ಬುಧವಾರ, 26 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರ್ಮೇನಿಯಾದಲ್ಲಿ ಚೆಸ್‌ ಟೂರ್ನಿ: ಪ್ರಶಸ್ತಿ ಖಚಿತಪಡಿಸಿಕೊಂಡ ಅರ್ಜುನ್ ಇರಿಗೇಶಿ

Published 18 ಜೂನ್ 2024, 14:43 IST
Last Updated 18 ಜೂನ್ 2024, 14:43 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಗ್ರ್ಯಾಂಡ್‌ಮಾಸ್ಟರ್ ಅರ್ಜುನ್‌ ಇರಿಗೇಶಿ, ಮತ್ತೊಮ್ಮೆ ಅಮೋಘ ಆಟವಾಡಿ ಅರ್ಮೇನಿಯಾದ ಜೆರ್ಮುಕ್‌ನಲ್ಲಿ ನಡೆದ ಸ್ಟೆಪಾನ್ ಅವಗ್ಯಾನ್ ಸ್ಮಾರಕ ಚೆಸ್‌ ಟೂರ್ನಿಯಲ್ಲಿ ಒಂದು ಸುತ್ತು ಉಳಿದಿರುವಂತೆಯೇ ಪ್ರಶಸ್ತಿ ಗೆದ್ದುಕೊಂಡರು.

20 ವರ್ಷದ ಅರ್ಜುನ್, 9 ಸುತ್ತುಗಳ ಈ ಟೂರ್ನಿಯ ಎಂಟನೇ ಸುತ್ತಿನಲ್ಲಿ ರಷ್ಯಾದ ಗ್ರ್ಯಾಂಡ್‌ಮಾಸ್ಟರ್‌ ವೊಲೊಡರ್ ಮುರ್ಜಿನ್ ಅವರನ್ನು 63 ನಡೆಗಳಲ್ಲಿ ಸೋಲಿಸಿದರು. ಟೂರ್ನಿಯಲ್ಲಿ ಅಜೇಯರಾಗಿರುವ ಅವರು ನಾಲ್ಕು ಗೆಲುವು, ನಾಲ್ಕು ‘ಡ್ರಾ’ಗಳೊಂದಿಗೆ ಆರು ಪಾಯಿಂಟ್ಸ್ ಸಂಗ್ರಹಿಸಿದ್ದಾರೆ.

10 ಆಟಗಾರರ ಟೂರ್ನಿಯಲ್ಲಿ ಅವರು ಸಮೀಪದ ಸ್ಪರ್ಧಿಗಿಂತ 1.5 ಪಾಯಿಂಟ್ಸ್ ಮುನ್ನಡೆಯಲ್ಲಿದ್ದಾರೆ. ಮೂರು ಮಂದಿ ಆಟಗಾರರು ತಲಾ 4.5 ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಈ ಗೆಲುವಿನೊಡನೆ ಅವರು ಫಿಡೆ ಲೈವ್ ರೇಟಿಂಗ್‌ನಲ್ಲಿ ಜೀವನಶ್ರೇಷ್ಠ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಅವರು ಪ್ರಸ್ತುತ 2779.9 ರೇಟಿಂಗ್ ಹೊಂದಿದ್ದಾರೆ. ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌, ಅಮೆರಿಕದ ಹಿಕಾರು ನಕಾಮುರಾ ಮತ್ತು ಫ್ಯಾಬಿಯಾನೊ ಕರುವಾನಾ ಅವರು ಮೊದಲ ಮೂರು ಸ್ಥಾನದಲ್ಲಿದ್ದಾರೆ.

‘ಈ ಟೂರ್ನಿಯಲ್ಲಿ ನನ್ನಿಂದ ಅತ್ಯುತ್ತಮ ಪ್ರದರ್ಶನ ಬಂದಿದೆ. ನಾನು ಅವಕಾಶಗಳನ್ನೆಲ್ಲಾ ಬಳಸಿದೆ. ಇಂಥ ಟೂರ್ನಿಗಳಲ್ಲಿ ಉತ್ತಮ ಸಾಧನೆ ತೋರುವುದು ಕಷ್ಟ. ಪೈಪೋಟೊ ಪ್ರಬಲವಾಗಿರುತ್ತದೆ. ನಾನು ಆಡುತ್ತಿರುವ ರೀತಿಯಿಂದ ಸಂತಸವಾಗಿದೆ’ ಎಂದು ಅರ್ಜುನ್‌ ಹೇಳಿದರು.

ಅರ್ಜುನ್‌ ಈ ವರ್ಷ ಉತ್ತಮ ಸಾಧನೆ ತೋರಿದ್ದಾರೆ. ಏಪ್ರಿಲ್‌ನಲ್ಲಿ ಮೆನೊರ್ಕಾ ಓಪನ್‌ನಲ್ಲಿ ಕಿರೀಟ ಧರಿಸಿದ್ದ ಅವರು ಟೆಪೆ ಸಿಗೆಮನ್ ಚೆಸ್‌ ಟೂರ್ನಿಯಲ್ಲಿ ಎರಡನೇ ಸ್ಥಾನ ಮತ್ತು ಶಾರ್ಜಾ ಮಾಸ್ಟರ್ಸ್‌ ಓಪನ್ ಟೂರ್ನಿಯಲ್ಲಿ ಜಂಟಿ ಐದನೇ ಸ್ಥಾನ ಪಡೆದಿದ್ದಾರೆ.

ಅಮೆರಿಕದ ಗ್ರ್ಯಾಂಡ್‌ಮಾಸ್ಟರ್‌ ಸಾಮ್ಯುಯೆಲ್ ಸೆವಿಯನ್ ಅವರು ಸ್ಥಳೀಯ ಗ್ರ್ಯಾಂಡ್‌ಮಾಸ್ಟರ್ ಮಾನ್ಯುಯೆಲ್ ಪೆಟ್ರೊಸಿಯನ್ ಜೊತೆ ‘ಡ್ರಾ’ ಮಾಡಿಕೊಂಡ ಕಾರಣ ರ್ಜುನ್‌ ಮುನ್ನಡೆಯ ಅಂತರ 1.5 ಪಾಯಿಂಟ್ಸ್‌ಗೇರಿತು.

ಅರ್ಜುನ್ ಅಂತಿಮ ಸುತ್ತಿನಲ್ಲಿ ಪೆಟ್ರೊಸಿಯನ್ ಅವರನ್ನು ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದರೆ ಅವರ ಮತ್ತು ಈಗ ವಿಶ್ವ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಕರುವಾನಾ (2795.6) ನಡುವಣ ರೇಟಿಂಗ್ ಅಂತರ ಕಡಿಮೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT