ರಾಜ್ಯಪಾಲರ ಪ್ರತಿಕೂಲ ನಡವಳಿಕೆಯನ್ನು ತಡೆಯುವುದಕ್ಕಾಗಿ ತಮಿಳುನಾಡು, ಪಂಜಾಬ್ ಮತ್ತು ತೆಲಂಗಾಣ ಸರ್ಕಾರಗಳು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಬಳಿಕ ಈಗ ಕೇರಳ ಸರ್ಕಾರವೂ ಅದೇ ಜಾಡು ಹಿಡಿದಿದೆ. ರಾಜ್ಯದ ಶಾಸನಸಭೆಯು ಅಂಗೀಕರಿಸಿದ ಹಲವು ಮಸೂದೆಗಳಿಗೆ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಅಂಕಿತ ಹಾಕಿಲ್ಲ. ಸುದೀರ್ಘ ಕಾಲದಿಂದ ಮತ್ತು ಅನಿರ್ದಿಷ್ಟಾವಧಿಗೆ ಮಸೂದೆಗೆ ಅಂಗೀಕಾರ ನೀಡದೇ ಇರುವ ಮೂಲಕ ಅವರು ತಮ್ಮ ಸಾಂವಿಧಾನಿಕ ಅಧಿಕಾರ ಮತ್ತು ಕರ್ತವ್ಯಗಳಿಂದ ವಿಮುಖರಾಗಿದ್ದಾರೆ ಎಂದು ಕೇರಳ ಸರ್ಕಾರದ ಅರ್ಜಿಯಲ್ಲಿ ಹೇಳಲಾಗಿದೆ. ರಾಜ್ಯಪಾಲರ ಬಳಿ ಬಾಕಿ ಇರುವ ಮಸೂದೆಗಳನ್ನು ತಕ್ಷಣ ವಿಲೇವಾರಿ ಮಾಡಬೇಕು ಎಂದು ಅವರಿಗೆ ನಿರ್ದೇಶನ ನೀಡಬೇಕು ಎಂದು ಕೇರಳ ಸರ್ಕಾರವು ಸುಪ್ರೀಂ ಕೋರ್ಟನ್ನು ಕೋರಿದೆ. ಕಾನೂನಿನ ಆಳ್ವಿಕೆ ಮತ್ತು ಪ್ರಜಾಸತ್ತಾತ್ಮಕ ಆಡಳಿತ ಸೇರಿದಂತೆ ಸಂವಿಧಾನದ ಮೂಲ ತಳಹದಿಯನ್ನೇ ಸೋಲಿಸುವ ರೀತಿಯಲ್ಲಿ ರಾಜ್ಯಪಾಲರ ನಡವಳಿಕೆ ಇದೆ ಎಂದು ಕೇರಳ ಸರ್ಕಾರ ಹೇಳಿದೆ. ರಾಜ್ಯಪಾಲರ ನಡವಳಿಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿರುವ ಇತರ ರಾಜ್ಯಗಳು ಕೂಡ ಇಂತಹವೇ ಅಂಶಗಳನ್ನು ಉಲ್ಲೇಖಿಸಿವೆ. ‘ನಿಷ್ಕ್ರಿಯತೆ, ಲೋಪ, ವಿಳಂಬ ಮತ್ತು ಸಾಂವಿಧಾನಿಕ ಕರ್ತವ್ಯ ನಿರ್ವಹಿಸುವಲ್ಲಿ ಆಗಿರುವ ವೈಫಲ್ಯ’ವು ಕಾನೂನಿಗೆ ವಿರುದ್ಧವಾಗಿವೆ ಎಂದು ಘೋಷಿಸಬೇಕು ಎಂದು ತಮಿಳುನಾಡು ಸರ್ಕಾರ ಸಲ್ಲಿಸಿದ ಅರ್ಜಿಯಲ್ಲಿ ಕೋರಲಾಗಿದೆ.

ಕೇರಳ ಶಾಸನಸಭೆಯು ಅಂಗೀಕರಿಸಿದ ಕೆಲವು ಮಸೂದೆಗಳು ಎರಡಕ್ಕೂ ಹೆಚ್ಚು ವರ್ಷಗಳಿಂದ ರಾಜ್ಯಪಾಲರ ಕೈಯಲ್ಲಿ ಬಾಕಿ ಇವೆ. ಇಷ್ಟೊಂದು ದೀರ್ಘ ಅವಧಿಗೆ ಬಾಕಿ ಉಳಿಸಿಕೊಳ್ಳಲು ತಕ್ಕದಾದ ಕಾರಣಗಳು ಇರಲು ಸಾಧ್ಯವಿಲ್ಲ. ಮಸೂದೆಗಳ ಕುರಿತಂತೆ ರಾಜ್ಯಪಾಲರು ಸ್ಪಷ್ಟೀಕರಣಗಳನ್ನು ಕೇಳಬಹುದು, ಶಾಸನಸಭೆಗೆ ಹಿಂದಿರುಗಿಸಬಹುದುಅಥವಾ ರಾಷ್ಟ್ರಪತಿಯವರಿಗೂ ಸಲ್ಲಿಸಬಹುದು. ಅದರ ಬದಲಿಗೆ ಮಸೂದೆಗಳನ್ನು ಸುಮ್ಮನೆ ತಮ್ಮ ಬಳಿ ಇರಿಸಿಕೊಂಡರೆ ಉದ್ದೇಶಪೂರ್ವಕವಾಗಿ ತೊಂದರೆ ನೀಡುತ್ತಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ರಾಜ್ಯಪಾಲರ ಈ ರೀತಿಯ ನಡವಳಿಕೆಯು ಶಾಸನಸಭೆಗೆ ಮಾಡುವ ಅವಮಾನ; ಜೊತೆಗೆ, ಇದು ಚುನಾಯಿತ ಸರ್ಕಾರದ ಕಾರ್ಯನಿರ್ವಹಣೆಗೆ ಅಡ್ಡಿ ಮಾತ್ರವಲ್ಲದೆ, ಆಡಳಿತದಲ್ಲಿ ಹಸ್ತಕ್ಷೇಪವೂ ಹೌದು. ಸಂವಿಧಾನದ ರಕ್ಷಣೆಯು ರಾಜ್ಯಪಾಲರ ಹೊಣೆಗಾರಿಕೆ. ಆದರೆ, ಸರ್ಕಾರಕ್ಕೆ ತೊಂದರೆ ಕೊಡುವ ಮೂಲಕ ಈ ಹೊಣೆಗಾರಿಕೆಯಿಂದ ಅವರು ಪಲಾಯನ ಮಾಡುತ್ತಿದ್ದಾರೆ. ಮಸೂದೆಗೆ ಅಂಕಿತ ಹಾಕದೇ ಇರುವ ಮೂಲಕ ಮಾತ್ರವಲ್ಲ ಇತರ ವಿವಿಧ ವಿಧಾನಗಳ ಮೂಲಕವೂ ಕಾನೂನಿಗೆ ಸಮ್ಮತವಲ್ಲದ ರೀತಿಯ ವರ್ತನೆಯನ್ನು ಕಾಣಬಹುದು. ವಿವಿಧ ವಿಚಾರಗಳ ಮೇಲೆ ಸರ್ಕಾರದ ನಿಲುವಿಗೆ ತದ್ವಿರುದ್ಧದ ನಿಲುವನ್ನು ರಾಜ್ಯಪಾಲರು ಬಹಿರಂಗವಾಗಿ ತಳೆಯುತ್ತಿದ್ದಾರೆ. ಇದು ಅನಗತ್ಯವಾದುದು. ಪಂಜಾಬ್ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು, ರಾಜ್ಯಪಾಲರು ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳಲ್ಲ ಎಂಬುದನ್ನು ಮರೆಯಬಾರದು ಎಂದು ಕಟುವಾಗಿಯೇ ಹೇಳಿದೆ. ರಾಜ್ಯಪಾಲರು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದಿರುವ ಕೋರ್ಟ್, ಶಾಸನಸಭೆಯು ಅಂಗೀಕರಿಸಿದ ಮಸೂದೆಗಳ ಕುರಿತಂತೆ ಪಂಜಾಬ್ ರಾಜ್ಯಪಾಲರು ಕೈಗೊಂಡ ಕ್ರಮಗಳೇನು ಎಂಬ ಮಾಹಿತಿ ನೀಡುವಂತೆ ಸಾಲಿಸಿಟರ್ ಜನರಲ್ಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯಗಳು ರಾಜ್ಯ ಸರ್ಕಾರಗಳ ಕಳವಳಗಳಿಗೆ ಪೂರಕವಾಗಿಯೇ ಇವೆ ಎಂಬುದು ಗಮನಾರ್ಹ.

ರಾಜ್ಯಪಾಲರ ಈ ರೀತಿಯ ನಡವಳಿಕೆ ಕಂಡುಬಂದಿರುವುದು ಬಿಜೆಪಿ ವಿರೋಧಿ ಪಕ್ಷಗಳ ನೇತೃತ್ವದ ಸರ್ಕಾರ ಇರುವ ರಾಜ್ಯಗಳಲ್ಲಿ ಮಾತ್ರ ಎಂಬುದು ಗಮನಾರ್ಹ. ಈ ಅಸಹಕಾರವು ರಾಜಕೀಯ ಸ್ವರೂಪದ್ದು ಎಂಬುದನ್ನು ಇದು ಸೂಚಿಸುತ್ತದೆ. ರಾಜ್ಯಪಾಲರು ರಬ್ಬರ್ ಸ್ಟ್ಯಾಂಪ್ ಆಗಿರಬೇಕಾಗಿಲ್ಲ. ಹಾಗೆಂದು ಅವರು ಸೂಪರ್ ಸರ್ಕಾರವಾಗಿ ವರ್ತಿಸುವುದೂ ಸರಿಯಲ್ಲ. ನಿಜವಾದ ಅಧಿಕಾರವನ್ನು ಹೊಂದಿರುವ ಚುನಾಯಿತ ಸರ್ಕಾರಗಳು ಮತ್ತು ಶಾಸನಸಭೆಗಳ ಹಕ್ಕುಗಳು ಹಾಗೂ ಅಧಿಕಾರಕ್ಕೆ ರಾಜ್ಯಪಾಲರು ಗೌರವ ಕೊಡಲೇಬೇಕು. ತೆಲಂಗಾಣ ಸರ್ಕಾರವು ಸುಪ್ರೀಂ ಕೋರ್ಟ್ಗೆ ಈ ವರ್ಷದ ಆರಂಭದಲ್ಲಿ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಮಸೂದೆಗಳನ್ನು ‘ಸಾಧ್ಯವಾದಷ್ಟು ಬೇಗ’ ವಿಲೇವಾರಿ ಮಾಡಬೇಕು ಎಂಬ ಸಂವಿಧಾನದ 200ನೇ ವಿಧಿಗೆ ರಾಜ್ಯಪಾಲರು ಗೌರವ ಕೊಡಬೇಕು ಎಂದು ಹೇಳಿತ್ತು. ಸಂವಿಧಾನದ 200ನೇ ವಿಧಿಯಲ್ಲಿ ಇರುವ ‘ಸಾಧ್ಯವಾದಷ್ಟು ಬೇಗ’ ಎಂಬುದರ ಅರ್ಥ ‘ಆದಷ್ಟು ಬೇಗ’ ಎಂದೇ ಆಗಿದೆ. ಆದರೆ, ಸಂವಿಧಾನವು ನಿರ್ದಿಷ್ಟ ಕಾಲಮಿತಿಯನ್ನು ನಿಗದಿ ಮಾಡದಿರುವುದನ್ನು ರಾಜ್ಯಪಾಲರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ತಮ್ಮ ಸಾಂವಿಧಾನಿಕ ಕರ್ತವ್ಯದಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ರಾಜ್ಯಪಾಲರು ರಾಷ್ಟ್ರಪತಿಯವರ ಪ್ರತಿನಿಧಿಯಾಗಿ ರಾಜ್ಯಗಳಲ್ಲಿ ಇರುತ್ತಾರೆಯೇ ಹೊರತು ಕೇಂದ್ರ ಸರ್ಕಾರದ ರಾಜಕೀಯ ಏಜೆಂಟರಾಗಿ ಅಲ್ಲ. ಇದನ್ನು ಅವರು ಸದಾ ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.