‘ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ’ಯ ಅಡಿಯಲ್ಲಿ ಆರೋಗ್ಯ ವಿಮಾ ರಕ್ಷೆಯನ್ನು 70 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಾಗಿರುವವರಿಗೆ ವಿಸ್ತರಿಸಲು ಕೇಂದ್ರ ಸಚಿವ ಸಂಪುಟವು ತೀರ್ಮಾನಿಸಿರುವುದು, ಆರೋಗ್ಯ ವಿಮೆಯ ಸೌಲಭ್ಯವನ್ನು ವಿಸ್ತರಿಸುವಲ್ಲಿ ಬಹಳ ಮುಖ್ಯವಾದ ಹೆಜ್ಜೆ. ಈ ಕ್ರಮ ಸ್ವಾಗತಾರ್ಹ. ಆರೋಗ್ಯ ವಿಮಾ ಕ್ಷೇತ್ರದಲ್ಲಿನ ಬಹುದೊಡ್ಡ ಕೊರತೆಯೊಂದನ್ನು ತುಂಬುವ ಕೆಲಸವನ್ನು ಈ ತೀರ್ಮಾನವು ಮಾಡಲಿದೆ. ಕೇಂದ್ರದ ತೀರ್ಮಾನದ ಪರಿಣಾಮವಾಗಿ, ನಾಲ್ಕೂವರೆ ಕೋಟಿ ಕುಟುಂಬಗಳ ಆರು ಕೋಟಿಗೂ ಹೆಚ್ಚು ಮಂದಿ ಹಿರಿಯ ನಾಗರಿಕರಿಗೆ ಪ್ರಯೋಜನ ಆಗಲಿದೆ. ಈ ಹಿರಿಯ ನಾಗರಿಕರ ಆದಾಯ ಪ್ರಮಾಣ, ಅವರ ಸಾಮಾಜಿಕ ಸ್ಥಿತಿ ಯಾವುದೇ ಆಗಿದ್ದರೂ ಅವರಿಗೆ ವಿಮಾ ರಕ್ಷೆ ಸಿಗಲಿದೆ. ಈ ಕ್ರಮವು ಬಿಜೆಪಿಯ ಚುನಾವಣಾ ಭರವಸೆಗಳಲ್ಲಿ ಒಂದಾಗಿತ್ತು. ಈಗ ಕೇಂದ್ರ ಸಂಪುಟವು ಇದನ್ನು ಈಡೇರಿಸುವ ಕೆಲಸ ಮಾಡಿದೆ. ಈ ತೀರ್ಮಾನದ ಕಾರಣದಿಂದಾಗಿ ಮೊದಲ ವರ್ಷದಲ್ಲಿ ಕೇಂದ್ರ ಸರ್ಕಾರವು ₹3,437 ಕೋಟಿ ವೆಚ್ಚ ಮಾಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಖಾಸಗಿ ಆರೋಗ್ಯ ವಿಮಾ ಯೋಜನೆಗಳನ್ನು ಪಡೆದಿರುವವರಿಗೂ ಇಎಸ್‌ಐ (ನೌಕರರ ರಾಜ್ಯ ವಿಮೆ) ಸೌಲಭ್ಯ ಪಡೆದಿರುವವರಿಗೂ ‘ಆಯುಷ್ಮಾನ್ ಭಾರತ’ ಯೋಜನೆಯ ಪ್ರಯೋಜನ ದಕ್ಕಲಿದೆ. ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ಹಾಗೂ ಇತರ ಕೆಲವು ಯೋಜನೆಗಳ ವ್ಯಾಪ್ತಿಯಲ್ಲಿ ಇರುವವರು ತಮಗೆ ಇನ್ನು ಮುಂದೆ ಯಾವ ಯೋಜನೆಯ ಪ್ರಯೋಜನ ಬೇಕು ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ.

ಆದರೆ ಈ ಯೋಜನೆಯಲ್ಲಿ ಕೆಲವು ಮಿತಿಗಳು ಕೂಡ ಇವೆ. ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ₹5 ಲಕ್ಷದವರೆಗೆ ವಿಮಾ ರಕ್ಷೆ ದೊರೆಯುತ್ತದೆ. ಒಂದು ಕುಟುಂಬದಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಒಬ್ಬರಿಗಿಂತ ಹೆಚ್ಚು ಮಂದಿ ಅರ್ಹತೆ ಪಡೆದಿದ್ದರೆ, ಈ ಮೊತ್ತವು ಅವರಿಬ್ಬರ ನಡುವೆ ಹಂಚಿಹೋಗುತ್ತದೆ. ಆಯುಷ್ಮಾನ್ ಭಾರತ ಯೋಜನೆಯ ಅಡಿ ವಿಮಾ ರಕ್ಷೆಯನ್ನು ಪಡೆಯಲು ಅರ್ಹತೆ ಹೊಂದಿದ ಹಿರಿಯ ನಾಗರಿಕರ ಕುಟುಂಬವು ಯೋಜನೆಯ ವ್ಯಾಪ್ತಿಗೆ ಈಗಾಗಲೇ ಬಂದಿದ್ದರೆ, ಆ ಹಿರಿಯ ನಾಗರಿಕರು ತಮಗೆ ಸಿಗುವ ವಿಮಾ ರಕ್ಷೆಯ ಮೊತ್ತವನ್ನು ಕುಟುಂಬದ ಇತರರ ಜೊತೆ ಹಂಚಿಕೊಳ್ಳಬೇಕಿಲ್ಲ. ಹಿರಿಯ ನಾಗರಿಕರಿಗೆ ಅನ್ವಯವಾಗುವಂತೆ ಯೋಜನೆಯನ್ನು ಶೀಘ್ರವೇ ವಿಸ್ತರಿಸಲಾಗುತ್ತದೆ. ಯೋಜನೆಯ ಪ್ರಯೋಜನಗಳ ಬಗ್ಗೆ ಅತಿಶಯದಿಂದ ಮಾತನಾಡುವ ಅಗತ್ಯ ಇಲ್ಲ. ಯೋಜನೆಯ ಫಲಾನುಭವಿಗಳಾಗಲು ಅರ್ಹತೆ ಹೊಂದಿರುವವರ ಸಂಖ್ಯೆ ದೊಡ್ಡದಿದೆ. ಅವರಿಗಾಗಿ ಕೇಂದ್ರ ಸರ್ಕಾರವು ನೆರವಿನ ಹಸ್ತವೊಂದನ್ನು ಚಾಚಿರುವುದು ಗಮನಾರ್ಹವೇ ಹೌದು. ಜೀವನದ ಅತ್ಯಂತ ಮೂಲಭೂತ ಅಗತ್ಯಗಳಲ್ಲಿ ಉತ್ತಮ ಆರೋಗ್ಯಸೇವೆ ಕೂಡ ಒಂದು. ಅದರಲ್ಲೂ ಮುಖ್ಯವಾಗಿ, ಹಿರಿಯ ನಾಗರಿಕರಿಗೆ ಈ ಸೇವೆ ಬಹಳ ಮುಖ್ಯ. ಈ ಸೇವೆಯನ್ನು ಅವರಿಗೆ ಸಮರ್ಪಕವಾಗಿ ಒದಗಿಸುವ ಹೊಣೆಯು ಸರ್ಕಾರಗಳ ಮೇಲೆ ಇರುತ್ತದೆ. ದೇಶದಲ್ಲಿ ಆರೋಗ್ಯ ವಿಮಾ ಸೌಲಭ್ಯವನ್ನು ಹೊಂದಿರುವವರ ಪ್ರಮಾಣವು ಬಹಳ ಕಡಿಮೆ ಇದೆ. ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ 27ರಷ್ಟು ಮಂದಿ ಮಾತ್ರ ಈ ಸೌಲಭ್ಯವನ್ನು ಹೊಂದಿದ್ದಾರೆ. ಯಾವುದೇ ಆರೋಗ್ಯ ವಿಮಾ ಯೋಜನೆಯು ಅದೆಷ್ಟು ಮುಖ್ಯವಾಗುತ್ತದೆ ಎಂಬುದನ್ನು ಈ ಪ್ರಮಾಣವೇ ಹೇಳುತ್ತದೆ. ಹಿರಿಯ ನಾಗರಿಕರು ಸೇರಿದಂತೆ ಯಾವುದೇ ವರ್ಗಕ್ಕೆ ಆರೋಗ್ಯ ವಿಮಾ ಸೌಲಭ್ಯವನ್ನು ಒದಗಿಸುವುದು ಬಹಳ ಮುಖ್ಯವಾದ ಒಂದು ಸಾಮಾಜಿಕ ಅಭಿವೃದ್ಧಿ ಕ್ರಮವಾಗುತ್ತದೆ.

ಆರೋಗ್ಯ ವಿಮಾ ಯೋಜನೆಗಳ ವಿಚಾರವಾಗಿ ಇನ್ನಷ್ಟು ಮುಂದೆ ಸಾಗಲು ಸರ್ಕಾರಕ್ಕೆ ಅವಕಾಶಗಳಿವೆ. ಬಹುತೇಕ ಯೋಜನೆಗಳು ಆಸ್ಪತ್ರೆಯಲ್ಲಿ ದಾಖಲಾದ ನಂತರದ ಹಾಗೂ ಅದಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಮಾತ್ರ ಅನ್ವಯವಾಗುತ್ತವೆ. ಈ ಮಾತಿಗೆ ಸಿಜಿಎಚ್‌ಎಸ್ ಒಂದು ಅಪವಾದ ಆಗಿರಬಹುದು. ಬಹುತೇಕ ಯೋಜನೆಗಳು ಹೊರರೋಗಿ ವಿಭಾಗದ (ಒಪಿಡಿ) ವೆಚ್ಚಗಳನ್ನು ಒಳಗೊಳ್ಳುವುದಿಲ್ಲ. ಹಿರಿಯ ನಾಗರಿಕರು ಆರೋಗ್ಯ ಸೇವೆಗಳ ವಿಚಾರವಾಗಿ ಮಾಡುವ ವೆಚ್ಚಗಳಲ್ಲಿ ಶೇ 50ರಿಂದ ಶೇ 80ರಷ್ಟು ಭಾಗವು ಹೊರರೋಗಿ ವಿಭಾಗಗಳಲ್ಲಿ, ವಿವಿಧ ಪರೀಕ್ಷೆಗಳಿಗಾಗಿ ಮತ್ತು ಔಷಧಗಳ ಖರೀದಿಗಾಗಿ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ. ಈ ಮೊತ್ತವನ್ನು ಭರಿಸುವುದು ಹಲವರಿಗೆ ಕಷ್ಟವಾಗುತ್ತಿದೆ. ಈಗ ಚಾಲ್ತಿಯಲ್ಲಿ ಇರುವ ಆರೋಗ್ಯ ವಿಮಾ ಯೋಜನೆಗಳ ವ್ಯಾಪ್ತಿಯನ್ನು ಈ ವೆಚ್ಚಗಳಿಗೆ ವಿಸ್ತರಿಸುವ ಅಗತ್ಯ ಇದೆ. ಅಗತ್ಯ ಎದುರಾದರೆ, ಬೇರೆ ದೇಶಗಳಲ್ಲಿ ಬಹಳ ಚೆನ್ನಾಗಿ ನಡೆಯುತ್ತಿರುವ ಆರೋಗ್ಯ ವಿಮಾ ಯೋಜನೆಗಳಲ್ಲಿನ ಒಳ್ಳೆಯ ಅಂಶಗಳನ್ನು ಭಾರತದ ಸಂದರ್ಭಕ್ಕೆ ಹೊಂದಿಕೆಯಾಗುವಂತೆ ಅಳವಡಿಸಿಕೊಳ್ಳಬಹುದು. ಆಯುಷ್ಮಾನ್ ಭಾರತ ಯೋಜನೆಯ ಅನುಷ್ಠಾನದಲ್ಲಿನ ಸಮಸ್ಯೆಗಳು, ಅಗತ್ಯ ಮೂಲಸೌಕರ್ಯಗಳ ಕೊರತೆ, ಭ್ರಷ್ಟಾಚಾರದ ಸಮಸ್ಯೆಯನ್ನು ಕೂಡ ನಿವಾರಿಸಬೇಕು. ಆಗ ಯೋಜನೆಯ ಪ್ರಯೋಜನವು ಹೆಚ್ಚು ಪರಿಣಾಮಕಾರಿಯಾಗಿ ಸಿಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.