ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ವಿರುದ್ಧ ಅಮೆರಿಕದ ಶಾರ್ಟ್ಸೆಲ್ಲರ್ ಸಂಸ್ಥೆ ‘ಹಿಂಡನ್ಬರ್ಗ್ ರಿಸರ್ಚ್’ ಈಚೆಗೆ ಮಾಡಿರುವ ಆರೋಪಗಳು, ಗಂಭೀರ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳು ಕೂಡ ಎಷ್ಟು ದ್ವೇಷಮಯವಾಗಿ ಬದಲಾಗಿವೆ ಎಂಬುದನ್ನು ಒತ್ತಿಹೇಳುತ್ತಿವೆ. ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆ, ಬುಚ್ ಕುಟುಂಬ ಹಾಗೂ ಸೆಬಿ ಪರಸ್ಪರ ಹೇಳಿಕೆ, ಪ್ರತಿಹೇಳಿಕೆಗಳಲ್ಲಿ ತೊಡಗಿವೆ. ಈ ನಡುವೆ ಬಹಳ ಮುಖ್ಯವಾದ ವಾಸ್ತವವೊಂದನ್ನು ನಿರ್ಲಕ್ಷಿಸಲಾಗುತ್ತಿದೆ; ಭಾರತದಂತಹ ಆರ್ಥಿಕ ಶಕ್ತಿಗಳ ಪಾಲಿಗೆ ನಿಯಂತ್ರಣ ಸಂಸ್ಥೆಗಳ ಹಾಗೂ ಆ ಸಂಸ್ಥೆಗಳನ್ನು ಮುನ್ನಡೆಸುವ ಸ್ಥಾನಗಳಲ್ಲಿ ಇರುವವರ ವಿಶ್ವಾಸಾರ್ಹತೆಯು ಅತ್ಯಂತ ಮುಖ್ಯವಾಗುತ್ತದೆ. ಅದಾನಿ ಸಮೂಹದ ಜೊತೆ ನಂಟು ಹೊಂದಿರುವ ವಿದೇಶಿ ಹೂಡಿಕೆ ನಿಧಿಗಳಲ್ಲಿ ಮಾಧವಿ ಮತ್ತು ಅವರ ಪತಿ ಧವಳ್ ಬುಚ್ ಅವರು ಪಾಲು ಹೊಂದಿರುವ ಕಾರಣದಿಂದಾಗಿ, ಅದಾನಿ ಸಮೂಹದ ವಿರುದ್ಧ ಕ್ರಮ ಕೈಗೊಳ್ಳಲು ಸೆಬಿ ಹಿಂದೇಟು ಹಾಕುತ್ತಿರಬಹುದು ಎಂದು ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಆರೋಪಿಸಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬುಚ್ ದಂಪತಿ, ಐಐಎಫ್ಎಲ್ ವೆಲ್ತ್ ಮ್ಯಾನೇಜ್ಮೆಂಟ್ ಕಂಪನಿ ಆರಂಭಿಸಿದ ನಿಧಿಗಳಲ್ಲಿ, ಸಿಂಗಪುರ ಮೂಲದ ವ್ಯಕ್ತಿಗಳಾಗಿ ಹೂಡಿಕೆ ಮಾಡಿದ್ದುದು ನಿಜ ಎಂದು ಹೇಳಿದ್ದಾರೆ. ಅಲ್ಲದೆ, ಮಾಧವಿ ಅವರು 2017ರಲ್ಲಿ ಸೆಬಿಯ ಪೂರ್ಣಾವಧಿ ನಿರ್ದೇಶಕಿ ಆಗುವುದಕ್ಕೂ ಎರಡು ವರ್ಷ ಮೊದಲೇ ಈ ಹೂಡಿಕೆ ಮಾಡಲಾಗಿತ್ತು ಎಂದೂ ಕುಟುಂಬ ಹೇಳಿದೆ. ಅದಾನಿ ಎಂಟರ್ಪ್ರೈಸಸ್ ಕಂಪನಿಯ ನಿರ್ದೇಶಕ ಆಗಿ ಹಿಂದೆ ಸೇವೆ ಸಲ್ಲಿಸಿರುವ ಅನಿಲ್ ಅಹುಜಾ ಅವರ ಸಲಹೆ ಆಧರಿಸಿ ಈ ಹೂಡಿಕೆ ಮಾಡಲಾಗಿದೆ.

ಪ್ರತ್ಯೇಕವಾದ ಹೇಳಿಕೆಗಳನ್ನು ಹೊರಡಿಸಿರುವ ಬುಚ್ ದಂಪತಿ ಹಾಗೂ ಸೆಬಿ, ಷೇರುಪೇಟೆ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಧ್ಯಕ್ಷೆ ಮಾಧವಿ ಅವರು ತಮ್ಮ ಹೂಡಿಕೆಗಳ ಬಗ್ಗೆ ಕಾಲಕಾಲಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿವೆ. ಬುಚ್ ಅಥವಾ ಇತರ ಯಾವುದೇ ಹಿರಿಯ ಅಧಿಕಾರಿಯು ಹಿತಾಸಕ್ತಿ ಸಂಘರ್ಷಕ್ಕೆ ನೇರವಾಗಿ ಕಾರಣವಾಗಬಹುದಾದ ವಿಷಯಗಳಲ್ಲಿ ಭಾಗಿಯಾಗಿಲ್ಲ ಎಂದೂ ಸ್ಪಷ್ಟನೆ ನೀಡಲಾಗಿದೆ. ಸೆಬಿ ಅಧ್ಯಕ್ಷರು ರಿಯಲ್ ಎಸ್ಟೇಟ್ ಹೂಡಿಕೆ ಟ್ರಸ್ಟ್ಗಳಿಗೆ (ಆರ್ಇಐಟಿ) ಹೆಚ್ಚು ಆದ್ಯತೆ ನೀಡುತ್ತಿದ್ದಾರೆ, ಇದಕ್ಕೆ ಕಾರಣ ಹೂಡಿಕೆ ನಿರ್ವಹಣಾ ಕಂಪನಿ ಬ್ಲ್ಯಾಕ್ಸ್ಟೋನ್ ಎಂದು ಹಿಂಡನ್ಬರ್ಗ್ ಆರೋಪಿಸಿದೆ. ಧವಳ್ ಬುಚ್ ಅವರು ಈ ಕಂಪನಿಯ ಜೊತೆ ಸಂಬಂಧ ಹೊಂದಿದ್ದಾರೆ. ಆದರೆ ಈ ಆರೋಪದ ಬಗ್ಗೆ ಆರ್ಇಐಟಿ ಉದ್ಯಮದ ಪ್ರತಿನಿಧಿಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಮಾಧವಿ ಅವರ ಪರವಾಗಿ ಹೇಳಿಕೆ ನೀಡಿದ್ದಾರೆ. ಇಲ್ಲಿ ಸಂದೇಹದ ಲಾಭವನ್ನು ಮಾಧವಿ ಅವರಿಗೆ ಹಾಗೂ ಸೆಬಿಗೆ ನೀಡಬೇಕು. ತಮ್ಮ ಹೂಡಿಕೆಗಳ ವಿಚಾರದಲ್ಲಿ ಮಾಧವಿ ಅವರು ಪಾರದರ್ಶಕವಾಗಿ ನಡೆದುಕೊಂಡಿದ್ದಾರೆ, ಹಿತಾಸಕ್ತಿಗಳ ಸಂಘರ್ಷವನ್ನು ತಡೆಯಲು ಸೆಬಿಯಲ್ಲಿ ಸೂಕ್ತವಾದ ವ್ಯವಸ್ಥೆ ಇದೆ ಎಂಬುದನ್ನು ಪರಿಗಣಿಸಬೇಕು. ಇವುಗಳಿಗಿಂತ ಹೆಚ್ಚಾಗಿ, ಅದಾನಿ ಸಮೂಹದ ವಿರುದ್ಧ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಈ ಮೊದಲು ಮಾಡಿದ್ದ ಆರೋಪಗಳ ವಿಚಾರವಾಗಿ ಸೆಬಿ ನೀಡಿದ ಹೇಳಿಕೆಗಳನ್ನು ನಂಬದೇ ಇರಲು ಕಾರಣಗಳು ಇಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಹೇಳಿದೆ.

ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಯು ಬುಚ್ ವಿರುದ್ಧದ ತನ್ನ ವರದಿಯನ್ನು ಬಹಿರಂಗಪಡಿಸುವುದಕ್ಕೂ ಮೊದಲು, ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿತ್ತು. ಭಾರತದ ಬಗ್ಗೆ ದೊಡ್ಡದಾದ ಯಾವುದೋ ಒಂದು ಸಂಗತಿಯನ್ನು ಹೇಳಲಿರುವುದಾಗಿ ತಿಳಿಸಿತ್ತು. ಅಂದರೆ, ಬೇರೆ ಏನೇ ಮಾಡುವುದಕ್ಕೂ ಮೊದಲು ವಿವಾದಾತ್ಮಕ ಚರ್ಚೆಯೊಂದನ್ನು ಹುಟ್ಟುಹಾಕುವ ಉದ್ದೇಶ ತನಗಿದೆ ಎಂಬುದನ್ನು ಅದು ಹೇಳಿದಂತಿತ್ತು. ಈ ವರ್ಷದ ಆರಂಭದಲ್ಲಿ ಹಿಂಡನ್ಬರ್ಗ್ ರಿಸರ್ಚ್ ಸಂಸ್ಥೆಗೆ ಸೆಬಿ ಷೋಕಾಸ್ ನೋಟಿಸ್ ಜಾರಿ ಮಾಡಿತ್ತು. ಈ ರೀತಿ ಮಾಡಿದ್ದು ತನ್ನ ಅಹಂಭಾವಕ್ಕೆ ಪೆಟ್ಟು ಎಂದು ಈ ಶಾರ್ಟ್ಸೆಲ್ಲರ್ ಭಾವಿಸಿರಬಹುದು. ಅದೇನೇ ಇದ್ದರೂ ಸೃಷ್ಟಿಯಾಗುವ ಸಂಕಥನ ಬಹಳಷ್ಟನ್ನು ತೀರ್ಮಾನಿಸುತ್ತದೆ. ಇದು ವಿರೋಧ ಪಕ್ಷಗಳಿಗೆ ಹಾಗೂ ಸರ್ಕಾರದ ಟೀಕಾಕಾರರಿಗೆ ದೊಡ್ಡ ವಿಷಯವಾಗಿ ಒದಗಿಬಂದಿದೆ. ಈ ವಿಚಾರವಾಗಿ ಕೇಂದ್ರ ಹಣಕಾಸು ಸಚಿವಾಲಯವು ಅಸಹಜವಾದ ಮೌನವೊಂದನ್ನು ಕಾಯ್ದುಕೊಂಡಿದೆ. ಆದರೆ, ಸ್ವತಂತ್ರವಾದ ತನಿಖೆಯೊಂದನ್ನು ನಡೆಸಲಾಗುವುದು ಎಂದು ಸರ್ಕಾರ ಹಾಗೂ ಸೆಬಿ ಹೇಳುವುದು ವಿವೇಕದ ನಡೆಯಾಗುತ್ತದೆ. ಭಾರತವು ವಿಶ್ವದ ಅತ್ಯಂತ ಪ್ರಮುಖ ಹೂಡಿಕೆ ತಾಣಗಳಲ್ಲಿ ಒಂದು. ಜಾಗತಿಕ ಬ್ಯಾಂಕ್ಗಳು, ನಿಧಿಗಳು, ಶತಕೋಟ್ಯಧೀಶರು ತಮ್ಮ ಹಣವನ್ನು ಎಲ್ಲಿ ತೊಡಗಿಸಬೇಕು ಎಂಬುದನ್ನು ತೀರ್ಮಾನಿಸುವ ಮೊದಲು, ಆ ದೇಶದ ನಿಯಂತ್ರಣ ವ್ಯವಸ್ಥೆಯ ತಾಕತ್ತಿನ ಬಗ್ಗೆ ಬಹಳಷ್ಟು ಗಮನ ನೀಡುತ್ತಾರೆ ಎಂಬುದನ್ನು ನಾವು ಮರೆಯಲಾಗದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.