ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಬಸವಣ್ಣನ ಬೆಳಕಲ್ಲಿ ಪ್ರಜಾತಂತ್ರದ ಹೆಜ್ಜೆ

ವರ್ತಮಾನದ ರಾಜಕಾರಣದಲ್ಲಿ ಕಳೆದುಹೋಗಿರುವ ನೈತಿಕ ಬದ್ಧತೆಯ ಆತ್ಮಾವಲೋಕನಕ್ಕೆ ಬಸವೇಶ್ವರ ಜಯಂತಿಯ ಈ ಹೊತ್ತು ಪ್ರೇರಣೆಯಾಗಬಹುದೇ?
Published 21 ಏಪ್ರಿಲ್ 2023, 21:54 IST
Last Updated 21 ಏಪ್ರಿಲ್ 2023, 21:54 IST
ಅಕ್ಷರ ಗಾತ್ರ

ಡಾ. ಸರ್ಫ್ರಾಜ್ ಚಂದ್ರಗುತ್ತಿ

ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಹಬ್ಬ ಶುರುವಾಗಿದೆ. ಇದೇ ಹೊತ್ತಿನಲ್ಲಿ, ಕನ್ನಡದ ಮೊದಲ ಪ್ರಜಾಪ್ರಭುತ್ವವಾದಿ ಬಸವೇಶ್ವರ ಜಯಂತಿ ಬಂದಿರುವುದು ವಿಶೇಷ (ಏ. 23). ಈ ಕಾರಣಕ್ಕೆ, ಒಂದಿಷ್ಟು ವಿಚಾರಗಳನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕಾದುದು ಅಗತ್ಯ.

ಕ್ರಿ.ಪೂ. 508ರ ಹೊತ್ತಿಗೆ ಅಥೆನ್ಸಿನ ರೋಮ್‌ನಲ್ಲಿ ಪ್ರಜಾತಂತ್ರದ ಮೊದಲ ಪರಿಕಲ್ಪನೆ ಹುಟ್ಟಿತು ಎಂಬ ಅಭಿಪ್ರಾಯವಿದೆ. ಆದರೆ ಇದನ್ನು ನಿರಾಕರಿಸಿರುವ ಡಾ. ಬಿ.ಆರ್‌.ಅಂಬೇಡ್ಕರ್‌, ಬುದ್ಧ (ಕ್ರಿ.ಪೂ. 623) ಜಗತ್ತಿನ ಮೊದಲ ಪ್ರಜಾಪ್ರಭುತ್ವವಾದಿ, ಆತನ ಕಾಲದಲ್ಲಿಯೇ ಹಲವು ರಾಜ್ಯಗಳಲ್ಲಿ ಗುಪ್ತ ಮತದಾನ ಪದ್ಧತಿಯ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿತ್ತು ಎಂದಿದ್ದಾರೆ.

ಕರ್ನಾಟಕದ ಸಂದರ್ಭದಲ್ಲಂತೂ ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪವೇ ಮೊದಲ ಪಾರ್ಲಿಮೆಂಟ್ ಎಂಬ ಹೆಗ್ಗಳಿಕೆಯಿದೆ. ‘ಎಂಟುನೂರು ವರ್ಷಗಳ ಹಿಂದೆಯೇ ಪ್ರಜಾಪ್ರಭುತ್ವದ ಬೀಜ ಬಿತ್ತಿದವ ಬಸವಣ್ಣ’ ಎಂದು ಇಂಗ್ಲೆಂಡಿನ ಇತಿಹಾಸಕಾರ ರಿಚರ್ಡ್‌ ಬರ್ಟನ್ ಅವರು ಹೇಳಿರುವುದು ಸರಿಯಾಗಿಯೇ ಇದೆ. ಪ್ರಜಾಪ್ರಭುತ್ವ ಎಂಬ ಮಾತನ್ನು ಬಸವಣ್ಣ ಬಳಸದೇ ಇರಬಹುದು, ಆದರೆ ಮಾತು ಹಾಗೂ ಕೃತಿಗಳಿಂದ ಅವರು ಅಪ್ಪಟ ಪ್ರಜಾಪ್ರಭುತ್ವವಾದಿ, ಸಮಾಜವಾದಿ
ಯಾಗಿದ್ದರು. ಆದರೆ, ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದುಹೋಗಿದ್ದರೂ ನಮ್ಮ ಪ್ರಜಾತಾಂತ್ರಿಕ ವ್ಯವಸ್ಥೆ ಸುಧಾರಣೆಯತ್ತ ಸಾಗಿದೆಯೇ? ಈ ವ್ಯವಸ್ಥೆ ಇಂದು ಯಾವ ನೆಲೆಗೆ ಬಂದು ನಿಂತಿದೆ?!

ಪ್ರಜಾಪ್ರಭುತ್ವದ ಒಟ್ಟು ಕಾಳಜಿ ದುರ್ಬಲರು, ಕೆಳಗೆ ಬಿದ್ದವರ ಕೈಹಿಡಿದೆತ್ತುವುದು. ಬೆಳಗಾವಿಯಲ್ಲಿ 1924ರಲ್ಲಿ ನಡೆದ ಕಾಂಗ್ರೆಸ್‌ ಅಧಿವೇಶನದಲ್ಲಿ ಬಸವೇಶ್ವರರ ಸಾಮಾಜಿಕ ಕಾಳಜಿಯನ್ನು ಗಾಂಧೀಜಿ ಮೆಚ್ಚಿ ಮಾತನಾಡಿದ್ದರು. ಅತಿ ದುರ್ಬಲನಿಗೂ ಅತ್ಯಂತ ಬಲಶಾಲಿಗಿರುವಷ್ಟೇ ಅವಕಾಶ ಸಿಗಬೇಕು ಎಂದು ಹೇಳಿದ್ದರು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಆತನ ಹಕ್ಕು ಮತ್ತು ಸ್ವಾತಂತ್ರ್ಯವನ್ನು ದೊರಕಿಸಿಕೊಡು
ವುದೇ ಜನತಂತ್ರದ ಮೂಲ ಆಶಯ ಎನ್ನುವುದಾದರೆ, ತಮ್ಮ ಜೀವಿತದುದ್ದಕ್ಕೂ ಬಸವಣ್ಣ ಈ ಮಾರ್ಗವನ್ನೇ ಅನುಸರಿಸಿದ್ದರು. ಬಿಜ್ಜಳನ ಮಹಾಮಂತ್ರಿಯಾಗಿದ್ದ ಅವರು ಅನ್ನ ದಾಸೋಹಕ್ಕಾಗಿ ಭಂಡಾರದ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಬಂದಾಗ, ಮಂತ್ರಿಸ್ಥಾನವನ್ನು ತೊರೆದು, ಅನುಭವ ಮಂಟಪದಲ್ಲೊಂದು ಸಿಂಹಾಸನವನ್ನು ಸ್ಥಾಪಿಸಿ, ನಟುವ ಜಾತಿಯ ಅಲ್ಲಮನನ್ನು ಜನಸಾಮಾನ್ಯರ ಪ್ರತಿನಿಧಿಯಾಗಿ ಕೂಡಿಸಿದ್ದು ಸಾಮಾನ್ಯ ಸಂಗತಿಯಲ್ಲ.

ಮೇಲ್ವರ್ಗದಲ್ಲಿ ಹುಟ್ಟಿದ್ದರೂ ಅವರು ಪ್ರತಿಪಾದಿಸಿದ್ದು ಕೆಳವರ್ಗದವರ ಹಕ್ಕುಗಳನ್ನು. ಕೆಳಮಧ್ಯಮ ಜಾತಿಕುಲದವರಿಗೆ ಅವರು ಸಾಮಾಜಿಕ ಪ್ರಾತಿನಿಧ್ಯವನ್ನು ಕಲ್ಪಿಸಿದರು. ‘ಇವ ನಮ್ಮವ’ ಎಂಬುದು ಅನ್ಯಭಾವವಳಿದ ಸ್ಥಿತಿ. ಇಂದು ಎಲ್ಲ ಜಾತಿಯವರ ಮತಗಳನ್ನು ಪಡೆದು ಗೆದ್ದು ಬರುವ ಜನಪ್ರತಿನಿಧಿಗಳು, ಎಲ್ಲ ಜಾತಿ ಮತದವರಿಗೂ ‘ಜಗದ್ಗುರು’ ಎನಿಸಿರುವ ಮಠಾಧಿಪತಿಗಳಲ್ಲಿ ಹೆಚ್ಚಿನವರು ಅಂತಿಮವಾಗಿ ತಮ್ಮ ಜಾತಿಯ ಹಿತಾಸಕ್ತಿಯತ್ತ ಹೊರಳುವುದು ವರ್ತಮಾನದ ನಿರ್ಲಜ್ಜ ಬೆಳವಣಿಗೆಯಾಗಿದೆ. ಇಂತಹವರಲ್ಲಿ ಬಸವೇಶ್ವರರ ಈ ಅನ್ಯಭಾವ ಅಳಿದ ‘ಇವ ನಮ್ಮವ’ ಎಂಬ ಮನೋಧರ್ಮ ಅಗತ್ಯವಾಗಿ ಬೇಕಾಗಿದೆ.

