ಸಾಲ ನೀಡಿಕೆ ಪ್ರಮಾಣ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ–ಅಂಶಗಳು ಅತಿಸಣ್ಣ, ಸಣ್ಣ ಹಾಗೂ ಮಧ್ಯಮ ಗಾತ್ರದ (ಎಂಎಸ್‌ಎಂಇ) ಉದ್ದಿಮೆಗಳ ಸ್ಥಿತಿಯ ಕುರಿತು ಚಿತ್ರಣವೊಂದನ್ನು ನೀಡುತ್ತಿವೆ. ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ವಲಯಕ್ಕೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬಹಳ ಕಡಿಮೆ ಆಗಿದೆ. ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣವು ಹಿಂದಿನ ವರ್ಷದ ಏಪ್ರಿಲ್, ಮೇ, ಜೂನ್ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ವರ್ಷದ ಏಪ್ರಿಲ್, ಮೇ ಹಾಗೂ ಜೂನ್ ತ್ರೈಮಾಸಿಕದಲ್ಲಿ ಗಣನೀಯವಾಗಿ ತಗ್ಗಿದೆ. ಅತಿಸಣ್ಣ ಹಾಗೂ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣದ ಕಥೆಯೂ ಇದೇ ಆಗಿದೆ. ಮಧ್ಯಮ ಪ್ರಮಾಣದ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣವು ಹಿಂದಿನ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇಕಡ 48ಕ್ಕಿಂತ ಹೆಚ್ಚಿತ್ತು. ಆದರೆ ಅದು ಈ ವರ್ಷದಲ್ಲಿ ಶೇ 17ಕ್ಕೆ ಬಂದಿದೆ. ಅತಿಸಣ್ಣ ಹಾಗೂ ಸಣ್ಣ ಪ್ರಮಾಣದ ಉದ್ದಿಮೆಗಳಿಗೆ ಸಾಲ ನೀಡಿಕೆಯಲ್ಲಿನ ಹೆಚ್ಚಳ ಪ್ರಮಾಣವು ಕಳೆದ ಆರ್ಥಿಕ ವರ್ಷದ ಮೊದಲ ಮೂರು ತಿಂಗಳಲ್ಲಿ ಶೇ 30ಕ್ಕಿಂತ ಹೆಚ್ಚಿತ್ತು. ಅದು ಈ ವರ್ಷದಲ್ಲಿ ಶೇ 10ರ ಆಸುಪಾಸಿಗೆ ಬಂದಿದೆ. ದೇಶದಲ್ಲಿ ಅತಿಹೆಚ್ಚು ಜನರಿಗೆ ಉದ್ಯೋಗ ನೀಡಿರುವ ಹೆಗ್ಗಳಿಕೆ ಎಂಎಸ್‌ಎಂಇ ವಲಯದ್ದು. ಆದರೂ, ಈ ವಲಯಕ್ಕೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣದಲ್ಲಿ ಈ ಮಟ್ಟದ ಇಳಿಕೆ ಕಂಡುಬಂದಿದೆ. ಈ ವಲಯದ ಬಗ್ಗೆ ಬ್ಯಾಂಕ್‌ಗಳಿಗೆ ಇರುವ ಧೋರಣೆಯೇ ಸಾಲ ನೀಡಿಕೆ ವಿಚಾರದಲ್ಲಿ ಇರುವ ಅಡ್ಡಿ ಎಂದು ಉದ್ಯಮದ ಪ್ರತಿನಿಧಿಗಳು ದೂರುತ್ತಾರೆ.

ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಎಂಎಸ್‌ಎಂಇ ಉದ್ದಿಮೆಗಳು, ನಂತರದ ದಿನಗಳಲ್ಲಿ ಬಂಡವಾಳದ ಕೊರತೆ ಎದುರಿಸಲು ಆರಂಭಿಸಿದವು. ಹೊಸ ಕಾಲದ ಕೆಲವು ಉದ್ಯಮಗಳು ತಮ್ಮ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ ಮೂಲಕ ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸಿದ ನಿದರ್ಶನಗಳೂ ಇವೆ. ಆದರೆ ಎಂಎಸ್‌ಎಂಇ ವಲಯದ ಬಹುಪಾಲು ಉದ್ಯಮಗಳಿಗೆ ಈ ರೀತಿ ಬಂಡವಾಳ ಸಂಗ್ರಹಿಸಲು ಆಗದು ಎಂಬುದು ವಾಸ್ತವ. ಬಂಡವಾಳಕ್ಕೆ ಬ್ಯಾಂಕ್ ಸಾಲವನ್ನೇ ನೆಚ್ಚಿಕೊಂಡಿರುವ ಈ ಉದ್ದಿಮೆಗಳು, ‘ನಮಗೆ ಬ್ಯಾಂಕ್‌ಗಳಿಂದ ಅಗತ್ಯ ಸಾಲ ಸಿಗುತ್ತಿಲ್ಲ’ ಎಂದು ಕಾಲಕಾಲಕ್ಕೆ ಹೇಳುತ್ತಲೇ ಇವೆ. ಕೋವಿಡ್ ನಂತರದ ಅವಧಿಯಲ್ಲಿ, ಹಣದುಬ್ಬರದ ಏರಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತಾ ಬಂತು. ಇದರ ಪರಿಣಾಮವಾಗಿ ಸಾಲದ ಮೇಲಿನ ಬಡ್ಡಿ ಹೆಚ್ಚುತ್ತಾ ಸಾಗಿತು. ಹಣದುಬ್ಬರ ಹಾಗೂ ಕಾರ್ಮಿಕರ ಮೇಲಿನ ವೆಚ್ಚ ಏರಿಕೆಯ ಕಾರಣದಿಂದಾಗಿ ಎಂಎಸ್‌ಎಂಇ ವಲಯದ ಹಣಕಾಸಿನ ಸ್ಥಿತಿ ಕೆಟ್ಟಿತು. ಬಡ್ಡಿ ದರ ಏರಿಕೆಯು ಈ ವಲಯದ ಸಮಸ್ಯೆಗಳು ಇನ್ನಷ್ಟು ಹೆಚ್ಚಲು ಕಾರಣವಾಯಿತು. ಬಂಡವಾಳದ ಕೊರತೆಯನ್ನು ತುಂಬಿಕೊಳ್ಳಲು ಎಂಎಸ್‌ಎಂಇ ಉದ್ದಿಮೆಗಳು ವೆಂಚರ್ ಕ್ಯಾಪಿಟಲಿಸ್ಟ್‌ಗಳ ಹಾಗೂ ಖಾಸಗಿ ಮೂಲಗಳ ಮೊರೆ ಹೋಗಿದ್ದೂ ಇದೆ. ಬ್ಯಾಂಕ್‌ಗಳಲ್ಲಿ ನಗದು ಕೊರತೆ ಇಲ್ಲದಿರುವ ಹೊತ್ತಿನಲ್ಲಿಯೂ ಈ ವಲಯಕ್ಕೆ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣವು ಕಡಿಮೆ ಆಗಿರುವುದು ಒಳ್ಳೆಯ ಸೂಚನೆ ಅಲ್ಲ.

ಹಿಂದಿನ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣಕ್ಕೆ ಹೋಲಿಸಿದರೆ, ಈ ವರ್ಷದ ಮೊದಲ ತ್ರೈಮಾಸಿಕದ ಸಾಲ ನೀಡಿಕೆಯಲ್ಲಿನ ಹೆಚ್ಚಳದ ಪ್ರಮಾಣದಲ್ಲಿ ಎಲ್ಲ ಪ್ರಮುಖ ವಲಯಗಳಲ್ಲಿಯೂ ಏರಿಕೆ ದಾಖಲಾಗಿದೆ. ಸೇವಾ ವಲಯ, ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ವಲಯಗಳು, ಬೃಹತ್ ಉದ್ಯಮ ವಲಯಗಳಿಗೆ ಸಾಲ ನೀಡಿಕೆಯಲ್ಲಿನ ಬೆಳವಣಿಗೆ ಪ್ರಮಾಣದಲ್ಲಿ ಏರಿಕೆ ಇದೆ. ವೈಯಕ್ತಿಕ ಸಾಲ ನೀಡಿಕೆ ಪ್ರಮಾಣದಲ್ಲಿ ಕೂಡ ಏರಿಕೆ ಇದೆ. ಇಳಿಕೆ ಆಗಿರುವುದು ಎಂಎಸ್‌ಎಂಇ ವಲಯಕ್ಕೆ ನೀಡುವ ಸಾಲದ ಪ್ರಮಾಣದ ಬೆಳವಣಿಗೆಯಲ್ಲಿ ಮಾತ್ರ. ದೇಶದ ಬಹುತೇಕ ಬ್ಯಾಂಕ್‌ಗಳು ಜೂನ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿವೆ. ಹೆಚ್ಚಿನ ಬ್ಯಾಂಕ್‌ಗಳು ಲಾಭದಲ್ಲಿ ಏರಿಕೆ ಕಂಡಿವೆ. ಆರ್ಥಿಕತೆ ಪುಟಿದೇಳುತ್ತಿರುವ ಹೊತ್ತಿನಲ್ಲಿ ಎಂಎಸ್‌ಎಂಇ ವಲಯಕ್ಕೆ ಬಂಡವಾಳದ ಟಾನಿಕ್ ಬೇಕು. ಬೃಹತ್ ಉದ್ದಿಮೆಗಳ ರೀತಿಯಲ್ಲಿ ಈ ವಲಯದ ಉದ್ದಿಮೆಗಳಿಗೆ ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು ಆಗದು; ಇವುಗಳಿಗೆ ಬ್ಯಾಂಕ್ ನೆರವೇ ದೊಡ್ಡ ಆಸರೆ. ಹೀಗಾಗಿ, ಈ ವಿಚಾರವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು. ಬ್ಯಾಂಕ್‌ಗಳ ಮನವೊಲಿಸಿ, ಎಂಎಸ್‌ಎಂಇ ವಲಯಕ್ಕೆ ಬಂಡವಾಳದ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.