ಈ ಕ್ರಿಕೆಟಿಗನ ಸಾಧನೆಯನ್ನು ಬರಿ ಯಶಸ್ವಿ ಆಟಗಾರನ ಕಥೆ ಎಂದು ನೋಡಲಾಗದು. ಈ ನೆಲದ ಪಾಲಿನ ಅತಿಕ್ರೂರ ಶಾಪವೆನಿಸಿದ ಜಾತಿಪದ್ಧತಿಯ ವಿರುದ್ಧ ಹೋರಾಟ ನಡೆಸಿದ ಅಪ್ರತಿಮ ಸೇನಾನಿಯ ಕಥೆಯಾಗಿಯೂ ಸ್ವತಂತ್ರ ಭಾರತ ಅದನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ.

ಗೆದ್ದವರು ಬರೆದದ್ದೇ ಚರಿತ್ರೆ ಎಂಬುದು ಕಠೋರ ಸತ್ಯ. ಹರಿಯುವ ಹಳ್ಳದಗುಂಟ ಮೇಲ್ಭಾಗದಲ್ಲಿ ಕುಳಿತ ತೋಳವು, ಕೆಳಭಾಗದಲ್ಲಿ ನೀರು ಕುಡಿದ ಕುರಿಮರಿಯ ಮೇಲೆ ಎಂಜಲು ಮಾಡುತ್ತಿದ್ದಿ ಎಂದು ಆರೋಪಿಸಿ ತಿಂದು ಹಾಕಿದಂತಹ ಇತಿಹಾಸವಿದು. ತುಳಿಸಿಕೊಂಡವರ ಕಣ್ಣುಗಳಿಂದ ನೋಡಿದ ಇತಿಹಾಸದ ರಚನೆಯಾಗಿಲ್ಲ. ಆಗಿರುವ ಅಲ್ಪಸ್ವಲ್ಪವನ್ನು ಮುಖ್ಯಧಾರೆಯೆಂಬುದು ಹತ್ತಿರ ಬಿಟ್ಟುಕೊಂಡೇ ಇಲ್ಲ.

ದಲಿತ ದ್ವೇಷದ ಅಪರಾಧಗಳು, ದಮನ ದೌರ್ಜನ್ಯ ತರತಮಗಳು ನಿತ್ಯ ಬದುಕಿನ ರೀತಿ ರಿವಾಜುಗಳೇ ಆಗಿ ಹೋಗಿವೆ. ಗ್ರಾಮಗಳಲ್ಲಿ ಅವರನ್ನು ಊರ ಹೊರಗಿನ ‘ಹೊಲಗೇರಿ’ಗಳಲ್ಲಿ ಇಡಲಾಗಿದೆ. ಪೇಟೆ ಪಟ್ಟಣ ನಗರಗಳಲ್ಲಿ ಅವರನ್ನು ‘ಮನೋನಿರ್ಮಿತ ಹೊಲಗೇರಿ’ಗಳಿಗೆ ಅಟ್ಟಲಾಗಿದೆ. ಸಮಾಜವೆಂಬುದು ಅವರ ಪಾಲಿಗೆ ಅಗೋಚರ ಕಾರಾಗೃಹ. ಎತ್ತರೆತ್ತರಕ್ಕೆ ಎದ್ದು ನಿಂತು ಗಹಗಹಿಸಿ ಕಬಳಿಸುವ ಬಗೆ ಬಗೆಯ ಅಸ್ಪೃಶ್ಯತೆಯ ತಡೆಗೋಡೆಗಳ ನಡುವೆ ಅವರು ವಿನಾಕಾರಣ ಕಳಂಕಿತ ಕೈದಿಗಳು.

ಈ ಅಮಾನುಷ ನಡವಳಿಕೆಯು ಭಾರತದ ಆತ್ಮವನ್ನು ಗಾಯಗೊಳಿಸಿದೆ. ಶತಮಾನಗಳ ಕೀವು ಪಿತಗುಟ್ಟಿದೆ. ಈ ಗಾಯವ ತೊಳೆದು ಮದ್ದು ತುಂಬಿ ಪಟ್ಟಿ ಕಟ್ಟುವುದು ಪೆಟ್ಟು ನೀಡುತ್ತಿರುವವರ ಕರ್ತವ್ಯ. ಆದರೆ ಅವರು ನಿರಾಕರಣೆ ನಿರ್ಲಕ್ಷ್ಯಗಳಲ್ಲಿ ಮುಳುಗಿದ್ದಾರೆ. ಮದ್ದು ಅರೆಯುವ ಬದಲಿಗೆ ನಂಜು ಕಾರತೊಡಗಿದ್ದಾರೆ. ಉಪ್ಪು ಉಜ್ಜತೊಡಗಿದ್ದಾರೆ. ಭಾರತದ ಆತ್ಮದ ಗಾಯವು ತಮ್ಮ ಆತ್ಮಗಳಿಗೆ ಅಂಟಿರುವ ಕೊನೆಯಿಲ್ಲದ ವ್ಯಾಧಿ ಎಂಬುದನ್ನು ಕಾಣದಾಗಿದ್ದಾರೆ. ಖುದ್ದು ದಲಿತ ದ್ವೇಷದ ‘ಕೈದಿ’ಗಳಾಗಿರುವ ಅರಿವೂ ಅವರಿಗಿಲ್ಲ. ದಲಿತ ಸಮುದಾಯಗಳ ವಿಮೋಚನೆಯಲ್ಲಿ ತಮ್ಮ ಬಿಡುಗಡೆಯೂ ಅಡಗಿದೆ ಎಂಬ ನಿಜವನ್ನು ನಿರಾಕರಿಸಿದ್ದಾರೆ.

ವಂದನಾ ಕಟಾರಿಯಾ ಎಂಬ ಒಲಿಂಪಿಕ್ಸ್ ಹಾಕಿ ದಲಿತ ಪ್ರತಿಭೆಯನ್ನು ಜಾತಿವಾದಿ ಶಕ್ತಿಗಳು ಅವಹೇಳನಕ್ಕೆ ಗುರಿ ಮಾಡಿದವು. ಈ ಅವಮಾನ ಮೊದಲನೆಯದಲ್ಲ, ಕೊನೆಯದೂ ಆಗುವ ಸೂಚನೆಯಿಲ್ಲ. ಅದ್ಭುತ ಆಟದ ಮೂಲಕವೇ ಅವಹೇಳನಕ್ಕೆ ಜವಾಬು ನೀಡಿದ ವಂದನಾ ಹಿಂದೆ ತಿರುಗಿ ನೋಡಿದರೆ ತಾವು ಒಬ್ಬಂಟಿಯಲ್ಲ ಎಂಬುದು ಗೊತ್ತಾಗುತ್ತದೆ. ಅವಹೇಳನವನ್ನು ಪ್ರತಿಭೆಯಿಂದ ಗೆಲ್ಲುವ ಸಿರಿವಂತ ಪರಂಪರೆಯೊಂದು ಆಕೆಯ ಬೆನ್ನಿಗಿದೆ.

ಶತಮಾನದ ಹಿಂದೆ ಪಲ್ವಂಕರ್ ಬಾಲೂ ಎಂಬ ಅಸ್ಪೃಶ್ಯ ಜಾತಿಗೆ ಸೇರಿದ ಕ್ರೀಡಾಳು ಒಬ್ಬರಿದ್ದರು. ಅವರೇ ಭಾರತದ ಮೊತ್ತಮೊದಲ ಮಹಾನ್ ಕ್ರಿಕೆಟ್ ಆಟಗಾರನೆಂದು ಬಣ್ಣಿಸುತ್ತಾರೆ ಜನಪರ ಇತಿಹಾಸಕಾರ ಮತ್ತು ಅಂಕಣಕಾರ ರಾಮಚಂದ್ರ ಗುಹಾ. ಭಾರತ ಮೊದಲ ಅಧಿಕೃತ ಕ್ರಿಕೆಟ್ ಟೆಸ್ಟ್ ಆಡಿದ್ದು 1932ರಲ್ಲಿ. ದೇಶದ ಕ್ರಿಕೆಟ್ ಇತಿಹಾಸವನ್ನು ಬಹುತೇಕ ಇತಿಹಾಸಕಾರರು ಅಲ್ಲಿಂದ ದಾಖಲಿಸುತ್ತ ಬಂದಿದ್ದಾರೆ. 1932ರ ಹಿಂದಿನ ಕ್ರಿಕೆಟ್ ಕ್ರೀಡೆಯ ಇತಿಹಾಸ ತೀವ್ರ ಅವಗಣನೆಗೆ ಈಡಾಗಿದೆ. ಹೀಗಾಗಿ ಪಲ್ವಂಕರ್ ಬಾಲೂ ಅವರ ಮಹಾನತೆ ಕೂಡ ಇತಿಹಾಸದ ಅಂಧಕಾರದ ಆಳದಲ್ಲಿ ಹೂತುಹೋಗಿದೆ. ಒಂದೊಮ್ಮೆ ಡಾ.ಬಾಬಾಸಾಹೇಬ ಅಂಬೇಡ್ಕರ್ ಪಾಲಿನ ‘ಹೀರೊ’ ಆಗಿದ್ದ ಬಾಲೂ ಅವರನ್ನು ದಲಿತ ಬುದ್ಧಿಜೀವಿ ವರ್ಗ ಲಕ್ಷಿಸಿದಂತಿಲ್ಲ.

‘ವಿಶಿಷ್ಟವಾದ ಏನನ್ನಾದರೂ ಸಾಧಿಸು’ (ಕಹಿಂತಾರಿ ನವೇಚ್ ಕರಾ) ಎಂಬ ಮರಾಠಿ ಪುಸ್ತಕ ಮಾಲಿಕೆಯಡಿ ಅನೇಕ ಮಹಾಮಹಿಮ ವ್ಯಕ್ತಿತ್ವಗಳ ಕುರಿತು ಪುಸ್ತಿಕೆಗಳು 1959ರಲ್ಲಿ ಹೊರಬಿದ್ದಿದ್ದವು. ಧ್ಯಾನ್‌ಚಂದ್, ರಾಜಾ ರವಿವರ್ಮ, ರವೀಂದ್ರನಾಥ ಟ್ಯಾಗೋರ್, ಸ್ಪಾರ್ಟಕಸ್, ಮೈಕಲೆಂಜಲೋ, ಬೆಂಜಮಿನ್ ಫ್ರ್ಯಾಂಕ್ಲಿನ್, ಲಾರೆನ್ಸ್ ಆಫ್ ಅರೇಬಿಯಾ, ಸೂಯೆಜ್ ಕಾಲುವೆಯ ನಿರ್ಮಾತೃ ಫರ್ಡಿನೆಂಡ್ ಲೆಸಪ್ಸ್ ಅವರಿಗೆ ಹೆಗಲೆಣೆಯಾಗಿ ಬಾಲೂ ಪಲ್ವಂಕರ್ ಕುರಿತ ಮೂವತ್ತು ಪುಟಗಳ ಪುಸ್ತಿಕೆಯೂ ಪ್ರಕಟವಾಗಿತ್ತು.

ಬಾಲೂ ಬಾಂಬೆಯಲ್ಲಿ ನೆಲೆಯೂರಿದ್ದು 1896-97ರಲ್ಲಿ. ಸರಿಯಾಗಿ ನೂರು ವರ್ಷಗಳ ತರುವಾಯ ಬಾಲೂ ಹೆಜ್ಜೆ ಗುರುತುಗಳ ಅರಸಿ ಈ ಮಹಾನಗರಕ್ಕೆ ಕಾಲಿಡುತ್ತಾರೆ ಸಾಮಾಜಿಕ ಇತಿಹಾಸಕಾರ ರಾಮಚಂದ್ರ ಗುಹಾ. ಎಂಟು ವರ್ಷಗಳ ನಂತರ ಭಾರತೀಯ ಕ್ರಿಕೆಟ್ ಇತಿಹಾಸ ಕುರಿತ ಅವರ ಪುಸ್ತಕ ‘A CORNER OF A FOREIGN FIELD’ ಪ್ರಕಟವಾಗುತ್ತದೆ. ಒಂದು ರೀತಿಯಲ್ಲಿ ಬಾಲೂ ಪಲ್ವಂಕರ್ ಅವರೇ ಈ ಕೃತಿಯ ಕೇಂದ್ರ ವ್ಯಕ್ತಿ. ಆತ್ಮಚರಿತ್ರೆಯನ್ನು ಇತಿಹಾಸದೊಂದಿಗೆ ಅಸಾಧಾರಣ ತಾಳಮೇಳದೊಂದಿಗೆ ಹೆಣೆಯಲಾಗಿರುವ ಅದ್ಭುತ ಕೃತಿಯಿದು. ಈ ನೆಲದ ಪಾಲಿನ ಅತಿಕ್ರೂರ ಶಾಪವೆನಿಸಿದ ಜಾತಿಪದ್ಧತಿಯ ತರತಮದ ವಿರುದ್ಧ ಭಾರತದ ಮೊದಲ ಮಹಾನ್ ನಿಧಾನಗತಿಯ ಎಡಗೈ ಬೌಲರ್ ಪಲ್ವಂಕರ್ ಬಾಲೂ ಅವರ ಹೋರಾಟದ ಮನೋಜ್ಞ ಚಿತ್ರಣವನ್ನು ಗುಹಾ ಕಟ್ಟಿಕೊಟ್ಟಿದ್ದಾರೆ.

ಈ ಪುಸ್ತಕದ ಸುಧಾರಿತ ಮರುಮುದ್ರಣ 2014ರಲ್ಲಿ ಹೊರಬಿದ್ದಿದೆ. ಬಾಲೂ ಮತ್ತು ಅವರ ಮೂವರು ಸೋದರರು ಅಸ್ಪೃಶ್ಯತೆಯ ವಿರುದ್ಧ ಕ್ರೀಡೆಯ ಮೂಲಕ ನಡೆಸಿದ ವಿಶಿಷ್ಟ ಹೋರಾಟ ಮತ್ತು ಗೆಲುವುಗಳ ಮೇಲೆ ಗುಹಾ ಬೆಳಕು ಚೆಲ್ಲಿ 19 ವರ್ಷಗಳೇ ಉರುಳಿವೆ. ಆದರೂ ಇಂದಿನ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ಬದುಕಿನ ಪಾಲಿಗೆ ಪಲ್ವಂಕರ್ ಮತ್ತು ಸೋದರರು ಬಹುತೇಕ ಅಪರಿಚಿತರಾಗಿಯೇ ಉಳಿದಿರುವುದು ವಿಚಿತ್ರವೂ ಅತೀವ ವೇದನೆಯ ವಿಷಯವೂ ಆಗಿದೆ. ಅವೈದಿಕ ಅಸ್ಮಿತೆಗಳನ್ನು ನಾಶ ಮಾಡುತ್ತಲೇ ಬಂದಿರುವ ನಮ್ಮ ನೆಲದಲ್ಲಿ ಈ ವೇದನೆ ನಿರಂತರ ರೂಪವನ್ನೇ ಧರಿಸಿ ಬೇರುಬಿಟ್ಟಿದೆ.

ಉತ್ತರ ಗೋವಾದ ಪಲ್ವನ್ ಗ್ರಾಮದ ಚಮ್ಮಾರ ಕುಲದವರು ಬಾಲೂ. 1875ರಲ್ಲಿ ಹುಟ್ಟಿದ್ದು ಕನ್ನಡ ನಾಡಿನಧಾರವಾಡದಲ್ಲಿ. ತಂದೆಗೆ ಪುಣೆಯಲ್ಲಿ ಸೇನಾ ನೆಲೆಯಲ್ಲಿ ಉದ್ಯೋಗ. ಸೇನಾ ಅಧಿಕಾರಿಗಳು ಆಡಿ ಎಸೆದ ಹಳೆಯ ದಾಂಡು, ಚೆಂಡು, ವಿಕೆಟುಗಳನ್ನಿಟ್ಟುಕೊಂಡು ಕ್ರಿಕೆಟ್ ಕಲಿತರು ಬಾಲೂ ಮತ್ತು ಅವರ ತಮ್ಮ ಶಿವರಾಮ್. ಸ್ಥಳೀಯ ಪಾರ್ಸಿ ಕ್ರಿಕೆಟ್ ಕ್ಲಬ್‌ನಲ್ಲಿ ಪಿಚ್ ಗುಡಿಸಿ ರೋಲರ್ ಎಳೆವುದು ಮತ್ತು ಆಗಾಗ ಬೌಲ್ ಮಾಡುವುದು ಬಾಲೂಗೆ ಸಿಕ್ಕ ಮೊದಲ ಚಾಕರಿ. ಸಂಬಳ ತಿಂಗಳಿಗೆ ಮೂರು ರೂಪಾಯಿ. ಅಲ್ಲಿಂದ ಐರೋಪ್ಯರ ತಂಡಕ್ಕೆ ಇದೇ ಸೇವೆ.ಕಾಲಕ್ರಮೇಣ ಬಾಲೂ ಅವರ ಎಡಗೈ ಸ್ಪಿನ್ ಬೌಲಿಂಗ್ ಪ್ರತಿಭೆಯನ್ನು ಗುರುತಿಸಿದಾತ ಆ ಕಾಲದ ಪ್ರಮುಖ ಇಂಗ್ಲಿಷ್ ಕ್ರಿಕೆಟಿಗ ಜೆ.ಜಿ.ಗ್ರೇಗ್.

ಐರೋಪ್ಯರ ತಂಡಕ್ಕೆ ಸವಾಲೆಸೆಯುವ ಸ್ಥಳೀಯರು ಹಿಂದೂ ಕ್ಲಬ್ ಕಟ್ಟಿಕೊಂಡಿದ್ದರು. ಚುಚ್ಚುಮಾತಿನ ಗ್ರೇಗ್ ಶಿಫಾರಸು ಕೆಲಸ ಮಾಡಿತ್ತು. ಬಾಲೂಗೆ ಆಟಗಾರನಾಗಿ ಹಿಂದೂ ಕ್ಲಬ್‌ಗೆ ಪ್ರವೇಶ ದೊರೆತಿತ್ತು. ಆದರೆ ಷರತ್ತುಗಳಿದ್ದವು. ಮೈದಾನದಲ್ಲಿ ಬಾಲೂ ಮುಟ್ಟಿದ ಚೆಂಡನ್ನು ಸವರ್ಣೀಯ ಹಿಂದೂ ಆಟಗಾರರೂ ಮುಟ್ಟುತ್ತಿದ್ದರು. ಆದರೆ ಆಟದ ಅಂಗಳದಾಚೆಗೆ ಅಸ್ಪೃಶ್ಯತೆ ಆಚರಣೆಯಲ್ಲಿತ್ತು. ಬಾಲೂಗೆ ಪೆವಿಲಿಯನ್ ಪ್ರವೇಶ ನಿಷಿದ್ಧ. ಚಹಾ ವಿರಾಮದಲ್ಲಿ ಹೊರಗೆ ನಿಂತೇ ಚಹಾ ಸೇವಿಸಬೇಕಿತ್ತು, ಅದೂ ಕುಡಿದ ನಂತರ ಎಸೆಯಬಹುದಾದ ಮಣ್ಣಿನ ಕುಡಿಕೆಯಲ್ಲಿ. ಇತರರಿಗೆ ಪಿಂಗಾಣಿ ಬಟ್ಟಲುಗಳು. ಬಾಲೂ ಮುಖ ಕೈ ತೊಳೆಯಬೇಕಿದ್ದರೆ ಮೈದಾನದ ಅಂಚಿಗೆ ಅಸ್ಪೃಶ್ಯ ಆಳೊಬ್ಬ ನೀರು ಒಯ್ದು ಹನಿಸುತ್ತಿದ್ದ. ಬಾಲೂ ಊಟವೂ ಪ್ರತ್ಯೇಕ. ಬೇರೆಯದೇ ಮೇಜು.

ಆದರೆ ಬಾಲೂ ಈ ತರತಮವನ್ನು ನುಂಗಿಕೊಂಡೇ ವಿಕೆಟ್ ಕಬಳಿಸುವ ಶ್ರೇಷ್ಠ ಆಟಗಾರನಾಗಿ ರೂಪುಗೊಂಡರು. ಏಳು ವಿಕೆಟ್ ಪಡೆದ ಸತಾರಾದ ಪಂದ್ಯವೊಂದರ ನಂತರ ಬಾಲೂವನ್ನು ಆನೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗಿತ್ತು. ಮತ್ತೊಮ್ಮೆ ವಿದ್ವಾಂಸ, ಸಮಾಜಸುಧಾರಕ ಮಹಾದೇವ ಗೋವಿಂದ ರಾನಡೆ ಅವರೇ ಹೂಮಾಲೆ ತೊಡಿಸಿ ಸನ್ಮಾನಿಸಿದ್ದರು. ಇನ್ನೊಂದು ಸಮಾರಂಭದಲ್ಲಿ ಖುದ್ದು ಬಾಲಗಂಗಾಧರ ತಿಲಕರೇ ಮೆಚ್ಚಿ ಮಾತಾಡಿದರು. ಹಿನ್ನೆಲೆಯಲ್ಲಿ ಜ್ಯೋತಿಬಾ ಫುಲೆ ಅವರ ಸತ್ಯಶೋಧಕ ಸಮಾಜ ಅಸ್ತಿತ್ವಕ್ಕೆ ಬಂದಿತ್ತು.

ಪುಣೆಯ ಜಾತಿವಾದಿ ಕಬಂಧಬಾಹುಗಳಿಂದ ತಪ್ಪಿಸಿಕೊಳ್ಳಲು ಬಾಲೂ ಕುಟುಂಬ ಸಮೇತ ಬಾಂಬೆಗೆ ತೆರಳಿದರು. ಅವರ ಪ್ರತಿಭೆ ಗರಿಕಟ್ಟಿತ್ತು. ಪರಮಾನಂದದಾಸ್ ಜೀವನದಾಸ್ ಹಿಂದು ಜಿಮ್‌ಖಾನಾಗೆ ಆಡಿದರು. ಅಂದಿನ ಬಾಂಬೆಯ ಪ್ರಮುಖ ತಂಡಗಳ ನಡುವೆ ನಡೆಯುತ್ತಿದ್ದ ಪಂದ್ಯಾವಳಿಗಳಲ್ಲಿ ಹೇರಳ ವಿಕೆಟ್ ಉರುಳಿಸಿದರು. ಭಾರತದ ವಿಲ್ಫ್ರೆಡ್ ರೋಡ್ಸ್ ಎಂದು ಕರೆಯಿಸಿಕೊಂಡರು. ನವಾನಗರದ ಜಾಮ್ ಸಾಹೇಬ್ ಎಂದು ಹೆಸರಾಗಿದ್ದ ಯುವರಾಜ ಮತ್ತು ಖ್ಯಾತ ಕ್ರಿಕೆಟ್‌ಪಟು ರಣಜಿತ್ ಸಿಂಗ್ ಅವರ ವಿಕೆಟ್ ಪಡೆದು ಸೈ ಎನಿಸಿಕೊಂಡರು.1902-03ರಲ್ಲಿ ಭಾರತ ಪ್ರವಾಸ ಮಾಡಿದ Oxford Authentics ಎಂಬ ಇಂಗ್ಲಿಷ್ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಐದು ವಿಕೆಟ್‌ಗಳನ್ನು ಎಗರಿಸಿದರು. ರನ್ ಗಳಿಕೆಯಲ್ಲೂ ಮೊದಲಿಗರೆನಿಸಿದರು. ಓವರಿನ ಆರು ಎಸೆತಗಳನ್ನು ಬ್ಯಾಟ್ಸ್‌ಮನ್ ಪಾಲಿಗೆ ಆರು ಭಿನ್ನ ಭಯಾನಕ ಎಸೆತಗಳನ್ನಾಗಿ ರೂಪಿಸಬಲ್ಲ ಸಾಮರ್ಥ್ಯ ಬಾಲು ಅವರದಾಗಿತ್ತು.

ಬಾಲು ಅವರಿಗಿಂತ ಏಳು ವರ್ಷ ಸಣ್ಣವರಿದ್ದ ಅವರ ತಮ್ಮ ಶಿವರಾಮ್ ಕೂಡ ಆಲ್ರೌಂಡರ್ ಎನಿಸಿಕೊಂಡು ಅಣ್ಣನನ್ನು ಸೇರಿಕೊಂಡರು. 1907ರಲ್ಲಿ ಐರೋಪ್ಯರ ತಂಡದ ವಿರುದ್ಧದ ಪಂದ್ಯವೊಂದರಲ್ಲಿ ಬಾಲೂ 13 ವಿಕೆಟ್ ಪಡೆದು ಐವತ್ತು ರನ್ ಗಳಿಸಿದ್ದರು. ಗೋಖಲೆ, ತಿಲಕ್, ಲಾಲಾ ಲಜಪತ್ ರಾಯ್ ಸ್ವಾತಂತ್ರ್ಯ ಹೋರಾಟದ ಮುನ್ನೆಲೆಗೆ ಬಂದಿದ್ದ ದಿನಗಳಲ್ಲಿ ಪಲ್ವಂಕರ್ ಸೋದರರು ಆಡಿದ 1906-1907ರ ಹಿಂದೂ ಕ್ರಿಕೆಟ್ ಗೆಲುವುಗಳು ಅಸಾಧಾರಣ ಗಮನ ಸೆಳೆದವು. 1911ರ ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ ಕೌಂಟಿ ಪಂದ್ಯಗಳಲ್ಲಿ ಮಿಂಚಿದರು. 114 ವಿಕೆಟ್‌ಗಳನ್ನು ಉರುಳಿಸಿದ್ದರು. ಬಾಲೂ ಅವರನ್ನು ಬಿಟ್ಟರೆ ಪ್ರಥಮದರ್ಜೆ ಪಂದ್ಯಗಳಲ್ಲಿ ಇಂಗ್ಲೆಂಡ್ ನೆಲದಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಗಳಿಸಿದವರು ವಿನೂ ಮಂಕಡ್ ಅವರೊಬ್ಬರೇ. ಯಾರ್ಕ್ ಶೈರ್, ಲಂಕಾಶ್ಯೈರ್, ವಾರ್ವಿಕ್ ಶೈರ್, ಆಕ್ಸ್‌ಫರ್ಡ್, ಕೇಂಬ್ರಿಜ್, ಸರ್ರೇ,, ಎಂ.ಸಿ.ಸಿ., ಲಿಸ್ಟರ್ ಶೈರ್ ವಿರುದ್ಧದ ಪಂದ್ಯಗಳಲ್ಲಿ ಸಿಂಹಪಾಲಿನ ವಿಕೆಟ್ ಗಳಿಕೆ ಅವರದಾಗಿತ್ತು. ತಮ್ಮ ಶಿವರಾಮ್ ಬ್ಯಾಟಿಂಗ್‌ನಲ್ಲಿ ಗಮನ ಸೆಳೆದರು. ಆ ವೇಳೆಗೆ ಬಾಲೂಗೆ 36ರ ವಯಸ್ಸು. ಆರು ವರ್ಷಗಳ ಹಿಂದೆಯೇ ತಮ್ಮನ್ನು ಇಂಗ್ಲೆಂಡಿಗೆ ಕಳಿಸಿದ್ದರೆ ಇನ್ನೂ ಹೆಚ್ಚು ಸಾಧಿಸಬಹುದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡುವ ಸಂದರ್ಶನವೊಂದರಲ್ಲಿ ಹೇಳುತ್ತಾರೆ. ಸ್ವದೇಶಕ್ಕೆ ಮರಳಿದ ಬಾಲೂ ಅವರನ್ನು ಬಾಂಬೆಯ ಡಿಪ್ರೆಸ್ಡ್ ಕ್ಲಾಸಸ್ ಅಸೋಸಿಯೇಷನ್ ತಮ್ಮವನೆಂದು ಹೆಮ್ಮೆಯಿಂದ ಸನ್ಮಾನಿಸುತ್ತದೆ. ತಮ್ಮೊಡನೆ ಇಂಗ್ಲೆಂಡಿಗೆ ತೆರಳಿದ್ದ ಬ್ರಾಹ್ಮಣ, ಮುಸ್ಲಿಮ್, ಪಾರ್ಸಿ ಆಟಗಾರರು ಮತ್ತು ಯುವರಾಜರಾಗಿದ್ದ ಆಟಗಾರರಗಿಂತ ಉತ್ತಮ ಆಟವಾಡಿದ್ದರು ಬಾಲೂ. ಈ ಸಭೆಯಲ್ಲಿ ಬಾಲೂ ಅವರಿಗೆ ಮಾನಪತ್ರ ನೀಡಿ ಸ್ವಾಗತಿಸಿದವರು ಬಾಬಾಸಾಹೇಬ ಅಂಬೇಡ್ಕರ್.

