"ಮೆದುಳಿನೊಳಗ ಚಿಪ್ ಅಳವಡಿಸುವುದು ಹೀಗೆ"

ಹೀಗೊಂದು ಸನ್ನಿವೇಶ. ಜೋರಾಗಿ ಮಳೆ ಬರುತ್ತಿದೆ. ಶಾಪಿಂಗ್‌ಗೆ ಬಂದವರು ಮರಳಿ ಗೂಡು ಸೇರಬೇಕಿದೆ. ಕಾರನ್ನು ಅನತಿ ದೂರದಲ್ಲಿ ನಿಲ್ಲಿಸಿದ್ದೇವೆ. ಕಾರಿನ ಬಳಿ ನಾವು ಹೋದರೆ ಒದ್ದೆಯಾಗುತ್ತದೆ; ಮೊಬೈಲ್ ಫೋನ್‌ನಲ್ಲಿ ಒಂದು ಬಟನ್ ಪ್ರೆಸ್ ಮಾಡಿದರೆ ಕಾರೇ ತಾವಿರುವಲ್ಲಿಗೆ ಬರುವಂತಿದ್ದರೆ? ಖಂಡಿತಾ ಬರಬಹುದು. ಇಂಥ ತಂತ್ರಜ್ಞಾನ (ಚಾಲಕರಹಿತ ಕಾರು ಚಾಲನೆ) ಈಗಾಗಲೇ ಸಾಕಾರಗೊಂಡಿದೆ. ಆದರೆ ಇದರ ಮುಂದುವರಿದ ಭಾಗವನ್ನು ಕಲ್ಪಿಸಿಕೊಳ್ಳಿ. ಬೆಚ್ಚಿ ಬೀಳಬಹುದು ಅಥವಾ ಅಸಾಧ್ಯವೆಂದುಕೊಳ್ಳಬಹುದು. ನಾವು ಕಾರು ಬರುವಂತೆ ಯೋಚಿಸಿದರೆ ಸಾಕು, ತಾನಾಗಿ ಸ್ಟಾರ್ಟ್ ಆಗಿ ನಾವಿದ್ದಲ್ಲಿಗೇ ಆ ಕಾರು ಬಂದು ವಿಧೇಯನಾಗಿ ನಿಲ್ಲುತ್ತದೆ, ಬಾಗಿಲು ತೆರೆದುಕೊಳ್ಳುತ್ತದೆ!

ಹೌದು, ಕೆಲವೇ ವರ್ಷಗಳ ಹಿಂದೆ, ಇಂಥದ್ದೆಲ್ಲ ಅಸಾಧ್ಯವೆಂದೂ, ಕನಸೆಂದೂ ಹೇಳುತ್ತಿದ್ದ ಎಲ್ಲವೂ ಇಂದಿನ ತಂತ್ರಜ್ಞಾನದ ಯುಗದಲ್ಲಿ ಸಾಕಾರಗೊಳ್ಳುತ್ತಿದೆ. ವಾಚ್‌ನಲ್ಲೇ ಮಾತನಾಡುವುದು, ಕೈಬೆರಳು ಒತ್ತಿದರೆ ಕಂಪ್ಯೂಟರ್ ಸ್ಕ್ರೀನ್ ಅಥವಾ ಮೊಬೈಲ್ ಸ್ಕ್ರೀನ್ ತೆರೆದುಕೊಳ್ಳುವುದು, ಮೊಬೈಲ್ ಫೋನ್‌ಗಳನ್ನು ಅಕ್ಕಪಕ್ಕದಲ್ಲಿಟ್ಟರೆ ಸಾಕು - ವೈರ್ ಇಲ್ಲದೆಯೇ ಅದರೊಳಗಿರುವ ಫೈಲ್‌ಗಳನ್ನು ವಿನಿಮಯ ಮಾಡಿಕೊಳ್ಳುವುದು, ಒಂದು ಕ್ಲಿಕ್ ಮಾಡಿದರೆ ದೂರದಲ್ಲೆಲ್ಲೋ ಬಾಂಬ್ ಸಿಡಿಯುವುದು, ನೀವೆಲ್ಲಿದ್ದೀರಿ ಎಂಬುದನ್ನು ಉಪಗ್ರಹದ ಜಿಪಿಎಸ್ ಮೂಲಕ ಪತ್ತೆ ಮಾಡುವುದು, ಕಳೆದುಹೋದ ಗ್ಯಾಜೆಟ್ ಅನ್ನು ಎಲ್ಲಿದೆಯೆಂದು ನಿಖರವಾಗಿ ಮ್ಯಾಪ್ ಮೂಲಕ ತಿಳಿದುಕೊಳ್ಳುವುದು, ದಾರಿ ತಪ್ಪಿದಾಗ ನಕ್ಷೆಯಲ್ಲಿ ಗುರುತು ಮಾಡಿದರೆ ಸಾಕು, ಗಮ್ಯ ಸ್ಥಾನಕ್ಕೆ ತಲುಪಿಸುವುದು, ವೈರ್ ಇಲ್ಲದೆಯೇ ಗ್ಯಾಜೆಟ್‌ಗಳು ಚಾರ್ಜ್ ಆಗುವುದು - ನಾವು ಹಿಂದೆ ಸಿನಿಮಾಗಳಲ್ಲಷ್ಟೇ, ವೈಜ್ಞಾನಿಕ ಕಾದಂಬರಿಗಳಲ್ಲಷ್ಟೇ ನೋಡಿದ್ದ, ಓದಿದ್ದ ಇಂಥ ಅದೆಷ್ಟೋ ಸಂಗತಿಗಳು ಈಗ ವಾಸ್ತವ ಜಗತ್ತಿನಲ್ಲಿ ತೀರಾ ಸಾಮಾನ್ಯ ಎಂಬಂತಾಗಿವೆ. ಇದಕ್ಕೆ ಹೊಸ ಸೇರ್ಪಡೆಯೆಂದರೆ, ನಮ್ಮ ಆಲೋಚನಾ ಶಕ್ತಿಯ ಮೂಲವಾದ ಮೆದುಳಿನ ಕಂಪನಗಳನ್ನೇ ನಿಯಂತ್ರಿಸುವುದು!

ಕಂಪ್ಯೂಟರ್ ಎಂಬ ಸರ್ವಾಂತರ್ಯಾಮಿಯ ಆವಿಷ್ಕಾರದ ಮೂಲವೇ ಮಾನವನ ಮೆದುಳು. ನರವ್ಯೂಹದ ವ್ಯವಸ್ಥೆಯಂತೆಯೇ ಕಂಪ್ಯೂಟರ್ ಕೂಡ ರೂಪುಗೊಂಡಿದೆ. ಒಂದು ಕಂಪ್ಯೂಟರನ್ನು ಬಿಚ್ಚಿ, ಅದರಲ್ಲಿರುವ ಮದರ್ ಬೋರ್ಡ್ ನೋಡಿದರೆ, ಮಾನವನ ನರಮಂಡಲ ವ್ಯವಸ್ಥೆಯಂತೆಯೇ ಗೋಜಲು ಗೋಜಲಾದ ಸಂಪರ್ಕ ತಂತುಗಳು ಕಾಣಸಿಗುತ್ತವೆ. ದೇಹದ ಅತ್ಯಂತ ಸಂಕೀರ್ಣ ಅಂಗವಾಗಿರುವ ಮತ್ತು ಜೀವಂತ ಕಂಪ್ಯೂಟರ್‌ನ ಪ್ರೊಸೆಸರ್ ಎಂದೇ ಕರೆಯಲಾಗುವ ಮೆದುಳಿನೊಳಗೆ ಕಂಪ್ಯೂಟರ್ ಚಿಪ್ ಅಳವಡಿಸುವ ಹೊಸ ಪ್ರಯೋಗವೀಗ ಯಶಸ್ವಿಯಾಗಿದೆ. ಇದು ಮಾನವನ ಮೆದುಳು ಮತ್ತು ಯಂತ್ರದ ಪಾರಸ್ಪರಿಕ ಸಮನ್ವಯದ ನಿಟ್ಟಿನಲ್ಲಿ ಹೊಸ ಹೊಳಹು.

