ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜದಲ್ಲಿ ಲಕ್ಷ್ಮಿಯ ಪೂಜೆ ತುಂಬ ಜೋರಾಗಿ ನಡೆಯುತ್ತಿದೆ. ನಮ್ಮ ಸುಖವನ್ನು ‘ಲಕ್ಷ್ಮಿ’ಯ ಮೂಲಕವೇ ನಾವು ಈಗ ಅಳೆಯುತ್ತಿರುವುದರಿಂದ ಅವಳ ಪೂಜೆಗೆ ಹೆಚ್ಚಿನ ಪ್ರಾಶಸ್ತ್ಯ! ‘ಸರಸ್ವತಿ’ ಒಲಿಯುವುದು ಕೂಡ ‘ಲಕ್ಷ್ಮಿ’ಯ ಮೂಲಕವೇ ಎಂಬ ಎಣಿಕೆ ನಮ್ಮದಲ್ಲವೆ?

ನಮ್ಮ ಸಂಸ್ಕೃತಿಯಲ್ಲಿ ಶ್ರಾವಣದಲ್ಲಿಯ ವರಮಹಾಲಕ್ಷ್ಮೀವ್ರತ ಮತ್ತು ದೀಪಾವಳಿಯ ಸಮಯದಲ್ಲಿಯ ಲಕ್ಷ್ಮೀಪೂಜೆ – ಹೀಗೆ ಎರಡು ಸಂದರ್ಭಗಳಲ್ಲಿ ಲಕ್ಷ್ಮಿಯ ಪೂಜೆಗೆ ಪ್ರಧಾನವಾದ ಸ್ಥಾನ ದಕ್ಕಿದೆ. ಆದರೆ ನಾವು ನಮ್ಮ ಪರಂಪರೆಯ ಎಷ್ಟೋ ಆಚಾರ–ವಿಚಾರಗಳನ್ನು ತಪ್ಪಾಗಿಯೇ ತಿಳಿದುಕೊಂಡಿದ್ದೇವೆ. ಇದು ಲಕ್ಷ್ಮೀಪೂಜೆಯ ಸಂದರ್ಭದಲ್ಲೂ ಎದ್ದುಕಾಣುತ್ತದೆ. ‘ಲಕ್ಷ್ಮಿ’ಯನ್ನು ನಾವಿಂದು ಹಣ–ಸಂಪತ್ತು ಎಂಬುದಕ್ಕೆ ಸಮೀಕರಿಸಿಕೊಂಡಿದ್ದೇವೆ. ಹೀಗಾಗಿ ನಮಗೆ ಹೇರಳ ದುಡ್ಡು ಸಿಗಲಿ, ರಾಶಿ ಸಂಪತ್ತು ಒಲಿಯಲಿ – ಎಂಬ ಮಹಾದಾಸೆಯಿಂದಲೇ ಲಕ್ಷ್ಮಿಯ ಪೂಜೆಗೆ ತೊಡಗುತ್ತೇವೆ. ಹಣವನ್ನಾಗಲೀ ಐಶ್ವರ್ಯವನ್ನಾಗಲೀ ಬಯಸುವುದು ತಪ್ಪಲ್ಲ. ಆದರೆ ಲಕ್ಷ್ಮಿ ಎಂದರೆ ಇಷ್ಟೇ ಅಲ್ಲ. ಸುಖ ಎಂಬುದು ಕೇವಲ ದುಡ್ಡಿನಿಂದ ಮಾತ್ರವೇ ಸಿಗುವಂಥದ್ದೇ? ನಮ್ಮ ಪರಂಪರೆಯಲ್ಲಿ ಲಕ್ಷ್ಮೀತತ್ತ್ವಕ್ಕಿರುವ ವ್ಯಾಪ್ತಿ ತುಂಬ ದೊಡ್ಡದು. ನಮ್ಮನ್ನು ಸುಖವಾಗಿಯೂ ಸಂತೋಷವಾಗಿಯೂ ನೆಲೆನಿಲ್ಲಿಸಬಲ್ಲ ವಿವರಗಳೆಲ್ಲವೂ ಲಕ್ಷ್ಮಿಯ ಸ್ವರೂಪವೇ ಹೌದು. ಈ ವಿವರಗಳ ಸಂಕೇತವಾಗಷ್ಟೆ ಹಣವನ್ನು ಕಾಣಿಸಲಾಗಿದೆ. ಆದರೆ ನಮಗೆ ಇಂದು ಹಣವೊಂದು ಹೊರತು ಪಡಿಸಿ ಮತ್ತೇನೂ ಲಕ್ಷ್ಮಿಯ ಸ್ವರೂಪದಲ್ಲಿ ಕಾಣುತ್ತಿಲ್ಲ! ವಿದ್ಯೆ, ಬುದ್ಧಿ, ಧಾನ್ಯ, ಸಂತಾನ, ಧೈರ್ಯ, ಬಲ – ಹೀಗೆ ಜೀವನಸಮೃದ್ಧಿಗೆ ಕಾರಣವಾಗುವ ಎಲ್ಲವೂ ಲಕ್ಷ್ಮಿಯೇ ಎನ್ನುವುದನ್ನು ನಾವು ಮರೆಯುತ್ತಿದ್ದೇವೆ.

ನಮ್ಮ ಜೀವನದ ನೆಮ್ಮದಿಗೆ ಒದಗುವ ಎಲ್ಲ ಬಗೆಯ ಸಂಪತ್ತುಗಳನ್ನು ಪಡೆಯಬೇಕೆಂಬ ಉದ್ದೇಶದಿಂದ ಮಾಡುವ ಪೂಜೆಯೇ ವರಮಹಾಲಕ್ಷ್ಮೀವ್ರತ. ಒಬ್ಬೊಬ್ಬರಿಗೆ ಒಂದೊಂದು ಬಗೆಯ ಸಂಪತ್ತು ಬೇಕಿರುತ್ತದೆ. ಕೆಲವರಿಗೆ ವಿದ್ಯೆ, ಕೆಲವರಿಗೆ ದುಡ್ಡು, ಕೆಲವರಿಗೆ ಆರೋಗ್ಯ, ಕೆಲವರಿಗೆ ಉದ್ಯೋಗ, ಕೆಲವರಿಗೆ ಶಕ್ತಿ, ಕೆಲವರಿಗೆ ಮೋಕ್ಷ – ಹೀಗೆ. ನಮಗೆ ಏನು ಬೇಕು – ಎಂಬ ಅರಿವು ನಮ್ಮಲ್ಲಿ ಮೊದಲಿಗೆ ಮೂಡಬೇಕು. ಅದನ್ನು ಕೊಡುವಂತೆ ಆ ದೇವಿಯನ್ನು ಪ್ರಾರ್ಥಿಸಬೇಕು, ಪೂಜಿಸಬೇಕು. ಹೀಗಲ್ಲದೆ ಕೇವಲ ದುಡ್ಡಿನ ಆಸೆಗಾಗಿ ಮಾತ್ರವೇ ಲಕ್ಷ್ಮಿಯನ್ನು ಪೂಜಿಸಿದರೆ ಅದು ಸಾರ್ಥಕವೆನಿಸದು. ಅರಿವನ್ನು ಕೊಡಬಲ್ಲವಳೂ ಲಕ್ಷ್ಮಿಯೇ ಹೌದೆನ್ನಿ!

ವರಮಹಾಲಕ್ಷ್ಮಿಯ ಪೂಜೆಯನ್ನು ಮುಖ್ಯವಾಗಿ ಹೆಣ್ಣುಮಕ್ಕಳೇ ಆಚರಿಸುವುದು ರೂಢಿ. ಇದರಲ್ಲೂ ವಿಶೇಷತೆಯುಂಟು. ಸುಖ–ಬಲ–ನೆಮ್ಮದಿ ಮುಂತಾದ ಸುಖ–ಸಮೃದ್ಧಿಗಳನ್ನು ನಾವು ಶಕ್ತಿಸ್ವರೂಪದಲ್ಲಿಯೇ ಆರಾಧಿಸುತ್ತೇವೆ. ಶಕ್ತಿ ಎಂದರೆ ಸ್ತ್ರೀ ತಾನೆ?

ಪೂಜೆಯನ್ನು ಹೇಗೆ ಮಾಡಬೇಕು – ಎಂಬುದು ಕೂಡ ಬಹಳ ಮುಖ್ಯವಾದ ಸಂಗತಿ. ಭಕ್ತಿ–ಶ್ರದ್ಧೆಗಳೇ ಪ್ರಮುಖವಾದ ಸಲಕರಣೆಗಳು. ಹೀಗಲ್ಲದೆ ಸುಮ್ಮನೆ ಆಡಂಬರವಷ್ಟೆ ಪೂಜೆಯ ಅಂಗವಾದರೆ ಫಲವಿರದು. ಲಕ್ಷ್ಮಿಯು ವಿಷ್ಣುವಿನ ಪತ್ನಿ. ವಿಷ್ಣು ಎಂದರೆ ಎಲ್ಲೆಲ್ಲೂ ಇರುವ ತತ್ತ್ವ. ವಿಷ್ಣು ಎಲ್ಲೆಲ್ಲೂ ಇದ್ದಮೇಲೆ ಅವನ ಜೊತೆಯಲ್ಲಿ ಲಕ್ಷ್ಮಿಯೂ ಇರಬೇಕಷ್ಟೆ. ಜೀವನದ ಒಂದೊಂದು ವಿವರದಲ್ಲೂ ನಮ್ಮ ಸುಖ–ಸಂತೋಷಗಳು ನೆಲೆಯಾಗಿವೆ ಎಂದು ಅರಿತು, ಪೂಜೆಯಲ್ಲಿ ತೊಡಗಬೇಕು. ಆಲಸ್ಯ, ಆಗ್ರಹ, ಕೊಳಕುತನ, ಸಣ್ಣತನಗಳು ಇರುವ ಕಡೆ ಲಕ್ಷ್ಮಿಯು ಇರಲಾರಳು. ‘ಉತ್ಸಾಹದಿಂದ ಕೂಡಿದವನೂ, ಸೋಮಾರಿಯಲ್ಲದವನೂ, ಕೆಲಸಮಾಡುವ ರೀತಿಯನ್ನು ಅರಿತವನೂ, ಕೆಟ್ಟ ಅಭ್ಯಾಸಗಳಲ್ಲಿ ಆಸಕ್ತಿ ಇಲ್ಲದವನೂ, ಶೂರನೂ, ಕೃತಜ್ಞನೂ, ಸ್ಥಿರವಾದ ಸೌಹಾರ್ದವುಳ್ಳವನೂ ಆದವನಲ್ಲಿ ನೆಲೆಸಲು ಲಕ್ಷ್ಮಿ ತಾನಾಗಿಯೇ ಬರುತ್ತಾಳೆ.’ ಇದು ನಮ್ಮ ಸಂಸ್ಕೃತಿಯ ಶ್ರದ್ಧೆ–ನಂಬಿಕೆ. ಇಂಥ ಶ್ರದ್ಧೆಗೆ ಭಂಗ ಬಾರದಂತೆ ನಮ್ಮ ವ್ರತದ ಆಚರಣೆ ಇರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.