ಪ್ರಜಾವಾಣಿಯ ಸಂಪಾದಕೀಯ ಬಳಗದವರಿಂದಲೇ ರೂಪುತಳೆದ ‘ಛೂ ಬಾಣ’, ‘ವಿಜ್ಞಾನ ವಿಶೇಷ’, ‘ದೆಹಲಿ ನೋಟ’, ‘ಕಡೆಗೋಲು’ವಿನಂತಹ ಅಂಕಣಗಳು ನಾಡಿನ ಜನರ ಪ್ರಜ್ಞೆಯನ್ನು ಎಚ್ಚರಗೊಳಿಸಿವೆ. ರಾಜಕೀಯ, ಸಿನಿಮಾ, ಹೆಣ್ತನ, ಆರ್ಥಿಕತೆ, ತಂತ್ರಜ್ಞಾನಗಳಂಥ ವಿಷಯ, ವಿಚಾರದ ವಿಸ್ತಾರ ನೀಡಿದ್ದು ಕೂಡ ‘ಪ್ರಜಾವಾಣಿ’ಯ ಅಂಕಣಗಳ ವಿಶೇಷವೇ ಆಗಿದೆ

ಪತ್ರಿಕೆಯೊಂದರ ‘ಅಂಕಣ’ಕಣ ಚೆಲುವು–ಸಮೃದ್ಧಗೊಳ್ಳಲು ನಾಡಿನ ವಿವಿಧ ಕ್ಷೇತ್ರಗಳ ಪ್ರಜ್ಞಾವಂತರ ಬರಹಗಳಷ್ಟೇ ಸಾಲವು; ಅಂತರ್ಜಲ ರೂಪದ ಒಳಗಿನ ಪತ್ರಕರ್ತರೂ ಕೈಗೂಡಿಸಬೇಕು. ಪತ್ರಿಕೆಯೊಂದರ ಅಂಕಣ ಸೋಪಾನದಲ್ಲಿ ‘ನಿಲಯದ ಕಲಾವಿದ’ರ ಸಂಖ್ಯೆ ಹೆಚ್ಚಾಗಿರುವುದು, ಆ ಪತ್ರಿಕೆಯ ಸಂಪಾದಕೀಯ ವಿಭಾಗದ ಸಮೃದ್ಧಿ ಮತ್ತು ಗಟ್ಟಿತನದ ಸಂಕೇತ. ‘ಪ್ರಜಾವಾಣಿ’ ತನ್ನ ಆರಂಭದ ದಿನಗಳಿಂದಲೇ ಬಳಗದ ಪತ್ರಕರ್ತರ ಅಂಕಣಗಳಿಗೆ ವೇದಿಕೆಯಾಗುವ ಮೂಲಕ, ಸಂಪಾದಕೀಯ ವಿಭಾಗದ ಸಮೃದ್ಧಿಯನ್ನೂ ಪ್ರಕಟಗೊಳಿಸುತ್ತಾ ಬಂದಿದೆ. ಈ ಅಂಕಣಕಾರರಲ್ಲಿ ಕೆಲವರು ಪತ್ರಿಕೆಯಾಚೆಗೂ ಉತ್ತಮ ಬರಹಗಾರರಾಗಿ ಗುರ್ತಿಸಿಕೊಂಡಿದ್ದಾರೆ.

‘ಪ್ರಜಾವಾಣಿ’ ಬಳಗದ ಅಂಕಣಚರಿತೆಯನ್ನು ಟಿ.ಎಸ್. ರಾಮಚಂದ್ರ ರಾವ್ ಅವರ ‘ಛೂ ಬಾಣ’ದಿಂದ ಆರಂಭಿಸಬೇಕು. ಟಿಯೆಸ್ಸಾರ್ ಅವರು ‘ಪ್ರಜಾವಾಣಿ’ ಸಂಪಾದಕರಾಗಿ ಸೇರ್ಪಡೆಯಾದ ಕೆಲವು ಸಮಯದಲ್ಲೇ ಆರಂಭಗೊಂಡ ‘ಛೂ ಬಾಣ’, ಅವರು ನಿಧನರಾಗುವವರೆಗೆ ನಿರಂತರವಾಗಿ ಪ್ರಕಟಗೊಂಡಿತು. ದೈನಿಕದ ಸಂಗತಿಗಳನ್ನು ಓದುಗರಿಗೆ ಕಚಗುಳಿಯಾಗುವಂತೆ ‘ಛೂ ಬಾಣ’ ಪ್ರಸ್ತುತಪಡಿಸುತ್ತಿತ್ತು. ಸ್ವತಃ ಟೀಯೆಸ್ಸಾರ್ ದಾಖಲಿಸಿರುವಂತೆ, ‘ಅಂದಿನಂದಿನ ಸುದ್ದಿಗಳ ಮೇಲೆ ಬಹುಮಟ್ಟಿಗೆ ಶ್ರೀಸಾಮಾನ್ಯನ ನಿರೀಕ್ಷೆ–ಪರೀಕ್ಷೆಗಳ ಕ್ಷ ಕಿರಣದ ಕ್ಯಾಮರಾ ಹಿಡಿಯುವುದು ‘ಛೂ ಬಾಣ’ದ ಉದ್ದೇಶ. ಉದ್ದೇಶ ಸ್ವಲ್ಪಮಟ್ಟಿಗೆಯಾದರೂ ಸಫಲವಾಗಿದೆಯೆಂದು ವಾರಕ್ಕೆ ಐದು ದಿವಸ ದಿನಕ್ಕೊಂದು ಬಗೆಯ ಮಸಾಲೆ ಅರೆಯಬೇಕಾದ ಈ ಬಾಣಸಿಗನ ಭಾವನೆ’. ಈ ಅಂಕಣದ ಕೆಲವು ಬರಹಗಳು 1977ರಲ್ಲಿ ಪುಸ್ತಕ ರೂಪದಲ್ಲೂ ಪ್ರಕಟಗೊಂಡಿವೆ.

‘ದೈನಂದಿನ ಆಗುಹೋಗುಗಳಿಗೆ ವಿಡಂಬನೆಯ ವ್ಯಾಖ್ಯೆ ನೀಡುವ ‘ಛೂ ಬಾಣ’ – ನಿಜವಾದ ಅರ್ಥದಲ್ಲಿ ಇಂದಿನ ಕನ್ನಡ ಪತ್ರಿಕೋದ್ಯಮದಲ್ಲಿನ ಏಕಮಾತ್ರ ಕಾಲಂ; ನಮ್ಮ ಸಾರ್ವಜನಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ದೊಡ್ಡವರ ಸಣ್ಣತನಗಳಿಗೆ, ಸಣ್ಣವರ ದೊಡ್ಡತನಗಳಿಗೆ ಹಿಡಿದ ರಾಹುಗನ್ನಡಿ. ಬಾಣದ ಆಘಾತಕ್ಕೆ ಸಿಕ್ಕಿದವರೂ ಮೆಚ್ಚುವ, ಮೆಚ್ಚಬೇಕಾದ ಪ್ರತಿಭೆ ಈ ಕಾಲಮಿಷ್ಟರದು. ಪದಗಳ ರೂಪ ಬದಲಿಸಿ, ಅರ್ಥ ಬದಲಿಸಿ ಅನಿರೀಕ್ಷಿತ ಅರ್ಥಪ್ರಪಂಚವನ್ನೇ ಸೃಷ್ಟಿಸಬಲ್ಲ ಈ ಶಕ್ತಿ ಅದ್ಭುತವಾದದ್ದು; ಸ್ವೋಪಜ್ಞವಾದದ್ದು’ ಎನ್ನುವ ಹಾ.ಮಾ. ನಾಯಕರ ಮಾತು ‘ಛೂ ಬಾಣ’ದ ಹೆಚ್ಚುಗಾರಿಕೆಗೆ ನಿದರ್ಶನದಂತಿದೆ. ದಿಟ್ಟತನ ಹಾಗೂ ಭಕ್ತಿರಾಹಿತ್ಯದ ಕಾರಣಗಳಿಂದಾಗಿ ‘ಛೂ ಬಾಣ’ವನ್ನು ಯು.ಆರ್. ಅನಂತಮೂರ್ತಿ ಮೆಚ್ಚಿಕೊಂಡಿದ್ದರು.

