ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Paralympics: ಅಂಧಕಾರ ಹಿಂದಿಕ್ಕಿ ಬೆಳಕಿನೆಡೆ ಮುನ್ನುಗ್ಗಿದ ರಕ್ಷಿತಾ ರಾಜು

ಪ್ಯಾರಾಲಿಂಪಿಕ್ಸ್‌ನ 1500 ಮೀ. ಓಟದಲ್ಲಿ ಭಾಗವಹಿಸಲಿರುವ ಭಾರತದ ಮೊದಲ ಅಥ್ಲೀಟ್
Published 23 ಆಗಸ್ಟ್ 2024, 23:34 IST
Last Updated 23 ಆಗಸ್ಟ್ 2024, 23:34 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಬಾಳೂರು ಗುಡ್ನಳ್ಳಿ ಎಂಬ ಪುಟ್ಟ ಗ್ರಾಮವಿದೆ. ಈ ಊರಿನ ರಕ್ಷಿತಾಗೆ ಹುಟ್ಟಿನಿಂದಲೇ ಅಂಧತ್ವ ಕಾಡಿತು. ಎರಡು ವರ್ಷ ತುಂಬುವಷ್ಟರಲ್ಲಿ ಅಮ್ಮ ನಿಧನರಾದರು. ಅಕ್ಕರೆಯಿಂದ ಬೆಳೆಸುತ್ತಿದ್ದ ಅಪ್ಪನೂ ಸಾವನ್ನಪ್ಪಿದಾಗ ಈ ಹುಡುಗಿಗೆ 11 ವರ್ಷ ಅಷ್ಟೇ. 

ಬೆಳಕೆಂದರೆ ಏನು ಎಂಬುದೇ ಗೊತ್ತಿಲ್ಲದ ಬಾಲಕಿಯ ಜೀವನ ಮತ್ತಷ್ಟು ಅಂಧಕಾರದಲ್ಲಿ ಮುಳುಗಿತ್ತು.  ಶ್ರವಣದೋಷವಿದ್ದ ಅಜ್ಜಿಯು ರಕ್ಷಿತಾ ಮತ್ತು ಅವರ ತಮ್ಮನನ್ನು ಪೋಷಣೆ ಮಾಡಿದರು. 

ಅದರೆ, ಇವತ್ತು ಅದೇ ರಕ್ಷಿತಾ ಪ್ಯಾರಿಸ್‌ ನಗರಿಯಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲು ಸಿದ್ಧರಾಗಿದ್ದಾರೆ.  ಅಂಧರ ಟಿ 11 ವಿಭಾಗದ 1500 ಮೀಟರ್ಸ್‌ಓಟದಲ್ಲಿ ಸ್ಪರ್ಧಿಸಲಿದ್ದಾರೆ. ಈ ವಿಭಾಗದಲ್ಲಿ ಸ್ಪರ್ಧೆ ಮಾಡುತ್ತಿರುವ ಭಾರತದ ಮೊಟ್ಟಮೊದಲ ಅಂಧ ಮಹಿಳಾ ಅಥ್ಲೀಟ್ ಇವರಾಗಿದ್ದಾರೆ.

‘ನನಗೆ ಹುಟ್ಟಿನಿಂದಲೇ ಶೇ 100ರಷ್ಟು ಅಂಧತ್ವ ಇದೆ. ಅಜ್ಜಿ ಮತ್ತು ಆಂಟಿ ನನ್ನನ್ನು ನೋಡಿಕೊಂಡಿದ್ದಾರೆ.  ಚಿಕ್ಕಮಗಳೂರಿನ  ಆಶಾಕಿರಣ ಅಂಧರ ಶಾಲೆಗೆ ನನ್ನನ್ನು ಸೇರಿಸಿದ್ದರು. ಅಲ್ಲಿ ಶವಾದ್ ಎಂಬ ನನ್ನ ಸೀನಿಯರ್ ವಿದ್ಯಾರ್ಥಿ ಅಂಧರ ಕ್ರೀಡಾಕೂಟದಲ್ಲಿ ಸ್ಪರ್ಧಿಸುತ್ತಿದ್ದರು. ಅವರ ಬಗ್ಗೆ ತಿಳಿದು ನನಗೂ ಓಡುವ ಆಸೆ ಚಿಗುರಿತು. ಶವಾದ್ ಅವರಿಗೆ ರಾಹುಲ್ ಸರ್ ಗೈಡ್ ರನ್ನರ್ ಕೂಡ ಇದ್ದರು. ಪಿ.ಟಿ (ದೈಹಿಕ ಶಿಕ್ಷಣ) ಸರ್ ಗೋಪಾಲ್ ಅವರು ನನ್ನ ಪ್ರತಿಭೆ ಗುರುತಿಸಿದರು. ನಾನೂ ಚೆನ್ನಾಗಿ ಓಡುವುದನ್ನು ನೋಡಿ ರಾಹುಲ್ ಸರ್ ಬೆಂಗಳೂರಿಗೆ ಕರೆದುಕೊಂಡು ಬಂದರು. ಅಲ್ಲಿಂದ ನನ್ನ ಜೀವನದ ದಿಕ್ಕು ಬದಲಾಯಿತು. ಡೆಲ್ಲಿ ನ್ಯಾಷನಲ್ಸ್‌ನಲ್ಲಿ 400 ಮೀ ಓಟದಲ್ಲಿ ಚಿನ್ನದ ಪದಕ ಜಯಿಸಿದೆ. ಅದರ ನಂತರ ನಾನು 1500 ಮೀ ಓಟ ಆಯ್ಕೆ ಮಾಡಿಕೊಂಡೆ. ನನಗೆ ರಾಹುಲ್ ಸರ್ ಗೈಡ್ ರನ್ನರ್ ಮತ್ತು ಕೋಚ್‌ ಕೂಡ ಆಗಿದ್ದಾರೆ’ ಎಂದು ರಕ್ಷಿತಾ ತಮ್ಮ ಜೀವನಕ್ಕೆ ಲಭಿಸಿದ ತಿರುವಿನ ಕುರಿತು ಹೆಮ್ಮೆಯಿಂದ ಹೇಳುತ್ತಾರೆ.

ಕಳೆದ ಆರು ವರ್ಷಗಳಿಂದ ಅವರು ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಹೋದ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ಪ್ಯಾರಾ ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಐದನೇ ಸ್ಥಾನ ಪಡೆದಿದ್ದರು. 2022ರಲ್ಲಿ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ, 2023ರ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, ಅದೇ ವರ್ಷ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ 400 ಮೀ ಮತ್ತು 1500 ಮೀ ವಿಭಾಗಗಳಲ್ಲಿ ಚಿನ್ನ, ಶಾರ್ಜಾ ಅಂತರರಾಷ್ಟ್ರೀಯ ಓಪನ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಬೆಳ್ಳಿ, 2021ರಲ್ಲಿ ದುಬೈ ಪ್ಯಾರಾ ಗ್ರ್ಯಾನ್‌ಪ್ರೀ ಅಥ್ಲೆಟಿಕ್ಸ್‌ನಲ್ಲಿ ಕಂಚು, 2019ರಲ್ಲಿ ಸ್ವಿಟ್ಜರ್‌ಲೆಂಡ್‌ನಲ್ಲಿ ನಡೆದಿದ್ದ  ಜೂನಿಯರ್ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ, 2019ರಲ್ಲಿ ಜಕಾರ್ತದಲ್ಲಿ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಚಿನ್ನದ ಪದಕ ಜಯಿಸಿದ್ದರು. 