ಸದಾ ಚಿತ್ತಚಾಂಚಲ್ಯ, ಕ್ಲೇಷ, ಖುಷಿ, ಬೇಸರ, ನೋವು ನಲಿವುಗಳಿಗೆ ಕಾರಣವಾಗುವ ನಮ್ಮ ಮೆದುಳಿನ ಚಟುವಟಿಕೆಗಳನ್ನು, ಅನೇಕಾನೇಕ ನರತಂತುಗಳ ವ್ಯೂಹವನ್ನೊಳಗೊಂಡಿರುವ ಒಂದು ಸಣ್ಣ ಕಂಪ್ಯೂಟರ್ ಚಿಪ್ ಮೂಲಕ ನಿಯಂತ್ರಣಕ್ಕೆ ತರಬಹುದೇ, ಹಾನಿಗೀಡಾದ ನರಗಳನ್ನು ದುರಸ್ತಿ ಮಾಡಬಹುದೇ ಎಂಬ ಪ್ರಶ್ನೆಗಳಿಗೆ ಉತ್ತರ ದೊರೆತಿದೆ.

ಮೆದುಳು, ನರವ್ಯೂಹದ ಚಿಕಿತ್ಸೆಗಾಗಿ
ದೈನಂದಿನ ಬದುಕಿನ ಹಲವಾರು ಒತ್ತಡಗಳು, ಫೋನ್ ಕರೆಗಳು, ಕೌಟುಂಬಿಕ ಕೆಲಸ ಕಾರ್ಯಗಳ ಜವಾಬ್ದಾರಿ, ಸಮಾಜಜೀವಿಯ ಸಾಮಾಜಿಕ ಅನಿವಾರ್ಯತೆಗಳು, ಕಚೇರಿಯಲ್ಲಿ ಡೆಡ್‌ಲೈನ್ ಬದ್ಧತೆ, ಸೇಲ್ಸ್ ಗುರಿ ತಲುಪುವ ಹಂಬಲ, ವೃತ್ತಿಯಲ್ಲಿ ಔನ್ನತ್ಯಕ್ಕೇರುವ ಮಹತ್ವಾಕಾಂಕ್ಷೆ - ಇವುಗಳ ಬೆನ್ನತ್ತಿರುವ ಮಾನವನ ಮೆದುಳೆಂಬ ಜೀವಂತ ಕಂಪ್ಯೂಟರ್‌ನ ಬಳಕೆ ಹೆಚ್ಚಾದಷ್ಟೂ ಸಂಕೀರ್ಣಗೊಳ್ಳುತ್ತಾ ಹೋಗುತ್ತದೆ. ಜೊತೆಗೇ ವಯಸ್ಸು, ಅನುಭವ, ಒತ್ತಡಕ್ಕೆ ಅನುಗುಣವಾಗಿ ಮೆದುಳಿನ ಕ್ರಿಯಾಶೀಲತೆಯೂ ಸವೆಯುತ್ತಾ ಹೋಗುತ್ತದೆ. ಇಂಥ ಕಾಲದಲ್ಲಿ ಕಾಣಿಸಿಕೊಳ್ಳುವುದೇ, ಸ್ಮರಣಶಕ್ತಿ ನಷ್ಟ, ಶ್ರವಣ ದೋಷ, ದೃಷ್ಟಿದೋಷ, ಲಕ್ವ, ಖಿನ್ನತೆ, ನಿದ್ರಾಹೀನತೆ, ಅತೀವ ನೋವು, ಹೃದಯಸ್ತಂಭನ, ಉದ್ವೇಗ, ಚಟ, ಪಾರ್ಶ್ವವಾಯು ಹಾಗೂ ಮೆದುಳಿಗೆ ಹಾನಿಯಂತಹಾ, ಜೀವನಶೈಲಿ ಸಂಬಂಧಿಸಿದ ಮನೋದೈಹಿಕ ತೊಂದರೆಗಳು. ಇದು ವೈಜ್ಞಾನಿಕವಾಗಿ ಶ್ರುತಪಟ್ಟಿರುವ ಸತ್ಯ.

