ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿಯಲ್ಲಿ ಆಸೀಸ್‌ಗೆ ಭಾರತ ಆಘಾತ: ಒಲಿಂಪಿಕ್ಸ್‌ನಲ್ಲಿ 52 ವರ್ಷದ ಬಳಿಕ ಗೆಲುವು

Published 2 ಆಗಸ್ಟ್ 2024, 13:20 IST
Last Updated 2 ಆಗಸ್ಟ್ 2024, 13:20 IST
ಅಕ್ಷರ ಗಾತ್ರ

ಪ್ಯಾರಿಸ್‌: ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರ ಗಳಿಸಿದ ಎರಡು ಗೋಲುಗಳ ನೆರವಿನಿಂದ ಭಾರತ ಪುರುಷರ ಹಾಕಿ ತಂಡ ಒಲಿಂಪಿಕ್‌ ಕ್ರೀಡೆಗಳ ಹಾಕಿ ‘ಬಿ’ ಗುಂಪಿನ ಕೊನೆಯ ಲೀಗ್‌ ಪಂದ್ಯದಲ್ಲಿ ಪ್ರಬಲ ಆಸ್ಟ್ರೇಲಿಯಾ ತಂಡವನ್ನು ಶುಕ್ರವಾರ 3–2 ಗೋಲುಗಳಿಂದ ಸೋಲಿಸಿತು.

ಈ ಹಿಂದೆಯೇ ಎಂಟರ ಘಟ್ಟಕ್ಕೆ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದ ಭಾರತ ಈ ಪಂದ್ಯದಲ್ಲಿ ವೀರೋಚಿತ ಆಟವಾಡಿತಲ್ಲದೇ ಬಹುತೇಕ ಅವಧಿಯಲ್ಲಿ ಮೇಲುಗೈ ಸಾಧಿಸಿ, ‘ಕೂಕಾಬುರಾಗಳಿಗೆ’ ಆಘಾತ ನೀಡಿತು. 1972ರ ಮ್ಯೂನಿಕ್‌ ಒಲಿಂಪಿಕ್ಸ್‌ ನಂತರ ಭಾರತ ಇದೇ ಮೊದಲ ಬಾರಿ ಆಸ್ಟ್ರೇಲಿಯಾಕ್ಕೆ ಸೋಲುಣಿಸಿದಂತಾಯಿತು. ಹರ್ಮನ್‌ಪ್ರೀತ್, ಈ ಕ್ರೀಡೆಗಳಲ್ಲಿ ಈವರೆಗೆ ಆರು ಗೋಲುಗಳನ್ನು ಗಳಿಸಿದ್ದಾರೆ.

ಭಾರತ ಇದುವರೆಗಿನ ತನ್ನ ಉತ್ತಮ ಆಟವನ್ನು ಗುಂಪಿನ ಕೊನೆಯ ಪಂದ್ಯಕ್ಕೆ ಉಳಿಸಿಕೊಂಡಂತೆ ಕಂಡಿತು. ಆರಂಭದಿಂದಲೇ ಆಕ್ರಮಣಕಾರಿ ಆಟದ ಪ್ರದರ್ಶನ ನೀಡಿತು. ರಕ್ಷಣೆಯ ವಿಷಯದಲ್ಲೂ ತಂಡದ ಪ್ರದರ್ಶನ ಅಷ್ಟೇ ಪರಿಣಾಮಕಾರಿಯಾಗಿತ್ತು.

ಅಭಿಷೇಕ್‌ (12ನೇ ನಿಮಿಷ), ನಾಯಕ ಹರ್ಮನ್‌ಪ್ರೀತ್‌ (13 ಮತ್ತು 33ನೇ ನಿಮಿಷ) ಭಾರತ ತಂಡದ ಪರ ಗೋಲುಗಳನ್ನು ಗಳಿಸಿದರೆ, ಟಾಮ್‌ ಕ್ರೇಗ್‌ (25ನೇ) ಮತ್ತು ಬ್ಲೇಕ್‌ ಗೋವರ್ಸ್‌ (55ನೇ) ಆಸ್ಟ್ರೇಲಿಯಾ ಪರ ಚೆಂಡನ್ನು ಗುರಿತಲುಪಿಸಿದರು.

