ಧರ್ಮ, ದೇಶ, ಸಿದ್ಧಾಂತ ಅಥವಾ ಇನ್ನಾವುದೇ ನೆಪವನ್ನು ಇರಿಸಿಕೊಂಡು ಜನರ ಜೀವ ತೆಗೆಯುವುದು, ಆಸ್ತಿ ಧ್ವಂಸ ಮಾಡುವಂತಹ ಭಯ ಹುಟ್ಟಿಸುವ ಕೃತ್ಯಗಳು ಅಮಾನವೀಯ ಮತ್ತು ಹೇಯ. ಇಂತಹ ಕೃತ್ಯ ಎಸಗುವವರನ್ನು ಖಂಡಿಸಬೇಕು; ಅಂತಹ ಕೃತ್ಯಗಳು ಮತ್ತೆ ನಡೆಯದಂತೆ ನೋಡಿಕೊಳ್ಳಬೇಕು ಎಂಬುದು ಚರ್ಚಾಸ್ಪದ ವಿಷಯವೇನೂ ಅಲ್ಲ. ಆದರೆ, ನೂರಾರು ಜೀವಗಳಿಗೆ ಎರವಾದ, ಅಪಾರ ಆಸ್ತಿಯನ್ನು ನಾಶ ಮಾಡಿದ ಜೈಷ್ ಎ ಮೊಹಮ್ಮದ್ ಎಂಬ ಸಂಘಟನೆಯ ಮುಂದಾಳು ಮಸೂದ್ ಅಜರ್ನ ಕೈಕಾಲು ಕಟ್ಟಿಹಾಕುವ ಕೆಲಸಕ್ಕೆ ಸುಮಾರು ಎರಡು ದಶಕ ಬೇಕಾಯಿತು ಎಂಬುದೇ ವಿಷಾದದ ಸಂಗತಿ.

ಕೊನೆಗೂ ಈ ವಿಚಾರದಲ್ಲಿ ಭಾರತಕ್ಕೆ ರಾಜತಾಂತ್ರಿಕ ಗೆಲುವು ಸಿಕ್ಕಿದೆ. 2000ನೇ ಇಸವಿಯಲ್ಲಿ ಸ್ಥಾಪನೆಯಾದ, ಪಾಕಿಸ್ತಾನವನ್ನು ಕೇಂದ್ರ ನೆಲೆಯಾಗಿರಿಸಿಕೊಂಡ ಈ ಸಂಘಟನೆ ಭಾರತದಲ್ಲಿ ಎಸಗಿರುವ ವಿಧ್ವಂಸಕ ಕೃತ್ಯಗಳು ಒಂದೆರಡಲ್ಲ. 2001ರಲ್ಲಿ ಈ ಸಂಘಟನೆ ಭಾರತದ ಸಂಸತ್ತಿನ ಮೇಲೆಯೇ ದಾಳಿ ನಡೆಸಿತ್ತು. ಅದಾದ ಬಳಿಕ, ಕಾಶ್ಮೀರದಲ್ಲಿ ಮೊದಲ ಆತ್ಮಾಹುತಿ ದಾಳಿ ನಡೆಸಿದ ಅಪಖ್ಯಾತಿಯನ್ನೂ ಜೈಷ್ ಹೊತ್ತುಕೊಂಡಿದೆ.

ಉರಿ ಮತ್ತು ಪಠಾಣ್ಕೋಟ್ ಸೇನಾ ನೆಲೆಗಳ ಮೇಲಿನ ದಾಳಿ, ತೀರಾ ಇತ್ತೀಚೆಗೆ ಈ ವರ್ಷ ಫೆಬ್ರುವರಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಎರಗಿ 40 ಮಂದಿಯನ್ನು ಬಲಿ ಪಡೆದ ಕೃತ್ಯ ಜನರ ಮನಸ್ಸಿನಿಂದ ಮಾಸಿಲ್ಲ. ಮಸೂದ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ‘ಜಾಗತಿಕ ಉಗ್ರ’ ಹಣೆಪಟ್ಟಿ ಹಚ್ಚಬೇಕು ಎಂದು ಭಾರತ ಮೊದಲಿಗೆ ಕೋರಿಕೆ ಸಲ್ಲಿಸಿದ್ದು 2009ರಲ್ಲಿ.

ಭದ್ರತಾ ಮಂಡಳಿಯಲ್ಲಿ ಪರಮಾಧಿಕಾರ (ವಿಟೊ) ಹೊಂದಿರುವ ಕಾಯಂ ಸದಸ್ಯ ರಾಷ್ಟ್ರ ಚೀನಾ ಇದಕ್ಕೆ ತಡೆ ಒಡ್ಡಿತು. ಕಾಯಂ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಜತೆಗೂಡಿ 2016ರಲ್ಲಿ ಮತ್ತೊಮ್ಮೆ ಭಾರತ ಇದೇ ಮನವಿ ಮಾಡಿತು. 2017ರಲ್ಲಿ ಮತ್ತೊಮ್ಮೆ ಇದೇ ಪ್ರಯತ್ನ ಮಾಡಲಾಯಿತು. ಈ ಎಲ್ಲ ಸಂದರ್ಭದಲ್ಲಿಯೂ ಉಗ್ರನೊಬ್ಬನನ್ನು ಉಗ್ರ ಎಂದು ಘೋಷಿಸಲು ದೊಡ್ಡ ತೊಡಕಾಗಿ ನಿಂತದ್ದು ಚೀನಾ. ಭಯೋತ್ಪಾದನೆ ವಿಚಾರದಲ್ಲಿ ಯಾವ ರಾಜಿಯೂ ಇಲ್ಲ ಎಂಬ ಘೋಷಿತ ನಿಲುವಿನ ಚೀನಾ ಹೀಗೆ ಮಾಡುವುದಕ್ಕೆ ಇರುವುದು ಸ್ವಾರ್ಥಪರ ಕಾರಣಗಳು ಮಾತ್ರ– ಪ್ರತಿಸ್ಪರ್ಧಿಯಾಗಿಬೆಳೆಯುತ್ತಿರುವ ಭಾರತದ ಮೇಲೆ ಒತ್ತಡ ಹೇರಬೇಕು; ಜಾಗತಿಕ ಸೂಪರ್ ಪವರ್ ಎಂದು ಉಬ್ಬುತ್ತಿರುವ ಅಮೆರಿಕಕ್ಕೆ ತಾಕತ್ತು ತೋರಿಸಬೇಕು; ಪಾಕಿಸ್ತಾನದ ಜತೆಗೆ ಹೊಂದಿರುವ ವ್ಯಾಪಾರ, ಮಿಲಿಟರಿ ಸಂಬಂಧಕ್ಕೆ ಧಕ್ಕೆ ಆಗಬಾರದು ಎಂಬುದು ಈ ಕಾರಣಗಳು. ಕಾರಣ ಯಾವುದೇ ಇರಲಿ, ಉಗ್ರನೊಬ್ಬನ ಕ್ರೌರ್ಯಕ್ಕೆ ಪೂರಕವಾದ ನಿಲುವು ತಳೆಯುವುದು ಆ ಕ್ರೌರ್ಯದಷ್ಟೇ ಹೇಯವಲ್ಲವೇ?

ಈಗ, ಎಲ್ಲ ತೊಡಕುಗಳನ್ನೂ ಮೀರಿ ಅಜರ್ಗೆ ಅಂಕುಶ ಹಾಕಲಾಗಿದೆ.ಪಾಕಿಸ್ತಾನವನ್ನು ನೆಲೆಯಾಗಿರಿಸಿಕೊಂಡು ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವ ಗುಂಪುಗಳಿಗೆ ಜಾಗತಿಕ ಮಟ್ಟದಲ್ಲಿ ನಿರ್ಬಂಧ ಹೇರುವಲ್ಲಿ ಭಾರತಕ್ಕೆ ಹಿಂದಿನಿಂದಲೂ ಗೆಲುವು ದಕ್ಕಿದೆ. ಮುಂಬೈ ಮೇಲೆ 2008ರಲ್ಲಿ ಹೇಯ ದಾಳಿ ನಡೆಸಿದ್ದ ಲಷ್ಕರ್ ಎ ತಯಬಾ ಮುಖ್ಯಸ್ಥ ಹಫೀಜ್ ಸಯೀದ್ಗೆ ಆ ದಾಳಿ ನಡೆದು ಕೆಲ ಸಮಯದಲ್ಲಿಯೇ ‘ಜಾಗತಿಕ ಉಗ್ರ’ ಹಣೆಪಟ್ಟಿ ಹಚ್ಚುವಲ್ಲಿ ಭಾರತ ಯಶಸ್ವಿಯಾಗಿತ್ತು. ‘ಜಾಗತಿಕ ಉಗ್ರ’ ಹಣೆಪಟ್ಟಿ ಎಂದರೆ, ಆ ವ್ಯಕ್ತಿಗೆ ಸೇರಿದ ಎಲ್ಲ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ಪ್ರಯಾಣ ನಿರ್ಬಂಧ ಹೇರಬೇಕು ಮತ್ತು ಶಸ್ತ್ರಾಸ್ತ್ರ ಮಾರಾಟ ಹಾಗೂ ಖರೀದಿಗೆ ಅವಕಾಶವೇ ಇಲ್ಲದಂತೆ ನೋಡಿಕೊಳ್ಳಬೇಕು. ಆದರೆ, ಸಯೀದ್ ಇಂದಿಗೂ ಪಾಕಿಸ್ತಾನದಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿದ್ದಾನೆ.

ರಾಜಕೀಯ ಪಕ್ಷ ಕಟ್ಟಿದ್ದಾನೆ, ಎನ್ಜಿಒಗಳನ್ನು ನಡೆಸುತ್ತಿದ್ದಾನೆ. ಬೇರೆ ಬೇರೆ ಉಗ್ರಗಾಮಿ ಗುಂಪುಗಳ ಮೂಲಕ ತನಗೆ ಬೇಕೆನಿಸಿದ ಕೃತ್ಯಗಳನ್ನು ಎಸಗುತ್ತಿದ್ದಾನೆ. ಹಾಗಾದರೆ, ‘ಜಾಗತಿಕ ಉಗ್ರ’ ಹಣೆಪಟ್ಟಿಗೆ ಇರುವ ಅರ್ಥವಾದರೂ ಏನು? ಮಸೂದ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಪಾಕಿಸ್ತಾನ ಸರ್ಕಾರ ಈಗಾಗಲೇ ಆದೇಶಿಸಿದೆ. ಅದು ಜಾರಿಗೆ ಬರಲಿ. ಆತ ಬೇರೆಲ್ಲಿಗೂ ಹೋಗಲು ಸಾಧ್ಯವಾಗದಿರಲಿ. ಜನರನ್ನು ಕೊಲ್ಲುವ ಆಯುಧಗಳನ್ನು ಆತ ಬೇರೆಯವರಿಗೆ ಮಾರಾಟ ಮಾಡುವುದು, ಇತರರಿಂದ ಖರೀದಿಸುವುದು ಸಾಧ್ಯವಾಗದಿರಲಿ. ಜಾಗತಿಕ ಉಗ್ರ ಎಂಬ ಹಣೆಪಟ್ಟಿ ನೆಪಮಾತ್ರಕ್ಕೆ ಇದ್ದು ಎಲ್ಲ ಅನಾಚಾರಗಳನ್ನು ನಡೆಸುವ ವ್ಯವಸ್ಥೆಯೊಂದು ಆತನ ಸುತ್ತ ಸೃಷ್ಟಿಯಾಗದಿರಲಿ. ಎಲ್ಲ ರೀತಿಯ ಅಮಾನವೀಯ ಕ್ರೌರ್ಯದ ಕೊನೆಯತ್ತ ಜಗತ್ತು ಸಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.