‘ಛೂ ಬಾಣ’ದ ಹಿರಿಯ ಸೋದರನ ರೂಪದಲ್ಲಿ ಬಿ. ಪುಟ್ಟಸ್ವಾಮಯ್ಯನವರ ‘ಪಾನ್ಸುಪಾರಿ’ ಅಂಕಣವನ್ನು ಗುರ್ತಿಸಬೇಕು. ಪುಟ್ಟಸ್ವಾಮಯ್ಯನವರ ನಂತರ ‘ಪಾನ್ಸುಪಾರಿ’ ಜಾಗ ತುಂಬಿದ್ದು ‘ಛೂ ಬಾಣ’. ಅದೇ ಕಾಲಕ್ಕೆ ‘ಡೆಕ್ಕನ್ ಹೆರಾಲ್ಡ್’ನಲ್ಲಿ ಪ್ರಕಟಗೊಳ್ಳುತ್ತಿದ್ದ ಪೋತೆನ್ ಜೋಸೆಫ್ರ ‘ಓವರ್ ಎ ಕಪ್ ಆಫ್ ಟೀ’ ಅಂಕಣ ಜನಪ್ರಿಯವಾಗಿತ್ತು. ಆ ಮಾದರಿ ಪ್ರಜಾವಾಣಿಗೂ ಅಗತ್ಯವೆನಿಸಿದಾಗ, ಟೀಯೆಸ್ಸಾರ್ ಅಂಕಣಪರೀಕ್ಷೆಗೆ ತಮ್ಮನ್ನೊಡ್ಡಿಕೊಂಡರು. ‘ಅಂತರಂಗ ಬಹಿರಂಗ’ ಹೆಸರಿನಲ್ಲಿ 1949ರಲ್ಲಿ ಪ್ರಾರಂಭವಾದ ಅಂಕಣ, ನಂತರದಲ್ಲಿ ‘ರಾಮಬಾಣ’ವಾಯಿತು. ಆ ಹೆಸರೂ ಸರಿ ಕಾಣದ್ದರಿಂದ, ರಾಶಿಯವರ ಸಲಹೆಯಂತೆ ‘ಛೂ ಬಾಣ’ ಎಂದು ಮರುನಾಮಕರಣ ಹೊಂದಿತು.

ದೆಹಲಿ ನೋಟ ಮತ್ತು ಖೋ ಆಟ

‘ದೆಹಲಿ ನೋಟ’ ಪ್ರಜಾವಾಣಿಯ ದೆಹಲಿ ಪ್ರತಿನಿಧಿಗಳಿಗೆ ಮೀಸಲಾಗಿದ್ದ ಖೋ ಮಾದರಿಯ ಅಂಕಣ. ಈ ಶೀರ್ಷಿಕೆಯಲ್ಲಿ ಬಿ.ವಿ. ನಾಗರಾಜು, ಶಿವಾಜಿ ಗಣೇಶನ್, ದಿನೇಶ್ ಅಮೀನಮಟ್ಟು, ಡಿ. ಉಮಾಪತಿ ಹಾಗೂ ಹೊನಕೆರೆ ನಂಜುಂಡೇಗೌಡ ಅವರು ಬರೆದ ಅಂಕಣ ಬರಹಗಳು ರಾಷ್ಟ್ರ ರಾಜಕಾರಣದ ಆಳ–ಅಗಲಗಳನ್ನು ಓದುಗರಿಗೆ ಮನವರಿಕೆ ಮಾಡುವ ಪ್ರಯತ್ನಗಳಾಗಿದ್ದವು.

ಕನ್ನಡ ಓದುಗರ ರಾಜಕೀಯ ಸಂವೇದನೆಯನ್ನು ಸೂಕ್ಷ್ಮಗೊಳಿಸಿದ ಬರಹಗಳ ರೂಪದಲ್ಲಿ ದಿನೇಶ್ ಅಮೀನಮಟ್ಟು ಅವರ ‘ದೆಹಲಿ ನೋಟ’ ಹಾಗೂ ‘ಅನಾವರಣ’ ಅಂಕಣಗಳನ್ನು ಗುರ್ತಿಸಬೇಕು. ಸರಳ, ಸ್ಪಷ್ಟ ಹಾಗೂ ನಿಷ್ಠುರ ಗುಣಗಳಿಂದಾಗಿ ಅವರ ಅಂಕಣಗಳು ಓದುಗರಿಗೆ ಹತ್ತಿರವಾಗಿದ್ದವು. ವಿವೇಕಾನಂದರ ಬದುಕು ಹಾಗೂ ವ್ಯಕ್ತಿತ್ವದ ಅಷ್ಟೇನೂ ಜನಪ್ರಿಯವಲ್ಲದ ಸಂಗತಿಗಳನ್ನು ಪ್ರಸ್ತಾಪಿಸಿದ್ದ ಅವರ ಅಂಕಣ ಬರಹವೊಂದು ಓದುಗರ ನಡುವೆ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ರಾಜಕೀಯ ಅಂಕಣಕಾರರಾಗಿ ಗಮನಿಸಲೇಬೇಕಾದ ಮತ್ತೊಂದು ಹೆಸರು ಡಿ. ಉಮಾಪತಿ ಅವರದು. ‘ದೆಹಲಿ ನೋಟ’ ಹೆಸರಿನಲ್ಲಿ ಅವರು ಬರೆದ ಬರಹಗಳು, ಅದೇ ಹೆಸರಿನಲ್ಲಿ ಪುಸ್ತಕವಾಗಿ ಸಂಕಲನಗೊಂಡಿವೆ. ಜನಸಾಮಾನ್ಯರ ಬದುಕು ವ್ಯವಸ್ಥೆಯ ನಿರ್ಲಕ್ಷ್ಯ ಹಾಗೂ ದರ್ಪದಡಿ ನಲುಗುವುದನ್ನು ಚಿತ್ರಿಸುವ ಉಮಾಪತಿ ಅವರ ಬರಹಗಳು ಓದುಗರ ಸಂವೇದನೆಯನ್ನು ಸೂಕ್ಷ್ಮಗೊಳಿಸುವ ಕೆಲಸವನ್ನು ಮಾಡಿವೆ.

‘ಪ್ರಜಾವಾಣಿ’ಯ ಸಂಪಾದಕೀಯ ವಿಭಾಗದ ಸಮೃದ್ಧಿಯನ್ನು ಸೂಚಿಸುವ ಮತ್ತೊಂದು ಅಂಕಣ ‘ಲೋಕವಿಹಾರ.’ ಡಿ.ವಿ. ರಾಜಶೇಖರ್ ಅವರ ಈ ಅಂಕಣ, ವಿಶ್ವದ ವಿದ್ಯಮಾನಗಳಿಗೆ ಕನ್ನಡ ಪತ್ರಕರ್ತನೊಬ್ಬನ ಪ್ರತಿಕ್ರಿಯೆಯಂತಿತ್ತು. ಅಂತರ್ಜಾಲದ ಸವಲತ್ತು ಇಲ್ಲದಿದ್ದ ದಿನಗಳಲ್ಲಿ, ಅಂತರರಾಷ್ಟ್ರೀಯ ವಿದ್ಯಮಾನಗಳ ಗ್ರಹಿಕೆ ಹಾಗೂ ವಿಶ್ಲೇಷಣೆ ಯಾವುದೇ ಪತ್ರಕರ್ತನಿಗೆ ಸವಾಲೆನ್ನಿಸಿದ್ದ ಸಂದರ್ಭದಲ್ಲಿ, ರಾಜಶೇಖರ್ ಅವರ ಅಂಕಣ ಬರಹಗಳು ಕನ್ನಡದ ಓದುಗನಿಗೆ ಜಾಗತಿಕ ವಿದ್ಯಮಾನಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿತ್ತು. ಮೊಬೈಲ್ ಮೂಲಕ ವಿಶ್ವವೇ ಅಂಗೈಗೆ ಬಂದಂತಿರುವ ದಿನಗಳಲ್ಲೂ, ‘ಲೋಕವಿಹಾರ’ದ ಬರಹಗಳು ಈಗಲೂ ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಮಾದರಿಯಂತಿವೆ. ‘ಲೋಕವಿಹಾರ’ದ ಅವಳಿಯಂತಿದ್ದ ಪಿ. ರಾಮಣ್ಣನವರ ‘ರಾಷ್ಟ್ರವಿಹಾರ’ ರಾಷ್ಟ್ರೀಯ ಸಮಾಚಾರಗಳ ವಿಶ್ಲೇಷಣೆಗಳಿಗೆ ಮೀಸಲಾಗಿತ್ತು. ಕೆ. ಶ್ರೀಧರ ಆಚಾರ್ ಅವರ ‘ಒಳಧ್ವನಿ’ ರಾಜಕೀಯ ವಿಶ್ಲೇಷಣೆಗಳ ಮತ್ತೊಂದು ಜನಪ್ರಿಯ ಅಂಕಣ.

ಪದ್ಮರಾಜ ದಂಡಾವತಿ ಅವರ ‘ಪ್ರಜಾವಾಣಿ’ಯಲ್ಲಿನ ‘ನಾಲ್ಕನೇ ಆಯಾಮ’ ಅಂಕಣ ಬರಹಗಳಲ್ಲಿ ಕೂಡ ರಾಜಕೀಯ ವಿಶ್ಲೇಷಣೆಯಿದೆ. ಎಂಟು ವರ್ಷಗಳಿಗೂ ಹೆಚ್ಚು ಕಾಲ ಪ್ರತಿ ಭಾನುವಾರ ಪ್ರಕಟಗೊಂಡ ‘ನಾಲ್ಕನೇ ಆಯಾಮ’ದ ಬರಹಗಳು, ಆರು ಸಂಪುಟಗಳಲ್ಲಿ ಪುಸ್ತಕ ರೂಪದಲ್ಲೂ ಪ್ರಕಟಗೊಂಡಿವೆ. ಸಾಹಿತ್ಯ, ಸಂಸ್ಕೃತಿ, ಭಾಷೆ, ಪತ್ರಿಕೋದ್ಯಮ, ಪ್ರವಾಸ, ಶಿಕ್ಷಣ ಸೇರಿದಂತೆ ಸೂಕ್ಷ್ಮಸಂವೇದಿ ಪತ್ರಕರ್ತನೊಬ್ಬ ಆಸಕ್ತಿ ತಾಳಬಹುದಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಬರಹಗಳು ‘ನಾಲ್ಕನೇ ಆಯಾಮ’ದಲ್ಲಿ ಸಂಕಲನಗೊಂಡಿವೆ.

ಬಹುರುಚಿಗಳ ಬರವಣಿಗೆ

ಎಂ. ನಾಗರಾಜ ಅವರ ‘ಉತ್ತರ ದಿಕ್ಕಿನಿಂದ’ ಹಾಗೂ ಸುದೇಶ್ ದೊಡ್ಡಪಾಳ್ಯರ ‘ಈಶಾನ್ಯ ದಿಕ್ಕಿನಿಂದ’ ‘ಪ್ರಜಾವಾಣಿ’ಯ ಎರಡು ವಿಶಿಷ್ಟ ಅಂಕಣಗಳು. ಹೆಸರೇ ಸೂಚಿಸುವಂತೆ ಈ ಅಂಕಣಗಳು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ತವಕ ತಲ್ಲಣಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನಗಳಾಗಿದ್ದವು. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ‘ಚಹಾದ ಜೋಡಿ ಚೂಡಾದ್ಹಾಂಗ’ ಹಾಗೂ ವೀರಣ್ಣದಂಡೆಯವರ ‘ಕಲ್ಬುರ್ಗಿಯ ಕಲರವ’ ಅಂಕಣಗಳ ಸ್ವರೂಪವನ್ನು ನೆಪಿಸುವಂತಿದ್ದರೂ, ಸ್ವರೂಪದ ದೃಷ್ಟಿಯಿಂದ ಎರಡೂ ಅಂಕಣಗಳು ಸಂಪೂರ್ಣ ಭಿನ್ನವಾಗಿದ್ದವು.

ನಾಗೇಶ ಹೆಗಡೆ ಅವರ ‘ವಿಜ್ಞಾನ ವಿಶೇಷ’ ಅಂಕಣ ಕನ್ನಡದ ಬಹು ದೀರ್ಘ ಅಂಕಣ ಬರಹಗಳಲ್ಲೊಂದು. 1982ರಲ್ಲಿ ಆರಂಭವಾದ ಈ ಅಂಕಣ, ನಾಲ್ಕು ದಶಕಗಳ ಪಯಣ ಪೂರೈಸಿ ಮುನ್ನಡೆದಿದೆ. ಪತ್ರಿಕೆಯ ಮೂಲಕ ವಿಜ್ಞಾನ ಸಾಹಿತ್ಯವನ್ನು ಜನಪ್ರಿಯ–ಜನಪರಗೊಳಿಸುವಲ್ಲಿ ನಾಗೇಶ ಹೆಗಡೆ ಅವರ ಕೊಡುಗೆ ಮಹತ್ವದ್ದು. ‘ಪ್ರಜಾವಾಣಿ’ ಸಂಪಾದಕೀಯ ಪುಟದಲ್ಲಿನ ‘ವಿಜ್ಞಾನ ವಿಶೇಷ’ ಅಂಕಣ ಕನ್ನಡದ ಓದುಗರಲ್ಲಿ ಮೂಡಿಸಿದ ವೈಜ್ಞಾನಿಕ ಎಚ್ಚರ ಸಾಮಾನ್ಯವಾದುದಲ್ಲ. ವಿಜ್ಞಾನದ ಸಂಕೀರ್ಣ ವಿಷಯಗಳನ್ನು ಸರಳವಾಗಿ ಹಾಗೂ ಆಕರ್ಷಕವಾಗಿ ನಿರೂಪಿಸುವುದು ನಾಗೇಶ ಹೆಗಡೆ ಅವರ ವಿಶೇಷ. ಕವಿತೆ–ಕಥೆಗಳಂಥ ಸೃಜನಶೀಲ ಸಾಹಿತ್ಯದಷ್ಟೇ ಅವರ ವಿಜ್ಞಾನ ಬರಹಗಳ ಪ್ರಯೋಗಶೀಲತೆಯನ್ನು ಗುರ್ತಿಸಬಹುದು.

ನಿರ್ದಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆಯೂ ‘ಪ್ರಜಾವಾಣಿ’ ಬಳಗ ವಿಭಿನ್ನ ಅಂಕಣಗಳನ್ನು ರೂಪಿಸಿದೆ. ಅವುಗಳಲ್ಲಿ ಮುಖ್ಯವಾದುದು, ಎನ್.ಎ.ಎಂ. ಇಸ್ಮಾಯಿಲ್ ಅವರ ‘ಇ–ಹೊತ್ತು’, ಗಂಗಾಧರ ಮೊದಲಿಯಾರರ ‘ಫಿಲ್ಮ್ ಡೈರಿ’ ಹಾಗೂ ಶೈಲೇಶ್ಚಂದ್ರ ಗುಪ್ತ ಅವರ ‘ಅರ್ಥನೋಟ’ ಅಂಕಣಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ನೆಪವಾಗಿಟ್ಟುಕೊಂಡು ಇಸ್ಮಾಯಿಲ್ ಬರೆಯುತ್ತಿದ್ದ ಒಳನೋಟಗಳ ವಿಶ್ಲೇಷಣೆಗಳು, ಸಮಕಾಲೀನ ಜಗತ್ತನ್ನು ಅರಿಯಲು ಬೆಳಕಿಂಡಿಗಳಂತಿದ್ದವು. ಶೈಲೇಶ್ರ ಅಂಕಣ ಬರಹಗಳು ವಾಣಿಜ್ಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಶಿಷ್ಟ ರಚನೆಗಳಾಗಿದ್ದವು. ‘ಅರ್ಥನೋಟ’ದ ಆಯ್ದ ಬರಹಗಳು ಹಂಪಿ ವಿಶ್ವವಿದ್ಯಾಲಯದಿಂದ ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ‘ಕಾಸು ಕಿಮ್ಮತ್ತು’ ಹಾಗೂ ‘ಸರಕು ಸಂಪತ್ತು’ ಶೈಲೇಶ್ಚಂದ್ರರ ಮತ್ತೆರಡು ಅಂಕಣಗಳು. ಮೊದಲಿಯಾರರ ‘ಫಿಲ್ಮ್ ಡೈರಿ’ ಕನ್ನಡ ಚಿತ್ರರಂಗದ ಇತಿಹಾಸ–ವರ್ತಮಾನಗಳ ಅನುಸಂಧಾನದಂತಿತ್ತು. ಟೀಯೆಸ್ಸಾರ್ ‘ಛೂಬಾಣ’ ಮೊದಲಿಯಾರರ ಅಂಕಣಪ್ರಯೋಗದಲ್ಲಿ ‘ಚೂಬಾಣ’ವಾಗಿ ಕೆಲವು ಕಾಲ ಚಾಲ್ತಿಯಲ್ಲಿತ್ತು.

ಬಿ.ಎಂ. ಹನೀಫ್ ಅವರ ‘ಬಣ್ಣದ ಬುಗುರಿ’ ಹಾಗೂ ‘ಕನಸು ಕನ್ನಡಿ’, ಲೇಖಕರ ಸಾಹಿತ್ಯ–ಸಿನಿಮಾ ಸೇರಿದಂತೆ ಬಹುಮುಖ ಆಸಕ್ತಿಗಳ ವ್ಯಕ್ತರೂಪಗಳಾಗಿದ್ದವು. ಗೋಪಾಲ ಹೆಗಡೆ ಅವರು ‘ಕ್ರೀಡಾಂಕಣ’ ಹಾಗೂ ಎಂ.ಎ. ಪೊನ್ನಪ್ಪ ಅವರು ‘ನೇರ ನೋಟ’ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಬರಹಗಳು ಕ್ರೀಡಾಸಕ್ತರ ಮೆಚ್ಚುಗೆ ಗಳಿಸಿದ್ದವು.

ಬೆಂಗಳೂರಿನ ಸಮಕಾಲೀನತೆಯನ್ನು ಹಿಡಿದಿಡುವ ನಿಟ್ಟಿನಲ್ಲಿ ಎಸ್.ಆರ್. ರಾಮಕೃಷ್ಣ ಅವರ ‘ಸ್ವಪ್ನ ನಗರಿ’ ಅತ್ಯಂತ ಮಹತ್ವದ ಅಂಕಣ. ‘ಮೆಟ್ರೊ’ ಪುರವಣಿಯಲ್ಲಿ ಪ್ರಕಟಗೊಂಡ ಈ ಅಂಕಣ, ಮಹಾನಗರದ ಅನೇಕ ಆಯಾಮಗಳನ್ನು ಪರಿಚಯಿಸಿತು. ಪತ್ರಕರ್ತನ ಕೌತುಕದ ಕಣ್ಣು ಹಾಗೂ ಸಮಾಜಶಾಸ್ತ್ರಜ್ಞನ ಒಳನೋಟಗಳು ಈ ಅಂಕಣವನ್ನು ರೂಪಿಸಿದ್ದವು.

ಪರಂಪರೆಯ ಮುಂದುವರಿಕೆ

‘ಪ್ರಜಾವಾಣಿ’ಯ ನಿಲಯದ ಪತ್ರಕರ್ತರ ಅಂಕಣ ಪರಂಪರೆ ಈಗಲೂ ಮುಂದುವರೆದಿದೆ. ರವೀಂದ್ರ ಭಟ್ಟರ ‘ಅನುಸಂಧಾನ’, ವೈ.ಗ. ಜಗದೀಶ್ರ ‘ಗತಿಬಿಂಬ’, ಸೂರ್ಯಪ್ರಕಾಶ ಪಂಡಿತ್ರ ‘ನಿರುತ್ತರ’ ಹಾಗೂ ಆಟೋಟದ ಬಗೆಗಿನ ಗಿರೀಶ ದೊಡ್ಡಮನಿಯವರ ಅಂಕಣಬರಹಗಳು ‘ಪ್ರಜಾವಾಣಿ ಅಂಕಣ ಪರಂಪರೆ’ಯ ಮುಂದುವರಿದ ಕೊಂಡಿಗಳಂತಿವೆ.