ಭಾರತ ಮೂರು ಗೆಲುವು, ಒಂದು ‘ಡ್ರಾ’, ಒಂದು ಸೋಲಿನೊಡನೆ ಒಟ್ಟು 10 ಪಾಯಿಂಟ್ಸ್ ಕಲೆಹಾಕಿ ‘ಬಿ’ ಗುಂಪಿನಲ್ಲಿ ಎರಡನೇ ಸ್ಥಾನ ಪಡೆಯಿತು. ಹಾಲಿ ಚಾಂಪಿಯನ್‌ ಬೆಲ್ಜಿಯಂ ಆಡಿದ ನಾಲ್ಕು ಪಂದ್ಯಗಳಿಂದ 12 ಪಾಯಿಂಟ್ಸ್ ಸಂಗ್ರಹಿಸಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾಕ್ಕೆ ಇಂದಿನದು ಎರಡನೇ ಸೋಲು. ಅದು 9 ಪಾಯಿಂಟ್‌ಗಳೊಡನೆ ಮೂರನೇ ಸ್ಥಾನದಲ್ಲಿ ಲೀಗ್ ಮುಗಿಸಿತು.

ಬೆಲ್ಜಿಯಂ, ಅರ್ಜೆಂಟೀನಾ ವಿರುದ್ಧ ಕೊನೆಯ ಪಂದ್ಯ ಆಡಲಿದ್ದು, ಏನೇ ಫಲಿತಾಂಶ ಬಂದರೂ ‘ರೆಡ್‌ ಡೆವಿಲ್ಸ್‌’ ಅಗ್ರಸ್ಥಾನಕ್ಕೆ ಚ್ಯುತಿ ಬರುವುದಿಲ್ಲ.

‘ಇದು ನಮಗೆ ಮಹತ್ವದ ಪಂದ್ಯವಾಗಿತ್ತು. ಕ್ವಾರ್ಟರ್‌ಫೈನಲ್ ಪಂದ್ಯಕ್ಕೆ ಮೊದಲು ನಮಗೆ ಇಂಥ ಪಂದ್ಯವೊಂದರ ಅಗತ್ಯ ಇತ್ತು. ಆರಂಭದಿಂದಲೇ ನಾವು ಅವರನ್ನು ಒತ್ತಡದಲ್ಲಿಟ್ಟೆವು. ಆಸ್ಟ್ರೇಲಿಯಾವನ್ನು ಸೋಲಿಸಿದ್ದು ಹೆಮ್ಮೆಯ ಕ್ಷಣ’ ಎಂದು ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಭಾರತ ಆರಂಭದಿಂದಲೇ ದಾಳಿಗಿಳಿಯಿತು. ಮೊದಲ ಎರಡು ನಿಮಿಷಗಳಲ್ಲಿ ಎರಡು ಬಾರಿ ಆಸ್ಟ್ರೇಲಿಯಾ ಗೋಲಿನ ಬಳಿ ಲಗ್ಗೆಹಾಕಿದ್ದು ನೋಡಿದರೆ ಇರಾದೆ ಸ್ಪಷ್ಟವಾಗಿತ್ತು. ಆಕ್ರಮಣದ ಆಟದಲ್ಲಿ ಭಾರತ ಮಿಂಚಿದ್ದು ಒಂದೆಡೆಯಾದರೆ, ಇನ್ನೊಂದೆಡೆ ಕೊನೆಯ ಬಾರಿ ಅಂತರರಾಷ್ಟ್ರೀಯ ಸ್ಪರ್ಧಾಕಣಕ್ಕಿಳಿದಿರುವ  ಅನುಭವಿ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ಗೋಲಿನ ಎದುರು ಎದುರಾಳಿಗೆ ತಡೆಗೋಡೆಯಾದರು. ಆಸ್ಟ್ರೇಲಿಯಾದ ಕೆಲವು ಉತ್ತಮ ಗೋಲು ಅವಕಾಶಗಳನ್ನು ಅವರು ತಡೆದರು.

ವಿರಾಮದ ವೇಳೆ ಭಾರತ 2–1 ಗೋಲುಗಳಿಂದ ಮುಂದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT