಾರಿಯ ಕರ್ತವ್ಯಲೋಪ. ಜತೆಗೆ, ಮಾಲೀಕನ ಪ್ರಮಾದವೂ ಹೌದು. ಸಾಮಾನ್ಯವಾಗಿ ಇಂತಹ ಪ್ರಕರಣಗಳಲ್ಲಿ, ನೋಟಿಸ್ ಸ್ವೀಕರಿಸಿದ ಕೂಡಲೆ ಅದನ್ನೇ ಮುಂದಿಟ್ಟು ಕಟ್ಟಡ ಮಾಲೀಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತರುತ್ತಾರೆ. ಅಲ್ಲಿಗೆ, ಯಾವುದೇ ಕ್ರಮವನ್ನೂ ಕೈಗೊಳ್ಳದ ಅಸಹಾಯಕತೆಗೆ ಅಧಿಕಾರಿಗಳು ಸಿಲುಕುತ್ತಾರೆ. ಏತನ್ಮಧ್ಯೆ, ಸ್ಥಳೀಯ ರಾಜಕೀಯ ನಾಯಕರು ಕೂಡ ಇಂತಹ ಅಕ್ರಮ ಕಟ್ಟಡಗಳ ತಂಟೆಗೆ ಹೋಗದಂತೆ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಾರೆ. ಹೀಗೆ, ಮಾಲೀಕ, ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳ ಅಪವಿತ್ರ ಮೈತ್ರಿಯಿಂದಾಗಿ ಇಂತಹ ಅಕ್ರಮ ಕಟ್ಟಡಗಳು ತಲೆ ಎತ್ತುತ್ತಲೇ ಇವೆ.

ಅಕ್ರಮಗಳನ್ನು ತಡೆಯಲು ಇರುವ ಕಾನೂನುಗಳು ಪಾಲನೆಯಾಗಬೇಕಾದರೆ, ಮತ್ತೆ ಇಂತಹ ದುರಂತಗಳು ನಡೆಯದಂತೆ ನೋಡಿಕೊಳ್ಳಬೇಕಾದರೆ ಈ ಅಕ್ರಮ ಕೂಟವನ್ನು ಭೇದಿಸುವ ಕೆಲಸವನ್ನು ಸರ್ಕಾರ ನಿಷ್ಠುರವಾಗಿಯೇ ಮಾಡಬೇಕು. ಅನಧಿಕೃತವಾಗಿ ಕಟ್ಟಡಗಳು ನಿರ್ಮಾಣವಾದರೆ ಅದಕ್ಕೆ ವಲಯ ಆಯುಕ್ತರನ್ನೇ ಹೊಣೆ ಮಾಡುವುದಾಗಿ ಮುಖ್ಯಮಂತ್ರಿ ಎಚ್ಚರಿಸಿದ್ದಾರೆ. ಐಎಎಸ್ ಶ್ರೇಣಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುವುದರ ಜತೆಗೆ ಇಂತಹ ಕಟ್ಟಡ ಮಾಲೀಕರ ವಿರುದ್ಧ ಕಠಿಣ ಕ್ರಮ ಜರುಗಿಸಿದರಷ್ಟೇ ವ್ಯವಸ್ಥೆ ಸರಿದಾರಿಗೆ ಬಂದೀತು. ಕ್ರಮದ ಎಚ್ಚರಿಕೆಯು ಮಾತಿಗೆ ಸೀಮಿತವಾಗದೆ ಅನುಷ್ಠಾನಕ್ಕೆ ಬರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.