ಪತ್ರಿಕೆಯೊಂದರ ಅಂಕಣಕಾರರು ನಿರ್ದಿಷ್ಟ ವಿಚಾರಧಾರೆಗೆ ಬದ್ಧರಾಗಿರುವುದು ಸಾಮಾನ್ಯ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯದು ಭಿನ್ನ ಮಾರ್ಗ. ಎಲ್ಲ ಬಗೆಯ ಅಭಿಪ್ರಾಯಗಳಿಗೂ ವಾಣಿಯಾಗುವ ಪತ್ರಿಕೆಯ ಹಂಬಲ ಅಂಕಣಗಳಲ್ಲೂ ಪ್ರಕಟಗೊಂಡಿದೆ. ಭಿನ್ನ ವಿಚಾರಧಾರೆಗಳ ಅಂಕಣಗಳು ಪತ್ರಿಕೆ ಹಾಗೂ ಪತ್ರಿಕೋದ್ಯಮದ ವಿಶ್ವಾಸಾರ್ಹತೆಯನ್ನು ಪ್ರತಿನಿಧಿಸುವಂತಿವೆ.

‘ಪ್ರಜಾವಾಣಿ’ ಬಳಗದ ಪತ್ರಕರ್ತರ ಎಲ್ಲ ಅಂಕಣಗಳಲ್ಲಿನ ಸಾಮಾನ್ಯ ಗುಣ, ಓದುಗರೊಂದಿಗೆ ಸಾಧಿಸಿದ ನೇರ ಸಂವಹನ ಹಾಗೂ ವಸ್ತುವೈವಿಧ್ಯ. ಕನ್ನಡ ಮನಸ್ಸುಗಳನ್ನು, ಕನ್ನಡದ ನುಡಿಯನ್ನು ವಿಸ್ತರಿಸಿದ ಅಗ್ಗಳಿಕೆ ಈ ಅಂಕಣಗಳದು.

ಆಶಯಪ್ರಧಾನ ಹಾಗೂ ಮಹಿಳಾಪ್ರಧಾನ

ಸಿ.ಜಿ. ಮಂಜುಳಾ ಅವರ ‘ಕಡೆಗೋಲು’ ಹಾಗೂ ಆರ್. ಪೂರ್ಣಿಮಾ ಅವರ ‘ಜೀವನ್ಮುಖಿ’, ಸ್ವರೂಪದಲ್ಲಿ ಭಿನ್ನವಾಗಿದ್ದರೂ ಆಶಯಗಳ ದೃಷ್ಟಿಯಿಂದ ಒಟ್ಟಿಗೆ ಗುರ್ತಿಸಬಹುದಾದ ಅಂಕಣಗಳು. ಸ್ತ್ರೀವಾದವನ್ನು ಕೇಂದ್ರವಾಗುಳ್ಳ ಮಂಜುಳಾ ಅವರ ‘ಕಡೆಗೋಲು’ ಬರಹಗಳು, ಅಕಡೆಮಿಕ್ ಶಿಸ್ತಿಗೆ ಒಳಪಟ್ಟಿದ್ದವು. ಪೂರ್ಣಿಮಾ ಅವರ ‘ಜೀವನ್ಮುಖಿ’ ಅಂಕಣಗಳ ಕೇಂದ್ರದಲ್ಲಿ ಸ್ತ್ರೀಧ್ವನಿಯಿದ್ದರೂ, ಸಮಕಾಲೀನ ವಿದ್ಯಮಾನಗಳಿಗೆ ಸೃಜನಶೀಲ ಸ್ಪಂದನಗಳ ರೂಪದಲ್ಲೂ ಆ ಬರಹಗಳನ್ನು ಗುರ್ತಿಸಬಹುದು. ಹಳಗನ್ನಡ ಸಾಹಿತ್ಯದ ರಸಪ್ರಸಂಗಗಳ ಕುರಿತ ‘ನಲ್ದಾಣ’ ‘ಸಾಹಿತ್ಯ ಪುರವಣಿ’ಯಲ್ಲಿ ಪ್ರಕಟಗೊಂಡ ಪೂರ್ಣಿಮಾರ ಮತ್ತೊಂದು ಅಂಕಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.