ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿ (ರೆಪೊ) ದರವನ್ನು ಶೇಕಡ 0.50ರಷ್ಟು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ನ (ಆರ್ಬಿಐ) ಹಣಕಾಸು ನೀತಿ ಸಮಿತಿಯು (ಎಂಪಿಸಿ) ಒಕ್ಕೊರಲಿನಿಂದ ತೀರ್ಮಾನಿಸಿದೆ. ಇದರಲ್ಲಿ ಅನಿರೀಕ್ಷಿತವಾದುದು ಯಾವುದೂ ಇಲ್ಲ. ದರ ಹೆಚ್ಚಳದ ಸೂಚನೆಯನ್ನು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮೊದಲೇ ನೀಡಿದ್ದರು.

ರೆಪೊ ದರ ಏರಿಕೆಯು ಶೇ 0.50ಕ್ಕಿಂತಲೂ ಹೆಚ್ಚಾಗಬಹುದು ಎಂಬ ನಿರೀಕ್ಷೆಯೂ ಒಂದು ವರ್ಗದಲ್ಲಿ ಇತ್ತು. ನಿಯಂತ್ರಣ ಮೀರಿ ಹೋಗಿರುವ ಚಿಲ್ಲರೆ ಹಣದುಬ್ಬರ ದರವನ್ನು ಶೇ 6ರ ಮಟ್ಟಕ್ಕಿಂತ ಕಡಿಮೆ ಮಾಡುವ ಉದ್ದೇಶದಿಂದ ಆರ್ಬಿಐ ರೆಪೊ ದರ ಹೆಚ್ಚಿಸುತ್ತಿದೆ. ಆಗಸ್ಟ್ನಲ್ಲಿಯೂ ರೆಪೊ ದರ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆ ಇದೆ. ಚಿಲ್ಲರೆ ಹಣದುಬ್ಬರ ದರವು ಈ ವರ್ಷದ ಜನವರಿಯಿಂದ ಶೇ 6ಕ್ಕಿಂತ ಜಾಸ್ತಿ ಇದೆ. ಹಣದುಬ್ಬರವು ಈ ಮಟ್ಟವನ್ನು ಮೀರಲೇಬಾರದಿತ್ತು.

2021ರ ಸೆಪ್ಟೆಂಬರ್ನಿಂದ ಹಣದುಬ್ಬರ ಹೆಚ್ಚುತ್ತಲೇ ಸಾಗಿದೆ. ಆಗ ಇದನ್ನು ಆರ್ಬಿಐ ಬಹುಶಃ ಗಂಭೀರವಾಗಿ ಪರಿಗಣಿಸಲಿಲ್ಲ. ಕೋವಿಡ್ನಿಂದ ಬಸವಳಿದಿದ್ದ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ಮೂಡಬೇಕು ಎಂದಾದರೆ, ‘ಹೊಂದಾಣಿಕೆ’ಯ ಹಣಕಾಸಿನ ನಿಲುವು ಬೇಕು ಎಂಬಂತೆ ಇತ್ತು ಅದರ ಧೋರಣೆ. ಆದರೆ, ಜನವರಿ ತಿಂಗಳ ನಂತರದಲ್ಲಿ ಪರಿಸ್ಥಿತಿ ಬೇರೆಯದೇ ಸ್ವರೂಪ ಪಡೆದಿದೆ. ಹೊಂದಾಣಿಕೆಯ ನಿಲುವನ್ನೇ ಮುಂದುವರಿಸಿ, ಹಣದ ಹರಿವು ತಗ್ಗಿಸದೆ ಇದ್ದಲ್ಲಿ, ಹಣದುಬ್ಬರವು ವಿಪರೀತವಾಗಿ (ಅದು ಈಗಾಗಲೇ ಮಿತಿ ಮೀರಿದೆ) ಆರ್ಥಿಕ ಚೇತರಿಕೆ ಹಳಿತಪ್ಪುವ ಆತಂಕ ಇದೆ. ಕಳೆದ ವಾರದ ಎಂಪಿಸಿ ಸಭೆಯ ನಂತರದಲ್ಲಿ ಆರ್ಬಿಐ ‘ಹೊಂದಾಣಿಕೆ’ಯ ಹಣಕಾಸಿನ ನೀತಿ ಮುಂದುವರಿಸುವುದಿಲ್ಲ ಎಂಬ ಸ್ಪಷ್ಟ ಸೂಚನೆ ನೀಡಿದೆ. ಆದರೆ, ಈಗಿನ ದರ ಏರಿಕೆಯ ಪರಿಣಾಮವಾಗಿ ಹಣದುಬ್ಬರದ ಮಟ್ಟವು ಎಷ್ಟರಮಟ್ಟಿಗೆ ತಗ್ಗಲಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕು.

ಆರ್ಬಿಐನ ಕ್ರಮದಿಂದಾಗಿ ಚಿಲ್ಲರೆ ಹಣದುಬ್ಬರ ದರವು ಕಡಿಮೆ ಆಗುವ ಸಾಧ್ಯತೆ ಕಡಿಮೆ ಎಂದು ಹಣಕಾಸು ತಜ್ಞರಲ್ಲಿ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಚಿಲ್ಲರೆ ಹಣದುಬ್ಬರ ಪ್ರಮಾಣದ ಏರಿಳಿತವನ್ನು ತೀರ್ಮಾನಿಸುವ ಹಲವು ವಹಿವಾಟುಗಳು, ಸಾಲ ಹಾಗೂ ಬಡ್ಡಿ ದರದ ಜೊತೆ ನೇರ ಸಂಬಂಧ ಹೊಂದಿಲ್ಲ. ಹೀಗಾಗಿ, ಆರ್ಬಿಐ ಕ್ರಮವು ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಷ್ಯಾ–ಉಕ್ರೇನ್ ಯುದ್ಧ ಆರಂಭವಾದ ನಂತರದಲ್ಲಿ ಹಣದುಬ್ಬರ ಹೆಚ್ಚಳವಾಗುತ್ತಿರುವುದಕ್ಕೆ ಮುಖ್ಯ ಕಾರಣ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳ, ಅಡುಗೆ ಎಣ್ಣೆಗಳ ಬೆಲೆ ಏರಿಕೆ, ಇತರ ಕೆಲವು ಅಗತ್ಯ ವಸ್ತುಗಳಲ್ಲಿ ಆಗಿರುವ ಬೆಲೆ ಏರಿಕೆ. ಇವುಗಳಿಗೂ ‘ಹೊಂದಾಣಿಕೆ’ಯ ಹಣಕಾಸಿನ ನೀತಿಗೂ ನೇರ ಸಂಬಂಧ ಕಾಣುತ್ತಿಲ್ಲ.

ಹಣದುಬ್ಬರ ನಿಯಂತ್ರಿಸುವ ಮಹತ್ವದ ಹೊಣೆಗಾರಿಕೆ ಇರುವುದು ಆರ್ಬಿಐ ಹೆಗಲ ಮೇಲೆ ಎಂಬುದು ನಿಜವಾದರೂ, ಈಗಿನ ಸ್ಥಿತಿಯಲ್ಲಿ ಆರ್ಬಿಐ ಕೈಗೊಳ್ಳುವ ಕ್ರಮಗಳಿಗೆ ಮಿತಿ ಇದೆ ಎಂಬುದೂ ಸತ್ಯ. ಉಕ್ರೇನ್ ಮತ್ತು ರಷ್ಯಾದಿಂದ ಅಡುಗೆ ಎಣ್ಣೆ ಸರಿಯಾಗಿ ಪೂರೈಕೆ ಆಗದೆ, ದೇಶಿ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆಗಳ ಬೆಲೆಯಲ್ಲಿ ಏರಿಕೆ ಆಗಿ, ಅದರಿಂದ ಒಟ್ಟಾರೆ ಚಿಲ್ಲರೆ ಹಣದುಬ್ಬರ ದರ ಹೆಚ್ಚಳವಾಗುವ ಪರಿಸ್ಥಿತಿಯನ್ನು ಆರ್ಬಿಐ ನೀತಿಗಳ ಮೂಲಕವೇ ನಿಭಾಯಿಸುವುದು ಕಷ್ಟಸಾಧ್ಯ. ಹೀಗಾಗಿ, ಈಗಿನ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ತಡೆಯಲು ಆರ್ಬಿಐ ಜೊತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಕೈಜೋಡಿಸಬೇಕು.

ಈಗಿನ ರೆಪೊ ದರವು ಕೋವಿಡ್ ಪೂರ್ವದ ಮಟ್ಟಕ್ಕಿಂತ ಶೇ 0.25ರಷ್ಟು ಕಡಿಮೆ ಇದೆ. ಅಂದರೆ, ರೆಪೊ ದರವನ್ನು ಇನ್ನೂ ಹೆಚ್ಚಿಸಲು ಅವಕಾಶ ಇದ್ದೇ ಇದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣವು ಶೇ 6.7ರಷ್ಟು ಇರಲಿದೆ ಎಂದು ಆರ್ಬಿಐ ಅಂದಾಜಿಸಿದೆ. ಆ ಮೂಲಕ, ಇಡೀ ವರ್ಷದಲ್ಲಿ ಹಣದುಬ್ಬರ ತಾನೇ ನಿಗದಿ ಮಾಡಿರುವ ಲಕ್ಷ್ಮಣ ರೇಖೆಯ ಮಿತಿಯೊಳಕ್ಕೆ ಬರುವುದಿಲ್ಲ ಎಂಬುದನ್ನೂ ಒಪ್ಪಿಕೊಂಡಿದೆ. ಹಣದುಬ್ಬರವು ಆರ್ಬಿಐ ಅಂದಾಜಿಗಿಂತ ಇನ್ನಷ್ಟು ಜಾಸ್ತಿ ಆಗುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಸಗಟು ಹಣದುಬ್ಬರ ಪ್ರಮಾಣವು ಎರಡಂಕಿ ಮಟ್ಟದಲ್ಲಿಯೇ ಇದೆ.

ಇಂಥದ್ದೊಂದು ಸ್ಥಿತಿಯನ್ನು ಜನ ಅನುಭವಿಸಬೇಕಾಗಿ ಬಂದಿರುವುದು ವಿಷಾದಕರ. ರಾಜ್ಯ ಸರ್ಕಾರಗಳು ಪೆಟ್ರೋಲ್, ಡೀಸೆಲ್ ಮೇಲಿನ ಮೌಲ್ಯವರ್ಧಿತ ತೆರಿಗೆಯನ್ನು ಕಡಿಮೆ ಮಾಡಬಹುದು ಎಂಬ ಸಲಹೆಯನ್ನು ದಾಸ್ ನೀಡಿದ್ದಾರೆ. ಹೀಗೆ ಮಾಡುವ ಮೂಲಕ ಹಣದುಬ್ಬರ ತಗ್ಗಿಸಲು ರಾಜ್ಯ ಸರ್ಕಾರಗಳು ನೆರವು ನೀಡಬಹುದು. ಜಾಗತಿಕ ಮಟ್ಟದಲ್ಲಿ ತೀವ್ರ ಹಣದುಬ್ಬರ ಹಾಗೂ ನಿಶ್ಚಲ ಬೆಳವಣಿಗೆಯ ಸ್ಥಿತಿ ಎದುರಾಗುವ ಭೀತಿ ಇದೆ. ಇಂತಹ ಸಂದರ್ಭದಲ್ಲಿ ಅರ್ಥ ವ್ಯವಸ್ಥೆಯಲ್ಲಿ ಚೇತರಿಕೆ ತುಂಬಲು ಸರ್ಕಾರಗಳಿಂದ ಹೆಚ್ಚಿನ ಕ್ರಮಗಳ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.