ಉದ್ವೇಗಾತಂಕಗಳಿಂದಾಗಿ ರಕ್ತಪರಿಚಲನೆಯಲ್ಲಿನ ವೇಗಾವೇಗವು ನರಮಂಡಲ ವ್ಯವಸ್ಥೆಯ ಮೇಲೆ ಒತ್ತಡಕ್ಕೆ ಕಾರಣವಾಗಿ, ಅವೆಲ್ಲದರ ಪರಿಣಾಮವಾಗುವುದು ನಮ್ಮ ದೇಹದ 'ಪ್ರೊಸೆಸರ್' ಆಗಿರುವ ಮೆದುಳಿನ ಮೇಲೆ. ಭಾರಿ ಕೆಲಸದಿಂದಾಗಿ ಹಲವು ವರ್ಷಗಳ ಬಳಿಕ ಕಂಪ್ಯೂಟರ್‌ನ ಕೆಲಸ ಹೇಗೆ ನಿಧಾನವಾಗುತ್ತದೆಯೋ, ನಮ್ಮ ಮೆದುಳು ಕೂಡ ಇದೇ ರೀತಿಯಲ್ಲಿ ಸವಕಳಿಯನ್ನು ಅನುಭವಿಸುತ್ತದೆ. ಜಂಜಡದ ಆಧುನಿಕ ಯುಗದಲ್ಲಿ ಯಂತ್ರಕ್ಕೂ ಮಾನವನಿಗೂ ವ್ಯತ್ಯಾಸವೇ ಇಲ್ಲದಂತಾಗಿ, ಅಕಾಲಿಕ ಪ್ರಾಯದಲ್ಲಿ ಸ್ಮರಣಶಕ್ತಿಯು ಕುಸಿತವಾಗುವುದನ್ನು, ಖಿನ್ನತೆ ಕಾಡುವುದನ್ನು, ನಿದ್ರೆ ಬಾರದಿರುವುದನ್ನು ನಾವು ಕಂಡಿದ್ದೇವೆ. ಇವುಗಳನ್ನೆಲ್ಲ ನಿಯಂತ್ರಿಸುವುದು ಕಂಪ್ಯೂಟರಿನಿಂದ ಸಾಧ್ಯವೇ?

ಹಂದಿಯಲ್ಲಿ ಕಂಡುಬಂದ ಆಶಾವಾದ
ಈ ಪ್ರಶ್ನೆಗೆ ಉತ್ತರವೊಂದು ಸದ್ಯೋಭವಿಷ್ಯದಲ್ಲಿಯೇ ಸಿಗುವ ಹಂತದಲ್ಲಿದೆ. ಎಲಾನ್ ಮಸ್ಕ್ ಎಂಬ ಬಿಲಿಯಾಧಿಪತಿ ಉದ್ಯಮಿ ಗೊತ್ತಲ್ಲವೇ? ಟೆಸ್ಲಾ ಇಂಕ್ ಹಾಗೂ ಸ್ಪೇಸ್ ಎಕ್ಸ್‌ನ ಸಿಇಒ. 2016ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದ ಬೇ ಏರಿಯಾದಲ್ಲಿ ಒಂದು ವಿಶಿಷ್ಟ ಕನಸಿನ ಸ್ಟಾರ್ಟಪ್ (ನವೋದ್ಯಮ) ಒಂದನ್ನು ಅವರು ಸಮಾನ ಮನಸ್ಕರೊಂದಿಗೆ ಸೇರಿಕೊಂಡು ಸ್ಥಾಪಿಸುತ್ತಾರೆ. ಇದರ ಹೆಸರು ನ್ಯೂರಾಲಿಂಕ್. ಸಜೀವ ಮೆದುಳು ಹಾಗೂ ನಿರ್ಜೀವ ಕಂಪ್ಯೂಟರನ್ನು ವೈರುಗಳಿಲ್ಲದೆಯೇ ಬೆಸೆದು ನರ ಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುವ ಗುರಿ ಈ ಪುಟ್ಟ ಸಂಸ್ಥೆಯದು.

ಈ ನವೋದ್ಯಮದ ಶ್ರಮ ಈಗ ಫಲ ಕೊಟ್ಟಿದೆ. ಕಳೆದ ಶುಕ್ರವಾರ (28 ಆಗಸ್ಟ್ 2020) ಜಗತ್ತು ವಿಶಿಷ್ಟವಾದ ಹಂದಿಯೊಂದನ್ನು ನೋಡಿ ಅಚ್ಚರಿಪಟ್ಟಿತಷ್ಟೇ ಅಲ್ಲ; ನಮಗೂ ಅತ್ಯಗತ್ಯವಿರುವ ಇಂಥದ್ದೊಂದು ಸಾಧನ ಶೀಘ್ರವೇ ದೊರಕಿ, ಮನುಕುಲದ ಏಳಿಗೆಗೆ ನಾಂದಿಯಾಗಬಹುದೆಂಬ ಭರವಸೆಯನ್ನೂ ಮೂಡಿಸಿತು.

ಈ ಹಂದಿಯ ಹೆಸರು ಗೆರ್ಟ್ರೂಡ್. ಎರಡು ತಿಂಗಳ ಹಿಂದೆ ಅದರ ಮೆದುಳಿನೊಳಗೆ ಐದು ರೂಪಾಯಿ ನಾಣ್ಯ ಗಾತ್ರದ ಒಂದು ಪುಟ್ಟ ಕಂಪ್ಯೂಟರ್ ಚಿಪ್ ಜೋಡಿಸಲಾಗಿತ್ತು. ಹಂದಿಯ ಮೇಲೆ ಮಾಡಿದ ಪ್ರಯೋಗದಲ್ಲಿ ಕಂಡು ಬಂದ ಫಲಿತಾಂಶವು, ಮುಂದೆ ಮಾನವನ ಮೆದುಳಿಗೂ ಇಂಥದ್ದೊಂದು ಚಿಪ್ ಅಳವಡಿಸಿ, ನರಸಂಬಂಧಿತ ಕಾಯಿಲೆಗಳನ್ನು ಗುಣಪಡಿಸುವತ್ತ ವಿಜ್ಞಾನ ತಂತ್ರಜ್ಞಾನವು ದಿಟ್ಟ ಹೆಜ್ಜೆ ಇರಿಸಲು ಹುಮ್ಮಸ್ಸು ನೀಡಿದೆ.

ಮೆದುಳಿನೊಳಗೆ ಚಿಪ್ ಸೇರಿಸುವುದು ಹೀಗೆ. ಚಿತ್ರ: ಎಎಫ್‌ಪಿ/ನ್ಯೂರಾಲಿಂಕ್

ವೆಬ್‌ಕಾಸ್ಟ್ ಮೂಲಕ, ಗೆರ್ಟ್ರೂಡ್ ಎಂಬ ಸ್ಟಾರ್ ಹಂದಿಯನ್ನು ಜಗತ್ತಿಗೇ ತೋರಿಸಿದ ಕಾರ್ಯಕ್ರಮದಲ್ಲಿ ಎಲಾನ್ ಮಸ್ಕ್ ಮಾತನಾಡಿ, "ಮೆದುಳಿಗೆ ಅಳವಡಿಸಬಹುದಾದ ಈ ಸಾಧನವು ನರಸಂಬಂಧಿ ಕಾಯಿಲೆಗಳಾದ ಸ್ಮರಣಶಕ್ತಿ ನಾಶ, ಖಿನ್ನತೆ, ಲಕ್ವ, ನಿದ್ರಾಹೀನತೆ, ಆತಂಕ, ಉದ್ವೇಗ ಮುಂತಾದವುಗಳ ನಿಯಂತ್ರಣಕ್ಕೆ ಖಂಡಿತವಾಗಿಯೂ ನೆರವಾಗುತ್ತದೆ. ಮೆದುಳು ಮತ್ತು ಬೆನ್ನುಹುರಿಯ ಕಾಯಿಲೆಗಳ ಚಿಕಿತ್ಸೆಯಿನ್ನು ಸುಲಭವಾಗಲಿದೆ" ಎಂದು ಆತ್ಮವಿಶ್ವಾಸದಿಂದ ಹೇಳಿದ್ದಾರೆ.

ಚಿಪ್ ಏನು ಮಾಡುತ್ತದೆ?
ಹಂದಿಯ ಮೆದುಳಿನೊಳಗೆ ಅಳವಡಿಸಿದ ನ್ಯೂರಾಲಿಂಕ್ ಚಿಪ್, ರಿಯಲ್ ಟೈಮ್ ಅಂದರೆ ನೈಜ ಸಮಯದಲ್ಲೇ ಧ್ವನಿ ಸಂಕೇತಗಳನ್ನು ಹೊರಗೆಡಹಿತು. ಆಹಾರ ಹಾಕುವಾಗ, ಅದನ್ನು ಸೇವಿಸುವ ಉತ್ಸುಕತೆಯಲ್ಲಿರುವ ಹಂದಿಯ ನರಮಂಡಲದಿಂದ ಸಂಕೇತಗಳು ಮೆದುಳಿಗೆ ಹೋಗಿ, ಅಲ್ಲಿನ ಸಂವೇದನೆಯು ಎಲೆಕ್ಟ್ರಾನಿಕ್ ತರಂಗಗಳಾಗಿ ಪರಿವರ್ತನೆಗೊಂಡು, ಧ್ವನಿಯ ರೂಪದಲ್ಲಿ ಬೇರೆ ಕಂಪ್ಯೂಟರಿಗೆ ರವಾನೆಯಾಯಿತು. ಅಂದರೆ, ಆಹಾರ ಸಿಕ್ಕಿತೆಂಬ ಖುಷಿಯ ಮೆದುಳಿನ ಸಂವೇದನೆಯನ್ನು ಕಂಪ್ಯೂಟರ್ ಓದಬಹುದಾಗಿತ್ತು. ಹಂದಿಯ ತಲೆಯನ್ನು ತಡವಿದಾಗ ಅದರಲ್ಲಿಯೂ ಮಾನಸಿಕವಾಗಿ ಆಪ್ತ ಭಾವನೆಯೊಂದು ಸಂಚಲನವಾಗುತ್ತದೆಯಲ್ಲವೇ? ಈ ಭಾವನೆಯು ಸಂಕೇತ ರೂಪದಲ್ಲಿ ಮೆದುಳಿಗೆ ಹೋಗುತ್ತದೆ. ಮೆದುಳಲ್ಲಿ ಅಳವಡಿಸಲಾಗಿದ್ದ ಚಿಪ್‌ಗೂ ಈ ಸಂಕೇತ ರವಾನೆಯಾದಾಗ, ಧ್ವನಿ ರೂಪದಲ್ಲಿ ಕಂಪ್ಯೂಟರ್ ಸ್ಪೀಕರ್‌ನಲ್ಲಿ ಅದು ಪ್ಲೇ ಆಗುತ್ತದೆ. ಇದನ್ನು ವಿಶ್ಲೇಷಿಸಿದ ಬಳಿಕ, ಯಾವ ಎಲೆಕ್ಟ್ರೋಡ್‌ಗೆ ಎಷ್ಟು ಶಕ್ತಿ ಬೇಕು ಎಂಬುದನ್ನು ನಿರ್ಣಯಿಸಬಹುದು. ಅದರನ್ವಯ, ಕೊರತೆಯಿರುವಲ್ಲಿ ತರಂಗಗಳನ್ನು ಊಡಿಸಿ, ಕೆಲಸ ಮಾಡದ ಅಂಗಾಂಶಗಳಿಗೆ ಚೈತನ್ಯ ನೀಡುವ ಸಂಕೇತಗಳನ್ನು ರವಾನಿಸಿದರೆ, ತಾಳ ತಪ್ಪಿದ ಜೀವಕೋಶಗಳಿಗೆ ಮರುಜೀವ ತುಂಬಬಹುದು. ಜೀವಕೋಶಗಳು ಚಿಗಿತುಕೊಂಡು, ಹಿಂದಿನ ಲಯಕ್ಕೆ ಮರಳಬಹುದು.

ಮೆದುಳು ಮತ್ತು ಯಂತ್ರ ಸಂಬಂಧ ಹೊಸದೇ?
ಪೂರ್ತಿ ಹೊಸದಲ್ಲ. ಮೆದುಳಿನೊಳಗೇ ನಾಣ್ಯ ಗಾತ್ರದ ಚಿಪ್ ಅಳವಡಿಸುವ ಬದಲು, ಕಿವಿಯ ಬಳಿ, ದೇಹದ ಹೊರಭಾಗದಲ್ಲಿ ಪುಟ್ಟ ಸಾಧನದ ಮೂಲಕ ಇದೇ ರೀತಿ ಕೆಲಸ ಮಾಡಬಲ್ಲ ಸಾಧನವನ್ನು ಅಳವಡಿಸಿ, ಈ ರೀತಿಯ ವೈದ್ಯಕೀಯ ಚಿಕಿತ್ಸಾ ಪ್ರಯತ್ನಗಳು ಆಗಿವೆ. ಅಲ್ಲದೆ, 2016ರಲ್ಲಿ ಪಿಟ್ಸ್‌ಬರ್ಗ್ ವಿಶ್ವವಿದ್ಯಾಲಯವು DARPA ನೆರವಿನಿಂದ ರೋಬೋಟಿಕ್ ಆರ್ಮ್ ಎಂದರೆ ಯಾಂತ್ರೀಕೃತ ಹಸ್ತವೊಂದನ್ನು ರಚಿಸಿತ್ತು. ಈ ಹಸ್ತಕ್ಕೆ ಸಂಪರ್ಕಿಸಿದ ನರವ್ಯೂಹದ ಇಂಟರ್ಫೇಸ್ ವ್ಯವಸ್ಥೆಯ ಮೂಲಕ ನೇರವಾಗಿ ಮೆದುಳಿಗೆ ಸ್ಪರ್ಶ ಸಂವೇದನೆಯು ಹೋಗಿ, ಪಕ್ಷವಾತದಿಂದಾಗಿ ಸಂವೇದನೆ ಕಳೆದುಕೊಂಡಿದ್ದ ಮನುಷ್ಯನಲ್ಲಿಯೂ ಅದರ ಅನುಭವ ಪಡೆಯುವಲ್ಲಿ ನೆರವಾಗಿತ್ತು. ಮೆದುಳು ಮತ್ತು ಯಂತ್ರದ ನಡುವೆ ದ್ವಿಮುಖ ಸಂವಹನ (ಅಂಗಚಲನೆಗಾಗಿ ಹೊರಹೋಗುವ ಸಂಕೇತಗಳು ಮತ್ತು ಸಂವೇದನೆಗಾಗಿ ಒಳಬರುವ ಸಂಕೇತಗಳು) ಸಾಧಿಸಲು ಸಾಧ್ಯವಾಗಿತ್ತು. ಶಸ್ತ್ರಕ್ರಿಯೆಯ ಮೂಲಕ ವ್ಯಕ್ತಿಯ ಮೆದುಳಿನ ಸೆನ್ಸರಿ ಕಾರ್ಟೆಕ್ಸ್‌ನಲ್ಲಿ ಎರಡು ಮೈಕ್ರೋಚಿಪ್‌ಗಳನ್ನು ಅಳವಡಿಸುವ ಮೂಲಕ ಇದು ಸಾಧ್ಯವಾಗಿತ್ತು. ನ್ಯೂರೋ ಟೆಕ್ನಾಲಜಿ ನರ-ತಂತ್ರಜ್ಞಾನ ಶಾಸ್ತ್ರ ಲೋಕದಲ್ಲಿನ ಸಾಧ್ಯತೆಗಳು ಅಗಾಧವಾಗಿದ್ದು, ಈ ಮಾದರಿಯ ಸಾಕಷ್ಟು ವೈವಿಧ್ಯಮಯ ಸಂಶೋಧನೆಗಳೂ ನಡೆದಿವೆ.

ಹೊಸ ಸಾಧ್ಯತೆಯೇನು?
ನಮ್ಮ ಯೋಚನಾ ಲಹರಿಯ ಕೇಂದ್ರ ಬಿಂದು ಮೆದುಳು. ಮೆದುಳಿಗೆ ಚಿಪ್ ಅಳವಡಿಸಿದರೆ ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು, ನಿರ್ಜೀವ ಜೀವಕೋಶಗಳಿಗೆ ಚೈತನ್ಯ ತುಂಬಬಹುದು ಎಂಬುದು ಸಾಧ್ಯವಾದರೆ, ಮುಂದಿನ ಅಭಿವೃದ್ಧಿಯ ಬಗ್ಗೆಯೂ ಯೋಚಿಸಬಹುದಲ್ಲವೇ? ನಮ್ಮ ಮನಸ್ಸನ್ನೇ ಓದಬಲ್ಲಂತೆ ಚಿಪ್‌ಗಳನ್ನು ರೂಪಿಸಿದರೆ? ಹಂದಿಗಳಲ್ಲಿ ಅಳವಡಿಸಿದ ಈ ಚಿಪ್ ಇನ್ನೇನು ಮಾನವನ ಮೇಲೂ ಪ್ರಯೋಗವಾಗಲಿದೆ. ಆದರೆ ಇದು ಇತರ ವೈದ್ಯಕೀಯ ಪ್ರಯೋಗಗಳಂತಲ್ಲ. ಎಲಾನ್ ಮಸ್ಕ್ ಅವರೇ ಸ್ವತಃ ಲೈವ್ ಸ್ಟ್ರೀಮಿಂಗ್ ಮೂಲಕ ಸಾಧ್ಯತೆಗಳನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಹೀಗಾಗಿ ಇದು ಪೂರ್ಣ ಭರವಸೆ ಮೂಡಿಸಿದೆ.

ವಿಡಿಯೋ:

ಇದಲ್ಲದೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಆರ್ಜಿಸಿದ ಬುದ್ಧಿಮತ್ತೆ) ಆಧಾರಿತವಾಗಿ, ಯಂತ್ರಮಾನವರೇ (ರೋಬೋ) ಈ ಚಿಪ್ ಅನ್ನು ಮೆದುಳಿನಲ್ಲಿ ಸಣ್ಣ ಆಪರೇಶನ್ ಮೂಲಕ ಅಳವಡಿಸುತ್ತಾರೆ. ಅರಿವಳಿಕೆಯೂ ಬೇಕಾಗಿಲ್ಲವಂತೆ. ಇದು ಅರ್ಧ ಗಂಟೆಯ ಕೆಲಸವಷ್ಟೇ. ಈ ಶಸ್ತ್ರಚಿಕಿತ್ಸೆಗೆ ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿಲ್ಲ. ಬೆಳಿಗ್ಗೆ ಬಂದರೆ, ಮಧ್ಯಾಹ್ನ ಮುಗಿಸಿಕೊಂಡು ತೆರಳಬಹುದಾಗಿದೆ. ವೈದ್ಯಕೀಯ ಜಗತ್ತಿನ ಈ ಅಚ್ಚರಿಯು ಜನರ ಜೇಬಿಗೆ ಸುಲಭವಾಗಿ ಎಟುಕುವಂತಾಗಬೇಕು, ಮನೋದೈಹಿಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ಚಿಕಿತ್ಸೆಯೂ ಸುಲಭವಾಗಿ ದೊರೆಯುವಂತಾಗಬೇಕೆಂಬುದು ಎಲಾನ್ ಮಸ್ಕ್ ಅವರ ಆಶಯವೂ ಹೌದು. ತಂತ್ರಜ್ಞಾನದ ಒಳಿತಿನಷ್ಟೇ ಕೆಡುಕೂ ಇರುವುದರಿಂದ, ಸಮಾಜಘಾತುಕ ಶಕ್ತಿಗಳು ಈ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುವ ಅಪಾಯವೂ ಇದೆ.

ಎಲಾನ್ ಮಸ್ಕ್ ಅವರ 4 ವರ್ಷ ಪ್ರಾಯದ ಈ ನರವೈಜ್ಞಾನಿಕ ಸಂಶೋಧನಾ ಸಂಸ್ಥೆ ನ್ಯೂರಾಲಿಂಕ್‌ನ ಸಂಶೋಧನೆಗಳು ಮಾನವಾತೀತ ಶಕ್ತಿಗಳನ್ನೂ ಸಾಧ್ಯವಾಗಿಸುತ್ತಿದೆ ಎನ್ನಬಹುದು. ನಮ್ಮ ಜಾಗೃತ ಪ್ರಜ್ಞೆಯನ್ನು ಪತ್ತೆ ಮಾಡುವುದು, ದೃಷ್ಟಿ/ಶ್ರವಣ ದೋಷವನ್ನು ಸರಿಪಡಿಸುವುದು, ಪಕ್ಷವಾತ, ಮನೋರೋಗಗಳಿಗೆ ಚಿಕಿತ್ಸೆ - ಇವೆಲ್ಲವೂ ಎಲಾನ್ ಮಸ್ಕ್ ತಂಡವು ಎಲೆಕ್ಟ್ರಾನಿಕ್ ರೂಪದಲ್ಲಿ ಮೆದುಳು ಹಾಗೂ ಕಂಪ್ಯೂಟರ್ ಇಂಟರ್ಫೇಸ್ ಮೂಲಕ ಕಂಡುಕೊಂಡಿರುವ, ಗುರಿ ಇರಿಸಿರುವ ಕೆಲವು ಸಾಧ್ಯತೆಗಳು. ಮನೋದೈಹಿಕ ಕಾಯಿಲೆಗಳಿಗೆ ಚಿಕಿತ್ಸಾ ವ್ಯವಸ್ಥೆ ಮತ್ತಷ್ಟು ಸುಲಭವಾಗುವನಿರೀಕ್ಷೆಯೊಂದು ನಮ್ಮ ಕಣ್ಣಮುಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.