ಆನಂತರದ ವರ್ಷಗಳಲ್ಲಿ ಬಾಲೂ ಕಾಲಕ್ರಮೇಣ ಹಿನ್ನೆಲೆಗೆ ಸರಿಯುತ್ತಾರೆ. ಅವರ ಇತರೆ ತಮ್ಮಂದಿರಾದ ಗಣಪತ್ ಮತ್ತು ವಿಠ್ಠಲ್ ಪಲ್ವಂಕರ್ ಕ್ರಿಕೆಟ್ ದಿಗಂತದ ತಾರೆಗಳಾಗುತ್ತಾರೆ. 1913ರಲ್ಲಿ ನಾಲ್ಕೂ ಮಂದಿ ಸೋದರರು ಹಿಂದೂ ತಂಡದಲ್ಲಿ ಆಡುತ್ತಾರೆ. ಎಲ್ಲ ದೃಷ್ಟಿಯಿಂದ ಅರ್ಹರಾಗಿದ್ದರೂ ಜಾತಿಯ ಕಾರಣ ಬಾಲೂ ಅವರಿಗೆ ತಂಡದ ನಾಯಕತ್ವ ದಕ್ಕುವುದಿಲ್ಲ. ಹಿಂದೂ ತಂಡಕ್ಕೆ ಬಾಲೂ ಸಲ್ಲಿಸಿದ ಸೇವೆಯನ್ನು ಬಾಂಬೆ ಕ್ರಾನಿಕಲ್ ಪತ್ರಿಕೆ ಕೊಂಡಾಡಿ ಸಂಪಾದಕೀಯ ಬರೆಯುತ್ತದೆ. ನಾಯಕತ್ವ ನೀಡದ ಕುರಿತು ಸಾರ್ವಜನಿಕ ಆಕ್ರೋಶಕ್ಕೆ ಈ ಪತ್ರಿಕೆ ಅಕ್ಷರ ರೂಪ ನೀಡುತ್ತದೆ. ತಮ್ಮ ನಲವತ್ತನಾಲ್ಕನೆಯ ವಯಸ್ಸಿನಲ್ಲೂ ಚೆಂಡನ್ನು ತಿರುಗಿಸುವ ಬಾಲೂ ಕೈ ಚಳಕ ಕರಗಿರುವುದಿಲ್ಲ.

ಬಾಲೂಗೆ ಸಿಗದ ನಾಯಕತ್ವದ ಸಮ್ಮಾನ ಅವರ ಕಿರಿಯ ತಮ್ಮ ವಿಠ್ಠಲ್‌ಗೆ ದೊರೆಯುತ್ತದೆ. 1923ರಿಂದ 1926ರ ನಡುವಣ ನಾಲ್ಕು ವರ್ಷಗಳ ಅವಧಿಯಲ್ಲಿ ಪಲ್ವಂಕರ್ ವಿಠ್ಠಲ್ ಅವರು ಹಿಂದೂ ತಂಡವನ್ನು ಮೂರು ಗೆಲುವುಗಳತ್ತ ಮುನ್ನಡೆಸುತ್ತಾರೆ. ಮೂರನೆಯ ಪಂದ್ಯವಂತೂ ಜಾತಿವಾದಿಗಳ ಭದ್ರನೆಲೆಯೆನಿಸಿದ್ದ ಪುಣೆಯಲ್ಲಿ ಜರುಗಿತ್ತು. ಅಣ್ಣ ಬಾಲೂ ಬೆವರು ಸುರಿಸಿ ಬೌಲ್ ಮಾಡಿದ್ದ ಅದೇ ಕ್ರೀಡಾಂಗಣ. ಅಸ್ಪೃಶ್ಯ ಬಾಲೂ ಅಣ್ಣನನ್ನು ಹೊರಗಿಡಲಾಗಿದ್ದ ಪೂನಾ ಕ್ಲಬ್ ಪೆವಿಲಿಯನ್. ತಮ್ಮ ವಿಠ್ಠಲ್ ಇದೇ ಪೆವಿಲಿಯನ್‌ನಲ್ಲಿ ಹಿಂದೂ ತಂಡದ ನಾಯಕನಾಗಿ ಟ್ರೋಫಿಯನ್ನು ಸ್ವೀಕರಿಸಿದ್ದು ಸಿಹಿ ಪ್ರತೀಕಾರವೇ ಸರಿ. ವಿಠ್ಠಲ್ ಅವರ ಈ ಗೆಲುವುಗಳು ಅಂಬೇಡ್ಕರ್ ಅವರ ರಾಜಕೀಯ ಪ್ರವೇಶದ ಹೊತ್ತಿನಲ್ಲಿ ಘಟಿಸಿರುತ್ತವೆ. ಅಂಬೇಡ್ಕರ್ 1923ರಲ್ಲಿ ಡಾಕ್ಟರಲ್ ಪದವಿಯೊಂದಿಗೆ ಲಂಡನ್ನಿನಿಂದ ಹಿಂತಿರುಗಿರುತ್ತಾರೆ.

ಪಲ್ವಂಕರ್ ಸೋದರರ ಆಟವನ್ನು ಗಾಂಧೀಜಿ ನೋಡಿರುವುದಿಲ್ಲ. ಆದರೆ ಅಸ್ಪೃಶ್ಯತೆಯ ವಿರುದ್ಧ ಅವರು ಹೂಡಿದ್ದ ಆಂದೋಲನದಿಂದ ಪಲ್ವಂಕರ್ ಸೋದರರು ಪ್ರೇರಿತರಾಗಿ ತಮ್ಮ ಹಕ್ಕುಗಳಿಗೆ ಹೊಸ ಹುಮ್ಮಸ್ಸಿನಿಂದ ಹೋರಾಡುತ್ತಾರೆ. ಈ ನಡುವೆ ಬಾಲೂ ಮುಂಬಯಿಯ ಕಾರ್ಪೊರೇಷನ್ ಚುನಾವಣೆಗೆ ಹಿಂದೂಮಹಾಸಭಾದ ಹುರಿಯಾಳಾಗಿ ಸ್ಪರ್ಧಿಸಿ ಸೋಲುತ್ತಾರೆ. ಬಾಂಬೆ ಪ್ರಾಂತೀಯ ಶಾಸನಸಭೆಗೆ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಡಿಮೆ ಅಂತರದಿಂದ ಸೋಲುತ್ತಾರೆ. ಅವರ ಪ್ರತಿಸ್ಪರ್ಧಿ ಖುದ್ದು ಬಾಬಾಸಾಹೇಬ ಅಂಬೇಡ್ಕರ್ ಆಗಿರುತ್ತಾರೆ.

1955ರ ಜುಲೈ ತಿಂಗಳಿನಲ್ಲಿ ಕಡೆಯುಸಿರೆಳೆಯುತ್ತಾರೆ. ಕೋಚ್‌ಗಳು, ತರಬೇತಿದಾರರು, ಶಿಬಿರಗಳು ಇಲ್ಲದಿದ್ದ ಕಾಲದಲ್ಲಿ ಕೇವಲ ಬ್ರಿಟಿಷರು ಆಡುವುದನ್ನು ನೋಡಿ, ಅವರಿಗಿಂತ ಚೆನ್ನಾಗಿ ಆಡುವುದನ್ನು ಕಲಿತ ಪಲ್ವಂಕರ್ ಸೋದರರು ನಿಜಕ್ಕೂ ಮಹಾನ್ ಭಾರತೀಯರು. ಬಾಲೂ ಅವರಂತಹ ಮತ್ತೊಬ್ಬ ಬೌಲರ್‌ನನ್ನು ಭಾರತ ಸೃಷ್ಟಿಸುವುದು ಸದ್ಯ ಭವಿಷ್ಯದಲ್ಲಿ ಸಾಧ್ಯವಿಲ್ಲ ಎನ್ನುತ್ತಾರೆ ವಿಜಯ್ ಮರ್ಚೆಂಟ್. ಆ ಕ್ರಿಕೆಟ್ ಸುವರ್ಣಯುಗದ ರಾಷ್ಟ್ರೀಯ ಹೀರೊ ಮತ್ತು ಈ ಆಟದ ಅಸಲಿ ಆಶಯವನ್ನು ಮೈಗೂಡಿಸಿಕೊಂಡಿದ್ದ ಸಜ್ಜನಿಕೆಯ ವ್ಯಕ್ತಿ ಎಂದೂ ಕೊಂಡಾಡುತ್ತಾರೆ.

ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಮತ್ತು ಅದಕ್ಕಿಂತ ಹೆಚ್ಚಾಗಿ ಭಾರತದ ಸಾಮಾಜಿಕ ಬಿಡುಗಡೆಯ ಹೋರಾಟದಲ್ಲಿ ಪಲ್ವಂಕರ್ ಸೋದರರಿಗೆ ಸಿಗಬೇಕಿದ್ದ ಸ್ಥಾನ ಈಗಲೂ ದಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.