'ನಾನು ಮತ್ತು ನನ್ನ ಪತ್ನಿ ಸೌಮ್ಯ ಸೇರಿ ರಕ್ಷಿತಾ ರಾಜು ಅವರಿಗೆ ತರಬೇತಿ ನೀಡುತ್ತಿದ್ದೇವೆ. ಸೌಮ್ಯ ಕೂಡ ಅಥ್ಲೀಟ್ ಆಗಿದ್ದವರು. ಅವರು ಅರಣ್ಯ ಇಲಾಖೆಯ ಉದ್ಯೋಗಿಯೂ ಹೌದು. ಟ್ರ್ಯಾಕ್‌ ವಿಭಾಗದಲ್ಲಿ ಅಂಧರಿಗೆ ತಾಲೀಮು ನೀಡುವುದು ಸವಾಲಿನ ಕಾರ್ಯ. ಅವರು ಓಡುವ ವೇಗಕ್ಕೆ ತಕ್ಕಂತೆ ನನ್ನ ಓಟ ಇರಬೇಕು. ಅವರಿಗಿಂತ ಮುಂದೆ ಹೋದರೆ ಅಥವಾ ಹಿಂದೆ ಉಳಿದುಬಿಟ್ಟರೆ ಅನರ್ಹರಾಗುತ್ತೇವೆ. ಲೇನ್ ಪಾಲನೆಯೂ ಕಡ್ಡಾಯ. ಹೋದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ರಕ್ಷಿತಾ 5 ನಿಮಿಷ 16 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು. ಈಚೆಗೆ ಇಲ್ಲಿ ಟ್ರಯಲ್ಸ್ ನಡೆದಾಗ 5ನಿಮಿಷ, 7.3ಸೆಕೆಂಡುಗಳಲ್ಲಿ ಗುರಿ ಸಾಧಿಸಿದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಕಠಿಣ ಪೈಪೋಟಿ ಇರುತ್ತದೆ. ಅವರಿಗೆ ಅಲ್ಲಿ ನಾನು, ಸೌಮ್ಯ, ತಬ್ರೇಜ್ ಮತ್ತು ಗೋವಿಂದ್ ಅವರು ಗೈಡ್‌ ರನ್ನರ್ ಆಗಿ ಹೋಗುತ್ತಿದ್ದೇವೆ’ ಎಂದು ಕೋಚ್ ರಾಹುಲ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಆರಂಭಿಕ ದಿನಗಳಲ್ಲಿ ಬಹಳ ಕಷ್ಟಪಟ್ಟಿದ್ದೇವೆ. ಸಾಯ್,  ಗೋ ಸ್ಪೋರ್ಟ್ಸ್ ಮತ್ತು ಲೈಫ್‌ಲೈನ್‌ನ ಕಿಶೋರ್ ಹೆಗಡೆ ಅವರ ನೆರವು ರಕ್ಷಿತಾಗೆ ಲಭಿಸಿದೆ. ಅದರಿಂದಾಗಿ ಉನ್ನತ ಸಾಧನೆ ಸಾಧ್ಯವಾಗಿದೆ’ ಎಂದು ರೈಲ್ವೆಯ ಉದ್ಯೋಗಿಯೂ ಆಗಿರುವ ರಾಹುಲ್ ಹೇಳುತ್ತಾರೆ.   

ಇದೇ 28ರಿಂದ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ಸ್ ಆರಂಭವಾಗಲಿದೆ. ನಾಲ್ಕು ದಿನ ಮೊದಲೇ ರಕ್ಷಿತಾ ಅವರು ಭಾರತ ತಂಡದೊಂದಿಗೆ ಪ್ಯಾರಿಸ್‌ಗೆ ‍ಪಯಣಿಸಲಿದ್ದಾರೆ. 

ಗೈಡ್ ರನ್ನರ್ ಮತ್ತು ಟೆಧರ್

ಅಂಧರ ಓಟದ ವಿಭಾಗದಲ್ಲಿ ಅಥ್ಲೀಟ್‌ ಜೊತೆಗೆ ಒಬ್ಬ ಗೈಡ್ ರನ್ನರ್ ಇರುತ್ತಾರೆ. ಅವರಿಬ್ಬರಿಗೂ ಒಂದು ಟೆಧರ್ (ಬೆಲ್ಟ್ ಮಾದರಿಯ ಸಲಕರಣೆ) ನೀಡಲಾಗಿರುತ್ತದೆ. ಇಬ್ಬರೂ ಅದನ್ನು ಹಿಡಿದು ಓಡಬೇಕು.  ‘ಟೆಧರ್ ನಮ್ಮಿಬ್ಬರ ಸಂಪರ್ಕಕ್ಕೆ ನೀಡಲಾಗಿರುತ್ತದೆ. ಇದರಿಂದ ಒಂದೇ ವೇಗದಲ್ಲಿ ಓಡಲು ಇಬ್ಬರಿಗೂ ಅನುಕೂಲ. ಲೇನ್ ಶಿಸ್ತು ನಿರ್ವಹಿಸಲೂ ಸಾಧ್ಯವಾಗುತ್ತದೆ. ಟೆಧರ್‌ನ ಒಂದು ತುದಿಯು ಅಥ್ಲೀಟ್ ಇನ್ನೊಂದು ಗೈಡ್ ರನ್ನರ್‌ ಕೈಯಲ್ಲಿರುತ್ತದೆ. ಏಷ್ಯನ್ ಗೇಮ್ಸ್‌ನಲ್ಲಿ ಬಳಿಸಿದ್ದ ಟೆಧರ್ ಅನ್ನು ರಕ್ಷಿತಾ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಣಿಕೆ ನೀಡಿದ್ದರು’ ಎಂದು ಕೋಚ್ ರಾಹುಲ್ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT