ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಬೆಂಗಳೂರು ನಗರದ ಕೆಲವು ಭಾಗಗಳ ಮತದಾರರ ಮಾಹಿತಿಗಳನ್ನು ಕಳವು ಮಾಡಿರುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣವು ದಿನ ಕಳೆದಂತೆಲ್ಲಾ ನಿಗೂಢವಾಗುತ್ತಿದೆ. ಸಮಗ್ರ, ನಿಷ್ಪಕ್ಷಪಾತ ಮತ್ತು ಸ್ವತಂತ್ರವಾದ ತನಿಖೆಯಿಂದ ಮಾತ್ರವೇ ಈ ಹಗರಣದ ಆಳವನ್ನು ಅರಿಯಲು ಸಾಧ್ಯ. ಈ ಪ್ರಕ್ರಿಯೆಯಿಂದ ಲಾಭ ಪಡೆಯಲು ಯತ್ನಿಸಿರುವ ರಾಜಕೀಯ ಪಕ್ಷಗಳ ಜತೆ ಬಿಬಿಎಂಪಿ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೂ ಅಂತಹ ತನಿಖೆ ಅಗತ್ಯ. ಮತದಾರರಲ್ಲಿ ಜಾಗೃತಿ ಮೂಡಿಸುವುದು ಮತ್ತು ಮತದಾರರ ಗುರುತಿನ ಚೀಟಿಯ ಜೊತೆ ಆಧಾರ್ ಸಂಖ್ಯೆಯನ್ನು ಜೋಡಿಸುವ ಜವಾಬ್ದಾರಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಚಿಲುಮೆ ಸಂಸ್ಥೆಗೆ ನೀಡಿತ್ತು. ಆದರೆ, ಷರತ್ತುಗಳನ್ನು ಉಲ್ಲಂಘಿಸಿರುವ ಈ ಸರ್ಕಾರೇತರ ಸಂಸ್ಥೆಯು ಮತದಾರರ ಜಾತಿ, ವಯಸ್ಸು, ಲಿಂಗ, ವೃತ್ತಿ, ಶಿಕ್ಷಣಕ್ಕೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು ಹಾಗೂ ವೈಯಕ್ತಿಕ ಗುರುತಿನ ದಾಖಲೆಗಳನ್ನೂ ಸಂಗ್ರಹಿಸಿರುವ ಆರೋಪವಿದೆ. ಕೆಲವೆಡೆ ಮತದಾರರ ಒಲವು–ನಿಲುವು, ಹಾಲಿ ಶಾಸಕರ ಸಾಧನೆಗೆ ಸಂಬಂಧಿಸಿದ ಅಭಿಪ್ರಾಯವನ್ನೂ ಕಲೆಹಾಕಿರುವ ದೂರುಗಳಿವೆ. ಸಂಸ್ಥೆಯು ಮತದಾರರ ಮೇಲೆ ನಿರ್ದಿಷ್ಟ ಬಗೆಯಲ್ಲಿ ಪ್ರಭಾವ ಬೀರಲು ಯತ್ನಿಸಿರಬಹುದು. ತಾನು ಸಮೀಕ್ಷೆ ನಡೆಸಿದ ಸ್ಥಳಗಳಲ್ಲಿ ಸಂಸ್ಥೆಯು ಖಾಲಿ ಆಸ್ತಿಗಳನ್ನು ಗುರುತಿಸುವ ಕೆಲಸ ಕೂಡ ಮಾಡಿದೆ ಎಂಬ ಆರೋಪಗಳಿವೆ. ಈ ಮಾಹಿತಿಯನ್ನು ಚುನಾವಣಾ ಅಕ್ರಮಗಳಿಗೆ ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಬಿಬಿಎಂಪಿ ಈಗ ಚಿಲುಮೆ ಸಂಸ್ಥೆಯ ವಿರುದ್ಧ ವಂಚನೆ, ನಂಬಿಕೆ ದ್ರೋಹ ಮತ್ತು ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದಂತೆ ದೂರು ದಾಖಲಿಸಿದೆ. ಆದರೆ, ಸಮೀಕ್ಷೆ ನಡೆಸುವ ಚಿಲುಮೆ ಸಂಸ್ಥೆಯ ಕಾರ್ಯಕರ್ತರಿಗೆ ಬಿಬಿಎಂಪಿ ಅಧಿಕಾರಿಗಳು ‘ಮತಗಟ್ಟೆ ಹಂತದ ಅಧಿಕಾರಿಗಳು’ (ಬಿಎಲ್‌ಒ) ಎಂಬ ಹೆಸರಿನಲ್ಲಿ ಗುರುತಿನ ಚೀಟಿಗಳನ್ನೂ ನೀಡಿದ್ದರು ಎಂಬ ಸಂಗತಿಯು ಇಡೀ ಪ್ರಕ್ರಿಯೆಯಲ್ಲಿ ಬಿಬಿಎಂಪಿ ಒಳಗಿನವರು ಶಾಮೀಲಾಗಿರುವುದನ್ನು ಹಾಗೂ ಇಡೀ ಪ್ರಕ್ರಿಯೆಯ ಹಿಂದೆ ರಾಜಕೀಯ ಉದ್ದೇಶ ಇದ್ದುದನ್ನು ತೋರಿಸುತ್ತಿದೆ. ಹಿರಿಯ ಅಧಿಕಾರಿಗಳ ಆದೇಶದಂತೆ ಚಿಲುಮೆ ಸಂಸ್ಥೆಯ ಕಾರ್ಯಕರ್ತರಿಗೆ ಬಿಬಿಎಂಪಿ ಹೆಸರಿನಲ್ಲಿ ಗುರುತಿನ ಚೀಟಿ ವಿತರಿಸಿರುವುದಾಗಿ ಕೆ. ಚಂದ್ರಶೇಖರ್ ಎಂಬ ಮತದಾರರ ನೋಂದಣಿ ಅಧಿಕಾರಿ ಒಪ್ಪಿಕೊಂಡಿದ್ದಾರೆ. ಚಿಲುಮೆ ಸಂಸ್ಥೆಯ ಚಟುವಟಿಕೆಗಳ ಕುರಿತು ಯಾವೆಲ್ಲ ಅಧಿಕಾರಿಗಳಿಗೆ ಗೊತ್ತಿತ್ತು, ಸಂಸ್ಥೆಯ ಹಿಂದೆ ಯಾರೆಲ್ಲ ಇದ್ದರು?

ಆಡಳಿತಾರೂಢ ಬಿಜೆಪಿಯು ಚಿಲುಮೆ ಸಂಸ್ಥೆಯ ಕಾರ್ಯಕರ್ತರನ್ನು ದುರ್ಬಳಕೆ ಮಾಡಿಕೊಂಡು ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಸ್ತಕ್ಷೇಪ ಮಾಡಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಬಿಜೆಪಿಗೆ ಮತ ಚಲಾಯಿಸಲು ಆಸಕ್ತಿ ಹೊಂದಿಲ್ಲದ ಸಾವಿರಾರು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದಲೇ ಕೈಬಿಡಲಾಗಿದೆ ಅಥವಾ ಬೇರೊಂದು ಕ್ಷೇತ್ರಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ವಿರೋಧ ಪಕ್ಷದ ಮುಖಂಡರು ದೂರಿದ್ದಾರೆ. ಈ ಆರೋಪದ ಕುರಿತು ತನಿಖೆಯಾಗಬೇಕು. ಮತದಾರರ ಜಾಗೃತಿ ಕಾರ್ಯಕ್ರಮ ನಡೆಸಲು ಸರ್ಕಾರೇತರ ಸಂಸ್ಥೆಗಳನ್ನು ನೇಮಿಸಿಕೊಳ್ಳಲು ಚುನಾವಣಾ ಆಯೋಗದ ಮಾರ್ಗಸೂಚಿಗಳಲ್ಲಿ ಅವಕಾಶವಿದೆ. ಆದರೆ, ಅಂತಹ ಸಂಸ್ಥೆಗಳು ಯಾವುದೇ ರಾಜಕೀಯ ಪಕ್ಷದ ಜತೆ ನಂಟು ಹೊಂದಿರುವಂತಿಲ್ಲ. ಮತದಾರರ ಪಟ್ಟಿಗೆ ಸಂಬಂಧಿಸಿದ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಅವಕಾಶವಿಲ್ಲ. ಈ ಎರಡೂ ವಿಚಾರಗಳಲ್ಲಿ ಚಿಲುಮೆ ಸಂಸ್ಥೆಯು ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವುದು ಸ್ಪಷ್ಟ. 2018ರ ವಿಧಾನಸಭಾ ಚುನಾವಣೆಯಲ್ಲಿ ತಾವು ಸ್ಪರ್ಧಿಸಿದ್ದ ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ಮತದಾರರ ಸಮೀಕ್ಷೆ ನಡೆಸಲು ₹ 18 ಲಕ್ಷವನ್ನು ಚಿಲುಮೆ ಸಂಸ್ಥೆಗೆ ಪಾವತಿಸಿರುವುದಾಗಿ ಬಿಜೆಪಿಯ ಮಾಜಿ ಶಾಸಕ ಎನ್.ಎಸ್. ನಂದೀಶ್ ರೆಡ್ಡಿ ಒಪ್ಪಿಕೊಂಡಿದ್ದಾರೆ. ಈ ಸಂಸ್ಥೆಯು ಸಂಗ್ರಹಿಸಿದ ಮತದಾರರ ಮಾಹಿತಿಯನ್ನು ತನ್ನದೇ ಸಮೂಹ ಸಂಸ್ಥೆಯೊಂದರ ಡಿಜಿಟಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಿರುವುದೂ ತನಿಖೆಯಲ್ಲಿ ಪತ್ತೆಯಾಗಿದೆ. ಈ ಸಂಸ್ಥೆಯು ಮತದಾರರ ದತ್ತಾಂಶವನ್ನು ರಾಜಕೀಯ ಪಕ್ಷಗಳಿಗೆ ಹಾಗೂ ಮುಖಂಡರಿಗೆ ನೀಡುತ್ತದೆ. ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೂಡ ಚಿಲುಮೆ ಸಂಸ್ಥೆಯನ್ನು ಕೆಲಸಕ್ಕೆ ನಿಯೋಜಿಸಿತ್ತು ಎಂದು ಬಿಜೆಪಿ ಆರೋಪ ಮಾಡಿದೆ. ಮತದಾರರ ಜಾಗೃತಿ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಭಾಗಿಯಾದ ಕಾರ್ಯಕರ್ತರಿಗೆ ವೇತನ, ಭತ್ಯೆ ನೀಡಲು ದೊಡ್ಡ ಮೊತ್ತ ಬೇಕಾಗುತ್ತದೆ. ಆದರೆ, ಉಚಿತವಾಗಿ ಈ ಪ್ರಕ್ರಿಯೆಯನ್ನು ನಡೆಸಿಕೊಡುವುದಾಗಿ ಚಿಲುಮೆ ಸಂಸ್ಥೆಯು ಬಿಬಿಎಂಪಿಗೆ ವಾಗ್ದಾನ ನೀಡಿತ್ತು. ಇಷ್ಟೊಂದು ದೊಡ್ಡ ಮೊತ್ತದ ವೆಚ್ಚಕ್ಕೆ ಹಣ ಒದಗಿಸಿದವರು ಯಾರು ಎಂಬುದು ನಿಗೂಢವಾಗಿಯೇ ಉಳಿದಿದೆ.

ಈ ಪ್ರಕರಣದ ತನಿಖೆಯಲ್ಲಿ ತ್ವರಿತವಾಗಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಬಿಬಿಎಂಪಿಯು ಕೆಲವು ಅಧಿಕಾರಿಗಳನ್ನು ಅಮಾನತು ಮಾಡಿದೆ. ಪ್ರಕರಣದ ಕುರಿತು ವಿಚಾರಣೆಯನ್ನು ತಾನು ಮಾತ್ರ ನಡೆಸಬಹುದು ಎಂದು ರಾಜ್ಯ ಚುನಾವಣಾ ಆಯೋಗ ಹೇಳಿದೆ. ಆದರೆ, ಈ ಪ್ರಕ್ರಿಯೆಯ ಕುರಿತು ಆಯೋಗಕ್ಕೆ ಮೊದಲು ಅರಿವೇ ಇರಲಿಲ್ಲವೆ ಎಂಬ ಪ್ರಶ್ನೆ ಉದ್ಭವಿಸಿದೆ. ಪ್ರಕರಣದ ಕುರಿತು ಸಮಗ್ರವಾಗಿ ತನಿಖೆ ನಡೆಸಿ, ಸತ್ಯಾಂಶ ಬಯಲಿಗೆಳೆದು ಚುನಾವಣಾ ಪ್ರಕ್ರಿಯೆ ಕುರಿತು ಸಾರ್ವಜನಿಕರಲ್ಲಿನ ವಿಶ್ವಾಸ ಮರುಸ್ಥಾಪಿಸಬೇಕು. ಚುನಾವಣಾ ಆಯೋಗವು ತನ್ನ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳಬೇಕು. ರಾಜ್ಯ ವಿಧಾನಸಭೆಗೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯವೇ ಅಪಾಯಕ್ಕೆ ಸಿಲುಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.