ಸಹಪಂಕ್ತಿ ಭೋಜನ ಹಾಗೂ ಅಂತರ್ಜಾತಿ ವಿವಾಹಗಳಿಂದ ಜಾತಿವ್ಯವಸ್ಥೆ ನಾಶವಾಗುತ್ತದೆ ಎಂದು ಬಸವಣ್ಣನವರಂತೆ ಅಂಬೇಡ್ಕರ್ ಅವರೂ ನಂಬಿದ್ದರು. ಆದರೆ ಆಗಿದ್ದೇ ಬೇರೆ. 21ನೇ ಶತಮಾನದ ಅತ್ಯಂತ ಮುಂದುವರಿದಿರುವ ಈ ವಿಜ್ಞಾನ ಯುಗದಲ್ಲಿಯೂ ಎಲ್ಲ ಮತ ಮೌಢ್ಯಗಳೊಂದಿಗೆ ಜಾತಿ ಕೂಡಾ ಹೊಸ ಹೊಸ ರೂಪಾಂತರಗಳೊಂದಿಗೆ ಮುಂದೆ ನುಗ್ಗುತ್ತಿದೆ. ಬಸವೇಶ್ವರರ ಜಾತಿವಿನಾಶ ಚಳವಳಿಯಿಂದ ಆಕ್ರೋಶಗೊಂಡು ಅವರನ್ನು ಕೂಡಲಸಂಗಮದ ನೀರಿನಲ್ಲಿ ಮುಳುಗಿಸಿದ ಮನಃಸ್ಥಿತಿಯೇ ವರ್ತಮಾನದ ರಾಜಕೀಯ ವ್ಯವಸ್ಥೆಯಲ್ಲಿ ಮುನ್ನೆಲೆಗೆ ಬಂದಿರುವುದು ಆತಂಕದ ಸಂಗತಿಯಾಗಿದೆ.

ಬಸವೇಶ್ವರ ಜಯಂತಿಯ ಈ ಹೊತ್ತು ಅಗತ್ಯವಾಗಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಾಗಿದೆ. ಕರ್ನಾಟಕದಲ್ಲಿ ಎಲ್ಲ ಪಕ್ಷಗಳ ಅಭ್ಯರ್ಥಿಗಳ ಪಟ್ಟಿಯಲ್ಲಿ ಮಹಿಳೆಯರ ಪಾಲು ಶೇ 1ರಷ್ಟು ಮಾತ್ರ! ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮಹಿಳೆಯರು ಪ್ರಜೆಗಳಲ್ಲವೇ? ಅವರ ರಾಜಕೀಯ ಪ್ರಾತಿನಿಧ್ಯವನ್ನೇಕೆ ನಿರ್ಲಕ್ಷಿಸಲಾಗುತ್ತಿದೆ? ಬಸವಣ್ಣ ಸ್ಥಾಪಿಸಿದ್ದ ಹನ್ನೆರಡನೇ ಶತಮಾನದ ಅನುಭವ ಮಂಟಪದಲ್ಲಿ ನೂರಾ ಇಪ್ಪತ್ತೈದಕ್ಕೂ ಹೆಚ್ಚು ಮಹಿಳೆಯರಿದ್ದರು. ಇಪ್ಪತ್ತೊಂದನೇ ಶತಮಾನದಲ್ಲಿರುವ ನಾವು, ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳಲ್ಲಿ ಎಷ್ಟು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದೇವೆ?

ಬಸವಣ್ಣನವರ ಕಲ್ಯಾಣರಾಜ್ಯದ ಕಲ್ಪನೆಯಲ್ಲಿ ಜಾತಿಯನ್ನು ಮೀರಿ ನೀತಿಗೆ, ಧನವನ್ನು ವರ್ಜಿಸಿ ಗುಣಕ್ಕೆ ಆದ್ಯತೆ ನೀಡಲಾಗಿತ್ತು. ಇಂದಿನ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ ದಿಗ್ಭ್ರಮೆಯಾಗುತ್ತದೆ. ಕೋಟ್ಯಧಿಪತಿಯಲ್ಲದವ ಜನಪ್ರತಿನಿಧಿಯಾಗಲು ಸಾಧ್ಯವೇ ಎಂದು ಕೇಳುವಂತಾಗಿದೆ. ಯಾವ ಟೀಕೆ, ಆರೋಪಗಳಿಗೂ ಜಗ್ಗದೆ, ದೋಚುವುದೇ ನಮ್ಮ ಹಕ್ಕು ಎಂಬ ಸ್ಥಿತಿಗೆ ರಾಜಕೀಯ ಕ್ಷೇತ್ರ ಬಂದು ತಲುಪಿದೆ. ಹಂಗಿನ ಅರಮನೆ ತೊರೆದು ಬಂದ ಬಸವಣ್ಣ ತನ್ನ ಮೇಲಿನ ಆರೋಪಗಳಿಗೆ ನೀಡಿದ ಉತ್ತರ- ‘ಅನ್ನದೊಂದಗುಳನು, ಚಿನ್ನದೊಂದೊರೆಯನು, ಸೀರೆಯೊಂದೆಳೆಯನು, ಇಂದಿಂಗೆ ನಾಳಿಂಗೆ ಕುದಿದೆನಾದೊಡೆ ತಲೆದಂಡ...ತಲೆದಂಡ...ತಲೆದಂಡ...’ ವರ್ತಮಾನದ ರಾಜಕಾರಣ ಕಳೆದುಕೊಂಡಿರುವ ಇಂತಹ ನೈತಿಕ ಬದ್ಧತೆಯನ್ನು ಮರಳಿ ಕಾಣಲು ಸಾಧ್ಯವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT